ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಶಾಲೆಗಳಲ್ಲಿ ಹಿಜಾಬ್ ಕಿಡಿ: ಸರ್ಕಾರದ ವಿರುದ್ಧ ಬಿಜೆಪಿ ನಾಯಕರ ಕೆಂಡಾಮಂಡಲ

On: May 14, 2026 6:14 PM
Follow Us:

ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ವಿವಾದವನ್ನು ಕಾಂಗ್ರೆಸ್ ಸರ್ಕಾರ ಮತ್ತೆ ಮುನ್ನೆಲೆಗೆ ತಂದಿರುವುದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಸರ್ಕಾರದ ಈ ನಡೆಯನ್ನು ‘ಮತೀಯ ಓಲೈಕೆಯ ಪರಮಾವಧಿ’ ಎಂದು ಕರೆದಿರುವ ಬಿಜೆಪಿ ನಾಯಕರು, ಇದು ಮಕ್ಕಳ ಮನಸ್ಸಿನಲ್ಲಿ ವಿಷಬೀಜ ಬಿತ್ತುವ ಪ್ರಯತ್ನ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಮಹೇಶ್ ಟೆಂಗಿನಕಾಯಿ, ಯಶ್‌ಪಾಲ್ ಸುವರ್ಣ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಸಿ.ಟಿ. ರವಿ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಶಾಸಕ ಮಹೇಶ್ ಟೆಂಗಿನಕಾಯಿ ಮಾತನಾಡಿ, “2022ರಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ವಸ್ತ್ರಸಂಹಿತೆಯನ್ನು ನ್ಯಾಯಾಲಯವೇ ಎತ್ತಿ ಹಿಡಿದಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಯಾವುದೇ ಸಮುದಾಯದ ಬೇಡಿಕೆ ಇಲ್ಲದಿದ್ದರೂ ಹಳೆಯ ವಿವಾದವನ್ನು ಕೆದಕುತ್ತಿದೆ. ದಾವಣಗೆರೆ ಉಪಚುನಾವಣೆ ಬಳಿಕ ಅಲ್ಪಸಂಖ್ಯಾತರನ್ನು ಓಲೈಸುವ ಭರದಲ್ಲಿ ಸರ್ಕಾರ ಇಂತಹ ಅಪಾಯಕಾರಿ ನಿರ್ಧಾರ ಕೈಗೊಂಡಿದೆ. ಶಾಲಾ ಆವರಣದಲ್ಲಿ ಜಾತಿ, ಮತ ಮೀರಿ ಎಲ್ಲರೂ ಒಂದೇ ಎಂಬ ಭಾವನೆ ಮೂಡಿಸುವ ಸಮವಸ್ತ್ರಕ್ಕೆ ಧಕ್ಕೆ ತರಬಾರದು,” ಎಂದು ಆಗ್ರಹಿಸಿದರು.

“ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಳೆ ಬಂದರೆ ನೀರು ಸೋರುತ್ತದೆ, ಮಕ್ಕಳಿಗೆ ಕನಿಷ್ಠ ಮೂಲಸೌಕರ್ಯಗಳಿಲ್ಲ. ಇವುಗಳತ್ತ ಗಮನ ಹರಿಸದ ಸರ್ಕಾರ, ಹಿಜಾಬ್ ಹೆಸರಿನಲ್ಲಿ ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ,” ಎಂದು ಶಾಸಕ ಯಶ್‌ಪಾಲ್ ಸುವರ್ಣ ಕಿಡಿಕಾರಿದರು. “ಈ ವಿಚಾರ ಈಗಲೂ ಸುಪ್ರೀಂ ಕೋರ್ಟ್‌ನಲ್ಲಿದೆ. ನ್ಯಾಯಾಲಯದಲ್ಲಿರುವ ಪ್ರಕರಣದ ಮೇಲೆ ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವುದು ನ್ಯಾಯಾಂಗ ನಿಂದನೆಯಾಗುತ್ತದೆ. ಹಿಜಾಬ್‌ಗೆ ಅವಕಾಶ ನೀಡಿದರೆ ನಾಳೆ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬರುವುದು ಅನಿವಾರ್ಯವಾಗುತ್ತದೆ. ಈ ಅನಾಹುತಕ್ಕೆ ಸರ್ಕಾರವೇ ನೇರ ಹೊಣೆ,” ಎಂದು ಎಚ್ಚರಿಸಿದರು.

ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, “ನಾಲ್ಕು ವರ್ಷಗಳ ಹಿಂದೆ ಸಮಾಜದಲ್ಲಿ ನೆಮ್ಮದಿ ತರಲು ತಂದಿದ್ದ ನಿಷೇಧವನ್ನು ಹಿಂಪಡೆಯುವ ಮೂಲಕ ಕಾಂಗ್ರೆಸ್ ಮತ್ತೆ ರಾಜ್ಯದಲ್ಲಿ ಬೆಂಕಿ ಹಚ್ಚಲು ಹೊರಟಿದೆ. ಅಲ್ಪಸಂಖ್ಯಾತರನ್ನು ಬೆಂಬಲಿಸುವ ನೆಪದಲ್ಲಿ ಬಹುಸಂಖ್ಯಾತರನ್ನು ವಿರೋಧಿಗಳನ್ನಾಗಿ ಮಾಡುವ ಕುತಂತ್ರವಿದು. ಮುಸ್ಲಿಮರನ್ನು ನಿಮ್ಮ ಪಕ್ಕದಲ್ಲಿ ನಿಲ್ಲಿಸಿಕೊಳ್ಳಲು ನೀವು ಇಡೀ ಸಮಾಜದ ಶಾಂತಿ ಕದಡುತ್ತಿದ್ದೀರಿ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರದ ಸುತ್ತೋಲೆಯ ತಾರತಮ್ಯವನ್ನು ಎತ್ತಿ ತೋರಿಸಿದ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, “ಹಿಜಾಬ್‌ಗೆ ಅನುಮತಿ ನೀಡಿ, ಕೇಸರಿ ಶಾಲು ನಿಷೇಧಿಸಿರುವುದು ಸರ್ಕಾರದ ಮರಿ ತಾಲಿಬಾನಿ ಮನಸ್ಥಿತಿಯನ್ನು ತೋರಿಸುತ್ತದೆ. 1983ರ ಶಿಕ್ಷಣ ಕಾಯ್ದೆಯ ಅಡಿಯಲ್ಲಿ ಸಮವಸ್ತ್ರ ಪದ್ಧತಿ ಜಾರಿಗೆ ಬಂದಿದ್ದು ಎಲ್ಲ ಮಕ್ಕಳು ಸಮಾನರಾಗಿ ಇರಲಿ ಎಂಬ ಕಾರಣಕ್ಕೆ. ಹಿಜಾಬ್ ಸಂಪ್ರದಾಯ ಇರುವುದಾದರೆ ಅದನ್ನು ಮನೆಯಲ್ಲಿ ಪಾಲಿಸಲಿ, ಶಾಲೆಯೊಳಗೆ ಬೇಡ. ಒಂದು ವೇಳೆ ಎಲ್ಲ ಮತಗಳ ಸಂಪ್ರದಾಯಕ್ಕೂ ಅವಕಾಶ ನೀಡುವುದಾದರೆ ಅದನ್ನು ಸ್ಪಷ್ಟಪಡಿಸಿ. ನಿಮ್ಮ ಜಾತ್ಯತೀತತೆ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಬಾರದು,” ಎಂದು ತಿವಿದರು.
ಬಿಜೆಪಿಯ ಪ್ರಮುಖ ಒತ್ತಾಯಗಳು:

  • ಹಿಜಾಬ್ ಸಂಬಂಧ ಹೊರಡಿಸಿದ ವಿವಾದಾತ್ಮಕ ನಿರ್ಣಯವನ್ನು ತಕ್ಷಣ ಹಿಂಪಡೆಯಬೇಕು.
  • 1983ರ ಕರ್ನಾಟಕ ಶಿಕ್ಷಣ ಕಾಯ್ದೆಯನ್ವಯ ಜಾರಿಯಲ್ಲಿರುವ ವಸ್ತ್ರಸಂಹಿತೆಯನ್ನು ಮುಂದುವರಿಸಬೇಕು.
  • ಶಾಲೆಗಳಲ್ಲಿ ಧಾರ್ಮಿಕ ಭಾವನೆ ಕೆರಳಿಸುವುದನ್ನು ಬಿಟ್ಟು ಮೂಲಭೂತ ಸೌಕರ್ಯ ಒದಗಿಸಲು ಆದ್ಯತೆ ನೀಡಬೇಕು.
  • ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪು ಬರುವವರೆಗೂ ಯಥಾಸ್ಥಿತಿ ಕಾಪಾಡಬೇಕು.

ಈ ನಿರ್ಧಾರವನ್ನು ಕೈಬಿಡದಿದ್ದರೆ ರಾಜ್ಯಾದ್ಯಂತ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಉಗ್ರ ಹೋರಾಟ ಹಮ್ಮಿಕೊಳ್ಳಲಿವೆ ಎಂದು ನಾಯಕರು ಜಂಟಿಯಾಗಿ ಎಚ್ಚರಿಕೆ ನೀಡಿದ್ದಾರೆ.

