ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಗರವು ಇದೀಗ ಇತಿಹಾಸದ ಸುವರ್ಣ ಪುಟಗಳಲ್ಲಿ ದಾಖಲಾಗುವಂತಹ ಮಹಾ ಧಾರ್ಮಿಕ ಉತ್ಸವಕ್ಕೆ ಸಾಕ್ಷಿಯಾಗುತ್ತಿದೆ. ಬರೋಬ್ಬರಿ 34 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ಇಡೀ ಶಿವಮೊಗ್ಗ ಜಿಲ್ಲೆಯ ಜನಮನದಲ್ಲಿ ಭಕ್ತಿಯ ಅಲೆ ಎಬ್ಬಿಸಲು ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಭವ್ಯ ಅಡ್ಡಪಲ್ಲಕ್ಕಿ ಮಹೋತ್ಸವ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಅಭಿನಂದನಾ ಸಮಾರಂಭ ಹಾಗೂ ವೈಭವದ ಶ್ರೀ ಬಸವೇಶ್ವರ ಪಟ್ಟಣ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಕಾರ್ಯಕ್ರಮಗಳು ನಡೆಯಲಿವೆ.
ಈ ಮಹೋತ್ಸವವನ್ನು ಯಶಸ್ವಿಗೊಳಿಸಲು ಅಹೋರಾತ್ರಿ ಶ್ರಮಿಸುತ್ತಿರುವ ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಸಮಿತಿಯ ಪ್ರಮುಖರ ನೇತೃತ್ವ, ಅವರ ಭವಿಷ್ಯನೋಟ ಹಾಗೂ ಅವರ ಸಂದೇಶ.
”ನಮ್ಮ ತಂದೆಯವರಾದ ಬಿ.ಎಸ್. ಯಡಿಯೂರಪ್ಪನವರ ಸುದೀರ್ಘ ಜನಸೇವೆಯನ್ನು ಗುರುತಿಸಿ ಸಮಾಜವು ಹಮ್ಮಿಕೊಂಡಿರುವ ಈ ಅಭಿನಂದನಾ ಸಮಾರಂಭ ಹಾಗೂ 35 ವರ್ಷಗಳ ನಂತರ ನಡೆಯುತ್ತಿರುವ ಈ ಅಡ್ಡಪಲ್ಲಕ್ಕಿ ಮಹೋತ್ಸವವು ಕೇವಲ ಒಂದು ಧಾರ್ಮಿಕ ಕಾರ್ಯಕ್ರಮವಲ್ಲ; ಇದು ಇತಿಹಾಸದ ಸುವರ್ಣ ಪುಟಗಳಲ್ಲಿ ದಾಖಲಾಗುವ ಐತಿಹಾಸಿಕ ಸಾಂಸ್ಕೃತಿಕ ಹಬ್ಬ.” – ಬಿ.ವೈ. ರಾಘವೇಂದ್ರ – ಅಧ್ಯಕ್ಷರು ಹಾಗೂ ಸಂಸದರು, ಶಿವಮೊಗ್ಗ

ಯಡಿಯೂರಪ್ಪರ ಸೇವೆ ಇಂದಿನ ಪೀಳಿಗೆಗೆ ಮಾದರಿ: ರಾಘವೇಂದ್ರ
”ನಮ್ಮ ತಂದೆಯವರಾದ ಬಿ.ಎಸ್. ಯಡಿಯೂರಪ್ಪನವರು ಸಮಾಜ ಹಾಗೂ ನಾಡಿನ ಏಳಿಗೆಗಾಗಿ ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಅವರ ಈ ಧೀಮಂತ ನಾಯಕತ್ವ, ಸುದೀರ್ಘ ಜನಸೇವೆ ಮತ್ತು ದಣಿವರಿಯದ ಪರಿಶ್ರಮದ ಹಾದಿ ಇಂದಿನ ಯುವ ಪೀಳಿಗೆಗೆ ಅತ್ಯಂತ ದೊಡ್ಡ ಪ್ರೇರಣೆ ಹಾಗೂ ಮಾದರಿಯಾಗಿದೆ. ಈ ಐತಿಹಾಸಿಕ ವೇದಿಕೆಯಲ್ಲಿ ಸಮಾಜವು ಅವರಿಗೆ ಹಮ್ಮಿಕೊಂಡಿರುವ ಗೌರವ ವಂದನೆ ಪ್ರತಿಯೊಬ್ಬರಿಗೂ ಹೆಮ್ಮೆಯ ಕ್ಷಣ,”
ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಯ ಹರಿಕಾರರಾಗಿ, ಸದಾ ಜನಪರ ಚಿಂತನೆಯನ್ನು ರಕ್ತಗತ ಮಾಡಿಕೊಂಡಿರುವ ಸಂಸದ ಬಿ.ವೈ. ರಾಘವೇಂದ್ರ ಅವರು ಈ ಸಮಿತಿಯ ಚುಕ್ಕಾಣಿ ಹಿಡಿದಿರುವುದು ಇಡೀ ಕಾರ್ಯಕ್ರಮಕ್ಕೆ ಆನೆಬಲ ತಂದಿದೆ. ತಮ್ಮ ತಂದೆಯವರ ಮೇಲಿನ ಗೌರವ ಹಾಗೂ ಸಮಾಜದ ಮೇಲಿನ ಭಕ್ತಿಯನ್ನು ಸಮತೋಲನದಲ್ಲಿ ಕೊಂಡೊಯ್ಯುತ್ತಿರುವ ಇವರ ದಕ್ಷ ನಾಯಕತ್ವ ಹಾಗೂ ವ್ಯವಸ್ಥಿತ ಯೋಜನೆಗಳು ಈ ಮಹೋತ್ಸವವನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ದಿವೆ.

ಗುರುಪರಂಪರೆ ಉಳಿವಿಗೆ ಎಲ್ಲರೂ ಕೈಜೋಡಿಸಿ: ಆಯನೂರು ಮಂಜುನಾಥ
”ನಮ್ಮ ವೀರಶೈವ ಲಿಂಗಾಯತ ಸಮಾಜದ ಗುರು ಪರಂಪರೆಯು ಅತ್ಯಂತ ಶ್ರೇಷ್ಠವಾದುದು. ಈ ಸಂಸ್ಕೃತಿಯ ಉಳಿವಿಗಾಗಿ ಮತ್ತು ಮುಂದಿನ ಪೀಳಿಗೆಗೆ ಇದನ್ನು ದಾಟಿಸಲು ನಾವೆಲ್ಲರೂ ಒಗ್ಗಟ್ಟಾಗಬೇಕಿದೆ. ಜಿಲ್ಲೆಯ ಪ್ರತಿಯೊಂದು ಹಳ್ಳಿ, ತಾಲೂಕುಗಳಿಂದ ಭಕ್ತಾದಿಗಳು ಬೃಹತ್ ಸಂಖ್ಯೆಯಲ್ಲಿ ಆಗಮಿಸಿ ಈ ಧಾರ್ಮಿಕ ಕ್ರಾಂತಿಯನ್ನು ಯಶಸ್ವಿಗೊಳಿಸಬೇಕು.” – ಆಯನೂರು ಮಂಜುನಾಥ – ಕಾರ್ಯಾಧ್ಯಕ್ಷರು, ಮಾಜಿ ವಿಧಾನ ಪರಿಷತ್ ಸದಸ್ಯರು
ವಾಕ್ ಚತುರರು ಹಾಗೂ ಸಂಘಟನಾ ಚಾತುರ್ಯಕ್ಕೆ ಹೆಸರಾಗಿರುವ ಹಿರಿಯ ನಾಯಕ ಆಯನೂರು ಮಂಜುನಾಥ ಅವರು ಕಾರ್ಯಾಧ್ಯಕ್ಷರಾಗಿ ಇಡೀ ಸಮಾಜವನ್ನು ಒಂದೇ ಸೂರಿನಡಿ ತರುವಲ್ಲಿ ಯಶಸ್ವಿಯಾಗಿದ್ದಾರೆ. ಸಮಾಜದ ಗುರು ಪರಂಪರೆಯ ಉಳಿವಿಗಾಗಿ ಅವರು ತೋರುತ್ತಿರುವ ಬದ್ಧತೆ ಹಾಗೂ ಇಡೀ ಜಿಲ್ಲೆಯ ಭಕ್ತರನ್ನು ಒಗ್ಗೂಡಿಸಲು ಅವರು ಮಾಡುತ್ತಿರುವ ನಿರಂತರ ಶ್ರಮ ಶ್ಲಾಘನೀಯ.

