ಹೊನ್ನಾಳಿ: ಧಾರ್ಮಿಕ, ಚಾರಿತ್ರಿಕ ಹಾಗೂ ಆಧ್ಯಾತ್ಮಿಕ ಪರಂಪರೆಯನ್ನು ಹೊಂದಿರುವ ಹೊನ್ನಾಳಿ ತಾಲ್ಲೂಕಿನ ಹೊಟ್ಯಾಪುರ ಹಿರೇಮಠದಲ್ಲಿ ಸೆ.19ರಂದು ಎಳೆಗೌರಮ್ಮನ ಹಬ್ಬದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನ ಶಾಖಾ ಸಂಸ್ಥಾನದ ಹೊಟ್ಯಾಪುರ ಹಿರೇಮಠದಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳು ಶ್ರೀ ಷ.ಬ್ರ. ಡಾ. ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು, ಹಿರೇಕಲ್ಮಠ-ಹೊನ್ನಾಳಿ, ಶ್ರೀ ಷ.ಬ್ರ. ಶಿವಯೋಗಿ ಮಹಾಲಿಂಗ ಹಾಲಸ್ವಾಮಿಗಳು, ಬೃಹನ್ಮಠ ಗೋವಿನಕೋವಿ ಹಾಗೂ ಶ್ರೀ ಓಂಕಾರಸ್ವಾಮಿ ಮರಿದೇವರು, ಹಿರೇಮಠ-ಹೊಟ್ಯಾಪುರ ಇವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿವೆ.

ಶ್ರೀ ಶಾಲಿವಾಹನ ಶಕೆ 1948ನೇ ಪರಾಭವ ನಾಮ ಸಂವತ್ಸರದ ಶ್ರಾವಣ ಶುದ್ಧ ಪ್ರತಿಪದೆಯ ಅಂಗವಾಗಿ ಕರ್ತೃಗದ್ದುಗೆಗಳಿಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ಸೇರಿದಂತೆ ಲೋಕಕಲ್ಯಾಣಾರ್ಥವಾಗಿ ವಿವಿಧ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಗುವುದು.
ಸೆ.19ರಂದು ಶನಿವಾರ ಎಳೆಹಬ್ಬ ನಡೆಯಲಿದ್ದು, ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಮಸ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತನು-ಮನ-ಧನದಿಂದ ಸೇವೆ ಸಲ್ಲಿಸಿ ಶ್ರೀಗುರುಗಳ ಕೃಪೆಗೆ ಪಾತ್ರರಾಗುವಂತೆ ಹಿರೇಮಠದ ವಂಶಸ್ಥರು, ಹೊಟ್ಯಾಪುರ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಎರಡು ಶತಮಾನಗಳ ಧಾರ್ಮಿಕ ಪರಂಪರೆ
ಹೊಟ್ಯಾಪುರ ಹಿರೇಮಠವು ಶ್ರೀಮದ್ ಉಜ್ಜಯಿನಿ ಸದ್ಧರ್ಮ ಪೀಠದ ಶಾಖಾಮಠಗಳ ಪರಂಪರೆಯಲ್ಲಿ ಪ್ರಮುಖ ಸ್ಥಾನ ಹೊಂದಿದ್ದು, ಸುಮಾರು ಎರಡು ಶತಮಾನಗಳಷ್ಟು ಧಾರ್ಮಿಕ ಹಿನ್ನೆಲೆಯನ್ನು ಹೊಂದಿದೆ. ಈ ಮಠವು ಕೇವಲ ಪೂಜಾ ಕೇಂದ್ರವಾಗಿರದೆ, ಧರ್ಮಾಚರಣೆ, ಆಧ್ಯಾತ್ಮಿಕ ಚಿಂತನೆ, ಸಾಮಾಜಿಕ ಕಾಳಜಿ ಹಾಗೂ ಜನಜೀವನದೊಂದಿಗೆ ನಿಕಟ ಸಂಬಂಧ ಹೊಂದಿರುವ ಧಾರ್ಮಿಕ ಸಂಸ್ಥೆಯಾಗಿ ಬೆಳೆದು ಬಂದಿದೆ.

