ಜ್ಞಾನ, ಶಿಕ್ಷಣ, ಸಂಘಟನೆ, ಸಮಾನತೆ ಮತ್ತು ಸ್ವಾಭಿಮಾನಕ್ಕೆ ಒತ್ತು ನೀಡಿದ ಮಹಾನ್ ಚಿಂತಕರ ಸಂದೇಶ ಇಂದಿಗೂ ಪ್ರಸ್ತುತ
ಮೈಸೂರು, ಸೆ.26: ಬ್ರಹ್ಮಶ್ರೀ ನಾರಾಯಣ ಗುರುಗಳು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗದೆ ಇಡೀ ಮಾನವಕುಲಕ್ಕೆ ಜ್ಞಾನ, ಶಿಕ್ಷಣ, ಸಮಾನತೆ, ಸಂಘಟನೆ ಹಾಗೂ ಸ್ವಾಭಿಮಾನದ ಮಾರ್ಗವನ್ನು ತೋರಿಸಿದ ಮಹಾನ್ ಸಮಾಜ ಸುಧಾರಕರಾಗಿದ್ದಾರೆ. ಅವರು ಪ್ರತಿಪಾದಿಸಿದ ಮಾನವೀಯ ಮೌಲ್ಯಗಳನ್ನು ಇಂದಿನ ಯುವ ಪೀಳಿಗೆ ಅರಿತುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಕರೆ ನೀಡಿದರು.
ನಗರದ ಕರ್ನಾಟಕ ಕಲಾಮಂದಿರದಲ್ಲಿ ಮೈಸೂರು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಜಯಂತ್ಯೋತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಾರಾಯಣ ಗುರುಗಳು ಸಮಾಜದಲ್ಲಿ ಶಿಕ್ಷಣದ ಮಹತ್ವ, ಸಮಾನ ಅವಕಾಶ, ಸ್ವಾವಲಂಬನೆ ಮತ್ತು ಸ್ವಾಭಿಮಾನದ ಕುರಿತು ಜಾಗೃತಿ ಮೂಡಿಸಿದರು. ಅವರ ಚಿಂತನೆಗಳು ಇಂದಿನ ಸಾಮಾಜಿಕ ವ್ಯವಸ್ಥೆಗೂ ಅತ್ಯಂತ ಪ್ರಸ್ತುತವಾಗಿವೆ. ಆದ್ದರಿಂದ ನಾರಾಯಣ ಗುರುಗಳ ಜಯಂತಿಯನ್ನು ಕೇವಲ ಒಂದು ದಿನದ ಆಚರಣೆಗೆ ಸೀಮಿತಗೊಳಿಸದೆ, ಅವರ ವಿಚಾರಗಳನ್ನು ಯುವಜನರು ಮತ್ತು ಮಕ್ಕಳಿಗೆ ತಲುಪಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಸಚಿವರು ಹೇಳಿದರು.
ಸಮುದಾಯದ ಸಂಘಟನೆ ಉತ್ತಮ ರೀತಿಯಲ್ಲಿ ಸಾಗುತ್ತಿರುವುದು ಸಂತಸದ ಸಂಗತಿ. ಯುವಕರು ಇನ್ನಷ್ಟು ಒಗ್ಗಟ್ಟಿನಿಂದ ಮುನ್ನಡೆಯಬೇಕು. ಸಮಾಜದ ಅಭಿವೃದ್ಧಿಗಾಗಿ ಕೈಗೊಳ್ಳುವ ಕಾರ್ಯಗಳಲ್ಲಿ ಅಗತ್ಯ ಸಹಕಾರ ನೀಡಲು ತಾನು ಸಿದ್ಧನಿದ್ದು, ಸಮುದಾಯದ ನ್ಯಾಯಯುತ ಹೋರಾಟಗಳು ಮತ್ತು ಪ್ರಯತ್ನಗಳಿಗೆ ಬೆಂಬಲವಾಗಿ ನಿಲ್ಲುವುದಾಗಿ ಮಧು ಬಂಗಾರಪ್ಪ ಭರವಸೆ ನೀಡಿದರು.
