ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಜೀವನದ ಸಮೃದ್ಧಿ, ನೆಮ್ಮದಿ ಮತ್ತು ಶಾಂತಿಗೆ ಧರ್ಮ ಪಾಲನೆಯೇ ಮೂಲಾಧಾರ: ಶ್ರೀ ರಂಭಾಪುರಿ ಜಗದ್ಗುರುಗಳು

On: July 27, 2026 10:49 PM
Follow Us:

ನರೇಗಲ್, ಜುಲೈ 27: ಮಾನವ ಜೀವನದಲ್ಲಿ ಶಾಶ್ವತ ಸಮೃದ್ಧಿ, ನೆಮ್ಮದಿ ಹಾಗೂ ಶಾಂತಿ ನೆಲೆಸಬೇಕಾದರೆ ಧರ್ಮಾಚರಣೆ ಅನಿವಾರ್ಯ. ಧನ, ಅಧಿಕಾರ ಮತ್ತು ಭೌತಿಕ ಸೌಲಭ್ಯಗಳು ಕ್ಷಣಿಕ ಸಂತೋಷ ನೀಡಬಹುದೇ ಹೊರತು ಧರ್ಮ, ಸತ್ಯ, ಪ್ರಾಮಾಣಿಕತೆ ಮತ್ತು ಮಾನವೀಯ ಮೌಲ್ಯಗಳೇ ಬದುಕನ್ನು ಸಾರ್ಥಕಗೊಳಿಸುತ್ತವೆ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಅವರು ರೋಣ ತಾಲ್ಲೂಕಿನ ಕೌಜಗೇರಿ ಗ್ರಾಮದಲ್ಲಿರುವ ಶ್ರೀಮದ್ ರಂಭಾಪುರಿ ಶಾಖಾ ಹಿರೇಮಠದ ನೂತನ ಮಠದ ಉದ್ಘಾಟನೆ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯರ ಮಂಗಳಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಆಯೋಜಿಸಿದ್ದ ಜನಜಾಗೃತಿ ಧರ್ಮ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಧರ್ಮವೇ ಮಾನವ ಜೀವನದ ದಾರಿದೀಪ; ಸದ್ಗುಣಗಳೇ ಬದುಕಿನ ನಿಜವಾದ ಸಂಪತ್ತು: ಶ್ರೀ ರಂಭಾಪುರಿ ಜಗದ್ಗುರುಗಳು

ಮನುಷ್ಯನ ಬದುಕು ಉತ್ತಮ ಚಿಂತನೆಗಳು, ಸತ್ಕಾರ್ಯಗಳು ಹಾಗೂ ಸದ್ಗುಣಗಳಿಂದ ರೂಪುಗೊಳ್ಳಬೇಕು. ದೇಹವು ದೇವರ ದೇಗುಲವಾಗಿದ್ದು, ಮನಸ್ಸು ಪರಿಶುದ್ಧವಾಗಿದ್ದರೆ ಮಾತ್ರ ಭಗವಂತನ ಅನುಗ್ರಹ ದೊರೆಯುತ್ತದೆ. ಸತ್ಯ, ದಯೆ, ಕರುಣೆ, ಪ್ರೀತಿ, ಕ್ಷಮೆ ಮತ್ತು ಶಾಂತಿಯಂತಹ ದೈವಿಕ ಗುಣಗಳನ್ನು ಬೆಳೆಸಿಕೊಂಡಾಗ ಜೀವನ ಅರ್ಥಪೂರ್ಣವಾಗುತ್ತದೆ. ಅಸೂಯೆ, ದ್ವೇಷ, ಅಹಂಕಾರ, ಕ್ರೋಧ ಮತ್ತು ಲೋಭದಂತಹ ದುರ್ಗುಣಗಳನ್ನು ತ್ಯಜಿಸಿ ಆತ್ಮಶುದ್ಧಿಯೊಂದಿಗೆ ಬದುಕಬೇಕು ಎಂದು ಜಗದ್ಗುರುಗಳು ಕರೆ ನೀಡಿದರು.

ಅಧರ್ಮದ ದಾರಿಗಳು ಅನೇಕವಾಗಿದ್ದರೂ ಧರ್ಮದ ಮಾರ್ಗ ಒಂದೇ ಆಗಿದ್ದು, ಅದು ಮಾನವನನ್ನು ಆತ್ಮೋನ್ನತಿ ಮತ್ತು ಮೋಕ್ಷದತ್ತ ಕೊಂಡೊಯ್ಯುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಬೋಧಿಸಿರುವ ಜೀವನ ಮೌಲ್ಯಗಳು ಇಂದಿನ ಸಮಾಜಕ್ಕೂ ಮಾರ್ಗದರ್ಶಕವಾಗಿವೆ. ಅಹಿಂಸೆ ಸೇರಿದಂತೆ ದಶಧರ್ಮ ಸೂತ್ರಗಳು ವ್ಯಕ್ತಿತ್ವ ವಿಕಾಸಕ್ಕೆ ಹಾಗೂ ಸಮಾಜದ ಸುಧಾರಣೆಗೆ ದಾರಿದೀಪವಾಗಿವೆ ಎಂದು ತಿಳಿಸಿದರು.

