ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಬೆಂಗಳೂರಿನಾಚೆಗೂ ಹೂಡಿಕೆ ವಿಸ್ತರಿಸಿ; ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಉದ್ಯಮ ಸ್ಥಾಪಿಸಿ: ಸ್ವೀಡನ್ ಉದ್ಯಮಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಕರೆ

On: October 23, 2026 9:06 PM
Follow Us:

‘ಜಾಗತಿಕ ಹೂಡಿಕೆದಾರರ ಸಮಾವೇಶ–2027’ರಲ್ಲಿ ಪಾಲುದಾರ ರಾಷ್ಟ್ರವಾಗಿ ಭಾಗವಹಿಸಲು ಸ್ವೀಡನ್‌ಗೆ ಆಹ್ವಾನ | ಕರ್ನಾಟಕದಲ್ಲಿರುವ ಶೇ.61ರಷ್ಟು ಸ್ವೀಡಿಷ್ ಕಂಪನಿಗಳು ಉದ್ಯಮ ವಿಸ್ತರಣೆಗೆ ಆಸಕ್ತಿ | ಉತ್ಪಾದನೆ, ಕೃತಕ ಬುದ್ಧಿಮತ್ತೆ, ಹಸಿರು ಇಂಧನ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರಕ್ಕೆ ಒತ್ತು

ಬೆಂಗಳೂರು, ಅ.23: ಕರ್ನಾಟಕದ ಅಭಿವೃದ್ಧಿ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಕೈಗಾರಿಕಾ ಬೆಳವಣಿಗೆ, ಹೊಸ ಹೂಡಿಕೆ ಹಾಗೂ ಉದ್ಯೋಗಾವಕಾಶಗಳು ವಿಸ್ತರಿಸಬೇಕು ಎಂಬ ಉದ್ದೇಶದಿಂದ, ಬೆಂಗಳೂರಿನಾಚೆಗೂ ಉದ್ಯಮಗಳನ್ನು ಸ್ಥಾಪಿಸಿ ಹೂಡಿಕೆ ಮಾಡಲು ಸ್ವೀಡನ್ ಉದ್ಯಮಿಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ.

ಕರ್ನಾಟಕದಲ್ಲಿ ಈಗಾಗಲೇ ಬಲವಾದ ನೆಲೆಯನ್ನು ಹೊಂದಿರುವ ಸ್ವೀಡಿಷ್ ಕಂಪನಿಗಳು ತಮ್ಮ ಉದ್ಯಮವನ್ನು ಮತ್ತಷ್ಟು ವಿಸ್ತರಿಸುವುದರ ಜತೆಗೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಕೈಗಾರಿಕಾ ಸಾಮರ್ಥ್ಯ ಮತ್ತು ಲಭ್ಯವಿರುವ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ವಿಧಾನಸೌಧದ ತಮ್ಮ ಕಚೇರಿಯಲ್ಲಿ ಶುಕ್ರವಾರ ಭಾರತದಲ್ಲಿನ ಸ್ವೀಡನ್ ರಾಯಭಾರಿ ಪೆಟ್ರಾ ಮೆನಾಂಡರ್ ಅವರ ನೇತೃತ್ವದ ನಿಯೋಗದೊಂದಿಗೆ ನಡೆದ ಸಭೆಯಲ್ಲಿ ಹೂಡಿಕೆ, ಕೈಗಾರಿಕಾ ಅಭಿವೃದ್ಧಿ, ತಂತ್ರಜ್ಞಾನ, ನಾವೀನ್ಯತೆ ಹಾಗೂ ಉಭಯ ದೇಶಗಳ ನಡುವಿನ ಆರ್ಥಿಕ ಸಹಕಾರದ ಕುರಿತು ಚರ್ಚೆ ನಡೆಸಿದರು.

