ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಅನುಭವದಿಂದ ಕಲಿತ ಪಾಠಗಳನ್ನು ಮರೆಯಲು ಸಾಧ್ಯವಿಲ್ಲ: ಶ್ರೀ ರಂಭಾಪುರಿ ಜಗದ್ಗುರುಗಳು

On: August 21, 2026 12:04 PM
Follow Us:
ಶ್ರೀ ರುದ್ರಮುನಿ ಶಿವಾಚಾರ್ಯ ಭಗವತ್ಪಾದರ 34ನೇ ವರ್ಷದ ಪುಣ್ಯಸ್ಮರಣೋತ್ಸವಕ್ಕೆ ಭಕ್ತಿ-ಭಾವದ ಮೆರುಗು

ಶ್ರೀ ರಂಭಾಪುರಿ ಪೀಠ (ಬಾಳೆಹೊನ್ನೂರು), ಆ. 20: ಪುಸ್ತಕಗಳಿಂದ ಕಲಿತ ಪಾಠಗಳನ್ನು ಮನುಷ್ಯ ಕೆಲವೊಮ್ಮೆ ಮರೆತುಬಿಡಬಹುದು. ಆದರೆ ಬದುಕಿನ ಅನುಭವಗಳಿಂದ ಕಲಿತ ಪಾಠಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಶ್ರೀ ರಂಭಾಪುರಿ ಡಾ. ಶ್ರೀ ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಗುರುವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಲಿಂಗೈಕ್ಯ ಶ್ರೀ ಜಗದ್ಗುರು ರುದ್ರಮುನಿ ಶಿವಾಚಾರ್ಯ ಭಗವತ್ಪಾದರ 34ನೇ ವರ್ಷದ ಪುಣ್ಯಸ್ಮರಣೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಹೂವಿನ ಪರಿಮಳವು ಗಾಳಿ ಬೀಸಿದ ದಿಕ್ಕಿನಲ್ಲಿ ಮಾತ್ರ ಹರಡುತ್ತದೆ. ಆದರೆ ಮನುಷ್ಯನ ಒಳ್ಳೆಯತನವು ಎಲ್ಲೆಡೆ ವ್ಯಾಪಿಸಬೇಕು. ಸುಳ್ಳು ಹೇಳಿ ಜೀವಮಾನವಿಡೀ ಸಂಕಷ್ಟಪಡುವುದಕ್ಕಿಂತ ಸತ್ಯ ಎಷ್ಟೇ ಕಹಿಯಾಗಿದ್ದರೂ ಅದನ್ನೇ ಹೇಳುವುದು ಉತ್ತಮ ಎಂದು ಜಗದ್ಗುರುಗಳು ತಿಳಿಸಿದರು.

ಮನುಷ್ಯ ಮನೆ, ಊರು, ಬಟ್ಟೆ, ಸಂಬಂಧಗಳು ಮತ್ತು ಸ್ನೇಹಿತರನ್ನು ಬದಲಾಯಿಸುತ್ತಾ ಹೋಗುತ್ತಾನೆ. ಆದರೂ ಅವನಿಗೆ ನೆಮ್ಮದಿ ಸಿಗುವುದಿಲ್ಲ. ಅದಕ್ಕೆ ಕಾರಣ, ಆತ ತನ್ನನ್ನು ತಾನು ಬದಲಾಯಿಸಿಕೊಳ್ಳಲು ಪ್ರಯತ್ನಿಸದಿರುವುದು. ನಿಜವಾದ ಬದಲಾವಣೆ ಮನುಷ್ಯನ ಆಂತರಿಕ ಬದುಕಿನಿಂದ ಆರಂಭವಾಗಬೇಕು ಎಂದು ಅವರು ಹೇಳಿದರು.

