ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಜಾತ್ಯತೀತ ನೆಲೆಗಟ್ಟಿನಲ್ಲಿ ಸಾಮರಸ್ಯದ ವಾತಾವರಣ ನಿರ್ಮಾಣ ಅಗತ್ಯ: ಕಾಯಕಯೋಗಿ ಶ್ರೀ ಶಾಂತವೀರ ಸ್ವಾಮೀಜಿ

On: August 13, 2026 11:06 AM
Follow Us:

ಹೊಸದುರ್ಗ: ಸಮಾಜದ ಎಲ್ಲ ರಂಗಗಳಲ್ಲೂ ಕಲುಷಿತ ವಾತಾವರಣ ನಿರ್ಮಾಣವಾಗುತ್ತಿರುವ ಇಂದಿನ ಸಂದರ್ಭದಲ್ಲಿ ತುಳಿತಕ್ಕೊಳಗಾದ ಹಾಗೂ ಅತ್ಯಂತ ಹಿಂದುಳಿದಿರುವ ಸಣ್ಣಪುಟ್ಟ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವ ಅಗತ್ಯವಿದೆ. ಜಾತ್ಯತೀತ ನೆಲೆಗಟ್ಟಿನಲ್ಲಿ ಎಲ್ಲ ಸಮುದಾಯಗಳ ನಡುವೆ ಸಾಮರಸ್ಯ ಬೆಳೆಸಿ, ಸಮಾಜದ ಸಂಘಟನೆ ಮತ್ತು ಅಭಿವೃದ್ಧಿಯ ಕುರಿತು ಜಾಗೃತಿ ಮೂಡಿಸುವುದು ಇಂದಿನ ಪ್ರಮುಖ ಅಗತ್ಯವಾಗಿದೆ ಎಂದು ಕಾಯಕಯೋಗಿ ಶ್ರೀ ಶಾಂತವೀರ ಸ್ವಾಮೀಜಿ ಹೇಳಿದರು.

ಕುಂಚಿಗಿರಿ ಕ್ಷೇತ್ರದ ಕುಂಚಿಟಿಗ ಮಹಾಸಂಸ್ಥಾನ ಶ್ರೀಮಠದಲ್ಲಿ ಸೋಮವಾರ ಸಂಜೆ ನಡೆದ 23ನೇ ವರ್ಷದ 8ನೇ ತಿಂಗಳ ಸುಜ್ಞಾನ ಸಂಗಮ ಹಾಗೂ ದೇವಾಂಗ ಸಮಾಜ ಬಾಂಧವರ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಪ್ರತಿತಿಂಗಳು ನಡೆಯುತ್ತಿರುವ ಸುಜ್ಞಾನ ಸಂಗಮ ಕಾರ್ಯಕ್ರಮದ ಉದ್ದೇಶದ ಕುರಿತು ಮಾತನಾಡಿದ ಶ್ರೀಗಳು, ಸಮಾಜದ ವಿವಿಧ ಜಾತಿ ಮತ್ತು ಸಮುದಾಯಗಳ ಮುಖಂಡರನ್ನು ಆಹ್ವಾನಿಸಿ ಗೌರವಿಸುವ ಮೂಲಕ ಅವರ ಸೇವೆಯನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ರಾಜಕೀಯ ಪ್ರವೇಶಿಸಬೇಕು ಎಂಬ ಚಿಂತನೆಯಾಗಲಿ, ಆಸೆಯಾಗಲಿ ನಮಗಿಲ್ಲ. ಇಂತಹ ಆಲೋಚನೆ ಭಗವಂತನಿಂದಲೂ ನಮಗೆ ಬರದಿರಲಿ ಎಂದು ಸ್ಪಷ್ಟಪಡಿಸಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕಾವಿಧಾರಿ ಯತಿಯಾಗಿ ರಾಜಕೀಯ ಪ್ರವೇಶಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಕೆಲವರು ಸ್ವಾಮೀಜಿಗಳು ರಾಜಕೀಯಕ್ಕೆ ಬರುತ್ತಾರೆ ಎಂಬ ಅನುಮಾನ ವ್ಯಕ್ತಪಡಿಸುತ್ತಾರೆ. ಆದರೆ, ಸಮಾಜದ ನಡುವೆ ಸಾಮರಸ್ಯ, ಸಂಘಟನೆ, ಜಾಗೃತಿ ಮತ್ತು ಅಭಿವೃದ್ಧಿಗಾಗಿ ಕೆಲಸ ಮಾಡುವುದೇ ನಮ್ಮ ಉದ್ದೇಶ. ರಾಜಕೀಯ ಪ್ರವೇಶಿಸುವ ಯಾವುದೇ ಉದ್ದೇಶ ನಮಗಿಲ್ಲ ಎಂದು ಅವರು ಹೇಳಿದರು.

