ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ನಾಗರ ಪಂಚಮಿ ಬಾಂಧವ್ಯ ಬೆಸೆಯುವ ನಾಡಹಬ್ಬ: ಶ್ರೀ ರಂಭಾಪುರಿ ಜಗದ್ಗುರುಗಳು

On: August 18, 2026 8:41 AM
Follow Us:

ಬಾಳೆಹೊನ್ನೂರು, ಆ.17: ಹಬ್ಬಗಳ ಆಚರಣೆಯ ಹಿಂದೆ ಪ್ರಬಲವಾದ ನಂಬಿಕೆ, ಧಾರ್ಮಿಕ ಪರಂಪರೆ ಹಾಗೂ ಜೀವನ ಮೌಲ್ಯಗಳು ಅಡಗಿವೆ. ನಾಗರ ಪಂಚಮಿ ನಾಡಿನ ಪ್ರಮುಖ ಹಬ್ಬವಾಗಿದ್ದು, ಕ್ಷೇಮ, ಸೌಭಾಗ್ಯ ಮತ್ತು ಸಮೃದ್ಧಿಗಾಗಿ ನಾಗದೇವತೆಯನ್ನು ಆರಾಧಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಸಹೋದರ-ಸಹೋದರಿಯರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ಹಬ್ಬವಾಗಿಯೂ ನಾಗರ ಪಂಚಮಿ ವಿಶೇಷ ಮಹತ್ವ ಹೊಂದಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಶ್ರೀ ರಂಭಾಪುರಿ ಪೀಠದಲ್ಲಿ ಸೋಮವಾರ ನಾಗರ ಪಂಚಮಿ ಅಂಗವಾಗಿ ನಾಗರಕಟ್ಟೆಯಲ್ಲಿರುವ ನಾಗರ ಮಂಗಳ ಮೂರ್ತಿಗೆ ಹಾಲೆರೆಯುವ ಮೂಲಕ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಚನ ನೀಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ಮರ, ಗಿಡ, ನದಿ, ಪರ್ವತ, ಪ್ರಾಣಿ ಹಾಗೂ ಪಕ್ಷಿಗಳಲ್ಲಿಯೂ ದೈವತ್ವವನ್ನು ಕಂಡು ಗೌರವಿಸಿ ಪೂಜಿಸುವ ವಿಶಿಷ್ಟ ಪರಂಪರೆ ಇದೆ ಎಂದು ತಿಳಿಸಿದರು.

ನಾಗರ ಪಂಚಮಿಯಂದು ನಾಗದೇವತೆಯನ್ನು ಪ್ರಕೃತಿಯ ಶಕ್ತಿ, ಪರಿಸರ ಸಂರಕ್ಷಣೆ ಹಾಗೂ ಜೀವಜಾಲದ ಸಮತೋಲನದ ಸಂಕೇತವಾಗಿ ಆರಾಧಿಸಲಾಗುತ್ತದೆ. ಕುಟುಂಬದ ಕ್ಷೇಮ, ಸೌಭಾಗ್ಯ, ಸಂತಾನ ಭಾಗ್ಯ ಮತ್ತು ಸಮೃದ್ಧಿಗಾಗಿ ನಾಗಪೂಜೆ ಮಾಡುವ ಸಂಪ್ರದಾಯ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ನಾಗಬನ, ಹುತ್ತ ಹಾಗೂ ನಾಗರಕಟ್ಟೆಗಳಿಗೆ ತೆರಳಿ ಭಕ್ತಿಯಿಂದ ಪೂಜೆ ಸಲ್ಲಿಸುವ ಮೂಲಕ ಜನರು ತಮ್ಮ ಧಾರ್ಮಿಕ ನಂಬಿಕೆಯನ್ನು ವ್ಯಕ್ತಪಡಿಸುತ್ತಾರೆ ಎಂದರು.

ನಾಗರ ಪಂಚಮಿ ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗಿಲ್ಲ. ಪ್ರಕೃತಿಯ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ ಎಂಬ ಸಂದೇಶವನ್ನು ಸಾರುವ ಹಬ್ಬವಾಗಿದೆ. ನಾಗರಾಧನೆಯ ಮೂಲಕ ಪರಿಸರದ ಮಹತ್ವವನ್ನು ಅರಿತು, ಜೀವಜಾಲದ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸುವ ಮನೋಭಾವವನ್ನು ಬೆಳೆಸಿಕೊಳ್ಳುವುದೇ ನಾಗರ ಪಂಚಮಿಯ ನಿಜವಾದ ಸಂದೇಶವಾಗಿದೆ ಎಂದು ಜಗದ್ಗುರುಗಳು ಹೇಳಿದರು.

