ಬೆಂಗಳೂರು: ನಾಡಿನ ಆಡಳಿತ ಯಂತ್ರದ ಬೆನ್ನೆಲುಬಾಗಿರುವ ಲಕ್ಷಾಂತರ ಸರ್ಕಾರಿ ನೌಕರರ ಹಿತರಕ್ಷಣೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ “ನಮ್ಮಭಿಮಾನದ ಅಭಿನಂದನೆ” ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಅವರ ಸಂಘಟನಾ ಚಾತುರ್ಯ, ಸಮರ್ಥ ನಾಯಕತ್ವ ಹಾಗೂ ದೂರದೃಷ್ಟಿಯ ಫಲವಾಗಿ ಈ ಮಹಾಸಂಗಮವು ಯಶಸ್ವಿಯಾಗಿ ನೆರವೇರಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಸರ್ಕಾರಿ ನೌಕರರ ಅಭೂತಪೂರ್ವ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು. ನೌಕರರ ಸಮಸ್ಯೆಗಳು, ಬೇಡಿಕೆಗಳು ಹಾಗೂ ಅವರ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳನ್ನು ಸರ್ಕಾರದ ಉನ್ನತ ಮಟ್ಟದ ನಾಯಕತ್ವದ ಮುಂದೆ ಸಮರ್ಥವಾಗಿ, ಸ್ಪಷ್ಟವಾಗಿ ಮತ್ತು ಪರಿಣಾಮಕಾರಿಯಾಗಿ ಮಂಡಿಸುವಲ್ಲಿ ಷಡಾಕ್ಷರಿ ಅವರು ತೋರಿದ ನಾಯಕತ್ವ, ಬದ್ಧತೆ ಮತ್ತು ಕಾರ್ಯಕ್ಷಮತೆ ಸಭೆಯಲ್ಲಿ ಉಪಸ್ಥಿತರಿದ್ದ ನೌಕರರಿಂದ ವ್ಯಾಪಕ ಮೆಚ್ಚುಗೆಗೆ ಪಾತ್ರವಾಯಿತು.

ಸರ್ಕಾರಿ ನೌಕರರೊಂದಿಗೆ ಗೌರವದ ನಂಟು ಬೆಳೆಸಿದ ನಾಯಕತ್ವ; ಮುಖ್ಯಮಂತ್ರಿ ಕುರಿತು ಅನುಭವ ಹಂಚಿಕೊಂಡ ಸಿ.ಎಸ್. ಷಡಾಕ್ಷರಿ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ತಮ್ಮ ಮೊದಲ ಭೇಟಿಯ ನೆನಪನ್ನು ಹಂಚಿಕೊಂಡ ಸಿ.ಎಸ್. ಷಡಾಕ್ಷರಿ, ನಾಯಕತ್ವದಲ್ಲಿ ಮಾನವೀಯತೆ ಮತ್ತು ಆತ್ಮೀಯತೆ ಎಷ್ಟು ಮುಖ್ಯ ಎಂಬುದನ್ನು ಉದಾಹರಣೆಯೊಂದಿಗೆ ವಿವರಿಸಿದರು.
“ಡಾ.ಜಿ. ಪರಮೇಶ್ವರ್ ಅವರು ನಮ್ಮ ಊರಿಗೆ ಸಮೀಪದವರಾಗಿದ್ದರಿಂದ ವಿದ್ಯಾರ್ಥಿ ಜೀವನದಿಂದಲೇ ಪರಿಚಯವಿತ್ತು. ಆದರೆ ಡಿ.ಕೆ. ಶಿವಕುಮಾರ್ ಅವರೊಂದಿಗೆ ನೇರ ಪರಿಚಯ ಇರಲಿಲ್ಲ. ನಾನು ರಾಜ್ಯಾಧ್ಯಕ್ಷನಾದ ನಂತರ, ಅವರು ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನ ನಡೆದ ಒಂದು ಘಟನೆ ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದು,” ಎಂದು ಅವರು ಹೇಳಿದರು.
ಮೊದಲ ಸಚಿವ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಹಾಗೂ ಸಚಿವರು ಹೊರಬರುತ್ತಿದ್ದಾಗ, ಸಂಘದ ಅಧ್ಯಕ್ಷನಾಗಿ ಪ್ರೋಟೋಕಾಲ್ ಪ್ರಕಾರ ಪುಷ್ಪಗುಚ್ಛ ನೀಡಿ ಅಭಿನಂದಿಸಲು ನಿಂತಿದ್ದೆ. ಆಗ ವೇಗವಾಗಿ ನಡೆದು ಹೋಗುತ್ತಿದ್ದ ಡಿ.ಕೆ. ಶಿವಕುಮಾರ್ ಅವರು ನನ್ನನ್ನು ಗಮನಿಸಿ ಮತ್ತೆ ಹಿಂದಿರುಗಿ, ಪುಷ್ಪಗುಚ್ಛವನ್ನು ಸ್ವೀಕರಿಸಿ, “ನೀವು ಇಲ್ಲಿ ಬೊಕ್ಕೆ ಕೊಡಬೇಡಿ, ನನ್ನ ಮನೆಗೆ ಬಂದು ಕೊಡಿ” ಎಂದು ಆತ್ಮೀಯವಾಗಿ ಹೇಳಿದ್ದರು. ಆ ಒಂದು ಮಾತು ಸಂಘಟನೆ ಹಾಗೂ ಸರ್ಕಾರಿ ನೌಕರರ ಮೇಲಿನ ಅವರ ಗೌರವವನ್ನು ನನಗೆ ಅರ್ಥಮಾಡಿಸಿತು ಎಂದು ಷಡಾಕ್ಷರಿ ಸ್ಮರಿಸಿದರು.
