ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ವೀರಶೈವ ಲಿಂಗಾಯತ ಸಮುದಾಯದ ಯುವಶಕ್ತಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲಿ; ಬಸವಣ್ಣನವರ ಸಮಾನತೆಯ ತತ್ವ ಯುವಜನರಿಗೆ ದಾರಿದೀಪವಾಗಲಿ: ಸಚಿವ ಈಶ್ವರ ಖಂಡ್ರೆ

On: October 25, 2026 8:55 PM
Follow Us:
ಶಿವಮೊಗ್ಗದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಕೆಳದಿ ಶಿವಪ್ಪನಾಯಕ, ಕೆಳದಿ ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ

ಶಿವಮೊಗ್ಗ: ಇತಿಹಾಸವನ್ನು ಅರಿಯದವರು ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ. ಯುವಜನರು ತಮ್ಮ ಸಮುದಾಯದ ಇತಿಹಾಸ, ಸಂಸ್ಕೃತಿ, ಪರಂಪರೆ ಹಾಗೂ ಸಾಧಕರ ಕೊಡುಗೆಗಳನ್ನು ತಿಳಿದುಕೊಳ್ಳುವುದರ ಜತೆಗೆ, ದೊಡ್ಡ ಗುರಿಗಳನ್ನು ಇಟ್ಟುಕೊಂಡು ಕಠಿಣ ಪರಿಶ್ರಮದ ಮೂಲಕ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾದ ಈಶ್ವರ ಬಿ. ಖಂಡ್ರೆ ಕರೆ ನೀಡಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ.) ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ನಗರದ ವೀರಶೈವ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಕೆಳದಿ ಶಿವಪ್ಪನಾಯಕ ಮತ್ತು ಕೆಳದಿ ರಾಣಿ ಚನ್ನಮ್ಮ ಪ್ರಥಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದಿನ ಆಧುನಿಕ ಯುಗದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿವೆ. ಮೊಬೈಲ್ ಫೋನ್, ಫೇಸ್‌ಬುಕ್, ವಾಟ್ಸ್‌ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿದೆ. ಆದರೆ, ಅವುಗಳ ಮೂಲಕ ದೊರೆಯುವ ಮಾಹಿತಿಯಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎಂಬುದನ್ನು ವಿವೇಚಿಸುವ ಸಾಮರ್ಥ್ಯವನ್ನು ಯುವಜನರು ಬೆಳೆಸಿಕೊಳ್ಳಬೇಕು. ತಂತ್ರಜ್ಞಾನದ ಬಳಕೆಯ ಜತೆಗೆ ತಮ್ಮ ಕುಟುಂಬದ ಹಿರಿಯರು, ಪೂರ್ವಜರು ಹಾಗೂ ಸಮಾಜದ ಸಾಧಕರ ಇತಿಹಾಸವನ್ನು ತಿಳಿದುಕೊಳ್ಳುವ ಆಸಕ್ತಿಯನ್ನೂ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಸಮಾಜದಲ್ಲಿ ಸಾಧನೆ ಮಾಡಿದವರನ್ನು ಜನರು ದೀರ್ಘಕಾಲ ನೆನಪಿಸಿಕೊಳ್ಳುತ್ತಾರೆ. ವಿದ್ಯಾರ್ಥಿಗಳಲ್ಲಿ ಸಾಧನೆ ಮಾಡುವ ಸಾಮರ್ಥ್ಯವಿದೆ ಎಂಬ ವಿಶ್ವಾಸದಿಂದಲೇ ಮಹಾಸಭೆ ಪ್ರತಿಭಾ ಪುರಸ್ಕಾರ ನೀಡುತ್ತಿದೆ. ಈ ಗೌರವ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಪ್ರೇರಣೆ ಹಾಗೂ ಸಾಧಿಸುವ ಛಲವನ್ನು ಹೆಚ್ಚಿಸಬೇಕು ಎಂಬುದು ಮಹಾಸಭೆಯ ಆಶಯವಾಗಿದೆ ಎಂದು ತಿಳಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಸ್ಥಾಪನೆಯ ಹಿಂದೆ ಸಮಾಜವನ್ನು ಸಂಘಟಿಸುವ, ಅಜ್ಞಾನ ಮತ್ತು ಮೂಢನಂಬಿಕೆಗಳನ್ನು ನಿವಾರಿಸುವ ಹಾಗೂ ಸಮುದಾಯದ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಗತಿಗೆ ದಾರಿ ಮಾಡಿಕೊಡುವ ಮಹತ್ತರ ಉದ್ದೇಶವಿದೆ. 1904ರಲ್ಲಿ ಹಾನಗಲ್ಲ ಕುಮಾರಸ್ವಾಮೀಜಿಗಳು ಸ್ಥಾಪಿಸಿದ ಮಹಾಸಭೆ ಇಂದು 122 ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿದೆ ಎಂದು ಈಶ್ವರ ಖಂಡ್ರೆ ಸ್ಮರಿಸಿದರು.