ಕರ್ನಾಟಕದಲ್ಲಿ ಹೂಡಿಕೆ ಮಾಡಲು ಸ್ವೀಡನ್ ಕಂಪನಿಗಳಿಗೆ ಇರುವ ಅವಕಾಶಗಳನ್ನು ವಿವರಿಸಿದ ಉಪಮುಖ್ಯಮಂತ್ರಿಗಳು, ರಾಜ್ಯದ ಕೈಗಾರಿಕಾ ಸಾಮರ್ಥ್ಯವನ್ನು ಬಳಸಿಕೊಂಡು ಹೊಸ ಉದ್ಯಮಗಳನ್ನು ಸ್ಥಾಪಿಸುವುದು, ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದು ಹಾಗೂ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವಂತೆ ಸಲಹೆ ನೀಡಿದರು.

ಕರ್ನಾಟಕವು ಮಾಹಿತಿ ತಂತ್ರಜ್ಞಾನ, ಸಂಶೋಧನೆ, ನಾವೀನ್ಯತೆ ಮತ್ತು ಸುಧಾರಿತ ಉತ್ಪಾದನಾ ಕ್ಷೇತ್ರಗಳಲ್ಲಿ ದೇಶದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದೆ. ಮತ್ತೊಂದೆಡೆ, ಸ್ವೀಡನ್ ಸುಧಾರಿತ ಉತ್ಪಾದನಾ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (ಎಐ), ಹಸಿರು ಇಂಧನ ಮತ್ತು ಕೈಗಾರಿಕಾ ಸಂಶೋಧನೆಯಲ್ಲಿ ಗಮನಾರ್ಹ ಪರಿಣತಿ ಹೊಂದಿದೆ. ಈ ಎರಡೂ ಪ್ರದೇಶಗಳ ಸಾಮರ್ಥ್ಯವನ್ನು ಸಮನ್ವಯಗೊಳಿಸುವುದರಿಂದ ಪರಸ್ಪರ ಪ್ರಯೋಜನ ಪಡೆಯಲು ಸಾಧ್ಯವಿದೆ ಎಂದು ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟರು.

ಬೆಂಗಳೂರು ರೂಪಿಸಿಕೊಂಡಿರುವ ತಂತ್ರಜ್ಞಾನ ಪರಿಸರ ವ್ಯವಸ್ಥೆ, ನುರಿತ ಮಾನವ ಸಂಪನ್ಮೂಲ, ಸಂಶೋಧನಾ ಸಂಸ್ಥೆಗಳು ಹಾಗೂ ನವೋದ್ಯಮಗಳ ಸಾಮರ್ಥ್ಯವನ್ನು ಸ್ವೀಡನ್‌ನ ತಾಂತ್ರಿಕ ಪರಿಣತಿಯೊಂದಿಗೆ ಬೆಸೆಯುವ ಮೂಲಕ ಹೊಸ ಹೂಡಿಕೆಗಳಿಗೆ ಉತ್ತೇಜನ ನೀಡಬಹುದು. ವಿಶೇಷವಾಗಿ ಕೃತಕ ಬುದ್ಧಿಮತ್ತೆ, ಹಸಿರು ಇಂಧನ, ಸುಧಾರಿತ ಉತ್ಪಾದನೆ ಮತ್ತು ಕೈಗಾರಿಕಾ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಜಂಟಿ ಯೋಜನೆಗಳಿಗೆ ವಿಪುಲ ಅವಕಾಶಗಳಿವೆ ಎಂದು ಅವರು ತಿಳಿಸಿದರು.

ಹೊಸ ತಂತ್ರಜ್ಞಾನಗಳ ಅಳವಡಿಕೆ, ಉತ್ಪಾದನಾ ಸಾಮರ್ಥ್ಯ ಹೆಚ್ಚಳ ಹಾಗೂ ಕೈಗಾರಿಕೆಗಳ ಆಧುನೀಕರಣದ ಮೂಲಕ ಕರ್ನಾಟಕವನ್ನು ಜಾಗತಿಕ ಹೂಡಿಕೆದಾರರ ನೆಚ್ಚಿನ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸ್ವೀಡನ್‌ನಂತಹ ತಾಂತ್ರಿಕವಾಗಿ ಮುಂದುವರಿದ ರಾಷ್ಟ್ರಗಳ ಸಹಕಾರ ಮಹತ್ವದ್ದಾಗಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಕರ್ನಾಟಕದಲ್ಲಿ ಈಗಾಗಲೇ ಹಲವಾರು ಸ್ವೀಡಿಷ್ ಮೂಲದ ಕಂಪನಿಗಳು ವಿವಿಧ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಏಷ್ಯಾ ಬ್ರೌನ್ ಬೋವೇರಿ (ಎಬಿಬಿ) ಸಂಸ್ಥೆಯು ರಾಜ್ಯದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಹೂಡಿಕೆಯನ್ನು ಡಿ.ಕೆ. ಶಿವಕುಮಾರ್ ಸ್ವಾಗತಿಸಿದರು.

