ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

​ಧರ್ಮ ಮತ್ತು ಕಾಯಕದ ಹಾದಿಯಲ್ಲಿ ‘ಶಿವನ ಕುಮಾರ’: ವೀರಶೈವ-ಲಿಂಗಾಯತ ವೇದಿಕೆಯಲ್ಲಿ ಸಿಎಂ ಡಿ.ಕೆ.ಶಿ ಭಾವನಾತ್ಮಕ ಧರ್ಮಸಂದೇಶ!: ‘ಜಾಗ ನನ್ನದು, ಕಟ್ಟಡ ನಿಮ್ಮದು’ – ಮಠಗಳಿಗೆ 2 ಎಕರೆ ಜಾಗ ನೀಡುವ ಭರವಸೆ

On: September 27, 2026 8:34 PM
Follow Us:

ಬೆಂಗಳೂರು: ಒಂದು ಕಡೆ ಪಂಚಪೀಠಗಳ ಜಗದ್ಗುರುಗಳ ದಿವ್ಯ ಸಾನ್ನಿಧ್ಯ… ಮತ್ತೊಂದು ಕಡೆ ಸಾವಿರಾರು ಭಕ್ತರ ಸಮ್ಮುಖ… ವೇದಿಕೆಯಲ್ಲಿ ಗುರುಗಳ ಪಾದಗಳಿಗೆ ನಮಸ್ಕರಿಸಿ, ತನ್ನ ಆರಾಧ್ಯ ದೈವ ವೀರಗಂಗಾಧರ ಅಜ್ಜನನ್ನು ಸ್ಮರಿಸಿಕೊಂಡು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಧರ್ಮ, ಗುರು, ಕಾಯಕ, ದಾಸೋಹ, ಮಾನವೀಯತೆ ಮತ್ತು ಸಮಾಜದ ಒಗ್ಗಟ್ಟಿನ ಕುರಿತು ಸುದೀರ್ಘವಾಗಿ ಮಾತನಾಡಿದ ಕ್ಷಣಕ್ಕೆ ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪ ಸಾಕ್ಷಿಯಾಯಿತು.

“ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ” ಎಂಬ ವೀರಗಂಗಾಧರ ಅಜ್ಜನವರ ಸಂದೇಶವನ್ನು ನೆನಪಿಸಿಕೊಂಡ ಡಿ.ಕೆ. ಶಿವಕುಮಾರ್, ಆ ಸಂದೇಶವೇ ತಮ್ಮ ಬದುಕಿನ ದಾರಿದೀಪವಾಗಿದೆ ಎಂದು ಹೇಳಿದರು.

ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ (ರಿ), ಬೆಂಗಳೂರು ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ, ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ದಿವ್ಯ ಸಾನ್ನಿಧ್ಯದಲ್ಲಿ ಬೆಂಗಳೂರಿನ ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ನಡೆದ ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು, ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು, ಶ್ರೀಶೈಲದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಜಗದ್ಗುರುಗಳು ಹಾಗೂ ಶ್ರೀ ಕಾಶಿ ಜ್ಞಾನಪೀಠದ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಜಗದ್ಗುರುಗಳು ಸಾನ್ನಿಧ್ಯ ವಹಿಸಿದ್ದರು.

ತಮ್ಮ ಭಾಷಣದ ಆರಂಭದಲ್ಲೇ ಪಂಚಪೀಠಗಳ ಜಗದ್ಗುರುಗಳ ಪಾದಗಳಿಗೆ ನಮಸ್ಕರಿಸಿದ ಡಿ.ಕೆ. ಶಿವಕುಮಾರ್ ಅವರು, “ಗುರುಬ್ರಹ್ಮ, ಗುರುವಿಷ್ಣು, ಗುರುದೇವೋ ಮಹೇಶ್ವರಃ” ಎಂಬ ಗುರು ಪರಂಪರೆಯ ಮಹತ್ವವನ್ನು ಸ್ಮರಿಸಿದರು.

“ಮುಂದೆ ಗುರಿ, ಹಿಂದೆ ಗುರು. ಗುರು ಇದ್ದರೆ ಯಾವುದೂ ಅಸಾಧ್ಯವಲ್ಲ. ನನ್ನಂತಹ ಶಿಷ್ಯರೇ ಅದಕ್ಕೆ ಸಾಕ್ಷಿ” ಎಂದು ಹೇಳಿದ ಅವರು, ಬದುಕಿನಲ್ಲಿ ಮಾರ್ಗದರ್ಶನ ನೀಡಿದ ಗುರುಗಳು, ಮಠಾಧೀಶರು ಹಾಗೂ ಸಮಾಜದ ಹಿರಿಯರಿಗೆ ಭಕ್ತಿಪೂರ್ವಕ ನಮನ ಸಲ್ಲಿಸಿದರು.

