ಪಶ್ಚಿಮ ಘಟ್ಟದ ಗ್ರಾಮಗಳು ಹಾಗೂ ರೈತರ ಹಿತಕ್ಕೆ ಧಕ್ಕೆಯಾಗದಂತೆ ರಾಜ್ಯ ಸರ್ಕಾರ ಸ್ಪಷ್ಟ ನಿಲುವು ಕೈಗೊಳ್ಳಲಿ; ‘ಶೂನ್ಯ ಬಫರ್ ಝೋನ್’ಗೆ ಸಂಸದ ಬಿ.ವೈ.ರಾಘವೇಂದ್ರ ಒತ್ತಾಯ
ಶಿವಮೊಗ್ಗ: ಡಾ. ಕೆ. ಕಸ್ತೂರಿರಂಗನ್ ಸಮಿತಿಯ ವರದಿಯ ಆಧಾರದ ಮೇಲೆ ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (Eco Sensitive Area–ESA) ಎಂದು ಘೋಷಿಸಲು ಕೇಂದ್ರ ಸರ್ಕಾರ ಹೊರಡಿಸಿರುವ 7ನೇ ಕರಡು ಅಧಿಸೂಚನೆಯ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ತಕ್ಷಣವೇ ಸಮಗ್ರ ಜಂಟಿ ಸರ್ವೆ ನಡೆಸಿ ರೈತರು ಹಾಗೂ ಗ್ರಾಮೀಣ ಜನರ ಹಿತಾಸಕ್ತಿಯನ್ನು ರಕ್ಷಿಸುವ ಸ್ಪಷ್ಟ ನಿಲುವನ್ನು ಕೇಂದ್ರಕ್ಕೆ ಕಳುಹಿಸಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಒತ್ತಾಯಿಸಿದರು.
ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸ್ತೂರಿರಂಗನ್ ವರದಿಯ ಅನುಷ್ಠಾನದಿಂದ ಪಶ್ಚಿಮ ಘಟ್ಟ ವ್ಯಾಪ್ತಿಯ ರೈತರು, ಕೃಷಿಕರು, ಕೂಲಿ ಕಾರ್ಮಿಕರು ಹಾಗೂ ಗ್ರಾಮೀಣ ಜನರಲ್ಲಿ ಆತಂಕ ಮೂಡಿದೆ. ಈಗಾಗಲೇ ಅರಣ್ಯ, ವನ್ಯಜೀವಿ ಸಂರಕ್ಷಣೆ ಸೇರಿದಂತೆ ಹಲವು ಕಾನೂನುಗಳು ಜಾರಿಯಲ್ಲಿರುವ ಸಂದರ್ಭದಲ್ಲಿ ಮತ್ತೊಂದು ನಿಯಂತ್ರಣ ವ್ಯವಸ್ಥೆ ಬಂದರೆ ಜನಜೀವನ ಹಾಗೂ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಕರ್ನಾಟಕ ಸೇರಿದಂತೆ ಪಶ್ಚಿಮ ಘಟ್ಟ ವ್ಯಾಪ್ತಿಯ ಒಟ್ಟು 10 ಜಿಲ್ಲೆಗಳ 1,439 ಗ್ರಾಮಗಳು ಪ್ರಸ್ತಾವಿತ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಒಳಪಡುವ ಸಾಧ್ಯತೆಯಿದ್ದು, ಇದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ ಎಂದು ರಾಘವೇಂದ್ರ ತಿಳಿಸಿದರು.