ವೋಲ್ವೋ ಗ್ರೂಪ್ ಬೆಂಗಳೂರಿನ ಸಮೀಪ ಉತ್ಪಾದನಾ ಘಟಕಗಳನ್ನು ಹೊಂದಿದ್ದು, ನಗರದಲ್ಲಿ ತಂತ್ರಜ್ಞಾನ, ಉತ್ಪನ್ನ ಅಭಿವೃದ್ಧಿ ಮತ್ತು ನಾವೀನ್ಯತೆಗೆ ಸಂಬಂಧಿಸಿದ ಪ್ರಮುಖ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಇದು ಕರ್ನಾಟಕದಲ್ಲಿ ಸ್ವೀಡಿಷ್ ಉದ್ಯಮಗಳು ಬೆಳೆಸಿಕೊಂಡಿರುವ ಬಲವಾದ ಕೈಗಾರಿಕಾ ಮತ್ತು ತಾಂತ್ರಿಕ ನೆಲೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ತಿಳಿಸಿದರು.

ಇದರೊಂದಿಗೆ ಅಸ್ಟ್ರಾಜೆನೆಕಾ, ಆಟೋಲಿವ್, ಎರಿಕ್ಸನ್, ಹಿಟಾಚಿ ಎನರ್ಜಿ, ಐಕಿಯಾ, ಸೆಕ್ಯುರಿಟಾಸ್, ಟ್ರೆಲ್ಲೆಬೋರ್ಗ್ ಹಾಗೂ ವಿಇ ಕಮರ್ಷಿಯಲ್ ವೆಹಿಕಲ್ಸ್‌ನಂತಹ ಕಂಪನಿಗಳು ಜೀವ ವಿಜ್ಞಾನ, ವಾಹನ ಸುರಕ್ಷತೆ, ದೂರಸಂಪರ್ಕ, ಇಂಧನ ತಂತ್ರಜ್ಞಾನ, ಚಿಲ್ಲರೆ ವ್ಯಾಪಾರ ಮತ್ತು ಕೈಗಾರಿಕಾ ಕಾರ್ಯಾಚರಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಚಟುವಟಿಕೆಗಳನ್ನು ವಿಸ್ತರಿಸಿವೆ.

ಈ ಕಂಪನಿಗಳ ಉಪಸ್ಥಿತಿಯು ಕರ್ನಾಟಕ ಮತ್ತು ಸ್ವೀಡನ್ ನಡುವಿನ ವಾಣಿಜ್ಯ ಸಂಬಂಧಗಳಿಗೆ ಭದ್ರವಾದ ಅಡಿಪಾಯ ಒದಗಿಸಿದೆ. ಈಗಿರುವ ಉದ್ಯಮಗಳ ವಿಸ್ತರಣೆಯ ಜತೆಗೆ ಹೊಸ ಕಂಪನಿಗಳ ಪ್ರವೇಶಕ್ಕೂ ಅವಕಾಶ ಕಲ್ಪಿಸುವ ಮೂಲಕ ಹೂಡಿಕೆಯ ಪ್ರಮಾಣವನ್ನು ಹೆಚ್ಚಿಸಬಹುದು ಎಂಬ ಆಶಯವನ್ನು ಉಪಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮತ್ತು ಕೈಗಾರಿಕಾ ಸಹಕಾರಕ್ಕೆ ಮತ್ತಷ್ಟು ವೇಗ ನೀಡುವ ಉದ್ದೇಶದಿಂದ ಆಯೋಜಿಸಲಾಗುತ್ತಿರುವ ‘ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶ–2027’ರಲ್ಲಿ ಸ್ವೀಡನ್ ಪಾಲುದಾರ ರಾಷ್ಟ್ರವಾಗಿ ಭಾಗವಹಿಸಬೇಕು ಎಂದು ಡಿ.ಕೆ. ಶಿವಕುಮಾರ್ ಆಹ್ವಾನ ನೀಡಿದರು.

