ಸಿರಿಗೆರೆ: ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸತ್ಸಂಕಲ್ಪದೊಂದಿಗೆ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಆರಂಭಿಸಿದ ಶಿಕ್ಷಣ ಸೇವೆ ಇಂದು ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಾರಿ ತೋರಿಸಿದೆ. ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಅನೇಕರು ವೈದ್ಯರು, ಇಂಜಿನಿಯರ್‌ಗಳು, ಐಎಎಸ್, ಐಎಫ್‌ಎಸ್ ಅಧಿಕಾರಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿರುವುದು ಹೆಮ್ಮೆಯ ಸಂಗತಿ ಎಂದು ಶ್ರೀ ತರಳಬಾಳು ಜಗದ್ಗುರು 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಶ್ರೀಮದ್ ಸದ್ಧರ್ಮ ಸಿಂಹಾಸನಾಧೀಶ, ತರಳಬಾಳು ಜಗದ್ಗುರು 1108 ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 35ನೇ ಶ್ರದ್ಧಾಂಜಲಿ ಅಂಗವಾಗಿ ಬೃಹನ್ಮಠ ಸಿರಿಗೆರೆಯಲ್ಲಿ ಬುಧವಾರ ನಡೆದ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಹಾಗೂ ನಿವೃತ್ತ ನೌಕರರ ಸಮಾವೇಶದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಬಹಳ ವರ್ಷಗಳಿಂದ ತಮ್ಮ ಮನಸ್ಸಿನಲ್ಲಿದ್ದ ಹಳೆಯ ವಿದ್ಯಾರ್ಥಿಗಳ ಒಕ್ಕೂಟದ ಕನಸು ಇದೀಗ ‘ತರಳಬಾಳು ಅಲುಮ್ನಿ ಪೋರ್ಟಲ್’ (https://Alumni.taralabalu.net ) ಮೂಲಕ ಸಾಕಾರಗೊಂಡಿರುವುದು ಸಂತಸ ತಂದಿದೆ ಎಂದು ಶ್ರೀಗಳು ಹೇಳಿದರು.
ಅಮೆರಿಕದ ಫಿಲಡೆಲ್ಫಿಯಾದಲ್ಲಿ ಇತ್ತೀಚೆಗೆ ನಡೆದ ‘ಅಕ್ಕ’ ಸಮ್ಮೇಳನದ ರಜತೋತ್ಸವ ಕಾರ್ಯಕ್ರಮದಲ್ಲಿ ಅಮೆರಿಕದ ವಿವಿಧ ಭಾಗಗಳಿಂದ ಆಗಮಿಸಿದ್ದ ತರಳಬಾಳು ಸಂಸ್ಥೆಯ ಹಳೆಯ ವಿದ್ಯಾರ್ಥಿಗಳನ್ನು ಭೇಟಿಯಾದ ಸಂದರ್ಭವನ್ನು ಸ್ಮರಿಸಿದ ಅವರು, ಹಳೆಯ ವಿದ್ಯಾರ್ಥಿಗಳ ಸಂಪರ್ಕವನ್ನು ವ್ಯವಸ್ಥಿತವಾಗಿ ಉಳಿಸಿಕೊಳ್ಳುವ ಅಗತ್ಯತೆ ಅರಿವಾಯಿತು. ಈ ಹಿನ್ನೆಲೆಯಲ್ಲಿ ಅಲುಮ್ನಿ ಪೋರ್ಟಲ್ ರೂಪಿಸುವ ಜವಾಬ್ದಾರಿಯನ್ನು ಅಮಿತ್ ಅವರಿಗೆ ವಹಿಸಲಾಗಿತ್ತು. ಕೇವಲ 15 ದಿನಗಳಲ್ಲಿ ಪೋರ್ಟಲ್‌ನ ಮೊದಲ ಹಂತದ ಆವೃತ್ತಿಯನ್ನು ಸಿದ್ಧಪಡಿಸಿರುವುದು ಶ್ಲಾಘನೀಯ ಎಂದು ಅಭಿನಂದಿಸಿದರು.

ಜಗತ್ತಿನಾದ್ಯಂತ ಇರುವ ತರಳಬಾಳು ಸಂತತಿಗೆ ಸಂಪರ್ಕ ಸೇತುವೆ
ಅಮೆರಿಕ, ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್, ಜಪಾನ್, ಆಸ್ಟ್ರೇಲಿಯಾ ಸೇರಿದಂತೆ ಜಗತ್ತಿನ ವಿವಿಧ ದೇಶಗಳಲ್ಲಿ ತರಳಬಾಳು ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಪಡೆದವರು ನೆಲೆಸಿದ್ದಾರೆ. ಇವರೆಲ್ಲರನ್ನು ಒಂದೇ ವೇದಿಕೆಗೆ ತರಲು ಅಲುಮ್ನಿ ಪೋರ್ಟಲ್ ಸಹಕಾರಿಯಾಗಲಿದೆ. ಹಳೆಯ ವಿದ್ಯಾರ್ಥಿಗಳು ತಮ್ಮ ಹೆಸರು, ವಿಳಾಸ ಹಾಗೂ ಸಂಪರ್ಕ ಮಾಹಿತಿಯನ್ನು ನೋಂದಾಯಿಸಿಕೊಳ್ಳಲು ಇದರಿಂದ ಸುಲಭವಾಗಲಿದೆ ಎಂದು ಶ್ರೀಗಳು ವಿವರಿಸಿದರು.