ಸಂಪತ್ತು ಇರುವಾಗ ಅದರ ಮೌಲ್ಯ ತಿಳಿಯದಿರಬಹುದು. ಆದರೆ ಜೀವನದಲ್ಲಿ ಎದುರಾಗುವ ಸಂಕಷ್ಟಗಳು ಮನುಷ್ಯನಿಗೆ ನಿಜವಾದ ಪಾಠ ಕಲಿಸುತ್ತವೆ. ತುಂಬಿದ ಜೇಬು ನೂರಾರು ಆಟಗಳನ್ನು ಆಡಿಸಿದರೆ, ಖಾಲಿ ಜೇಬು ಬದುಕಿನ ನೂರಾರು ಪಾಠಗಳನ್ನು ಕಲಿಸುತ್ತದೆ ಎಂಬ ಅರ್ಥಪೂರ್ಣ ಮಾತನ್ನು ಜಗದ್ಗುರುಗಳು ಉಲ್ಲೇಖಿಸಿದರು.

ಲಿಂಗೈಕ್ಯ ಶ್ರೀ ಜಗದ್ಗುರು ರುದ್ರಮುನಿ ಶಿವಾಚಾರ್ಯ ಭಗವತ್ಪಾದರು ಕಾಯಕಕ್ಕಿಂತ ಕೈಲಾಸ, ಧರ್ಮಕ್ಕಿಂತ ದಯೆ, ಅರಿವಿಗಿಂತ ಆಚಾರ, ಅಧಿಕಾರಕ್ಕಿಂತ ಅಭಿಮಾನ, ಆಸ್ತಿಗಿಂತ ಆರೋಗ್ಯ, ಸನ್ಮಾನಕ್ಕಿಂತ ಸಂಸ್ಕಾರ, ಹಣಕ್ಕಿಂತ ಗುಣ, ಮನೆಗಿಂತ ಮನಸ್ಸು ಹಾಗೂ ವಿದ್ಯೆಗಿಂತ ಅನುಭವ ದೊಡ್ಡದು ಎಂಬ ಜೀವನ ಮೌಲ್ಯಗಳನ್ನು ಅರಿತು ಬಾಳಿದ ಪರಮಾಚಾರ್ಯರಾಗಿದ್ದರು ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ಸ್ಮರಿಸಿದರು.

ಸುಮಾರು 19 ವರ್ಷಗಳ ಕಾಲ ಜಗದ್ಗುರುಗಳಾಗಿ ಧರ್ಮದ ಹಿರಿಮೆ, ಮಾನವೀಯ ಮೌಲ್ಯಗಳು ಮತ್ತು ಸಂಸ್ಕಾರ-ಸಂಸ್ಕೃತಿಯನ್ನು ಬೆಳೆಸಿ ಬಲಗೊಳಿಸಿದ ಕೀರ್ತಿ ಲಿಂಗೈಕ್ಯ ಶ್ರೀ ರುದ್ರಮುನಿ ಜಗದ್ಗುರುಗಳಿಗೆ ಸಲ್ಲುತ್ತದೆ. ಅವರ ಆದರ್ಶ ಬದುಕು ಭಕ್ತ ಸಮುದಾಯಕ್ಕೆ ಸದಾ ದಾರಿದೀಪವಾಗಿದೆ ಎಂದು ಹೇಳಿದರು.

ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನದಲ್ಲಿ ಬೇರುಗಂಡಿ ಬೃಹನ್ಮಠದ ಶ್ರೀ ರೇಣುಕ ಮಹಾಂತ ಶಿವಾಚಾರ್ಯರು ಮಾತನಾಡಿ, ಪರಿಶ್ರಮವಿಲ್ಲದೆ ಯಶಸ್ಸನ್ನು ಬಯಸುವುದು ಬೀಜ ಬಿತ್ತದೆ ಫಲವನ್ನು ನಿರೀಕ್ಷಿಸಿದಂತೆಯೇ ಎಂದು ಹೇಳಿದರು.

