ಸಿರಿಗೆರೆ: ಅಮೆರಿಕಾದ ಫಿಲಡೆಲ್ಫಿಯಾ ನಗರದಲ್ಲಿ ಕನ್ನಡದ ಡಿಂಡಿಮ ಮೊಳಗಿಸಲು ಸಜ್ಜಾಗಿರುವ ಅಕ್ಕ (AKKA) ಕನ್ನಡ ಸಂಸ್ಥೆಯ ರಜತೋತ್ಸವ ಹಾಗೂ ವಿಶ್ವ ಕನ್ನಡ ಸಮ್ಮೇಳನಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿದ್ದರೆ, ಇತ್ತ ಸಿರಿಗೆರೆಯ ತರಳಬಾಳು ಬೃಹನ್ಮಠದಲ್ಲಿ ಮಂಗಳವಾರ ಬೆಳಿಗ್ಗೆ ಪ್ರಶಾಂತ ಹಾಗೂ ಭಕ್ತಿಪೂರ್ಣ ವಾತಾವರಣ ನಿರ್ಮಾಣವಾಗಿತ್ತು.
ಬೆಳಿಗ್ಗೆ 11 ಗಂಟೆಯ ಶುಭ ಮುಹೂರ್ತದಲ್ಲಿ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸಿರಿಗೆರೆಯ ಐಕ್ಯ ಮಂಟಪಕ್ಕೆ ಆಗಮಿಸಿದರು. ಶ್ರೀ ಜಗದ್ಗುರುಗಳವರ ಅಮೆರಿಕಾ ಪಯಣದ ಹಿನ್ನೆಲೆಯಲ್ಲಿ ಮಠದ ಆವರಣದಲ್ಲಿ ಭಕ್ತರು ಭಕ್ತಿಭಾವದಿಂದ ನೆರೆದಿದ್ದರು.

ಐಕ್ಯ ಮಂಟಪಕ್ಕೆ ಆಗಮಿಸಿದ ಶ್ರೀ ತರಳಬಾಳು ಜಗದ್ಗುರುಗಳವರು ತಮ್ಮ ಪೂಜ್ಯ ಗುರುಗಳಾದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ನೆರವೇರಿಸಿದರು. ಗುರುಪರಂಪರೆಯ ಸ್ಮರಣೆ ಹಾಗೂ ಆಶೀರ್ವಾದವನ್ನು ಪಡೆದು, ಭಕ್ತಿ-ಶ್ರದ್ಧೆಯಿಂದ ಅಮೆರಿಕಾ ಪಯಣಕ್ಕೆ ಚಾಲನೆ ನೀಡಿದರು.

ಗುರುಗದ್ದುಗೆಯ ಮುಂದೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದು ಶ್ರೀ ತರಳಬಾಳು ಜಗದ್ಗುರುಗಳು ಅಮೆರಿಕಾಕ್ಕೆ ಪ್ರಯಾಣ ಬೆಳೆಸಿದ ಈ ಕ್ಷಣವು ಭಕ್ತರ ಪಾಲಿಗೆ ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಮಹತ್ವ ಪಡೆದಿತ್ತು. ಮಠದ ಆವರಣದಲ್ಲಿ ನೆರೆದಿದ್ದ ಭಕ್ತರು ಶ್ರೀ ಜಗದ್ಗುರುಗಳವರ ಅಮೆರಿಕಾ ಪಯಣ ಯಶಸ್ವಿಯಾಗಲಿ ಎಂದು ಹಾರೈಸಿ, ಭಕ್ತಿಪೂರ್ವಕವಾಗಿ ಬೀಳ್ಕೊಟ್ಟರು. ಬಳಿಕ ಬೆಂಗಳೂರು ಮಾರ್ಗವಾಗಿ ಅಮೆರಿಕಾಕ್ಕೆ ಪ್ರಯಾಣ ಬೆಳೆಸಿದರು.
ಸಿರಿಗೆರೆಯ ಗುರುಪರಂಪರೆಯ ಆಶೀರ್ವಾದವನ್ನು ಹೃದಯದಲ್ಲಿಟ್ಟುಕೊಂಡು ಸಾಗರದಾಚೆಯ ಕನ್ನಡಿಗರೊಂದಿಗೆ ಬೆರೆಯಲು ಹೊರಟಿರುವ ಶ್ರೀ ತರಳಬಾಳು ಜಗದ್ಗುರುಗಳವರ ಈ ಪಯಣವು ಅಕ್ಕ ರಜತೋತ್ಸವ ಹಾಗೂ ವಿಶ್ವ ಕನ್ನಡ ಸಮ್ಮೇಳನಕ್ಕೆ ಮತ್ತಷ್ಟು ಆಧ್ಯಾತ್ಮಿಕ ಮೆರುಗು ನೀಡಲಿದೆ.

