ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಶಿಕಾರಿಪುರದ ಮಣ್ಣಿನಿಂದ ಸಂಸತ್ತಿನ ಅಂಗಳದವರೆಗೆ ಮೊಳಗಿದ ‘ವಿಜಯ’ ರಾಗ! “ಮಲೆನಾಡಿನ ಅಭಿವೃದ್ಧಿಯೇ ನನ್ನ ಆದ್ಯತೆ; ಹಿರಿಯರ ಆಶೀರ್ವಾದವೇ ನನ್ನ ಶಕ್ತಿ”: ಸಂಸದ ಬಿ.ವೈ. ರಾಘವೇಂದ್ರ

On: August 18, 2026 11:09 AM
Follow Us:

ಶಿವಮೊಗ್ಗ: ರಾಜಕೀಯ ರಂಗದ ಅಧಿಕಾರದ ಸೌಧದಲ್ಲಷ್ಟೇ ಅಲ್ಲ, ಲಕ್ಷಾಂತರ ಕಾರ್ಯಕರ್ತರ ಎದೆಯಾಳದ ಧ್ವನಿಯಾಗಿ ಮಲೆನಾಡಿನ ಬದಲಾವಣೆಯ ನಾಯಕನಾಗಿ ಹೊರಹೊಮ್ಮಿದವರು ಸಂಸದ ಬಿ.ವೈ. ರಾಘವೇಂದ್ರ! ತಂದೆ-ತಾಯಿಯ ಆಶೀರ್ವಾದದ ಮಹಾ ಕವಚ, ಶಿಸ್ತಿನ ಸಂಘಟನೆಯ ಹಾರೈಕೆಯ ಹೆಜ್ಜೆಗುರುತು ಹಾಗೂ ಸಾವಿರಾರು ಅಭಿಮಾನಿಗಳ ಪ್ರೀತಿಯ ಬಲದೊಂದಿಗೆ ಅವರು ವೇದಿಕೆಯನ್ನೇರಿದಾಗ, ಅಲ್ಲಿದ್ದುದು ಕೇವಲ ಒಬ್ಬ ಜನಪ್ರತಿನಿಧಿಯಲ್ಲ, ಶಿವಮೊಗ್ಗದ ಭಾಗ್ಯರೇಖೆಯನ್ನೇ ಬದಲಾಯಿಸಲು ಹೊರಟ ಅಭಿವೃದ್ಧಿ ಹರಿಕಾರ! ತಂದೆ ಯಡಿಯೂರಪ್ಪನವರ ರಾಜಕೀಯ ದೃಷ್ಟಿಕೋನವನ್ನು ಸಾಕಾರಗೊಳಿಸುತ್ತಾ, ಸಾವಿರಾರು ಕೋಟಿ ಅನುದಾನ ತಂದು ಬೃಹತ್ ಯೋಜನೆಗಳನ್ನು ಮಲೆನಾಡಿನ ಮಣ್ಣಿನಲ್ಲಿ ನನಸು ಮಾಡುತ್ತಿರುವ ಈ ನಾಯಕನ ಸಮ್ಮುಖದಲ್ಲಿ, ಇಡೀ ಬಂಟರ ಭವನವೇ ಹರ್ಷೋದ್ಗಾರದಿಂದ ಕಂಪಿಸಿತು.