ಭದ್ರಾವತಿಯಲ್ಲಿ ಭಕ್ತಾಧಿಗಳ ಮಹಾಜಾಗೃತಿ: ಶಾಸಕ ಸಂಗಮೇಶ್ವರ ಹಾಗೂ ಸಹೋದರರ ಸಾರಥ್ಯ
”ನಮ್ಮ ಭದ್ರಾವತಿ ತಾಲ್ಲೂಕಿನ ಪ್ರತಿಯೊಂದು ಗ್ರಾಮ ಮತ್ತು ನಗರದ ಮೂಲೆ ಮೂಲೆಗಳಿಂದ ವೀರಶೈವ ಲಿಂಗಾಯತ ಸಮಾಜದ ಬಂಧುಗಳು ಈ ಐತಿಹಾಸಿಕ ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ಸಾಕ್ಷಿಯಾಗಬೇಕು. ಭಕ್ತರ ಅನುಕೂಲಕ್ಕಾಗಿ ನಾವೇ ಖುದ್ದಾಗಿ ಸಾರಿಗೆ ವ್ಯವಸ್ಥೆ ಸೇರಿದಂತೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿದ್ದೇವೆ. ಎಲ್ಲರೂ ಸಂಭ್ರಮದಿಂದ ಪಾಲ್ಗೊಳ್ಳೋಣ.” – ಬಿ.ಕೆ. ಸಂಗಮೇಶ್ವರ – ಶಾಸಕರು, ಭದ್ರಾವತಿ
ಸಮಾಜದ ಯಾವುದೇ ಧಾರ್ಮಿಕ ಅಥವಾ ಸಾಮಾಜಿಕ ಕಾರ್ಯಕ್ರಮವಿರಲಿ, ಅಲ್ಲಿ ಮೊದಲು ನಿಲ್ಲುವ ಹೆಸರು ಬಿ.ಕೆ. ಸಂಗಮೇಶ್ವರ ಅವರದ್ದು. ಸಮಾಜದ ಕಾರ್ಯಕ್ರಮಗಳಿಗೆ ಆರ್ಥಿಕವಾಗಿ ಅಹೋರಾತ್ರಿ ಸಹಾಯ ಹಸ್ತ ಚಾಚುವ ಇವರ ವಿಶಾಲ ಮನೋಭಾವ ಇಡೀ ಜಿಲ್ಲೆಗೆ ಮಾದರಿ. ಭದ್ರಾವತಿಯ ಜನತೆಯೊಂದಿಗೆ ನಿರಂತರ ಸಂಪರ್ಕದಲ್ಲಿರುವ ಇವರು ಮತ್ತು ಇವರ ಸಹೋದರರು, ಈ ಮಹೋತ್ಸವದ ಯಶಸ್ಸಿಗೆ ತನು-ಮನ-ಧನದ ಸೇವೆಯನ್ನು ಅರ್ಪಿಸಿರುವುದು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದೆ. ಇವರ ಈ ನಿಸ್ವಾರ್ಥ ಸೇವೆ ಮತ್ತು ಸಂಘಟನಾ ಶಕ್ತಿಯಿಂದಾಗಿ ಭದ್ರಾವತಿಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಶಿವಮೊಗ್ಗಕ್ಕೆ ಹರಿದುಬರಲಿದ್ದಾರೆ.

ಯುವಪೀಳಿಗೆಗೆ ಸಂಸ್ಕೃತಿ ಪರಿಚಯಿಸುವ ಅಪೂರ್ವ ಅವಕಾಶ: ರುದ್ರೇಗೌಡ
”ಸುಮಾರು 34-35 ವರ್ಷಗಳ ಸುದೀರ್ಘ ಕಾಲದ ನಂತರ ಶಿವಮೊಗ್ಗದಲ್ಲಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ಇವತ್ತಿನ ಯುವಜನತೆ ನಮ್ಮ ಸಮಾಜದ ಶ್ರೇಷ್ಠ ಆಚಾರ-ವಿಚಾರಗಳು, ಸಂಸ್ಕಾರಗಳನ್ನು ಅರಿತುಕೊಂಡು, ಅದನ್ನು ಮುಂದಿನ ದಿನಗಳಲ್ಲಿ ಮುನ್ನಡೆಸಿಕೊಂಡು ಹೋಗಲು ಈ ಮಹೋತ್ಸವ ಪ್ರೇರಣೆಯಾಗಲಿದೆ.” – ಎಸ್. ರುದ್ರೇಗೌಡ್ರು ಗೌರವಾಧ್ಯಕ್ಷರು, ಮಾಜಿ ವಿಧಾನ ಪರಿಷತ್ ಸದಸ್ಯರು
ಮುತ್ಸದ್ದಿ ರಾಜಕಾರಣಿ, ಸಮಾಜದ ಹಿರಿಯ ಮಾರ್ಗದರ್ಶಕರಾದ ಎಸ್. ರುದ್ರೇಗೌಡ್ರು ಗೌರವಾಧ್ಯಕ್ಷರಾಗಿ ಇಡೀ ಸಮಿತಿಗೆ ಹಿರಿಯಣ್ಣನ ಸನ್ನಿಧಿಯನ್ನು ತಂದುಕೊಟ್ಟಿದ್ದಾರೆ. ಯುವ ಪೀಳಿಗೆಗೆ ಸಂಸ್ಕಾರ ನೀಡುವ ಇವರ ವಿಶಾಲ ಚಿಂತನೆ ಮತ್ತು ಅನುಭವದ ನುಡಿಗಳು ಈ ಇಡೀ ಉತ್ಸವಕ್ಕೆ ಘನತೆಯನ್ನು ತಂದುಕೊಟ್ಟಿವೆ.