ಶ್ರದ್ಧಾಂಜಲಿ ಸಮಾರಂಭದ ಸಿದ್ಧತೆಗಳ ನಡುವೆ ಅಮೆರಿಕಾ ಪ್ರವಾಸ
ಐಕ್ಯ ಮಂಟಪದಲ್ಲಿ ಭಕ್ತರಿಗೆ ಆಶೀರ್ವಚನ ನೀಡಿದ ಶ್ರೀ ತರಳಬಾಳು ಜಗದ್ಗುರುಗಳವರು, ಪೂಜ್ಯ ಗುರುಗಳಾದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 35ನೇ ಶ್ರದ್ಧಾಂಜಲಿ ಸಮಾರಂಭವು ಸೆಪ್ಟೆಂಬರ್ 22, 23 ಮತ್ತು 24ರಂದು ಸಿರಿಗೆರೆಯಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಮೂರು ದಿನಗಳ ಕಾಲ ನಡೆಯಲಿರುವ ಈ ಮಹತ್ವದ ಕಾರ್ಯಕ್ರಮದಲ್ಲಿ ನಾಡಿನ ಮಂತ್ರಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ಮಠದ ಭಕ್ತರು ಹಾಗೂ ಸಹಸ್ರಾರು ಸಂಖ್ಯೆಯ ಭಕ್ತಾಧಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಸಮಾರಂಭದ ಪೂರ್ವಸಿದ್ಧತಾ ಕಾರ್ಯಗಳು ಸಿರಿಗೆರೆಯಲ್ಲಿ ಈಗಾಗಲೇ ಆರಂಭಗೊಂಡಿವೆ.
ಒಂದೆಡೆ ಶ್ರದ್ಧಾಂಜಲಿ ಸಮಾರಂಭದ ಸಿದ್ಧತೆಗಳು ಭರದಿಂದ ಸಾಗುತ್ತಿದ್ದರೆ, ಮತ್ತೊಂದೆಡೆ ಅಮೆರಿಕಾದಲ್ಲಿ ನಡೆಯಲಿರುವ ಅಕ್ಕ ಕನ್ನಡ ಸಂಸ್ಥೆಯ ರಜತೋತ್ಸವ ಹಾಗೂ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸುವಂತೆ ಸಂಘಟಕರಿಂದ ನಿರಂತರವಾಗಿ ಆಹ್ವಾನ ಮತ್ತು ಒತ್ತಾಯ ಬಂದಿತ್ತು. ಎರಡೂ ಕಾರ್ಯಕ್ರಮಗಳ ಮಹತ್ವವನ್ನು ಪರಿಗಣಿಸಿ ಅಮೆರಿಕಾ ಸಮ್ಮೇಳನದಲ್ಲಿ ಭಾಗವಹಿಸಲು ಒಪ್ಪಿಗೆ ಸೂಚಿಸಿರುವುದಾಗಿ ಶ್ರೀ ಜಗದ್ಗುರುಗಳು ವಿವರಿಸಿದರು.

“ಒಂದೆಡೆ ನಮ್ಮ ಪರಮಾರಾಧ್ಯ ಗುರುವರ್ಯರ ಶ್ರದ್ಧಾಂಜಲಿ ಸಮಾರಂಭದ ಸಿದ್ಧತೆ ನಡೆಯುತ್ತಿದೆ. ಮತ್ತೊಂದೆಡೆ ವಿಶ್ವದ ವಿವಿಧೆಡೆ ನೆಲೆಸಿರುವ ಕನ್ನಡಿಗರನ್ನು ಒಂದೆಡೆ ಸೇರಿಸುವ ಅಕ್ಕ ಕನ್ನಡ ಸಂಸ್ಥೆಯ ರಜತೋತ್ಸವ ಹಾಗೂ ವಿಶ್ವ ಕನ್ನಡ ಸಮ್ಮೇಳನ ನಡೆಯುತ್ತಿದೆ. ಎರಡೂ ಸಂದರ್ಭಗಳ ಮಹತ್ವವನ್ನು ಪರಿಗಣಿಸಿ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಲು ಒಪ್ಪಿಗೆ ಸೂಚಿಸಿದ್ದೇವೆ” ಎಂದು ಶ್ರೀ ಜಗದ್ಗುರುಗಳವರು ತಿಳಿಸಿದರು.