ಸಮಾಜದಲ್ಲಿ ಕೆಡವುವುದು ಸುಲಭ, ಆದರೆ ಕಟ್ಟುವುದು ಕಷ್ಟ. ಮುರಿಯುವುದಕ್ಕಿಂತ ಜೋಡಿಸುವುದು ಶ್ರೇಷ್ಠ. ಸಮಾಜದ ಒಳಿತಿಗಾಗಿ ನಿರಂತರವಾಗಿ ಶ್ರಮಿಸಿ, ಧರ್ಮದ ಹಾದಿಯಲ್ಲಿ ಜನರನ್ನು ಒಗ್ಗೂಡಿಸಿದ ಲಿಂಗೈಕ್ಯ ಶ್ರೀ ರುದ್ರಮುನಿ ಜಗದ್ಗುರುಗಳ ಸೇವೆ ಸದಾ ಸ್ಮರಣೀಯ ಎಂದು ಅವರು ಹೇಳಿದರು.

ಲಿಂಗೈಕ್ಯ ಜಗದ್ಗುರುಗಳ ಅಂತಃಕರಣದ ಗುರು ಕಾರುಣ್ಯದಿಂದ ಎಲ್ಲರ ಬದುಕಿನಲ್ಲಿ ಶ್ರೇಯಸ್ಸು, ಸುಖ ಮತ್ತು ಶಾಂತಿ ನೆಲೆಸಲಿ ಎಂದು ಶ್ರೀ ರೇಣುಕ ಮಹಾಂತ ಶಿವಾಚಾರ್ಯರು ಆಶಿಸಿದರು.

ಅಂಬಾಜೋಗಾಯಿ ಹಿರೇಮಠದ ಶ್ರೀ ಶಂಭುಲಿಂಗ ಶಿವಾಚಾರ್ಯರು ಮಾತನಾಡಿ, ಪರಿಶ್ರಮವು ಮೆಟ್ಟಿಲಿನಂತೆ ಮತ್ತು ಅದೃಷ್ಟವು ಲಿಫ್ಟ್‌ನಂತೆ. ಅದೃಷ್ಟ ಕೆಲವೊಮ್ಮೆ ಕೈಕೊಡಬಹುದು, ಆದರೆ ಪರಿಶ್ರಮ ಎಂದಿಗೂ ಕೈಬಿಡುವುದಿಲ್ಲ ಎಂದು ತಿಳಿಸಿದರು.

ಮಾನವನಾಗಿ ಬದುಕುವುದು ಸುಲಭ. ಆದರೆ ನಿಜವಾದ ಮಾನವೀಯತೆ ಮತ್ತು ಮಾನವತ್ವವನ್ನು ಅಳವಡಿಸಿಕೊಂಡು ಬದುಕುವುದು ದೊಡ್ಡ ಸವಾಲು. ಲಿಂಗೈಕ್ಯ ಶ್ರೀ ಜಗದ್ಗುರು ರುದ್ರಮುನಿ ಶಿವಾಚಾರ್ಯ ಭಗವತ್ಪಾದರು ಕಾರುಣ್ಯದ ಕಡಲಾಗಿ, ಸಕಲ ಸದ್ಭಕ್ತರಿಗೆ ಅಮೂಲ್ಯವಾದ ಮಾರ್ಗದರ್ಶನ ನೀಡಿದ ಮಹನೀಯರಾಗಿದ್ದರು ಎಂದು ಅವರು ಸ್ಮರಿಸಿದರು.

ಪುಣ್ಯಸ್ಮರಣೋತ್ಸವದ ಅಂಗವಾಗಿ ಲಿಂಗೈಕ್ಯ ಶ್ರೀ ಜಗದ್ಗುರು ರುದ್ರಮುನಿ ಶಿವಾಚಾರ್ಯ ಭಗವತ್ಪಾದರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಶ್ರೀ ಜಗದ್ಗುರು ರುದ್ರಮುನೀಶ್ವರ ವಸತಿ ಪ್ರೌಢಶಾಲೆಯ ಆವರಣದಲ್ಲಿ ಭವ್ಯವಾಗಿ ಅಲಂಕರಿಸಲಾಗಿದ್ದ ಜಗದ್ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಅರ್ಪಿಸಲಾಯಿತು.