ಸಂಘದ ನಾಯಕರನ್ನು ಗೌರವದಿಂದ ಬರಮಾಡಿಕೊಳ್ಳುವ, ಅವರ ಸಮಸ್ಯೆಗಳನ್ನು ಆಲಿಸುವ, ಸಮಯ ನೀಡಿ ಚರ್ಚಿಸುವ ಗುಣ ನಾಯಕತ್ವದ ದೊಡ್ಡ ಲಕ್ಷಣವಾಗಿದೆ. ಸರ್ಕಾರ ಮತ್ತು ನೌಕರರ ಸಂಘಟನೆಗಳ ನಡುವೆ ವಿಶ್ವಾಸದ ವಾತಾವರಣ ನಿರ್ಮಾಣವಾಗಬೇಕಾದರೆ ಇಂತಹ ಸಂವಾದವೇ ಮುಖ್ಯ ಎಂದು ಹೇಳಿದರು.

ಮೂವತ್ತು ವರ್ಷದ ರಾಜಕೀಯ ಅನುಭವ – ಹೊಸ ನಾಯಕತ್ವದ ಮೇಲೆ ವಿಶ್ವಾಸ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಪಯಣವನ್ನು ಉಲ್ಲೇಖಿಸಿದ ಅವರು, ಜನಸೇವೆ, ಪರಿಶ್ರಮ ಮತ್ತು ತಾಳ್ಮೆಯ ಮೂಲಕ ನಾಯಕತ್ವದ ಉನ್ನತ ಸ್ಥಾನಕ್ಕೇರಿರುವುದು ಯುವ ಪೀಳಿಗೆಗೆ ಮಾದರಿಯಾಗಿದೆ ಎಂದರು.
“ಸಾಧನೆಯ ಶಿಖರವನ್ನು ಏರಬೇಕಾದರೆ ಪರಿಶ್ರಮ, ಸಹನೆ ಮತ್ತು ನಿರಂತರ ಹೋರಾಟ ಬೇಕು. ಅಧಿಕಾರವು ಅದೃಷ್ಟದಿಂದ ಬರುವುದಿಲ್ಲ; ಜನರ ವಿಶ್ವಾಸ ಮತ್ತು ವರ್ಷಗಳ ಶ್ರಮದಿಂದ ಬರುತ್ತದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪಯಣ ಅದಕ್ಕೆ ಒಂದು ಉದಾಹರಣೆ,” ಎಂದು ಷಡಾಕ್ಷರಿ ಹೇಳಿದರು.
ರಾಜ್ಯದ ಜನತೆ ಹೊಸ ನಾಯಕತ್ವದ ಮೇಲೆ ವಿಶ್ವಾಸವಿಟ್ಟಿದ್ದಾರೆ. ಅಭಿವೃದ್ಧಿ, ಆಡಳಿತದ ಸುಧಾರಣೆ ಹಾಗೂ ಜನಪರ ನಿರ್ಧಾರಗಳ ಮೂಲಕ ಸರ್ಕಾರ ಹೊಸ ನಿರೀಕ್ಷೆ ಮೂಡಿಸಿದೆ ಎಂದು ಅವರು ಹೇಳಿದರು.

‘ಸರ್ಕಾರದ ಜೊತೆಗೆ ಹೆಗಲಿಗೆ ಹೆಗಲು’
ರಾಜ್ಯದ ಸುಮಾರು ಆರು ಲಕ್ಷ ಸರ್ಕಾರಿ ನೌಕರರು ಸರ್ಕಾರದ ಆಶಯಗಳನ್ನು ಯಶಸ್ವಿಯಾಗಿ ಜಾರಿಗೆ ತರಲು ಸದಾ ಸಿದ್ಧರಾಗಿದ್ದಾರೆ ಎಂದು ಷಡಾಕ್ಷರಿ ಭರವಸೆ ನೀಡಿದರು.
“ನಾವು ಸರ್ಕಾರದ ವಿರುದ್ಧವಲ್ಲ; ಸರ್ಕಾರದ ಭಾಗವಾಗಿ ಕೆಲಸ ಮಾಡುವವರು. ಸರ್ಕಾರದ ಗೌರವ ಹೆಚ್ಚುವಂತೆ, ಜನರಿಗೆ ಉತ್ತಮ ಸೇವೆ ಸಿಗುವಂತೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವುದು ನಮ್ಮ ಬದ್ಧತೆ. ಆಡಳಿತ ಸುಧಾರಣೆಗೆ ಬೇಕಾದ ಸಲಹೆಗಳನ್ನು ನೀಡಲು ನೌಕರರ ಸಂಘ ಸದಾ ಸಿದ್ಧವಾಗಿದೆ,” ಎಂದು ಹೇಳಿದರು.
