ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಸರ್ವಜನರ ಉದ್ಧಾರಕ್ಕೆ ವೀರಶೈವ ದೀಕ್ಷೆಯೇ ದಿವ್ಯ ಮಾರ್ಗ: ಶ್ರೀಶೈಲ ಜಗದ್ಗುರುಗಳು

On: August 24, 2026 1:47 PM
Follow Us:

ಶ್ರೀಶೈಲಂ (ಆಂಧ್ರಪ್ರದೇಶ): ವೀರಶೈವ ಲಿಂಗಾಯತ ಧರ್ಮದಲ್ಲಿ ಶ್ರೀಗುರುವು ಶಿಷ್ಯನಿಗೆ ದಯಪಾಲಿಸುವ ಲಿಂಗದೀಕ್ಷೆಯನ್ನು ಜಾತಿ, ವರ್ಣ ಅಥವಾ ಯಾವುದೇ ಸಾಮಾಜಿಕ ಭೇದಭಾವವಿಲ್ಲದೆ ಸರ್ವರೂ ಪಡೆಯಲು ಮುಕ್ತ ಅವಕಾಶವಿದೆ. ಶಿವನಲ್ಲಿ ಶ್ರದ್ಧೆ ಹೊಂದಿ, ಧಾರ್ಮಿಕ ನಿಯಮಗಳನ್ನು ಪಾಲಿಸಲು ಸಿದ್ಧರಾಗಿರುವ ಪ್ರತಿಯೊಬ್ಬರೂ ಲಿಂಗದೀಕ್ಷೆ ಪಡೆದುಕೊಳ್ಳಬಹುದಾದ ಕಾರಣ, ವೀರಶೈವ ದೀಕ್ಷೆಯು ಸರ್ವರ ಮೋಕ್ಷಕ್ಕೆ ಮಹಾದ್ವಾರವಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಶ್ರೀಶೈಲದ ಶ್ರೀ ಜಗದ್ಗುರು ಸೂರ್ಯಸಿಂಹಾಸನ ಮಹಾಪೀಠದಲ್ಲಿ ಆಯೋಜಿಸಲಾಗಿದ್ದ ಸಾಮೂಹಿಕ ಅಯ್ಯಾಚಾರ ಮತ್ತು ಲಿಂಗದೀಕ್ಷೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ವೀರಶೈವ ಧರ್ಮದ ದೀಕ್ಷಾ ಪರಂಪರೆ, ಇಷ್ಟಲಿಂಗದ ಮಹತ್ವ, ಸದಾಚಾರ ಮತ್ತು ಶಿವಧರ್ಮದ ಆಚರಣೆಯ ಕುರಿತು ಸವಿಸ್ತಾರವಾಗಿ ವಿವರಿಸಿದರು.

ಮನುಷ್ಯನನ್ನು ಅನಾದಿಕಾಲದಿಂದಲೂ ಆಣವ, ಮಾಯಿಕ ಮತ್ತು ಕಾರ್ಮಿಕ ಎಂಬ ಮೂರು ವಿಧದ ಮಲಗಳು ಆವರಿಸಿಕೊಂಡಿರುತ್ತವೆ. ಈ ಮಲತ್ರಯಗಳೇ ಮನುಷ್ಯನ ಸಾಂಸಾರಿಕ ದುಃಖಗಳಿಗೆ ಹಾಗೂ ಭವಬಂಧನಕ್ಕೆ ಪ್ರಮುಖ ಕಾರಣಗಳಾಗಿವೆ. ಶ್ರೀಗುರುವು ಶಿಷ್ಯನಿಗೆ ಇಷ್ಟಲಿಂಗ ದೀಕ್ಷೆ ಮತ್ತು ಅಯ್ಯಾಚಾರವನ್ನು ದಯಪಾಲಿಸುವ ಸಂದರ್ಭದಲ್ಲಿ ವೇಧಾದೀಕ್ಷೆ, ಮಂತ್ರದೀಕ್ಷೆ ಮತ್ತು ಕ್ರಿಯಾದೀಕ್ಷೆ ಎಂಬ ಮೂರು ವಿಧದ ದೀಕ್ಷೆಗಳ ಮೂಲಕ ಈ ಆಣವಾದಿ ಮಲತ್ರಯಗಳನ್ನು ನಿವಾರಿಸುವ ಮಾರ್ಗವನ್ನು ತೋರಿಸುತ್ತಾನೆ ಎಂದು ಜಗದ್ಗುರುಗಳು ತಿಳಿಸಿದರು.