ಸಮುದಾಯದ ಜನರನ್ನು ಒಗ್ಗೂಡಿಸುವುದು, ಸಮಾಜದಲ್ಲಿದ್ದ ಅನೈಕ್ಯತೆ ಮತ್ತು ಅಜ್ಞಾನದ ಸಮಸ್ಯೆಗಳನ್ನು ನಿವಾರಿಸುವುದು ಹಾಗೂ ಸಮುದಾಯಕ್ಕೆ ಗತವೈಭವವನ್ನು ಮರಳಿ ತಂದುಕೊಡುವ ಉದ್ದೇಶದಿಂದ ಹಾನಗಲ್ಲ ಕುಮಾರಸ್ವಾಮೀಜಿಗಳು ಮಹಾಸಭೆಯ ಜತೆಗೆ ಶಿವಯೋಗ ಮಂದಿರವನ್ನೂ ಸ್ಥಾಪಿಸಿದರು. ಮಠಗಳ ಜವಾಬ್ದಾರಿ ವಹಿಸುವ ಗುರುಗಳನ್ನು ರೂಪಿಸುವುದು, ಅವರಿಗೆ ಅಗತ್ಯವಾದ ತರಬೇತಿ ಮತ್ತು ಮಾರ್ಗದರ್ಶನ ನೀಡುವುದು ಶಿವಯೋಗ ಮಂದಿರದ ಪ್ರಮುಖ ಉದ್ದೇಶವಾಗಿತ್ತು ಎಂದರು.

ಮಹಾಸಭೆಯ ಬೆಳವಣಿಗೆಯಲ್ಲಿ ಹಲವು ಮಹನೀಯರು ಮಹತ್ವದ ಪಾತ್ರ ವಹಿಸಿದ್ದಾರೆ. ಸಿದ್ದಗಂಗಾ ಮಠದ ಶಿವಕುಮಾರ ಮಹಾಸ್ವಾಮೀಜಿಗಳು ಸೇರಿದಂತೆ ಅನೇಕ ಪೂಜ್ಯರು ಸಂಸ್ಥೆಗೆ ಮಾರ್ಗದರ್ಶನ ನೀಡಿದ್ದಾರೆ. ತಮ್ಮ ತಂದೆ ಲಿಂಗೈಕ್ಯ ಭೀಮಣ್ಣ ಖಂಡ್ರೆ ಅವರು ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ನಂತರ ಶಾಂತಣ್ಣ ಅವರು ಜವಾಬ್ದಾರಿ ನಿರ್ವಹಿಸಿದರು. ಅವರ ನಿಧನದ ಬಳಿಕ ಕಾರ್ಯಕಾರಿ ಸಮಿತಿಯ ಸದಸ್ಯರು ತಮ್ಮನ್ನು ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ಸಚಿವ ಸ್ಥಾನದ ಜವಾಬ್ದಾರಿಯ ಜತೆಗೆ ಮಹಾಸಭೆಯ ಜವಾಬ್ದಾರಿಯನ್ನೂ ನಿರ್ವಹಿಸುತ್ತಿರುವುದಾಗಿ ಹೇಳಿದರು.

ವೀರಶೈವ ಲಿಂಗಾಯತ ಧರ್ಮಕ್ಕೆ ತನ್ನದೇ ಆದ ಶ್ರೇಷ್ಠ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆ ಇದೆ. ಕಾಲಕಾಲಕ್ಕೆ ಗುರುಗಳು ಮತ್ತು ವಿರಕ್ತರು ಸಮಾಜವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಆಶಯದೊಂದಿಗೆ ಎಲ್ಲರ ಒಳಿತನ್ನು ಬಯಸುವ ಪರಂಪರೆ ನಮ್ಮದಾಗಿದೆ ಎಂದು ಈಶ್ವರ ಖಂಡ್ರೆ ಹೇಳಿದರು.

12ನೇ ಶತಮಾನದಲ್ಲಿ ಬಸವಾದಿ ಶರಣರು ಪ್ರತಿಪಾದಿಸಿದ ಸಮಾನತೆ, ಮಾನವೀಯತೆ, ಕಾಯಕ ಮತ್ತು ದಾಸೋಹದ ತತ್ವಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿವೆ. ಸಕಲ ಜೀವಾತ್ಮರ ಒಳಿತನ್ನು ಬಯಸಬೇಕು ಎಂಬ ಶರಣರ ಆಶಯವು ಜಾತಿ, ವರ್ಣ, ಲಿಂಗ ಮತ್ತು ವೃತ್ತಿಯ ಆಧಾರದಲ್ಲಿ ಮನುಷ್ಯರನ್ನು ಮೇಲು-ಕೀಳು ಎಂದು ನೋಡುವ ಮನೋಭಾವಕ್ಕೆ ವಿರುದ್ಧವಾದ ಮಾನವೀಯ ಸಂದೇಶವನ್ನು ನೀಡುತ್ತದೆ ಎಂದರು.

ಬಸವಣ್ಣನವರು ಮತ್ತು ಶರಣರು ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಮತ್ತು ಸಮಾನತೆಯ ಚಿಂತನೆಯನ್ನು ಬೆಳೆಸಲು ಪ್ರಯತ್ನಿಸಿದರು. ಎಲ್ಲರಿಗೂ ಸಮಾನ ಅವಕಾಶಗಳು ದೊರೆಯಬೇಕು, ಪ್ರತಿಯೊಬ್ಬರೂ ಗೌರವಯುತವಾಗಿ ಬದುಕಬೇಕು ಎಂಬುದು ಅವರ ಆಶಯವಾಗಿತ್ತು. ಇಂತಹ ಚಿಂತನೆಗಳ ಆಧಾರದ ಮೇಲೆ ಸುಂದರ ಮತ್ತು ಸಮಾನತೆಯ ಸಮಾಜ ನಿರ್ಮಾಣವಾಗಬೇಕು ಎಂದು ಅವರು ಹೇಳಿದರು.

