ದಾವಣಗೆರೆ, ಆ.10: ಯುವಜನತೆ ದೇಶದ ಅಮೂಲ್ಯ ಸಂಪತ್ತಾಗಿದ್ದು, ಬೆಳೆಯುತ್ತಿರುವ ಯುವ ಪೀಳಿಗೆಯಲ್ಲಿ ರಾಷ್ಟ್ರಾಭಿಮಾನ, ಸಾಮಾಜಿಕ ಕಳಕಳಿ ಹಾಗೂ ಉತ್ತಮ ಮೌಲ್ಯಗಳನ್ನು ಬೆಳೆಸುವ ಕಾರ್ಯ ನಿರಂತರವಾಗಿ ನಡೆಯಬೇಕು. ರಾಷ್ಟ್ರದ ಉಜ್ವಲ ಭವಿಷ್ಯವನ್ನು ನಿರ್ಮಿಸುವ ಅಪಾರ ಶಕ್ತಿ ಯುವಜನತೆಯಲ್ಲಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ನಗರದ ಶ್ರೀ ಮದ್ ಅಭಿನವ ರೇಣುಕ ಮಂದಿರದಲ್ಲಿ ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆಯ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಜನಜಾಗೃತಿ ಧರ್ಮ ಸಮಾರಂಭದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಯುವಜನತೆ ದೇಶದ ಭವಿಷ್ಯದ ನಿರ್ಮಾತೃಗಳಾಗಿದ್ದು, ಅವರಲ್ಲಿರುವ ಪ್ರತಿಭೆ, ಶಕ್ತಿ ಹಾಗೂ ಚಿಂತನಾ ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಳ್ಳುವ ಅಗತ್ಯವಿದೆ ಎಂದರು.

ಅಜ್ಞಾನ–ಅಶಿಸ್ತು ತೊರೆದು ಯುವಜನರಲ್ಲಿ ವೈಚಾರಿಕತೆ ಬೆಳೆಸಲು ಶ್ರೀ ರಂಭಾಪುರಿ ಜಗದ್ಗುರುಗಳು ಕರೆ
ಅಜ್ಞಾನ ಮತ್ತು ಅಶಿಸ್ತು ಮನುಷ್ಯನ ಪ್ರಗತಿಗೆ ಅಡ್ಡಿಯಾಗುತ್ತವೆ. ಬೆಳೆಯುತ್ತಿರುವ ಯುವಜನತೆಯಲ್ಲಿ ವೈಚಾರಿಕತೆ ಬೆಳೆಸಬೇಕು. ಆದರೆ ವೈಚಾರಿಕತೆಯ ಹೆಸರಿನಲ್ಲಿ ನಾಸ್ತಿಕ ಮನೋಭಾವ ಬೆಳೆಸುವುದು ಸೂಕ್ತವಲ್ಲ. ಧರ್ಮ, ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳ ಕುರಿತು ಯುವಜನರಲ್ಲಿ ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ತಿಳಿಸಿದರು.
ಇತಿಹಾಸ, ಧರ್ಮ–ಸಾಮಾಜಿಕ ಮೌಲ್ಯಗಳ ಅರಿವು ಯುವಜನತೆಗೆ ಅಗತ್ಯ
ಯುವಜನತೆಗೆ ಇತಿಹಾಸದ ಅರಿವು ಅತ್ಯಗತ್ಯ. ಉತ್ತಮ ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಧಾರ್ಮಿಕ ಹಾಗೂ ಸಾಮಾಜಿಕ ಮೌಲ್ಯಗಳ ಸಂವರ್ಧನೆಯಲ್ಲಿ ಯುವಜನತೆ ಮುಂಚೂಣಿಯಲ್ಲಿ ನಿಲ್ಲಬೇಕು. ನಾಗರಿಕ ಸಮಾಜದಲ್ಲಿ ನಡೆಯುತ್ತಿರುವ ಕೆಲವು ಅಹಿತಕರ ಘಟನೆಗಳಿಗೆ ಕಡಿವಾಣ ಹಾಕಬೇಕಾದರೆ ಯುವಕರು ಜಾಗೃತರಾಗಬೇಕು. ಆಲಸ್ಯ ಮತ್ತು ದುಶ್ಚಟಗಳಿಂದ ದೂರವಿದ್ದು, ಸದೃಢ ಸಮಾಜ ನಿರ್ಮಾಣಕ್ಕೆ ಯುವಜನತೆ ಗಟ್ಟಿಯಾದ ಹೆಜ್ಜೆ ಇಡಬೇಕು ಎಂದು ಕರೆ ನೀಡಿದರು.