ಮಠದ ಮೂಲಪುರುಷರಾದ ಸಿದ್ದಪ್ಪಯ್ಯ ಸ್ವಾಮಿಗಳು ಸಿದ್ದಪ್ಪನ ಗಿರಿಯಲ್ಲಿ ಲಿಂಗೈಕ್ಯರಾಗಿದ್ದು, ಇಂದಿಗೂ ಅಲ್ಲಿ ಪೂಜಾ ಕಾರ್ಯಗಳು ನಡೆಯುತ್ತಿವೆ. ಪ್ರಸ್ತುತ ಉಜ್ಜನಿಪುರ ಹಾಗೂ ಚಿಕ್ಕಬಾಸೂರು ತಾಂಡಗಳ ನಡುವೆ, ಕಮಾರಗಟ್ಟೆ-ಕೂಡ್ಲಿಗೆರೆ (ಕೆ.ಕೆ. ರಸ್ತೆ) ಮಾರ್ಗದಲ್ಲಿರುವ ‘ಆನೆ ಬಿದ್ದ ಹಳ್ಳ’ ಎಂಬ ಸಣ್ಣ ಹಳ್ಳದ ಪ್ರದೇಶದಲ್ಲಿ ತಪಸ್ವಿಗಳು ವಾಸಿಸುತ್ತಿದ್ದರು ಎನ್ನುವ ಐತಿಹಾಸಿಕ ಹಿನ್ನೆಲೆ ಇದೆ.
ಗ್ರಾಮ ಸ್ಥಾಪನೆಯ ಸಂದರ್ಭದಲ್ಲಿ ರಾಮಪುರ ಮತ್ತು ಹಿರೇಬಾಸೂರು ಗ್ರಾಮಗಳ ಗಡಿಗಳ ಮಧ್ಯದಲ್ಲಿದ್ದ ಪ್ರದೇಶವನ್ನು ಎರಡು ಗ್ರಾಮಗಳ ಗಡಿಗಳನ್ನು ಒಂದುಗೂಡಿಸಿದ ಕಾರಣ ‘ಒಟ್ಟಿನಪುರ’ ಎಂದು ಕರೆಯಲಾಯಿತು. ಕಾಲಕ್ರಮೇಣ ಜನರ ಆಡುಭಾಷೆಯಲ್ಲಿ ಈ ಹೆಸರು ‘ಹೊಟ್ಯಾಪುರ’ವಾಗಿ ರೂಪಾಂತರಗೊಂಡಿತು ಎಂಬುದು ಸ್ಥಳೀಯ ಇತಿಹಾಸದಲ್ಲಿ ಉಲ್ಲೇಖವಾಗುತ್ತದೆ.
ಪವಾಡ ಸದೃಶ ಕಾರ್ಯಗಳನ್ನು ನಡೆಸಿದ ತಪಸ್ವಿಗಳಾದ ಶ್ರೀ ಷ.ಬ್ರ. ಹಾಲು ಒಡೆಯರ್ ಸ್ವಾಮಿಗಳು ಮಠದ ಪ್ರಥಮ ಪೀಠಾಧಿಪತಿಗಳಾಗಿ ಧಾರ್ಮಿಕ ಪರಂಪರೆಗೆ ಭದ್ರ ಬುನಾದಿ ಹಾಕಿದರು. ಅವರ ಲಿಂಗೈಕ್ಯ ನಂತರ 1900ರಲ್ಲಿ ಶ್ರೀ ಷ.ಬ್ರ. ರೇವಣಸಿದ್ಧ ಶಿವಾಚಾರ್ಯರು ಪಟ್ಟಾಧಿಕಾರ ವಹಿಸಿಕೊಂಡರು. ಬಳಿಕ 24.03.2002ರಂದು ಶ್ರೀ ಷ.ಬ್ರ. ಗಿರಿಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಪಟ್ಟಾಧಿಕಾರ ಸ್ವೀಕರಿಸಿ ಮಠದ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ಮುಂದುವರಿಸಿದರು.

ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಆದ್ಯತೆ
ಶ್ರೀ ಷ.ಬ್ರ. ಗಿರಿಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಪ್ರತಿವರ್ಷ ಶ್ರಾವಣ ಮಾಸದ ಇಷ್ಟಲಿಂಗ ಪೂಜಾನುಷ್ಠಾನ, ಎಳೆಗೌರಿಹಬ್ಬ, ಉಚಿತ ಶಿವದೀಕ್ಷಾ ಕಾರ್ಯಕ್ರಮ, ಧರ್ಮಸಭೆ, ಶರನ್ನವರಾತ್ರಿ ಕಾರ್ಯಕ್ರಮ, ಶರಣರ ಜಯಂತಿ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು.