ಉತ್ತರ ಕನ್ನಡದಲ್ಲಿ 566, ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೈಂದೂರು ಸೇರಿದಂತೆ 446, ಚಿಕ್ಕಮಗಳೂರಿನಲ್ಲಿ 137, ಕೊಡಗಿನಲ್ಲಿ 53, ದಕ್ಷಿಣ ಕನ್ನಡದಲ್ಲಿ 46, ಮೈಸೂರಿನಲ್ಲಿ 48, ಬೆಳಗಾವಿಯಲ್ಲಿ 62, ಉಡುಪಿ ಜಿಲ್ಲೆಯಲ್ಲಿ ಬೈಂದೂರು ಹಾಗೂ ಕುಂದಾಪುರ ಸೇರಿದಂತೆ 34, ಹಾಸನದಲ್ಲಿ 30 ಹಾಗೂ ಚಾಮರಾಜನಗರದಲ್ಲಿ 20 ಗ್ರಾಮಗಳು ಈ ವ್ಯಾಪ್ತಿಗೆ ಒಳಪಡುವ ಪ್ರಸ್ತಾವನೆ ಇದೆ ಎಂದು ಅವರು ವಿವರಿಸಿದರು.

1,439 ಗ್ರಾಮಗಳ ಜನರಲ್ಲಿ ಆತಂಕ
ಈ ಗ್ರಾಮಗಳಲ್ಲಿ ವಾಸಿಸುತ್ತಿರುವ ರೈತರು, ಕೃಷಿ ಕಾರ್ಮಿಕರು ಹಾಗೂ ಇತರ ಜನರು ತಮ್ಮ ಭೂಮಿ, ಕೃಷಿ ಚಟುವಟಿಕೆ ಮತ್ತು ಭವಿಷ್ಯದ ಅಭಿವೃದ್ಧಿ ಕುರಿತು ಆತಂಕದಲ್ಲಿದ್ದಾರೆ. ಈಗಾಗಲೇ ಬಗರ್ ಹುಕುಂ ಸಾಗುವಳಿ, ಮುಳುಗಡೆ ಸಂತ್ರಸ್ತರ ಪರಿಹಾರ, ಡೀಮ್ಡ್ ಫಾರೆಸ್ಟ್, ಸೊಪ್ಪಿನಬೆಟ್ಟ ಸೇರಿದಂತೆ ಹಲವು ಭೂಮಿ ಸಂಬಂಧಿತ ಸಮಸ್ಯೆಗಳು ಬಗೆಹರಿಯದೆ ಉಳಿದಿವೆ. 1978ರ ಅರಣ್ಯ ಅಧಿಸೂಚನೆಯ ನಂತರವೂ ಹಲವಾರು ಸಮಸ್ಯೆಗಳಿಗೆ ಪರಿಹಾರ ದೊರಕಿಲ್ಲ. ಇಂತಹ ಸಂದರ್ಭದಲ್ಲಿ ಮತ್ತೊಂದು ನಿಯಂತ್ರಣ ವ್ಯವಸ್ಥೆ ಜಾರಿಗೆ ಬಂದರೆ ಜನರ ಸಂಕಷ್ಟ ಮತ್ತಷ್ಟು ಹೆಚ್ಚಾಗಬಹುದು ಎಂದು ಹೇಳಿದರು.
ಪಶ್ಚಿಮ ಘಟ್ಟದ ಪರಿಸರ ಸಂರಕ್ಷಣೆ ಅಗತ್ಯ ಎಂಬುದರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೆ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಶತಮಾನಗಳಿಂದ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿರುವ ರೈತರ ಹಕ್ಕುಗಳಿಗೆ ಧಕ್ಕೆಯಾಗಬಾರದು. ಪರಿಸರ ಮತ್ತು ಜನಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳುವ ರೀತಿಯಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದು ರಾಘವೇಂದ್ರ ಹೇಳಿದರು.