ಕರ್ತವ್ಯ ಪ್ರಜ್ಞೆ ಮತ್ತು ಜನಸೇವೆಯ ತಪಸ್ಸಿಗೆ ಸಾರ್ವಜನಿಕರ ಪ್ರೀತಿಯೇ ಅಂತಿಮ ಗೆಲುವು ಎಂಬುದಕ್ಕೆ ನಗರದ ಬಂಟರ ಭವನ ಸಾಕ್ಷಿಯಾಯಿತು. ತಮ್ಮ ಹುಟ್ಟುಹಬ್ಬದ ಸಂಭ್ರಮದ ಕ್ಷಣದಲ್ಲಿ ಅಭಿಮಾನಿಗಳು ಹಾಗೂ ಸಮಾಜದ ಹಿರಿಯರ ನಡುವೆ ನಿಂತು ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಪ್ರತಿಯೊಂದು ಯಶಸ್ಸಿನ ಹಿಂದಿರುವ ತಂದೆ-ತಾಯಿಯ ಆಶೀರ್ವಾದ ಹಾಗೂ ಹಿರಿಯ ನಾಯಕರ ತ್ಯಾಗವನ್ನು ಅತ್ಯಂತ ಭಾವುಕರಾಗಿ ಸ್ಮರಿಸಿದರು. ಅಧಿಕಾರಕ್ಕಿಂತ ಕ್ಷೇತ್ರಾಭಿವೃದ್ಧಿಯೇ ಮುಖ್ಯ ಎಂದ ನಾಯಕನ ಮಾತುಗಳು ನೆರೆದಿದ್ದ ಪ್ರತಿಯೊಬ್ಬ ಕಾರ್ಯಕರ್ತನ ಮನ ಮುಟ್ಟಿದವು.

ವೇದಿಕೆಯಲ್ಲಿದ್ದ ಹಿರಿಯರು, ಗಣ್ಯರು ಹಾಗೂ ಸಮಾಜದ ಮುಖಂಡರು ತಮ್ಮ ಬಗ್ಗೆ ಆಡಿದ ಆಶೀರ್ವಾದದ ಮಾತುಗಳು ತಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿವೆ. ಸಾರ್ವಜನಿಕ ಜೀವನದಲ್ಲಿ ಜನರ ಪ್ರೀತಿ ಮತ್ತು ವಿಶ್ವಾಸವನ್ನು ಉಳಿಸಿಕೊಂಡು ಮುನ್ನಡೆಯುವುದು ತಮ್ಮ ಕರ್ತವ್ಯವಾಗಿದೆ ಎಂದು ರಾಘವೇಂದ್ರ ಹೇಳಿದರು.

ಹಿರಿಯ ರಾಜಕಾರಣಿ ಮಾಜಿ ಸಚಿವ ಹಾಗೂ ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ ಅವರ ಸೇವಾ ಮನೋಭಾವವನ್ನು ಸ್ಮರಿಸಿದ ರಾಘವೇಂದ್ರ, ರಾಜಕೀಯದಲ್ಲಿ ಸೋಲು-ಗೆಲುವು ಸಹಜವಾದರೂ ಕ್ಷೇತ್ರದ ಅಭಿವೃದ್ಧಿಯ ವಿಚಾರದಲ್ಲಿ ಎಂದಿಗೂ ಹಿಂದೆ ಸರಿಯಬಾರದು ಎಂಬ ಅವರ ಮಾತುಗಳು ಇಂದಿನ ಸಾರ್ವಜನಿಕ ಜೀವನಕ್ಕೆ ದೊಡ್ಡ ಪ್ರೇರಣೆಯಾಗಿವೆ ಎಂದರು.

ತಾವು ಗೆದ್ದಾಗ ಮಾತ್ರ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಯೋಚಿಸುವುದಲ್ಲ, ಜನರಿಗಾಗಿ ಕೆಲಸ ಮಾಡುವ ಮನೋಭಾವ ಎಲ್ಲರಲ್ಲೂ ಇರಬೇಕು. ಅಧಿಕಾರದಲ್ಲಿರಲಿ, ಇಲ್ಲದಿರಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗುಣವೇ ನಿಜವಾದ ಸಾರ್ವಜನಿಕ ಸೇವೆಯ ಲಕ್ಷಣವಾಗಿದೆ ಎಂದು ಹೇಳಿದರು.

ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಪಯಣದಲ್ಲಿ ಹಿರಿಯರ ಹೋರಾಟ ಹಾಗೂ ಸಂಘಟನಾ ಶಕ್ತಿಯೂ ಪ್ರಮುಖ ಪಾತ್ರ ವಹಿಸಿದೆ. ಅದೇ ರೀತಿ ಗುರುಮೂರ್ತಿಯವರು ಸುಮಾರು 35 ವರ್ಷಗಳ ಕಾಲ ಶಿಕಾರಿಪುರವನ್ನು ಕರ್ಮಭೂಮಿಯನ್ನಾಗಿ ಮಾಡಿಕೊಂಡು ಸಂಘಟನೆ ಹಾಗೂ ಸಾರ್ವಜನಿಕ ಜೀವನದಲ್ಲಿ ಸಲ್ಲಿಸಿರುವ ಸೇವೆ ಶ್ಲಾಘನೀಯವಾಗಿದೆ ಎಂದರು.