ನಾರಾಯಣ ಗುರುಗಳ ವಿಚಾರಗಳು ಪಠ್ಯದಲ್ಲೂ ಇರಲಿ
ನಾರಾಯಣ ಗುರುಗಳು ಜ್ಞಾನ ಮತ್ತು ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಿದ್ದರು. ಶಿಕ್ಷಣದ ಮೂಲಕ ವ್ಯಕ್ತಿಯ ಬದುಕಿನಲ್ಲಿ ಬದಲಾವಣೆ ತರಬಹುದು ಎಂಬುದನ್ನು ಅವರು ಸಮಾಜಕ್ಕೆ ತೋರಿಸಿಕೊಟ್ಟಿದ್ದರು. ಹೀಗಾಗಿ ಅವರ ವಿಚಾರಧಾರೆ ಕೇವಲ ಜಯಂತಿ ಕಾರ್ಯಕ್ರಮಗಳ ಭಾಷಣಕ್ಕೆ ಸೀಮಿತವಾಗಬಾರದು. ಮಕ್ಕಳ ಪಠ್ಯಪುಸ್ತಕಗಳಲ್ಲಿ ಅವರ ಜೀವನ, ಹೋರಾಟ ಮತ್ತು ಸಮಾಜ ಸುಧಾರಣೆಯ ಚಿಂತನೆಗಳಿಗೆ ಸೂಕ್ತ ಸ್ಥಾನ ದೊರೆಯಬೇಕು. ಅದಕ್ಕಿಂತ ಮುಖ್ಯವಾಗಿ ಅವರ ವಿಚಾರಗಳು ಮಕ್ಕಳ ಮನಸ್ಸಿನಲ್ಲಿ ಬೇರೂರುವಂತೆ ಮಾಡಬೇಕು ಎಂದು ಸಚಿವರು ಹೇಳಿದರು.
ತಾನು ಮೊದಲ ಬಾರಿಗೆ ಶಾಸಕನಾಗಿ ವಿಧಾನಸಭೆಗೆ ಪ್ರವೇಶಿಸಿದ ಸಂದರ್ಭದಲ್ಲಿ ನಾರಾಯಣ ಗುರುಗಳ ಕುರಿತು ಮೂರು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದೆ. ನಾರಾಯಣ ಗುರು ಅಧ್ಯಯನ ಪೀಠ ಸ್ಥಾಪನೆ, ಶಾಲಾ ಪಠ್ಯಪುಸ್ತಕದಲ್ಲಿ ಅವರ ಕುರಿತು ಪಾಠ ಅಳವಡಿಕೆ ಹಾಗೂ ರಾಜ್ಯ ಸರ್ಕಾರದ ವತಿಯಿಂದ ನಾರಾಯಣ ಗುರು ಜಯಂತಿಯನ್ನು ಅಧಿಕೃತವಾಗಿ ಆಚರಿಸುವಂತೆ ಮನವಿ ಮಾಡಿದ್ದೆ. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಮೂರು ಮನವಿಗಳಿಗೂ ಸ್ಪಂದಿಸಿ ಒಪ್ಪಿಗೆ ನೀಡಿದ್ದರು. ಆಗ ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ್ ಅವರು ಮುಂದಿನ ವರ್ಷವೇ ಶಾಲಾ ಪಠ್ಯಪುಸ್ತಕದಲ್ಲಿ ನಾರಾಯಣ ಗುರುಗಳ ಕುರಿತು ಪಾಠ ಅಳವಡಿಸಲು ಕ್ರಮ ಕೈಗೊಂಡಿದ್ದರು. ಇದು ತಮ್ಮ ಸಾರ್ವಜನಿಕ ಬದುಕಿನಲ್ಲಿ ಹೆಮ್ಮೆಯ ಸಂಗತಿಯಾಗಿದೆ ಎಂದು ಮಧು ಬಂಗಾರಪ್ಪ ಸ್ಮರಿಸಿದರು.
ಶಿಕ್ಷಣದಿಂದ ಭವಿಷ್ಯ ರೂಪಿಸಬಹುದು
ನಾರಾಯಣ ಗುರುಗಳು ಶಿಕ್ಷಣವನ್ನು ಸಾಮಾಜಿಕ ಬದಲಾವಣೆಯ ಪ್ರಮುಖ ಸಾಧನವೆಂದು ಪರಿಗಣಿಸಿದ್ದರು. ಮಕ್ಕಳ ಕೈಗೆ ಪೆನ್ನು ನೀಡಿದರೆ ಅವರು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬ ಸಂದೇಶವನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು ಎಂದು ಸಚಿವರು ಹೇಳಿದರು.
ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಒಂದು ಕೋಟಿಗೂ ಅಧಿಕ ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿ ಶಿಕ್ಷಣ ಸಚಿವನಾಗಿ ತಮ್ಮ ಮೇಲಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು.
ಪಕ್ಷವು ಮತ್ತೊಮ್ಮೆ ಸಚಿವನಾಗಿ ಸೇವೆ ಸಲ್ಲಿಸುವ ಅವಕಾಶ ನೀಡಿದೆ. ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಶಿಕ್ಷಣ ಕ್ಷೇತ್ರದಲ್ಲಿ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಪ್ರಯತ್ನಿಸುತ್ತಿದ್ದೇನೆ. ರಾಜ್ಯದ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಭವಿಷ್ಯ ಕಲ್ಪಿಸುವುದು ತಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಮಧು ಬಂಗಾರಪ್ಪ ಹೇಳಿದರು.
ರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳ ವಿಸ್ತರಣೆ
ಕರ್ನಾಟಕ ಪಬ್ಲಿಕ್ ಶಾಲೆಗಳ ಮೂಲಕ ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ತರಲು ಸರ್ಕಾರ ಮುಂದಾಗಿದೆ. ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಪಿಯುಸಿ ಹಂತದವರೆಗೆ ಒಂದೇ ಆವರಣದಲ್ಲಿ ಶಿಕ್ಷಣ ಪಡೆಯುವ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ನಿರಂತರ ಮತ್ತು ಸಮಗ್ರ ಶಿಕ್ಷಣದ ವಾತಾವರಣ ನಿರ್ಮಾಣವಾಗಲಿದೆ.
ಒಂದೇ ಆವರಣದಲ್ಲಿ ಸುಮಾರು 1,200 ವಿದ್ಯಾರ್ಥಿಗಳು ಕಲಿಯುವ ರೀತಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಉದ್ದೇಶವಿದ್ದು, ಮೊದಲ ಹಂತದಲ್ಲಿ ರಾಜ್ಯಾದ್ಯಂತ 1,000 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ನಿರ್ಮಿಸುವ ಕಾರ್ಯ ಕೈಗೊಳ್ಳಲಾಗಿದೆ ಎಂದು ಸಚಿವರು ವಿವರಿಸಿದರು.
ಬಂಗಾರಪ್ಪರ ಜನಪರ ಆಡಳಿತ ಸ್ಮರಣೆ
ತಮ್ಮ ತಂದೆ ಹಾಗೂ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೆ ತಂದ ವಿವಿಧ ಜನಪರ ಯೋಜನೆಗಳನ್ನು ಮಧು ಬಂಗಾರಪ್ಪ ಸ್ಮರಿಸಿದರು.
ರೈತರಿಗೆ ಉಚಿತ ಪಂಪ್ಸೆಟ್ ಒದಗಿಸುವ ಯೋಜನೆ ಕೃಷಿ ಕ್ಷೇತ್ರಕ್ಕೆ ನೆರವಾಯಿತು. ಆಶ್ರಯ ಯೋಜನೆ ಬಡ ಕುಟುಂಬಗಳಿಗೆ ವಸತಿ ಕಲ್ಪಿಸುವ ನಿಟ್ಟಿನಲ್ಲಿ ಸಹಕಾರಿಯಾಯಿತು. ಗ್ರಾಮೀಣ ಕೃಪಾಂಕ ಯೋಜನೆಯಿಂದ ಗ್ರಾಮೀಣ ಭಾಗದ ಯುವಕರಿಗೆ ಸರ್ಕಾರಿ ಉದ್ಯೋಗದ ಅವಕಾಶ ದೊರೆಯಲು ನೆರವಾಯಿತು. ಅಕ್ಷರ ಯೋಜನೆಯ ಮೂಲಕ ಸರ್ಕಾರಿ ಶಾಲೆಗಳನ್ನು ಬಲಪಡಿಸುವ ಪ್ರಯತ್ನ ನಡೆದಿತ್ತು ಎಂದು ಅವರು ಹೇಳಿದರು.