ಧರ್ಮದ ಅರಿವು ಎಂದಿಗೂ ಕ್ಷೀಣಿಸುವುದಿಲ್ಲ
ನದಿಯಲ್ಲಿ ನೀರು ಎಷ್ಟೇ ತುಂಬಿದ್ದರೂ ಅದು ಸದಾ ಒಂದೇ ಮಟ್ಟದಲ್ಲಿ ಇರುವುದಿಲ್ಲ; ಕಾಲಕ್ರಮೇಣ ಕಡಿಮೆಯಾಗುತ್ತದೆ. ಆದರೆ ಧರ್ಮದ ಅರಿವು ಎಷ್ಟೇ ಪಡೆದರೂ ಅದು ಎಂದಿಗೂ ಖಾಲಿಯಾಗುವುದಿಲ್ಲ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ಹೇಳಿದರು.
ಜೀವನ ಸಾರ್ಥಕತೆಗೆ ಗುರಿ ಮತ್ತು ಸತ್ಕರ್ಮದ ಹಾದಿ ಅಗತ್ಯ
ಮನುಷ್ಯನ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಬೇಕು. ಜೀವನದಲ್ಲಿ ಚತುರ್ವಿಧ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳಲ್ಲಿ ಕನಿಷ್ಠ ಒಂದನ್ನಾದರೂ ಸಾಧಿಸುವ ಗುರಿಯನ್ನು ಹೊಂದಬೇಕು. ಯಾವುದೇ ಗುರಿಯಿಲ್ಲದೆ ಬದುಕಿದರೆ ಮಾನವ ಜೀವನ ವ್ಯರ್ಥವಾಗುತ್ತದೆ. ಜೀವನವನ್ನು ಸಾರ್ಥಕಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಧರ್ಮ ಮತ್ತು ಸತ್ಕರ್ಮದ ಮಾರ್ಗದಲ್ಲಿ ಸಾಗಬೇಕು ಎಂದು ಜಗದ್ಗುರುಗಳು ಸಲಹೆ ನೀಡಿದರು.
ಐದು ದಿನಗಳ ಧಾರ್ಮಿಕ–ಜನಜಾಗೃತಿ ಕಾರ್ಯಕ್ರಮ ಯಶಸ್ವಿ
ದಾವಣಗೆರೆ ನಗರದಲ್ಲಿ ಐದು ದಿನಗಳ ಕಾಲ ನಡೆದ ಧಾರ್ಮಿಕ ಹಾಗೂ ಜನಜಾಗೃತಿ ಕಾರ್ಯಕ್ರಮಗಳು ತಮಗೆ ತೃಪ್ತಿ ಮತ್ತು ಸಮಾಧಾನ ತಂದಿವೆ ಎಂದು ಸಂತಸ ವ್ಯಕ್ತಪಡಿಸಿದ ಜಗದ್ಗುರುಗಳು, ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿದ ಕಾರ್ಯಕರ್ತರು ಹಾಗೂ ಭಕ್ತರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.

ಧರ್ಮಾಚರಣೆಯಿಂದ ಜೀವನದಲ್ಲಿ ನೆಮ್ಮದಿ: ಎಚ್. ಶಿವಯೋಗಿಸ್ವಾಮಿ
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಎಚ್. ಶಿವಯೋಗಿಸ್ವಾಮಿ ಮಾತನಾಡಿ, ಉನ್ನತ ಗುರಿ ಹಾಗೂ ಧ್ಯೇಯ ಹೊಂದಿರುವ ವ್ಯಕ್ತಿತ್ವ ವಿಕಾಸಕ್ಕೆ ಧರ್ಮ ಮತ್ತು ಸಂಸ್ಕೃತಿ ದಾರಿದೀಪವಾಗಿವೆ ಎಂದರು.
ಸಮಾಜದಲ್ಲಿರುವ ಕೊರತೆಗಳನ್ನು ಗುರುತಿಸಿ ಅವುಗಳನ್ನು ತಿದ್ದಿ, ಸಮಾಜವನ್ನು ಉತ್ತಮ ದಿಕ್ಕಿನಲ್ಲಿ ಮುನ್ನಡೆಸುವುದು ಮಹಾನುಭಾವರ ಪ್ರಮುಖ ಕರ್ತವ್ಯವಾಗಿದೆ. ಸಂತೃಪ್ತಿ ಮತ್ತು ಸಮೃದ್ಧಿಯ ಬದುಕಿಗೆ ಧರ್ಮಾಚರಣೆ ಅಗತ್ಯ. ಈ ದಾರಿಯಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಮಾರ್ಗದರ್ಶನ ಸಮಾಜಕ್ಕೆ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.