ಸಮಾಜದ ಎಲ್ಲಾ ಒಳಪಂಗಡಗಳು ಒಂದಾಗಲಿ: ಸಿ.ಎಸ್. ಷಡಾಕ್ಷರಿ
“ನಮ್ಮ ವೀರಶೈವ ಲಿಂಗಾಯತ ಸಮಾಜದ ಎಲ್ಲಾ ಒಳಪಂಗಡಗಳು ಭೇದ-ಭಾವ ಮರೆತು, ಹೊಂದಾಣಿಕೆ ಮನೋಭಾವದಿಂದ ಒಂದಾಗಬೇಕು. ಈ ಅಡ್ಡಪಲ್ಲಕ್ಕಿ ಮಹೋತ್ಸವ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡುವುದು ನಮ್ಮ ಗುರಿ. ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರ ಅಭಿನಂದನಾ ಸಮಾರಂಭಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು.” – ಸಿ.ಎಸ್. ಷಡಾಕ್ಷರಿ – ಪ್ರಧಾನ ಕಾರ್ಯದರ್ಶಿ (ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು)
ರಾಜ್ಯಾದ್ಯಂತ ತಮ್ಮ ಅದ್ಭುತ ಸಂಘಟನಾ ಶಕ್ತಿಯಿಂದಲೇ ಪ್ರಸಿದ್ಧರಾಗಿರುವ ಸಿ.ಎಸ್. ಷಡಾಕ್ಷರಿ ಅವರು ಈ ಮಹೋತ್ಸವದ ಪ್ರಧಾನ ಸಂಘಟನಾ ಚತುರರಾಗಿದ್ದಾರೆ. ಶಿವಮೊಗ್ಗ ನಗರದ ಮೂಲೆ ಮೂಲೆಗಳಲ್ಲಿ, ಪ್ರತಿಯೊಂದು ಸಂಘ-ಸಂಸ್ಥೆಗಳ ಜೊತೆ ಸರಣಿ ಸಭೆಗಳನ್ನು ನಡೆಸಿ, ಸಮಾಜದ ಎಲ್ಲಾ ವರ್ಗಗಳನ್ನು ಒಗ್ಗೂಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರ ಅದ್ಭುತ ಕಾರ್ಯಕ್ಷಮತೆ ಹಾಗೂ ಸಕ್ರಿಯ ಯುವ ತಂಡದ ಮುನ್ನಡೆಸುವಿಕೆ ಕಾರ್ಯಕ್ರಮದ ಯಶಸ್ಸಿನ ಗ್ಯಾರಂಟಿಯಾಗಿದೆ.

