ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಅರಿತು ಬಾಳುವುದರಲ್ಲಿ ಜೀವನದ ಸಾರ್ಥಕತೆ; ಧರ್ಮದ ಹಾದಿಯಲ್ಲಿ ನಡೆದರೆ ಬದುಕಿನಲ್ಲಿ ಸುಖ-ಶಾಂತಿ: ಶ್ರೀ ರಂಭಾಪುರಿ ಜಗದ್ಗುರುಗಳು

On: August 30, 2026 11:29 PM
Follow Us:

ಬಾಳೆಹೊನ್ನೂರು: ಮನುಷ್ಯ ಜೀವನ ಅತ್ಯಂತ ಪವಿತ್ರವಾದುದು. ಉತ್ತಮ ವ್ಯಕ್ತಿಗಳ ಸಾನ್ನಿಧ್ಯದಲ್ಲಿ, ಸತ್ಕಾರ್ಯಗಳೊಂದಿಗೆ ಬದುಕಿದಾಗ ಮಾತ್ರ ಜೀವನ ವಿಕಾಸಗೊಳ್ಳುತ್ತದೆ. ಜೀವನದ ನಿಜವಾದ ಉತ್ಕರ್ಷ ಮತ್ತು ಶ್ರೇಯಸ್ಸು ಅರಿತು ಬಾಳುವುದರಲ್ಲಿದೆ. ಸುಖ-ಶಾಂತಿಯ ಬದುಕಿಗೆ ಧರ್ಮವೇ ಮೂಲಾಧಾರ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಶ್ರೀ ರಂಭಾಪುರಿ ಪೀಠದಲ್ಲಿ ಶನಿವಾರ ನಡೆದ ಶ್ರಾವಣ ಪೂಜಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮನುಷ್ಯ ಜೀವನದಲ್ಲಿ ಧರ್ಮ, ನೀತಿ, ದಕ್ಷತೆ ಹಾಗೂ ಉತ್ತಮ ಮಾತುಗಳನ್ನು ಅಳವಡಿಸಿಕೊಂಡು ಮುನ್ನಡೆದರೆ ಶ್ರೇಯಸ್ಸಿನ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಆತ್ಮಸಾಕ್ಷಿ, ಉತ್ತಮ ಆರೋಗ್ಯ ಹಾಗೂ ಸ್ವಾತಂತ್ರ್ಯ ಇವು ಮನುಷ್ಯನ ಬದುಕಿನ ಮೂರು ಪ್ರಮುಖ ಸಂತೋಷದ ಮೂಲಗಳಾಗಿವೆ. ಜೀವನದಲ್ಲಿ ದೊರೆಯುವ ಯೌವನ ಮತ್ತು ಕಾಲವನ್ನು ವ್ಯರ್ಥವಾಗಿ ಕಳೆಯದೆ, ಸತ್ಕಾರ್ಯ ಹಾಗೂ ಸಮಾಜಮುಖಿ ಚಿಂತನೆಗಳಿಗೆ ಬಳಸಿಕೊಳ್ಳಬೇಕು. ಒಮ್ಮೆ ಕಳೆದುಹೋದ ಯೌವನ ಹಾಗೂ ಕಾಲ ಮತ್ತೆ ಹಿಂದಿರುಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಜೀವನಕ್ಕೆ ಒಂದು ಗುರಿಯನ್ನು ನಿಗದಿಪಡಿಸಿಕೊಂಡು ಅದನ್ನು ಸಾಧಿಸುವ ನಿಟ್ಟಿನಲ್ಲಿ ನಿರಂತರವಾಗಿ ಪ್ರಯತ್ನಿಸಬೇಕು ಎಂದರು.