ಗಾಡ್ಗೀಳ್ ವರದಿಯಿಂದ ಕಸ್ತೂರಿರಂಗನ್ ವರದಿವರೆಗೆ
ಪಶ್ಚಿಮ ಘಟ್ಟದ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಗೋವಾ ಫೌಂಡೇಷನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನಂತರ, ಅಂದಿನ ಯುಪಿಎ ಸರ್ಕಾರ ಮಾಧವ ಗಾಡ್ಗೀಳ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಸುಮಾರು 1.60 ಲಕ್ಷ ಚದರ ಕಿಲೋಮೀಟರ್ ಪ್ರದೇಶದಲ್ಲಿ ಸುಮಾರು 1.20 ಲಕ್ಷ ಚದರ ಕಿಲೋಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವಾಗಿ ಪರಿಗಣಿಸುವ ಪ್ರಸ್ತಾವನೆ ಬಂದಿತ್ತು. ಇದರಿಂದ ಪಶ್ಚಿಮ ಘಟ್ಟ ವ್ಯಾಪ್ತಿಯ ಆರು ರಾಜ್ಯಗಳಲ್ಲಿ ಆತಂಕ ಉಂಟಾಗಿತ್ತು ಎಂದು ಅವರು ವಿವರಿಸಿದರು.
ನಂತರ ಕಸ್ತೂರಿರಂಗನ್ ಅವರ ನೇತೃತ್ವದಲ್ಲಿ ಮತ್ತೊಂದು ಸಮಿತಿ ರಚನೆಯಾಯಿತು. ಈ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಇದುವರೆಗೆ ಏಳು ಕರಡು ಅಧಿಸೂಚನೆಗಳು ಹೊರಬಂದಿವೆ. ಆದರೆ ಈ ವಿಚಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಜನರ ಆತಂಕ ಮತ್ತು ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಪರಿಗಣಿಸಬೇಕಾಗಿದೆ ಎಂದರು.
ಕರ್ನಾಟಕಕ್ಕೆ 20,668 ಚದರ ಕಿ.ಮೀ. ಪ್ರದೇಶದ ಪ್ರಸ್ತಾವನೆ
ಆರು ಪಶ್ಚಿಮ ಘಟ್ಟ ರಾಜ್ಯಗಳಿಗೆ ಸಂಬಂಧಿಸಿದಂತೆ ಸುಮಾರು 56,825.7 ಚದರ ಕಿಲೋಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವಾಗಿ ಗುರುತಿಸುವ ಪ್ರಸ್ತಾವನೆ ಇದೆ. ಇದರಲ್ಲಿ ಕರ್ನಾಟಕದ ಪಾಲು ಸುಮಾರು 20,668 ಚದರ ಕಿಲೋಮೀಟರ್ ಆಗಿದ್ದು, ಮಹಾರಾಷ್ಟ್ರದ ಪಾಲು ಸುಮಾರು 17,340 ಚದರ ಕಿಲೋಮೀಟರ್ ಎಂದು ರಾಘವೇಂದ್ರ ಹೇಳಿದರು.
ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ಪ್ರಮಾಣದಲ್ಲಿ ಜನರ ಆತಂಕ ವ್ಯಕ್ತವಾಗಿದೆ. ಹೀಗಾಗಿ ರಾಜ್ಯ ಸರ್ಕಾರ ತನ್ನ ವಾಸ್ತವಿಕ ಪರಿಸ್ಥಿತಿಯನ್ನು ಆಧರಿಸಿ ವೈಜ್ಞಾನಿಕ ಹಾಗೂ ಸಮಗ್ರ ಅಧ್ಯಯನ ನಡೆಸಿ ಕೇಂದ್ರಕ್ಕೆ ತನ್ನ ಅಭಿಪ್ರಾಯ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಹಿಂದಿನ ಸರ್ಕಾರಗಳ ನಿಲುವು ಮುಂದುವರಿಯಲಿ
ಕಸ್ತೂರಿರಂಗನ್ ವರದಿಗೆ ಸಂಬಂಧಿಸಿದಂತೆ ಈ ಹಿಂದೆ ಹೊರಬಂದ ವಿವಿಧ ಕರಡು ಅಧಿಸೂಚನೆಗಳ ಸಂದರ್ಭದಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಜನರ ಪರವಾಗಿ ತಮ್ಮ ಆಕ್ಷೇಪಣೆ ಹಾಗೂ ಸಲಹೆಗಳನ್ನು ಕೇಂದ್ರಕ್ಕೆ ಸಲ್ಲಿಸಿದ್ದಾರೆ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ತಮ್ಮ ಉದ್ದೇಶವಲ್ಲ. ರೈತರ ಹಿತದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಾಗಿ ನಿಲುವು ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದರು.