ವೀರಶೈವ ಲಿಂಗಾಯತ ಧರ್ಮದ ತತ್ವಗಳನ್ನು ಕೇವಲ ಆಚರಣೆಯಲ್ಲಿ ಉಳಿಸದೆ, ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಧರ್ಮದ ಆಚರಣೆಗಳಲ್ಲಿರುವ ಅರ್ಥವನ್ನು ಸರಳ ಉದಾಹರಣೆಗಳ ಮೂಲಕ ವಿವರಿಸಿದ ಅವರು, ಬೂದಿ ವಿಭೂತಿಯಾಗುತ್ತದೆ. ನೀರು ತೀರ್ಥವಾಗುತ್ತದೆ. ಅಕ್ಕಿ ಮತ್ತು ಅರಿಶಿನ ಒಂದಾದಾಗ ಮಂತ್ರಾಕ್ಷತೆಯಾಗುತ್ತದೆ. ಕೊಬ್ಬರಿ ಪ್ರಸಾದವಾಗುತ್ತದೆ. ಅನ್ನ ನೈವೇದ್ಯವಾಗುತ್ತದೆ ಎಂದು ಹೇಳಿದರು.

ವೀರಶೈವ ಲಿಂಗಾಯತ ಧರ್ಮದ ಆಚರಣೆಗಳು ಕೇವಲ ಸಂಪ್ರದಾಯಗಳಲ್ಲ; ಅವುಗಳ ಹಿಂದೆ ಸಾಮಾಜಿಕ ಮತ್ತು ಆಧ್ಯಾತ್ಮಿಕ ಸಂದೇಶವಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಗರ್ವದ ಬದಲು ಧರ್ಮ ಇರಬೇಕು. ಕೋಪದ ಬದಲು ಕಾಯಕ ಇರಬೇಕು. ಹೊಟ್ಟೆ ಹಸಿದಾಗ ಅನ್ನ ಬೇಕು, ಕೈಯಲ್ಲಿ ಶಕ್ತಿ ಇದ್ದವನು ದುಡಿಯಬೇಕು, ಜ್ಞಾನ ಬಯಸುವವನು ಓದಬೇಕು. ಇದೇ ನಮ್ಮ ಧರ್ಮದ ತತ್ವ ಎಂದು ಹೇಳಿದರು.

ಮನಸ್ಸು ನಿರ್ಮಲವಾದರೆ ಅದೇ ಸಾಕ್ಷಾತ್ಕಾರ. ಮಾತು ಮೃದುವಾದರೆ ಅದೇ ಚಮತ್ಕಾರ. ನಡೆ ಶುದ್ಧವಾದರೆ ಅದೇ ಪುರಸ್ಕಾರ. ಇವೆಲ್ಲದರ ಮೂಲಕ ಶಿವನ ಸಾಕ್ಷಾತ್ಕಾರ ಸಾಧ್ಯ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಭಕ್ತಿ ಮತ್ತು ಕಾಯಕ ಎರಡನ್ನೂ ಸಮಾನವಾಗಿ ಗೌರವಿಸುವ ಪರಂಪರೆಯೇ ವೀರಶೈವ ಲಿಂಗಾಯತ ಧರ್ಮದ ವಿಶೇಷತೆ ಎಂದು ಅವರು ವಿವರಿಸಿದರು.

ಜನ್ಮ ಪ್ರಸಂಗ ಮತ್ತು ‘ಶಿವನ ಕುಮಾರ’ನ ರೋಚಕ ಕಥೆ

ತಮ್ಮ ಬದುಕಿನ ರೋಚಕ ಹಾಗೂ ಭಾವನಾತ್ಮಕ ಪುಟಗಳನ್ನು ಬಿಚ್ಚಿಡುತ್ತಾ ಡಿ.ಕೆ. ಶಿವಕುಮಾರ್ ಅವರು, ತಮ್ಮ ಹುಟ್ಟಿನ ಹಿನ್ನೆಲೆಯನ್ನು ಹಂಚಿಕೊಂಡರು:

“ನಮ್ಮ ತಾಯಿ ಕೆಂಪೇಗೌಡರ ಧರ್ಮಪತ್ನಿ ಗೌರಮ್ಮನವರು. ನಮ್ಮ ಮನೆತನದಲ್ಲಿ ಪ್ರತಿಯೊಬ್ಬರಿಗೂ ‘ಕೆಂಪೇಗೌಡ’ ಎಂದೇ ಹೆಸರಿಡುವ ಸುದೀರ್ಘ ಪರಂಪರೆಯಿತ್ತು. ಆದರೆ, ನಾನು ಹುಟ್ಟುವುದು ತಡವಾದಾಗ, ತಾಯಿ ನಮ್ಮೂರಿನ ಶಿವಾಲಗಿ ಮೂರ್ತಿಯ ದೇವಾಲಯದ ಬೆಟ್ಟಕ್ಕೆ ಹೋಗಿ ಶಿವನಲ್ಲಿ ಪ್ರಾರ್ಥನೆ ಮಾಡಿಕೊಂಡರು. ‘ಮಗು ಹುಟ್ಟಿದರೆ ಶಿವನ ಹೆಸರನ್ನೇ ಇಡುತ್ತೇನೆ’ ಎಂದು ಹರಕೆ ಹೊತ್ತಿದ್ದರು. ಹಾಗೆ ಜನ್ಮತಾಳಿದವನೇ ನಾನು — ‘ಶಿವನ ಕುಮಾರ’. ತದನಂತರ ವಿದ್ಯಾಭ್ಯಾಸ ಮಾಡಿದ್ದು ಶ್ರೀ ವೀರಗಂಗಾಧರ ಅಜ್ಜನವರು ಸ್ಥಾಪಿಸಿದ ರೇಣುಕಾಚಾರ್ಯ ಕಾಲೇಜಿನಲ್ಲಿ! ಮುಂದೆ ಮಧ್ಯರಾತ್ರಿ 11 ಗಂಟೆಗೆ ಅಜ್ಜನವರ ಪಾದ ಸ್ಪರ್ಶ ಮಾಡುವ ಭಾಗ್ಯ ಸಿಕ್ಕಾಗ ನನ್ನ ಬದುಕೇ ಬದಲಾಯಿತು. ನನ್ನ ಪ್ರತಿ ಮಾತು, ಪ್ರತಿ ಹೆಜ್ಜೆಯೂ ಅವರ ಆಶೀರ್ವಾದದ ಫಲ,” ಎಂದು ಭಕ್ತಿಪೂರ್ವಕವಾಗಿ ಸ್ಮರಿಸಿದರು.

12ನೇ ಶತಮಾನದ ಬಸವಣ್ಣನವರ ಸಾಮಾಜಿಕ ಚಿಂತನೆ ಮತ್ತು ಅನುಭವ ಮಂಟಪದ ಪರಂಪರೆಯನ್ನು ಸ್ಮರಿಸಿದ ಡಿ.ಕೆ. ಶಿವಕುಮಾರ್, ಸಮಾಜದ ವಿವಿಧ ವರ್ಗಗಳ ಜನರು ತಮ್ಮ ಅನುಭವ, ವಿಚಾರ ಮತ್ತು ಬದುಕಿನ ಪ್ರಶ್ನೆಗಳನ್ನು ಚರ್ಚಿಸುವ ಪರಂಪರೆ ಅಂದಿನ ಕಾಲದಲ್ಲೇ ರೂಪುಗೊಂಡಿತ್ತು ಎಂದು ಹೇಳಿದರು.

ವೀರಶೈವ ಲಿಂಗಾಯತ ಸಮಾಜದವರು ಮಾತ್ರ ಒಗ್ಗಟ್ಟಾಗುವುದು ಸಾಕಾಗುವುದಿಲ್ಲ. ಇಡೀ ರಾಜ್ಯದ ಎಲ್ಲ ಸಮಾಜಗಳ ನಡುವೆ ಒಗ್ಗಟ್ಟು, ಸಾಮರಸ್ಯ ಮತ್ತು ಪರಸ್ಪರ ಗೌರವ ಬೆಳೆಸುವ ಕೆಲಸವೂ ನಡೆಯಬೇಕು ಎಂದು ಹೇಳಿದರು.

ಸಮಾಜದ ಒಳಗಿನ ಭಿನ್ನತೆಗಳಿಗಿಂತ ಮಾನವೀಯತೆ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಅವರು ಕರೆ ನೀಡಿದರು.

ಮನುಷ್ಯನ ಹುಟ್ಟಿನಿಂದ ಸಾವಿನವರೆಗೂ ಧರ್ಮ ಮತ್ತು ಸಂಸ್ಕೃತಿಯ ಆಚರಣೆಗಳು ಯಾವುದಾದರೂ ರೂಪದಲ್ಲಿ ಬದುಕಿನೊಂದಿಗೆ ಬೆಸೆದುಕೊಂಡಿರುತ್ತವೆ ಎಂದು ಅವರು ಹೇಳಿದರು.