ಮಹಿಳೆಯರು ಹಾಗೂ ಹೆಣ್ಣುಮಕ್ಕಳಿಗೆ ನಾಗರ ಪಂಚಮಿ ವಿಶೇಷವಾದ ಹಬ್ಬವಾಗಿದ್ದು, ಕುಟುಂಬದ ಸದಸ್ಯರು ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಬಾಂಧವ್ಯವನ್ನು ಗಟ್ಟಿಗೊಳಿಸುವ ದಿನವಾಗಿದೆ. ಸಿಹಿ ತಿಂಡಿ ತಯಾರಿಸಿ, ಬಂಧು-ಬಳಗದೊಂದಿಗೆ ಸಂತೋಷದಿಂದ ಹಬ್ಬವನ್ನು ಆಚರಿಸುವ ಮೂಲಕ ಸಂಭ್ರಮಿಸುತ್ತಾರೆ. ಧಾರ್ಮಿಕ ಆಚರಣೆಗಳ ಜೊತೆಗೆ ಕುಟುಂಬ ಮತ್ತು ಸಮಾಜದಲ್ಲಿ ಪರಸ್ಪರ ಪ್ರೀತಿ, ಸಹಕಾರ ಹಾಗೂ ಸೌಹಾರ್ದತೆ ಬೆಳೆಸುವಲ್ಲಿ ಇಂತಹ ಹಬ್ಬಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು.

ಆಸ್ತಿಕ ಮಹರ್ಷಿಯ ಮನವಿಯ ಮೇರೆಗೆ ಜನಮೇಜಯ ಮಹಾರಾಜನು ನಡೆಸುತ್ತಿದ್ದ ಸರ್ಪಯಜ್ಞವನ್ನು ನಿಲ್ಲಿಸಿ ಸರ್ಪ ಸಂತತಿಯನ್ನು ರಕ್ಷಿಸಿದ ದಿನವೇ ಶ್ರಾವಣ ಶುಕ್ಲ ಪಂಚಮಿ ಎಂಬ ಪೌರಾಣಿಕ ಹಿನ್ನೆಲೆಯೂ ನಾಗರ ಪಂಚಮಿಗೆ ಇದೆ. ಹೀಗಾಗಿ ನಾಗರ ಪಂಚಮಿ ಜೀವ ಸಂರಕ್ಷಣೆ ಮತ್ತು ಪ್ರಕೃತಿಯ ಮೇಲಿನ ಗೌರವವನ್ನು ಸಾರುವ ಪವಿತ್ರ ದಿನವಾಗಿದೆ ಎಂದು ಅವರು ವಿವರಿಸಿದರು.

ನಾಗರಕಟ್ಟೆಯಲ್ಲಿರುವ ನಾಗರ ಮಂಗಳ ಮೂರ್ತಿಗೆ ಹಾಲೆರೆಯುವ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಅಂಬಾಜೆಗೊಗಾಯಿ, ಹುಡುಗಿ, ಕಡೇನಂದಿಹಳ್ಳಿ, ಕರ್ಜಗಿ, ಪಾತ್ರೀ, ಹರನಹಳ್ಳಿ, ಮಾವನೂರು ಹಾಗೂ ಅಷ್ಟಿ ಮಠದ ಶ್ರೀಗಳು ಸೇರಿದಂತೆ ವಿವಿಧ ಮಠಗಳ ಶಿವಾಚಾರ್ಯರು, ಭಕ್ತರು ಪಾಲ್ಗೊಂಡಿದ್ದರು. ವಿಶೇಷ ಪೂಜೆಯ ಬಳಿಕ ಭಕ್ತರಿಗೆ ಅನ್ನ ದಾಸೋಹ ನೆರವೇರಿಸಲಾಯಿತು.

K.M.Sathish Gowda

Join WhatsApp

Join Now

Facebook

Join Now

Leave a Comment