ವ್ಯಕ್ತಿಗಿಂತ ದೇಶ, ರಾಷ್ಟ್ರದ ಹಿತವೇ ಮುಖ್ಯ ಎಂಬ ಸಂಕಲ್ಪದೊಂದಿಗೆ ಲಕ್ಷಾಂತರ ಕಾರ್ಯಕರ್ತರು ಹಗಲು-ರಾತ್ರಿ ದುಡಿಯುತ್ತಿದ್ದಾರೆ. ಅವರ ಪರಿಶ್ರಮ ಹಾಗೂ ಜನರ ಆಶೀರ್ವಾದದಿಂದ ತಾವು ಸಂಸದರಾಗಿದ್ದು, ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಬಲ ನೀಡುವ ಅವಕಾಶ ದೊರೆತಿದೆ ಎಂದು ರಾಘವೇಂದ್ರ ಹೇಳಿದರು.

ಕೇಂದ್ರ ಸರ್ಕಾರ ಕೈಗೊಂಡಿರುವ ಪ್ರಮುಖ ನಿರ್ಧಾರಗಳಲ್ಲಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನಕ್ಕೆ ಸಂಬಂಧಿಸಿದ ಸಂವಿಧಾನದ ವಿಧಿ 370ರ ರದ್ದತಿ ಐತಿಹಾಸಿಕ ಹೆಜ್ಜೆಯಾಗಿದೆ. ದೇಶದ ಏಕತೆ ಮತ್ತು ಅಖಂಡತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ ಎಂದರು.

ಜಮ್ಮು-ಕಾಶ್ಮೀರದ ಲಾಲ್ ಚೌಕ್‌ನಲ್ಲಿ ರಾಷ್ಟ್ರಧ್ವಜ ಹಾರಿಸುವ ವಿಚಾರದಲ್ಲಿ ಹಿಂದಿನ ದಿನಗಳಲ್ಲಿ ನಡೆದ ಹೋರಾಟಗಳನ್ನು ಸ್ಮರಿಸಿದ ಅವರು, ಇತ್ತೀಚೆಗೆ ತಾವು ಅಲ್ಲಿಗೆ ಭೇಟಿ ನೀಡಿದಾಗ ಲಾಲ್ ಚೌಕ್‌ನಲ್ಲಿ ರಾಷ್ಟ್ರಧ್ವಜ ಹಾರುತ್ತಿರುವುದು ಹಾಗೂ ಸಾರ್ವಜನಿಕರು ಅದನ್ನು ಸಂಭ್ರಮದಿಂದ ವೀಕ್ಷಿಸುತ್ತಿರುವುದನ್ನು ಕಂಡು ಹೆಮ್ಮೆ ಮತ್ತು ಸಂತೋಷವಾಯಿತು ಎಂದು ಹೇಳಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಲ್ಲಿ ಶಿಕ್ಷಣ, ಆರೋಗ್ಯ, ರೈಲ್ವೆ, ವಿಮಾನಯಾನ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ ಎಂದು ರಾಘವೇಂದ್ರ ವಿವರಿಸಿದರು.

ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶಿವಮೊಗ್ಗಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು, ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರಗಳ ಸಮಗ್ರ ವಿಶ್ವವಿದ್ಯಾಲಯ, ಪಶುವೈದ್ಯಕೀಯ ಕಾಲೇಜು, ಆಯುರ್ವೇದ ಕಾಲೇಜು, ಎರಡು ಕೇಂದ್ರೀಯ ವಿದ್ಯಾಲಯಗಳು ಸೇರಿದಂತೆ ಹಲವು ಪ್ರಮುಖ ಶಿಕ್ಷಣ ಸಂಸ್ಥೆಗಳು ಬಂದಿವೆ. ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ಹಾಗೂ ರ‍್ಯಾಪಿಡ್ ಆಕ್ಷನ್ ಫೋರ್ಸ್ ಸೇರಿದಂತೆ ಹಲವು ಪ್ರಮುಖ ಯೋಜನೆಗಳು ಶಿವಮೊಗ್ಗಕ್ಕೆ ದೊರೆತಿವೆ ಎಂದು ಹೇಳಿದರು.