ಶತಮಾನೋತ್ಸವ ಸಮಾಜದ ಹೆಮ್ಮೆಯ ಕ್ಷಣ: ಬಳ್ಳೇಕೆರೆ ಸಂತೋಷ
”ನಮ್ಮ ಹೆಮ್ಮೆಯ ಶ್ರೀ ಬಸವೇಶ್ವರ ಪಟ್ಟಣ ಪತ್ತಿನ ಸಹಕಾರ ಸಂಘವು ನೂರು ವರ್ಷಗಳನ್ನು ಪೂರೈಸಿ ಶತಮಾನೋತ್ಸವದ ಸಂಭ್ರಮದಲ್ಲಿದೆ. ಈ ಐತಿಹಾಸಿಕ ಸಂದರ್ಭದಲ್ಲಿ ನಡೆಯುತ್ತಿರುವ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ಶಿವಮೊಗ್ಗದ ನಗರ ಪ್ರದೇಶ ಹಾಗೂ ಗ್ರಾಮೀಣ ಭಾಗದ ಪ್ರತಿಯೊಂದು ಮನೆಯಿಂದಲೂ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಬೇಕು.” – ಬಳ್ಳೇಕೆರೆ ಸಂತೋಷ್ – ಪ್ರಧಾನ ಕಾರ್ಯದರ್ಶಿ
ಶ್ರೀ ಬಸವೇಶ್ವರ ಪಟ್ಟಣ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಯಶಸ್ವಿಯಾಗಿ ಮುನ್ನಡೆಸುತ್ತಿರುವ ಬಳ್ಳೇಕೆರೆ ಸಂತೋಷ್ ಅವರು, ಸದ್ಯ ಯುವ ಸಮುದಾಯದ ಮುಂಚೂಣಿಯಲ್ಲಿರುವ ಅತ್ಯಂತ ಪ್ರಭಾವಿ ನಾಯಕರಾಗಿದ್ದಾರೆ. ಇಡೀ ಅಡ್ಡಪಲ್ಲಕ್ಕಿ ಮಹೋತ್ಸವದ ಪೂರ್ವಸಿದ್ಧತಾ ಸಭೆಗಳು, ಸೂಕ್ತ ಸಮಿತಿಗಳ ರಚನೆ ಹಾಗೂ ಹಳ್ಳಿ-ಹಳ್ಳಿಗಳಲ್ಲಿ ಸಂಘಟನೆಯ ಜಾಲವನ್ನು ವಿಸ್ತರಿಸುವಲ್ಲಿ ಇವರ ಯುವ ಉತ್ಸಾಹದ ಕಾರ್ಯವೈಖರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರತಿ ಕುಟುಂಬಕ್ಕೂ ಮಹೋತ್ಸವದ ಸಂದೇಶ ತಲುಪಲಿ: ಎಸ್.ಪಿ. ದಿನೇಶ್
”ಇದು ನಮ್ಮ ಮನೆಯ ಹಬ್ಬ. ಸಮಾಜದ ಪ್ರತಿ ಕುಟುಂಬವೂ ತಮ್ಮ ನೆರೆಹೊರೆಯವರಿಗೆ ಹಾಗೂ ಇತರರಿಗೆ ಈ ಮಹೋತ್ಸವದ ಮಹತ್ವವನ್ನು ತಿಳಿಸಬೇಕು. ಎಲ್ಲರನ್ನೂ ಪ್ರೀತಿಯಿಂದ ಆಮಂತ್ರಿಸಿ, ಕಾರ್ಯಕ್ರಮಕ್ಕೆ ಕರೆತಂದು ಈ ಮಹೋತ್ಸವವನ್ನು ಅಭೂತಪೂರ್ವವಾಗಿ ಯಶಸ್ವಿಗೊಳಿಸೋಣ.” – ಎಸ್.ಪಿ. ದಿನೇಶ್ – ಕೋಶಾಧ್ಯಕ್ಷರು
ಸಮಾಜದ ಪ್ರತಿಯೊಬ್ಬ ವ್ಯಕ್ತಿಯೊಂದಿಗೂ ಅತ್ಯಂತ ಆತ್ಮೀಯ ಹಾಗೂ ನಿಕಟ ಬಾಂಧವ್ಯ ಹೊಂದಿರುವ ಎಸ್.ಪಿ. ದಿನೇಶ್ ಅವರು ಕೋಶಾಧ್ಯಕ್ಷರಾಗಿ, ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜದ ಪ್ರಧಾನ ಕಾರ್ಯದರ್ಶಿ ಆಗಿರುವ ಇವರು ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ಕುಟುಂಬವನ್ನು ತಲುಪಿ ಅವರನ್ನು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಗಳಾಗುವಂತೆ ಪ್ರೇರೇಪಿಸುವಲ್ಲಿ ಇವರ ಮೃದು ಸ್ವಭಾವ ಹಾಗೂ ಜನಪರ ಕಾಳಜಿ ಪ್ರಮುಖ ಪಾತ್ರ ವಹಿಸಿದೆ.
