ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಉಡಾನ್ ಟೆಂಡರ್‌ನಲ್ಲಿ ಸ್ಥಾನ; ವಿಮಾನಯಾನ ಸೇವೆಗೆ ಹೊಸ ಭರವಸೆ! ಮೂರು ತಿಂಗಳ ಮಧ್ಯಂತರದಲ್ಲಿ ರಾಜ್ಯ ಸರ್ಕಾರದಿಂದ ತಾತ್ಕಾಲಿಕ ವಿಜಿ‌ಎಫ್ ನೆರವಿಗೆ ಸಂಸದ ಬಿ.ವೈ. ರಾಘವೇಂದ್ರ ಒತ್ತಾಯ

On: November 23, 2026 2:42 PM
Follow Us:

ಶಿವಮೊಗ್ಗ: ಮಲೆನಾಡಿನ ಅಭಿವೃದ್ಧಿಗೆ ರೆಕ್ಕೆ ಕಟ್ಟಬೇಕಿದ್ದ ಶಿವಮೊಗ್ಗ ವಿಮಾನ ನಿಲ್ದಾಣದ ಭವಿಷ್ಯದ ಬಗ್ಗೆ ಕಳೆದ 15–20 ದಿನಗಳಿಂದ ಮೂಡಿದ್ದ ಆತಂಕದ ಕಾರ್ಮೋಡಗಳು ನಿಧಾನವಾಗಿ ಸರಿಯುತ್ತಿವೆ. ವಿಮಾನಯಾನ ಸೇವೆ ಸ್ಥಗಿತಗೊಳ್ಳುವ ಆತಂಕದ ನಡುವೆಯೇ ಇದೀಗ ಕೇಂದ್ರ ಸರ್ಕಾರದ ಉಡಾನ್ ಯೋಜನೆಯ ಟೆಂಡರ್‌ನಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೂ ಅವಕಾಶ ಕಲ್ಪಿಸಿರುವುದು ಹೊಸ ನಿರೀಕ್ಷೆ ಮೂಡಿಸಿದೆ. ವಿಮಾನಯಾನ ಸಂಸ್ಥೆಗಳು ತಮಗೆ ಅನುಕೂಲವಾದ ಮಾರ್ಗಗಳನ್ನು ಆಯ್ಕೆ ಮಾಡಿಕೊಂಡು ಸೇವೆ ಆರಂಭಿಸಲು ಅವಕಾಶ ನೀಡಲಾಗಿದ್ದು, ಈ ಬೆಳವಣಿಗೆ ಶಿವಮೊಗ್ಗದ ವಾಣಿಜ್ಯ, ಪ್ರವಾಸೋದ್ಯಮ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಹೊಸ ವೇಗ ನೀಡುವ ನಿರೀಕ್ಷೆಯಿದೆ. ಆದರೆ, ಹೊಸ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ವಿಮಾನಯಾನ ಸೇವೆ ಆರಂಭವಾಗುವವರೆಗಿನ ಮೂರ್ನಾಲ್ಕು ತಿಂಗಳ ಮಧ್ಯಂತರದಲ್ಲಿ ವಿಮಾನ ಸಂಪರ್ಕ ಕಡಿತವಾಗದಂತೆ ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ವಿಜಿ‌ಎಫ್ (ವಯಬಿಲಿಟಿ ಗ್ಯಾಪ್ ಫಂಡಿಂಗ್) ನೆರವು ನೀಡಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಒತ್ತಾಯಿಸಿದ್ದಾರೆ.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಉಡಾನ್ ಟೆಂಡರ್‌ನಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಸೇರ್ಪಡೆಗೊಳಿಸಿರುವುದು ಅತ್ಯಂತ ಸಂತೋಷದ ಸಂಗತಿ. ಡಿಸೆಂಬರ್ 30 ಅಥವಾ 31ರೊಳಗೆ ಬಿಡ್ ಸಲ್ಲಿಸಲು ಅಂತಿಮ ಗಡುವು ನೀಡಲಾಗಿದೆ. ವಿಮಾನಯಾನ ಸಂಸ್ಥೆಗಳು ಶಿವಮೊಗ್ಗದಿಂದ ಯಾವ ಯಾವ ನಗರಗಳಿಗೆ ವಿಮಾನ ಸೇವೆ ಆರಂಭಿಸಲು ಸಾಧ್ಯ ಎಂಬುದನ್ನು ಪರಿಶೀಲಿಸಿ ತಮ್ಮದೇ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಯಾವುದೇ ನಿರ್ದಿಷ್ಟ ಮಾರ್ಗವನ್ನು ಟೆಂಡರ್‌ನಲ್ಲಿ ಕಡ್ಡಾಯವಾಗಿ ನಮೂದಿಸಿಲ್ಲ. ಆಸಕ್ತ ವಿಮಾನಯಾನ ಸಂಸ್ಥೆಗಳು ಯಾವುದೇ ಸೂಕ್ತ ಮಾರ್ಗವನ್ನು ಆಯ್ಕೆ ಮಾಡಿಕೊಂಡು ಬಿಡ್‌ನಲ್ಲಿ ಭಾಗವಹಿಸಿದರೂ ಕೇಂದ್ರ ಸರ್ಕಾರದ ಉಡಾನ್ 6.0 ಯೋಜನೆಯಡಿ ಸಬ್ಸಿಡಿ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಟೆಂಡರ್ ಪ್ರಕ್ರಿಯೆಗೆ ಡಿಸೆಂಬರ್ ಅಂತ್ಯ ಕೊನೆಯ ದಿನವಾಗಿರುವುದರಿಂದ, ಬಿಡ್ ಅಂತಿಮಗೊಳಿಸಿ ವಿಮಾನಯಾನ ಸಂಸ್ಥೆಗಳ ಆಯ್ಕೆ ಹಾಗೂ ಕಾರ್ಯಾಚರಣೆ ಆರಂಭವಾಗುವವರೆಗೆ ಫೆಬ್ರವರಿ ಅಥವಾ ಮಾರ್ಚ್ ಆಗುವ ಸಾಧ್ಯತೆಯಿದೆ. ಈ ಮಧ್ಯಂತರದಲ್ಲಿ ಶಿವಮೊಗ್ಗದ ವಿಮಾನ ಸಂಪರ್ಕ ಸಂಪೂರ್ಣವಾಗಿ ಸ್ಥಗಿತಗೊಳ್ಳಬಾರದು. ಹೀಗಾಗಿ ರಾಜ್ಯ ಸರ್ಕಾರ ಕನಿಷ್ಠ ಮೂರು ತಿಂಗಳ ಅವಧಿಗಾದರೂ ವಿಜಿ‌ಎಫ್ ಯೋಜನೆಯಡಿ ನೆರವು ನೀಡಬೇಕು.