ದೇವಾಂಗ ಸಮುದಾಯವು ಶ್ರಮ ಮತ್ತು ಕಾಯಕಕ್ಕೆ ಹೆಸರುವಾಸಿಯಾದ ಸಮುದಾಯವಾಗಿದೆ. ಆದರೆ ಸಂಘಟನೆಯ ಕೊರತೆಯಿಂದ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿಲ್ಲ. ಸಮುದಾಯದ ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ಮಕ್ಕಳಿಗೆ ಉತ್ತಮ ಹಾಗೂ ಉನ್ನತ ಶಿಕ್ಷಣ ಕೊಡಿಸುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಶ್ರೀ ಶಾಂತವೀರ ಸ್ವಾಮೀಜಿ ಕರೆ ನೀಡಿದರು.

ಇಂದಿನ ಜಗತ್ತು ವಿವಿಧ ರೀತಿಯ ಗೊಂದಲ ಮತ್ತು ತಲ್ಲಣಗಳನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಮಕ್ಕಳಲ್ಲಿ ಕೇವಲ ಶೈಕ್ಷಣಿಕ ಜ್ಞಾನ ಬೆಳೆಸುವುದಷ್ಟೇ ಸಾಲದು; ಗಟ್ಟಿಯಾದ ಆತ್ಮಬಲ, ಆತ್ಮವಿಶ್ವಾಸ, ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡಿದಾಗ ಮಾತ್ರ ಸಮಾಜದ ಭವಿಷ್ಯ ಸುಭದ್ರವಾಗುತ್ತದೆ ಎಂದರು.

ದೇವಾಂಗ ಸಮುದಾಯದ ಶ್ರೀ ದಯಾನಂದಪುರಿ ಸ್ವಾಮೀಜಿಗಳನ್ನು ದಲಿತ ಮತ್ತು ಹಿಂದುಳಿದ ಮಠಾಧೀಶರ ಒಕ್ಕೂಟಕ್ಕೆ ಸೇರಿಸಿಕೊಳ್ಳುವ ಮೂಲಕ ಮತ್ತಷ್ಟು ಬಲಿಷ್ಠ ಸಂಘಟನೆ ರೂಪಿಸಬೇಕು. ಯಾವುದೇ ರಾಜಕೀಯ ಪಕ್ಷದ ಪರ ಅಥವಾ ವಿರೋಧದ ನಿಲುವು ತಾಳದೆ ಪಕ್ಷಾತೀತವಾಗಿ ಸಮುದಾಯ ಸಂಘಟನೆಯಾಗಬೇಕು. ಸಂಘಟನೆಯ ಮೂಲಕ ಸಮುದಾಯದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಹೊಸದುರ್ಗ ದೇವಾಂಗ ಸಮಾಜದ ಅಧ್ಯಕ್ಷ ಡಿ.ಆರ್. ಗೋವಿಂದರಾಜು ಮಾತನಾಡಿ, ದೇವಾಂಗ ಸಮಾಜ ಮತ್ತು ಕುಂಚಿಟಿಗ ಸಮಾಜದ ನಡುವೆ ಹಿಂದಿನಿಂದಲೂ ಆತ್ಮೀಯ ಹಾಗೂ ನಿಕಟವಾದ ಸಂಬಂಧವಿದೆ. ಉಭಯ ಸಮಾಜಗಳ ಮುಖಂಡರು ಪರಸ್ಪರ ಸಹಕಾರದೊಂದಿಗೆ ಹಲವು ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬಂದಿದ್ದಾರೆ ಎಂದರು.

ಎಂಎಲ್ಸಿ ನವೀನ್ ಅವರ ತಂದೆ ಶಿವಪ್ರಕಾಶ್ ಅವರ ಸಲಹೆಯ ಮೇರೆಗೆ ತಮ್ಮ ತಂದೆಯವರು ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಾಣಕ್ಕಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನನ್ನು ಬಿಟ್ಟುಕೊಟ್ಟಿದ್ದರು. ಆ ಜಮೀನು ಇಂದು ಸಾರ್ವಜನಿಕರ ಉಪಯೋಗಕ್ಕೆ ಬರುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.

