ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಅಡಕೆ ಬೆಳೆಗಾರರ ಬದುಕಿನ ಮೇಲೆ ‘ಪಾನ್‌ ನಿಷೇಧ’ದ ಹೊಡೆತ; ರೈತರ ಬೆನ್ನಿಗೆ ಚೂರಿ ಹಾಕಿದ ಸರ್ಕಾರ: ಏಕಾಏಕಿ ನಿರ್ಧಾರಕ್ಕೆ ಸಂಸದ ಬಿ.ವೈ. ರಾಘವೇಂದ್ರ ಆಕ್ರೋಶ

On: August 14, 2026 1:04 PM
Follow Us:

ಶಿವಮೊಗ್ಗ: ಬಾನಿನಿಂದ ಬೀಳುವ ಮಳೆಹನಿಯೂ ರೈತನ ಕಣ್ಣೀರ ಮುಂದೆ ಮಸುಕಾಗುವ ಕಾಲವಿದು. ಸಾಲ-ಸೋಲ ಮಾಡಿ, ಕೊಳೆ ರೋಗ ಹಾಗೂ ಹಳದಿ ಎಲೆಯಂತಹ ಮಾರಕ ರೋಗಗಳ ಜೊತೆ ಹೋರಾಡಿ, ಕೊನೆಗೂ ರಕ್ತವನ್ನು ನೀರು ಮಾಡಿ ಬೆಳೆದ ಅಡಿಕೆ ಕೊಯ್ಲಿಗೆ ಬಂತಲ್ಲ ಎನ್ನುವಷ್ಟರಲ್ಲಿ, ಮಲೆನಾಡಿನ ರೈತನ ಮುಖದಲ್ಲಿ ಮೂಡಿದ್ದ ಪುಟ್ಟ ನಗುವನ್ನು ಸರ್ಕಾರ ಒಂದೇ ಒಂದು ಪ್ರಕಟಣೆಯ ಮೂಲಕ ಕಸಿದುಕೊಂಡಿದೆ. ಇಡೀ ವರ್ಷದ ಬೆವರು, ನಿರೀಕ್ಷೆ ಮತ್ತು ಕುಟುಂಬದ ಭವಿಷ್ಯ ಮಾರುಕಟ್ಟೆಯ ಹೊಸ್ತಿಲಲ್ಲಿ ನಿಂತಿರುವಾಗಲೇ, ಆಹಾರ ಸುರಕ್ಷತೆ ಇಲಾಖೆಯ ನೆಪವೊಡ್ಡಿ ರಾಜ್ಯ ಸರ್ಕಾರ ಗುಟ್ಕಾ ಹಾಗೂ ಪಾನ್ ಮಸಾಲ ನಿಷೇಧದ ‘ದಿಢೀರ್ ಆದೇಶ’ ಎಂಬ ಬಾಂಬ್ ಸಿಡಿಸಿದೆ! ಕತ್ತಲಲ್ಲಿ ಕನ್ನ ಹಾಕಿದಂತೆ, ಬೆಳೆ ಕೊಯ್ಲಿನ ಸಮೀಪಿಸುತ್ತಿರುವ ವೇಳೆಯಲ್ಲೇ ಕೈಗೊಂಡ ಈ ನಿರ್ಧಾರ ಹಾಗೂ ದುರುದ್ದೇಶಪೂರಿತ ನಡೆಯಿಂದಾಗಿ ಲಕ್ಷಾಂತರ ಅಡಿಕೆ ಬೆಳೆಗಾರರ ಬದುಕು ಒಂದೇ ರಾತ್ರಿಯಲ್ಲಿ ಬೀದಿಗೆ ಬೀಳುವಂತಾಗಿದೆ. ಸರ್ಕಾರದ ಈ ದ್ರೋಹದ ವಿರುದ್ಧ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸಂಸದ ಬಿ. ವೈ. ರಾಘವೇಂದ್ರ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುಟ್ಕಾ ಮತ್ತು ಪಾನ್‌ ಮಸಾಲಾ ಮಾರಾಟಕ್ಕೆ ಒಂದು ವರ್ಷದ ಅವಧಿಗೆ ನಿಷೇಧ ಹೇರಿರುವ ರಾಜ್ಯ ಸರ್ಕಾರದ ನಿರ್ಧಾರ ಇದೀಗ ಅಡಕೆ ಬೆಳೆಗಾರರು, ವರ್ತಕರು ಹಾಗೂ ಮಲೆನಾಡಿನ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಆತಂಕಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರದ ಏಕಾಏಕಿ ನಿರ್ಧಾರವನ್ನು ತೀವ್ರವಾಗಿ ಖಂಡಿಸಿರುವ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಕೂಡಲೇ ನಿಷೇಧವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಟ್ಕಾ, ತಂಬಾಕು ಹಾಗೂ ನಿಕೋಟಿನ್ ಉತ್ಪನ್ನಗಳ ಪರವಾಗಿ ಬಿಜೆಪಿ ಎಂದಿಗೂ ನಿಂತಿಲ್ಲ. ಜನರ ಆರೋಗ್ಯದ ದೃಷ್ಟಿಯಿಂದ ಅವುಗಳ ವಿರುದ್ಧ ಕಾನೂನು ಕ್ರಮ ಅಗತ್ಯ. ಆದರೆ, ಇಂತಹ ಸೂಕ್ಷ್ಮ ನಿರ್ಧಾರ ಕೈಗೊಳ್ಳುವಾಗ ಅಡಕೆ ಬೆಳೆಗಾರರ ಹಿತವನ್ನೂ ಸರ್ಕಾರ ಪರಿಗಣಿಸಬೇಕಿತ್ತು ಎಂದು ಹೇಳಿದರು.

