ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಭದ್ರಾ ಯೋಜನೆಗೆ ನೀರು ಹರಿಸುವ ಕುರಿತು ಶೀಘ್ರ ತೀರ್ಮಾನ: ಸಚಿವ ಮಧು ಬಂಗಾರಪ್ಪ

On: August 19, 2026 8:37 AM
Follow Us:
ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರೊಂದಿಗೆ ಸಮಾಲೋಚಿಸಿ ನಿರ್ಧಾರ — ಕುಡಿಯುವ ನೀರಿಗೆ ಮೊದಲ ಆದ್ಯತೆ

ಬೆಂಗಳೂರು: ಭದ್ರಾ ಯೋಜನೆಯ ಅಚ್ಚುಕಟ್ಟು ಪ್ರದೇಶಕ್ಕೆ 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ನೀರು ಹರಿಸುವ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಜಲಸಂಪನ್ಮೂಲ ಸಚಿವರೊಂದಿಗೆ ಸಮಾಲೋಚನೆ ನಡೆಸಿ ಶೀಘ್ರದಲ್ಲೇ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಹಾಗೂ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಬೆಂಗಳೂರಿನ ವಿಕಾಸಸೌಧದಲ್ಲಿ ಸಚಿವ ಮಧು ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ 89ನೇ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಭದ್ರಾ ಜಲಾಶಯದ ನೀರಿನ ಲಭ್ಯತೆ, ಅಚ್ಚುಕಟ್ಟು ಪ್ರದೇಶದ ಬೆಳೆಗಳ ಸ್ಥಿತಿಗತಿ ಹಾಗೂ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತರಿಗೆ ನೀರು ಹರಿಸುವ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು.

ಸಭೆಯಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶದ ಸಚಿವರು, ಶಾಸಕರು, ರೈತ ಮುಖಂಡರು ಹಾಗೂ ಅಧಿಕಾರಿಗಳಿಂದ ನೀರು ಹರಿಸುವ ಕುರಿತ ಅಭಿಪ್ರಾಯಗಳನ್ನು ಸಚಿವರು ಆಲಿಸಿದರು. ವಿವಿಧ ಭಾಗಗಳಲ್ಲಿನ ಮಳೆ ಪ್ರಮಾಣ, ಜಲಾಶಯದ ನೀರಿನ ಮಟ್ಟ, ಕೃಷಿ ಚಟುವಟಿಕೆಗಳು ಹಾಗೂ ಕುಡಿಯುವ ನೀರಿನ ಅಗತ್ಯತೆ ಸೇರಿದಂತೆ ಹಲವು ಅಂಶಗಳ ಕುರಿತು ಚರ್ಚೆ ನಡೆಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಮಧು ಬಂಗಾರಪ್ಪ ಅವರು, ಭದ್ರಾ ಜಲಾಶಯದ ಪ್ರಸ್ತುತ ನೀರಿನ ಸ್ಥಿತಿಗತಿ, ಅಚ್ಚುಕಟ್ಟು ಪ್ರದೇಶದಲ್ಲಿ ಕೈಗೊಂಡಿರುವ ಹಾಗೂ ಕೈಗೊಳ್ಳಲಾಗಿರುವ ಬೆಳೆಗಳ ವಿವರ ಮತ್ತು ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಳ್ಳಲಾಗಿದೆ. ಈ ಹಂತದಲ್ಲಿಯೇ ನೀರು ಹರಿಸುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವುದು ಸಾಧ್ಯವಿಲ್ಲ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಜಲಸಂಪನ್ಮೂಲ ಸಚಿವರೊಂದಿಗೆ ಶೀಘ್ರದಲ್ಲೇ ಚರ್ಚಿಸಿ, ಎಲ್ಲ ಅಂಶಗಳನ್ನು ಪರಿಗಣಿಸಿ ರೈತರ ಹಿತದೃಷ್ಟಿಯಿಂದ ಉತ್ತಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ಪ್ರಸ್ತುತ ವಿಧಾನಸಭಾ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯನ್ನು ತುರ್ತಾಗಿ ಕರೆಯಲಾಗಿದೆ. ಸಭೆಯಲ್ಲಿ ಸಂಬಂಧಪಟ್ಟ ಎಲ್ಲರ ಅಭಿಪ್ರಾಯಗಳನ್ನು ಪಡೆಯಲಾಗಿದೆ. ಈ ಅಭಿಪ್ರಾಯಗಳು ಹಾಗೂ ಜಲಾಶಯದ ನೀರಿನ ಲಭ್ಯತೆ ಕುರಿತ ವಾಸ್ತವಾಂಶಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಸಚಿವರು ಹೇಳಿದರು.

ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ. ಭದ್ರಾ ಜಲಾಶಯದ ನೀರಿನ ಲಭ್ಯತೆ, ವಿವಿಧ ಜಿಲ್ಲೆಗಳ ಕುಡಿಯುವ ನೀರಿನ ಅವಶ್ಯಕತೆ ಹಾಗೂ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ನೀರಿನ ಪ್ರಮಾಣದ ಕುರಿತು ನಿಖರವಾದ ಅಂಕಿ-ಅಂಶಗಳನ್ನು ಒದಗಿಸುವಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗುವುದು. ಈ ಮಾಹಿತಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಮಳೆ ನಂಬಿ ಬಿತ್ತನೆ ಮಾಡದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರೈತರಿಗೆ ಈಗಾಗಲೇ ಮನವಿ ಮಾಡಿದ್ದರು. ಆದಾಗ್ಯೂ, ಕೆಲವು ಪ್ರದೇಶಗಳಲ್ಲಿ ರೈತರು ಬಿತ್ತನೆ ಕಾರ್ಯ ಕೈಗೊಂಡಿದ್ದಾರೆ. ಒಂದು ಕಡೆ ಬಿತ್ತನೆ ಮಾಡಿರುವ ರೈತರ ಬೆಳೆಗಳಿಗೆ ನೀರಿನ ಅಗತ್ಯವಿದ್ದರೆ, ಮತ್ತೊಂದೆಡೆ ಜಲಾಶಯದಲ್ಲಿ ನೀರಿನ ಲಭ್ಯತೆಯನ್ನು ಸಂರಕ್ಷಿಸಬೇಕಾದ ಅನಿವಾರ್ಯತೆ ಇದೆ. ಇದು ಸರ್ಕಾರದ ಮುಂದಿರುವ ಸೂಕ್ಷ್ಮ ಪರಿಸ್ಥಿತಿಯಾಗಿದೆ ಎಂದು ಮಧು ಬಂಗಾರಪ್ಪ ಹೇಳಿದರು.

ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಉತ್ತಮ ಮಳೆಯಾಗಿರುವುದರಿಂದ ಅಲ್ಲಿನ ಜಲಾಶಯಗಳು ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹಿಸಿಕೊಂಡಿವೆ. ಆದರೆ ದಕ್ಷಿಣ ಕರ್ನಾಟಕದ ಹಲವು ಪ್ರದೇಶಗಳಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗದ ಕಾರಣ ಜಲಾಶಯಗಳು ಭರ್ತಿಯಾಗಿಲ್ಲ. ರಾಜ್ಯದ ಒಟ್ಟಾರೆ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭದ್ರಾ ಜಲಾಶಯದ ನೀರನ್ನು ವೈಜ್ಞಾನಿಕವಾಗಿ ಹಾಗೂ ಜವಾಬ್ದಾರಿಯುತವಾಗಿ ಬಳಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ರೈತರ ಕೃಷಿ ಚಟುವಟಿಕೆಗಳಿಗೆ ಸಾಧ್ಯವಾದಷ್ಟು ನೆರವು ನೀಡುವುದರ ಜೊತೆಗೆ ಭವಿಷ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ನೀರಿನ ಸಂರಕ್ಷಣೆಯನ್ನೂ ಖಚಿತಪಡಿಸಿಕೊಳ್ಳಬೇಕು. ಹೀಗಾಗಿ ಯಾವುದೇ ಆತುರದ ನಿರ್ಧಾರ ಕೈಗೊಳ್ಳದೆ, ಲಭ್ಯವಿರುವ ಅಂಕಿ-ಅಂಶಗಳು ಹಾಗೂ ತಜ್ಞರ ಸಲಹೆಗಳನ್ನು ಪರಿಗಣಿಸಿ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ನೀರು ಹರಿಸುವ ಕುರಿತು ತಮ್ಮ ನಿರೀಕ್ಷೆ ಮತ್ತು ಸಮಸ್ಯೆಗಳನ್ನು ಸಭೆಯಲ್ಲಿ ವಿವರಿಸಿದರು. ವಿವಿಧ ಕ್ಷೇತ್ರಗಳ ಶಾಸಕರು ಹಾಗೂ ರೈತ ಮುಖಂಡರು ತಮ್ಮ ತಮ್ಮ ಪ್ರದೇಶಗಳಲ್ಲಿನ ಬೆಳೆ ಪರಿಸ್ಥಿತಿ, ಮಳೆ ಪ್ರಮಾಣ ಮತ್ತು ನೀರಿನ ಅಗತ್ಯತೆಯ ಕುರಿತು ಸಭೆಯ ಗಮನ ಸೆಳೆದರು.

ರೈತರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ. ಭದ್ರಾ ಯೋಜನೆಯ ನೀರನ್ನು ಕೃಷಿ ಹಾಗೂ ಕುಡಿಯುವ ನೀರಿನ ಉದ್ದೇಶಗಳಿಗೆ ಸಮರ್ಪಕವಾಗಿ ಬಳಸುವ ನಿಟ್ಟಿನಲ್ಲಿ ಸಮತೋಲನದ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಧು ಬಂಗಾರಪ್ಪ ತಿಳಿಸಿದರು.

ಸಭೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಮುಜರಾಯಿ ಸಚಿವ ಕೆ.ಎಸ್. ಬಸವಂತಪ್ಪ, ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಡಾ. ಕೆ.ಪಿ. ಅಂಶುಮಂತ್, ಶಾಸಕರಾದ ಬಿ.ಕೆ. ಸಂಗಮೇಶ್, ಜಿ.ಎಚ್. ಶ್ರೀನಿವಾಸ, ಶಾರದಾ ಪೂರ್ಯ ನಾಯ್ಕ್, ಬಿ.ಪಿ. ಹರೀಶ್, ಸಮರ್ಥ್ ಶಾಮನೂರು, ಡಿ.ಜಿ. ಶಾಂತನಗೌಡ, ಲತಾ ಮಲ್ಲಿಕಾರ್ಜುನ, ಗಾಯತ್ರಿ ಶಾಂತೇಗೌಡ ಸೇರಿದಂತೆ ಹಲವು ಜನಪ್ರತಿನಿಧಿಗಳು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ರೈತ ಮುಖಂಡರಾದ ಎಚ್.ಆರ್. ಬಸವರಾಜಪ್ಪ, ತೇಜಸ್ವಿ ವಿ. ಕೆ.ಟಿ.ಗಂಗಾಧರ, ಪಟೇಲ್, ದ್ಯಾವಪ್ಪರೆಡ್ಡಿ, ಎಚ್.ಆರ್. ಲಿಂಗರಾಜ್, ಎಂ. ತಿಪ್ಪೇರುದ್ರಪ್ಪ ಸೇರಿದಂತೆ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತ ಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ ವಿಶೇಷ ಪೂಜೆ: 7 ಸಾವಿರಕ್ಕೂ ಅಧಿಕ ಭಕ್ತರಿಂದ ಆಶ್ಲೇಷ ಬಲಿ, ಅಭಿಷೇಕ

ಜನಾಭಿಮಾನವೇ ರಾಘವೇಂದ್ರ ಅವರ ಅಭಿವೃದ್ಧಿಗೆ ಸಿಕ್ಕಿರುವ ನಿಜವಾದ ಗೌರವ: ಬಳ್ಳೇಕೆರೆ ಸಂತೋಷ್

ಬಿ.ಸಿ. ನಾಗೇಶ್ ನಿಧನಕ್ಕೆ ಶಿವಮೊಗ್ಗ ಜಿಲ್ಲಾ ಬಿಜೆಪಿ ವತಿಯಿಂದ ಶ್ರದ್ಧಾಂಜಲಿ

ಬಿ.ಸಿ. ನಾಗೇಶ್ ನಿಧನಕ್ಕೆ ಬಿಜೆಪಿ ನಾಯಕರ ಕಂಬನಿ: ಶಿಕ್ಷಣ ಕ್ಷೇತ್ರದ ಸೇವೆ ಸ್ಮರಣೆ

ಸಚಿವ ನಾಗೇಂದ್ರ ವಜಾಕ್ಕೆ ಆಗ್ರಹಿಸಿ ಬಿಜೆಪಿ ಧರಣಿ ಮುಂದುವರಿಕೆ: “ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ”: ಹೊಳಲೂರು ಸಂತೋಷ್

ಸೂಗೂರು ಮಣ್ಣಿನ ಹೆಮ್ಮೆಯ ಪುತ್ರನಿಗೆ ರಾಷ್ಟ್ರಪತಿ ಗೌರವದ ಮುಕುಟ!:19 ವರ್ಷಗಳ ನಿಷ್ಠಾವಂತ ಪೊಲೀಸ್ ಸೇವೆಗೆ ಇನ್ಸ್‌ಪೆಕ್ಟರ್ ಗುರುಪ್ರಸಾದ್ ಅವರ ಸೇವೆಗೆ ರಾಷ್ಟ್ರಪತಿ ಪದಕದ ಗರಿ

Leave a Comment