ಅಧಿಕಾರಿಗಳು, ಸಿಬ್ಬಂದಿ ಮತ್ತು ಸರ್ಕಾರ ಪರಸ್ಪರ ಸಹಕಾರದಿಂದ ಕೆಲಸ ಮಾಡಿದಾಗ ಮಾತ್ರ ಜನರಿಗೆ ಗುಣಮಟ್ಟದ service ದೊರೆಯುತ್ತದೆ. ಆಡಳಿತದ ಸುಧಾರಣೆಯಲ್ಲಿ ಸರ್ಕಾರಿ ನೌಕರರ ಅನುಭವವನ್ನು ಸರ್ಕಾರ ಬಳಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ನೌಕರರು ಕೇವಲ ಸಿಬ್ಬಂದಿಯಲ್ಲ, ಸಮಾಜದ ಶಕ್ತಿ: ಸಿ.ಎಸ್.ಷಡಾಕ್ಷರಿ
ಸರ್ಕಾರಿ ನೌಕರರ ಸಾಮಾಜಿಕ ಜವಾಬ್ದಾರಿಯನ್ನೂ ಅವರು ವಿಶೇಷವಾಗಿ ಪ್ರಸ್ತಾಪಿಸಿದರು.
ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಕಂದಾಯ, ಕೃಷಿ, ಪೊಲೀಸ್, ಅರಣ್ಯ, ಸಾರಿಗೆ, ಸ್ಥಳೀಯ ಆಡಳಿತ ಸೇರಿದಂತೆ ಪ್ರತಿಯೊಂದು ಇಲಾಖೆಯಲ್ಲೂ ಸರ್ಕಾರಿ ನೌಕರರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಗ್ರಾಮದಿಂದ ರಾಜ್ಯ ರಾಜಧಾನಿವರೆಗೆ ಸರ್ಕಾರದ ಯೋಜನೆಗಳು ಯಶಸ್ವಿಯಾಗುವುದಕ್ಕೆ ಅವರ ಪರಿಶ್ರಮವೇ ಕಾರಣವಾಗಿದೆ ಎಂದು ಹೇಳಿದರು.
“ಸರ್ಕಾರಿ ನೌಕರರು ಕೇವಲ ಕಚೇರಿಗಳಲ್ಲೇ ಕೆಲಸ ಮಾಡುವ ಸಿಬ್ಬಂದಿಯಲ್ಲ; ಅವರು ಸಮಾಜದ ಅಭಿವೃದ್ಧಿಯ ಪಾಲುದಾರರು, ಸರ್ಕಾರದ ವಿಶ್ವಾಸದ ಪ್ರತಿನಿಧಿಗಳು ಮತ್ತು ಜನರ ನಿರೀಕ್ಷೆಗಳನ್ನು ಈಡೇರಿಸುವ ಕಾರ್ಯಕರ್ತರು” ಎಂದರು.

ಸಂಘದ ಹೋರಾಟ ಜನಹಿತಕ್ಕೂ ಪೂರಕ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಕೇವಲ ವೇತನ ಅಥವಾ ಸೇವಾ ಸೌಲಭ್ಯಗಳಿಗಾಗಿ ಹೋರಾಡುವ ಸಂಘಟನೆಯಲ್ಲ. ಆಡಳಿತದ ಗುಣಮಟ್ಟ, ಸಾರ್ವಜನಿಕ ಸೇವೆ, ನೌಕರರ ಗೌರವ, ನಿವೃತ್ತ ನೌಕರರ ಭದ್ರತೆ, ವಿದ್ಯಾರ್ಥಿಗಳ ಪ್ರೋತ್ಸಾಹ ಹಾಗೂ ಸಾಮಾಜಿಕ ಹೊಣೆಗಾರಿಕೆಯ ವಿಚಾರಗಳಲ್ಲಿಯೂ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಷಡಾಕ್ಷರಿ ಹೇಳಿದರು.
ಸಂಘವು ಸರ್ಕಾರದೊಂದಿಗೆ ಸಂಘರ್ಷ ಮಾಡುವುದಕ್ಕಿಂತ ಸಂವಾದದ ಮೂಲಕ ಪರಿಹಾರ ಕಂಡುಕೊಳ್ಳುವ ನಿಲುವನ್ನು ಅನುಸರಿಸುತ್ತಿದೆ. ಆದರೆ ನೌಕರರ ನ್ಯಾಯಸಮ್ಮತ ಹಕ್ಕುಗಳ ವಿಚಾರದಲ್ಲಿ ಯಾವುದೇ ರಾಜಿ ಮಾಡುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಲಾಗಿದ್ದ ಎನ್ಪಿಎಸ್ ರದ್ದು, ಒಪಿಎಸ್ ಜಾರಿ ಸೇರಿದಂತೆ ಪ್ರಮುಖ ಭರವಸೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು.