ಬಸವಣ್ಣನವರ ನೇತೃತ್ವದಲ್ಲಿ ರೂಪುಗೊಂಡ ಅನುಭವ ಮಂಟಪವು ಸಾಮಾಜಿಕ, ಧಾರ್ಮಿಕ ಮತ್ತು ವೈಚಾರಿಕ ಚರ್ಚೆಗಳ ಮಹತ್ವದ ಕೇಂದ್ರವಾಗಿತ್ತು. ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದ ಶರಣರು ಇಲ್ಲಿ ತಮ್ಮ ವಿಚಾರಗಳನ್ನು ಮಂಡಿಸುತ್ತಿದ್ದರು. ಮಹಿಳೆಯರಿಗೂ ಚರ್ಚೆ ಮತ್ತು ಅಭಿವ್ಯಕ್ತಿಗೆ ಅವಕಾಶ ದೊರೆತಿತ್ತು. ಅಕ್ಕಮಹಾದೇವಿ, ನೀಲಾಂಬಿಕೆ, ಗಂಗಾಂಬಿಕೆ ಮತ್ತು ಮುಕ್ತಾಯಕ್ಕ ಸೇರಿದಂತೆ ಅನೇಕ ವಚನಕಾರ್ತಿಯರು ತಮ್ಮ ಅನುಭವ ಹಾಗೂ ಚಿಂತನೆಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದು ವಿವರಿಸಿದರು.

ಅನುಭವ ಮಂಟಪದ ಪರಂಪರೆ ಜ್ಞಾನ, ಸಂವಾದ, ಸಮಾನತೆ ಮತ್ತು ಸಾಮಾಜಿಕ ಪರಿವರ್ತನೆಯ ಮಹತ್ವವನ್ನು ಸಾರುತ್ತದೆ. ಇಂತಹ ಐತಿಹಾಸಿಕ ಪರಂಪರೆಯ ವಾರಸುದಾರರಾಗಿರುವ ನಾವು ಸಮಾಜಕ್ಕೆ ಏನು ಕೊಡುಗೆ ನೀಡುತ್ತಿದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಪೂರ್ವಜರ ಸಾಧನೆಗಳನ್ನು ನೆನಪಿಸಿಕೊಳ್ಳುವುದಷ್ಟೇ ಸಾಕಾಗುವುದಿಲ್ಲ; ಅವರ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜದ ಪ್ರಗತಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ವೀರಶೈವ ಲಿಂಗಾಯತ ಮಠಗಳು ಮತ್ತು ಗುರುಪೀಠಗಳು ಕೇವಲ ಧಾರ್ಮಿಕ ಚಟುವಟಿಕೆಗಳಿಗೆ ಸೀಮಿತವಾಗಿಲ್ಲ. ಶಿಕ್ಷಣ, ಅನ್ನದಾಸೋಹ, ಸಂಸ್ಕಾರ ಮತ್ತು ಮಾನವೀಯ ಸೇವೆಯ ಮೂಲಕ ಸಮಾಜದ ವಿವಿಧ ವರ್ಗಗಳ ಜನರ ಬದುಕಿನಲ್ಲಿ ಮಹತ್ವದ ಬದಲಾವಣೆ ತಂದಿವೆ. ಜಾತಿ, ಭಾಷೆ ಮತ್ತು ಧರ್ಮದ ಭೇದವಿಲ್ಲದೆ ಅನೇಕ ಮಠಗಳು ಜನರಿಗೆ ಆಶ್ರಯ ನೀಡಿ, ಶಿಕ್ಷಣ ಒದಗಿಸಿ, ಅನ್ನದಾಸೋಹದ ಮೂಲಕ ನೆರವಾಗಿವೆ ಎಂದು ಈಶ್ವರ ಖಂಡ್ರೆ ಹೇಳಿದರು.

ಸಮಾಜದ ಐತಿಹಾಸಿಕ ಶ್ರೀಮಂತಿಕೆಯನ್ನು ಹೆಮ್ಮೆಯಿಂದ ಹೇಳಿಕೊಳ್ಳುವುದು ಅಗತ್ಯ. ಆದರೆ, ನಮ್ಮ ಪೂರ್ವಜರು ಸಾಧನೆ ಮಾಡಿದ್ದರು ಎಂಬ ಕಾರಣಕ್ಕೆ ನಾವೂ ಸಾಧಕರಾಗಿದ್ದೇವೆ ಎಂದು ಭಾವಿಸಬಾರದು. ಇಂದಿನ ಪೀಳಿಗೆ ಸ್ವಂತ ಸಾಮರ್ಥ್ಯ, ಪರಿಶ್ರಮ ಮತ್ತು ಬದ್ಧತೆಯ ಮೂಲಕ ಹೊಸ ಸಾಧನೆಗಳನ್ನು ಮಾಡಬೇಕು. ಪರಂಪರೆಯ ಬಗ್ಗೆ ಹೆಮ್ಮೆ ಇರಬೇಕು; ಅದೇ ಸಮಯದಲ್ಲಿ ವರ್ತಮಾನದಲ್ಲಿ ಸಮಾಜಕ್ಕೆ ನೀಡುತ್ತಿರುವ ಕೊಡುಗೆಯ ಬಗ್ಗೆಯೂ ಜವಾಬ್ದಾರಿ ಇರಬೇಕು ಎಂದು ತಿಳಿಸಿದರು.