ಇದರೊಂದಿಗೆ ಸಿದ್ದಪ್ಪನ ಗಿರಿಯಲ್ಲಿ ಪ್ರತಿಶ್ರಾವಣ ಸೋಮವಾರ ರುದ್ರಾಭಿಷೇಕ ಹಾಗೂ ಬಿಲ್ವಾರ್ಚನೆಗಳನ್ನು ನಡೆಸುವ ಮೂಲಕ ಭಕ್ತರಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವ ಕಾರ್ಯವೂ ನಿರಂತರವಾಗಿ ನಡೆಯುತ್ತಿತ್ತು.
ಶ್ರೀ ಷ.ಬ್ರ. ಗಿರಿಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸ್ವತಃ ಕೃಷಿಕರಾಗಿದ್ದು, ಕೃಷಿ, ಸಮಾಜದ ಅಭಿವೃದ್ಧಿ, ಸಾಹಿತ್ಯ, ಧರ್ಮಾಚರಣೆ ಹಾಗೂ ಯುವಜನತೆಯ ಭವಿಷ್ಯದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಧಾರ್ಮಿಕ ಪರಂಪರೆಯ ಜೊತೆಗೆ ಸಮಾಜಮುಖಿ ಚಿಂತನೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಅವರು ನೀಡಿದ ಕೊಡುಗೆಯನ್ನು ಸ್ಮರಿಸುವುದು ಇಂದಿನ ಪೀಳಿಗೆಯ ಕರ್ತವ್ಯವಾಗಿದೆ.

2022ರಲ್ಲಿ ಕರ್ತೃಗದ್ದುಗೆ ಶಿಲಾಮಠಕ್ಕೆ ಶಂಕುಸ್ಥಾಪನೆ
ಹೊಟ್ಯಾಪುರ ಹಿರೇಮಠದ ಪೂರ್ವಜರಾದ ಲಿಂಗೈಕ್ಯ ಶ್ರೀ ಷ.ಬ್ರ. ಹಾಲು ಒಡೆಯರ್ ಸ್ವಾಮಿಗಳು, ಶ್ರೀ ಷ.ಬ್ರ. ರೇವಣಸಿದ್ಧ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಶ್ರೀ ಷ.ಬ್ರ. ಗಿರಿಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಕರ್ತೃಗದ್ದುಗೆಗಳನ್ನು ನಿರ್ಮಿಸುವ ಸಂಕಲ್ಪ ಕೈಗೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ನೂತನ ಕರ್ತೃಗದ್ದುಗೆಗಳ ಶಿಲಾಮಠ ನಿರ್ಮಾಣಕ್ಕೆ 2022ರಲ್ಲಿ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಸಿದ್ದಲಿಂಗರಾಜ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಶ್ರೀ ಷ.ಬ್ರ. ಡಾ. ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಶಂಕುಸ್ಥಾಪನೆ ನೆರವೇರಿಸಿದ್ದರು.
ಮಠದ ಐತಿಹಾಸಿಕ ಹಾಗೂ ಧಾರ್ಮಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿ, ಸಂರಕ್ಷಿಸಿ, ಪರಿಚಯಿಸುವ ಉದ್ದೇಶದಿಂದ ಈ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ.
ಶ್ರೀ ಗಿರಿಸಿದ್ದೇಶ್ವರ ಸ್ವಾಮಿಗಳ ಸೇವಾ ಪರಂಪರೆಗೆ ಗೌರವ
ಶ್ರೀ ಷ.ಬ್ರ. ಗಿರಿಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು 24-07-2023ರಂದು ಲಿಂಗೈಕ್ಯರಾದರು. ಅವರ ನಂತರ ಹೊಟ್ಯಾಪುರ ಹಿರೇಮಠದ ಉತ್ತರಾಧಿಕಾರಿಯಾಗಿ ಅವರ ಪೂರ್ವಾಶ್ರಮದ ಸಹೋದರ ಶಾಂತಯ್ಯನವರ ಮೊಮ್ಮಗ ಶ್ರೀ ಓಂಕಾರಸ್ವಾಮಿ ಮರಿದೇವರು ಅವರನ್ನು ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಸಿದ್ದಲಿಂಗರಾಜ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಹೊನ್ನಾಳಿ ಹಿರೇಕಲ್ಮಠದ ಶ್ರೀ ಷ.ಬ್ರ. ಡಾ. ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಗ್ರಾಮಸ್ಥರ ಸಮ್ಮುಖದಲ್ಲಿ ಉತ್ತರಾಧಿಕಾರಿಯಾಗಿ ಘೋಷಿಸಿದರು.