2019ರ ಡಿಸೆಂಬರ್ 4ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿದ್ದ ಅಭಿಪ್ರಾಯದಲ್ಲೂ ಕರ್ನಾಟಕಕ್ಕೆ ಸಂಬಂಧಿಸಿದ 20,668 ಚದರ ಕಿಲೋಮೀಟರ್ ಪ್ರದೇಶದಲ್ಲಿ ಈಗಾಗಲೇ ಸುಮಾರು 16,632 ಚದರ ಕಿಲೋಮೀಟರ್ ಪ್ರದೇಶವು ಮೀಸಲು ಅರಣ್ಯ, ವನ್ಯಜೀವಿ ಧಾಮ ಸೇರಿದಂತೆ ವಿವಿಧ ಅರಣ್ಯ ಸಂರಕ್ಷಣಾ ಕಾನೂನುಗಳ ವ್ಯಾಪ್ತಿಯಲ್ಲಿದೆ ಎಂದು ತಿಳಿಸಲಾಗಿತ್ತು. ಈಗಾಗಲೇ ಕಾನೂನು ರಕ್ಷಣೆಯಲ್ಲಿರುವ ಪ್ರದೇಶಗಳನ್ನು ಮಾತ್ರ ಪರಿಗಣಿಸಿ, ಕೃಷಿ ಹಾಗೂ ಜನವಸತಿ ಪ್ರದೇಶಗಳನ್ನು ಹೊರಗಿಡಬೇಕು ಎಂಬುದು ಅಂದಿನ ರಾಜ್ಯ ಸರ್ಕಾರದ ನಿಲುವಾಗಿತ್ತು ಎಂದು ರಾಘವೇಂದ್ರ ಹೇಳಿದರು.

‘ಶೂನ್ಯ ಬಫರ್ ಝೋನ್’ಗೆ ಒತ್ತಾಯ
ರಾಜ್ಯ ಸರ್ಕಾರ ತಕ್ಷಣವೇ ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿ ಜಂಟಿ ಸರ್ವೆ ನಡೆಸಬೇಕು. ಪಶ್ಚಿಮ ಘಟ್ಟ ಪ್ರದೇಶದಲ್ಲಿ ನೈಸರ್ಗಿಕ ಭೂದೃಶ್ಯ (Natural Landscape) ಹಾಗೂ ಮಾನವ ನಿರ್ಮಿತ/ಕೃಷಿ ಭೂದೃಶ್ಯ (Cultural Landscape)ಗಳನ್ನು ಪ್ರತ್ಯೇಕವಾಗಿ ಗುರುತಿಸಬೇಕು ಎಂದು ಅವರು ಹೇಳಿದರು.
ನೈಸರ್ಗಿಕವಾಗಿ ಬೆಳೆದಿರುವ ಅರಣ್ಯ ಪ್ರದೇಶ ಒಂದು ಕಡೆ ಇದ್ದರೆ, ಮತ್ತೊಂದೆಡೆ ರೈತರು ವರ್ಷಗಳಿಂದ ಅಡಿಕೆ, ಕಾಫಿ, ರಬ್ಬರ್, ಕಾಳುಮೆಣಸು, ಶುಂಠಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಈ ಕೃಷಿ ಪ್ರದೇಶಗಳನ್ನು ಅರಣ್ಯ ಪ್ರದೇಶದೊಂದಿಗೆ ಸಮಾನವಾಗಿ ಪರಿಗಣಿಸುವುದು ಸರಿಯಲ್ಲ. ಹೀಗಾಗಿ ವೈಜ್ಞಾನಿಕ ಆಧಾರದ ಮೇಲೆ ಎರಡನ್ನೂ ಪ್ರತ್ಯೇಕಿಸಿ ಅಧ್ಯಯನ ನಡೆಸಬೇಕು ಎಂದರು.