ಈ ಬೆಳವಣಿಗೆಗಳಿಂದ ಶಿವಮೊಗ್ಗ ಜಿಲ್ಲೆ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ಪ್ರಮುಖ ಕೇಂದ್ರವಾಗಿ ರೂಪುಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿಯೂ ಇನ್ನಷ್ಟು ಅಭಿವೃದ್ಧಿ ಸಾಧಿಸುವ ಅವಕಾಶವಿದೆ ಎಂದರು.

ಶಿವಮೊಗ್ಗದಲ್ಲಿ ರೈಲ್ವೆ ಕೋಚಿಂಗ್ ಡಿಪೋ ಸ್ಥಾಪನೆಯ ಯೋಜನೆ ಹಲವು ವರ್ಷಗಳ ಪ್ರಯತ್ನದ ಫಲವಾಗಿದೆ. ಭೂಸ್ವಾಧೀನ ಸೇರಿದಂತೆ ಹಲವು ಸಮಸ್ಯೆಗಳನ್ನು ಪರಿಹರಿಸಿ ಕಾಮಗಾರಿಯನ್ನು ಮುಂದುವರಿಸಲಾಗಿದೆ. ರೈಲ್ವೆ ಇಲಾಖೆಯ ಅಧಿಕಾರಿಗಳು ಹಾಗೂ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಸ್ಥಳೀಯ ರೈತರಿಗೆ ಬಾಕಿ ಇದ್ದ ಪರಿಹಾರ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸಿ ಅವರ ವಿಶ್ವಾಸ ಗಳಿಸಿದ ನಂತರ ಕಾಮಗಾರಿ ವೇಗ ಪಡೆದುಕೊಂಡಿದೆ. ಶೀಘ್ರದಲ್ಲೇ ಕೋಚಿಂಗ್ ಡಿಪೋ ಉದ್ಘಾಟನೆಗೊಳ್ಳಲಿದೆ ಎಂದು ಅವರು ತಿಳಿಸಿದರು.

ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ರೈಲು ಮಾರ್ಗದ ಡಿಪಿಆರ್ ಪೂರ್ಣಗೊಂಡಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಶಿವಮೊಗ್ಗ-ಮಂಗಳೂರು ರೈಲು ಸಂಪರ್ಕದ ಡಿಪಿಆರ್ ಕಾರ್ಯವೂ ಪೂರ್ಣಗೊಂಡಿದ್ದು, ಮುಂದಿನ ಹಂತದ ಕಾಮಗಾರಿಗಳು ನಡೆಯಲಿವೆ ಎಂದು ರಾಘವೇಂದ್ರ ಹೇಳಿದರು.

ಶಿವಮೊಗ್ಗದಿಂದ ಹಾಸನ ಸಂಪರ್ಕ, ಚಿಕ್ಕಮಗಳೂರು ಮೂಲಕ ಧರ್ಮಸ್ಥಳ ಹಾಗೂ ಮುರುಡೇಶ್ವರದಂತಹ ಪ್ರಮುಖ ಪ್ರವಾಸಿ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ರೈಲು ಸಂಪರ್ಕ ಕಲ್ಪಿಸುವ ಯೋಜನೆಗಳ ಬಗ್ಗೆಯೂ ಪ್ರಯತ್ನಗಳು ನಡೆಯುತ್ತಿವೆ. ಮುಂದಿನ ಐದು ವರ್ಷಗಳಲ್ಲಿ ಶಿವಮೊಗ್ಗವನ್ನು ಪ್ರಮುಖ ರೈಲ್ವೆ ಹಬ್ ಹಾಗೂ ಟರ್ಮಿನಲ್ ಆಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹಲವು ಅನುಮೋದನೆ ಹಾಗೂ ಅನುಷ್ಠಾನ ಪ್ರಕ್ರಿಯೆಗಳು ಆರಂಭಗೊಂಡಿವೆ ಎಂದು ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯಾಗಿರುವ ಜೋಗ ಜಲಪಾತದ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ ದೊಡ್ಡ ಮೊತ್ತದ ಅನುದಾನ ದೊರೆತಿದೆ. ಸುಮಾರು ₹180 ಕೋಟಿ ಮೊತ್ತದ ಯೋಜನೆಯಡಿ ಜೋಗದ ಅಭಿವೃದ್ಧಿ ಕೈಗೊಳ್ಳಲಾಗಿದ್ದು, ಪ್ರವಾಸಿಗರಿಗೆ ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಶಾಪಿಂಗ್ ಕಾಂಪ್ಲೆಕ್ಸ್, ಸೌಂದರ್ಯೀಕರಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಜೋಗ ಜಲಪಾತವನ್ನು ಪ್ರವಾಸೋದ್ಯಮದ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.