ಈ ಸಮಾವೇಶವು ಕರ್ನಾಟಕದ ಕೈಗಾರಿಕಾ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವುದರ ಜತೆಗೆ, ವಿದೇಶಿ ಹೂಡಿಕೆದಾರರು ಮತ್ತು ರಾಜ್ಯದ ಉದ್ಯಮ ವಲಯದ ನಡುವೆ ನೇರ ಸಂಪರ್ಕ ಕಲ್ಪಿಸಲು ಉತ್ತಮ ವೇದಿಕೆಯಾಗಲಿದೆ. ಸ್ವೀಡನ್ ಪಾಲುದಾರ ರಾಷ್ಟ್ರವಾಗಿ ಭಾಗವಹಿಸುವುದರಿಂದ ಎರಡೂ ಕಡೆಗಳ ಉದ್ಯಮಿಗಳು ತಮ್ಮ ಹೂಡಿಕೆ ಯೋಜನೆಗಳು, ತಾಂತ್ರಿಕ ಪರಿಣತಿ ಮತ್ತು ವಾಣಿಜ್ಯ ಸಹಕಾರದ ಸಾಧ್ಯತೆಗಳನ್ನು ಪರಸ್ಪರ ಹಂಚಿಕೊಳ್ಳಲು ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.

ರಾಜ್ಯ ಸರ್ಕಾರದ ನೂತನ ವೈಮಾನಿಕ ಮತ್ತು ರಕ್ಷಣಾ ವಲಯದ ನೀತಿಯ ಬಗ್ಗೆಯೂ ಸಭೆಯಲ್ಲಿ ಮಾಹಿತಿ ನೀಡಲಾಯಿತು. ಏರೋಸ್ಪೇಸ್ ಮತ್ತು ಡಿಫೆನ್ಸ್ ಕ್ಷೇತ್ರದಲ್ಲಿ ಕರ್ನಾಟಕ ಹೊಂದಿರುವ ಕೈಗಾರಿಕಾ ಸಾಮರ್ಥ್ಯ, ತಂತ್ರಜ್ಞಾನ ಅಭಿವೃದ್ಧಿ ಹಾಗೂ ಉತ್ಪಾದನಾ ಅವಕಾಶಗಳನ್ನು ಸ್ವೀಡಿಷ್ ಕಂಪನಿಗಳು ಬಳಸಿಕೊಳ್ಳುವಂತೆ ಆಹ್ವಾನಿಸಲಾಯಿತು.

ದ್ವಿಪಕ್ಷೀಯ ವ್ಯಾಪಾರವನ್ನು ವೃದ್ಧಿಸುವುದು, ಹೊಸ ಹೂಡಿಕೆಗಳನ್ನು ಆಕರ್ಷಿಸುವುದು ಮತ್ತು ದೀರ್ಘಕಾಲೀನ ಉದ್ಯಮ ಸಹಭಾಗಿತ್ವವನ್ನು ರೂಪಿಸುವುದು ಈ ಆಹ್ವಾನದ ಪ್ರಮುಖ ಉದ್ದೇಶವಾಗಿದೆ.

ಸಭೆಯಲ್ಲಿ ಮಾತನಾಡಿದ ಸ್ವೀಡನ್ ರಾಯಭಾರಿ ಪೆಟ್ರಾ ಮೆನಾಂಡರ್ ಅವರು, ಭಾರತದಲ್ಲಿನ ಸ್ವೀಡನ್‌ನ ಒಟ್ಟು ಹೂಡಿಕೆಯಲ್ಲಿ ಸುಮಾರು ಶೇ.25ರಷ್ಟು ಕರ್ನಾಟಕದಲ್ಲಿದೆ ಎಂದು ತಿಳಿಸಿದರು. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವೀಡಿಷ್ ಕಂಪನಿಗಳ ಪೈಕಿ ಶೇ.61ರಷ್ಟು ಕಂಪನಿಗಳು ತಮ್ಮ ಉದ್ಯಮವನ್ನು ಮತ್ತಷ್ಟು ವಿಸ್ತರಿಸಲು ಆಸಕ್ತಿ ಹೊಂದಿವೆ ಎಂದು ಅವರು ಹೇಳಿದರು.