ಶಿವಮೊಗ್ಗ–ಬೆಂಗಳೂರು ಮತ್ತು ಶಿವಮೊಗ್ಗ–ಹೈದರಾಬಾದ್ ಮಾರ್ಗಗಳಲ್ಲಿ ತಾತ್ಕಾಲಿಕವಾಗಿ ವಿಮಾನ ಸೇವೆ ಆರಂಭಿಸಲು ರಾಜ್ಯ ಸರ್ಕಾರ ಮುಂದಾಗಬೇಕು. ಕೇಂದ್ರದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ವಿಮಾನಯಾನ ಸಂಸ್ಥೆಗಳು ಇದೇ ಮಾರ್ಗಗಳಲ್ಲಿ ಸೇವೆ ಆರಂಭಿಸಲು ಮುಂದೆ ಬಂದರೆ ರಾಜ್ಯ ಸರ್ಕಾರ ತನ್ನ ತಾತ್ಕಾಲಿಕ ವಿಜಿ‌ಎಫ್ ನೆರವನ್ನು ಹಿಂಪಡೆಯಬಹುದು. ಒಂದು ಅಥವಾ ಎರಡು ತಿಂಗಳಾದರೂ ಸರಿ, ಟೆಂಡರ್ ಪ್ರಕ್ರಿಯೆ ಮುಗಿಯುವವರೆಗೆ ವಿಮಾನ ಸಂಪರ್ಕ ಉಳಿಸಿಕೊಳ್ಳುವುದು ಅತ್ಯಂತ ಮುಖ್ಯ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.