ರಾಜ್ಯದಲ್ಲಿ ಅಡಕೆ ಬೆಳೆಗಾರರು ಈಗಾಗಲೇ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಲೆನಾಡಿನಲ್ಲಿ ಹಳದಿ ಎಲೆ ರೋಗ, ಕೊಳೆರೋಗ ಸೇರಿದಂತೆ ವಿವಿಧ ರೋಗಗಳಿಂದ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಅಡಕೆ ಬೆಳೆಯುವ ಪ್ರದೇಶ ವಿಸ್ತಾರವಾಗುತ್ತಿದ್ದರೂ ಇಳುವರಿ ಗಣನೀಯವಾಗಿ ಕುಸಿದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಹೊಸ ನಿರ್ಧಾರ ಅಡಕೆ ಮಾರುಕಟ್ಟೆಯ ಮೇಲೆ ಮತ್ತಷ್ಟು ಒತ್ತಡ ಹೇರುವ ಆತಂಕವಿದೆ ಎಂದು ರಾಘವೇಂದ್ರ ಹೇಳಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸೊರಬ, ಶಿಕಾರಿಪುರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಅಡಕೆ ಕೊಯ್ಲು ಈಗಾಗಲೇ ಆರಂಭವಾಗಿದೆ. ಮಲೆನಾಡು ಸೇರಿದಂತೆ ಮಧ್ಯ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅಡಕೆ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಸಾವಿರಾರು ಕುಟುಂಬಗಳ ಬದುಕು ಅಡಕೆ ಬೆಳೆಯನ್ನೇ ಅವಲಂಬಿಸಿದೆ. ಇಂತಹ ಸಂದರ್ಭದಲ್ಲಿ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ನಿರ್ಧಾರವನ್ನು ಸರ್ಕಾರ ಏಕಾಏಕಿ ಕೈಗೊಂಡಿರುವುದು ರೈತರ ಆತಂಕವನ್ನು ಹೆಚ್ಚಿಸಿದೆ ಎಂದು ಅವರು ಹೇಳಿದರು.

