ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ನಾಗೇಂದ್ರ ವಜಾಕ್ಕೆ ಆಗ್ರಹಿಸಿ ಬಿಜೆಪಿ ಡಿಸಿ ಕಚೇರಿ ಮುತ್ತಿಗೆ; ನಾಲ್ಕು ದಿನಗಳ ನಿರಂತರ ಧರಣಿಗೂ ಸರ್ಕಾರ ಸ್ಪಂದಿಸಿಲ್ಲ: ಭ್ರಷ್ಟಾಚಾರ ಆರೋಪ ಮುಚ್ಚಿಹಾಕುವ ಯತ್ನ ಎಂದು ಜಗದೀಶ್ ಎನ್.ಕೆ. ವಾಗ್ದಾಳಿ

On: August 21, 2026 1:08 PM
Follow Us:

ಶಿವಮೊಗ್ಗ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಸಲಾಗುತ್ತಿರುವ ಅನಿರ್ದಿಷ್ಟಾವಧಿಯ ಹಗಲು-ರಾತ್ರಿ ಧರಣಿ ನಾಲ್ಕನೇ ದಿನ ತೀವ್ರ ಸ್ವರೂಪ ಪಡೆದುಕೊಂಡಿತು. ಜಿಲ್ಲಾ ಬಿಜೆಪಿ ಅಧ್ಯಕ್ಷ ಜಗದೀಶ್ ಎನ್.ಕೆ. ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು. ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ತಡೆದು ವಶಕ್ಕೆ ಪಡೆದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಜಗದೀಶ್ ಎನ್.ಕೆ., ಕಳೆದ 17ನೇ ತಾರೀಖಿನಿಂದ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಶಿವಮೊಗ್ಗ ಜಿಲ್ಲಾ ಬಿಜೆಪಿ ಅನಿರ್ದಿಷ್ಟಾವಧಿಯ ನಿರಂತರ ಧರಣಿ ಆರಂಭಿಸಿದೆ. ನಾಲ್ಕು ದಿನಗಳಿಂದ ಜಿಲ್ಲೆಯ ವಿವಿಧ ಮಂಡಲಗಳು, ಮೋರ್ಚಾಗಳು ಹಾಗೂ ಸಾವಿರಾರು ಬಿಜೆಪಿ ಕಾರ್ಯಕರ್ತರು ಹೋರಾಟದಲ್ಲಿ ಭಾಗವಹಿಸಿ ಧರಣಿಯನ್ನು ಯಶಸ್ವಿಗೊಳಿಸಿದ್ದಾರೆ ಎಂದು ತಿಳಿಸಿದರು.

ಧರಣಿಯ ಮೊದಲ ದಿನ ಶಿವಮೊಗ್ಗ ಮಂಡಲದ ಬಿಜೆಪಿ ಕಾರ್ಯಕರ್ತರು ಹಾಗೂ ಎಸ್‌ಟಿ ಮೋರ್ಚಾದ ಕಾರ್ಯಕರ್ತರು ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಎರಡನೇ ದಿನ ಶಿಕಾರಿಪುರದ ಬಿಜೆಪಿ ಕಾರ್ಯಕರ್ತರು ಹಾಗೂ ಎಸ್‌ಸಿ ಮೋರ್ಚಾದ ಮುಖಂಡರು ಮತ್ತು ಕಾರ್ಯಕರ್ತರು ಸೇರಿದಂತೆ ಸುಮಾರು ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ಹೋರಾಟಕ್ಕೆ ಪಕ್ಷದ ಮುಖಂಡರು, ಜನಪ್ರತಿನಿಧಿಗಳು ಹಾಗೂ ವಿವಿಧ ಮೋರ್ಚಾಗಳ ಕಾರ್ಯಕರ್ತರು ನೀಡಿರುವ ಬೆಂಬಲಕ್ಕೆ ಅಭಿನಂದನೆ ಸಲ್ಲಿಸಿದರು.

