ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಸ್ವಾರ್ಥ ತೊರೆದು ಸತ್ಯದ ಹಾದಿಯಲ್ಲಿ ನಡೆದರೆ ಬದುಕು ಸಾರ್ಥಕ: ಶ್ರೀ ರಂಭಾಪುರಿ ಜಗದ್ಗುರುಗಳು

On: August 9, 2026 3:16 PM
Follow Us:

ದಾವಣಗೆರೆ, ಆ.8: ಸ್ವಾರ್ಥವನ್ನು ಗೆದ್ದು ಶಾಂತಿಯನ್ನು ಪಡೆದು, ಸತ್ಯದ ಅರಿವಿನೊಂದಿಗೆ ಬದುಕುವ ವ್ಯಕ್ತಿಯೇ ನಿಜವಾದ ಸುಖವನ್ನು ಅನುಭವಿಸುತ್ತಾನೆ. ಸ್ವಾರ್ಥರಹಿತ ಜೀವನಕ್ಕೆ ಸಮಾಜದಲ್ಲಿ ವಿಶೇಷವಾದ ಬೆಲೆ ಹಾಗೂ ಬಲವಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ನಗರದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಮಂಗಲ ಭವನದಲ್ಲಿ ನಡೆದ ಇಷ್ಟಲಿಂಗ ಮಹಾಪೂಜೆ ಹಾಗೂ ಜನಜಾಗೃತಿ ಧರ್ಮ ಸಮಾರಂಭದ ಮೂರನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಮಾನವ ಜೀವನದಲ್ಲಿ ಸತ್ಕಾರ್ಯ, ಸೌಹಾರ್ದತೆ ಮತ್ತು ಶಾಂತಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ. ಸತ್ವರ್ತನೆ ಮತ್ತು ಸೌಹಾರ್ದತೆಯೇ ಶಾಂತಿ ಹಾಗೂ ಸಮೃದ್ಧಿಯ ಯಶಸ್ಸಿಗೆ ಪ್ರಮುಖ ಸೋಪಾನಗಳಾಗಿವೆ. ಹೊಸತನದೊಂದಿಗೆ ಹಿರಿತನದ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಬದುಕಿಗೆ ನಿಜವಾದ ಬೆಲೆ ಮತ್ತು ಬಲ ದೊರೆಯುತ್ತದೆ ಎಂದು ಜಗದ್ಗುರುಗಳು ತಿಳಿಸಿದರು.

ಅನುಕೂಲ ಹಾಗೂ ಪ್ರತಿಕೂಲ ಪರಿಸ್ಥಿತಿಗಳೆರಡನ್ನೂ ಸಮಚಿತ್ತದಿಂದ ಎದುರಿಸಿ ಬದುಕುವುದು ಜೀವನದ ಒಂದು ಕಲೆ. ಮನಸ್ಸು, ಬುದ್ಧಿ ಮತ್ತು ಸದ್ವಿಚಾರಗಳು ಸದೃಢವಾಗಿ ಬೆಳೆದಾಗ ವ್ಯಕ್ತಿಯ ಬದುಕಿನಲ್ಲಿ ಶ್ರೇಯಸ್ಸು ನೆಲೆಗೊಳ್ಳುತ್ತದೆ. ಆರೋಗ್ಯಪೂರ್ಣ ಹಾಗೂ ಸದೃಢ ಸಮಾಜ ನಿರ್ಮಾಣಕ್ಕೆ ಉತ್ತಮ ಆದರ್ಶಗಳು ದಾರಿದೀಪವಾಗಬೇಕು. ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳು ಕಣ್ಮರೆಯಾದರೆ ಧರ್ಮ, ಸಂಸ್ಕೃತಿ ಹಾಗೂ ಜೀವನ ಮೌಲ್ಯಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂದರು.