ಹುಟ್ಟುವಾಗ ಯಾವ ಜಾತಿಯಲ್ಲಿ ಹುಟ್ಟಬೇಕು ಎಂದು ಯಾರೂ ಅರ್ಜಿ ಹಾಕಿ ಹುಟ್ಟುವುದಿಲ್ಲ. ಆದರೆ ನಾಮಕರಣದಿಂದ ವಿವಾಹದವರೆಗೆ, ಜೀವನದ ಹಲವು ಸಂಸ್ಕಾರಗಳಿಂದ ಅಂತ್ಯಕ್ರಿಯೆಯವರೆಗೆ ಧರ್ಮದ ಆಚರಣೆಗಳು ನಮ್ಮ ಬದುಕಿನ ಭಾಗವಾಗಿರುತ್ತವೆ. ಧರ್ಮವನ್ನು ಮನುಷ್ಯ ಬಿಟ್ಟರೂ, ಧರ್ಮ ಮನುಷ್ಯನನ್ನು ಬಿಡುವುದಿಲ್ಲ ಎಂದು ಹೇಳಿದರು.

ಧರ್ಮದ ಹೆಸರಿನಲ್ಲಿ ವಿಭಜನೆಗಿಂತ, ಧರ್ಮದ ತತ್ವಗಳ ಮೂಲಕ ಮಾನವೀಯತೆ ಬೆಳೆಸಬೇಕು ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.

ಶಿಕ್ಷಣ, ಅನ್ನದಾಸೋಹ, ಸಮಾಜ ಸೇವೆ ಹಾಗೂ ಸಂಸ್ಕಾರ ನೀಡುವಲ್ಲಿ ರಾಜ್ಯದ ವಿವಿಧ ಮಠಗಳು ಮಾಡುತ್ತಿರುವ ಸೇವೆಯನ್ನು ಡಿ.ಕೆ. ಶಿವಕುಮಾರ್ ಶ್ಲಾಘಿಸಿದರು.

ಸಿದ್ಧಗಂಗಾ, ಸುತ್ತೂರು, ರಂಭಾಪುರಿ, ಗವಿ, ಮೂರುಸಾವಿರ ಮಠ, ತರಳಬಾಳು ಸೇರಿದಂತೆ ವಿವಿಧ ಮಠಗಳ ಶಿಕ್ಷಣ ಮತ್ತು ದಾಸೋಹ ಪರಂಪರೆಯನ್ನು ಉಲ್ಲೇಖಿಸಿದ ಅವರು, ಸರ್ಕಾರದ ಜತೆಗೆ ಸಮಾಜ ನಿರ್ಮಾಣದ ಕೆಲಸದಲ್ಲಿ ಮಠಗಳ ಪಾತ್ರವೂ ಮಹತ್ವದ್ದಾಗಿದೆ ಎಂದರು.

ಚಿಕ್ಕ ಮಠದಿಂದ ದೊಡ್ಡ ಮಠದವರೆಗೆ ಸಮಾಜಕ್ಕೆ ಬೆಳಕು ನೀಡುತ್ತಿರುವ ಎಲ್ಲ ಮಠಗಳಿಗೂ ನನ್ನ ಸಾಷ್ಟಾಂಗ ನಮಸ್ಕಾರ ಎಂದು ಹೇಳಿದರು.

ಬಸವಣ್ಣನವರ “ಕಾಯಕವೇ ಕೈಲಾಸ” ತತ್ವವನ್ನು ಸ್ಮರಿಸಿದ ಅವರು, ಪ್ರಾಮಾಣಿಕ ದುಡಿಮೆಯ ಮೂಲಕ ಬದುಕನ್ನು ಪವಿತ್ರಗೊಳಿಸಬೇಕು ಎಂದರು.

ಕಾಯಕ ಎಂದರೆ ಬದುಕಬೇಕಾದ ಬದುಕು. ದಾಸೋಹ ಎಂದರೆ ಹಂಚಿಕೊಂಡು ತಿನ್ನುವ ಪವಿತ್ರ ಕಾರ್ಯ ಎಂದು ಹೇಳಿದ ಅವರು, ಮಠಗಳು ನಡೆಸುತ್ತಿರುವ ಅನ್ನದಾಸೋಹ ಮತ್ತು ಸಮಾಜ ಸೇವೆಯನ್ನು ಶ್ಲಾಘಿಸಿದರು.

ಒಗ್ಗಟ್ಟಿನಲ್ಲಿ ಶಕ್ತಿ ಇದೆ. ಅರಿವಿನಲ್ಲಿ ಬೆಳಕು ಇದೆ. ಕಾಯಕದಲ್ಲಿ ಗೌರವವಿದೆ. ದಾಸೋಹದಲ್ಲಿ ಮಾನವೀಯತೆ ಇದೆ ಎಂಬ ಸಂದೇಶವನ್ನು ಅವರು ಮುಂದಿಟ್ಟರು.