ಈಗಾಗಲೇ ರಾಷ್ಟ್ರೀಯ ಉದ್ಯಾನವನ, ವನ್ಯಜೀವಿ ಧಾಮ, ಮೀಸಲು ಅರಣ್ಯ ಹಾಗೂ ಇತರ ಕಾನೂನುಬದ್ಧ ಅರಣ್ಯ ಪ್ರದೇಶಗಳಿದ್ದರೆ ಅವುಗಳನ್ನು ಮಾತ್ರ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಪರಿಗಣಿಸಬೇಕು. ಯಾವುದೇ ಗ್ರಾಮ ಅಥವಾ ರೈತರ ಕೃಷಿ ಭೂಮಿಯನ್ನು ಹೊಸದಾಗಿ ESA ವ್ಯಾಪ್ತಿಗೆ ಸೇರಿಸುವ ಪ್ರಯತ್ನ ಮಾಡಬಾರದು. ಬಫರ್ ಝೋನ್ ವಿಚಾರದಲ್ಲಿ ಶೂನ್ಯ ಬಫರ್ ಝೋನ್ ಇರಬೇಕು ಎಂಬುದು ಬಿಜೆಪಿ ಪರವಾಗಿ ತಮ್ಮ ಸ್ಪಷ್ಟ ಒತ್ತಾಯವಾಗಿದೆ ಎಂದು ರಾಘವೇಂದ್ರ ಹೇಳಿದರು.
ರೈತರ ಕೃಷಿ ಚಟುವಟಿಕೆಗಳಿಗೆ ಸ್ಪಷ್ಟ ರಕ್ಷಣೆ ಅಗತ್ಯ
ಕಸ್ತೂರಿರಂಗನ್ ವರದಿ ಜಾರಿಗೆ ಬಂದರೆ ಭೂಮಿಯ ಬಳಕೆ, ನಿರ್ಮಾಣ ಚಟುವಟಿಕೆ, ಕೃಷಿ ಪದ್ಧತಿ ಹಾಗೂ ಇತರ ಅಭಿವೃದ್ಧಿ ಕಾರ್ಯಗಳ ಮೇಲೆ ಯಾವ ರೀತಿಯ ನಿರ್ಬಂಧಗಳು ಬರಲಿವೆ ಎಂಬುದರ ಕುರಿತು ಸ್ಪಷ್ಟತೆ ಅಗತ್ಯವಿದೆ.
ಅಡಿಕೆ, ಕಾಫಿ, ರಬ್ಬರ್, ಕಾಳುಮೆಣಸು ಸೇರಿದಂತೆ ಸಾಂಪ್ರದಾಯಿಕ ತೋಟಗಾರಿಕಾ ಬೆಳೆಗಳನ್ನು ಬೆಳೆಯುತ್ತಿರುವ ರೈತರು ಬೆಳೆ ರಕ್ಷಣೆಗಾಗಿ ಅಗತ್ಯವಿರುವ ಔಷಧಿ ಹಾಗೂ ಕೃಷಿ ವಿಧಾನಗಳನ್ನು ಬಳಸುತ್ತಾರೆ. ಭವಿಷ್ಯದಲ್ಲಿ ಇಂತಹ ಕೃಷಿ ಚಟುವಟಿಕೆಗಳ ಮೇಲೂ ನಿರ್ಬಂಧ ಹೇರಿದರೆ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಹೀಗಾಗಿ ರೈತರ ಸಾಂಪ್ರದಾಯಿಕ ಕೃಷಿ ಪದ್ಧತಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಅಧಿಸೂಚನೆಯಲ್ಲಿ ಸ್ಪಷ್ಟ ಭರವಸೆ ನೀಡಬೇಕು ಎಂದು ಅವರು ಹೇಳಿದರು.