ಗುರುವಿನ ಬೋಧನೆಯಿಂದ ಮನಸ್ಸು ಅರಳುತ್ತದೆ. ಉತ್ತಮ ಭಾವನೆಗಳು ವಿಕಾಸಗೊಳ್ಳುತ್ತವೆ. ಗುರುವಿನ ಸಾನ್ನಿಧ್ಯ ಮತ್ತು ಮಾರ್ಗದರ್ಶನ ವ್ಯಕ್ತಿಯ ಬದುಕಿಗೆ ಹೊಸ ದಿಕ್ಕನ್ನು ನೀಡುತ್ತದೆ. ವೀರಶೈವ ಧರ್ಮದಲ್ಲಿ ಮಾತ್ರವಲ್ಲದೆ ಎಲ್ಲ ಧರ್ಮಗಳಲ್ಲಿಯೂ ಗುರುವಿಗೆ ಮಹತ್ವದ ಸ್ಥಾನ ನೀಡಲಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಶಿವಾದ್ವೈತ ತತ್ವಸಿದ್ಧಾಂತದಲ್ಲಿ ಜೀವಾತ್ಮನು ಪರಮಾತ್ಮನೊಂದಿಗೆ ಒಂದಾಗುವ ಸಾಧನಾ ಮಾರ್ಗವನ್ನು ಅರ್ಥಪೂರ್ಣವಾಗಿ ವಿವರಿಸಲಾಗಿದೆ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಇ. ರಂಗಸ್ವಾಮಿ ಮಾತನಾಡಿ, ಆದರ್ಶ ಬದುಕಿಗೆ ಗುರು ಕಾರುಣ್ಯ ಹಾಗೂ ಧರ್ಮಶ್ರದ್ಧೆ ಅತ್ಯವಶ್ಯಕ ಎಂದು ಹೇಳಿದರು.

ಗುರುದೇವರ ಕರುಣೆಗೆ ಯಾವುದೇ ಬೆಲೆ ಕಟ್ಟಲು ಸಾಧ್ಯವಿಲ್ಲ. ತಾಯಿ-ತಂದೆಯ ಹೃದಯಕ್ಕೆ ಮಗುವಿನ ಶ್ರೇಯಸ್ಸು ಎಷ್ಟು ಮುಖ್ಯವೋ, ಗುರುವಿಗೆ ಶಿಷ್ಯನ ಉದ್ಧಾರ ಅಷ್ಟೇ ಮುಖ್ಯ. ತಾಯಿ-ತಂದೆ ಮಗನನ್ನು ಮೆಚ್ಚಿದರೆ ಆತನ ಬದುಕಿಗೆ ಸಂತೋಷ ದೊರೆಯುತ್ತದೆ; ಗುರು ಶಿಷ್ಯನನ್ನು ಮೆಚ್ಚಿದರೆ ಆತನ ಜೀವನದ ಉದ್ಧಾರ ಸಾಧ್ಯವಾಗುತ್ತದೆ. ಗುರು-ಶಿಷ್ಯ ಪರಂಪರೆ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ ಎಂದು ಅವರು ಹೇಳಿದರು.

ವೀರಶೈವ-ಲಿಂಗಾಯತ ಮುಖಂಡ ಎಚ್.ಎಸ್. ನಾಗರಾಜ್ ಮಾತನಾಡಿ, ಸಮಾಜದ ಶಕ್ತಿ ಬಹಳ ದೊಡ್ಡದಾಗಿದೆ. ಒಳಪಂಗಡ, ಭಿನ್ನಾಭಿಪ್ರಾಯಗಳನ್ನು ಮರೆತು ಎಲ್ಲರೂ ಒಂದಾಗಿ ಬದುಕಿದಾಗ ಸಮಾಜದ ಶಕ್ತಿ ಇನ್ನಷ್ಟು ಹೆಚ್ಚುತ್ತದೆ. ಒಗ್ಗಟ್ಟು ಮತ್ತು ಪರಸ್ಪರ ಸಹಕಾರದಿಂದ ಮಾತ್ರ ಸಮೃದ್ಧ ಹಾಗೂ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.

ರಾಣೇಬೆನ್ನೂರು ಹಿರೇಮಠದ ಶಿವಯೋಗಿ ಶಿವಾಚಾರ್ಯರು ಮಾತನಾಡಿ, ಸಮೃದ್ಧ ಹಾಗೂ ಸದೃಢ ನಾಡು ಕಟ್ಟುವುದು ಧರ್ಮಪೀಠಗಳ ಪ್ರಮುಖ ಗುರಿಯಾಗಿದೆ. ಸಂವೇದನಾಶೀಲ ಜೀವನಕ್ಕೆ ವೀರಶೈವ ಧರ್ಮ ನೀಡಿರುವ ಕೊಡುಗೆ ಅಪಾರ. ಧರ್ಮದ ತತ್ವ ಮತ್ತು ದರ್ಶನಗಳನ್ನು ಅರಿತುಕೊಳ್ಳಲು ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಜ್ಞಾನ ಅಗತ್ಯವಾಗಿದೆ ಎಂದರು.