ಹಿಂದಿನ ಉಡಾನ್ ಯೋಜನೆಯ ಅವಧಿ ಮುಗಿದ ನಂತರ ಒಂದು ವರ್ಷದವರೆಗೆ ವಾಣಿಜ್ಯ ಕಾರ್ಯಾಚರಣೆಗೆ ವಿರಾಮ ನೀಡಬೇಕಾದ ಪರಿಸ್ಥಿತಿ ಇತ್ತು. ಆದರೆ ಈ ಬಾರಿ ಅಂತಹ ವಾಣಿಜ್ಯ ವಿರಾಮ ಎದುರಾಗದಂತೆ ಮುಂದಿನ ಟೆಂಡರ್‌ನಲ್ಲಿಯೇ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಸೇರ್ಪಡೆಗೊಳಿಸಿರುವುದು ಮಹತ್ವದ ಬೆಳವಣಿಗೆ. ಮುಂದಿನ ಐದು ವರ್ಷಗಳವರೆಗೆ ವಿಮಾನಯಾನ ಸೇವೆಯ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂಬ ವಿಶ್ವಾಸವಿದೆ. ಈ ಅವಧಿಯಲ್ಲಿ ಶಿವಮೊಗ್ಗದ ವಾಣಿಜ್ಯ ಚಟುವಟಿಕೆಗಳು, ಪ್ರವಾಸೋದ್ಯಮ ಹಾಗೂ ಕೈಗಾರಿಕಾ ಬೆಳವಣಿಗೆ ಮತ್ತಷ್ಟು ವಿಸ್ತಾರಗೊಳ್ಳಲಿದ್ದು, ಸಹಜವಾಗಿಯೇ ವಿಮಾನಯಾನ ಸೇವೆಗಳಿಗೂ ಬೇಡಿಕೆ ಹೆಚ್ಚಾಗಲಿದೆ ಎಂದರು.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಈ ಅವಕಾಶ ದೊರಕುವಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಅನೇಕ ಹಿರಿಯರು ಶ್ರಮಿಸಿದ್ದಾರೆ. ತಾವು ಕೂಡ ಆರಂಭದಿಂದಲೇ ಸಂಬಂಧಪಟ್ಟವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಟೆಂಡರ್‌ನಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಸೇರ್ಪಡೆಯಾಗಬೇಕೆಂದು ಒತ್ತಾಯಿಸುತ್ತಿದ್ದೆ. ಎಲ್ಲರ ಪ್ರಯತ್ನದ ಫಲವಾಗಿ ಇದೀಗ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿದೆ ಎಂದು ಅಭಿನಂದನೆ ಸಲ್ಲಿಸಿದರು.

ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನ ಸೇವೆ ಆರಂಭಿಸುವ ಸಂಬಂಧ ಈಗಾಗಲೇ ಮೂರು ವಿಮಾನಯಾನ ಸಂಸ್ಥೆಗಳೊಂದಿಗೆ ಸಂಪರ್ಕ ಸಾಧಿಸುವ ಪ್ರಯತ್ನ ನಡೆದಿದೆ. ಕನಿಷ್ಠ ಒಂದು ಅಥವಾ ಎರಡು ವಿಮಾನಯಾನ ಸಂಸ್ಥೆಗಳಾದರೂ ಬಿಡ್‌ನಲ್ಲಿ ಭಾಗವಹಿಸುವಂತೆ ಮಾಡಲು ಅಗತ್ಯ ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದೆ. ಹಿಂದಿನ ಉಡಾನ್ ಟೆಂಡರ್‌ನಲ್ಲಿ ಬೆಂಗಳೂರು ಮಾರ್ಗವನ್ನು ನಿರ್ದಿಷ್ಟವಾಗಿ ನಮೂದಿಸಿರಲಿಲ್ಲ. ಆಗ ರಾಜ್ಯ ಸರ್ಕಾರದ ನೆರವಿನಿಂದ ಬೆಂಗಳೂರು ಸಂಪರ್ಕ ಕಲ್ಪಿಸಲಾಗಿತ್ತು. ಈ ಬಾರಿ ವಿಮಾನಯಾನ ಸಂಸ್ಥೆಗಳು ಬಿಡ್‌ನಲ್ಲಿ ಭಾಗವಹಿಸಿ ಬೆಂಗಳೂರಿಗೆ ವಿಮಾನ ಸೇವೆ ನೀಡಲು ಮುಂದೆ ಬಂದರೆ ಅದಕ್ಕೂ ಅವಕಾಶ ದೊರೆಯಲಿದೆ ಎಂದು ಸ್ಪಷ್ಟಪಡಿಸಿದರು.