ಈ ಅಂಕಿಅಂಶಗಳು ಕರ್ನಾಟಕವು ಸ್ವೀಡನ್ ಉದ್ಯಮಗಳಿಗೆ ಪ್ರಮುಖ ಹೂಡಿಕೆ ತಾಣವಾಗಿ ರೂಪುಗೊಂಡಿರುವುದನ್ನು ಸೂಚಿಸುತ್ತವೆ. ರಾಜ್ಯದಲ್ಲಿ ಈಗಾಗಲೇ ಇರುವ ಕೈಗಾರಿಕಾ ಮೂಲಸೌಕರ್ಯ, ತಂತ್ರಜ್ಞಾನ ಪರಿಸರ ವ್ಯವಸ್ಥೆ ಹಾಗೂ ನುರಿತ ಮಾನವ ಸಂಪನ್ಮೂಲವನ್ನು ಬಳಸಿಕೊಂಡು ಇನ್ನಷ್ಟು ಹೂಡಿಕೆಗಳನ್ನು ಆಕರ್ಷಿಸಲು ಸಾಧ್ಯವಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಕರ್ನಾಟಕ ಮತ್ತು ಸ್ವೀಡನ್ ನಡುವಿನ ಸಹಕಾರವನ್ನು ವಿವಿಧ ವಲಯಗಳಿಗೆ ವಿಸ್ತರಿಸುವ ಮೂಲಕ ಹೊಸ ಉದ್ಯಮಗಳಿಗೆ ಅವಕಾಶ ಕಲ್ಪಿಸಬಹುದು. ಇದರಿಂದ ಕೈಗಾರಿಕಾ ಬೆಳವಣಿಗೆಗೆ ಉತ್ತೇಜನ ದೊರೆಯುವುದರ ಜತೆಗೆ, ಉದ್ಯೋಗ ಸೃಷ್ಟಿ ಮತ್ತು ತಂತ್ರಜ್ಞಾನ ವಿನಿಮಯಕ್ಕೂ ಅನುಕೂಲವಾಗಲಿದೆ ಎಂಬ ಅಭಿಪ್ರಾಯವನ್ನು ಅವರು ಹಂಚಿಕೊಂಡರು.

ಸಭೆಯಲ್ಲಿ ಉಪಸ್ಥಿತರಿದ್ದ ಐಟಿ, ಬಿಟಿ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಅವರು, ತಂತ್ರಜ್ಞಾನ, ನಾವೀನ್ಯತೆ, ನವೋದ್ಯಮಗಳು ಮತ್ತು ಉದಯೋನ್ಮುಖ ಕೈಗಾರಿಕೆಗಳ ಬೆಳವಣಿಗೆಗೆ ಕರ್ನಾಟಕ ಒದಗಿಸುತ್ತಿರುವ ಅವಕಾಶಗಳನ್ನು ವಿವರಿಸಿದರು.

ತಂತ್ರಜ್ಞಾನ ಆಧಾರಿತ ಉದ್ಯಮಗಳಿಗೆ ಸೂಕ್ತ ಪರಿಸರ ವ್ಯವಸ್ಥೆ ರೂಪಿಸುವುದು, ಸಂಶೋಧನೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡುವುದು ಹಾಗೂ ಜಾಗತಿಕ ಕಂಪನಿಗಳೊಂದಿಗೆ ಸಹಭಾಗಿತ್ವ ಬೆಳೆಸುವುದು ರಾಜ್ಯದ ಪ್ರಮುಖ ಆದ್ಯತೆಗಳಾಗಿವೆ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಸ್ವೀಡಿಷ್ ಕಂಪನಿಗಳು ಕರ್ನಾಟಕದಲ್ಲಿ ತಮ್ಮ ಹೂಡಿಕೆಯನ್ನು ವಿಸ್ತರಿಸಲು ಹಾಗೂ ಉಭಯ ದೇಶಗಳ ನಡುವಿನ ಆರ್ಥಿಕ ಸಹಕಾರವನ್ನು ಬಲಪಡಿಸಲು ಹೆಚ್ಚಿನ ಅವಕಾಶಗಳಿವೆ ಎಂದು ಹೇಳಿದರು.