ಆಧ್ಯಾತ್ಮಿಕ ಸಂಪತ್ತಿಗೂ ಆದ್ಯತೆ ಅಗತ್ಯ
ಹಂಪಸಾಗರದ ನವಲಿ ಹಿರೇಮಠದ ಶಿವಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಮನುಷ್ಯನಿಗೆ ದೈಹಿಕ ಸೌಂದರ್ಯ ಹಾಗೂ ಭೌತಿಕ ಸಂಪತ್ತಿಗಿಂತಲೂ ಶೀಲ ಮತ್ತು ಚಾರಿತ್ರ್ಯಕ್ಕೆ ಹೆಚ್ಚಿನ ಬೆಲೆ ಇದೆ ಎಂದು ಹೇಳಿದರು.
ಭೌತಿಕ ಸಂಪತ್ತಿನೊಂದಿಗೆ ಆಧ್ಯಾತ್ಮಿಕ ಸಂಪತ್ತನ್ನೂ ಬೆಳೆಸಿಕೊಳ್ಳುವ ಅಗತ್ಯವಿದೆ. ದೈಹಿಕವಾಗಿ ಮನುಷ್ಯ ಎಷ್ಟೇ ಸದೃಢನಾಗಿದ್ದರೂ ಮನಸ್ಸು ದೃಢವಾಗಿರದಿದ್ದರೆ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ದೇಹದ ಆರೋಗ್ಯದ ಜತೆಗೆ ಮನಸ್ಸಿನ ಆರೋಗ್ಯಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ವೀರಶೈವ ಧರ್ಮದ ಪೂರ್ವಾಚಾರ್ಯರು ಆದರ್ಶ ಮೌಲ್ಯಗಳನ್ನು ಉಳಿಸಿ ಬೆಳೆಸಿದ್ದಾರೆ. ಅವರ ತತ್ವ, ಆದರ್ಶ ಹಾಗೂ ಜೀವನ ಸಂದೇಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.

ಸತ್ಯ, ಶಾಂತಿ ಮತ್ತು ದೈವೀ ಗುಣಗಳನ್ನು ಬೆಳೆಸಿಕೊಳ್ಳಿ
ನಾಯಕತ್ವ ವಹಿಸಿ ಆಗಮಿಸಿದ್ದ ಆವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯರು ಮಾತನಾಡಿ, ಮನುಷ್ಯನ ದೇಹವೇ ದೇವಾಲಯವಾಗಿದ್ದು, ಅದರೊಳಗೆ ದೈವೀ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಸತ್ಯ, ಶಾಂತಿ, ಪ್ರೀತಿ, ಕರುಣೆ ಸೇರಿದಂತೆ ದೈವೀ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ವ್ಯಕ್ತಿತ್ವದ ನಿಜವಾದ ವಿಕಾಸ ಸಾಧ್ಯ. ಜೀವನದ ಸಮೃದ್ಧಿ ಹಾಗೂ ಶಾಂತಿಯುತ ಬದುಕಿಗೆ ಧರ್ಮವೇ ಮೂಲವಾಗಿದೆ. ವ್ಯಕ್ತಿತ್ವ ವಿಕಾಸಕ್ಕೆ ಧರ್ಮ ಮತ್ತು ಆಧ್ಯಾತ್ಮಿಕತೆಯ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಶ್ರೀ ರಂಭಾಪುರಿ ಜಗದ್ಗುರುಗಳು ಧಾರ್ಮಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದು, ಅವರ ಸೇವೆ ಮತ್ತು ಸಾಧನೆ ಶ್ಲಾಘನೀಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.


‘ಶ್ರಮ ಸೇವಾ ಸಂಜೀವಿನಿ’ ಪ್ರಶಸ್ತಿ ಪ್ರದಾನ
ಕಾರ್ಯಕ್ರಮದಲ್ಲಿ ಖ್ಯಾತ ವರ್ತಕರಾದ ಜಯಪ್ರಕಾಶ ಮಾವಿ ಅವರಿಗೆ ‘ಶ್ರಮ ಸೇವಾ ಸಂಜೀವಿನಿ’ ಪ್ರಶಸ್ತಿ ಪ್ರದಾನ ಮಾಡಿ ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಿದರು.