ಭಕ್ತರು ಮತ್ತು ಮಠದ ಸಿಬ್ಬಂದಿಯ ಮೇಲೆ ವಿಶ್ವಾಸ
ಪ್ರತಿವರ್ಷದಂತೆ ಈ ವರ್ಷವೂ ನಡೆಯಲಿರುವ ಲಿಂಗೈಕ್ಯ ಗುರುವರ್ಯರ 35ನೇ ಶ್ರದ್ಧಾಂಜಲಿ ಸಮಾರಂಭದ ಸಿದ್ಧತೆಗಳು ಈಗಾಗಲೇ ಆರಂಭಗೊಂಡಿವೆ. ಸಮಾರಂಭದ ಸಿದ್ಧತೆ ಹಾಗೂ ನಿರ್ವಹಣೆಯ ವಿವಿಧ ಜವಾಬ್ದಾರಿಗಳನ್ನು ಭಕ್ತಾಧಿಗಳು ಮತ್ತು ಮಠದ ನೌಕರರ ವರ್ಗ ಶ್ರದ್ಧೆ, ಶಿಸ್ತು ಹಾಗೂ ಸಮರ್ಪಣಾ ಮನೋಭಾವದಿಂದ ನಿರ್ವಹಿಸುವ ವಿಶ್ವಾಸವಿದೆ ಎಂದು ಶ್ರೀ ತರಳಬಾಳು ಜಗದ್ಗುರುಗಳು ಹೇಳಿದರು.
ಸಿರಿಗೆರೆಯ ಭಕ್ತರು ಹಾಗೂ ಮಠದ ಸಿಬ್ಬಂದಿ ಸಮಾರಂಭದ ಎಲ್ಲ ಕಾರ್ಯಚಟುವಟಿಕೆಗಳನ್ನು ಸಮರ್ಥವಾಗಿ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದಾರೆ. ಅವರ ಮೇಲಿರುವ ಸಂಪೂರ್ಣ ವಿಶ್ವಾಸದ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಸಮಾರಂಭದ ಸಿದ್ಧತೆಗಳ ಜವಾಬ್ದಾರಿಯನ್ನು ಅವರಿಗೆ ವಹಿಸಿ, ಸುಮಾರು ಒಂದು ವಾರದ ಅಮೆರಿಕಾ ಪ್ರವಾಸ ಕೈಗೊಳ್ಳುತ್ತಿರುವುದಾಗಿ ಅವರು ತಿಳಿಸಿದರು.

ಜಾಗತಿಕ ಕನ್ನಡ ಸಮುದಾಯದೊಂದಿಗೆ ಸಿರಿಗೆರೆಯ ಆಧ್ಯಾತ್ಮಿಕ ಸೇತು
ಅಕ್ಕ ಕನ್ನಡ ಸಂಸ್ಥೆಯ ರಜತೋತ್ಸವವು ಕೇವಲ 25 ವರ್ಷಗಳ ಸಂಘಟನಾ ಪಯಣವನ್ನು ಸ್ಮರಿಸುವ ಕಾರ್ಯಕ್ರಮವಲ್ಲ. ತಾಯ್ನಾಡಿನಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿ ನೆಲೆಸಿದ್ದರೂ ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಕನ್ನಡತನದೊಂದಿಗೆ ನಿರಂತರವಾದ ನಂಟನ್ನು ಉಳಿಸಿಕೊಂಡಿರುವ ಜಾಗತಿಕ ಕನ್ನಡ ಸಮುದಾಯದ ಸಾಂಸ್ಕೃತಿಕ ಆತ್ಮಪ್ರಜ್ಞೆಯ ಪ್ರತೀಕವಾಗಿದೆ.
ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ಮುಂದಿನ ಪೀಳಿಗೆಗೂ ಕನ್ನಡದ ಭಾಷಾ-ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಇಂತಹ ಸಮ್ಮೇಳನಗಳು ಮಹತ್ವದ ಪಾತ್ರ ವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಶ್ರೀ ತರಳಬಾಳು ಜಗದ್ಗುರುಗಳವರ ಭಾಗವಹಿಸುವಿಕೆ ವಿಶೇಷ ಮಹತ್ವ ಪಡೆದಿದೆ.
ಸಿರಿಗೆರೆಯ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಪರಂಪರೆಯನ್ನು ವಿಶ್ವದ ಕನ್ನಡ ಸಮುದಾಯದೊಂದಿಗೆ ಬೆಸೆಯುವ ಅಪೂರ್ವ ಅವಕಾಶ ಇದಾಗಿದೆ. ಶ್ರೀ ಜಗದ್ಗುರುಗಳವರ ಉಪಸ್ಥಿತಿ ಹಾಗೂ ಆಶೀರ್ವಚನವು ವಿದೇಶದಲ್ಲಿ ನೆಲೆಸಿರುವ ಕನ್ನಡಿಗರಿಗೆ ಆಧ್ಯಾತ್ಮಿಕ ಪ್ರೇರಣೆ ಮತ್ತು ಕನ್ನಡತನದ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿರೀಕ್ಷೆಯಿದೆ.