ಗುರಿಯಿಲ್ಲದ ಬದುಕು ನಿರರ್ಥಕವಾಗುತ್ತದೆ. ಜೀವನದಲ್ಲಿ ಸತ್ಯ, ಸದ್ವಿದ್ಯೆ, ಉತ್ತಮ ಸಂಬಂಧ, ಆದರ್ಶ ಸ್ನೇಹ ಹಾಗೂ ಮಾನವೀಯ ಮೌಲ್ಯಗಳಿಗೆ ಸದಾ ಆದ್ಯತೆ ನೀಡಬೇಕು. ಇವು ನಮ್ಮೊಂದಿಗೆ ಇದ್ದಾಗ ಜೀವನ ಸುಖಮಯವಾಗುತ್ತದೆ. ಸಮಾಜದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ, ಸಹಕಾರ ಮತ್ತು ಸೌಹಾರ್ದತೆಯನ್ನು ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಜಗದ್ಗುರುಗಳು ಹೇಳಿದರು.

ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರು ಬೋಧಿಸಿದ ಧರ್ಮಸೂತ್ರಗಳು ಇಂದಿಗೂ ಮನುಕುಲಕ್ಕೆ ಮಾರ್ಗದರ್ಶಕವಾಗಿವೆ. ಧರ್ಮದ ಮಾರ್ಗದಲ್ಲಿ ನಡೆಯುವ ಮೂಲಕ ವೈಯಕ್ತಿಕ ಜೀವನದ ಜೊತೆಗೆ ಸಮಾಜದ ಅಭಿವೃದ್ಧಿಗೂ ಕೊಡುಗೆ ನೀಡಬಹುದು. ಮನುಷ್ಯ ತನ್ನ ನಡೆ-ನುಡಿಗಳಲ್ಲಿ ಧರ್ಮ ಮತ್ತು ನೀತಿಯನ್ನು ಅಳವಡಿಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ರಾಜ್ಯದ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಸಚಿವ ಡಾ. ವಿಜಯಾನಂದ ಕಾಶಪ್ಪನವರ್ ಅವರು ಅತ್ಯಂತ ಭಕ್ತಿ-ಶ್ರದ್ಧೆಯಿಂದ ಶ್ರಾವಣ ಮಹಾಪೂಜೆಯಲ್ಲಿ ಕುಟುಂಬ ಸಮೇತರಾಗಿ ಭಾಗವಹಿಸಿರುವುದು ಅವರಲ್ಲಿರುವ ಧರ್ಮನಿಷ್ಠೆಗೆ ಸಾಕ್ಷಿಯಾಗಿದೆ ಎಂದು ಜಗದ್ಗುರುಗಳು ಸಂತಸ ವ್ಯಕ್ತಪಡಿಸಿದರು.

ಗೌರವ ಸ್ವೀಕರಿಸಿ ಮಾತನಾಡಿದ ಸಚಿವ ಡಾ. ವಿಜಯಾನಂದ ಕಾಶಪ್ಪನವರ್ ಅವರು, ತಂದೆ-ತಾಯಿ ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ಉತ್ತಮ ಸಂಸ್ಕಾರವನ್ನು ಪಡೆದುಕೊಂಡು ಮುನ್ನಡೆದರೆ ಭವಿಷ್ಯ ಉಜ್ವಲವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ತಮ್ಮ ತಂದೆ-ತಾಯಿ ಹಾಗೂ ಗುರುಗಳ ಆಶೀರ್ವಾದದಿಂದಲೇ ತಾವು ಸಾರ್ವಜನಿಕ ಜೀವನದಲ್ಲಿ ಸೇವೆ ಸಲ್ಲಿಸುವ ಅವಕಾಶ ಪಡೆದುಕೊಂಡಿದ್ದೇನೆ. ಶ್ರೀ ರಂಭಾಪುರಿ ಪೀಠದ ಜಗದ್ಗುರುಗಳ ಆಶೀರ್ವಾದ ಸದಾ ತಮ್ಮ ಕುಟುಂಬದ ಮೇಲಿರಲಿ ಎಂದು ಅವರು ಹೇಳಿದರು.