ಈ ಹಿಂದೆ ಜೋಗ ಪ್ರದೇಶವನ್ನು ಖಾಸಗಿ ಸಂಸ್ಥೆಯೊಂದಕ್ಕೆ ಅಭಿವೃದ್ಧಿಗಾಗಿ ಗುತ್ತಿಗೆ ನೀಡುವ ಪ್ರಸ್ತಾವನೆ ನಡೆದಿತ್ತು. ನಂತರ ಅದನ್ನು ರದ್ದುಪಡಿಸಿ ಸರ್ಕಾರಿ ವಲಯದಲ್ಲಿಯೇ ಸಮಗ್ರ ಅಭಿವೃದ್ಧಿ ಕೈಗೊಳ್ಳಲಾಗಿದೆ ಎಂದು ರಾಘವೇಂದ್ರ ಹೇಳಿದರು.

ಶಿವಮೊಗ್ಗ ನಗರದ ಹೃದಯಭಾಗದಲ್ಲಿದ್ದ ಹಳೆಯ ಜೈಲು ಪ್ರದೇಶವನ್ನು ಅಭಿವೃದ್ಧಿಪಡಿಸಿ ಫ್ರೀಡಂ ಪಾರ್ಕ್ ನಿರ್ಮಿಸುವ ಕಾರ್ಯಕ್ಕೂ ಆದ್ಯತೆ ನೀಡಲಾಗಿದೆ. ಹಳೆಯ ಜೈಲನ್ನು ಸ್ಥಳಾಂತರಿಸಿ, ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು ₹75 ಕೋಟಿ ವೆಚ್ಚದಲ್ಲಿ ಫ್ರೀಡಂ ಪಾರ್ಕ್ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ನಗರದ ವಿವಿಧ ಹಬ್ಬ, ಜಯಂತಿ, ಸಾಂಸ್ಕೃತಿಕ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ಈ ಪ್ರದೇಶ ಉಪಯುಕ್ತವಾಗಲಿದೆ ಎಂದರು.

ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನ ಸೇವೆ ಮುಂದುವರಿಸಲು ಕೇಂದ್ರ ನಾಗರಿಕ ವಿಮಾನಯಾನ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿರಂತರವಾಗಿ ಚರ್ಚಿಸಲಾಗಿದೆ. ವಿಮಾನ ಸೇವೆಯಲ್ಲಿ ಉಂಟಾದ ವ್ಯತ್ಯಯಗಳನ್ನು ನಿವಾರಿಸಲು ವೈಯಕ್ತಿಕವಾಗಿ ಮನವಿ ಮಾಡಲಾಗಿದೆ ಎಂದು ರಾಘವೇಂದ್ರ ಹೇಳಿದರು.

ಅಕ್ಟೋಬರ್ 15ರಿಂದ ಶಿವಮೊಗ್ಗ-ಬೆಂಗಳೂರು ನಡುವೆ ಮತ್ತೆ ವಿಮಾನ ಸೇವೆ ಆರಂಭವಾಗಲಿದೆ ಎಂಬ ಸಂತಸದ ಸುದ್ದಿಯನ್ನು ಇದೇ ಸಂದರ್ಭದಲ್ಲಿ ಅವರು ಪ್ರಕಟಿಸಿದರು.