ಅಡಕೆ ಮಾರುಕಟ್ಟೆಯಲ್ಲಿನ ದರ ಕುಸಿತದ ಬಗ್ಗೆ ಆತಂಕ ವ್ಯಕ್ತಪಡಿಸಿದ ಸಂಸದರು, ಇತ್ತೀಚೆಗೆ ರಾಶಿ ಅಡಕೆಯ ಬೆಲೆ ಕ್ವಿಂಟಲ್‌ಗೆ ಸುಮಾರು ₹53 ಸಾವಿರದಿಂದ ₹55 ಸಾವಿರದವರೆಗೆ ಇತ್ತು. ಸರ್ಕಾರದ ನಿಷೇಧದ ಘೋಷಣೆಯ ಬೆನ್ನಲ್ಲೇ ಸುಮಾರು ₹4 ಸಾವಿರದಿಂದ ₹5 ಸಾವಿರದವರೆಗೆ ದರ ಕುಸಿದಿದೆ ಎಂಬ ಆತಂಕಕಾರಿ ಬೆಳವಣಿಗೆ ಕಂಡುಬಂದಿದೆ ಎಂದು ಹೇಳಿದರು.

ಅಡಕೆ ಕೊಯ್ಲಿನ ಪ್ರಮುಖ ಹಂತದಲ್ಲೇ ಇಂತಹ ನಿರ್ಧಾರ ಕೈಗೊಂಡಿರುವುದು ರೈತರ ಮೇಲೆ ನೇರ ಹೊರೆ ಬೀರುವ ಸಾಧ್ಯತೆಯಿದೆ. ಈಗಾಗಲೇ ಬೆಳೆಗಾರರು ಉತ್ಪಾದನಾ ವೆಚ್ಚ, ರೋಗಬಾಧೆ ಹಾಗೂ ಇಳುವರಿ ಕುಸಿತದಿಂದ ಸಂಕಷ್ಟದಲ್ಲಿದ್ದಾರೆ. ಅದರ ನಡುವೆ ಮಾರುಕಟ್ಟೆ ದರದಲ್ಲೂ ಕುಸಿತ ಉಂಟಾದರೆ ರೈತರ ಪರಿಸ್ಥಿತಿ ಮತ್ತಷ್ಟು ದುಸ್ತರವಾಗಲಿದೆ ಎಂದು ಅವರು ಎಚ್ಚರಿಸಿದರು.

ಅಡಕೆ ಬೆಳೆಗಾರರು ವರ್ಷವಿಡೀ ಶ್ರಮಿಸಿ ಬೆಳೆ ಬೆಳೆಸುತ್ತಾರೆ. ಕೊಯ್ಲು, ಸಂಸ್ಕರಣೆ ಹಾಗೂ ಮಾರುಕಟ್ಟೆಗೆ ಸಾಗಿಸುವ ಹಂತದಲ್ಲಿ ಅವರಿಗೆ ಉತ್ತಮ ದರ ಸಿಗುವುದು ಅತ್ಯಂತ ಮುಖ್ಯ. ಇಂತಹ ಸಂದರ್ಭದಲ್ಲಿ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಸರ್ಕಾರದ ನೀತಿಗಳು ಸಾವಿರಾರು ರೈತರ ಭವಿಷ್ಯವನ್ನು ಸಂಕಷ್ಟಕ್ಕೆ ಸಿಲುಕಿಸಬಹುದು.

ಅಡಕೆ ಬೆಳೆಗಾರರ ಆದಾಯ ಕಡಿಮೆಯಾಗುತ್ತಿರುವುದನ್ನು ಸರ್ಕಾರದ ವಿವಿಧ ವರದಿಗಳೂ ಸೂಚಿಸುತ್ತಿವೆ. ಬೆಳೆ ವಿಸ್ತೀರ್ಣ ಹೆಚ್ಚಾಗಿದ್ದರೂ ಇಳುವರಿ ಕಡಿಮೆಯಾಗಿರುವ ಪರಿಸ್ಥಿತಿಯಲ್ಲಿ ರೈತರಿಗೆ ಬೆಂಬಲ ನೀಡಬೇಕಾದ ಸರ್ಕಾರವೇ ಮತ್ತೊಂದು ರೀತಿಯ ಹೊರೆ ಹೇರುವುದು ಎಷ್ಟು ಸಮಂಜಸ ಎಂದು ರಾಘವೇಂದ್ರ ಪ್ರಶ್ನಿಸಿದರು.