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರಾತ್ರಿ ವಿಮಾನ ಇಳಿಯುವ ವ್ಯವಸ್ಥೆ ಪೂರ್ಣಗೊಂಡರೆ ಕಾರ್ಗೋ ವಿಮಾನಗಳ ಕಾರ್ಯಾಚರಣೆಗೂ ಅನುಕೂಲವಾಗಲಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾರ್ಗೋ ಸೇವೆ ಆರಂಭಿಸುವುದು ಸಂಪೂರ್ಣವಾಗಿ ಬೇಡಿಕೆ ಮತ್ತು ಸರಕು ಲಭ್ಯತೆಯನ್ನು ಅವಲಂಬಿಸಿದೆ. ಶಿವಮೊಗ್ಗದ ಅಡಿಕೆ, ಚಿಕ್ಕಮಗಳೂರಿನ ಕಾಫಿ ಸೇರಿದಂತೆ ಈ ಭಾಗದ ಕೃಷಿ ಉತ್ಪನ್ನಗಳನ್ನು ಹೊರರಾಜ್ಯ ಹಾಗೂ ವಿದೇಶಗಳಿಗೆ ರಫ್ತು ಮಾಡುವ ಸಾಧ್ಯತೆಗಳನ್ನು ಪರಿಶೀಲಿಸಬೇಕು. ವಾರದಲ್ಲಿ ಎರಡು ಅಥವಾ ಮೂರು ದಿನ ಕಾರ್ಗೋ ವಿಮಾನ ಕಾರ್ಯಾಚರಣೆಗೆ ಅಗತ್ಯ ಪ್ರಮಾಣದ ಸರಕು ಲಭ್ಯವಿದೆಯೇ ಎಂಬುದರ ಕುರಿತು ಸಮೀಕ್ಷೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಕುರಿತು ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಪ್ರತಿಯೊಂದು ಕುಟುಂಬವೂ ತಮ್ಮ ಮನೆಯ ಮಕ್ಕಳನ್ನು ನೋಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳ ಮಕ್ಕಳ ಆರೋಗ್ಯ, ಪೌಷ್ಟಿಕತೆ ಮತ್ತು ಭವಿಷ್ಯದ ಕಾಳಜಿಯನ್ನು ತಾಯಿಯ ಪ್ರೀತಿಯಿಂದ ನೋಡಿಕೊಳ್ಳುತ್ತಿರುವ ಆಶಾ ಕಾರ್ಯಕರ್ತೆಯರ ಸೇವೆ ಅತ್ಯಂತ ಮಹತ್ವದ್ದಾಗಿದೆ.