ಕೌಜಗೇರಿ ಹಿರೇಮಠವು ಶ್ರೀ ರಂಭಾಪುರಿ ಪೀಠದ ಪ್ರಮುಖ ಶಾಖಾ ಮಠವಾಗಿದ್ದು, ನೂತನ ಮಠ ನಿರ್ಮಿಸಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಮಂಗಳಮೂರ್ತಿಯನ್ನು ಪ್ರತಿಷ್ಠಾಪಿಸಿರುವುದು ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಮಹತ್ವದ ಬೆಳವಣಿಗೆಯಾಗಿದೆ. ಈ ಪುಣ್ಯ ಕಾರ್ಯಕ್ಕೆ ಶ್ರಮಿಸಿದ ಮಠದ ಆಡಳಿತ ಮಂಡಳಿ, ದಾನಿಗಳು, ಭಕ್ತರು ಹಾಗೂ ಗ್ರಾಮಸ್ಥರನ್ನು ಅಭಿನಂದಿಸಿ ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಣವು ಕೇವಲ ಬೆಳಕನ್ನು ನೀಡಬಹುದು, ಆದರೆ ಮನುಷ್ಯ ತನ್ನ ಸದ್ಗುಣಗಳಿಂದ ಸಮಾಜವನ್ನು ಬೆಳಗಿಸಬೇಕು ಎಂದರು.

ಯಾವುದೇ ಕಾರ್ಯ ಸಣ್ಣದಾಗಿರಲಿ, ದೊಡ್ಡದಾಗಿರಲಿ ಅದನ್ನು ಶುದ್ಧ ಮನಸ್ಸಿನಿಂದ ಮಾಡಿದಾಗ ಅದರ ಮೌಲ್ಯ ಹೆಚ್ಚುತ್ತದೆ. ಒಡೆಯುವುದಕ್ಕಿಂತ ಕಟ್ಟುವುದು, ವೈಮನಸ್ಸು ಬೆಳೆಸುವುದಕ್ಕಿಂತ ಸಂಬಂಧಗಳನ್ನು ಬೆಳೆಸುವುದು, ದ್ವೇಷಕ್ಕಿಂತ ಪ್ರೀತಿ ಹಂಚುವುದು ಸಮಾಜದ ಉನ್ನತಿಗೆ ಅಗತ್ಯ. ಮಾನವೀಯತೆ, ಸಹಕಾರ ಮತ್ತು ಪರಸ್ಪರ ವಿಶ್ವಾಸ ಬೆಳೆದಾಗ ಮಾತ್ರ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದ ನೆಲೆಸುತ್ತದೆ ಎಂದು ಹೇಳಿದರು.

ಈ ದಿವಸ ಬೆಳಗ್ಗೆ ವೇದಘೋಷ, ರುದ್ರಪಠಣ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯರ ಮಂಗಳಮೂರ್ತಿ ಪ್ರತಿಷ್ಠಾಪನೆ ನೆರವೇರಿತು. ಪೂಜ್ಯ ಸ್ವಾಮೀಜಿಗಳು ಹಾಗೂ ವೈದಿಕರು ಪೂಜಾ ಕಾರ್ಯಗಳನ್ನು ನೆರವೇರಿಸಿ ಭಕ್ತರಿಗೆ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಯಲಬುರ್ಗಾ ಶ್ರೀಧರಮೂರಡಿ ಹಿರೇಮಠದ ಬಸವೇಶ್ವರ ಶಿವಾಚಾರ್ಯರು, ನರಗುಂದ ಪತ್ರಿವನಮಠದ ಡಾ. ಗುರುಸಿದ್ಧವೀರ ಶಿವಾಚಾರ್ಯರು, ರಾಜೂರು-ಅಡೂರಿನ ಅಭಿನವ ಪಂಚಾಕ್ಷರಿ ಶಿವಾಚಾರ್ಯರು, ಅಸೂಟಿ ಹಿರೇಮಠದ ರೇವಣಸಿದ್ಧಯ್ಯ ಸ್ವಾಮೀಜಿ, ಜಗದೀಶಯ್ಯ ಹಿರೇಮಠ, ಸಿದ್ಧಲಿಂಗಯ್ಯ ಹಿರೇಮಠ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಶಶಿಧರ ಭಿಕ್ಷಾವರ್ತಿ ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರೇಶ ವಾಲಿ ಸ್ವಾಗತಿಸಿದರು. ರಾಜೇಶ್ವರಿ ಹಾಗೂ ಸೌಜನ್ಯ ಹಿರೇಮಠ ಪ್ರಾರ್ಥನೆ ನಡೆಸಿದರು. ಪ್ರವೀಣ ಓದಕ್ಕನವರ್ ಕಾರ್ಯಕ್ರಮ ನಿರೂಪಿಸಿದರು.