ಸಮ್ಮೇಳನದಲ್ಲಿ ಹೊರಗಿನಿಂದ ಬರುವ ಮಠಾಧೀಶರು ಹಾಗೂ ಧಾರ್ಮಿಕ ಮುಖಂಡರಿಗೆ ಬೆಂಗಳೂರಿನಲ್ಲಿ ತಂಗಲು ಮತ್ತು ಕಾರ್ಯಕ್ರಮ ನಡೆಸಲು ಸೂಕ್ತ ಸ್ಥಳದ ಅಗತ್ಯವಿದೆ ಎಂಬ ಮನವಿಯನ್ನು ಪ್ರಸ್ತಾಪಿಸಲಾಯಿತು.

ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಸುಮಾರು 2 ಎಕರೆ ಜಾಗವನ್ನು ಗುರುತಿಸಿ ನೀಡಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ಹೇಳಿದರು.

“ಜಾಗ ನನ್ನದು, ಕಟ್ಟಡ ನಿಮ್ಮದು” ಎಂಬ ಮಾದರಿಯಲ್ಲಿ ವ್ಯವಸ್ಥೆ ರೂಪಿಸಬಹುದು. ಕಟ್ಟಡದ ನಿರ್ಮಾಣಕ್ಕೆ ಎಲ್ಲರೂ ತಮ್ಮ ಪಾಲಿನ ಕೊಡುಗೆ ನೀಡಬೇಕು. ಅದು ಒಬ್ಬರ ಸ್ವತ್ತಾಗದೆ ಎಲ್ಲರಿಗೂ ಸೇರಿದ ಆಸ್ತಿಯಾಗಬೇಕು ಎಂದು ಅವರು ಸಲಹೆ ನೀಡಿದರು.

ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಉಲ್ಲೇಖಿಸಿದ ಅವರು, ಬಸವಣ್ಣನವರ ತತ್ವಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಅಗತ್ಯವಿದೆ ಎಂದರು.

ಕಾಲ ಬದಲಾಗಬಹುದು, ಸಮಸ್ಯೆಗಳು ಬದಲಾಗಬಹುದು. ಆದರೆ ಮೌಲ್ಯಗಳು ಬದಲಾಗಬಾರದು ಎಂದು ಅವರು ಹೇಳಿದರು.

ನುಡಿದಂತೆ ನಡೆಯುವುದು, ನೀಡಿದ ಮಾತನ್ನು ಪಾಲಿಸುವುದು ಮತ್ತು ಸಮಾಜದ ಬಗ್ಗೆ ಜವಾಬ್ದಾರಿಯಿಂದ ವರ್ತಿಸುವುದು ಧರ್ಮದ ಪ್ರಮುಖ ಅಂಶಗಳಾಗಿವೆ ಎಂದು ಹೇಳಿದರು.

ಸರ್ವಧರ್ಮ ಸಮಭಾವದ ವಿಚಾರವನ್ನೂ ಪ್ರಸ್ತಾಪಿಸಿದ ಅವರು, ಧರ್ಮ ಯಾವುದಾದರೂ ತತ್ವ ಒಂದೇ. ನಾಮ ನೂರಾದರೂ ದೈವ ಒಂದೇ. ಪೂಜೆ ಯಾವುದಾದರೂ ಭಕ್ತಿ ಒಂದೇ. ಕರ್ಮ ಯಾವುದಾದರೂ ನಿಷ್ಠೆ ಒಂದೇ ಎಂಬ ಸಂದೇಶವನ್ನು ಮುಂದಿಟ್ಟರು.

ರಾಮಾಯಣ ಮತ್ತು ಮಹಾಭಾರತದ ಪಾತ್ರಗಳನ್ನು ಉದಾಹರಣೆಯಾಗಿ ಬಳಸಿದ ಅವರು, ಭಾರತೀಯ ಪರಂಪರೆಯಲ್ಲಿ ವಿವಿಧ ವ್ಯಕ್ತಿತ್ವಗಳು ವಿಭಿನ್ನ ಗುಣಗಳನ್ನು ಪ್ರತಿನಿಧಿಸುತ್ತವೆ. ಭಕ್ತಿ, ಧರ್ಮ, ಗುರಿ, ಪ್ರತಿಜ್ಞೆ, ಸೇವೆ ಮತ್ತು ಕರ್ತವ್ಯಗಳ ಮಹತ್ವವನ್ನು ಇತಿಹಾಸ ಮತ್ತು ಪುರಾಣಗಳು ಹಲವು ರೀತಿಯಲ್ಲಿ ತಿಳಿಸಿವೆ ಎಂದು ಹೇಳಿದರು.

ಹನುಮಂತನನ್ನು ಸೇವೆಯ ಪ್ರತೀಕವಾಗಿ ಉಲ್ಲೇಖಿಸಿದ ಅವರು, ಸಮಾಜಕ್ಕಾಗಿ ಸೇವೆ ಮಾಡುವ ವ್ಯಕ್ತಿಗಳನ್ನು ಸಮಾಜ ಗೌರವಿಸುತ್ತದೆ ಎಂಬ ಸಂದೇಶ ನೀಡಿದರು.