32 ಪ್ರಮುಖ ವಿಚಾರಗಳ ಕುರಿತು ಚರ್ಚೆ
ಕಸ್ತೂರಿರಂಗನ್ ವರದಿಗೆ ಸಂಬಂಧಿಸಿದಂತೆ ಬಿಜೆಪಿ ವತಿಯಿಂದ 32 ಪ್ರಮುಖ ವಿಚಾರಗಳನ್ನು ಗುರುತಿಸಿ ಚರ್ಚಿಸಲಾಗಿದೆ. ಭೂಮಿಯ ಮೇಲಿನ ಹಕ್ಕುಗಳ ನಿಯಂತ್ರಣ, ಒತ್ತುವರಿ ಸಮಸ್ಯೆ, ಪರಿಹಾರದ ಅನಿಶ್ಚಿತತೆ, ಸಾಂಪ್ರದಾಯಿಕ ಕೃಷಿ ಚಟುವಟಿಕೆಗಳ ಮೇಲಿನ ನಿರ್ಬಂಧ ಸೇರಿದಂತೆ ಹಲವು ವಿಷಯಗಳಿಗೆ ಸ್ಪಷ್ಟ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ರಾಘವೇಂದ್ರ ತಿಳಿಸಿದರು.
ಇತ್ತೀಚೆಗೆ ನಡೆದ ಸಭೆಯಲ್ಲಿ ವಿವಿಧ ಜಿಲ್ಲೆಗಳ ಜನಪ್ರತಿನಿಧಿಗಳು, ಪಕ್ಷದ ಮುಖಂಡರು, ಪರಿಸರ ತಜ್ಞರು ಹಾಗೂ ರೈತ ಹೋರಾಟ ಸಮಿತಿಯ ಪ್ರತಿನಿಧಿಗಳು ಭಾಗವಹಿಸಿ ಈ ಕುರಿತು ಚರ್ಚಿಸಿದ್ದಾರೆ. ಪಕ್ಷದ ದೃಷ್ಟಿಕೋನ ಮಾತ್ರವಲ್ಲದೆ ರೈತರ ಹಾಗೂ ಪರಿಸರ ಹಿತಾಸಕ್ತಿಯನ್ನೂ ಪರಿಗಣಿಸಿ ರಾಜ್ಯ ಸರ್ಕಾರಕ್ಕೆ ಸಲಹೆಗಳನ್ನು ನೀಡಲಾಗಿದೆ ಎಂದರು.
ವಿಶೇಷ ಅಧಿವೇಶನಕ್ಕೂ ಮುನ್ನ ಕ್ರಮಕ್ಕೆ ಆಗ್ರಹ
ಕಸ್ತೂರಿರಂಗನ್ ವರದಿ ಕುರಿತು ಒಂದು ದಿನದ ವಿಶೇಷ ಅಧಿವೇಶನ ನಡೆಸುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ. ಅದನ್ನು ಸ್ವಾಗತಿಸುತ್ತೇವೆ. ಆದರೆ ಅದಕ್ಕೂ ಮುನ್ನವೇ ರಾಜ್ಯ ಸರ್ಕಾರ ಜಿಲ್ಲಾಡಳಿತಕ್ಕೆ ಸ್ಪಷ್ಟ ನಿರ್ದೇಶನ ನೀಡಿ ಜಂಟಿ ಸರ್ವೆ ನಡೆಸಲು ಅಗತ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಬೇಕು. ವರದಿಯ ವ್ಯಾಪ್ತಿಗೆ ಬರುವ ಪ್ರದೇಶಗಳ ವಾಸ್ತವಿಕ ಸ್ಥಿತಿಯನ್ನು ಗುರುತಿಸಿ, ರೈತರ ಪರವಾದ ಸ್ಪಷ್ಟ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ರಾಘವೇಂದ್ರ ಆಗ್ರಹಿಸಿದರು.