ಒಬ್ಬರು ತಮ್ಮ ತೋಟ ಅಥವಾ ಹೊಲದಲ್ಲಿ ಮೂರು–ನಾಲ್ಕು ಗಂಟೆ ಕೆಲಸ ಮಾಡಿದರೆ ದಿನಕ್ಕೆ ಸುಮಾರು 600–700 ರೂಪಾಯಿ ಕೂಲಿ ಪಡೆಯುವ ಪರಿಸ್ಥಿತಿ ಇದೆ. ಆದರೆ ಆಶಾ ಕಾರ್ಯಕರ್ತೆಯರು ಮಕ್ಕಳ ಆರೋಗ್ಯ ಮತ್ತು ಸಮಾಜದ ಭವಿಷ್ಯಕ್ಕಾಗಿ ಸೇವೆ ಸಲ್ಲಿಸುತ್ತಿದ್ದರೂ ಅವರಿಗೆ ಸಮರ್ಪಕ ಗೌರವಧನ ದೊರೆಯುತ್ತಿಲ್ಲ. ಸರ್ಕಾರ ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸಿಯಾದರೂ ಅವರ ಗೌರವಧನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು. ತಾಯಂದಿರು ಸಂತೃಪ್ತಿಯಿಂದ ಇದ್ದರೆ ಗ್ರಾಮ, ಶಾಲೆ ಮತ್ತು ಮಕ್ಕಳು ನೆಮ್ಮದಿಯಿಂದ ಇರಲು ಸಾಧ್ಯ. ಚಳಿಯಲ್ಲಿಯೂ ಸಣ್ಣ ಮಕ್ಕಳು ಹಾಗೂ ಅವರೊಂದಿಗೆ ಕಾರ್ಯಕರ್ತೆಯರು ಸಂಕಷ್ಟ ಅನುಭವಿಸುವ ಪರಿಸ್ಥಿತಿ ಮುಂದುವರಿಯಬಾರದು. ಈ ವಿಚಾರದಲ್ಲಿ ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕುರಿತು ಮಾತನಾಡಿದ ಅವರು, ಹಿರಿಯೂರು ಕ್ಷೇತ್ರ ಹಿಂದಿನಿಂದಲೂ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ನೀಡುತ್ತಾ ಬಂದಿದೆ. ಈ ಭಾಗಕ್ಕೆ ಅಪ್ಪರ್ ಭದ್ರಾ ಯೋಜನೆಯ ನೀರು ತಲುಪುತ್ತಿರುವುದರ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪರಿಶ್ರಮ ಹಾಗೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಿದ ಹೆಚ್ಚಿನ ಅನುದಾನದ ಕೊಡುಗೆ ಇದೆ. ಬರಗಾಲದ ನಡುವೆಯೂ ಈ ಭಾಗಕ್ಕೆ ನೀರು ಹರಿಯುತ್ತಿರುವುದು ಬಿಜೆಪಿ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಫಲವಾಗಿದೆ. ಈ ವಿಚಾರಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡುತ್ತಿದ್ದಾರೆ ಎಂದರು.

ಈ ಬಾರಿ ಎನ್‌ಡಿಎ ಉತ್ತಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ರಾಜ್ಯ ಸರ್ಕಾರದ ವಿರುದ್ಧ ಜನರ ಒಲವು ಹಾಗೂ ಕ್ಷೇತ್ರದ ಅಭಿವೃದ್ಧಿಯ ವಿಚಾರಗಳನ್ನು ಮುಂದಿಟ್ಟುಕೊಂಡು ಗೆಲುವು ಸಾಧಿಸುವ ಉತ್ತಮ ವಾತಾವರಣವಿದೆ. ಅಭ್ಯರ್ಥಿ ಆಯ್ಕೆ ಕುರಿತು ಅಧಿಕೃತ ಘೋಷಣೆಗಾಗಿ ಕಾಯುತ್ತಿದ್ದೇವೆ. ಬಿಜೆಪಿ ರಾಜ್ಯಾಧ್ಯಕ್ಷರು ಇತ್ತೀಚೆಗೆ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರೊಂದಿಗೆ ಚರ್ಚೆ ನಡೆಸಿದ್ದಾರೆ. ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೂ ಈ ಕುರಿತು ಮಾತುಕತೆ ನಡೆಸಿದ್ದಾರೆ. ಎರಡೂ ಪಕ್ಷಗಳ ನಾಯಕರು ಸಮಾಲೋಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