ತಳಮಟ್ಟದಿಂದ ರಾಜಕೀಯ ಜೀವನ ಆರಂಭಿಸಿ ರಾಜ್ಯದ ಮುಖ್ಯಮಂತ್ರಿಯ ಸ್ಥಾನಕ್ಕೇರಿದ ಎಸ್. ಬಂಗಾರಪ್ಪ ಅವರು ಜನಸಾಮಾನ್ಯರ ಸಮಸ್ಯೆಗಳನ್ನು ಹತ್ತಿರದಿಂದ ಅರಿತಿದ್ದರು. ಅವರ ಜನಪರ ಆಡಳಿತದ ಪರಂಪರೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ತಾವು ಕೆಲಸ ಮಾಡುತ್ತಿರುವುದಾಗಿ ಮಧು ಬಂಗಾರಪ್ಪ ಹೇಳಿದರು.
ತಮ್ಮ ತಂದೆಯ ರಾಜಕೀಯ ಶಿಷ್ಯರಾಗಿದ್ದ ಡಿ.ಕೆ. ಶಿವಕುಮಾರ್ ಅವರು ಇಂದು ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನೂ ಅವರು ಇದೇ ಸಂದರ್ಭದಲ್ಲಿ ಉಲ್ಲೇಖಿಸಿದರು.
ನಾರಾಯಣ ಗುರು, ಡಾ. ರಾಜ್ಕುಮಾರ್, ಪುನೀತ್ ನಮ್ಮ ಹೆಮ್ಮೆ
ಸಮಾಜದ ಸಾಧಕರನ್ನು ಗುರುತಿಸಿ, ಅವರ ಕೊಡುಗೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ನಾರಾಯಣ ಗುರುಗಳು ಸಮಾಜ ಸುಧಾರಣೆಯ ಕ್ಷೇತ್ರದಲ್ಲಿ ನೀಡಿದ ಕೊಡುಗೆ ಅಪಾರ. ಇದೇ ರೀತಿ ವರನಟ ಡಾ. ರಾಜ್ಕುಮಾರ್ ಮತ್ತು ನಟ ಪುನೀತ್ ರಾಜ್ಕುಮಾರ್ ಅವರು ತಮ್ಮದೇ ಕ್ಷೇತ್ರದಲ್ಲಿ ಸಾಧನೆ ಮಾಡಿ ಸಮಾಜದ ಹೆಮ್ಮೆಯ ವ್ಯಕ್ತಿಗಳಾಗಿದ್ದಾರೆ ಎಂದು ಸಚಿವರು ಹೇಳಿದರು.
ನ್ಯಾಯಾಂಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿಯೂ ಸಮುದಾಯದ ಅನೇಕರು ಸಾಧನೆ ಮಾಡಿದ್ದಾರೆ. ಇಂತಹ ಸಾಧಕರನ್ನು ಯುವಜನತೆಗೆ ಪರಿಚಯಿಸುವುದರಿಂದ ಅವರಲ್ಲಿ ಆತ್ಮವಿಶ್ವಾಸ ಹಾಗೂ ಸಾಧನೆಯ ಮನೋಭಾವ ಬೆಳೆಸಬಹುದು ಎಂದರು.
ಮಹಾತ್ಮ ಗಾಂಧೀಜಿ ಅವರು ನಾರಾಯಣ ಗುರುಗಳನ್ನು ಭೇಟಿ ಮಾಡಿ ಚರ್ಚಿಸಿದ್ದರು. ಸಮಾಜ ಸುಧಾರಣೆ, ಸಮಾನತೆ, ಮಾನವೀಯತೆ ಹಾಗೂ ಸಾಮಾಜಿಕ ಜಾಗೃತಿಗಾಗಿ ನಾರಾಯಣ ಗುರುಗಳು ನಡೆಸಿದ ಪ್ರಯತ್ನಗಳು ವಿಶಾಲವಾದ ಪರಿಣಾಮ ಬೀರಿವೆ. ಅವರ ವಿಚಾರಧಾರೆ ಇಂದಿಗೂ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿದೆ ಎಂದು ಮಧು ಬಂಗಾರಪ್ಪ ಹೇಳಿದರು.

