ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಲಾಂಛನ ಧರಿಸುವುದಷ್ಟೇ ಧರ್ಮವಲ್ಲ; ವಿಭೂತಿ, ರುದ್ರಾಕ್ಷಿ ಧರಿಸಿದರೆ ಸಾಲದು, ಅವುಗಳ ತತ್ವದಂತೆ ಬದುಕುವುದೇ ನಿಜವಾದ ಬಸವತತ್ವದ ಆಚರಣೆ: ಡಾ. ಬಸವ ಮರುಳಸಿದ್ಧ ಸ್ವಾಮೀಜಿ

On: November 23, 2026 4:17 PM
Follow Us:

ಭದ್ರಾವತಿ: ಕಲ್ಲಿನ ಕಟ್ಟಡಕ್ಕೆ ದೇವಾಲಯವೆಂಬ ಹೆಸರಿಟ್ಟ ಮಾತ್ರಕ್ಕೆ ಅದು ದೇವರ ನೆಲೆಯಾಗುವುದಿಲ್ಲ, ಮೈಮೇಲೆ ವಿಭೂತಿ, ಕೊರಳಲ್ಲಿ ರುದ್ರಾಕ್ಷಿ, ಅಂಗದ ಮೇಲೆ ಇಷ್ಟಲಿಂಗ ಧರಿಸಿದ ಮಾತ್ರಕ್ಕೆ ವ್ಯಕ್ತಿ ನಿಜವಾದ ಶರಣನೂ ಆಗುವುದಿಲ್ಲ. ಧರಿಸಿದ ಲಾಂಛನಗಳ ಹಿಂದಿರುವ ತತ್ವವನ್ನು ಅರಿತು, ಅರಿವನ್ನು ಆಚಾರದಲ್ಲಿ ಅಳವಡಿಸಿಕೊಂಡು, ನಡೆ-ನುಡಿಗಳಲ್ಲಿ ಒಂದಾಗಿ ಬದುಕಿದಾಗ ಮಾತ್ರ ಮನುಷ್ಯ ನಿಜಾರ್ಥದಲ್ಲಿ ಜಂಗಮನಾಗಲು ಸಾಧ್ಯ. ಸ್ಥಾವರ ಮತ್ತು ಜಂಗಮ ಎಂಬ ಬಸವಣ್ಣನವರ ವಿಶಾಲ ತಾತ್ವಿಕ ಪರಿಕಲ್ಪನೆಯನ್ನು ಕೇವಲ ದೇವಾಲಯ ಮತ್ತು ಮನುಷ್ಯನ ದೇಹಕ್ಕೆ ಸೀಮಿತಗೊಳಿಸದೆ, ಬದುಕಿನ ಪ್ರತಿಯೊಂದು ಆಯಾಮಕ್ಕೂ ಅನ್ವಯಿಸಿ ನೋಡಬೇಕಿದೆ ಎಂದು ಬಸವಕೇಂದ್ರದ ಪೂಜ್ಯ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

ಭದ್ರಾವತಿಯ ಹಳೆನಗರದ ಶ್ರೀ ಅಕ್ಕಮಹಾದೇವಿ ಕಲ್ಯಾಣ ಮಂದಿರದಲ್ಲಿ ಶ್ರೀ ಅಕ್ಕಮಹಾದೇವಿ ಬಳಗ, ಭದ್ರಾವತಿ, ಶ್ರೀ ಬಸವತತ್ವ ಪೀಠ, ಚಿಕ್ಕಮಗಳೂರು ಹಾಗೂ ಬಸವಕೇಂದ್ರ, ಶಿವಮೊಗ್ಗ ಇವರ ಆಶ್ರಯದಲ್ಲಿ ಆಯೋಜಿಸಿದ್ದ 20ನೇ ವರ್ಷದ ಚಿಂತನ ಕಾರ್ತಿಕ ಕಾರ್ಯಕ್ರಮದ ಒಂಬತ್ತನೇ ದಿನದ ಚಿಂತನ ಗೋಷ್ಠಿಯಲ್ಲಿ ‘ಬಸವಣ್ಣ-ಸ್ಥಾವರ, ಜಂಗಮ’ ವಿಷಯ ಕುರಿತು ಅವರು ಆಳವಾದ ತಾತ್ವಿಕ ವಿಶ್ಲೇಷಣೆಯೊಂದಿಗೆ ಆಶೀರ್ವಚನ ನೀಡಿದರು.

ಬಸವಣ್ಣನವರ ವಚನ ಸಾಹಿತ್ಯದಲ್ಲಿ ಅತ್ಯಂತ ಜನಪ್ರಿಯವಾಗಿರುವ ‘ಉಳ್ಳವರು ಶಿವಾಲಯ ಮಾಡುವರು’ ಎಂಬ ವಚನವನ್ನು ಉಲ್ಲೇಖಿಸಿದ ಶ್ರೀಗಳು, ಈ ವಚನವನ್ನು ನಾವು ಸಾಮಾನ್ಯವಾಗಿ ದೇವಾಲಯ ನಿರ್ಮಾಣ ಮತ್ತು ಮನುಷ್ಯನ ದೇಹಕ್ಕೆ ಸೀಮಿತಗೊಳಿಸಿ ಅರ್ಥೈಸಿಕೊಂಡಿದ್ದೇವೆ. ಆದರೆ ಬಸವಣ್ಣನವರ ಆಶಯ ಅದಕ್ಕಿಂತಲೂ ವಿಶಾಲವಾಗಿದೆ ಎಂದರು.