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರಾತ್ರಿ ವಿಮಾನಗಳ ಲ್ಯಾಂಡಿಂಗ್‌ಗೆ ಅಗತ್ಯವಿರುವ ಕಾಮಗಾರಿಗಳು ಪೂರ್ಣಗೊಂಡಿದ್ದು, ಕೆಲವು ತಾಂತ್ರಿಕ ಹಾಗೂ ಡಿಜಿಸಿಎ ಸಂಬಂಧಿತ ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕಿವೆ. ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣದ ಸಂಪರ್ಕ ಮತ್ತಷ್ಟು ವಿಸ್ತರಿಸುವ ನಿರೀಕ್ಷೆಯಿದೆ ಎಂದರು.

ಗ್ರಾಮೀಣ ಹಾಗೂ ಮಲೆನಾಡು ಭಾಗಗಳಲ್ಲಿ ಮೊಬೈಲ್ ಸಂಪರ್ಕ ಮತ್ತು ಇಂಟರ್ನೆಟ್ ಸೌಲಭ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಶಿವಮೊಗ್ಗ ಜಿಲ್ಲೆಗೆ 250 ಮೊಬೈಲ್ ಟವರ್‌ಗಳನ್ನು ಮಂಜೂರು ಮಾಡಿದೆ. ಈಗಾಗಲೇ ಸುಮಾರು 110 ಟವರ್‌ಗಳನ್ನು ಅಳವಡಿಸಲಾಗಿದೆ ಎಂದು ರಾಘವೇಂದ್ರ ತಿಳಿಸಿದರು.

ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಮೊಬೈಲ್ ನೆಟ್‌ವರ್ಕ್ ಮತ್ತು ಇಂಟರ್ನೆಟ್ ಸಂಪರ್ಕ ಒದಗಿಸುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿಶೇಷ ಗಮನ ಹರಿಸುತ್ತಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ 2047ರ ವೇಳೆಗೆ ಭಾರತವನ್ನು ವಿಕಸಿತ ರಾಷ್ಟ್ರವನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ. ಈ ಮಹತ್ವಾಕಾಂಕ್ಷೆಯ ಗುರಿ ಸಾಕಾರಗೊಳ್ಳಲು ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು. ದೇಶದ ಅಭಿವೃದ್ಧಿಯ ಪಯಣದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಸಾಗಬೇಕು ಎಂದು ರಾಘವೇಂದ್ರ ಕರೆ ನೀಡಿದರು.

ತಮ್ಮ ಜನ್ಮದಿನದ ಹಿನ್ನೆಲೆಯಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ಪ್ರೀತಿ, ವಿಶ್ವಾಸ ಹಾಗೂ ಆಶೀರ್ವಾದ ನೀಡಿದ ಜನರಿಗೆ ಮತ್ತೊಮ್ಮೆ ಕೃತಜ್ಞತೆ ಸಲ್ಲಿಸಿದ ಅವರು, ತಮ್ಮ ಮೇಲೆ ಇಟ್ಟಿರುವ ವಿಶ್ವಾಸವನ್ನು ಎಂದಿಗೂ ಕುಂದಿಸದೆ ಇನ್ನಷ್ಟು ಪ್ರಾಮಾಣಿಕವಾಗಿ ಜನಸೇವೆ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದಾಗಿ ಭರವಸೆ ನೀಡಿದರು.

“ನನ್ನ ಮೇಲಿಟ್ಟಿರುವ ಪ್ರೀತಿ ಮತ್ತು ವಿಶ್ವಾಸವನ್ನು ಉಳಿಸಿಕೊಂಡು, ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ನಿರಂತರವಾಗಿ ಕೆಲಸ ಮಾಡುತ್ತೇನೆ” ಎಂದು ಬಿ.ವೈ. ರಾಘವೇಂದ್ರ ಹೇಳಿದರು.