ಅಡಕೆ ಕ್ಷೇತ್ರದ ಸಮಸ್ಯೆ ಕೇವಲ ಗುಟ್ಕಾ ಅಥವಾ ಪಾನ್‌ ಮಸಾಲಾ ಮಾರುಕಟ್ಟೆಗೆ ಸೀಮಿತವಾಗಿಲ್ಲ. ಅಕ್ರಮವಾಗಿ ದೇಶದ ಗಡಿಗಳನ್ನು ದಾಟಿ ಅಡಕೆ ಬರುತ್ತಿರುವುದು ದೇಶೀಯ ಬೆಳೆಗಾರರಿಗೆ ದೊಡ್ಡ ಸವಾಲಾಗಿದೆ. ಬಾಂಗ್ಲಾದೇಶ, ಮ್ಯಾನ್ಮಾರ್ ಸೇರಿದಂತೆ ನೆರೆಯ ರಾಷ್ಟ್ರಗಳಿಂದ ಅಕ್ರಮವಾಗಿ ಅಡಕೆ ಪ್ರವೇಶಿಸುವುದನ್ನು ತಡೆಯಲು ಕೇಂದ್ರ ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರಾಘವೇಂದ್ರ ಹೇಳಿದರು.

ಆಮದು ಸುಂಕ ಹೆಚ್ಚಿಸುವುದು, ಗಡಿಯಲ್ಲಿ ಅಕ್ರಮ ಆಮದನ್ನು ನಿಯಂತ್ರಿಸುವುದು ಸೇರಿದಂತೆ ಅಡಕೆ ಬೆಳೆಗಾರರ ಹಿತದೃಷ್ಟಿಯಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರವೂ ಇದೇ ರೀತಿಯಲ್ಲಿ ರೈತರ ಹಿತವನ್ನು ಕೇಂದ್ರದಲ್ಲಿಟ್ಟುಕೊಂಡು ನೀತಿ ರೂಪಿಸಬೇಕು ಎಂದು ಅವರು ಒತ್ತಾಯಿಸಿದರು.

ಜನರ ಆರೋಗ್ಯದ ಬಗ್ಗೆ ಕಾಳಜಿ ಇದೆ ಎಂಬ ಕಾರಣ ನೀಡಿ ಗುಟ್ಕಾ ಮತ್ತು ಪಾನ್‌ ಮಸಾಲಾ ನಿಷೇಧಿಸುವ ಸರ್ಕಾರ, ಗ್ರಾಮೀಣ ಪ್ರದೇಶಗಳಲ್ಲಿ ಮದ್ಯದ ಅಂಗಡಿಗಳ ಲೈಸೆನ್ಸ್‌ ಹೆಚ್ಚುತ್ತಿರುವ ಬಗ್ಗೆ ಏಕೆ ಮೌನವಾಗಿದೆ ಎಂದು ರಾಘವೇಂದ್ರ ಪ್ರಶ್ನಿಸಿದರು.

ಆರೋಗ್ಯದ ವಿಚಾರದಲ್ಲಿ ಸರ್ಕಾರಕ್ಕೆ ನಿಜವಾದ ಕಾಳಜಿ ಇದ್ದರೆ ಎಲ್ಲ ರೀತಿಯ ವ್ಯಸನಕಾರಿ ಉತ್ಪನ್ನಗಳ ವಿಚಾರದಲ್ಲೂ ಸಮಾನ ಮಾನದಂಡ ಅನುಸರಿಸಬೇಕು. ಒಂದು ಕಡೆ ಆರೋಗ್ಯದ ಹೆಸರಿನಲ್ಲಿ ನಿರ್ಧಾರ ಕೈಗೊಂಡು ಮತ್ತೊಂದು ಕಡೆ ಮದ್ಯ ಮಾರಾಟಕ್ಕೆ ಅವಕಾಶ ವಿಸ್ತರಿಸುವುದು ದ್ವಂದ್ವ ನೀತಿಯಲ್ಲವೇ ಎಂದು ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಅಡಕೆ ಹಾಗೂ ತಂಬಾಕು ಪ್ರತ್ಯೇಕ ಉತ್ಪನ್ನಗಳಾಗಿದ್ದು, ಅವುಗಳನ್ನು ಒಂದೇ ದೃಷ್ಟಿಕೋನದಿಂದ ನೋಡುವುದು ಸರಿಯಲ್ಲ. ತಂಬಾಕು ಮಿಶ್ರಿತ ಉತ್ಪನ್ನಗಳ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಯಾರ ವಿರೋಧವೂ ಇಲ್ಲ. ಆದರೆ ಅದರ ಪರಿಣಾಮ ಅಡಕೆ ಬೆಳೆಗಾರರ ಮಾರುಕಟ್ಟೆಯ ಮೇಲೆ ಬೀಳದಂತೆ ಸರ್ಕಾರ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ರಾಘವೇಂದ್ರ ಹೇಳಿದರು.