‘ಉಳ್ಳವರು ಶಿವಾಲಯ ಮಾಡುವರು ನಾನೇನ ಮಾಡಲಿ ಬಡವನಯ್ಯ, ಎನ್ನ ಕಾಲೇ ಕಂಬ ದೇಹವೇ ದೇಗುಲ ಶಿರವೇ ಹೊನ್ನ ಕಳಸವಯ್ಯ ಕೂಡಲಸಂಗಮದೇವ ಕೇಳಯ್ಯ’ ಎಂಬ ವಚನದ ಮೂಲಕ ಬಸವಣ್ಣನವರು ಮನುಷ್ಯನ ಅಂತರಂಗದ ದೈವತ್ವವನ್ನು ಪರಿಚಯಿಸಿದ್ದಾರೆ. ಅಂಗದ ಮೇಲೆ ಇಷ್ಟಲಿಂಗ ಧರಿಸಿದ ವ್ಯಕ್ತಿ ದೇವರನ್ನು ಹೊರಗಡೆ ಹುಡುಕಿಕೊಂಡು ಹೋಗುವ ಅಗತ್ಯವಿಲ್ಲ. ತನ್ನೊಳಗಿನ ದೈವತ್ವವನ್ನು ಅರಿತು, ಇಷ್ಟಲಿಂಗದ ಮೂಲಕ ಆತ್ಮಸಾಕ್ಷಾತ್ಕಾರದ ಹಾದಿಯಲ್ಲಿ ಸಾಗಬೇಕು ಎಂಬುದು ಈ ವಚನದ ಪ್ರಮುಖ ಆಶಯವಾಗಿದೆ ಎಂದು ವಿವರಿಸಿದರು.

ಇತ್ತೀಚೆಗೆ ಚಿಕ್ಕಮಗಳೂರಿನ ಬಸವತತ್ವ ಪೀಠದಲ್ಲಿ ಅಕ್ಟೋಬರ್ 28ರಂದು ಬಿಡುಗಡೆಯಾದ ಡಾ. ಮೃತ್ಯುಂಜಯ ರುಮಾಳೆ ಅವರ ‘ಉಳ್ಳವರು ಶಿವಾಲಯ ದೇಹ ದೇಗುಲ’ ಕೃತಿಯನ್ನು ಉಲ್ಲೇಖಿಸಿದ ಶ್ರೀಗಳು, ಒಂದೇ ವಚನದ ತಾತ್ವಿಕ ಹಿನ್ನೆಲೆಯನ್ನು ವಿಶ್ಲೇಷಿಸುವ 530ಕ್ಕೂ ಹೆಚ್ಚು ಪುಟಗಳ ಬೃಹತ್ ಕೃತಿ ಪ್ರಕಟವಾಗಿರುವುದು ವಚನ ಸಾಹಿತ್ಯದ ಆಳ ಮತ್ತು ಅಗಾಧತೆಯನ್ನು ತೋರಿಸುತ್ತದೆ ಎಂದರು.

ಸ್ಥಾವರಕ್ಕೆ ಅಳಿವುಂಟು, ಜಂಗಮಕ್ಕೆ ಅಳಿವಿಲ್ಲ ಎಂಬುದನ್ನು ಕೇವಲ ಕಟ್ಟಡ ಮತ್ತು ಮನುಷ್ಯನ ದೇಹಕ್ಕೆ ಹೋಲಿಸಿ ನೋಡುವುದು ಸರಿಯಾದ ಅರ್ಥವ್ಯಾಖ್ಯಾನವಲ್ಲ. ಯಾವುದು ಕ್ರಿಯಾಶೀಲತೆಯನ್ನು ಕಳೆದುಕೊಂಡು ಜಡವಾಗುತ್ತದೆಯೋ ಅದು ಸ್ಥಾವರ; ಯಾವುದು ನಿರಂತರವಾಗಿ ಚಟುವಟಿಕೆ, ಚಲನೆ ಮತ್ತು ಬದಲಾವಣೆಯೊಂದಿಗೆ ಮುನ್ನಡೆಯುತ್ತದೆಯೋ ಅದು ಜಂಗಮ. ಹರಿಯುವ ನೀರು ತನ್ನೊಳಗಿನ ಕೊಳೆಯನ್ನು ತೊಳೆದುಕೊಂಡು ಸ್ವಚ್ಛವಾಗಿ ಸಾಗುತ್ತದೆ. ಅದೇ ನೀರನ್ನು ಒಂದೆಡೆ ನಿಲ್ಲಿಸಿದರೆ ಕ್ರಮೇಣ ಕೊಳೆತು ದುರ್ವಾಸನೆ ಬೀರುತ್ತದೆ. ಮನುಷ್ಯನ ಬದುಕೂ ಇದೇ ರೀತಿಯದ್ದು. ಒಂದೇ ಚಿಂತನೆ, ಸಂಪ್ರದಾಯ ಅಥವಾ ಸೀಮಿತ ಮನೋಭಾವಕ್ಕೆ ಅಂಟಿಕೊಂಡು ಕ್ರಿಯಾಶೀಲತೆಯನ್ನು ಕಳೆದುಕೊಂಡರೆ ಬದುಕು ಜಡವಾಗುತ್ತದೆ. ನಿರಂತರ ಚಿಂತನೆ, ಅರಿವು ಮತ್ತು ಕ್ರಿಯಾಶೀಲತೆಯಿಂದ ಮಾತ್ರ ಬದುಕು ಜಂಗಮ ಸ್ವರೂಪ ಪಡೆಯುತ್ತದೆ ಎಂದು ತಿಳಿಸಿದರು.