ಸಚಿವ ಮಧು ಬಂಗಾರಪ್ಪ ಮುಖ್ಯಮಂತ್ರಿ ಆಗಲಿ: ಹರೀಶ್ ಗೌಡ
ಕಾರ್ಯಕ್ರಮದಲ್ಲಿ ಮಾತನಾಡಿದ ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ಅವರು, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರಂತೆ ಅವರ ಪುತ್ರ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ಮಧು ಬಂಗಾರಪ್ಪ ಅವರನ್ನು ಶಾಸಕನಾಗಿ ಹತ್ತಿರದಿಂದ ಗಮನಿಸಿದ್ದು, ಶಿಕ್ಷಣ ಸಚಿವರಾಗಿ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಹಲವು ಬದಲಾವಣೆಗಳನ್ನು ತರುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.
ಮಧು ಬಂಗಾರಪ್ಪ ಅವರು ಮುಂದೊಂದು ದಿನ ರಾಜ್ಯದ ಮುಖ್ಯಮಂತ್ರಿಯಾಗಲಿ ಎಂದು ತಾಯಿ ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥಿಸುವುದಾಗಿ ಕೆ. ಹರೀಶ್ ಗೌಡ ಹೇಳಿದರು.
ಎಸ್. ಬಂಗಾರಪ್ಪ ಅವರು ಮೈಸೂರು ನಗರದೊಂದಿಗೆ ವಿಶೇಷವಾದ ಬಾಂಧವ್ಯ ಹೊಂದಿದ್ದರು. ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಡವರು, ದೀನದಲಿತರು ಹಾಗೂ ಸಮಾಜದ ದುರ್ಬಲ ವರ್ಗಗಳಿಗಾಗಿ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು. ಅದರಲ್ಲೂ ‘ಆರಾಧನಾ’ ಕಾರ್ಯಕ್ರಮವನ್ನು ಮೈಸೂರು ಜನತೆ ಮರೆಯಲು ಸಾಧ್ಯವಿಲ್ಲ ಎಂದರು.
ತಮ್ಮ ತಂದೆ ಜಾರಿಗೆ ತಂದ ಜನಪರ ಯೋಜನೆಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಜನರಿಗೆ ನೆರವಾಗುವ ಕಾರ್ಯಕ್ರಮಗಳನ್ನು ಮಧು ಬಂಗಾರಪ್ಪ ಅವರು ಮುಂದಿನ ದಿನಗಳಲ್ಲಿ ರೂಪಿಸಲಿ. ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ರಾಜ್ಯದ ಜನತೆಗೆ ಇನ್ನಷ್ಟು ಸೇವೆ ಸಲ್ಲಿಸುವ ಅವಕಾಶ ಅವರಿಗೆ ದೊರೆಯಲಿ ಎಂದು ಹರೀಶ್ ಗೌಡ ಆಶಿಸಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಇತರ ವಿದ್ಯಾರ್ಥಿಗಳಲ್ಲಿಯೂ ಉತ್ತಮ ಸಾಧನೆ ಮಾಡುವ ಉತ್ಸಾಹ ಮೂಡಿಸುತ್ತದೆ ಎಂದು ಗಣ್ಯರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನ ಮಠದ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಶಿವಮೊಗ್ಗ ನಾರಾಯಣ ಗುರು ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ರೇಣುಕಾನಂದ ಸ್ವಾಮೀಜಿ, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ ಎಂ., ಕಾವೇರಿ ಜಲಾನಯನ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮರಿಸ್ವಾಮಿ, ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಡಾ. ಎಂ. ತಿಮ್ಮೇಗೌಡ, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಡಾ. ಎಂ.ಕೆ. ಪೋತರಾಜ್, ಮೈಸೂರು ಮಹಿಳಾ ಆರ್ಯ ಈಡಿಗ ಸಂಘದ ಅಧ್ಯಕ್ಷೆ ಸರೋಜಮ್ಮ ಪಾಪೇಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.