ಧರಣಿಯ ವಿವಿಧ ದಿನಗಳಲ್ಲಿ ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಹಾಗೂ ವಿಭಾಗದ ಪ್ರಭಾರಿಗಳು ಭಾಗವಹಿಸಿ ಕಾರ್ಯಕರ್ತರಿಗೆ ಪ್ರೋತ್ಸಾಹ ನೀಡಿದರು. ಶಿವಮೊಗ್ಗ ಗ್ರಾಮಾಂತರ, ತೀರ್ಥಹಳ್ಳಿ ಸೇರಿದಂತೆ ವಿವಿಧ ಭಾಗಗಳ ನೂರಾರು ಕಾರ್ಯಕರ್ತರು ಧರಣಿಯಲ್ಲಿ ಭಾಗವಹಿಸಿದ್ದರು. ಯುವ ಮೋರ್ಚಾದ ಸುಮಾರು ನೂರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸುವ ಮೂಲಕ ಹೋರಾಟಕ್ಕೆ ಹೊಸ ಚೈತನ್ಯ ನೀಡಿದರು ಎಂದು ಜಗದೀಶ್ ಎನ್.ಕೆ. ಹೇಳಿದರು.

ನಾಲ್ಕು ದಿನಗಳಿಂದ ನಿರಂತರವಾಗಿ ಧರಣಿ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಸ್ಪಂದಿಸದಿರುವುದು ಬೇಸರದ ಸಂಗತಿಯಾಗಿದೆ. ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಇಂದು ‘ಡಿಸಿ ಕಚೇರಿ ಚಲೋ’ಗೆ ಕರೆ ನೀಡಲಾಗಿತ್ತು. ಅದರಂತೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಯತ್ತ ತೆರಳಿದಾಗ ಪೊಲೀಸರು ತಡೆದು ಹಲವರನ್ನು ವಶಕ್ಕೆ ಪಡೆದರು. ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಆದರೆ, ಕಾರ್ಯಕರ್ತರನ್ನು ಬಂಧಿಸಿ ಬಿಡುಗಡೆ ಮಾಡಿದ ಮಾತ್ರಕ್ಕೆ ನಮ್ಮ ಹೋರಾಟ ಅಂತ್ಯವಾಗಿದೆ ಎಂದು ಯಾರೂ ಭಾವಿಸಬಾರದು. ರಾಜ್ಯ ನಾಯಕತ್ವ ಮುಂದಿನ ಹೋರಾಟದ ಕುರಿತು ಯಾವ ಸೂಚನೆ ನೀಡುತ್ತದೆಯೋ ಅದಕ್ಕೆ ನಾವು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ರಾಜ್ಯ ನಾಯಕತ್ವ ಕರೆ ನೀಡುವ ಮುಂದಿನ ಹೋರಾಟಗಳಲ್ಲಿ ಶಿವಮೊಗ್ಗ ಜಿಲ್ಲೆಯ ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಎಚ್ಚರಿಸಿದರು.

ಅಗತ್ಯಬಿದ್ದರೆ ವಿಧಾನಸೌಧ ಚಲೋ ಸೇರಿದಂತೆ ಮತ್ತಷ್ಟು ತೀವ್ರ ಸ್ವರೂಪದ ಹೋರಾಟಕ್ಕೆ ಪಕ್ಷದ ಕಾರ್ಯಕರ್ತರು ಸಜ್ಜಾಗಿದ್ದಾರೆ. ರಾಜ್ಯ ನಾಯಕತ್ವದ ಸೂಚನೆಯಂತೆ ಹೋರಾಟವನ್ನು ಮುಂದುವರಿಸಿ ಸರ್ಕಾರಕ್ಕೆ ನಮ್ಮ ಸಂಘಟನೆಯ ಶಕ್ತಿಯನ್ನು ತೋರಿಸುತ್ತೇವೆ ಎಂದು ಹೇಳಿದರು.

ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಬಿ. ನಾಗೇಂದ್ರ ಅವರನ್ನು ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ಉಳಿಸಿಕೊಂಡಿರುವುದನ್ನು ವಿರೋಧಿಸಿ ಈ ಧರಣಿ ಆರಂಭಿಸಲಾಗಿದೆ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ಸರ್ಕಾರವೇ ಇಲ್ಲದಂತೆ ಬಿಂಬಿಸಲು ಪ್ರಯತ್ನಿಸುತ್ತಿದೆ ಎಂದು ಜಗದೀಶ್ ಎನ್.ಕೆ. ಆರೋಪಿಸಿದರು.

ಕೆಲವರು ಭ್ರಷ್ಟಾಚಾರ ಎಲ್ಲಿ ನಡೆದಿದೆ, ಅದಕ್ಕೆ ಏನು ಸಾಕ್ಷಿ ಇದೆ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸದನದಲ್ಲಿ ಮಾತನಾಡಿರುವ ಹೇಳಿಕೆಗಳನ್ನು ಗಮನಿಸಬೇಕು. ಇದು ₹187 ಕೋಟಿ ಹಗರಣವಲ್ಲ, ₹97 ಕೋಟಿ ಹಗರಣ ಎಂದು ಅವರೇ ಹೇಳಿದ್ದರು. ಹೀಗಿರುವಾಗ ಹಗರಣ ನಡೆದಿರುವ ಬಗ್ಗೆ ಸಾಕ್ಷಿ ಕೇಳುತ್ತಿರುವವರು ಸರ್ಕಾರದ ಹಿಂದಿನ ಹೇಳಿಕೆಗಳನ್ನು ಗಮನಿಸಬೇಕು ಎಂದು ಅವರು ಹೇಳಿದರು.

ಹಗರಣ ನಡೆದಿರುವುದನ್ನು ಒಪ್ಪಿಕೊಂಡಂತೆಯೇ ಸರ್ಕಾರದ ಮುಖಂಡರ ಹೇಳಿಕೆಗಳಿವೆ. ಆದರೂ ಬಿ. ನಾಗೇಂದ್ರ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ ಅವರನ್ನು ಸಂಪೂರ್ಣವಾಗಿ ರಕ್ಷಿಸಲು ಸಚಿವ ಸಂಪುಟ ಮುಂದಾಗಿದೆ ಎಂಬ ಅನುಮಾನ ರಾಜ್ಯದ ಜನರಲ್ಲಿ ಮೂಡಿದೆ ಎಂದು ವಾಗ್ದಾಳಿ ನಡೆಸಿದರು.

ಇಂದು ಬಿ. ನಾಗೇಂದ್ರ ಅವರ ಬೆನ್ನಿಗೆ ರಾಜ್ಯ ಸಚಿವ ಸಂಪುಟವೇ ನಿಂತಿರುವಂತೆ ಕಾಣುತ್ತಿದೆ. ಇದರಿಂದ ರಾಜ್ಯ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಮೂಡುತ್ತಿದೆ. ರಾಜ್ಯದ ಅಭಿವೃದ್ಧಿ, ಜನರ ಸಮಸ್ಯೆಗಳು ಹಾಗೂ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಸರ್ಕಾರ ಗಮನಹರಿಸುವ ಬದಲು ಭ್ರಷ್ಟಾಚಾರದ ಆರೋಪಗಳನ್ನು ಮುಚ್ಚಿಹಾಕುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದರು.

ರಾಜ್ಯದ ಜನತೆ ಅಭಿವೃದ್ಧಿಯನ್ನು ನಿರೀಕ್ಷಿಸುತ್ತಿದ್ದಾರೆ. ಆದರೆ ಭ್ರಷ್ಟಾಚಾರದ ಆರೋಪಗಳಿಂದ ಸುತ್ತುವರಿದಿರುವ ಸರ್ಕಾರದಿಂದ ಅಭಿವೃದ್ಧಿಗಿಂತ ಭ್ರಷ್ಟಾಚಾರದ ಆಡಳಿತವೇ ಹೆಚ್ಚಾಗಿ ಕಾಣುತ್ತಿದೆ. ಸರ್ಕಾರ ತಕ್ಷಣ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ಪ್ರಕರಣದ ಕುರಿತು ಸಮಗ್ರ ಮತ್ತು ಪಾರದರ್ಶಕ ತನಿಖೆಗೆ ಅವಕಾಶ ಕಲ್ಪಿಸಬೇಕು ಎಂದು ಜಗದೀಶ್ ಎನ್.ಕೆ. ಒತ್ತಾಯಿಸಿದರು.