‘ಸ್ಥಾವರ ಜಂಗಮ ಒಂದೇ ಎಂಬುದು ಕೂಡಲಸಂಗನ ವಚನ’ ಎಂಬ ಬಸವಣ್ಣನವರ ನುಡಿಯನ್ನು ವಿಶ್ಲೇಷಿಸಿದ ಅವರು, ಇಷ್ಟಲಿಂಗವನ್ನು ಸ್ಥಾವರವೆಂದು ಪರಿಗಣಿಸಿದರೂ ಅದು ಜಂಗಮನಿಂದ ಪ್ರತ್ಯೇಕವಾದುದಲ್ಲ. ಇಷ್ಟಲಿಂಗವು ಜಂಗಮನ ಅಂತರಂಗದ ದೈವತ್ವದ ಪ್ರತೀಕವಾಗಿದೆ. ಅದನ್ನು ಧರಿಸಿಕೊಂಡ ವ್ಯಕ್ತಿ ತನ್ನೊಳಗಿನ ದೇವರನ್ನು ಅರಿತುಕೊಳ್ಳಬೇಕು. ತನ್ನ ಮನೆಗೆ ಸಂಕಷ್ಟದಲ್ಲಿರುವ ವ್ಯಕ್ತಿಯೊಬ್ಬರು ಬಂದಾಗ ಅವರನ್ನು ಕಡೆಗಣಿಸಿ ಪೂಜೆಗೆ ಕುಳಿತುಕೊಳ್ಳುವುದಕ್ಕಿಂತ ಅವರ ಕಷ್ಟಕ್ಕೆ ಸ್ಪಂದಿಸುವುದೇ ನಿಜವಾದ ಲಿಂಗಪೂಜೆ. ಮನುಷ್ಯನ ಸೇವೆಯಲ್ಲಿ ಶಿವನನ್ನು ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಇಷ್ಟಲಿಂಗ ಧರಿಸಿಕೊಂಡು ಜಾತೀಯತೆ, ಮೇಲು-ಕೀಳು ಎಂಬ ಭೇದಭಾವ ಮಾಡುತ್ತಿದ್ದರೆ ಅದಕ್ಕಿಂತ ದೊಡ್ಡ ಸ್ಥಾವರತ್ವ ಮತ್ತೊಂದಿಲ್ಲ. ಲಿಂಗಾಯತ ಪರಂಪರೆಯ ಲಾಂಛನಗಳನ್ನು ಧರಿಸುವುದಷ್ಟೇ ಮುಖ್ಯವಲ್ಲ; ಅವುಗಳ ಹಿಂದಿರುವ ತತ್ವವನ್ನು ಜೀವನದಲ್ಲಿ ಅನುಸರಿಸುವುದು ಅತ್ಯಂತ ಮುಖ್ಯ. ಲಿಂಗದ ತಾತ್ವಿಕತೆಯನ್ನು ಮರೆತರೆ ಲಿಂಗವೂ ಸ್ಥಾವರವಾಗುತ್ತದೆ. ವಿಭೂತಿ ಮತ್ತು ರುದ್ರಾಕ್ಷಿಯ ಮೌಲ್ಯಗಳನ್ನು ಅರಿಯದೆ ಕೇವಲ ಪ್ರದರ್ಶನಕ್ಕಾಗಿ ಧರಿಸಿದರೆ ಅವುಗಳೂ ಜಡ ಲಾಂಛನಗಳಾಗುತ್ತವೆ ಎಂದು ಬಸವಕೇಂದ್ರ ಶ್ರೀಗಳು ಎಚ್ಚರಿಸಿದರು.

ಬಸವಣ್ಣನವರ ‘ಹಸ್ತಕಡಗ ಕೈಗಧಿಕ ನೋಡಾ; ಕೊಡಲಹುದು ಕೊಳಲಾಗದು, ಬಾಹುಬಳೆ ತೋಳಿಗಧಿಕ ನೋಡಾ; ಪರವಧುವನಪ್ಪಲಾಗದು, ಕರ್ಣಕುಂಡಲ ಕಿವಿಗಧಿಕ ನೋಡಾ; ಶಿವನಿಂದೆಯ ಕೇಳಲಾಗದು, ಕಂಠಮಾಲೆ ಕೊರಳಿಗಧಿಕ ನೋಡಾ; ಅನ್ಯದೈವಕ್ಕೆ ತಲೆವಾಗಲಾಗದು. ಆಗಳೂ ನಿಮ್ಮುವ ನೆನೆದು, ಕೂಡಲಸಂಗಮದೇವಾ, ನಿಮ್ಮುವನೆ ಪೂಜಿಸಿ ಸದಾ ಸನ್ನಿಹಿತನಾಗಿಪ್ಪನು ಲಿಂಗಶಿಖಾಮಣಿಯಯ್ಯಾ.‘ ಎಂಬ ವಚನವನ್ನು ಉಲ್ಲೇಖಿಸಿದ ಶ್ರೀಗಳು, ರುದ್ರಾಕ್ಷಿ ಧರಿಸುವುದರ ಹಿಂದೆ ನೈತಿಕ ಬದುಕಿನ ಬದ್ಧತೆ ಅಡಗಿದೆ ಎಂದರು.