ವಿಶ್ವ ಕನ್ನಡಿಗರಿಗೆ ಶ್ರೀ ತರಳಬಾಳು ಜಗದ್ಗುರುಗಳ ಆಶೀರ್ವಚನ
ಫಿಲಡೆಲ್ಫಿಯಾದಲ್ಲಿ ನಡೆಯಲಿರುವ ಅಕ್ಕ ಕನ್ನಡ ಸಂಸ್ಥೆಯ ರಜತೋತ್ಸವ ಹಾಗೂ ವಿಶ್ವ ಕನ್ನಡ ಸಮ್ಮೇಳನದ ವಿವಿಧ ಕಾರ್ಯಕ್ರಮಗಳಲ್ಲಿ ಶ್ರೀ ತರಳಬಾಳು ಜಗದ್ಗುರುಗಳವರು ಭಾಗವಹಿಸಲಿದ್ದಾರೆ. ವಿಶ್ವದ ವಿವಿಧ ಭಾಗಗಳಿಂದ ಸಮ್ಮೇಳನಕ್ಕೆ ಆಗಮಿಸುವ ಕನ್ನಡಿಗರನ್ನುದ್ದೇಶಿಸಿ ಆಶೀರ್ವಚನ ನೀಡಲಿರುವ ಅವರು, ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ ಮತ್ತು ಮಾನವೀಯ ಮೌಲ್ಯಗಳ ಸಂರಕ್ಷಣೆಯ ಮಹತ್ವವನ್ನು ಸಾರಲಿದ್ದಾರೆ.
ತಾಯ್ನಾಡಿನಿಂದ ದೂರವಿದ್ದರೂ ಕನ್ನಡದ ಬೇರುಗಳನ್ನು ಗಟ್ಟಿಯಾಗಿ ಹಿಡಿದಿರುವ ಅನಿವಾಸಿ ಕನ್ನಡಿಗರೊಂದಿಗೆ ಶ್ರೀ ಜಗದ್ಗುರುಗಳವರ ಈ ಭೇಟಿ ಮತ್ತಷ್ಟು ಆತ್ಮೀಯತೆ ಮೂಡಿಸುವುದರ ಜೊತೆಗೆ ಸಿರಿಗೆರೆ ಮಠದ ಆಧ್ಯಾತ್ಮಿಕ ಪರಂಪರೆಯ ಸಂದೇಶವನ್ನು ಜಾಗತಿಕ ಕನ್ನಡ ಸಮುದಾಯಕ್ಕೆ ತಲುಪಿಸುವ ಪ್ರಮುಖ ಸಂದರ್ಭವಾಗಲಿದೆ.
ಗುರುಪರಂಪರೆಯ ಆಶೀರ್ವಾದ ಪಡೆದು ಸಿರಿಗೆರೆಯಿಂದ ಆರಂಭಗೊಂಡಿರುವ ಶ್ರೀ ಜಗದ್ಗುರುಗಳವರ ಅಮೆರಿಕಾ ಪಯಣವು ಅಕ್ಕ ಕನ್ನಡ ಸಂಸ್ಥೆಯ ರಜತೋತ್ಸವದ ಸಂಭ್ರಮಕ್ಕೆ ಆಧ್ಯಾತ್ಮಿಕ ಮೆರುಗು ನೀಡುವುದರ ಜೊತೆಗೆ, ನಾಡು-ನುಡಿ ಮತ್ತು ಸಂಸ್ಕೃತಿಯ ಬಾಂಧವ್ಯವನ್ನು ಸಾಗರದಾಚೆಯ ಕನ್ನಡಿಗರೊಂದಿಗೆ ಮತ್ತಷ್ಟು ಗಟ್ಟಿಗೊಳಿಸುವ ಪಯಣವಾಗಲಿದೆ.