ವಿಶೇಷವಾಗಿ ತಂತ್ರಜ್ಞಾನ ಆಧಾರಿತ ನವೋದ್ಯಮಗಳು, ಸುಧಾರಿತ ಉತ್ಪಾದನೆ ಮತ್ತು ಹೊಸ ಕೈಗಾರಿಕಾ ಕ್ಷೇತ್ರಗಳಲ್ಲಿ ಸಹಭಾಗಿತ್ವ ಬೆಳೆಸುವುದರಿಂದ ಕರ್ನಾಟಕದ ಉದ್ಯಮ ಪರಿಸರ ವ್ಯವಸ್ಥೆಗೆ ಮತ್ತಷ್ಟು ಬಲ ದೊರೆಯಲಿದೆ ಎಂಬ ಆಶಯ ವ್ಯಕ್ತವಾಯಿತು.

ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿರುವ ಹೂಡಿಕೆಯನ್ನು ರಾಜ್ಯದ ಇತರ ಜಿಲ್ಲೆಗಳಿಗೂ ವಿಸ್ತರಿಸುವುದು ಸರ್ಕಾರದ ದೃಷ್ಟಿಯಿಂದ ಮಹತ್ವದ ವಿಷಯವಾಗಿದೆ. ಕೈಗಾರಿಕೆಗಳು ವಿವಿಧ ಜಿಲ್ಲೆಗಳಲ್ಲಿ ಸ್ಥಾಪನೆಯಾದರೆ ಸ್ಥಳೀಯ ಸಂಪನ್ಮೂಲಗಳ ಬಳಕೆ ಹೆಚ್ಚುವುದರ ಜತೆಗೆ, ಆಯಾ ಪ್ರದೇಶದ ಯುವಜನರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಪ್ರಾದೇಶಿಕ ಆರ್ಥಿಕ ಬೆಳವಣಿಗೆಗೂ ವೇಗ ದೊರೆಯಲಿದೆ.

ಸ್ವೀಡನ್‌ನ ಉದ್ಯಮಗಳು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿರುವ ಕೈಗಾರಿಕಾ ಅವಕಾಶಗಳನ್ನು ಪರಿಶೀಲಿಸಿ, ತಮ್ಮ ಹೂಡಿಕೆ ಯೋಜನೆಗಳನ್ನು ವಿಸ್ತರಿಸುವ ಮೂಲಕ ರಾಜ್ಯದ ಸಮಗ್ರ ಅಭಿವೃದ್ಧಿಗೆ ಕೈಜೋಡಿಸಬೇಕು ಎಂಬುದು ಉಪಮುಖ್ಯಮಂತ್ರಿಗಳ ಕರೆಯ ಪ್ರಮುಖ ಆಶಯವಾಗಿದೆ.

ಸಭೆಯಲ್ಲಿ ಸ್ವೀಡನ್ ನಿಯೋಗದ ರಾಜಕೀಯ ವ್ಯವಹಾರಗಳ ಪ್ರಥಮ ಕಾರ್ಯದರ್ಶಿ ರೆಬೆಕಾ ವಾನ್ ಶ್ರೀಬ್, ಬೆಂಗಳೂರಿನ ಸ್ವೀಡನ್ ಉದ್ಯಮ ವಿಭಾಗದ ಮುಖ್ಯಸ್ಥ ಜಾನಿ ಎರಿಕ್ಸನ್ ಉಪಸ್ಥಿತರಿದ್ದರು.