ಕೈಗೆ ರುದ್ರಾಕ್ಷಿ ಧರಿಸುವುದೆಂದರೆ ದಾನ ಮಾಡುವ ಗುಣ ಬೆಳೆಸಿಕೊಳ್ಳುವುದು, ತೋಳಿಗೆ ಧರಿಸುವುದೆಂದರೆ ಪರಸ್ತ್ರೀಯ ಅಥವಾ ಪರಪುರುಷನ ಬಗ್ಗೆ ಕೆಟ್ಟ ಭಾವನೆ ಹೊಂದದಿರುವುದು, ಕಿವಿಗೆ ಧರಿಸುವುದೆಂದರೆ ಶಿವನಿಂದೆ ಹಾಗೂ ಕೆಟ್ಟ ಮಾತುಗಳಿಗೆ ಕಿವಿಗೊಡದಿರುವುದು; ಕೊರಳಲ್ಲಿ ಧರಿಸುವುದೆಂದರೆ ಅನ್ಯ ದೈವಗಳಿಗೆ ತಲೆಬಾಗದೆ ತನ್ನೊಳಗಿನ ದೈವತ್ವದಲ್ಲಿ ನಂಬಿಕೆ ಇಡುವುದು ಎಂಬ ತಾತ್ವಿಕ ಅರ್ಥವಿದೆ. ಈ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ರುದ್ರಾಕ್ಷಿ ಧಾರಣೆ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ವಿಭೂತಿ ಧಾರಣೆಯ ಹಿಂದಿರುವ ತಾತ್ವಿಕತೆಯನ್ನು ವಿವರಿಸಿದ ಬಸವಕೇಂದ್ರ ಶ್ರೀಗಳು, ಹಿಂದಿನ ಕಾಲದಲ್ಲಿ ಕಟ್ಟಿಗೆ ಒಲೆಯ ಮೇಲೆ ಅಡುಗೆ ಮಾಡಿದ ನಂತರ ಸಿದ್ಧವಾದ ಆಹಾರದ ಪಾತ್ರೆಗಳಿಗೆ ವಿಭೂತಿ ಹಚ್ಚಿ ಗೌರವದಿಂದ ಎತ್ತಿಡುವ ಪದ್ಧತಿ ಇತ್ತು. ಅದು ಆಹಾರದ ಪಾವಿತ್ರ್ಯ ಮತ್ತು ನೈವೇದ್ಯದ ಭಾವನೆಯನ್ನು ಸೂಚಿಸುತ್ತಿತ್ತು. ಇದೇ ರೀತಿ ಹಣೆಗೆ ವಿಭೂತಿ ಧರಿಸುವುದೆಂದರೆ ನಮ್ಮ ಅಂತರಂಗದಲ್ಲಿ ಒಳ್ಳೆಯತನ, ಪವಿತ್ರತೆ ಮತ್ತು ಸಾತ್ವಿಕತೆ ಹೆಚ್ಚಾಗಲಿ ಎಂಬ ಸಂಕಲ್ಪವನ್ನು ಪ್ರತಿದಿನ ನೆನಪಿಸಿಕೊಳ್ಳುವುದಾಗಿದೆ ಎಂದರು.

ವಿಭೂತಿ ಹಚ್ಚಿಕೊಳ್ಳುವುದಷ್ಟೇ ಧರ್ಮವಲ್ಲ, ಅಹಂಕಾರವನ್ನು ಸುಟ್ಟು ವಿನಯವನ್ನು ಬೆಳೆಸಿಕೊಳ್ಳುವುದು ನಿಜವಾದ ವಿಭೂತಿ ಧಾರಣೆ. ನಮ್ಮೊಳಗಿನ ಕೆಟ್ಟ ಆಲೋಚನೆಗಳು ನಾಶವಾಗಿ ಒಳ್ಳೆಯ ಗುಣಗಳು ತುಂಬಿಕೊಳ್ಳಬೇಕು. ಹೊರಗಿನ ಲಾಂಛನಗಳಿಗಿಂತ ಅಂತರಂಗದ ಪರಿವರ್ತನೆಗೆ ಆದ್ಯತೆ ನೀಡಬೇಕು. ಆಗ ಮಾತ್ರ ಲಾಂಛನಗಳು ಜಂಗಮ ಸ್ವರೂಪ ಪಡೆಯುತ್ತವೆ ಎಂದು ಹೇಳಿದರು.

ಚನ್ನಬಸವಣ್ಣನವರ ವಚನವನ್ನು ಉಲ್ಲೇಖಿಸಿದ ಶ್ರೀಗಳು, ಕೇಶ, ಕಷಾಯಾಂಬರ, ವಿಭೂತಿ, ರುದ್ರಾಕ್ಷಿ, ತುರುಬು, ಜಡೆ ಅಥವಾ ಬೋಳು ತಲೆ ಇವು ಯಾವುದೂ ವ್ಯಕ್ತಿಯ ಜಂಗಮತ್ವವನ್ನು ನಿರ್ಧರಿಸುವುದಿಲ್ಲ. ‘ಅರಿವು ಆಚಾರ ಉಳ್ಳೊಡೆ ಜಂಗಮ’ ಎಂಬ ಚನ್ನಬಸವಣ್ಣನವರ ಮಾತೇ ಜಂಗಮತ್ವದ ನಿಜವಾದ ವ್ಯಾಖ್ಯಾನವಾಗಿದೆ ಎಂದರು.

ವ್ಯಕ್ತಿಯ ವೇಷಭೂಷಣಕ್ಕಿಂತ ಆತನ ವ್ಯಕ್ತಿತ್ವ ಮುಖ್ಯ. ಆತ ಏನು ಮಾತನಾಡುತ್ತಾನೆ ಎಂಬುದಕ್ಕಿಂತ ಮಾತನಾಡಿದಂತೆ ನಡೆದುಕೊಳ್ಳುತ್ತಾನೆಯೇ ಎಂಬುದು ಮುಖ್ಯ. ಅರಿವು ಮತ್ತು ಆಚಾರ, ನಡೆ ಮತ್ತು ನುಡಿ ಒಂದಾದಾಗ ಮಾತ್ರ ನಿಜವಾದ ಜಂಗಮತ್ವ ಸಿದ್ಧಿಸುತ್ತದೆ. ಮೈತುಂಬ ವಿಭೂತಿ ಹಚ್ಚಿಕೊಂಡ ಮಾತ್ರಕ್ಕೆ ಯಾರೂ ಶರಣರಾಗುವುದಿಲ್ಲ. ಲಾಂಛನಗಳ ಹಿಂದಿರುವ ಮೌಲ್ಯಗಳನ್ನು ಅರಿತುಕೊಂಡು ಬದುಕಿನಲ್ಲಿ ಪಾಲಿಸುವುದೇ ಶರಣ ಸಂಸ್ಕೃತಿಯ ಮೂಲ ಆಶಯವಾಗಿದೆ ಎಂದು ಹೇಳಿದರು.