ಕಳೆದ 30 ವರ್ಷಗಳಿಂದ ಸಮಾಜದ ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದು, ಸಮಾಜದ ಎಲ್ಲರ ವಿಶ್ವಾಸ ಗಳಿಸಿಕೊಂಡು ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಾದರೆ ಸಮಾಜದ ಎಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯಬೇಕು ಎಂದು ಅವರು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದೇವಾಂಗ ಸಂಘದ ಜಿಲ್ಲಾಧ್ಯಕ್ಷ ಗೋ. ತಿಪ್ಪೇಶ್ ಮಾತನಾಡಿ, ಶ್ರೀ ಶಾಂತವೀರ ಸ್ವಾಮೀಜಿಯವರ ಬದುಕು ಕಾಯಕ ಮತ್ತು ಸೇವೆಗೆ ಮಾದರಿಯಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ದಾಳಿಂಬೆ ಕೃಷಿಯನ್ನು ಕಾಯಕವಾಗಿ ಮಾಡಿಕೊಂಡು ದುಡಿದು, ಆ ಮೂಲಕ ಶ್ರೀಮಠದ ಕಟ್ಟಡಗಳ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ರಾಜ್ಯದ ಹಲವೆಡೆ ಶ್ರೀಮಠಕ್ಕೆ ಆಸ್ತಿ ಖರೀದಿಸಿ ಮಠದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ್ದಾರೆ. ಅವರ ಕಾಯಕನಿಷ್ಠೆ ಮತ್ತು ಸಮಾಜಮುಖಿ ಚಿಂತನೆ ಎಲ್ಲರಿಗೂ ಮಾದರಿಯಾಗಿದೆ ಎಂದು ಶ್ಲಾಘಿಸಿದರು.

ನಿವೃತ್ತ ಡಿಐಜಿ ಡಾ. ಜಿ. ರಮೇಶ್ ಮಾತನಾಡಿ, ಸುಜ್ಞಾನ ಸಂಗಮದ ಮೂಲಕ ವಿವಿಧ ಸಮುದಾಯಗಳ ಮುಖಂಡರನ್ನು ಒಂದೇ ವೇದಿಕೆಗೆ ಕರೆತಂದು ಗೌರವಿಸುತ್ತಿರುವುದು ಅಪರೂಪದ ಹಾಗೂ ಶ್ಲಾಘನೀಯ ಕಾರ್ಯವಾಗಿದೆ. ಸಮಾಜದ ಎಲ್ಲ ವರ್ಗಗಳನ್ನು ಒಗ್ಗೂಡಿಸುವ ಈ ಪ್ರಯತ್ನವು ಸಾಮಾಜಿಕ ಸಾಮರಸ್ಯಕ್ಕೆ ಪೂರಕವಾಗಿದೆ ಎಂದರು.

12ನೇ ಶತಮಾನದಲ್ಲಿ ಬಸವಾದಿ ಶಿವಶರಣರು ಅನುಭವ ಮಂಟಪದ ಮೂಲಕ ವಿವಿಧ ವರ್ಗ ಮತ್ತು ಸಮುದಾಯದ ಜನರನ್ನು ಒಂದೇ ವೇದಿಕೆಗೆ ಕರೆತಂದು ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದ್ದರು. ಅದೇ ಮಾದರಿಯಲ್ಲಿ ಶ್ರೀ ಶಾಂತವೀರ ಸ್ವಾಮೀಜಿ ಅವರು ಸುಜ್ಞಾನ ಸಂಗಮದ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದರು.