ರಾಜ್ಯ ಸರ್ಕಾರದ ಪರವಾಗಿ ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಜಾಗತಿಕ ಹೂಡಿಕೆ ಮತ್ತು ಅನಿವಾಸಿ ಭಾರತೀಯ ವ್ಯವಹಾರಗಳ ಕಾರ್ಯದರ್ಶಿ ಎಸ್.ಎಸ್. ನಕುಲ್ ಹಾಗೂ ಐಟಿ ಮತ್ತು ಬಿಟಿ ಇಲಾಖೆಯ ನಿರ್ದೇಶಕ ಅವಿನಾಶ್ ಮೆನನ್ ಭಾಗವಹಿಸಿದ್ದರು.

ಕರ್ನಾಟಕ ಮತ್ತು ಸ್ವೀಡನ್ ನಡುವಿನ ಈಗಿರುವ ಉದ್ಯಮ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವುದು, ಹೊಸ ತಂತ್ರಜ್ಞಾನ ಆಧಾರಿತ ಹೂಡಿಕೆಗಳಿಗೆ ಅವಕಾಶ ಕಲ್ಪಿಸುವುದು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಗೆ ಕೈಗಾರಿಕಾ ಬೆಳವಣಿಗೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಈ ಸಭೆ ಮಹತ್ವ ಪಡೆದಿದೆ.

K.M.Sathish Gowda

Join WhatsApp

Join Now

Facebook

Join Now

Read more

ಜೀವದ ಹಂಗು ತೊರೆದು ಜನರ ಪ್ರಾಣ ಉಳಿಸಿದ ಮಾವುತರು, ಕಾವಾಡಿಗರಿಗೆ ಸಿ.ಎಸ್. ಷಡಾಕ್ಷರಿ ಅವರಿಂದ ಅಭಿನಂದನೆ; ಸಕ್ರೆಬೈಲ್ ಆನೆ ಶಿಬಿರಕ್ಕೆ ಭೇಟಿ ನೀಡಿ ಧೈರ್ಯಶಾಲಿ ಸಿಬ್ಬಂದಿಗೆ ಸನ್ಮಾನ: ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದ ಸರ್ಕಾರಿ ನೌಕರರ ಸಂಘ

ಔಷಧ ಕ್ಷೇತ್ರದಲ್ಲಿ ಪರಿಣತಿಯೇ ಜೀವಸಂಜೀವಿನಿ; ಸಣ್ಣ ತಪ್ಪಿಗೂ ದೊಡ್ಡ ಬೆಲೆ ತೆರಬೇಕಾಗುತ್ತದೆ: ಡಾ. ಧನಂಜಯ ಸರ್ಜಿ

ಪ್ರತಿ ಹೆಕ್ಟೇರ್‌ಗೆ ₹50,000 ಬರ ಪರಿಹಾರ, ಕೃಷಿ ಸಾಲ ಮನ್ನಾ ಹಾಗೂ ಸಮರ್ಪಕ ತ್ರಿಫೇಸ್ ವಿದ್ಯುತ್ ಪೂರೈಕೆಗೆ ಆಗ್ರಹ: ರೈತರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲ: ಬಿ.ವೈ. ವಿಜಯೇಂದ್ರ ವಾಗ್ದಾಳಿ

ಗೋಲ್ಡನ್ ಚಾರಿಯಟ್ ಪ್ರವಾಸಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

ದಸರಾ ಆನೆ ಘಟನೆಗೆ ರಾಜಕೀಯ ಬಣ್ಣ ಬೇಡ, ವಾಸ್ತವಾಂಶಗಳ ಪರಿಶೀಲನೆ ಮುಖ್ಯ; ಸೋಮಣ್ಣ ಆನೆಯ ಆಯ್ಕೆ ಆಕಸ್ಮಿಕವಲ್ಲ, ಅಧಿಕಾರಿಗಳ ಚರ್ಚೆಯ ನಿರ್ಧಾರ: ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ

ಕರ್ನಾಟಕದಲ್ಲಿ ₹80 ಕೋಟಿ ಪೋಲೆಂಡ್ ಹೂಡಿಕೆ ಪ್ರಸ್ತಾವನೆ; 1,000 ಉದ್ಯೋಗ ಸೃಷ್ಟಿಯ ನಿರೀಕ್ಷೆ

Leave a Comment