ರಾಜ್ಯ ಸರ್ಕಾರಕ್ಕೆ ನಿರ್ದಿಷ್ಟ ಅವಧಿಗೆ ನಿಷೇಧ ವಿಧಿಸುವ ಅಧಿಕಾರವಿದ್ದರೂ, ಆ ಅಧಿಕಾರವನ್ನು ಬಳಸುವಾಗ ಅದರ ಸಾಮಾಜಿಕ, ಆರ್ಥಿಕ ಹಾಗೂ ಕೃಷಿ ಕ್ಷೇತ್ರದ ಪರಿಣಾಮಗಳನ್ನೂ ಪರಿಗಣಿಸಬೇಕು. ಕಾನೂನಿನ ಅಧಿಕಾರವನ್ನು ಬಳಸುವುದು ಬೇರೆ; ಅದರ ಪರಿಣಾಮವನ್ನು ಅಂದಾಜಿಸದೆ ನಿರ್ಧಾರ ಕೈಗೊಳ್ಳುವುದು ಬೇರೆ ಎಂದು ಅವರು ಹೇಳಿದರು.

ಅಡಕೆ ಮಾರುಕಟ್ಟೆಯಲ್ಲಿ ಈಗಾಗಲೇ ದೊಡ್ಡ ಪ್ರಮಾಣದ ದಾಸ್ತಾನು ಇದೆ. ಸಹಕಾರಿ ಸಂಘಗಳು, ವರ್ತಕರು ಹಾಗೂ ರೈತರ ಬಳಿಯೂ ಅಡಕೆ ಸಂಗ್ರಹವಿದೆ. ಇಂತಹ ಸಂದರ್ಭದಲ್ಲಿ ಮಾರುಕಟ್ಟೆಯ ಬೇಡಿಕೆಗೆ ಧಕ್ಕೆಯಾಗುವ ರೀತಿಯ ನಿರ್ಧಾರ ಕೈಗೊಂಡರೆ ಅದರ ಹೊರೆ ಅಂತಿಮವಾಗಿ ರೈತರ ಮೇಲೆಯೇ ಬೀಳಲಿದೆ ಎಂದು ಅವರು ಎಚ್ಚರಿಸಿದರು.

ಅಡಕೆ ವಹಿವಾಟು ಕೇವಲ ರೈತರಿಗೆ ಮಾತ್ರ ಸೀಮಿತವಲ್ಲ. ಮಾರುಕಟ್ಟೆ, ಸಾಗಣೆ, ಸಂಸ್ಕರಣೆ, ಸಣ್ಣ ವ್ಯಾಪಾರ, ಹೋಟೆಲ್‌, ಕ್ಯಾಂಟೀನ್‌ ಸೇರಿದಂತೆ ಗ್ರಾಮೀಣ ಹಾಗೂ ನಗರ ಆರ್ಥಿಕತೆಯ ಅನೇಕ ವಲಯಗಳು ಅಡಕೆ ಆಧಾರಿತ ಆರ್ಥಿಕ ಚಟುವಟಿಕೆಯಿಂದ ಪರೋಕ್ಷವಾಗಿ ಪ್ರಯೋಜನ ಪಡೆಯುತ್ತವೆ. ರೈತನ ಕೈಗೆ ಹಣ ಬಂದಾಗ ಮಾತ್ರ ಈ ಹಣ ಸ್ಥಳೀಯ ಮಾರುಕಟ್ಟೆಯಲ್ಲಿ ಸುತ್ತಾಡುತ್ತದೆ. ಹೀಗಾಗಿ ಅಡಕೆ ದರ ಕುಸಿದರೆ ಅದರ ಪರಿಣಾಮ ಇಡೀ ಮಲೆನಾಡು ಮತ್ತು ಮಧ್ಯ ಕರ್ನಾಟಕದ ವ್ಯಾಪಾರ ವಲಯದ ಮೇಲೂ ಬೀಳಲಿದೆ ಎಂದು ರಾಘವೇಂದ್ರ ಹೇಳಿದರು.

ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಗಣಿಸದೆ, ರೈತರ ಹಿತದೃಷ್ಟಿಯಿಂದ ಮರುಪರಿಶೀಲಿಸಬೇಕು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಈಗಾಗಲೇ ಮುಖ್ಯಮಂತ್ರಿ ಅವರ ಗಮನಕ್ಕೂ ಈ ವಿಚಾರವನ್ನು ತರಲಾಗಿದೆ. ಸರ್ಕಾರ ರೈತರು, ಅಡಕೆ ಬೆಳೆಗಾರರು, ವರ್ತಕರು ಹಾಗೂ ಸಹಕಾರಿ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು.

“ಸರ್ಕಾರ ದಯಮಾಡಿ ಈ ನಿರ್ಧಾರವನ್ನು ಪ್ರತಿಷ್ಠೆಯ ವಿಷಯವನ್ನಾಗಿ ಮಾಡಿಕೊಳ್ಳಬಾರದು. ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಕೂಡಲೇ ನಿಷೇಧವನ್ನು ಹಿಂಪಡೆಯಬೇಕು. ಇಲ್ಲವಾದರೆ ಬಿಜೆಪಿ ರೈತರ ಪರವಾಗಿ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ” ಎಂದು ರಾಘವೇಂದ್ರ ಎಚ್ಚರಿಕೆ ನೀಡಿದರು.

ಅಡಕೆ ಬೆಳೆಗಾರರು ಈಗಾಗಲೇ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಸರ್ಕಾರದ ನಿರ್ಧಾರದಿಂದ ಮಾರುಕಟ್ಟೆ ದರ ಮತ್ತಷ್ಟು ಕುಸಿದರೆ ಅದರ ಹೊಣೆಗಾರಿಕೆಯನ್ನು ಸರ್ಕಾರವೇ ಹೊರಬೇಕಾಗುತ್ತದೆ. ರೈತರ ಬದುಕಿನೊಂದಿಗೆ ಆಟವಾಡದೆ, ಯಾವುದೇ ಲಾಬಿಗೆ ಮಣಿಯದೆ, ವಾಸ್ತವ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಸರ್ಕಾರ ತಕ್ಷಣ ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು.

ಇದು ಜನರ ಆರೋಗ್ಯದ ಹೆಸರಿನಲ್ಲಿ ಕೈಗೊಂಡಿರುವ ನಿಷೇಧದ ಪರಿಣಾಮ ಅಡಕೆ ಬೆಳೆಗಾರರ ಬದುಕಿಗೆ ಹೊಡೆತವಾಗದಂತೆ ಸರ್ಕಾರ ಎಚ್ಚರಿಕೆ ವಹಿಸುವುದು ಅಗತ್ಯ. ರೈತರ ಬೆವರಿನಿಂದ ಬೆಳೆದ ಬೆಳೆಗೆ ಮಾರುಕಟ್ಟೆ ಭದ್ರತೆ ಕಲ್ಪಿಸುವುದು ಸರ್ಕಾರದ ಕರ್ತವ್ಯವೇ ಹೊರತು, ಏಕಾಏಕಿ ತೆಗೆದುಕೊಳ್ಳುವ ನಿರ್ಧಾರಗಳಿಂದ ಅವರ ಆತಂಕವನ್ನು ಮತ್ತಷ್ಟು ಹೆಚ್ಚಿಸುವುದಲ್ಲ.