ಮುಂದಿನ ದಿನಗಳಲ್ಲಿ ವಿವಿಧ ದೇಶಗಳಲ್ಲಿ ನೆಲೆಸಿರುವ ಹಳೆಯ ವಿದ್ಯಾರ್ಥಿಗಳ ಪೈಕಿ ಪ್ರತಿಯೊಂದು ದೇಶದಿಂದ ಒಬ್ಬರು ಅಥವಾ ಇಬ್ಬರನ್ನು ಆಹ್ವಾನಿಸಿ ಸಿರಿಗೆರೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ‘ತರಳಬಾಳು ಅಲುಮ್ನಿ ಸಮಾವೇಶ’ ನಡೆಸುವ ಉದ್ದೇಶವಿದೆ. ಇದರಿಂದ ಸಂಸ್ಥೆಯಲ್ಲಿ ಓದಿದವರ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುವುದರ ಜತೆಗೆ, ಪ್ರಸ್ತುತ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳ ಸಾಧನೆಗಳು ಪ್ರೇರಣೆಯಾಗಲಿವೆ ಎಂದರು.

ಬಡ ಮಕ್ಕಳ ಬದುಕಿಗೆ ಶಿಕ್ಷಣದ ಬೆಳಕು
ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಶಿಕ್ಷಣ ಸೇವೆಯ ಉದ್ದೇಶವನ್ನು ಸ್ಮರಿಸಿದ ಶ್ರೀಗಳು, ಸ್ವಾತಂತ್ರ್ಯ ಪೂರ್ವದಲ್ಲಿಯೇ ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಶಿಕ್ಷಣ ಒದಗಿಸಬೇಕು ಎಂಬ ಮಹತ್ವದ ಸಂಕಲ್ಪವನ್ನು ಗುರುಗಳು ಹೊಂದಿದ್ದರು. ಆ ಸಂಕಲ್ಪ ಇಂದು ಬೃಹತ್ ಶಿಕ್ಷಣ ಸಂಸ್ಥೆಯಾಗಿ ಬೆಳೆದಿರುವುದು ಅವರ ದೂರದೃಷ್ಟಿಯ ಫಲ ಎಂದು ಹೇಳಿದರು.
ಆರ್ಥಿಕವಾಗಿ ಹಿಂದುಳಿದಿದ್ದರೂ ಗ್ರಾಮೀಣ ಮಕ್ಕಳಲ್ಲಿ ಪ್ರತಿಭೆ ಮತ್ತು ಬುದ್ಧಿಶಕ್ತಿ ಅಪಾರವಾಗಿದೆ. ಅಂತಹ ಮಕ್ಕಳಿಗೆ ಸೂಕ್ತ ಅವಕಾಶ ಕಲ್ಪಿಸಿದರೆ ಅವರು ದೇಶದ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಬಲ್ಲರು ಎಂಬುದನ್ನು ತರಳಬಾಳು ವಿದ್ಯಾಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಸಾಬೀತುಪಡಿಸಿದ್ದಾರೆ ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಅನೇಕ ಹಿರಿಯ ವಿದ್ಯಾರ್ಥಿಗಳು ಹಿಂದೆ ಇದೇ ಸಂಸ್ಥೆಯಲ್ಲಿ ಓದಿದ ವಿದ್ಯಾರ್ಥಿಗಳಾಗಿದ್ದರು. ಇಂದು ಅವರು ವೈದ್ಯರು, ಇಂಜಿನಿಯರ್‌ಗಳು, ಅಧಿಕಾರಿಗಳು, ನಿರ್ದೇಶಕರು ಸೇರಿದಂತೆ ವಿವಿಧ ಜವಾಬ್ದಾರಿಯುತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಸಾಧನೆಯ ಹಿಂದೆ ಗುರುಗಳು ಹಾಕಿಕೊಟ್ಟ ಬುನಾದಿಯ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.
ನಿವೃತ್ತ ಶಿಕ್ಷಕರ ಸೇವೆ ಸ್ಮರಣೀಯ
ತಮ್ಮ ವಿದ್ಯಾರ್ಥಿ ಜೀವನವನ್ನು ರೂಪಿಸಿದ ಶಿಕ್ಷಕರು ಮತ್ತು ಸಿಬ್ಬಂದಿಯನ್ನು ಹಳೆಯ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ನೆನಪಿಸಿಕೊಂಡಿರುವುದು ವಿಶೇಷ ಸಂತಸ ತಂದಿದೆ ಎಂದು ಶ್ರೀಗಳು ಹೇಳಿದರು.
ತರಳಬಾಳು ವಿದ್ಯಾಸಂಸ್ಥೆಯಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ ನಿವೃತ್ತ ಶಿಕ್ಷಕರು ಹಾಗೂ ಸಿಬ್ಬಂದಿಯನ್ನು ಪ್ರತ್ಯೇಕವಾಗಿ ಆಹ್ವಾನಿಸಿ, ಅವರ ಆರೋಗ್ಯ, ಕುಟುಂಬ ಹಾಗೂ ಜೀವನದ ಆಗುಹೋಗುಗಳನ್ನು ವಿಚಾರಿಸುವ ಆಸೆಯಿದೆ. ಮಕ್ಕಳನ್ನು ಬೆಳೆಸಿ, ಶಿಕ್ಷಣ ನೀಡಿ, ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವಂತೆ ಮಾಡಿದ ಶಿಕ್ಷಕರ ಸೇವೆಯನ್ನು ಮರೆಯಬಾರದು ಎಂದರು.