ಈ ಹೋರಾಟವು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ರಾಜ್ಯ ನಾಯಕತ್ವದ ಮುಂದಿನ ಸೂಚನೆಯಂತೆ ಬಿಜೆಪಿ ಕಾರ್ಯಕರ್ತರು ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಿದ್ದಾರೆ ಎಂದು ಅವರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಹೊಳಲೂರು ಸಂತೋಷ್, ಜಿಲ್ಲಾ ಮಾಧ್ಯಮ ಪ್ರಮುಖ ಚಂದ್ರಶೇಖರ್ ಎಸ್., ಮಂಜುನಾಥ್ ಎನ್., ಶ್ರೀನಾಗ್ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

500 ಕೆಪಿಎಸ್ ಶಾಲೆಗಳ ಹೊಸ ರೂಪಕ್ಕೆ ಸಚಿವ ಮಧು ಬಂಗಾರಪ್ಪ ಹೆಜ್ಜೆ: ಎಡಿಬಿಯಿಂದ ₹1,750 ಕೋಟಿ ನೆರವು

ಲಕ್ಷಾಂತರ ಮನೆ-ನಿವೇಶನಗಳಿಗೆ ಎ-ಖಾತಾ ಭಾಗ್ಯ: ವಿಧಾನಸಭೆಯಲ್ಲಿ ಮಹತ್ವದ ವಿಧೇಯಕ ಪಾಸ್

ಬಿಡದಿ ಟೌನ್‌ಶಿಪ್ ಯೋಜನೆ ರದ್ದುಗೊಳಿಸಿ; ರೈತರ ಭೂಮಿ ಕಬಳಿಸಲು ಬಿಡಲ್ಲ, ಹೋರಾಟ ಮತ್ತಷ್ಟು ತೀವ್ರಗೊಳಿಸುತ್ತೇವೆ: ಹೆಚ್.ಆರ್. ಬಸವರಾಜಪ್ಪ

ವಾಲ್ಮೀಕಿ ನಿಗಮ ಹಗರಣದಲ್ಲಿ ಸಚಿವ ನಾಗೇಂದ್ರರನ್ನು ಸಂಪುಟದಿಂದ ಕೈಬಿಡುವವರೆಗೆ ಹೋರಾಟ ನಿರಂತರ: ಚಂದ್ರಶೇಖರ್

ವಾಲ್ಮೀಕಿ ಸಮಾಜದ ಅಭಿವೃದ್ಧಿಗೆ ಮೀಸಲಿಟ್ಟ ₹187 ಕೋಟಿ ಲೂಟಿ ಖಂಡನೀಯ; ನಾಗೇಂದ್ರ ವಜಾಗೊಳ್ಳುವವರೆಗೂ ಹೋರಾಟ ನಿಲ್ಲದು: ಎಸ್ಟಿ ಮೋರ್ಚಾ ಅಧ್ಯಕ್ಷ ಹರೀಶ್ ಘೋಷಣೆ

ಬ್ಯಾರಿಕೇಡ್‌ಗಳಿಗೆ ಹೆದರಲ್ಲ, ಹೋರಾಟದಿಂದ ಹಿಂದೆ ಸರಿಯಲ್ಲ: ₹187 ಕೋಟಿ ದೀನದಲಿತರ ಅಭಿವೃದ್ಧಿಗೆ ಬಳಕೆಯಾಗಬೇಕಿತ್ತು ಎಂದು ಕಾಂಗ್ರೆಸ್ ವಿರುದ್ಧ ಶಾಂತ ಸುರೇಂದ್ರ ವಾಗ್ದಾಳಿ

Leave a Comment