ರಾಘವಾಂಕ ಕವಿಯ ‘ಸಿದ್ಧರಾಮ ಚಾರಿತ್ರೆ’ಯಲ್ಲಿನ ಪ್ರಸಂಗವನ್ನು ವಿವರಿಸಿದ ಶ್ರೀಗಳು, ಸಿದ್ಧರಾಮೇಶ್ವರರ ಅಣ್ಣ ಬೊಮ್ಮಣ್ಣನಿಗೆ ಕಾಶಿ, ಕೇದಾರ, ಶ್ರೀಶೈಲ, ಗೋಕರ್ಣ ಸೇರಿದಂತೆ ಪುಣ್ಯಕ್ಷೇತ್ರಗಳ ದರ್ಶನ ಮಾಡುವ ಆಸೆಯಾಗುತ್ತದೆ. ಆದರೆ ಸಿದ್ಧರಾಮೇಶ್ವರರು ತಾವು ನಿರ್ಮಿಸಿದ ಕೆರೆಯಲ್ಲಿಯೇ ಎಲ್ಲ ತೀರ್ಥಗಳೂ ಇವೆ, ತಾವು ಸ್ಥಾಪಿಸಿದ ಲಿಂಗದಲ್ಲಿಯೇ ಎಲ್ಲ ಲಿಂಗಗಳೂ ಇವೆ ಎಂದು ತಿಳಿಸಿ, ದೂರದ ಕ್ಷೇತ್ರಗಳಿಗೆ ಹೋಗುವ ಅಗತ್ಯವಿಲ್ಲ ಎಂದು ಹೇಳುತ್ತಾರೆ.

ಆದರೂ ಅಣ್ಣ ತೀರ್ಥಯಾತ್ರೆಗೆ ಹೊರಟಾಗ ಪ್ರತಿ ಕ್ಷೇತ್ರದ ದಾರಿಯಲ್ಲಿ ಕಣ್ಣು ಕಾಣದಂತಾಗುತ್ತದೆ. ಕೊನೆಗೆ ಸಿದ್ಧರಾಮೇಶ್ವರರ ಬಳಿಗೆ ಮರಳಿ ಬಂದು ತಮ್ಮ ತಪ್ಪನ್ನು ಒಪ್ಪಿಕೊಂಡು ದರ್ಶನಕ್ಕೆ ಅನುಕೂಲ ಮಾಡಿಕೊಡುವಂತೆ ಕೇಳಿಕೊಳ್ಳುತ್ತಾರೆ. ಆಗ ಸಿದ್ಧರಾಮೇಶ್ವರರು, ಎಲ್ಲೆಲ್ಲೋ ಹುಡುಕಿದರೆ ಎಲ್ಲವೂ ಸಿಗುವುದಿಲ್ಲ, ಇರುವ ಜಾಗದಲ್ಲಿಯೇ ದೇವರನ್ನು ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು ಎಂಬ ಸಂದೇಶ ನೀಡುತ್ತಾರೆ.

ದೇವರು ಸರ್ವವ್ಯಾಪಿ, ಸರ್ವಶಕ್ತ. ಆತ ಒಂದು ಕ್ಷೇತ್ರದಲ್ಲಿ ಮಾತ್ರ ಇದ್ದಾನೆ, ಮತ್ತೊಂದು ಕ್ಷೇತ್ರದಲ್ಲಿ ಇಲ್ಲ ಎಂಬುದಲ್ಲ. ನಮ್ಮೊಳಗೆ ದೇವರನ್ನು ಕಾಣಲಾಗದವರು ದೂರದ ಕ್ಷೇತ್ರಗಳಿಗೆ ತೆರಳಿ ಏನು ಕಾಣಲು ಸಾಧ್ಯ? ಎಂಬ ಪ್ರಶ್ನೆಯನ್ನು ಈ ಪ್ರಸಂಗದ ಮೂಲಕ ಸಿದ್ಧರಾಮೇಶ್ವರರು ಮುಂದಿಡುತ್ತಾರೆ ಎಂದು ವಿವರಿಸಿದರು.

ನಂತರ ಅಲ್ಲಮಪ್ರಭುಗಳ ಒಡನಾಟ ಹಾಗೂ ಚನ್ನಬಸವಣ್ಣನವರಿಂದ ಇಷ್ಟಲಿಂಗ ದೀಕ್ಷೆ ಪಡೆದ ಸಿದ್ಧರಾಮೇಶ್ವರರು ತಮ್ಮೊಳಗಿನ ದೈವತ್ವವನ್ನು ಅರಿಯುವ ಸಾಧನೆಯತ್ತ ಸಾಗಿದರು. “ಎಲ್ಲ ಪ್ರಮಥರು ಲಿಂಗವ ಧರಿಸುತ್ತಿರಲು ನಾನೇನು ಒಲ್ಲೆನೆಂಬುವುದು ಕರ್ಮದ ಬಲೆಯೆ, ಮಾಯದ ಬಲೆಯೊ?
ಎಲೆ ಕಪಿಲಸಿದ್ಧಮಲ್ಲಿನಾಥಯ್ಯಾ, ನಾ ಧರಿಸಿಕೊಂಬುವೆ ಲಿಂಗವ. ನೀ ಕರಸಿಕೊಂಬುವನಾಗು ಮತ್ತೊರ್ವನ ನಿನ್ನ ಪೂಜೆಗೆ; ನಾ ನಿನ್ನವನಲ್ಲಲೇ ದೇವಾ!
” ಎಂಬ ಅವರ ವಚನವು ಈ ಆಂತರಿಕ ಪರಿವರ್ತನೆಯ ಸಂಕೇತವಾಗಿದೆ. ತಾವು ಸ್ಥಾಪಿಸಿದ್ದ ಸ್ಥಾವರ ಲಿಂಗಕ್ಕಿಂತ ಅಂಗದ ಮೇಲೆ ಧರಿಸಿದ ಇಷ್ಟಲಿಂಗದ ತಾತ್ವಿಕತೆಯಲ್ಲಿ ತಮ್ಮ ಸಾಧನೆಯ ಪರಿಪೂರ್ಣತೆಯನ್ನು ಕಂಡುಕೊಂಡರು ಎಂದು ತಿಳಿಸಿದರು.