ರಾಜ್ಯದ ಜನರ ಹಿತ, ರಕ್ಷಣೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಿ ಕಾರ್ಯನಿರ್ವಹಿಸುವುದರ ಜೊತೆಗೆ ಅಭಿವೃದ್ಧಿಯ ಪಥದತ್ತ ರಾಜ್ಯವನ್ನು ಕೊಂಡೊಯ್ಯಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಸಚಿವರು ತಿಳಿಸಿದರು.

ವೀರಶೈವ-ಲಿಂಗಾಯತ ಸಮುದಾಯ ಸೇರಿದಂತೆ ಸಮಾಜದ ಎಲ್ಲ ವರ್ಗದ ಜನರನ್ನು ಸಮಾನತೆ ಮತ್ತು ಸಾಮರಸ್ಯದತ್ತ ಕರೆದೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಜಾತಿ, ಧರ್ಮ, ಭೇದಭಾವಗಳನ್ನು ಮೀರಿ ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಬೇಕು. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಪರಸ್ಪರ ಗೌರವವನ್ನು ಬೆಳೆಸುವ ಕಾರ್ಯದಲ್ಲಿ ಧಾರ್ಮಿಕ ಸಂಸ್ಥೆಗಳು ಹಾಗೂ ಸಾರ್ವಜನಿಕರು ಕೈಜೋಡಿಸಬೇಕು ಎಂದು ಜಗದ್ಗುರುಗಳು ಕರೆ ನೀಡಿದರು.

ಶ್ರೀ ರಂಭಾಪುರಿ ಪೀಠದ ಅಭಿವೃದ್ಧಿ ಪರವಾದ ಎಲ್ಲ ಕಾರ್ಯಗಳಿಗೆ ತಮ್ಮಿಂದಾದ ಸಹಕಾರವನ್ನು ನೀಡುವುದಾಗಿ ಸಚಿವ ಡಾ. ವಿಜಯಾನಂದ ಕಾಶಪ್ಪನವರ್ ಅವರು ಭರವಸೆ ನೀಡಿದರು. ಆದಿ ಜಗದ್ಗುರು ರೇಣುಕಾಚಾರ್ಯರ ಆಶೀರ್ವಾದ ಹಾಗೂ ಶ್ರೀ ರಂಭಾಪುರಿ ಜಗದ್ಗುರುಗಳ ಮಾರ್ಗದರ್ಶನ ತಮ್ಮ ಮೇಲೆ ಸದಾ ಇರಲಿ ಎಂದು ಅವರು ಆಶಿಸಿದರು.

ಸಮಾರಂಭದಲ್ಲಿ ಸಚಿವರ ತಾಯಿ ಹಾಗೂ ಮಾಜಿ ಶಾಸಕಿ ಶ್ರೀಮತಿ ಗೌರವಮ್ಮ ಕಾಶಪ್ಪನವರ್, ಪತ್ನಿ ಶ್ರೀಮತಿ ವೀಣಾ ಕಾಶಪ್ಪನವರ್, ಕಾಂಗ್ರೆಸ್ ಯುವ ಧುರೀಣ ಸೋಮು ಗಣಾಚಾರಿ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ಎಚ್.ಎಂ. ಲೋಕೇಶ್, ಬೆಂಗಳೂರಿನ ಮಾಜಿ ಮಹಾಪೌರ ಪುಟ್ಟರಾಜು, ಯುವ ಘಟಕದ ರಾಜ್ಯಾಧ್ಯಕ್ಷ ಮನೋಹರ, ಎಂ. ಕೊಟ್ರೇಶಪ್ಪ, ವಿರೂಪಾಕ್ಷಪ್ಪ ಮಲ್ಲಜ್ಜರ್ ಸೇರಿದಂತೆ ಹಲವು ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.

ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಭಕ್ತರಿಗೆ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಬಳಿಕ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು.

K.M.Sathish Gowda

Join WhatsApp

Join Now

Facebook

Join Now

Leave a Comment