ವೀರಶೈವ ಲಿಂಗಾಯತ ಧರ್ಮದ ಪ್ರಮುಖ ತತ್ವಗಳನ್ನು ವಿವರಿಸಿದ ಅವರು, ಗುರು, ಲಿಂಗ ಮತ್ತು ಜಂಗಮದ ಮಹತ್ವವನ್ನು ವಿವರಿಸಿದರು.

ಜೀವನಕ್ಕೆ ಗುರು ಬೇಕು. ಲಿಂಗ ನಮ್ಮ ಅಂತರಂಗದ ಭಕ್ತಿಯ ಸಂಕೇತ. ಜಂಗಮ ಸೇವೆಯ ಪರಂಪರೆಯನ್ನು ಪ್ರತಿನಿಧಿಸುತ್ತದೆ. ಈ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಧರ್ಮದ ಮೌಲ್ಯಗಳನ್ನು ಉಳಿಸಬೇಕು ಎಂದು ಹೇಳಿದರು.

ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯ; ಎನ್ನ ಕಾಲೇ ಕಂಬ… ಎಂಬ ಬಸವಣ್ಣನವರ ವಚನವನ್ನು ಸ್ಮರಿಸಿದ ಅವರು, ದೇಹವೇ ದೇಗುಲ ಎಂಬ ತತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದರು.

ರಾಜಕೀಯ ನಾಯಕರಿಗೆ ಅರಿವು ಮೂಡಿಸಿದ ಭಕ್ತಿ ಸಂಕಲ್ಪ

ತಮ್ಮ ರಾಜಕೀಯ ಜೀವನದಲ್ಲಿ ಶ್ರೀ ವೀರಗಂಗಾಧರ ಅಜ್ಜನವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಪ್ರಸಂಗವನ್ನು ಉಲ್ಲೇಖಿಸಿದ ಡಿ.ಕೆ.ಶಿ, “ನಾನು ಅಜ್ಜನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದಾಗ ರಾಷ್ಟ್ರಮಟ್ಟದ ಪ್ರಮುಖ ನಾಯಕರು, ಸುಪ್ರೀಂ ಕೋರ್ಟ್ ನ್ಯಾಯಾಧೀಶರು ‘ಏನಿದು ಡಿ.ಕೆ, ಈ ರೀತಿ ಪ್ರಮಾಣ ವಚನ ಸ್ವೀಕರಿಸಿದ್ದೀರಾ?’ ಎಂದು ಕೇಳಿದರು. ನಾನು ಅವರಿಗೆ ಸ್ಪಷ್ಟವಾಗಿ ಹೇಳಿದೆ – ಇದು ಭಕ್ತ ಮತ್ತು ಭಗವಂತನ ನಡುವಿನ ನಂಬಿಕೆಯ ವ್ಯವಹಾರ. ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ. ನನ್ನ ಧರ್ಮ, ನನ್ನ ಕರ್ಮವೇ ನನ್ನ ಗುರು,” ಎಂದು ಮಾರ್ಮಿಕವಾಗಿ ಉತ್ತರಿಸಿದ್ದನ್ನು ಬಹಿರಂಗಪಡಿಸಿದರು.

“ನಿಮ್ಮ ಮಗ ಅಧಿಕಾರದಲ್ಲಿರಬೇಕಾದರೆ ಶ್ರೀಗಳ ಆಶೀರ್ವಾದ ಬೇಕು”

ಭಾಷಣದ ಕೊನೆಯಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಶ್ರೀಗಳು ಮತ್ತು ಸಮಾಜದ ಬೆಂಬಲ ಕೋರಿದ ಅವರು, “ನನಗೆ ಯೋಗ ಬಂದಿದೆ, ಆದರೆ ಯೋಗಕ್ಕಿಂತ ‘ಯೋಗಕ್ಷೇಮ’ ಮುಖ್ಯ. ಈ ಯೋಗಕ್ಷೇಮ ಕಾಯಲು ನಿಮ್ಮ ಮಗ ಅಧಿಕಾರದಲ್ಲಿರಬೇಕು. 2028ರ ವೇಳೆಗೆ ರಾಜ್ಯದ 3,000 ಹಾಗೂ 6,000 ಮಠಗಳ ಪೂಜ್ಯರು ನನ್ನ ರಾಯಭಾರಿಗಳಾಗಿ ನನ್ನ ಜೊತೆ ನಿಲ್ಲಬೇಕು. ನನ್ನನ್ನು ರಕ್ಷಿಸುವುದು, ನನಗೆ ಮಾರ್ಗದರ್ಶನ ನೀಡುವುದು ನಿಮ್ಮ ಜವಾಬ್ದಾರಿ. ನೀವು ಕೇಳಿದ್ದನ್ನು ನೀಡುವುದು ನನ್ನ ಜವಾಬ್ದಾರಿ,” ಎಂದು ಮುಗುಳ್ನಗುತ್ತಾ ಬೆಂಬಲ ಕೋರಿದರು.