ಧರ್ಮದ ಸಂಗಮದಲ್ಲಿ ಮನುಷ್ಯ ತನ್ನ ಬದುಕನ್ನು ರೂಪಿಸಿಕೊಂಡಾಗ ಜೀವನ ಉಜ್ವಲವಾಗುತ್ತದೆ. ಧರ್ಮ ಮನುಷ್ಯನಿಗೆ ಬದುಕಿನ ಮಾರ್ಗವನ್ನು ತೋರಿಸುತ್ತದೆ. ವಿಜ್ಞಾನ ವೇಗವನ್ನು ನೀಡುತ್ತದೆ; ಆದರೆ ಅದಕ್ಕೆ ಸರಿಯಾದ ಮಾರ್ಗದರ್ಶನ ಅಗತ್ಯ. ಧರ್ಮ ಮತ್ತು ವಿಜ್ಞಾನ ಎರಡರ ಸಮನ್ವಯದೊಂದಿಗೆ ಸಾಗಿದಾಗ ಮಾನವ ಜೀವನ ಇನ್ನಷ್ಟು ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ ಎಂದು ಹೇಳಿದರು.

ಕಣೇಕುಪ್ಪಿ ಗವಿಮಠದ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯರು ಮಾತನಾಡಿ, ಅಂತರಂಗ ಹಾಗೂ ಬಹಿರಂಗ ಶುದ್ಧಿಗೆ ವೀರಶೈವ ಧರ್ಮ ವಿಶೇಷ ಆದ್ಯತೆ ನೀಡಿದೆ. ಮನುಷ್ಯನ ಚಿಂತನೆ, ನಡೆ-ನುಡಿ ಹಾಗೂ ಕಾಯಕದಲ್ಲಿ ಶುದ್ಧತೆ ಮೂಡಿದಾಗ ಮಾತ್ರ ಸಮಾಜದಲ್ಲಿ ಉತ್ತಮ ಪರಿವರ್ತನೆ ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಾವೀದ್‌ಸಾಬ್ ಸಂತೇಬೆನ್ನೂರು ಅವರಿಗೆ ‘ವ್ಯವಹಾರ ಕಲಾ ಕೌಶಲ್ಯ’ ಪ್ರಶಸ್ತಿ ನೀಡಿ ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.
ಅವರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಲವು ಗಣ್ಯರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.

ಆವರಗೊಳ್ಳ, ಸಂಗೊಳ್ಳಿ, ಚನ್ನಗಿರಿ, ತಾವರೇಕೆರೆ ಸೇರಿದಂತೆ ವಿವಿಧ ಭಾಗಗಳ ಶ್ರೀಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮಾಜಿ ಸಚಿವ ರೇಣುಕಾಚಾರ್ಯ, ಡಾ. ರೇಣುಕಾಧ್ಯ ಎಂ.ಎಂ., ಮಹೇಶ್ವರಿ ಬಿ. ಮಂಜುನಾಥ್, ಗೀತಾ ಬಸವರಾಜ್ ಕರಿಶೆಟ್ಟಿ, ಪ್ರತಿಭಾ ಶ್ರೀನಿವಾಸ್, ನಳಿನಿ ಕೆ.ಎಸ್., ಸುಜಿತ್ ಕುಮಾರ್, ಸುಮಾ ನಾಗರಾಜ್ ಅಂದೇಲಿಮಠ, ರತ್ನಮ್ಮ ದೇವರಮನಿ, ಶಿಲ್ಪಾ, ಚೈತ್ರಾ, ರಾಜೇಶ್ವರಿ, ದಿವ್ಯಾ, ಸ್ನೇಹಾ, ಚಂದ್ರಶೇಖರ ಮಠ ಹಾಗೂ ನಿರ್ಮಲಾ ಪ್ರಭುಸ್ವಾಮಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಶರಭೇಶ್ವರ ಹೋಟೆಲ್ ಮಾಲೀಕರಾದ ಬಸವರಾಜಯ್ಯ ದಂಪತಿ ಶ್ರೀ ರಂಭಾಪುರಿ ಜಗದ್ಗುರುಗಳಿಗೆ ಗೌರವ ಮಾಲಾರ್ಪಣೆ ಸಲ್ಲಿಸಿದರು. ಹರಿಹರದ ಕಾಂತರಾಜ್ ಮತ್ತು ವೀರೇಶ್ ಸಂಗಡಿಗರಿಂದ ಸಂಗೀತ ಸೌರಭ ಕಾರ್ಯಕ್ರಮ ನಡೆಯಿತು. ಸೋಗಿ ಶಾಂತಕುಮಾರ್ ಸ್ವಾಗತಿಸಿದರು. ಡಾ. ಕೋಟ್ರೇಶಪ್ಪನವರು ಕಾರ್ಯಕ್ರಮ ನಿರೂಪಿಸಿದರು.