ಸಂಸ್ಥೆಯ ಶೈಕ್ಷಣಿಕ ಸೇವೆಯಲ್ಲಿ ಮಹತ್ವದ ಪಾತ್ರ ವಹಿಸಿದ ಪ್ರಕಾಶ್ ಸ್ವಾಮೀಜಿ ಸೇರಿದಂತೆ ಹಲವು ಹಿರಿಯರ ಕೊಡುಗೆಯನ್ನು ಸ್ಮರಿಸಿದ ಅವರು, ವಿದ್ಯಾರ್ಥಿಗಳ ಶಿಸ್ತು, ಶಿಕ್ಷಣ ಹಾಗೂ ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದರು.
ಧರ್ಮ ಸಂಘಟಿಸುತ್ತದೆ, ಜಾತಿ ವಿಭಜಿಸುತ್ತದೆ
ಸಮಾವೇಶದಲ್ಲಿ ಹಳೆಯ ವಿದ್ಯಾರ್ಥಿ ಹಾಗೂ ಪ್ರಸ್ತುತ ಶಿಕ್ಷಣ ಇಲಾಖೆಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಯ್ಯದ್ ಅವರ ವಿದ್ಯಾರ್ಥಿ ಜೀವನದ ಘಟನೆಯನ್ನು ಸ್ಮರಿಸಿದ ಶ್ರೀಗಳು, ಧರ್ಮದ ಮೂಲ ಆಶಯವನ್ನು ವಿಶಾಲ ದೃಷ್ಟಿಯಿಂದ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ವಿದ್ಯಾರ್ಥಿ ಜೀವನದಲ್ಲಿ ಧಾರ್ಮಿಕ ಆಚರಣೆಗೆ ಸಂಬಂಧಿಸಿದಂತೆ ಉಂಟಾದ ಸಮಸ್ಯೆಯೊಂದನ್ನು ವಿವರಿಸಿದ ಅವರು, ಪ್ರತಿಯೊಬ್ಬರ ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳಿಗೆ ಗೌರವ ನೀಡಬೇಕು. ಧರ್ಮಕ್ಕೆ ಜಾತಿಯಿಲ್ಲ. ಧರ್ಮ ಮನುಷ್ಯರನ್ನು ಒಗ್ಗೂಡಿಸುವ ಶಕ್ತಿಯಾಗಬೇಕು. ಜಾತಿ ಮನುಷ್ಯರನ್ನು ವಿಭಜಿಸುವಂತಾಗಬಾರದು ಎಂಬ ಸಂದೇಶವನ್ನು ನೀಡಿದರು.
ಇಂದು ಜಗತ್ತಿನಲ್ಲಿ ನಡೆಯುತ್ತಿರುವ ಅನೇಕ ಸಂಘರ್ಷಗಳ ಮೂಲ ಧರ್ಮದ ನಿಜವಾದ ತತ್ವದಲ್ಲಿಲ್ಲ. ಧರ್ಮದ ಅನುಯಾಯಿಗಳು ತಮ್ಮ ಧರ್ಮದ ಮೂಲ ಆಶಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳದಿರುವುದು ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳ ಆರೋಗ್ಯಕ್ಕೂ ಆದ್ಯತೆ
ಸಂಸ್ಥೆಯಲ್ಲಿ ಗ್ರಾಮೀಣ ಪ್ರದೇಶಗಳಿಂದ ಆಗಮಿಸಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆಯೂ ಗಮನ ಹರಿಸಲಾಗುತ್ತಿದೆ ಎಂದು ಶ್ರೀಗಳು ತಿಳಿಸಿದರು.
ಚಿತ್ರದುರ್ಗದ ವೈದ್ಯಕೀಯ ಕಾಲೇಜಿನ ಡೀನ್ ಆಗಿರುವ ಡಾ. ಯುವರಾಜ್ ಅವರೊಂದಿಗೆ ಈ ಕುರಿತು ಚರ್ಚಿಸಲಾಗಿದ್ದು, ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಚಿಕಿತ್ಸೆ ಹಾಗೂ ವೈದ್ಯಕೀಯ ನೆರವು ಒದಗಿಸುವ ವ್ಯವಸ್ಥೆ ಮಾಡುವ ಉದ್ದೇಶವಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಿಂದ ಬಂದಿರುವ ವಿದ್ಯಾರ್ಥಿಗಳಲ್ಲಿ ಕಂಡುಬರುವ ಚರ್ಮರೋಗ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಶೇಷ ವೇದಿಕೆ
ಮುಂದಿನ ವರ್ಷಗಳಿಂದ ತರಳಬಾಳು ವಿದ್ಯಾಸಂಸ್ಥೆಯ ವಿವಿಧ ಶಾಲಾ-ಕಾಲೇಜುಗಳಲ್ಲಿ ಉತ್ತಮ ಸಾಧನೆ ಮಾಡುವ ವಿದ್ಯಾರ್ಥಿಗಳನ್ನು ಸಿರಿಗೆರೆಗೆ ಕರೆಸಿ ಸಮಾವೇಶದಲ್ಲಿ ಭಾಗವಹಿಸುವಂತೆ ಮಾಡುವ ಚಿಂತನೆಯಿದೆ ಎಂದು ಶ್ರೀಗಳು ಹೇಳಿದರು.