ಎಲ್ಲ ಜಾತಿ, ಭಾಷೆ ಮತ್ತು ಧರ್ಮದ ಜನರನ್ನು ಗೌರವಿಸಿ, ಅವರ ಸುಖ-ದುಃಖಗಳಲ್ಲಿ ಭಾಗಿಯಾಗುವ ಮನೋಭಾವ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಒಗ್ಗಟ್ಟು, ಪರಸ್ಪರ ಸಹಕಾರ ಮತ್ತು ಮಾನವೀಯತೆ ಬಲಗೊಂಡಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.

ಯುವಜನರು ಯಾವುದೇ ಸಮುದಾಯದ ನಿಜವಾದ ಶಕ್ತಿ ಮತ್ತು ಭವಿಷ್ಯದ ಆಧಾರಸ್ತಂಭ. ಯುವಶಕ್ತಿ ಅಣುಶಕ್ತಿಯಿದ್ದಂತೆ. ಅದನ್ನು ಸರಿಯಾದ ದಾರಿಯಲ್ಲಿ ಬಳಸಿಕೊಂಡರೆ ಸಮಾಜ ಮತ್ತು ದೇಶದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಬಹುದು ಎಂದು ಈಶ್ವರ ಖಂಡ್ರೆ ಹೇಳಿದರು.

ವೀರಶೈವ ಲಿಂಗಾಯತ ಸಮುದಾಯದ ಯುವಕರು ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಆಡಳಿತ, ಮಾಹಿತಿ ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್ ಅಧಿಕಾರಿಗಳಾಗಿ, ವಿಜ್ಞಾನಿಗಳಾಗಿ, ವೈದ್ಯರಾಗಿ ಹಾಗೂ ದೇಶ-ವಿದೇಶಗಳ ಪ್ರಮುಖ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ಸಮುದಾಯದ ಕೀರ್ತಿ ಹೆಚ್ಚಿಸುತ್ತಿದ್ದಾರೆ. ಯುವಜನರಲ್ಲಿ ಪ್ರತಿಭೆ ಮತ್ತು ಸಾಮರ್ಥ್ಯಕ್ಕೆ ಕೊರತೆಯಿಲ್ಲ. ಆದರೆ, ಆ ಸಾಮರ್ಥ್ಯವನ್ನು ಸರಿಯಾದ ಮಾರ್ಗದಲ್ಲಿ ಬಳಸಿಕೊಳ್ಳುವುದು ಅತ್ಯಂತ ಮುಖ್ಯ ಎಂದರು.

ಇತ್ತೀಚಿನ ದಿನಗಳಲ್ಲಿ ಕೆಲವು ಯುವಕರು ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗುತ್ತಿರುವುದು, ಆರೋಗ್ಯವನ್ನು ಕಡೆಗಣಿಸುತ್ತಿರುವುದು ಹಾಗೂ ಗುರುಹಿರಿಯರಿಗೆ ಗೌರವ ನೀಡುವ ಸಂಸ್ಕಾರದಿಂದ ದೂರವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಪಾಶ್ಚಾತ್ಯ ಜೀವನಶೈಲಿಯನ್ನು ವಿವೇಚನೆಯಿಲ್ಲದೆ ಅನುಕರಿಸುವ ಬದಲು, ಉತ್ತಮ ವಿಚಾರಗಳನ್ನು ಸ್ವೀಕರಿಸಿ, ನಮ್ಮ ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳನ್ನು ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಯುವಜನರಲ್ಲಿ ನೈತಿಕ ಮೌಲ್ಯಗಳು, ಶಿಸ್ತು, ಜವಾಬ್ದಾರಿ, ಹಿರಿಯರ ಬಗ್ಗೆ ಗೌರವ ಮತ್ತು ಸಮಾಜಮುಖಿ ಚಿಂತನೆ ಬೆಳೆಸಬೇಕು. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ವೈಯಕ್ತಿಕ ಯಶಸ್ಸಿಗೆ ಮಾತ್ರ ಸೀಮಿತಗೊಳಿಸದೆ, ಸಮಾಜದ ಒಳಿತಿಗೂ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

ಇಂದು ಕೃತಕ ಬುದ್ಧಿಮತ್ತೆ, ರೊಬೋಟಿಕ್ಸ್ ಮತ್ತು ಯಂತ್ರ ಕಲಿಕೆಯಂತಹ ತಂತ್ರಜ್ಞಾನಗಳು ವೇಗವಾಗಿ ಬೆಳೆಯುತ್ತಿವೆ. ಇವು ಮಾನವನ ಜೀವನ ಮತ್ತು ಕಾರ್ಯವೈಖರಿಯಲ್ಲಿ ದೊಡ್ಡ ಬದಲಾವಣೆಗಳನ್ನು ತರುತ್ತಿವೆ. ತಂತ್ರಜ್ಞಾನದ ಬೆಳವಣಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದ್ದರೂ, ಅದರ ಬಳಕೆಯ ಬಗ್ಗೆ ಜವಾಬ್ದಾರಿ ಮತ್ತು ಎಚ್ಚರಿಕೆ ಅಗತ್ಯವಾಗಿದೆ ಎಂದು ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು.

ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಮಾನವೀಯ ಮೌಲ್ಯಗಳು, ವಿವೇಚನೆ ಮತ್ತು ನೈತಿಕ ಹೊಣೆಗಾರಿಕೆಯನ್ನು ಕಡೆಗಣಿಸಬಾರದು. ತಂತ್ರಜ್ಞಾನವನ್ನು ಮಾನವ ಕಲ್ಯಾಣಕ್ಕೆ ಪೂರಕವಾಗಿ ಬಳಸಿಕೊಳ್ಳಬೇಕು. ಹೊಸ ಜ್ಞಾನವನ್ನು ಗಳಿಸುವುದರ ಜತೆಗೆ ಅದನ್ನು ಸಮಾಜದ ಒಳಿತಿಗೆ ಬಳಸುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಈ ಯೋಜನೆಗೆ ಒಟ್ಟು ₹742 ಕೋಟಿ ವೆಚ್ಚದ ಗುರಿ ಹೊಂದಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

ತಮ್ಮ ತಂದೆ ಲಿಂಗೈಕ್ಯ ಭೀಮಣ್ಣ ಖಂಡ್ರೆ ಹಾಗೂ ಪೂಜ್ಯ ಚನ್ನಬಸವ ಪಟ್ಟದೇವರು ಅನುಭವ ಮಂಟಪ ನಿರ್ಮಾಣವಾಗಬೇಕು ಎಂಬ ಕನಸು ಕಂಡಿದ್ದರು. ಈ ಐತಿಹಾಸಿಕ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹಿಂದಿನ ಸರ್ಕಾರಗಳೂ ಕ್ರಮ ಕೈಗೊಂಡಿದ್ದವು. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಯೋಜನೆಗೆ ₹200 ಕೋಟಿ ಅನುದಾನ ಬಿಡುಗಡೆಯಾಗಿತ್ತು. ನಂತರದ ಅವಧಿಯಲ್ಲಿ ಯೋಜನೆಯ ಕಾಮಗಾರಿಗೆ ಮತ್ತಷ್ಟು ವೇಗ ನೀಡಲಾಗಿದ್ದು, ತಮ್ಮ ಸರ್ಕಾರದ ಅವಧಿಯಲ್ಲಿ ₹330 ಕೋಟಿ ಅನುದಾನ ಬಿಡುಗಡೆ ಮಾಡಿಸಲಾಗಿದೆ ಎಂದು ಹೇಳಿದರು.

ಯೋಜನೆಗೆ ಈವರೆಗೆ ₹530 ಕೋಟಿ ವೆಚ್ಚವಾಗಿದ್ದು, ಕಾಮಗಾರಿ ಪೂರ್ಣಗೊಳಿಸಲು ಇನ್ನೂ ₹250 ಕೋಟಿ ಅಗತ್ಯವಿದೆ ಎಂದು ವಿವರಿಸಿದರು.

ಅನುಭವ ಮಂಟಪವನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಆಧ್ಯಾತ್ಮಿಕ, ಧಾರ್ಮಿಕ ಹಾಗೂ ವೈಚಾರಿಕ ಕೇಂದ್ರವಾಗಿ ರೂಪಿಸುವ ಉದ್ದೇಶವಿದೆ. ಬಸವಣ್ಣನವರ ಸಮಾನತೆಯ ಸಂದೇಶ, ಶರಣರ ವಚನ ಸಾಹಿತ್ಯ, ಇಷ್ಟಲಿಂಗ ಪೂಜೆಯ ಪರಂಪರೆ ಹಾಗೂ ಮಾನವೀಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಇಲ್ಲಿ ನಡೆಯಲಿದೆ. ಜಾತಿ ಮತ್ತು ಲಿಂಗಭೇದಗಳನ್ನು ಮೀರಿ ಸಮಾನತೆಯ ಸಮಾಜ ನಿರ್ಮಿಸುವ ಬಸವಣ್ಣನವರ ಕನಸನ್ನು ಜನರಿಗೆ ತಲುಪಿಸುವಲ್ಲಿ ಈ ಕೇಂದ್ರ ಮಹತ್ವದ ಪಾತ್ರ ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಸವಣ್ಣನವರು ಸಾರಿದ ‘ಕಾಯಕವೇ ಕೈಲಾಸ’ ಎಂಬ ತತ್ವವು ಪ್ರತಿಯೊಬ್ಬರಿಗೂ ಇಂದಿಗೂ ಮಾರ್ಗದರ್ಶಿಯಾಗಿದೆ. ಯಾವುದೇ ಕೆಲಸವನ್ನು ಕೀಳಾಗಿ ಕಾಣಬಾರದು. ಪ್ರಾಮಾಣಿಕವಾಗಿ ದುಡಿಯುವ ಪ್ರತಿಯೊಬ್ಬರ ಶ್ರಮಕ್ಕೂ ಗೌರವ ನೀಡಬೇಕು. ವೃತ್ತಿಯ ಆಧಾರದಲ್ಲಿ ಮನುಷ್ಯರನ್ನು ಮೇಲು-ಕೀಳು ಎಂದು ಪರಿಗಣಿಸುವ ಮನೋಭಾವ ದೂರವಾಗಬೇಕು ಎಂದು ಈಶ್ವರ ಖಂಡ್ರೆ ಹೇಳಿದರು.

ಇಂದಿನ ಯುವಜನರಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಆಸಕ್ತಿ ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆ. ಆದರೆ, ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಪರಿಶ್ರಮ, ಶಿಸ್ತು ಮತ್ತು ಕೌಶಲ್ಯ ಅಗತ್ಯ. ಕೆಲಸದ ಬಗ್ಗೆ ಗೌರವ ಮತ್ತು ಸ್ವಾವಲಂಬನೆಯ ಮನೋಭಾವವನ್ನು ಬೆಳೆಸುವುದು ಅತ್ಯಂತ ಮುಖ್ಯ ಎಂದರು.