ಇಂದು ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸದರಾದ ಬಿ.ವೈ. ರಾಘವೇಂದ್ರ, ಜಿಲ್ಲಾಧ್ಯಕ್ಷರಾದ ಜಗದೀಶ್ ಎನ್.ಕೆ., ಮಾಜಿ ವಿಧಾನ ಪರಿಷತ್ ಸದಸ್ಯರಾದ ರುದ್ರೇಗೌಡ್ರು, ಮಾಜಿ ಶಾಸಕರಾದ ಅಶೋಕ್ ನಾಯ್ಕ್, ರಾಜ್ಯ ಪ್ರಕೋಷ್ಟಗಳ ಸಂಯೋಜಕರಾದ ಎಸ್. ದತ್ತಾತ್ರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲತೇಶ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾದ ಸಿದ್ದಲಿಂಗಪ್ಪ, ಪ್ರಮುಖರಾದ ಗಣೇಶ್ ಬಿಳಕಿ ಹಾಗೂ ಕುಮಾರ್ ನಾಯ್ಡು, ಮಾಧ್ಯಮ ಪ್ರಮುಖರಾದ ಚಂದ್ರಶೇಖರ್ ಎಸ್. ಮತ್ತು ಮಂಜುನಾಥ್ ಎನ್. ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಕಾವೇರಿ ನೀರು ತಮಿಳುನಾಡಿಗೆ ಹರಿಸಬೇಡಿ; ಬಿಟ್ಟರೆ ರಾಜ್ಯಾದ್ಯಂತ ಹೋರಾಟ: ಹೆಚ್.ಆರ್. ಬಸವರಾಜಪ್ಪ ಎಚ್ಚರಿಕೆ

ಧೈರ್ಯವಿದ್ದರೆ ನೇರವಾಗಿ ಆರ್‌ಎಸ್‌ಎಸ್‌ ನಿಷೇಧಿಸಿ!: ಮಹಿಳೆಯರಿಗೆ ಸಂಪುಟದಲ್ಲಿ ಅವಕಾಶವಿಲ್ಲ, ಆರೋಪ ಎದುರಿಸುವವರಿಗೆ ಸಚಿವ ಪಟ್ಟ! ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ವಾಗ್ದಾಳಿ

ಶಿವಮೊಗ್ಗದ ಸಾರ್ವಜನಿಕ ಸಾರಿಗೆಗೆ ಹೊಸ ವೇಗ: 50 ಪಿಎಂ ಇ-ಬಸ್‌ಗಳನ್ನು ಶೀಘ್ರ ರಸ್ತೆಗಿಳಿಸಲು ಸಾರಿಗೆ ಸಚಿವರಿಗೆ ಚೇತನ್ ಕೆ. ಗೌಡ ಮನವಿ

ಸಣ್ಣ ವ್ಯಾಪಾರಿಗಳೇ ಆತಂಕ ಬೇಡ!: ಪ್ರತಿಯೊಂದು ಯುಪಿಐ ವಹಿವಾಟಿಗೂ ಶುಲ್ಕ ಎನ್ನುವುದು ತೀರಾ ಹಸಿ ಸುಳ್ಳು!

ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವವರಿಗೆ ಮಂತ್ರಿಗಿರಿ ಏಕೆ?: ಸರ್ಕಾರದ ವಿರುದ್ಧ ಬಿ.ವೈ.ವಿಜಯೇಂದ್ರ ಆಕ್ರೋಶ

‘ನಮ್ಮ ಭೂಮಿ–ನಮ್ಮ ಹಕ್ಕು’ ಘೋಷಣೆಗೆ ಶಿವಮೊಗ್ಗ ಜೆಡಿಎಸ್ ಧ್ವನಿ: ಬಿಡದಿ ಪಾದಯಾತ್ರೆಗೆ ಕೆ.ಬಿ. ಪ್ರಸನ್ನ ಕುಮಾರ್ ಬೆಂಬಲ

Leave a Comment