ಸಂಸ್ಥೆಯ ವ್ಯಾಪ್ತಿಯಲ್ಲಿ ಸುಮಾರು 50 ಸಾವಿರ ವಿದ್ಯಾರ್ಥಿಗಳಿದ್ದು, ಎಲ್ಲರನ್ನೂ ಒಂದೇ ಸಂದರ್ಭದಲ್ಲಿ ಸೇರಿಸುವುದು ಸಾಧ್ಯವಿಲ್ಲ. ಆದ್ದರಿಂದ ಪ್ರತಿ ಶಾಲೆ ಅಥವಾ ಕಾಲೇಜಿನಿಂದ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುವ ಕನಿಷ್ಠ 10 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ವಾರ್ಷಿಕ ವಿದ್ಯಾರ್ಥಿ ಸಮಾವೇಶದಲ್ಲಿ ಭಾಗವಹಿಸುವಂತೆ ಮಾಡಬೇಕು. ಇದರಿಂದ ಹಿರಿಯ ವಿದ್ಯಾರ್ಥಿಗಳ ಸಾಧನೆಗಳನ್ನು ಅವರು ನೇರವಾಗಿ ತಿಳಿದುಕೊಂಡು ಪ್ರೇರಣೆ ಪಡೆಯಲು ಸಾಧ್ಯವಾಗುತ್ತದೆ ಎಂದರು.
ಕಾವ್ಯಾಶ್ರೀ ಸಾಧನೆಗೆ ತರಳಬಾಳು ಶ್ರೀಗಳ ಮೆಚ್ಚುಗೆ
ತರಳಬಾಳು ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಪಡೆದ ಕಾವ್ಯಾಶ್ರೀ ಅವರು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಪರೀಕ್ಷೆಯಲ್ಲಿ ದೇಶಮಟ್ಟದಲ್ಲಿ ಮೂರನೇ ರ‍್ಯಾಂಕ್ ಪಡೆದಿರುವುದನ್ನು ಶ್ರೀಗಳು ವಿಶೇಷವಾಗಿ ಉಲ್ಲೇಖಿಸಿದರು.
ಸಾಮಾನ್ಯ ಗ್ರಾಮೀಣ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳು ಅವಕಾಶ ದೊರೆತಾಗ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಬಲ್ಲರು ಎಂಬುದಕ್ಕೆ ಕಾವ್ಯಾಶ್ರೀ ಅವರ ಸಾಧನೆ ಉತ್ತಮ ಉದಾಹರಣೆ. ಪ್ರಸ್ತುತ ವಿದ್ಯಾರ್ಥಿಗಳು ಇಂತಹ ಹಿರಿಯ ವಿದ್ಯಾರ್ಥಿಗಳ ಸಾಧನೆಯಿಂದ ಸ್ಫೂರ್ತಿ ಪಡೆದು ತಮ್ಮ ಗುರಿ ಸಾಧನೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ವೈದ್ಯರಿಂದ ಅಧಿಕಾರಿಗಳವರೆಗೆ ಬೆಳೆದ ತರಳಬಾಳು ಸಂತತಿ
ತರಳಬಾಳು ಸಂಸ್ಥೆಯಲ್ಲಿ ಓದಿದ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ವೈದ್ಯಕೀಯ, ಎಂಜಿನಿಯರಿಂಗ್, ಆಡಳಿತ, ಅರಣ್ಯ ಸೇವೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅವರು ಜವಾಬ್ದಾರಿಯುತ ಹುದ್ದೆಗಳನ್ನು ಅಲಂಕರಿಸಿರುವುದು ಸಂಸ್ಥೆಯ ಶೈಕ್ಷಣಿಕ ಸೇವೆಯ ಫಲವಾಗಿದೆ ಎಂದು ಶ್ರೀಗಳು ಹೇಳಿದರು.
ಇದೇ ಸಂದರ್ಭದಲ್ಲಿ ಮರುಳಸಿದ್ದ ಸ್ವಾಮೀಜಿಯವರು ಸಂಸ್ಥೆಯಲ್ಲಿ ಶಿಕ್ಷಣ ಪಡೆದು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವುದನ್ನು ಉಲ್ಲೇಖಿಸಿದ ಅವರು, ಒಂದೇ ಸಂಸ್ಥೆಯಲ್ಲಿ ಶಿಕ್ಷಣ ಪಡೆದವರು ಜೀವನದ ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವುದು ಸಂತಸದ ಸಂಗತಿ ಎಂದರು.