ಈ ವಿಚಾರವನ್ನು ಪಕ್ಷಾತೀತವಾಗಿ ನೋಡಬೇಕು. ಪಶ್ಚಿಮ ಘಟ್ಟದ ಪರಿಸರ ಸಂರಕ್ಷಣೆ ಮತ್ತು ಅಲ್ಲಿನ ಜನರ ಹಕ್ಕುಗಳ ರಕ್ಷಣೆಯನ್ನು ಒಂದೇ ಸಮಯದಲ್ಲಿ ಸಾಧಿಸುವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ರೈತರಿಗೆ ಅನ್ಯಾಯವಾಗದಂತೆ ಹಾಗೂ ಪರಿಸರಕ್ಕೂ ಹಾನಿಯಾಗದಂತೆ ಸಮತೋಲನದ ಪರಿಹಾರ ಕಂಡುಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದು ಅವರು ಹೇಳಿದರು.
“ಈ ವಿಚಾರದಲ್ಲಿ ರಾಜಕೀಯಕ್ಕಿಂತ ರೈತರ ಹಿತ ಮುಖ್ಯ. ಈಗಾಗಲೇ ಕಾನೂನು ರಕ್ಷಣೆಯಲ್ಲಿರುವ ಅರಣ್ಯ ಪ್ರದೇಶಗಳನ್ನು ಮಾತ್ರ ಪರಿಗಣಿಸಿ, ಗ್ರಾಮಗಳು ಮತ್ತು ಕೃಷಿ ಭೂಮಿಯನ್ನು ಹೊಸದಾಗಿ ESA ವ್ಯಾಪ್ತಿಗೆ ಸೇರಿಸಬಾರದು. ರಾಜ್ಯ ಸರ್ಕಾರ ತಕ್ಷಣ ಜಂಟಿ ಸರ್ವೆ ನಡೆಸಿ ರೈತರ ಪರವಾದ ತನ್ನ ಸ್ಪಷ್ಟ ನಿಲುವನ್ನು ಕೇಂದ್ರಕ್ಕೆ ಕಳುಹಿಸಬೇಕು” ಎಂದು ಬಿ.ವೈ. ರಾಘವೇಂದ್ರ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಪ್ರಭಾರಿಗಳಾದ ಸಿದ್ಧರಾಮಣ್ಣ, ಪಕ್ಷದ ಜಿಲ್ಲಾ ಅಧ್ಯಕ್ಷರಾದ ಜಗದೀಶ್ ಎನ್.ಕೆ, ಶಾಸಕ ಚನ್ನಬಸಪ್ಪ, ಮಾಜಿ ಶಾಸಕರಾದ ಅಶೋಕ್ ನಾಯಕ್ ಹಾಗೂ ಕುಮಾರಸ್ವಾಮಿ, ಎಸ್. ಎಸ್. ಜ್ಯೋತಿ ಪ್ರಕಾಶ್, ಮೋಹನ್ ರೆಡ್ಡಿ, ಮಾಲತೇಶ್, ಮಾಧ್ಯಮ ಪ್ರಮುಖರಾದ ಚಂದ್ರಶೇಖರ್, ಮಂಜುನಾಥ್, ಗ್ರಾಮಾಂತರ ಅಧ್ಯಕ್ಷರಾದ ಸಿಂಗನಹಳ್ಳಿ ಸುರೇಶ್, ದಿಶಾ ಸಮಿತಿ ಸದಸ್ಯರಾದ ಗಿರೀಶ್ ಭದ್ರಾಪುರ, ಹಾಗೂ ಹರೀಶ್ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.