ಈ ನಿಟ್ಟಿನಲ್ಲಿ ವಿವಿಧ ಕಾಯಕಗಳ ಮಹತ್ವವನ್ನು ತಿಳಿಸುವ, ಕೌಶಲ್ಯಾಭಿವೃದ್ಧಿಗೆ ಪ್ರೋತ್ಸಾಹ ನೀಡುವ ಹಾಗೂ ಶ್ರಮದ ಘನತೆಯನ್ನು ಪರಿಚಯಿಸುವ ಉದ್ದೇಶದಿಂದ ಶರಣಗ್ರಾಮದಂತಹ ಪರಿಕಲ್ಪನೆಗಳಿಗೆ ಮಹತ್ವ ನೀಡಲಾಗಿದೆ. ವಚನ ಸಾಹಿತ್ಯವು ಕರ್ನಾಟಕದ ಸಾಹಿತ್ಯ ಪರಂಪರೆಗೆ ಮಾತ್ರವಲ್ಲ, ಜಾಗತಿಕ ಸಾಹಿತ್ಯ ಮತ್ತು ಮಾನವೀಯ ಚಿಂತನೆಗಳಿಗೂ ಮಹತ್ವದ ಕೊಡುಗೆ ನೀಡಿದೆ ಎಂದು ತಿಳಿಸಿದರು.

ವೀರಶೈವ ಮತ್ತು ಲಿಂಗಾಯತ ಸಮುದಾಯಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಮುನ್ನಡೆಯುವ ಅಗತ್ಯವನ್ನು ಈಶ್ವರ ಖಂಡ್ರೆ ಹೇಳಿದರು.

ತಮ್ಮ ತಂದೆ ಭೀಮಣ್ಣ ಖಂಡ್ರೆ ಹಾಗೂ ಇತರ ಹಿರಿಯರು ಈ ವಿಚಾರವಾಗಿ ಸಿದ್ದಗಂಗಾ ಮಠದ ಪರಮಪೂಜ್ಯ ಶಿವಕುಮಾರ ಮಹಾಸ್ವಾಮೀಜಿಗಳನ್ನು ಭೇಟಿ ಮಾಡಿ ಸಮಾಜದಲ್ಲಿ ಉಂಟಾಗಿದ್ದ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವ ಕುರಿತು ಚರ್ಚಿಸಿದ್ದರು. ಈ ಸಂದರ್ಭದಲ್ಲಿ ವೀರಶೈವ ಮತ್ತು ಲಿಂಗಾಯತ ಒಂದೇ ಎಂಬ ನಿಲುವನ್ನು ಪ್ರತಿಪಾದಿಸಲಾಗಿತ್ತು ಎಂದು ಅವರು ಸ್ಮರಿಸಿದರು.

ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷನಾಗಿ ಹೇಳುವುದಾದರೆ, ಸಮುದಾಯದ ಒಗ್ಗಟ್ಟು ಅತ್ಯಂತ ಮುಖ್ಯ. ಒಗ್ಗಟ್ಟಿನಲ್ಲಿ ಶಕ್ತಿಯಿದೆ, ವಿಭಜನೆಯಿಂದ ದುರ್ಬಲತೆ ಉಂಟಾಗುತ್ತದೆ. ಹೀಗಾಗಿ ಎಲ್ಲರೂ ಪರಸ್ಪರ ವಿಶ್ವಾಸದಿಂದ ಒಂದಾಗಿ, ಸಮುದಾಯದ ಅಭಿವೃದ್ಧಿ ಹಾಗೂ ಸಮಾಜದ ಒಳಿತಿಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.

ಸಮುದಾಯದ ಇತಿಹಾಸ, ಧಾರ್ಮಿಕ ಪರಂಪರೆ ಮತ್ತು ಸಾಮಾಜಿಕ ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅದೇ ಸಮಯದಲ್ಲಿ ಎಲ್ಲ ಸಮುದಾಯಗಳ ಜನರೊಂದಿಗೆ ಸೌಹಾರ್ದದಿಂದ ಬದುಕಿ, ಸಮಾನತೆ ಮತ್ತು ಮಾನವೀಯತೆಯನ್ನು ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಮಹಾಸಭೆಯ ಪ್ರಮುಖ ಉದ್ದೇಶವಾಗಿದೆ. ಈ ವರ್ಷ ಪ್ರತಿಭಾ ಪುರಸ್ಕಾರಕ್ಕಾಗಿ ಸುಮಾರು 16,000 ಅರ್ಜಿಗಳು ಬಂದಿದ್ದು, ಅವುಗಳ ಪರಿಶೀಲನೆಯ ಬಳಿಕ ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. 10ನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಈ ಗೌರವ ನೀಡಲಾಗುತ್ತಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ತೆಲಂಗಾಣ, ಕೇರಳ ಮತ್ತು ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ವಿದ್ಯಾರ್ಥಿಗಳಿಗೂ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಒಟ್ಟಾರೆ ಸುಮಾರು 13,200 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಗೌರವಿಸುವ ಕಾರ್ಯವನ್ನು ಮಹಾಸಭೆ ಕೈಗೊಂಡಿದೆ ಎಂದರು.