ಇತ್ತೀಚೆಗೆ ಬಸವಣ್ಣನವರ ಕುರಿತು ವಿವಾದಾತ್ಮಕ ಹೇಳಿಕೆಗಳು ಮತ್ತು ಬರಹಗಳು ಸಮಾಜದಲ್ಲಿ ಚರ್ಚೆಗೆ ಕಾರಣವಾಗಿರುವುದನ್ನು ಪ್ರಸ್ತಾಪಿಸಿದ ಬಸವಕೇಂದ್ರ ಶ್ರೀಗಳು, ಯಾವುದೇ ವ್ಯಕ್ತಿಯ ಪ್ರಶ್ನೆಗಳನ್ನು ಅಥವಾ ವಿಮರ್ಶೆಗಳನ್ನು ಸಂಪೂರ್ಣವಾಗಿ ನಿರಾಕರಿಸುವ ಅಗತ್ಯವಿಲ್ಲ. ಆದರೆ ಪ್ರಶ್ನೆ ಮಾಡುವುದಕ್ಕೂ ಒಂದು ಸೌಜನ್ಯ, ಸಂಸ್ಕಾರ ಮತ್ತು ವೈಚಾರಿಕ ವಿಧಾನ ಇರಬೇಕು. ವಿಮರ್ಶೆಯ ಹೆಸರಿನಲ್ಲಿ ಆಧಾರರಹಿತ ಆರೋಪ, ಅವಹೇಳನ ಮತ್ತು ದ್ವೇಷದ ಮಾತುಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದರು.

ರವಿ ಹಂಜ್ ಅವರ ಕೃತಿಯನ್ನು ತಾವು ಸಂಪೂರ್ಣವಾಗಿ ಓದಿಲ್ಲವಾದ್ದರಿಂದ ಅದರ ಕುರಿತು ಸಮಗ್ರ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ಆದರೆ ಅವರ ಸಂದರ್ಶನ ಮತ್ತು ಲೇಖನಗಳಲ್ಲಿ ವ್ಯಕ್ತವಾದ ಕೆಲವು ಮಾತುಗಳು ಆಧಾರರಹಿತವಾಗಿವೆ ಹಾಗೂ ಬಸವಣ್ಣನವರ ಕುರಿತು ಅಸಹನೆ ಮತ್ತು ದ್ವೇಷದ ಭಾವನೆ ವ್ಯಕ್ತವಾಗುವಂತೆ ಕಾಣುತ್ತವೆ ಎಂದು ಹೇಳಿದರು.

ಬಸವಣ್ಣನವರ ಕುರಿತು ವ್ಯಕ್ತವಾದ ಅವಹೇಳನಕಾರಿ ಮಾತುಗಳನ್ನು ರಾಜ್ಯದ ವಿವಿಧ ಸಚಿವರು, ಬಸವಪರ ಸಂಘಟನೆಗಳು ಮತ್ತು ಸಮಾಜದ ಗಣ್ಯರು ಖಂಡಿಸಿರುವುದು ಸ್ವಾಗತಾರ್ಹ. ಬಸವಣ್ಣನವರ ಗೌರವದ ವಿಚಾರದಲ್ಲಿ ಸಮಾಜ ಒಗ್ಗಟ್ಟಿನಿಂದ ಧ್ವನಿ ಎತ್ತಿರುವುದು ಸಂತೋಷದ ಸಂಗತಿ. ಆದರೆ ಅದೇ ಸಂದರ್ಭದಲ್ಲಿ ಬಸವತತ್ವದ ಅನುಯಾಯಿಗಳು ತಮ್ಮ ಸಂಸ್ಕಾರ ಮತ್ತು ಸಭ್ಯತೆಯನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.

ಯಾರೋ ಒಬ್ಬರು ಅವಹೇಳನಕಾರಿ ಭಾಷೆ ಬಳಸಿದ್ದಾರೆ ಎಂಬ ಕಾರಣಕ್ಕೆ ಅವರ ಭಾವಚಿತ್ರಕ್ಕೆ ಪಾದರಕ್ಷೆಯಿಂದ ಹೊಡೆಯುವುದು, ಅಸಭ್ಯ ಪದಗಳಿಂದ ನಿಂದಿಸುವುದು ಬಸವ ಸಂಸ್ಕೃತಿಯಲ್ಲ. ನಾವು ವಿರೋಧಿಸುವ ವ್ಯಕ್ತಿಯ ಮಟ್ಟಕ್ಕೇ ನಾವೂ ಇಳಿದರೆ ನಮ್ಮ ಮತ್ತು ಅವರ ನಡುವಿನ ವ್ಯತ್ಯಾಸವೇನು? ಪ್ರತಿಭಟನೆ ಇರಲಿ, ಖಂಡನೆ ಇರಲಿ, ಅದು ಸಭ್ಯತೆ ಮತ್ತು ಸೌಜನ್ಯದ ಚೌಕಟ್ಟಿನಲ್ಲಿರಬೇಕು. ಬಸವಣ್ಣನವರ ಅನುಯಾಯಿಗಳಲ್ಲಿ ಸಂಸ್ಕಾರ, ಸಹನೆ ಮತ್ತು ವೈಚಾರಿಕ ಪ್ರಜ್ಞೆ ಇರಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ರಾಜ್ಯ ಉಪಾಧ್ಯಕ್ಷ ಬಿ.ಕೆ. ಶಿವಕುಮಾರ್ ಅವರ ಮಾತುಗಳನ್ನು ಸ್ಮರಿಸಿದ ಶ್ರೀಗಳು, ಬಸವಣ್ಣನವರ ‘ಇವನಾರವ ಇವನಾರವ ಎನ್ನದೆ ಇವ ನಮ್ಮವ ಇವ ನಮ್ಮವ’ ಎಂಬ ಆಶಯವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಕಾರ್ಯಕ್ರಮದಲ್ಲಿ ಮುಸ್ಲಿಂ ಯುವತಿಯೊಬ್ಬರು ವಚನ ಗಾಯನ ಮಾಡಿರುವುದು ವಚನ ಸಾಹಿತ್ಯದ ಸಾರ್ವತ್ರಿಕತೆಯನ್ನು ತೋರಿಸುತ್ತದೆ. ವಚನಗಳು ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಲ್ಲ, ಅವು ಸಮಸ್ತ ಮಾನವಕುಲದ ಬದುಕಿಗೆ ದಾರಿದೀಪವಾಗಿವೆ ಎಂಬ ಸಂದೇಶವನ್ನು ಇದು ಸಾರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್. ರಾಜು ಅವರು ಸಮಾಜದಲ್ಲಿ ನಡೆಯುತ್ತಿರುವ ಅಪಸವ್ಯಗಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಜಗದೀಶ್ ಪಟೇಲ್ ಅವರು ‘ಎಲ್ಲೆಲ್ಲೂ ಹುಡುಕಬೇಡಿ, ನಮ್ಮಲ್ಲೇ ಕಂಡುಕೊಳ್ಳೋಣ’ ಎಂಬ ಅರ್ಥಪೂರ್ಣ ಸಂದೇಶ ನೀಡಿದ್ದಾರೆ. ಎಲ್ಲರೂ ಬಸವತತ್ವದ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬಸವಕೇಂದ್ರ ಶ್ರೀಗಳು ತಿಳಿಸಿದರು.