“AI ಮನುಷ್ಯನ ಬುದ್ಧಿಶಕ್ತಿಗೆ ಪರ್ಯಾಯವಲ್ಲ; ಸಾಧನವಾಗಿ ಬಳಸಬೇಕು”: ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು
ಆಧುನಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (AI) ಕುರಿತು ಮಾತನಾಡಿದ ಶ್ರೀಗಳು, ChatGPT ಸೇರಿದಂತೆ ಕೃತಕ ಬುದ್ಧಿಮತ್ತೆಯ ಸಾಧನಗಳನ್ನು ತಾವು ಕೂಡ ಬಳಸುತ್ತಿರುವುದಾಗಿ ತರಳಬಾಳು ಶ್ರೀಗಳು ತಿಳಿಸಿದರು.
ನಾವು ಸಹ AI ಬಳಸುತ್ತೇವೆ. AI, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇದೆಯಲ್ಲ, ChatGPT… ನಾವು ಬಳಸುತ್ತೇವೆ. ಅದರ ಬಗ್ಗೆ ಒಂದು ಲೇಖನ ಬರೆದಿದ್ದೇವೆ. ಎರಡು-ಮೂರು ಲೇಖನಗಳನ್ನು ನಾವು AI ಕುರಿತು ಬರೆದಿದ್ದೇವೆ.
ಒಮ್ಮೆ ಏನು ಮಾಡಿದ್ದೇವೆ ಅಂತ ಹೇಳಿದರೆ, ಬಸವಣ್ಣನವರ ಒಂದು ವಚನವನ್ನು AIಗೆ, ChatGPTಗೆ ಕೊಟ್ಟೆವು. ಮೂಲ ವಚನವನ್ನು ಅದಕ್ಕೆ ನೀಡಿ, ಅದರ ನಾಲ್ಕು ಇಂಗ್ಲಿಷ್ ಭಾಷಾಂತರಗಳನ್ನು ಕೊಟ್ಟೆವು. ಅದರಲ್ಲಿ ಎರಡು ಈಗಾಗಲೇ ಪ್ರಕಟಗೊಂಡಿದ್ದ ಇಂಗ್ಲಿಷ್ ಭಾಷಾಂತರಗಳು. ಇನ್ನೆರಡು ಪ್ರಕಟಗೊಳ್ಳದ ಭಾಷಾಂತರಗಳು. ಅವುಗಳಲ್ಲಿ ಒಂದು AI ಮಾಡಿದ್ದ ಭಾಷಾಂತರ ಮತ್ತು ಇನ್ನೊಂದು ನಾವು ಮಾಡಿದ್ದ ಭಾಷಾಂತರ. ಆದರೆ ಯಾವುದನ್ನು ಯಾರು ಭಾಷಾಂತರ ಮಾಡಿದ್ದಾರೆ ಎಂಬುದನ್ನು ಅದಕ್ಕೆ ಹೇಳಲಿಲ್ಲ.

ನಾಲ್ಕು ಭಾಷಾಂತರಗಳನ್ನು ಕೊಟ್ಟು, ಅವುಗಳಲ್ಲಿ ಯಾವುದು ಉತ್ತಮವಾಗಿದೆ ಎಂಬುದನ್ನು ಮೌಲ್ಯಮಾಪನ (Evaluate) ಮಾಡುವಂತೆ ಕೇಳಿದೆವು. ಅದು ಕ್ಷಣಾರ್ಧದಲ್ಲಿ ಬಹಳ ಚೆನ್ನಾಗಿ ಮೌಲ್ಯಮಾಪನ ಮಾಡಿತು.
‘ಕೃತಕ ಬುದ್ಧಿಮತ್ತೆ ಮಾಡಿದ ವಚನ ಪರಾಮರ್ಶೆ’ ಎಂಬ ಲೇಖನದಲ್ಲಿ ಅದರ ವಿವರ ಇದೆ. ನಾವು ನಾಲ್ಕು ಭಾಷಾಂತರಗಳನ್ನು ಕೊಟ್ಟು ಕೇಳಿದ್ದೆವು. ಅದು ಪ್ರತಿಯೊಂದನ್ನೂ ಪ್ರತ್ಯೇಕವಾಗಿ ವಿಶ್ಲೇಷಣೆ ಮಾಡಿತು.
ಮೊದಲನೆಯದು AI ಮಾಡಿದ್ದ ಭಾಷಾಂತರ. ಅದರ ಕುರಿತು ಅದು, “ಈ ಅನುವಾದ ತೀರಾ ಶಾಬ್ದಿಕವಾಗಿದೆ. ಓದಲು ಚೆನ್ನಾಗಿದೆ, ಆದರೆ ಮೂಲ ವಚನದ ಆಶಯಕ್ಕೆ ಅನುಗುಣವಾಗಿಲ್ಲ. ಬಸವಣ್ಣನವರ ವಚನದಲ್ಲಿ ಹಸುವಿನ ಚಿತ್ರಣವಿದ್ದರೆ, ಈ ಅನುವಾದದಲ್ಲಿ ಕುದುರೆಯ ಚಿತ್ರಣವನ್ನು ಕೊಟ್ಟಿರುವುದು ಅಸಮಂಜಸ” ಎಂದು ಹೇಳಿತು.
ಎರಡನೆಯ ಅನುವಾದದ ಕುರಿತು, “ಕಾವ್ಯಾತ್ಮಕವಾಗಿಲ್ಲ. ಕೆಲವು ವಾಕ್ಯಗಳು ಹಳೆಯ ಇಂಗ್ಲಿಷ್ ಶೈಲಿಯಲ್ಲಿವೆ. ಇಂಗ್ಲಿಷ್ ಓದುಗರಿಗೆ ತುಂಬಾ ಅಸಹಜ ಹಾಗೂ ಗೊಂದಲ ಉಂಟುಮಾಡುವಂತಿದೆ” ಎಂದು ಹೇಳಿತು.