ಸಮಾರಂಭದ ಅಂಗವಾಗಿ ಬೆಳಗ್ಗೆ ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಇಷ್ಟಲಿಂಗ ಮಹಾಪೂಜೆ ನೆರವೇರಿಸಲಾಯಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪೂಜೆಯಲ್ಲಿ ಭಾಗವಹಿಸಿ ಜಗದ್ಗುರುಗಳ ಆಶೀರ್ವಾದ ಪಡೆದರು.

K.M.Sathish Gowda

Join WhatsApp

Join Now

Facebook

Join Now

Read more

ಮಾನವೀಯತೆಯ ಬೆಳವಣಿಗೆಯೇ ಸಮಾಜದ ಶಕ್ತಿ; ಧರ್ಮ ಪ್ರಜ್ಞೆಯನ್ನು ಆಚರಣೆಯಲ್ಲಿ ಅಳವಡಿಸಿಕೊಂಡಾಗಲೇ ಶಾಂತಿ ಸಾಧ್ಯ: ಶ್ರೀ ರಂಭಾಪುರಿ ಜಗದ್ಗುರುಗಳು

ದಾವಣಗೆರೆಯಲ್ಲಿ ವೈಭವದ ‘ಜನಜಾಗೃತಿ ಧರ್ಮ ಸಮಾರಂಭ’; ಬದಲಾವಣೆಯ ಹಾದಿಯಲ್ಲಿ ಬೆಳವಣಿಗೆ ಸಾಧಿಸಿ ಮೌಲ್ಯಯುತ ಬದುಕು ರೂಪಿಸಿಕೊಳ್ಳಿ: ಶ್ರೀ ರಂಭಾಪುರಿ ಜಗದ್ಗುರುಗಳು

ಧರ್ಮ ಮತ್ತು ಆಧ್ಯಾತ್ಮಿಕ ಮೌಲ್ಯಗಳೇ ಸುಖ-ಶಾಂತಿಯ ಬದುಕಿನ ಅಡಿಪಾಯ: ಶ್ರೀ ರಂಭಾಪುರಿ ಜಗದ್ಗುರುಗಳು

‘ಹಣವಲ್ಲ, ಅನ್ನ ಮತ್ತು ಸಂಸ್ಕಾರವೇ ಬದುಕಿನ ನಿಜವಾದ ಸಂಪತ್ತು’; ಚಿನ್ನವಿಲ್ಲದೇ ಬದುಕಬಹುದು, ಆದರೆ ಅನ್ನವಿಲ್ಲದೇ ಬದುಕಲು ಸಾಧ್ಯವಿಲ್ಲ: ಶ್ರೀ ರಂಭಾಪುರಿ ಜಗದ್ಗುರುಗಳು

ಸತ್ಯ, ದಯೆ ಮತ್ತು ಸೇವೆಯೇ ಬದುಕಿನ ನಿಜವಾದ ಧರ್ಮ; ಸನ್ಮಾನಕ್ಕಿಂತ ಸಂಸ್ಕಾರ ಮತ್ತು ಸಂಸ್ಕೃತಿ ಮುಖ್ಯ: ಶ್ರೀ ರಂಭಾಪುರಿ ಜಗದ್ಗುರುಗಳು

ಹೆತ್ತ ತಾಯಿ, ಜ್ಞಾನ ನೀಡಿದ ಗುರುವನ್ನು ಎಂದಿಗೂ ಮರೆಯಬಾರದು: ಶ್ರೀ ರಂಭಾಪುರಿ ಜಗದ್ಗುರುಗಳು

Leave a Comment