ಭಕ್ತಿ, ಸೇವೆ, ಕಾಯಕ, ದಾಸೋಹ ಮತ್ತು ಮಾನವೀಯತೆ—ಇವುಗಳ ಸಮನ್ವಯವೇ ಸಮಾಜದ ಶಕ್ತಿಯಾಗಬೇಕು ಎಂಬ ಸಂದೇಶದೊಂದಿಗೆ ಡಿ.ಕೆ. ಶಿವಕುಮಾರ್ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ಭಕ್ತಿಯಿಂದಲೇ ಮುಕ್ತಿ, ಸೇವೆಯಿಂದಲೇ ಶಕ್ತಿ, ಸಹನೆಯಿಂದಲೇ ದೈವತ್ವ, ಕಾಯಕದಿಂದಲೇ ಸುಖ ಎಂಬ ಆಶಯವನ್ನು ಮುಂದಿಟ್ಟ ಅವರು, ಬಸವಣ್ಣನವರು ಮತ್ತು ವೀರಶೈವ ಲಿಂಗಾಯತ ಪರಂಪರೆಯ ಮಹನೀಯರು ನೀಡಿದ ಮಾರ್ಗದರ್ಶನದಲ್ಲಿ ಸಮಾಜ ಮುನ್ನಡೆಯಬೇಕು ಎಂದು ಹೇಳಿದರು.

ಕೊನೆಯಲ್ಲಿ ಪಂಚಪೀಠಗಳ ಜಗದ್ಗುರುಗಳು, ಮಠಾಧೀಶರು ಹಾಗೂ ಸಮ್ಮೇಳನದಲ್ಲಿ ಭಾಗವಹಿಸಿದ್ದ ಭಕ್ತರಿಗೆ ಸಾಷ್ಟಾಂಗ ನಮಸ್ಕಾರ ಸಲ್ಲಿಸಿದ ಅವರು,

“ವೀರಗಂಗಾಧರ ಅಜ್ಜನ ಪಾದಗಳಿಗೆ ನನ್ನ ಶರಣು. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ” ಎಂದು ಘೋಷಿಸುವ ಮೂಲಕ ತಮ್ಮ ಮಾತು ಮುಗಿಸಿದರು.

ಸಮ್ಮೇಳನದಲ್ಲಿ ಧಾರೇಶ್ವರ (ಮಹಾರಾಷ್ಟ್ರ)ದ ಶ್ರೀ ಡಾ. ನೀಲಕಂಠ ಶಿವಾಚಾರ್ಯ ಸ್ವಾಮಿಗಳು, ತರೀಕೆರೆಯ ಶ್ರೀ ಜಗದೀಶ್ವರ ಶಿವಾಚಾರ್ಯ ಸ್ವಾಮಿಗಳು, ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ನಾಗಣಸೂರಿನ ಶ್ರೀ ಶ್ರೀಕಂಠ ಶಿವಾಚಾರ್ಯ ಸ್ವಾಮಿಗಳು, ಸರಡಗಿಯ ಶ್ರೀ ರೇವಣಸಿದ್ದ ಶಿವಾಚಾರ್ಯ ಸ್ವಾಮಿಗಳು, ಬಿಚಕುಂದಾದ ಶ್ರೀ ಸೋಮಲಿಂಗ ಶಿವಾಚಾರ್ಯ ಸ್ವಾಮಿಗಳು, ಬಿಳಕಿಯ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು, ದೇವಾಪುರದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಹಾಗೂ ಎಮ್ಮಿಗನೂರಿನ ಶ್ರೀ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸಿದ್ದರು.

ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವರು ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಈಶ್ವರ ಖಂಡ್ರೆ, ಕರ್ನಾಟಕ ಸರ್ಕಾರದ ಸಣ್ಣ ಕೈಗಾರಿಕಾ ಸಚಿವರು ಹಾಗೂ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ವಿಜಯಾನಂದ ಕಾಶಪ್ಪನವರ್, ಬೆಳಗಾವಿ ಗ್ರಾಮಾಂತರ ಶಾಸಕರು ಹಾಗೂ ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮಹಿಳಾ ಅಧ್ಯಕ್ಷರಾದ ಶ್ರೀಮತಿ ವೀಣಾ ಕಾಶಪ್ಪನವರ್, ಕೆ.ವಿ.ವಿ. ಸಂಸ್ಥೆಯ ಅಧ್ಯಕ್ಷರು ಹಾಗೂ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ನಿಕಟಪೂರ್ವ ಅಧ್ಯಕ್ಷರಾದ ಬಿ.ಎಸ್. ಪರಮಶಿವಯ್ಯ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷರಾದ ಎಸ್. ಗುರುಸ್ವಾಮಿ ಹಾಗೂ ಬೆಂಗಳೂರಿನ ಡಿ.ಎಸ್. ಮ್ಯಾಕ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ದಯಾನಂದ್ ಉಪಸ್ಥಿತರಿದ್ದರು.

