‘ಬಸವ ಮಂಟಪ’ ಕೃತಿಯಲ್ಲಿನ ಆಕ್ಷೇಪಾರ್ಹ ಅಂಶಗಳಿಗೆ ಆಕ್ರೋಶ; ಕೃತಿ ಮುಟ್ಟುಗೋಲು ಹಾಕಿದ ಸರ್ಕಾರದ ಕ್ರಮಕ್ಕೆ ಬೆಕ್ಕಿನಕಲ್ಮಠ ಶ್ರೀಗಳು ಸ್ವಾಗತ
ಶಿವಮೊಗ್ಗ: ಶತಮಾನಗಳು ಕಳೆದರೂ ಬಸವಣ್ಣನವರ ವಿಚಾರಧಾರೆಗೆ ಮಸಿ ಬಳಿಯಲು ಸಾಧ್ಯವಿಲ್ಲ. ಜಾತಿ, ಧರ್ಮ, ಮೇಲು-ಕೀಳುಗಳ ಸಂಕೋಲೆಗಳನ್ನು ಕಿತ್ತೆಸೆದು ಸಮಾನತೆ, ಕಾಯಕ, ದಾಸೋಹ ಮತ್ತು ಮಾನವೀಯತೆಯ ಬೆಳಕು ಹರಿಸಿದ ವಿಶ್ವಮಾನವ ಬಸವಣ್ಣನವರ ವ್ಯಕ್ತಿತ್ವವನ್ನೇ ಅವಹೇಳನ ಮಾಡುವ ಪ್ರಯತ್ನಗಳು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡುತ್ತವೆ. ಇಂತಹ ಕೃತ್ಯಗಳು ಕೇವಲ ಒಬ್ಬ ಮಹಾನ್ ಶರಣರಿಗಷ್ಟೇ ಮಾಡುವ ಅಪಮಾನವಲ್ಲ, ಅವರ ತತ್ವಾದರ್ಶಗಳನ್ನು ಗೌರವಿಸುವ ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆ ತರುವ ಕೃತ್ಯಗಳಾಗಿವೆ ಎಂದು ಶಿವಮೊಗ್ಗದ ಬೆಕ್ಕಿನಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮರುಘರಾಜೇಂದ್ರ ಮಹಾಸ್ವಾಮೀಜಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾನ್ ಮಾನವತಾವಾದಿ, ಸಮಾಜ ಸುಧಾರಕ ಬಸವಣ್ಣನವರ ವ್ಯಕ್ತಿತ್ವಕ್ಕೆ ಚ್ಯುತಿ ತರುವ ರೀತಿಯಲ್ಲಿ ಬರೆಯಲಾಗಿದೆ ಎನ್ನಲಾದ ‘ಬಸವ ಮಂಟಪ’ ಕೃತಿಯ ಲೇಖಕ ರವಿ ಹಂಜ್ ಹಾಗೂ ಕೃತಿಯ ಪ್ರಕಾಶಕರ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶ್ರೀಗಳು ಆಗ್ರಹಿಸಿದ್ದಾರೆ.

ಬಸವಣ್ಣನವರ ಘನತೆ, ಗೌರವ ಹಾಗೂ ತತ್ವಾದರ್ಶಗಳಿಗೆ ಧಕ್ಕೆ ತರುವಂತಹ ಕೃತಿಗಳನ್ನು ಸಮಾಜದಲ್ಲಿ ಪ್ರಸಾರ ಮಾಡಲು ಅವಕಾಶ ನೀಡಬಾರದು. ಈ ಹಿನ್ನೆಲೆಯಲ್ಲಿ ಆಕ್ಷೇಪಾರ್ಹ ಅಂಶಗಳನ್ನು ಒಳಗೊಂಡಿದೆ ಎನ್ನಲಾದ ‘ಬಸವ ಮಂಟಪ’ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಸರ್ಕಾರ ಕೈಗೊಂಡಿರುವ ಕ್ಷಿಪ್ರ ಕ್ರಮ ಸ್ವಾಗತಾರ್ಹವಾಗಿದೆ ಎಂದು ಬೆಕ್ಕಿನಕಲ್ಮಠ ಶ್ರೀಗಳು ತಿಳಿಸಿದ್ದಾರೆ.
ಬಸವಣ್ಣನವರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಅವರು ಇಡೀ ಮನುಕುಲಕ್ಕೆ ಸಮಾನತೆ, ಸಹಬಾಳ್ವೆ ಮತ್ತು ಮಾನವೀಯತೆಯ ಸಂದೇಶ ಸಾರಿದ ವಿಶ್ವಮಾನವ. ಅವರ ವಚನಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ಇಂತಹ ಮಹಾನ್ ಚೇತನಗಳ ಕುರಿತು ಬರೆಯುವಾಗ ಲೇಖಕರು ಸಾಮಾಜಿಕ ಜವಾಬ್ದಾರಿ, ಐತಿಹಾಸಿಕ ಸತ್ಯ ಮತ್ತು ಜನರ ಭಾವನೆಗಳನ್ನು ಗೌರವಿಸಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಮಹನೀಯರ ವ್ಯಕ್ತಿತ್ವಕ್ಕೆ ಧಕ್ಕೆ ತರುವುದನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸಮಾಜದಲ್ಲಿ ಶಾಂತಿ, ಸಾಮರಸ್ಯ ಮತ್ತು ಪರಸ್ಪರ ಗೌರವದ ವಾತಾವರಣ ಉಳಿಯಬೇಕಾದರೆ ಇಂತಹ ವಿವಾದಾತ್ಮಕ ಕೃತಿಗಳ ವಿಚಾರದಲ್ಲಿ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡಬೇಕು. ಶರಣ ಪರಂಪರೆ ಹಾಗೂ ಬಸವಣ್ಣನವರ ವಿಚಾರಧಾರೆಯನ್ನು ಅವಹೇಳನ ಮಾಡುವವರಿಗೆ ಸರ್ಕಾರದ ಈ ಕ್ರಮ ಸ್ಪಷ್ಟ ಎಚ್ಚರಿಕೆಯಾಗಬೇಕು. ತಪ್ಪಿತಸ್ಥರ ವಿರುದ್ಧ ಕಾನೂನುಬದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಬೆಕ್ಕಿನಕಲ್ಮಠ ಶ್ರೀಗಳು ಒತ್ತಾಯಿಸಿದ್ದಾರೆ.