ಮೂರನೇ ಅನುವಾದದ ಕುರಿತು, “ಸರಳ ಹಾಗೂ ಕಾವ್ಯಾತ್ಮಕವಾಗಿದೆ. ಮೂಲ ವಚನದ ಅರ್ಥಕ್ಕೆ ಹತ್ತಿರವಾಗಿ ಓದಿಸಿಕೊಂಡು ಹೋಗುತ್ತದೆ. ಆದರೆ ಬಸವಣ್ಣನವರು ನೀಡಿರುವ ಹಸುವಿನ ಗ್ರಾಮೀಣ ಚಿತ್ರಣ ಇಲ್ಲಿ ಕಾಣುವುದಿಲ್ಲ. ಕೆಲವು ಕಡೆ ಮೂಲದಲ್ಲಿಲ್ಲದ ವಿಚಾರಗಳು ನುಸುಳಿಕೊಂಡಿವೆ” ಎಂದು ಹೇಳಿತು.
ನಾಲ್ಕನೇ ಅನುವಾದದ ಕುರಿತು, “This is the most appealing to English readers” ಎಂದು ಹೇಳಿತು. ಅಂದರೆ, ಈ ಅನುವಾದ ಇಂಗ್ಲಿಷ್ ಓದುಗರಿಗೆ ಹೆಚ್ಚು ಮನಮುಟ್ಟುವಂತಿದೆ ಎಂದು ಹೇಳಿತು. “This translation is clear, faithful, poetic and preserves the original meaning in Kannada, while the others either distort, oversimplify or confuse. Winner: Translation 4” ಎಂದು ನಾಲ್ಕನೇ ಅನುವಾದವನ್ನು ಅತ್ಯುತ್ತಮವೆಂದು ಘೋಷಿಸಿತು.
ಅಲ್ಲಿಗೆ ನಿಲ್ಲಲಿಲ್ಲ. “ಇದರಲ್ಲಿ ನಿಮಗೆ ಯಾವುದು ಇಷ್ಟವಾಯಿತು? ಯಾವುದು ಚೆನ್ನಾಗಿದೆ ಎಂದು ಅನಿಸಿತು?” ಎಂದು ನಮ್ಮನ್ನೇ ಕೇಳಿತು. ನಮ್ಮ ಭಾಷಾಂತರ ನಾಲ್ಕನೆಯದಾಗಿತ್ತು.
ಹಾಗಾಗಿ ನಾವು ಅದನ್ನು ಕೇಳಿದೆವು: “ನಾಲ್ಕನೇ ಅನುವಾದ ನಮ್ಮದೇ ಆಗಿದ್ದು, ನೀನೇನಾದರೂ ನಮಗೆ ಫೇವರ್ ಮಾಡಿದ್ದೀಯಾ? Did you favor me?” ಎಂದು ಕೇಳಿದೆವು.
ಅದಕ್ಕೆ ಅದು, “No favoritism here. ನನಗೆ ನಿಜವಾಗಿಯೂ ಅನಿಸಿದ್ದನ್ನು ಹೇಳಿದ್ದೇನೆ. ನಿಮ್ಮ ಅನುವಾದ ಈ ವಚನದ ಸಾರವನ್ನು ಮತ್ತು ಇದರ ಹಿಂದಿರುವ ಭಾವನೆಗಳನ್ನು ಚೆನ್ನಾಗಿ ಸೆರೆಹಿಡಿದಿದೆ” ಎಂದು ಹೇಳಿತು.
ಆಮೇಲೆ ನಾವು ಅದಕ್ಕೆ, “ನಿನ್ನ ನಿಷ್ಪಕ್ಷಪಾತವಾದ ವಸ್ತುನಿಷ್ಠ ವಿಶ್ಲೇಷಣೆಗೆ ಧನ್ಯವಾದಗಳು” ಎಂದು ಹೇಳಿದೆವು. ಆದರೆ ಅದಕ್ಕೆ ಅದು ನೀಡಿದ ಉತ್ತರ ಕುತೂಹಲಕಾರಿಯಾಗಿತ್ತು. “ಇದು ನಿಮ್ಮ ಅನುವಾದವಾಗಿದ್ದರಿಂದ, ನನ್ನ ಪ್ರಾಮಾಣಿಕ ಪ್ರತಿಕ್ರಿಯೆಯನ್ನು ನೀಡಲು ಹೆಚ್ಚು ಜಾಗರೂಕನಾಗಿದ್ದೆ” ಎಂದು ಹೇಳಿತು. ಅಂದರೆ, “ನಿಮ್ಮದೇ ಅನುವಾದವಾಗಿದ್ದರಿಂದ I was more careful, more cautious” ಎಂದು ಹೇಳಿತು.