K.M.Sathish Gowda

Join WhatsApp

Join Now

Facebook

Join Now

Read more

ಬರದ ನಡುವೆ ರೈತರ ನೆರವಿಗೆ ಧಾವಿಸದ ಸರ್ಕಾರ: ಎಕರೆಗೆ ₹50 ಸಾವಿರ ಪರಿಹಾರಕ್ಕೆ ಬಿ.ವೈ. ವಿಜಯೇಂದ್ರ ಒತ್ತಾಯ: ರಾಜ್ಯದ ಹಣಕಾಸು ಸ್ಥಿತಿಗತಿ ಕುರಿತು ಶ್ವೇತಪತ್ರಕ್ಕೆ ಆಗ್ರಹ

ಪ್ರಜಾಪ್ರಭುತ್ವದ ಶ್ರೇಷ್ಠತೆಗೆ ಸವಾಲೆಸೆದ ಶ್ರೀ ತರಳಬಾಳು ಜಗದ್ಗುರುಗಳು: ನಾಲ್ವಡಿಯವರ ‘ಜನಹಿತ’ದ ಮಾದರಿ ಇಂದೇಕೆ ಸಾಧ್ಯವಾಗುತ್ತಿಲ್ಲ!?ದಾವಣಗೆರೆಯಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪುತ್ಥಳಿ ಅನಾವರಣ: ವ್ಯವಸ್ಥೆಯ ಆತ್ಮಾವಲೋಕನಕ್ಕೆ ತರಳಬಾಳು ಶ್ರೀಗಳ ಕರೆ

ಮೂರು ಸಾವಿರ ಕಂಠಗಳು… ಒಂದೇ ನಾದ… ಬಸವಣ್ಣನವರ ವಚನಗಳಿಗೆ ದಾವಣಗೆರೆ ಸಾಕ್ಷಿ!: ‘ವಚನ ನಾದಲೋಕ’ದಲ್ಲಿ ಎಲ್ಲರೂ ಭಾಗವಹಿಸಿ ಎಂದು ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಮನವಿ

‘ಗಲಾಟೆ ಗಣಪತಿ’ಗೆ ತೆರೆ: ಭಯದಿಂದ ಭಕ್ತಿಯ ಸಂಭ್ರಮದತ್ತ ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ: ಎಸ್‌ಪಿ ನಿಖಿಲ್ ಬಿ. ಅವರ ಕಾರ್ಯತಂತ್ರದಲ್ಲಿ ತಂತ್ರಜ್ಞಾನಾಧಾರಿತ ಕಣ್ಗಾವಲು: ಶಾಂತಿಯುತ ಮೆರವಣಿಗೆಗೆ ಸಾರ್ವಜನಿಕರ ಮೆಚ್ಚುಗೆ

​ಶ್ರೀ ಜಗದ್ಗುರು ರೇಣುಕಾಚಾರ್ಯರು-ಶರಣರನ್ನು ಬೇರ್ಪಡಿಸುವ ಕುತಂತ್ರ ನಿಲ್ಲಲಿ!: ಒಳಗಿನ ಶತ್ರುಗಳಿಂದಲೇ ಧರ್ಮಕ್ಕೆ ಕಂಟಕ, ಸ್ವಾರ್ಥಿಗಳ ಕಪಟ ನಾಟಕ ಇನ್ಮುಂದೆ ನಡೆಯಲ್ಲ!: ಧರ್ಮದ್ರೋಹಿಗಳಿಗೆ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಖಡಕ್ ಎಚ್ಚರಿಕೆ!

ರೈತರೆ, ಸಾಲಕ್ಕೆ ಹೆದರಬೇಡಿ! ಆತ್ಮಹತ್ಯೆ ಮಾಡಿಕೊಳ್ಳಬೇಡಿ; ಎದೆತಟ್ಟಿ ‘ನಾನು ರೈತ’ ಎಂದು ಹೇಳಿ ಹೋರಾಡಿ: ಬರ ಪರಿಹಾರದ ಹೆಸರಿನಲ್ಲಿ ರೈತರನ್ನು ಕಾಯಿಸುವುದೇಕೆ? ಶಾಶ್ವತ ನೀರಾವರಿ ಕಲ್ಪಿಸಿ, ಸಾಲಮನ್ನಾ ಮಾಡಿ: ಸಿಎಂಗೆ ಎಚ್.ಆರ್. ಬಸವರಾಜಪ್ಪ ಒತ್ತಾಯ

Leave a Comment