ಧರ್ಮ ಸಂರಕ್ಷಣೆ, ಮಠಗಳ ಸೇವೆ, ಶಿಕ್ಷಣ–ದಾಸೋಹ, ಬಸವಣ್ಣನವರ ಸಮಾನತೆಯ ಚಿಂತನೆ, ಕಾಯಕದ ಮಹತ್ವ ಹಾಗೂ ಮಾನವೀಯತೆಯ ಸಂದೇಶಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಿದ ಸಮ್ಮೇಳನವು ವೀರಶೈವ–ಲಿಂಗಾಯತ ಧರ್ಮದ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಚಾರಗಳ ಕುರಿತು ಚರ್ಚೆಗೆ ವೇದಿಕೆಯಾಯಿತು.

K.M.Sathish Gowda

Join WhatsApp

Join Now

Facebook

Join Now

Read more

ಯುವಕರು ಸಂಘಟಿತರಾಗಿ ನಾರಾಯಣ ಗುರುಗಳ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲಿ: ಸಚಿವ ಮಧು ಬಂಗಾರಪ್ಪ

ಧರ್ಮ, ಪರಂಪರೆ ಹಾಗೂ ಮಠಮಾನ್ಯಗಳ ಸಂರಕ್ಷಣೆಗೆ ಸಂಘಟಿತ ಪ್ರಯತ್ನ ಅಗತ್ಯ: ಭಿನ್ನಾಭಿಪ್ರಾಯ ಬದಿಗಿಟ್ಟು ಸಮಾಜದ ಹಿತಕ್ಕಾಗಿ ಒಂದಾಗ ಬೇಕು: ವೀರಶೈವ ಲಿಂಗಾಯತ ಸಮಾಜದ ಒಗ್ಗಟ್ಟು ಕಾಪಾಡುವುದು ಎಲ್ಲರ ಜವಾಬ್ದಾರಿ: ಬಿ.ವೈ. ವಿಜಯೇಂದ್ರ

ಭಕ್ತಿಯ ಮಹಾಪ್ರವಾಹದಲ್ಲಿ ಶಿವಮೊಗ್ಗ: ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಗೆ ಲಕ್ಷಾಂತರ ಜನರ ಸಾಕ್ಷಿ! ಕಾಲಿಡಲೂ ಜಾಗವಿಲ್ಲ, ಬಾನಂಗಳದಲ್ಲಿ ಜೈಕಾರ! ಶಿವಮೊಗ್ಗದಲ್ಲಿ ಮೈ ನವಿರೇಳಿಸಿದ ಗಣೇಶೋತ್ಸವದ ಅದ್ಧೂರಿ ಮೆರವಣಿಗೆ!

ಸೆ.26-27ರಂದು ಬೆಂಗಳೂರಿನಲ್ಲಿ ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಮಹಾಸಮ್ಮೇಳನ: ಪಂಚಪೀಠಾಧೀಶರ ಸಾನ್ನಿಧ್ಯ

ಶಿವಮೊಗ್ಗ ಹಿಂದೂ ಗಣಪತಿ ಮೆರವಣಿಗೆಗೆ ಭಕ್ತಿಯ ಸಾಥ್: ಐದು ಸಾವಿರ ಭಕ್ತರಿಗೆ ಅನ್ನದಾಸೋಹ: ಮೂರನೇ ವರ್ಷವೂ ಸೇವಾ ಪರಂಪರೆ ಮುಂದುವರಿಸಿದ ಎಸ್‌ಆರ್‌ವಿ ಎಂಟರ್‌ಪ್ರೈಸಸ್ ಗೆಳೆಯರ ಬಳಗ

50 ವರ್ಷಗಳ ದಾಂಪತ್ಯ ಜೀವನ ಸಮಾಜಕ್ಕೆ ಮಾದರಿ: ಸಂಸ್ಕಾರ, ಶಿಕ್ಷಣದೊಂದಿಗೆ ಬದುಕು ಕಟ್ಟಿಕೊಳ್ಳಿ: ತಾಯ್ನಾಡಿಗೆ ಮರಳಿ ಸೇವೆ ಸಲ್ಲಿಸಿ ಎಂದು ವಿದ್ಯಾರ್ಥಿಗಳಿಗೆ ಕೆ.ಈ. ಕಾಂತೇಶ್ ಕರೆ

Leave a Comment