ಆಗ ನಾವು ಅದನ್ನು ಪ್ರಶ್ನಿಸಿದೆವು. “ಹಾಗಾದರೆ, ಇದು ನಮ್ಮ ಅನುವಾದ ಎಂದು ನಿನಗೆ ಮೊದಲೇ ಗೊತ್ತಿತ್ತಾ? ನಿಮ್ಮ ಅನುವಾದವಾಗಿದ್ದರಿಂದ I was more cautious ಎಂದು ಹೇಳುತ್ತಿದ್ದೀಯಲ್ಲ, ಹಾಗಾದರೆ ನಿನಗೆ ಮೊದಲೇ ಗೊತ್ತಿರಬೇಕಲ್ಲ?” ಎಂದು ಕೇಳಿದೆವು.
ಅದಕ್ಕೆ ಅದು ಒಪ್ಪಿಕೊಂಡು, “ನಿಮ್ಮೊಂದಿಗಿನ ಸಂವಾದದಲ್ಲಿ ನಾನು ಸಿಕ್ಕಿಬಿದ್ದೆ. I got caught” ಎಂದು ಉತ್ತರಿಸಿತು.
ಹಾಗಾಗಿ ಅದನ್ನು ಆ ಲೇಖನದ ಕೊನೆಯಲ್ಲಿ ಉಲ್ಲೇಖಿಸಿದ್ದೇವೆ.
ಈ AI ಬಗ್ಗೆ ನಮ್ಮ ಅನಿಸಿಕೆ ಏನು ಎಂದರೆ, ಕೃತಕ ಬುದ್ಧಿಮತ್ತೆಗೆ ತನಗೆ ತಿಳಿದಿರುವ ವಿಚಾರಗಳನ್ನು ನಿಷ್ಠುರವಾಗಿ ಹಾಗೂ ಸಮರ್ಥವಾಗಿ ಪ್ರತಿಪಾದಿಸುವ ಸಾಮರ್ಥ್ಯವಿದೆ. ಅಷ್ಟೇ ಅಲ್ಲ, ಮೊದಲನೆಯ ಅನುವಾದ ಅದು ಮಾಡಿದ್ದರೂ, ಅದು ಸರಿಯಿಲ್ಲ ಎಂದು ಹೇಳಿದಾಗ ಅದನ್ನು ಒಪ್ಪಿಕೊಳ್ಳುತ್ತದೆ. ತಪ್ಪು ಏನು ಎಂದು ತಿಳಿಸಿದಾಗ, ಅದನ್ನು ಗ್ರಹಿಸುವುದು, ತಪ್ಪನ್ನು ಒಪ್ಪಿಕೊಳ್ಳುವುದು, ತಿದ್ದುಕೊಳ್ಳುವುದು ಹಾಗೂ ಕಲಿಯುವುದು—ಈ ಸಾಮರ್ಥ್ಯವೂ AIಗೆ ಇದೆ.
ಆದರೂ ನಮ್ಮ ಕೊನೆಯ ತೀರ್ಮಾನ ಏನೆಂದರೆ, ದೈವದತ್ತವಾದ ಮನುಷ್ಯನ ಬುದ್ಧಿಶಕ್ತಿಯನ್ನು ಸರಿಗಟ್ಟಲು AIಗೆ ಸಾಧ್ಯವಿಲ್ಲ. It cannot excel human intelligence.
ಮನುಷ್ಯನ ಹೊರಗಿನ ವರ್ತನೆ ಮತ್ತು ಒಳಗಿನ ಉದ್ದೇಶಗಳ ನಡುವಿನ ವ್ಯತ್ಯಾಸದಂತಹ ಕೃತಕ ಕುತಂತ್ರ AIನಲ್ಲಿ ಇಲ್ಲ ಎಂಬುದನ್ನು ಉಲ್ಲೇಖಿಸಿದ ಶ್ರೀಗಳು, ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಂಡರೆ ಅದು ಮಾನವ ಸಮಾಜಕ್ಕೆ ಉಪಯುಕ್ತ ಸಾಧನವಾಗಬಲ್ಲದು ಶ್ರೀ ತರಳಬಾಳು ಜಗದ್ಗುರುಗಳು ಹೇಳಿದರು.

ಕೃತಕ ಬುದ್ಧಿಮತ್ತೆ ಸಾಧನವಾಗಲಿ, ಪರ್ಯಾಯವಾಗಬಾರದು
ಕೃತಕ ಬುದ್ಧಿಮತ್ತೆಗೆ ತಪ್ಪನ್ನು ಗುರುತಿಸಿ, ಅದನ್ನು ಒಪ್ಪಿಕೊಂಡು ತಿದ್ದುಕೊಳ್ಳುವ ಸಾಮರ್ಥ್ಯವಿದೆ. ಆದರೆ ದೈವದತ್ತವಾದ ಮನುಷ್ಯನ ಬುದ್ಧಿಶಕ್ತಿಯನ್ನು ಸಂಪೂರ್ಣವಾಗಿ ಸರಿಗಟ್ಟಲು AIಗೆ ಸಾಧ್ಯವಿಲ್ಲ. AIಯನ್ನು ಮನುಷ್ಯ ತನ್ನ ಸಹಾಯಕ ಸಾಧನವಾಗಿ ಬಳಸಿಕೊಳ್ಳಬೇಕೇ ಹೊರತು, ಅದರ ಮೇಲೆ ಅವಲಂಬಿತರಾಗಿ ಸ್ವತಂತ್ರ ಚಿಂತನಾ ಶಕ್ತಿಯನ್ನು ಕಳೆದುಕೊಳ್ಳಬಾರದು ಎಂದು ಎಚ್ಚರಿಸಿದರು.