ಪ್ರತಿಭಾ ಪುರಸ್ಕಾರದ ಉದ್ದೇಶ ದೊಡ್ಡ ಮೊತ್ತದ ಹಣ ನೀಡುವುದಷ್ಟೇ ಅಲ್ಲ. ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ, ಅವರಿಗೆ ಗೌರವ ಮತ್ತು ಪ್ರೋತ್ಸಾಹ ನೀಡುವುದರ ಮೂಲಕ ಮುಂದಿನ ಹಂತದ ಸಾಧನೆಗೆ ಪ್ರೇರಣೆ ತುಂಬುವುದಾಗಿದೆ. ವಿದ್ಯಾರ್ಥಿಗಳು ಈ ಗೌರವವನ್ನು ತಮ್ಮ ಜವಾಬ್ದಾರಿಯ ಸಂಕೇತವಾಗಿ ಸ್ವೀಕರಿಸಿ, ಇನ್ನಷ್ಟು ಶ್ರದ್ಧೆಯಿಂದ ಅಧ್ಯಯನ ಮಾಡಿ ಜೀವನದಲ್ಲಿ ಉನ್ನತ ಗುರಿಗಳನ್ನು ತಲುಪಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಸ್ಪಷ್ಟ ಗುರಿ ಹೊಂದಿರಬೇಕು. ಗುರಿ ಸಾಧಿಸಲು ನಿರಂತರ ಪರಿಶ್ರಮ, ಆತ್ಮವಿಶ್ವಾಸ ಮತ್ತು ಶಿಸ್ತು ಅಗತ್ಯ. ಗುರುಹಿರಿಯರ ಆಶೀರ್ವಾದ, ಪೋಷಕರ ಪ್ರೋತ್ಸಾಹ ಮತ್ತು ಸಮಾಜದ ಬೆಂಬಲವನ್ನು ಸದುಪಯೋಗಪಡಿಸಿಕೊಂಡು ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಸಮಾಜ ಹಾಗೂ ದೇಶಕ್ಕೆ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು.

ಕೆಳದಿ ಶಿವಪ್ಪನಾಯಕ ಪ್ರಶಸ್ತಿಯನ್ನು ಮರಣೋತ್ತರವಾಗಿ ಲೋಕನಾಯಕ ಲಿಂಗೈಕ್ಯ ಡಾ. ಭೀಮಣ್ಣ ಖಂಡ್ರೆ ಹಾಗೂ ಲಿಂಗೈಕ್ಯ ಡಾ. ಶಾಮನೂರು ಶಿವಶಂಕರಪ್ಪ ಅವರಿಗೆ ಪ್ರದಾನ ಮಾಡಲಾಯಿತು.

ಕೆಳದಿ ರಾಣಿ ಚನ್ನಮ್ಮ ಪ್ರಶಸ್ತಿಯನ್ನು ಭಾರತದ ‘ಐಕಾನ್ ಬ್ರ್ಯಾಂಡ್’ ಪ್ರಶಸ್ತಿ ವಿಜೇತೆ ಕುಮಾರಿ ಮೇಜರ್ ಡಾ. ದೀಕ್ಷಾ ಸಿ. ಮುದದೇವಣ್ಣವರ್ ಅವರಿಗೆ ಪ್ರದಾನ ಮಾಡಲಾಯಿತು.

ಸಮಾಜದ ಅಭಿವೃದ್ಧಿ, ಜನಸೇವೆ ಮತ್ತು ವಿವಿಧ ಕ್ಷೇತ್ರಗಳಲ್ಲಿನ ಸಾಧನೆಗಳನ್ನು ಗುರುತಿಸಿ ಗೌರವಿಸುವುದು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿದೆ ಎಂಬ ಆಶಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.

ಸಮಾಜವು ನಮಗೆ ಸಂಸ್ಕಾರ, ಸಂಸ್ಕೃತಿ, ಗುರುಪರಂಪರೆ ಮತ್ತು ಬದುಕಿನ ಮೌಲ್ಯಗಳನ್ನು ನೀಡಿದೆ. ಅದಕ್ಕೆ ಪ್ರತಿಯಾಗಿ ನಾವು ಸಮಾಜಕ್ಕೆ ಏನು ಕೊಡುಗೆ ನೀಡುತ್ತಿದ್ದೇವೆ ಎಂಬುದನ್ನು ಪ್ರತಿಯೊಬ್ಬರೂ ಆಲೋಚಿಸಬೇಕು. ಪೂರ್ವಜರ ಸಾಧನೆಗಳನ್ನು ನೆನಪಿಸಿಕೊಳ್ಳುವುದರ ಜತೆಗೆ ಹೊಸ ಸಾಧನೆಗಳನ್ನು ಮಾಡುವ ಮೂಲಕ ಮುಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದು ಈಶ್ವರ ಖಂಡ್ರೆ ಕರೆ ನೀಡಿದರು.

ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿಕೊಂಡ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಬೇಕು. ವೈಯಕ್ತಿಕ ಪ್ರಗತಿಯ ಜತೆಗೆ ಸಮಾಜದ ಒಳಿತಿಗೂ ದುಡಿಯಬೇಕು. ಮಾನವೀಯತೆ, ಸಮಾನತೆ, ಕಾಯಕ, ದಾಸೋಹ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಜೀವನದ ಮೌಲ್ಯಗಳನ್ನಾಗಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.

ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ. ಅವರು ತಮ್ಮ ಗುರಿಗಳನ್ನು ಸಾಧಿಸಿ, ಕುಟುಂಬಕ್ಕೆ, ಸಮಾಜಕ್ಕೆ ಮತ್ತು ದೇಶಕ್ಕೆ ಕೀರ್ತಿ ತರಲಿ ಎಂದು ಹಾರೈಸಿದ ಅವರು, ಗುರು-ವಿರಕ್ತರ ಆಶೀರ್ವಾದ ಎಲ್ಲರ ಮೇಲಿರಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಶ್ರೀಶೈಲ ಪೀಠದ (ಶ್ರೀಶೈಲಂ) ಶ್ರೀಮದ್ ಗಿರಿರಾಜ ಸೂರ್ಯ ಸಿಂಹಾಸನಾಧೀಶ್ವರ, ಶ್ರೀ ಶ್ರೀ ಶ್ರೀ 1008 ಜಗದ್ಗುರು ಪೂಜ್ಯ ಡಾ. ಶ್ರೀ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹಾಗೂ ಶಿವಮೊಗ್ಗದ ಬೆಕ್ಕಿನಕಲ್ಮಠದ ಜಗದ್ಗುರು ಪೂಜ್ಯ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು.

ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾದ ಈಶ್ವರ ಬಿ. ಖಂಡ್ರೆ, ಸಂಸದರಾದ ಬಿ.ವೈ. ರಾಘವೇಂದ್ರ, ಶಾಸಕ ಚನ್ನಬಸಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಮಾಜಿ ಸಚಿವರಾದ ರೇಣುಕಾಚಾರ್ಯ, ಅಧ್ಯಕ್ಷರಾದ ರುದ್ರಮುನಿ ಸಜ್ಜನ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ, ಎಸ್.ಎಸ್. ಜ್ಯೋತಿಪ್ರಕಾಶ್, ಬಳ್ಳೇಕೆರೆ ಸಂತೋಷ್, ಹೆಚ್.ಸಿ. ಯೋಗೀಶ್, ಎಸ್.ಪಿ. ದಿನೇಶ್, ವಿರೂಪಾಕ್ಷಪ್ಪ, ಬಿ.ಡಿ. ಭೂಕಾಂತ್, ಮಹಾಲಿಂಗ ಶಾಸ್ತ್ರಿ, ದಿನೇಶ್ ಬುಳ್ಳಾಪುರ, ಮಲ್ಲಿಕಾರ್ಜುನ ಸ್ವಾಮಿ, ಸೋಮಶೇಖರ್, ವಿಜಯ್ ಕುಮಾರ್, ಬಿ.ಕೆ. ಶಿವಕುಮಾರ್, ಅನಿತಾ ರವಿಶಂಕರ್ ಹಾಗೂ ವಿಶ್ವಾಸ್, ರಾಜಶೇಖರ್, ಉಮೇಶ್ ಕತ್ತಿಗೆ, ಪರಮೇಶ್, ಸಚಿನ್ ಪೂಜಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಪ್ರಧಾನಿ ಮೋದಿ ವಿರುದ್ಧ ಖರ್ಗೆ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲ: ಬಹಿರಂಗ ಕ್ಷಮೆಯಾಚನೆಗೆ ಮೋಹನ್ ರೆಡ್ಡಿ ಆಗ್ರಹ

ನಮ್ಮೂರ ಬಳಗದಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ; ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಿಹಿ ವಿತರಣೆ: ವಾಲ್ಮೀಕಿ ಆದರ್ಶಗಳು ಸಮಾನತೆಯ ಸಮಾಜ ನಿರ್ಮಾಣಕ್ಕೆ ದಾರಿದೀಪ – ಬಿ. ಲೋಕೇಶ್

ಚನ್ನಮ್ಮ ಫ್ರೀಡಂ ಪಾರ್ಕ್ ನಿರ್ಮಾಣಕ್ಕೆ ₹40 ಕೋಟಿ ಅನುದಾನ; ವಾಯುವ್ಯ ಸಾರಿಗೆ ಸಂಸ್ಥೆಗೆ ಕಿತ್ತೂರು ರಾಣಿ ಚನ್ನಮ್ಮ ಹೆಸರು: ಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ

ಶತಮಾನದ ಸಂಕಲ್ಪಕ್ಕೆ ಶಿಸ್ತಿನ ಹೆಜ್ಜೆ; ಶಿವಮೊಗ್ಗದಲ್ಲಿ ಕೇಸರಿಮಯವಾದ ಪಥಸಂಚಲನ! ಸಂಘವೇ ಸಮಾಜದ ಸಂಘಟನೆ; ರಾಷ್ಟ್ರ ಪುನರ್‌ನಿರ್ಮಾಣಕ್ಕೆ ಸಜ್ಜನ ಶಕ್ತಿ ಒಂದಾಗಲಿ: ಮುಕುಂದ ಸಿ.ಆರ್

ಯುವಶಕ್ತಿಯೇ ರಾಷ್ಟ್ರಶಕ್ತಿ; ವಿದ್ಯಾರ್ಥಿಗಳ ಸಾಧನೆಗೆ ಸಂಸ್ಕಾರವೇ ಬುನಾದಿ: ಸಂಸದ ಬಿ.ವೈ. ರಾಘವೇಂದ್ರ

ಜೀವದ ಹಂಗು ತೊರೆದು ಜನರ ಪ್ರಾಣ ಉಳಿಸಿದ ಮಾವುತರು, ಕಾವಾಡಿಗರಿಗೆ ಸಿ.ಎಸ್. ಷಡಾಕ್ಷರಿ ಅವರಿಂದ ಅಭಿನಂದನೆ; ಸಕ್ರೆಬೈಲ್ ಆನೆ ಶಿಬಿರಕ್ಕೆ ಭೇಟಿ ನೀಡಿ ಧೈರ್ಯಶಾಲಿ ಸಿಬ್ಬಂದಿಗೆ ಸನ್ಮಾನ: ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದ ಸರ್ಕಾರಿ ನೌಕರರ ಸಂಘ

Leave a Comment