ಭದ್ರಾವತಿಯಲ್ಲಿ ಬಹಳ ದಿನಗಳ ನಂತರ ಚಿಂತನ ಕಾರ್ಯಕ್ರಮ ಮತ್ತೆ ಆಯೋಜನೆಯಾಗಿರುವುದನ್ನು ಉಲ್ಲೇಖಿಸಿದ ಶ್ರೀಗಳು, ಡಾ. ಜಿ.ಎ. ಮಂಜುನಾಥ ಅವರ ಉಪನ್ಯಾಸವು ಬರದಿಂದ ಕಂಗೆಟ್ಟ ನೆಲಕ್ಕೆ ಧಾರಾಕಾರ ಮಳೆ ಸುರಿದಂತಾಯಿತು. ವಚನಗಳ ಉಲ್ಲೇಖ, ತಾತ್ವಿಕ ವಿಶ್ಲೇಷಣೆ ಮತ್ತು ಸರಳವಾದ ನಿರೂಪಣೆಯ ಮೂಲಕ ಅವರು ಶ್ರೋತೃಗಳಿಗೆ ಉತ್ತಮ ವಿಚಾರಧಾರೆ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಕ್ಕಮಹಾದೇವಿ ಬಳಗ ಮತ್ತು ಬಸವಕೇಂದ್ರದ ಪದಾಧಿಕಾರಿಗಳು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿರುವುದು ಅಭಿನಂದನಾರ್ಹ. ಇಂತಹ ಚಿಂತನ ಕಾರ್ಯಕ್ರಮಗಳಿಗೆ ಎಷ್ಟು ಜನರು ಬರುತ್ತಾರೆ, ತಕ್ಷಣ ಎಷ್ಟು ಪರಿಣಾಮ ಉಂಟಾಗುತ್ತದೆ ಎಂಬುದಕ್ಕಿಂತ ಕಾರ್ಯಕ್ರಮದ ನಿರಂತರತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ. ಪ್ರತಿ ತಿಂಗಳೂ ಇಂತಹ ಕಾರ್ಯಕ್ರಮಗಳನ್ನು ನಡೆಸಲು ಎಲ್ಲರೂ ಮನಸ್ಸು ಮಾಡಬೇಕು ಎಂದು ಸಲಹೆ ನೀಡಿದರು.

ಇದಕ್ಕೆ ಪೂರಕವಾಗಿ ಮಣ್ಣಿನ ಮಡಿಕೆ ನಿರಂತರವಾಗಿ ಕಲ್ಲಿನ ಒಂದೇ ಜಾಗಕ್ಕೆ ತಾಕುವುದರಿಂದ ಕಲ್ಲಿನ ಮೇಲೆಯೇ ಗುರುತು ಮೂಡಿಸುವ ಪ್ರಸಂಗವನ್ನು ವಿವರಿಸಿದರು. ಒಂದೇ ದಿನದಲ್ಲಿ ಮಣ್ಣಿನ ಮಡಿಕೆಯಿಂದ ಕಲ್ಲನ್ನು ಸವೆಯಿಸಲು ಸಾಧ್ಯವಿಲ್ಲ. ಆದರೆ ನಿರಂತರವಾಗಿ ಅದೇ ಕ್ರಿಯೆ ಮುಂದುವರಿದಾಗ ಕಲ್ಲಿನ ಮೇಲೂ ಗುರುತು ಮೂಡುತ್ತದೆ. ಇದೇ ರೀತಿ ನಿರಂತರ ಕಲಿಕೆ, ಚಿಂತನೆ ಮತ್ತು ಪ್ರಯತ್ನದಿಂದ ದೊಡ್ಡ ಸಾಧನೆ ಸಾಧ್ಯ. ನಿಧಾನವಾಗಿ ಸಾಗಿದರೂ ನಿರಂತರವಾಗಿ ಸಾಗಬೇಕು. ಸಂಘಟನೆಗಳ ಚಟುವಟಿಕೆಗಳಿಗೂ ಇದೇ ಸೂತ್ರ ಅನ್ವಯಿಸುತ್ತದೆ ಎಂದರು.