ಹಿರಿಯೂರು ಕ್ಷೇತ್ರದ ಅಭ್ಯರ್ಥಿ ಬಿಜೆಪಿ ಅಥವಾ ಜೆಡಿಎಸ್‌ನವರೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ದಾವಣಗೆರೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಅವಕಾಶ ನೀಡಲಾಗಿತ್ತು. ಈ ಬಾರಿ ಹಿರಿಯೂರು ಕ್ಷೇತ್ರವನ್ನು ತಮಗೆ ನೀಡುವಂತೆ ಜೆಡಿಎಸ್ ನಾಯಕರು ಸಹಜವಾಗಿ ಬೇಡಿಕೆ ಇಟ್ಟಿದ್ದಾರೆ. ಎರಡೂ ಪಕ್ಷಗಳ ನಾಯಕರು ಹಾಗೂ ಕೇಂದ್ರದ ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳುತ್ತದೆ ಎಂಬುದನ್ನು ನೋಡಬೇಕಿದೆ. ಯಾರಿಗೆ ಟಿಕೆಟ್ ನೀಡಿದರೂ ಅವರು ಎನ್‌ಡಿಎ ಅಭ್ಯರ್ಥಿಯಾಗಿರುತ್ತಾರೆ. ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕರಾದ ಕೆ.ಜಿ. ಕುಮಾರಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಹೊಳಲೂರು ಸಂತೋಷ್ ಹಾಗೂ ಜಿಲ್ಲಾ ಮಾಧ್ಯಮ ಪ್ರಮುಖರಾದ ಚಂದ್ರಶೇಖರ್ ಎಸ್. ಮತ್ತು ಮಂಜುನಾಥ್ ಎನ್. ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಬೆಂಗಳೂರಿನಿಂದಾಚೆಗೂ ಕೈಗಾರಿಕಾ ಬೆಳವಣಿಗೆ; ಕರ್ನಾಟಕಕ್ಕೆ ಹೊಸ ಹೂಡಿಕೆ ಆಕರ್ಷಿಸುವ ಸಂಕಲ್ಪ: ಸಿಎಂ ಡಿ.ಕೆ. ಶಿವಕುಮಾರ್

ಘೋಷಣೆಗಳ ಸರ್ಕಾರಕ್ಕೆ ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ ಬಿಸಿ ಮುಟ್ಟಿಸಲಿದೆ; ಡಿ.ಕೆ. ಶಿವಕುಮಾರ್ ಆಡಳಿತದ ವಿರುದ್ಧ ಬಿ.ವೈ. ವಿಜಯೇಂದ್ರ ವಾಗ್ದಾಳಿ

ಬಸವಣ್ಣನವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ಸಹಿಸಲಾಗದು; ಅವಹೇಳನಕಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಬೆಕ್ಕಿನಕಲ್ಮಠ ಶ್ರೀಗಳ ಆಗ್ರಹ

ಆಶಾ ಕಾರ್ಯಕರ್ತೆಯರಿಗೆ ₹350 ಕೋಟಿ ನೀಡಲು ಹಿಂದೇಟು; ಕಾಂಗ್ರೆಸ್ ಕಾರ್ಯಕರ್ತರಿಗೆ ಕ್ಯಾಬಿನೆಟ್ ಭಾಗ್ಯ! ಸರ್ಕಾರದ ವಿರುದ್ಧ ಬಿ.ವೈ. ವಿಜಯೇಂದ್ರ ವಾಗ್ದಾಳಿ

ಜಾತಿ, ಧರ್ಮದ ಗೋಡೆಗಳನ್ನು ಮೀರಿ ಮನುಷ್ಯತ್ವದ ಸಮಾಜ ನಿರ್ಮಾಣವೇ ಬಸವಣ್ಣನವರ ಆಶಯ; ಮಾತಿನಲ್ಲಿ ಬಸವತತ್ವವಲ್ಲ, ಬದುಕಿನಲ್ಲಿ ಬಸವತತ್ವ ಅಳವಡಿಸಿಕೊಳ್ಳಬೇಕು: ಕೆ.ಪಿ. ಶ್ರೀಪಾಲ್

ನೌಕರರ ಬೇಡಿಕೆಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಅಸ್ತು; ₹50 ಸಾವಿರ ಹಬ್ಬದ ಮುಂಗಡ ಘೋಷಣೆ, ಒಪಿಎಸ್-ಎನ್‌ಪಿಎಸ್ ಕುರಿತು ಮಹತ್ವದ ಭರವಸೆ

Leave a Comment