ಐದು ದಿನಗಳ ಧರ್ಮಯಜ್ಞದ ವಿವಿಧ ಕಾರ್ಯಕ್ರಮಗಳನ್ನು ದೇವರಮನೆ ಶಿವಕುಮಾರ್ ಹಾಗೂ ದೇವರಮನೆ ಶಿವರಾಜ್ ಅವರ ಜವಾಬ್ದಾರಿಯಲ್ಲಿ ಯಶಸ್ವಿಯಾಗಿ ನಡೆಸಲಾಗಿದ್ದು, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜನಜಾಗೃತಿ ಮೂಡಿಸುವ ಕಾರ್ಯವೂ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಜಿ. ಪುಟ್ಟಸ್ವಾಮಿ, ಮಾಜಿ ಮಹಾಪೌರ ಎಸ್.ಟಿ. ವೀರೇಶ್, ಸಿಂಡಿಕೇಟ್ ಬ್ಯಾಂಕ್ ಮಾಜಿ ನಿರ್ದೇಶಕ ಡಾ. ನಸೀರ್ ಅಹ್ಮದ್, ನಗರಸಭೆ ಮಾಜಿ ಅಧ್ಯಕ್ಷ ಕೆ.ಜಿ. ಶಿವಕುಮಾರ್, ವೀಣಾ ಪ್ರವೀಣ್ ಕುಮಾರ್, ವಿ. ಮಂಜುನಾಥ್, ತ್ಯಾವಣಗಿ ವೀರಭದ್ರಸ್ವಾಮಿ, ಮಾಘನಹಳ್ಳಿ ಗುರು, ಆರ್. ಲಕ್ಷ್ಮಣ್, ಮಹಾಂತೇಶ್ ಓಣರೊಟ್ಟಿ, ಪ್ರಶಾಂತ್ ಗುಪ್ತ, ಕಂಬಳಿ ಹಾಲಸ್ವಾಮಿ, ಜೊಳ್ಳಿ ಗುರು, ರೂಪಾ ಮಲ್ಲೇಶ್, ಹೇಮಲತಾ ಪ್ರಸನ್ನ, ಅನುರಾಧ ಕೊಟ್ರೇಶ್, ಗಿರಿಜಮ್ಮ, ಶಕುಂತಲಮ್ಮ, ಭಾಗ್ಯಮ್ಮ, ಸುಧಾ ಗುರುಪ್ರಸಾದ್, ಪ್ರಿಯಾಂಕ ದಂಡಪಾಣಿ ಸೇರಿದಂತೆ ಹಲವು ಗಣ್ಯರು ಹಾಗೂ ಭಕ್ತರು ಭಾಗವಹಿಸಿದ್ದರು.
ಸ್ವಾಮಿ ಗುರುಶಾಂತ್ ಅವರು ಜಗದ್ಗುರುಗಳಿಗೆ ಗೌರವ ಮಾಲಾರ್ಪಣೆ ಮಾಡಿದರು. ಹರಿಹರದ ಕಾಂತರಾಜ್ ಮತ್ತು ವೀರೇಶ್ ಸಂಗಡಿಗರಿಂದ ಭಕ್ತಿಗೀತೆಗಳ ಗಾಯನ ನಡೆಯಿತು. ಡಿ.ವಿ. ಆರಾಧ್ಯಮಠ ಸ್ವಾಗತಿಸಿದರು. ಡಾ. ವೀರಣ್ಣ ಶೆಟ್ಟರ್ ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಇಷ್ಟಲಿಂಗ ಮಹಾಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಕಾರ್ಯಕ್ರಮದ ಬಳಿಕ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಐದು ದಿನಗಳ ಕಾಲ ನಡೆದ ಧಾರ್ಮಿಕ ಹಾಗೂ ಜನಜಾಗೃತಿ ಕಾರ್ಯಕ್ರಮವು ಭಕ್ತರಲ್ಲಿ ಆಧ್ಯಾತ್ಮಿಕ ಚೈತನ್ಯ ಮೂಡಿಸುವುದರೊಂದಿಗೆ ಸಮಾಜದಲ್ಲಿ ಧಾರ್ಮಿಕ ಮತ್ತು ನೈತಿಕ ಮೌಲ್ಯಗಳ ಕುರಿತು ಅರಿವು ಮೂಡಿಸುವಲ್ಲಿ ಯಶಸ್ವಿಯಾಯಿತು.