ಈ ಸಂದರ್ಭದಲ್ಲಿ ಸಂಸದರಾದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಧನಂಜಯ ಸರ್ಜಿ, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಜಗದೀಶ್, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷರಾದ ಗುರುಮೂರ್ತಿ, ಪದ್ಮನಾಭ ಭಟ್, ರಾಜ್ಯ ಬಿಜೆಪಿ ಪ್ರಕೋಷ್ಟಗಳ ಸಂಯೋಜಕರಾದ ಎಸ್. ದತ್ತಾತ್ರಿ, ಪ್ರಮುಖರಾದ ಟಿ.ಡಿ. ಮೇಘರಾಜ್, ಮಂಗೋಟೆ ರುದ್ರೇಶ್, ಬಳ್ಳೆಕೆರೆ ಸಂತೋಷ್, ಮಾಲತೇಶ್, ವಕೀಲರ ಸಂಘದ ಅಧ್ಯಕ್ಷರಾದ ರಾಘವೇಂದ್ರ, ಸತೀಶ್ ಕುಮಾರ್ ಶೆಟ್ಟಿ, ವೀರಭದ್ರ ಪೂಜಾರ್, ಮಾಧ್ಯಮ ಪ್ರಮುಖರಾದ ಚಂದ್ರಶೇಖರ್, ಮಂಜುನಾಥ್ ಎನ್, ಉಮಾಶಂಕರ್, ರಾಜೇಶ್ ಕಾಮತ್, ದಿವಾಕರ್ ಶೆಟ್ಟಿ, ಡಿ.ಜಿ.ಕಿರಣ್, ಶಿವಾನಂದ, ಲವಕುಮಾರ, ಬಸವರಾಜ್, ಕುಮಾರ್ ಬೆನವಳ್ಳಿ, ಪ್ರಸನ್ನ, ಶಾಂತಸುರೇಂದ್ರ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಬಿ.ವೈ. ರಾಘವೇಂದ್ರ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಅನುದಾನವಿಲ್ಲದೆ ಸಂಕಷ್ಟದಲ್ಲಿರುವ ಕನ್ನಡ ಶಾಲೆಗಳಿಗೆ ಶೀಘ್ರವೇ ಸಿಹಿಸುದ್ದಿ?; ‘ಕನ್ನಡ ಶಾಲೆಗಳನ್ನು ಉಳಿಸುವುದು ನಮ್ಮ ಕರ್ತವ್ಯ’: ಸಚಿವ ಮಧು ಬಂಗಾರಪ್ಪ

ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ: ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಲು ಬಿ.ವೈ. ರಾಘವೇಂದ್ರ ಆಗ್ರಹ

ಹನೂರು ಎನ್‌ಕೌಂಟರ್ ಪ್ರಕರಣ: ಜುಡಿಷಿಯಲ್ ತನಿಖೆಗೆ ಆಗ್ರಹ — ಕೆಪಿಎಸ್‌ಸಿ ಅಕ್ರಮಗಳಿಗೂ ಸಿಬಿಐ ತನಿಖೆ ಅಗತ್ಯ: ಬಿ.ವೈ. ವಿಜಯೇಂದ್ರ

ಸಚಿವ ನಾಗೇಂದ್ರ ವಿರುದ್ಧ ಬಿಜೆಪಿಯ ಸಮರ: ಶಿವಮೊಗ್ಗದಲ್ಲಿ ಅಹೋರಾತ್ರಿ ಧರಣಿ! ಸಚಿವ ಸ್ಥಾನದಿಂದ ವಜಾಗೊಳಿಸುವವರೆಗೆ ಹೋರಾಟ ಮುಂದುವರಿಕೆ: ಜಿಲ್ಲಾಧ್ಯಕ್ಷ ಜಗದೀಶ್ ಎನ್.ಕೆ.

ಶಿವಮೊಗ್ಗ ಜಿಲ್ಲಾ ಮೋಚಿಗರ ಸಂಘದಿಂದ ಮೊದಲನೇ ವರ್ಷದ ಪ್ರತಿಭಾ ಪುರಸ್ಕಾರ

ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಬಿ.ವೈ. ರಾಘವೇಂದ್ರ; ಜನಸೇವೆಯ ಮೂಲಕ ಶಿವಮೊಗ್ಗದ ಚಿತ್ರಣವನ್ನೇ ಬದಲಿಸಿದ ಸಂಸದ: ಆರಗ ಜ್ಞಾನೇಂದ್ರ

Leave a Comment