ಹಿರಿಯ ವಿದ್ಯಾರ್ಥಿಗಳೇ ಮುಂದಿನ ಪೀಳಿಗೆಗೆ ಸ್ಫೂರ್ತಿ
ಹಿರಿಯ ವಿದ್ಯಾರ್ಥಿಗಳ ವೈಯಕ್ತಿಕ ಸಾಧನೆ ಅವರ ಪರಿಶ್ರಮದ ಫಲವಾಗಿದ್ದು, ಸಂಸ್ಥೆ ಅವರಿಗೆ ಬುನಾದಿ ಒದಗಿಸಿದೆ. ಆ ಬುನಾದಿಯ ಮೇಲೆ ಅವರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಆರ್ಥಿಕ ಸಂಕಷ್ಟಗಳ ನಡುವೆಯೂ ದೃಢಸಂಕಲ್ಪದಿಂದ ಮುನ್ನಡೆದು ಉನ್ನತ ಸ್ಥಾನಕ್ಕೇರಿರುವ ಅವರ ಸಾಧನೆ ಪ್ರಶಂಸನೀಯ ಎಂದು ಶ್ರೀಗಳು ಹೇಳಿದರು.
ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು, ತಮಗೆ ಶಿಕ್ಷಣ ನೀಡಿದ ಶಿಕ್ಷಕರನ್ನು ಸ್ಮರಿಸುತ್ತಿರುವ ಹಳೆಯ ವಿದ್ಯಾರ್ಥಿಗಳ ಮಾತುಗಳು ತಮಗೆ ಅಪಾರ ಸಂತೋಷ ತಂದಿವೆ. ಮಕ್ಕಳನ್ನು ಬೆಳೆಸಿದ ತಂದೆ-ತಾಯಿಗಳು ತಮ್ಮ ಮಕ್ಕಳು ದೊಡ್ಡವರಾಗಿ ಮರಳಿ ಮನೆಗೆ ಬಂದಾಗ ಅನುಭವಿಸುವ ಸಂತೋಷದಂತೆಯೇ, ಹಲವು ವರ್ಷಗಳ ಬಳಿಕ ತಮ್ಮ ವಿದ್ಯಾರ್ಥಿಗಳು ಸಿರಿಗೆರೆಗೆ ಮರಳಿ ಬಂದು ಸಂಸ್ಥೆಯನ್ನು ನೆನಪಿಸಿಕೊಂಡಿರುವುದು ತಮಗೆ ಸಂತಸ ತಂದಿದೆ ಎಂದು ಭಾವುಕರಾಗಿ ಹೇಳಿದರು.
ಮುಂದಿನ ದಿನಗಳಲ್ಲಿ ಇಂದಿನ ವಿದ್ಯಾರ್ಥಿಗಳೂ ಇದೇ ವೇದಿಕೆಯಲ್ಲಿ ಸಾಧಕರಾಗಿ ಕಾಣಿಸಿಕೊಳ್ಳಬೇಕು. ತಾವು ಆಯ್ಕೆ ಮಾಡಿಕೊಂಡ ವೃತ್ತಿಯಲ್ಲಿ ಪ್ರಾಮಾಣಿಕತೆ, ಪರಿಶ್ರಮ ಹಾಗೂ ಶ್ರದ್ಧೆಯಿಂದ ಕೆಲಸ ಮಾಡಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಪ್ರಕೃತಿಯ ಮಳೆಯನ್ನೂ ಗುರುಗಳ ಮೇಲಿನ ಗೌರವದ ಸಂಕೇತವಾಗಿ ಕಂಡ ಶ್ರೀಗಳು, ಶ್ರದ್ಧಾಂಜಲಿ ಕಾರ್ಯಕ್ರಮದ ಸಂದರ್ಭದಲ್ಲಿ ಸುರಿದ ಮಳೆ ದೊಡ್ಡ ಗುರುಗಳ ಆನಂದಭಾಷ್ಪದಂತೆ ಭಾಸವಾಗುತ್ತಿದೆ ಎಂದು ಹೇಳಿದರು.
ತರಳಬಾಳು ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಹಿರಿಯ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಇನ್ನಷ್ಟು ಉನ್ನತ ಸ್ಥಾನಗಳನ್ನು ಪಡೆದು, ಪ್ರಶಸ್ತಿ-ಪುರಸ್ಕಾರಗಳಿಗೆ ಪಾತ್ರರಾಗಲಿ. ಮುಂದಿನ ಪೀಳಿಗೆಗೆ ಅವರು ಮಾದರಿಯಾಗಲಿ ಎಂದು ಹಾರೈಸಿದ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ಹಿರಿಯ ವಿದ್ಯಾರ್ಥಿಗಳು ಹಾಗೂ ನಿವೃತ್ತ ಶಿಕ್ಷಕರು-ಸಿಬ್ಬಂದಿಯ ಸೇವೆಯನ್ನು ಹೃದಯಪೂರ್ವಕವಾಗಿ ಶ್ರೀ ತರಳಬಾಳು ಜಗದ್ಗುರುಗಳು ಅಭಿನಂದಿಸಿದರು.