ಚಿಂತನ ಕಾರ್ತಿಕದ ಅಂಗವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ವಚನ ಗಾಯನ ಸ್ಪರ್ಧೆ ಹಾಗೂ 12ನೇ ಶತಮಾನದ ವಚನಕಾರರು ಮತ್ತು ವಚನಗಳ ಮೌಲ್ಯಗಳ ಕುರಿತು ವಚನ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಬಸವಕೇಂದ್ರ ಶ್ರೀಗಳು, ಸ್ಪರ್ಧೆಯಲ್ಲಿ ಬಹುಮಾನ ಪಡೆದವರಷ್ಟೇ ಅಲ್ಲದೆ ಭಾಗವಹಿಸಿದ ಪ್ರತಿಯೊಬ್ಬ ವಿದ್ಯಾರ್ಥಿಯೂ ಅಭಿನಂದನೆಗೆ ಅರ್ಹರು. ಬಹುಮಾನ ಸಿಕ್ಕಿದೆಯೇ ಇಲ್ಲವೇ ಎಂಬುದಕ್ಕಿಂತ ಸ್ಪರ್ಧೆಯಲ್ಲಿ ಪಾಲ್ಗೊಂಡು ವಚನಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಬೆಳೆಸಿಕೊಂಡಿರುವುದೇ ದೊಡ್ಡ ಸಾಧನೆ ಎಂದು ಮಕ್ಕಳನ್ನು ಪ್ರೋತ್ಸಾಹಿಸಿದರು.

ಬಸವಣ್ಣನವರ ಸ್ಥಾವರ-ಜಂಗಮ ಪರಿಕಲ್ಪನೆಯ ನಿಜವಾದ ಆಶಯವನ್ನು ಅರಿತು, ಲಾಂಛನಗಳಿಗಿಂತ ಮೌಲ್ಯಗಳಿಗೆ ಆದ್ಯತೆ ನೀಡಿ, ಅರಿವು ಮತ್ತು ಆಚಾರವನ್ನು ಒಂದಾಗಿಸಿಕೊಂಡು ಬದುಕಿದಾಗ ಮಾತ್ರ ನಾವೆಲ್ಲರೂ ನಿಜವಾದ ಜಂಗಮರಾಗಲು ಸಾಧ್ಯ. ಬಸವಣ್ಣನವರ ಆಶಯದಂತೆ ಸಮಾನತೆ, ಮಾನವೀಯತೆ, ಸೇವೆ ಮತ್ತು ಸೌಹಾರ್ದತೆಯ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

20ನೇ ವರ್ಷದ ಚಿಂತನ ಕಾರ್ತಿಕದ ಒಂಬತ್ತನೇ ದಿನದ ಕಾರ್ಯಕ್ರಮಕ್ಕೆ ಶ್ರೀ ಅಕ್ಕಮಹಾದೇವಿ ಬಳಗದ ಪ್ರಭಾರ ಅಧ್ಯಕ್ಷೆ ಗೌರಮ್ಮ ಶಂಕರಯ್ಯ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ರಾಜ್ಯ ಉಪಾಧ್ಯಕ್ಷ ಬಿ.ಕೆ. ಶಿವಕುಮಾರ್, ಉಪನ್ಯಾಸಕ ಮಂಜುನಾಥ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್. ರಾಜು, ಜಗದೀಶ್ ಪಟೇಲ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಭೇದಗಳ ಗೋಡೆ ಕೆಡವಿ, ಮಾನವೀಯತೆಯ ಸೇತುವೆ ನಿರ್ಮಿಸುವುದೇ ಬಸವಣ್ಣನವರ ಸಮನ್ವಯ ದೃಷ್ಟಿ: ಡಾ. ಬಸವ ಮರುಳಸಿದ್ಧ ಸ್ವಾಮೀಜಿ

ಅಂತರಂಗದ ಅಜ್ಞಾನದ ಕತ್ತಲೆ ಕಳೆದು ಜ್ಞಾನದ ಜ್ಯೋತಿ ಬೆಳಗಿಸುವುದೇ ಕಾರ್ತಿಕ ದೀಪೋತ್ಸವದ ನಿಜವಾದ ಆಶಯ: ಶ್ರೀ ರಂಭಾಪುರಿ ಜಗದ್ಗುರುಗಳು

ಸ್ಥಾವರದ ವೈಭವ ಕ್ಷಣಿಕ, ಜಂಗಮದ ಜ್ಞಾನ ಶಾಶ್ವತ; ಮನುಷ್ಯನ ಅಂತರಂಗದಲ್ಲೇ ದೇವರನ್ನು ಕಂಡುಕೊಳ್ಳುವ ಮಾರ್ಗ ತೋರಿದವರು ಬಸವಣ್ಣ: ಡಾ. ಜಿ.ಎ. ಮಂಜುನಾಥ

ಮನುಷ್ಯನ ಕಣ್ಣೀರು ಒರೆಸದ ಧರ್ಮಕ್ಕೆ ಅರ್ಥವಿಲ್ಲ; ಬಸವಣ್ಣನವರ ತತ್ವ ಬದುಕಿನಲ್ಲಿ ಸಾಕಾರವಾಗಲಿ: ಡಾ. ಬಸವ ಮರುಳಸಿದ್ಧ ಸ್ವಾಮೀಜಿ

ನ.23ರಂದು ಮಳಲಿ ಮಠದಲ್ಲಿ ಕಾರ್ತಿಕ ದೀಪೋತ್ಸವ ಹಾಗೂ ಧರ್ಮ ಸಮಾರಂಭ; ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ

ಬಸವಣ್ಣನವರ ಮೌಲ್ಯಗಳು ಸೂರ್ಯ–ಚಂದ್ರರಿರುವವರೆಗೂ ಪ್ರಸ್ತುತ; ಬಸವತತ್ವದ ವಿರುದ್ಧದ ಅಪಪ್ರಚಾರಕ್ಕೆ ಮಣಿಯಬೇಡಿ: ಡಾ. ಬಸವ ಮರುಳಸಿದ್ಧ ಸ್ವಾಮೀಜಿ

Leave a Comment