ಇಂದಿನ ಸಮಾಜದಲ್ಲಿ ಅಸತ್ಯ, ಅನ್ಯಾಯ, ಅಕ್ರಮ, ವಂಚನೆ, ಭ್ರಷ್ಟಾಚಾರ, ಅಧರ್ಮ ಮತ್ತು ಅನೀತಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಜನರಿಗೆ ಸನ್ಮಾರ್ಗದಲ್ಲಿ ಬದುಕುವ ದಾರಿ ತೋರಿಸುವುದು ಅತ್ಯಂತ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಶ್ರೀಗಳ ಕಾರ್ಯ ಅಭಿನಂದನಾರ್ಹವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಯುವಮುಖಂಡ ಹಾಗೂ ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬುರುಡೆಕಟ್ಟೆ ರಾಜೇಶ್ ಮಾತನಾಡಿ, ಸರ್ಕಾರಗಳು ಹಾಗೂ ಸಮಾಜದ ಮುಖ್ಯವಾಹಿನಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ಗುರುತಿಸದ ಅತ್ಯಂತ ಹಿಂದುಳಿದ ಸಣ್ಣಪುಟ್ಟ ಸಮುದಾಯಗಳನ್ನು ಗುರುತಿಸಿ, ಅವರ ಮುಖಂಡರನ್ನು ಗೌರವಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಶ್ರೀಗಳು ನಿರಂತರವಾಗಿ ಮಾಡುತ್ತಿದ್ದಾರೆ. ಇಂತಹ ಕಾರ್ಯದಿಂದ ಸಮುದಾಯಗಳಲ್ಲಿ ಆತ್ಮವಿಶ್ವಾಸ ಮತ್ತು ಸಂಘಟನೆಯ ಮನೋಭಾವ ಮೂಡುತ್ತಿದೆ ಎಂದರು.

ಸಮುದಾಯಗಳ ಅಭಿವೃದ್ಧಿಗೆ ಸನ್ಮಾರ್ಗ ತೋರಿಸುತ್ತಿರುವ ಶ್ರೀ ಶಾಂತವೀರ ಸ್ವಾಮೀಜಿಯವರ ಕಾರ್ಯಕ್ಕೆ ಎಲ್ಲರೂ ಬೆಂಬಲ ನೀಡಬೇಕು. ಅವರ ಸಮಾಜಮುಖಿ ಸೇವೆಗೆ ನಾವು ಸದಾ ಚಿರಋಣಿಯಾಗಿರುತ್ತೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಾಹಿತಿ ಬಾಗೂರು ಆರ್. ನಾಗರಾಜಪ್ಪ ಅವರು ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಆರ್. ಶಾಂತಪ್ಪ ಹಾಗೂ ಚೇತನ ಮಹಿಳಾ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷೆ ಸವಿತಾ ರಮೇಶ್ ಮಾತನಾಡಿದರು.

ಈ ಸಂದರ್ಭದಲ್ಲಿ ಬನಶಂಕರಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎ.ಎಸ್. ರಾಮಚಂದ್ರ, ಉಪಾಧ್ಯಕ್ಷ ಡಿ.ಆರ್. ನಾಗೇಶಪ್ಪ, ಟಿಎಪಿಸಿಎಂಸಿ ಉಪಾಧ್ಯಕ್ಷ ಎಸ್.ಸಿ. ರಮೇಶ್, ನಿವೃತ್ತ ಕೇಂದ್ರೀಯ ಅರೆಸೇನಾ ಪಡೆಯ ಟಿ. ವೆಂಕಟೇಶಮೂರ್ತಿ, ದೇವಾಂಗ ನೌಕರ ಸಂಘದ ಅಧ್ಯಕ್ಷ ಎಸ್. ಚಂದ್ರಶೇಖರ್, ಉಪಾಧ್ಯಕ್ಷ ಹಾಗೂ ಪತ್ರಕರ್ತ ಎಸ್. ಸುರೇಶ್ ನೀರಗುಂದ ಸೇರಿದಂತೆ ಶ್ರೀ ಸಂಗಮೇಶ್ವರ ಸಮುದಾಯ ಭವನ ಸಮಿತಿ, ಶ್ರೀ ಸಂಗಮೇಶ್ವರ ನೌಕರ ಸಂಘ, ಶ್ರೀ ಸಂಗಮೇಶ್ವರ ಯುವ ವೇದಿಕೆ, ಕುಂಚಶ್ರೀ ಸಂಗಮೇಶ್ವರ ಮಹಿಳಾ ಸಂಘ ಹಾಗೂ ಶಾಂತವೀರ ಶ್ರೀ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಧಾರ್ಮಿಕ, ಸಾಮಾಜಿಕ ಹಾಗೂ ಸಹಕಾರಿ ಕ್ಷೇತ್ರದ ಗಣ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಮಾಜದ ಮುಖಂಡರು ಹಾಗೂ ಸಹೋದರ ಸಮಾಜಗಳ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಸುಜ್ಞಾನ ಸಂಗಮದ ಅಂಗವಾಗಿ ಸಮಾಜ ಸೇವೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ಗಣ್ಯರನ್ನು ಗೌರವಿಸಲಾಯಿತು. ದೇವಾಂಗ ಸಮಾಜದ ಬಂಧುಗಳಿಗೆ ಆತ್ಮೀಯ ಅಭಿನಂದನೆ ಸಲ್ಲಿಸಲಾಯಿತು. ಭಕ್ತಿ, ಸಂಸ್ಕೃತಿ, ಕಾಯಕ, ಸೇವೆ ಮತ್ತು ಸಮಾಜಮುಖಿ ಚಿಂತನೆಯೊಂದಿಗೆ ನಡೆದ ಕಾರ್ಯಕ್ರಮವು ಎಲ್ಲರ ಗಮನ ಸೆಳೆಯಿತು.