ಮಠಾಧೀಶರು, ಗಣ್ಯರು ಮತ್ತು ಭಕ್ತರ ಮಹಾ ಸಮಾಗಮ
ಈ ಭವ್ಯ ಸಮಾರಂಭದ ಸಾರಥ್ಯವನ್ನು ಇವರೊಂದಿಗೆ ಉಪಾಧ್ಯಕ್ಷರು, ವಿವಿಧ ಸಮಿತಿಗಳ ಪದಾಧಿಕಾರಿಗಳು, ಜಿಲ್ಲೆಯ ಪ್ರಮುಖ ಧಾರ್ಮಿಕ ಸಂಘ-ಸಂಸ್ಥೆಗಳ ಅಧ್ಯಕ್ಷರು ಹಾಗೂ ಸಮಸ್ತ ಸಮಾಜ ಬಾಂಧವರು ವಹಿಸಿಕೊಂಡಿದ್ದಾರೆ. ನಾಡಿನ ವಿವಿಧ ಮಠಾಧೀಶರು, ಹರ-ಗುರು-ಚರಮೂರ್ತಿಗಳು, ಆಧ್ಯಾತ್ಮಿಕ ಚಿಂತಕರು, ಪ್ರಮುಖ ಜನಪ್ರತಿನಿಧಿಗಳು ಹಾಗೂ ರಾಜ್ಯದ ನಾನಾ ಮೂಲೆಗಳಿಂದ ಲಕ್ಷಾಂತರ ಭಕ್ತರು ಈ ಸಮಾಗಮದಲ್ಲಿ ಪಾಲ್ಗೊಳ್ಳಲಿದ್ದಾರೆ. ವೇದಿಕೆಯಲ್ಲಿ ದಿವ್ಯ ಆಶೀರ್ವಚನಗಳು, ಉನ್ನತ ಧಾರ್ಮಿಕ ಉಪನ್ಯಾಸಗಳು ಹಾಗೂ ಸಾಂಸ್ಕೃತಿಕ ವೈಭವಗಳು ಕಣ್ಣಿಗೆ ಹಬ್ಬವನ್ನುಂಟು ಮಾಡಲಿವೆ.
ಮಹೋತ್ಸವ ಸಮಿತಿಯ ಗೌರವಾನ್ವಿತ ಕರೆ
ನಮ್ಮ ಮಲೆನಾಡಿನ ನೆಲದಲ್ಲಿ 35 ವರ್ಷಗಳ ನಂತರ ಸಿಕ್ಕಿರುವ ಈ ಅಪರೂಪದ ಧಾರ್ಮಿಕ ಕ್ಷಣವನ್ನು ಯಾರೂ ಮಿಸ್ ಮಾಡಿಕೊಳ್ಳಬೇಡಿ. ಸಮಾಜದ ಸಮಸ್ತ ಶ್ರದ್ಧಾಳುಗಳು, ಸಮಾಜ ಬಾಂಧವರು ತನು-ಮನ-ಧನಪೂರ್ವಕವಾಗಿ ಸೇವೆ ಸಲ್ಲಿಸಿ, ಮೇ 16 ರಂದು ಶ್ರೀ ಬಸವೇಶ್ವರ ಸಹಕಾರ ಸಂಘದ ಶತಮಾನೋತ್ಸವ ಕಾರ್ಯಕ್ರಮ ಕುವೆಂಪು ರಂಗಮಂದಿರದಲ್ಲಿ ಹಾಗೂ 17ರಂದು ಅಡ್ಡ ಪಲ್ಲಕ್ಕಿ ಉತ್ಸವವು ಶ್ರೀ ಬಸವೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ, ಗಾಂಧಿಬಜಾರ, ನೆಹರು ರಸ್ತೆ, ದುರ್ಗಿಗುಡಿ, ಜೈಲ್ ರಸ್ತೆ ಫ್ರೀಡಂ ಪಾರ್ಕ್‌ನಲ್ಲಿ ನಡೆಯುವ ಈ ಮಹೋತ್ಸವದಲ್ಲಿ ಪಾಲ್ಗೊಂಡು ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕಾಗಿ ವಿನಂತಿಸಿದೆ.
ಬನ್ನಿ, ಇತಿಹಾಸದ ಭಾಗವಾಗಿ, ಭಕ್ತಿ ಸಂಭ್ರಮವನ್ನು ಯಶಸ್ವಿಗೊಳಿಸಿ!