ಈ ಅಪೂರ್ವ ಧರ್ಮ ಸಮಾರಂಭದಲ್ಲಿ ಮಹಾರಾಷ್ಟ್ರದ ಮಾವನೂರು ಗುರು ವಿರೂಪಾಕ್ಷ ಶಿವಾಚಾರ್ಯರು, ಪಾತ್ರೆ ಕಾಶೀನಾಥ ಶಿವಾಚಾರ್ಯರು, ಪರಾಂಡಕರ ಮಠದ ರಾಚಲಿಂಗ ಶಿವಾಚಾರ್ಯರು, ಕರ್ನಾಟಕದ ಮಳಲಿ ಮಠದ ಡಾ. ನಾಗಭೂಷಣ ಶಿವಾಚಾರ್ಯರು, ಬೀರೂರು ರುದ್ರಮುನಿ ಶಿವಾಚಾರ್ಯರು, ಬೆಳಕಿ ರಾಚೋಟೇಶ್ವರ ಶಿವಾಚಾರ್ಯರು, ತೆಂಡೇಕೆರೆ ಗಂಗಾಧರ ಶಿವಾಚಾರ್ಯರು, ಹಂಪಸಾಗರದ ಶಿವಲಿಂಗ ರುದ್ರಮುನಿ ಶಿವಾಚಾರ್ಯರು, ಅಷ್ಟಿ ವಿಶ್ವಚೈತನ್ಯ ಶಿವಾಚಾರ್ಯರು, ಕರ್ಜಗಿರಿಯ ಶಿವಸೋಮನಾಥ ಶಿವಾಚಾರ್ಯರು ಹಾಗೂ ಹುಡಗಿ ಸೋಮೇಶ್ವರ ಶಿವಾಚಾರ್ಯರು ಪಾಲ್ಗೊಂಡು ಲಿಂಗೈಕ್ಯ ಜಗದ್ಗುರುಗಳಿಗೆ ನುಡಿ ನಮನ ಸಲ್ಲಿಸಿದರು.

ಆಲ್ದೂರು ಹೋಬಳಿಯ ವೀರಶೈವ ಸಮಾಜದ ಬಾಂಧವರ ವತಿಯಿಂದ ಭಕ್ತಾದಿಗಳಿಗೆ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಭಕ್ತರು ಪುಣ್ಯಸ್ಮರಣೋತ್ಸವದಲ್ಲಿ ಭಾಗವಹಿಸಿ ಗುರು ಕಾರುಣ್ಯಕ್ಕೆ ಪಾತ್ರರಾದರು. ಧಾರ್ಮಿಕ ಕಾರ್ಯಕ್ರಮಗಳು, ಪೂಜೆ, ಪುಷ್ಪಾರ್ಚನೆ ಹಾಗೂ ಭಕ್ತರ ಸಮ್ಮುಖದಲ್ಲಿ ನಡೆದ ಸಮಾರಂಭವು ಅತ್ಯಂತ ಭಕ್ತಿ-ಭಾವದಿಂದ ನೆರವೇರಿತು.

ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಲಿಂಗೈಕ್ಯ ಶ್ರೀ ಜಗದ್ಗುರು ರುದ್ರಮುನಿ ಶಿವಾಚಾರ್ಯ ಭಗವತ್ಪಾದರ 34ನೇ ವರ್ಷದ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ರುದ್ರಮುನಿ ಜಗದ್ಗುರುಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು.

ಲಿಂಗೈಕ್ಯ ಶ್ರೀ ರುದ್ರಮುನಿ ಶಿವಾಚಾರ್ಯ ಭಗವತ್ಪಾದರ ಪುಣ್ಯಸ್ಮರಣೋತ್ಸವದ ಸಂದರ್ಭದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳೊಂದಿಗೆ ವಿವಿಧ ಮಠಾಧೀಶರು ಹಾಗೂ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Leave a Comment