ಧರ್ಮ ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ವಿವಿಧ ವಾದ್ಯಗೋಷ್ಠಿಗಳು, ಮಂಗಳವಾದ್ಯಗಳು ಹಾಗೂ ಭಕ್ತರ ಜಯಘೋಷಗಳ ನಡುವೆ ಮೆರವಣಿಗೆ ಸಾಗಿದ್ದು, ಗ್ರಾಮದಲ್ಲಿ ಭಕ್ತಿಯ ವಾತಾವರಣ ನಿರ್ಮಾಣವಾಗಿತ್ತು.

ಕಾರ್ಯಕ್ರಮದ ಬಳಿಕ ಸಾವಿರಾರು ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು. ಗ್ರಾಮಸ್ಥರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಭಕ್ತಾದಿಗಳು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡು ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

K.M.Sathish Gowda

Join WhatsApp

Join Now

Facebook

Join Now

Read more

ಸಂಸ್ಕಾರಯುತ ಶಿಕ್ಷಣವೇ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ: ಶ್ರೀ ರಂಭಾಪುರಿ ಜಗದ್ಗುರುಗಳು

ಸಿರಿಗೆರೆಯಲ್ಲಿ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 35ನೇ ಶ್ರದ್ಧಾಂಜಲಿ: ‘ತರಳಬಾಳು’ ನಮ್ಮ ಮಠದ ಸಂವಿಧಾನ!: ಸಮಾಜಮುಖಿ ಆಡಳಿತಕ್ಕೆ ಗುರುಗಳ ಆದರ್ಶ ಅನುಸರಿಸಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ತೂಕಬದ್ಧ ನಡವಳಿಕೆಗೆ ಶ್ರೀ ತರಳಬಾಳು ಜಗದ್ಗುರುಗಳ ಮೆಚ್ಚುಗೆ

ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಕಳುಹಿಸುವುದಿಲ್ಲ ಎಂಬ ಸಂಕಲ್ಪ ಮಾಡಿಕೊಳ್ಳಿ: ಮಕ್ಕಳಿಗೆ ಸಂಸ್ಕಾರ ನೀಡುವುದೇ ದಂಪತಿಗಳ ದೊಡ್ಡ ಕರ್ತವ್ಯ: ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು

ಗುರುಗಳ ಶ್ರದ್ಧಾಂಜಲಿಗೆ ನಿಜವಾದ ಗೌರವವೆಂದರೆ ದುಶ್ಚಟಗಳಿಂದ ದೂರವಿರುವ ಸಂಕಲ್ಪ: ಬಸವಣ್ಣನವರ ವಚನವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜದ ನೋವು-ನಲಿವುಗಳಿಗೆ ಸ್ಪಂದಿಸಿದ ಲಿಂ. ಶ್ರೀ ಶಿವಕುಮಾರ ಮಹಾಸ್ವಾಮೀಜಿ: ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಒಗ್ಗಟ್ಟಿನ ಸಂಕಲ್ಪಕ್ಕೆ ಶಿವಸಂಕಲ್ಪದ ಹೆಜ್ಜೆ! 50 ವರ್ಷ ದಾಂಪತ್ಯ ಪೂರೈಸಿದ ಹಿರಿಯ ದಂಪತಿಗಳಿಗೆ ಗೌರವ: ಶೈಕ್ಷಣಿಕ ಸಾಧಕರಿಗೆ ಪ್ರತಿಭಾ ಪುರಸ್ಕಾರ, ಸಮಾಜದೊಳಗೆ ಹೊಸ ಚೈತನ್ಯ ಮೂಡಿಸಿದ ವಿಶ್ವಾಸ್.ಈ ನೇತೃತ್ವ

ಜಗತ್ತಿನಾದ್ಯಂತ ಇರುವ ಹಳೆಯ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಗೆ ತರಲು ‘ತರಳಬಾಳು ಅಲುಮ್ನಿ ಪೋರ್ಟಲ್’ ಆರಂಭ: ಹಳೆಯ ವಿದ್ಯಾರ್ಥಿಗಳ ಸಾಧನೆಗೆ ಗುರುಗಳ ಶಿಕ್ಷಣ ಸೇವೆಯೇ ಬುನಾದಿ: ಶ್ರೀ ತರಳಬಾಳು ಜಗದ್ಗುರು

Leave a Comment