ಮಠದ ಪೂರ್ವ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವುದರೊಂದಿಗೆ ಧಾರ್ಮಿಕ ಆಚರಣೆಗಳು, ಸಮಾಜಮುಖಿ ಕಾರ್ಯಗಳು ಹಾಗೂ ಯುವಜನತೆಯಲ್ಲಿ ಧಾರ್ಮಿಕ-ಸಾಮಾಜಿಕ ಜಾಗೃತಿ ಮೂಡಿಸುವ ಚಟುವಟಿಕೆಗಳಿಗೆ ಆದ್ಯತೆ ನೀಡುವ ಸಂಕಲ್ಪ ಹೊಂದಲಾಗಿದೆ.
₹1.50 ಕೋಟಿ ವೆಚ್ಚದಲ್ಲಿ ನೂತನ ಶಿಲಾಮಠ
ಹೊಟ್ಯಾಪುರ ಹಿರೇಮಠದ ಲಿಂಗೈಕ್ಯ ಪೀಠಾಧಿಪತಿಗಳ ಕರ್ತೃಗದ್ದುಗೆಗಳಿಗೆ ನೂತನ ಶಿಲಾಮಠ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಈ ನಿರ್ಮಾಣ ಕಾರ್ಯಕ್ಕೆ ಅಂದಾಜು ₹1.50 ಕೋಟಿ ವೆಚ್ಚವಾಗಲಿದೆ.
ಮಠದ ಇತಿಹಾಸ, ಪರಂಪರೆ ಮತ್ತು ಪೀಠಾಧಿಪತಿಗಳ ಸೇವೆಯನ್ನು ಶಾಶ್ವತವಾಗಿ ಸ್ಮರಿಸುವ ರೀತಿಯಲ್ಲಿ ಕರ್ತೃಗದ್ದುಗೆಗಳ ಶಿಲಾಮಠವನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಇದು ಮುಂದಿನ ಪೀಳಿಗೆಗೆ ಧಾರ್ಮಿಕ ಪರಂಪರೆಯ ಪರಿಚಯ ನೀಡುವ ಜೊತೆಗೆ ಭಕ್ತರಿಗೆ ಪೂಜಾ ಹಾಗೂ ಧಾರ್ಮಿಕ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸುವ ಕೇಂದ್ರವಾಗಲಿದೆ.
ಈ ಮಹತ್ವದ ಕಾರ್ಯಕ್ಕೆ ಭಕ್ತರು ತಮ್ಮ ಶಕ್ತ್ಯಾನುಸಾರ ತನು-ಮನ-ಧನದಿಂದ ಸಹಕರಿಸುವಂತೆ ಮಠದ ವತಿಯಿಂದ ಭಕ್ತಿಪೂರ್ವಕವಾಗಿ ಮನವಿ ಮಾಡಲಾಗಿದೆ. ಭಕ್ತರ ಸಹಕಾರದಿಂದ ನಿರ್ಮಾಣ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಮಠದ ಪೂರ್ವಜರ ಸೇವಾ ಪರಂಪರೆಯನ್ನು ಶಾಶ್ವತವಾಗಿ ಉಳಿಸುವ ಆಶಯ ಹೊಂದಲಾಗಿದೆ.


ಎಳೆಗೌರಮ್ಮನ ಹಬ್ಬದ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಕರ್ತೃಗದ್ದುಗೆಗಳ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಮಠದ ನೂತನ ಶಿಲಾಮಠ ನಿರ್ಮಾಣಕ್ಕೆ ಕೈಜೋಡಿಸುವಂತೆ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನ ಶಾಖಾ ಸಂಸ್ಥಾನ ಹಿರೇಮಠ-ಹೊಟ್ಯಾಪುರ, ಹೊನ್ನಾಳಿ ತಾಲ್ಲೂಕು, ಹಿರೇಮಠದ ವಂಶಸ್ಥರು ಹಾಗೂ ಗ್ರಾಮಸ್ಥರು ಕೋರಿದ್ದಾರೆ.