ಸಮಾಜದ ವಿವಿಧ ಸಮುದಾಯಗಳ ನಡುವೆ ಪರಸ್ಪರ ಗೌರವ, ಸಹಕಾರ ಮತ್ತು ಸಾಮರಸ್ಯ ಬೆಳೆಸುವ ಸಂದೇಶ ಸಾರಿದ ಸುಜ್ಞಾನ ಸಂಗಮ ಕಾರ್ಯಕ್ರಮವು ಸಾಮಾಜಿಕ ಒಗ್ಗಟ್ಟಿನ ಮಹತ್ವವನ್ನು ಮತ್ತೊಮ್ಮೆ ಸಾರುವ ವೇದಿಕೆಯಾಗಿ ಗಮನ ಸೆಳೆಯಿತು.

K.M.Sathish Gowda

Join WhatsApp

Join Now

Facebook

Join Now

Read more

ಧರ್ಮದ ದಾರಿಯಲ್ಲಿ ನಡೆದರೆ ಬದುಕು ಸಾರ್ಥಕ; ಸದ್ಗುಣ–ಸಂಸ್ಕಾರವೇ ನಿಜವಾದ ಸಂಪತ್ತು: ಶ್ರೀ ರಂಭಾಪುರಿ ಜಗದ್ಗುರುಗಳು

ಮಾನವ ಜನ್ಮ ಭಗವಂತನ ಅಪೂರ್ವ ಕೊಡುಗೆ; ಧರ್ಮದ ಹಾದಿಯಲ್ಲಿ ಬದುಕು ಸಾರ್ಥಕವಾಗಲಿ: ಶ್ರೀ ರಂಭಾಪುರಿ ಜಗದ್ಗುರುಗಳು

ಯುವಶಕ್ತಿ ಜಾಗೃತವಾದರೆ ರಾಷ್ಟ್ರದ ಭವಿಷ್ಯ ಬದಲಾಗುತ್ತದೆ: ಶ್ರೀ ರಂಭಾಪುರಿ ಜಗದ್ಗುರುಗಳು

ಮಾನವೀಯತೆಯ ಬೆಳವಣಿಗೆಯೇ ಸಮಾಜದ ಶಕ್ತಿ; ಧರ್ಮ ಪ್ರಜ್ಞೆಯನ್ನು ಆಚರಣೆಯಲ್ಲಿ ಅಳವಡಿಸಿಕೊಂಡಾಗಲೇ ಶಾಂತಿ ಸಾಧ್ಯ: ಶ್ರೀ ರಂಭಾಪುರಿ ಜಗದ್ಗುರುಗಳು

ಸ್ವಾರ್ಥ ತೊರೆದು ಸತ್ಯದ ಹಾದಿಯಲ್ಲಿ ನಡೆದರೆ ಬದುಕು ಸಾರ್ಥಕ: ಶ್ರೀ ರಂಭಾಪುರಿ ಜಗದ್ಗುರುಗಳು

ದಾವಣಗೆರೆಯಲ್ಲಿ ವೈಭವದ ‘ಜನಜಾಗೃತಿ ಧರ್ಮ ಸಮಾರಂಭ’; ಬದಲಾವಣೆಯ ಹಾದಿಯಲ್ಲಿ ಬೆಳವಣಿಗೆ ಸಾಧಿಸಿ ಮೌಲ್ಯಯುತ ಬದುಕು ರೂಪಿಸಿಕೊಳ್ಳಿ: ಶ್ರೀ ರಂಭಾಪುರಿ ಜಗದ್ಗುರುಗಳು

Leave a Comment