ಶಿವಸ್ವರೂಪವಾದ ಇಷ್ಟಲಿಂಗವನ್ನು ದೇಹದ ಮೇಲೆ ಸದಾ ಧರಿಸಿಕೊಂಡು, ಪ್ರತಿನಿತ್ಯ ಭಕ್ತಿಯಿಂದ ಪೂಜಿಸಬೇಕು ಎಂಬುದು ವೀರಶೈವ ಧರ್ಮದ ಪ್ರಮುಖ ಆಚರಣೆಯಾಗಿದೆ. ಸದಾಚಾರ ಮತ್ತು ಸದ್ವಿಚಾರಗಳಿಂದ ಕೂಡಿದ ಜೀವನ ನಡೆಸುತ್ತಾ, ಅಚಲ ನಿಷ್ಠೆಯಿಂದ ಲಿಂಗಪೂಜಾ ಮಹಾವ್ರತವನ್ನು ಪಾಲಿಸುವ ವ್ಯಕ್ತಿಯು ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಿ ಮೋಕ್ಷದ ಮಾರ್ಗವನ್ನು ಸುಲಭವಾಗಿ ಪಡೆಯುತ್ತಾನೆ ಎಂದು ಜಗದ್ಗುರುಗಳು ವಿವರಿಸಿದರು.

ಸಮಾಜದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ನಾಲ್ಕು ವರ್ಣಗಳಿವೆ. ಹಾಗೆಯೇ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ ಎಂಬ ನಾಲ್ಕು ಆಶ್ರಮಗಳಿವೆ. ಸ್ತ್ರೀ, ಪುರುಷ ಮತ್ತು ನಪುಂಸಕ ಎಂಬ ಮೂರು ವಿಧದ ಲಿಂಗಭೇದಗಳೂ ಇವೆ. ಆದರೆ ಇವುಗಳಲ್ಲಿ ಯಾವುದೇ ಜಾತಿ, ವರ್ಗ, ವರ್ಣ ಅಥವಾ ಸಾಮಾಜಿಕ ಹಿನ್ನೆಲೆಗೆ ಸೇರಿದವರಾಗಿದ್ದರೂ, ಶಿವನಲ್ಲಿ ಹಾಗೂ ಶಿವಧರ್ಮದ ಆಚರಣೆಯಲ್ಲಿ ಶ್ರದ್ಧೆ ಹೊಂದಿ, ದೀಕ್ಷಿತ ನಿಯಮಗಳನ್ನು ಪಾಲಿಸಲು ಸಿದ್ಧರಿದ್ದರೆ ಶ್ರೀಗುರುವಿನಿಂದ ದೀಕ್ಷೆ ಪಡೆದು ಲಿಂಗಧಾರಣೆ ಮಾಡಿಕೊಳ್ಳಲು ಯಾವುದೇ ಅಭ್ಯಂತರವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಲಿಂಗವು ಯಾವುದೇ ಒಂದು ಜಾತಿ ಅಥವಾ ಸಮುದಾಯದ ಕುರುಹು ಮಾತ್ರವಲ್ಲ. ಅದು ಶಿವಜ್ಞಾನದ, ಶಿವಭಕ್ತಿಯ ಮತ್ತು ಶಿವಧರ್ಮದ ಆಚರಣೆಯ ಪವಿತ್ರ ಸಂಕೇತವಾಗಿದೆ. ಇಷ್ಟಲಿಂಗವನ್ನು ದೇಹದ ಮೇಲೆ ಧರಿಸಿ ಪ್ರತಿನಿತ್ಯ ತಪ್ಪದೆ ಪೂಜಿಸುವವರೆಲ್ಲರೂ ವೀರಶೈವ ಲಿಂಗಾಯತರಾಗಿದ್ದಾರೆ. ಲಿಂಗಧಾರಿಗಳೆಲ್ಲರೂ ಒಂದೇ ರೀತಿಯ ಧಾರ್ಮಿಕ ತತ್ತ್ವ ಮತ್ತು ಆಚರಣೆಯನ್ನು ಅನುಸರಿಸುವವರಾಗಿರುವುದರಿಂದ ಅವರಲ್ಲಿ ಯಾವುದೇ ರೀತಿಯ ತಾರತಮ್ಯ ಅಥವಾ ಭೇದಭಾವವನ್ನು ಮಾಡಬಾರದು ಎಂದು ಹೇಳಿದರು.

ಕೇವಲ ಪೂಜೆ ಮಾಡುವುದರಿಂದ ಮಾತ್ರ ಜೀವನ ಸಾರ್ಥಕವಾಗುವುದಿಲ್ಲ. ಪೂಜೆ ಫಲಪ್ರದವಾಗಬೇಕಾದರೆ ವ್ಯಕ್ತಿಯ ಬದುಕಿನಲ್ಲಿ ಪರೋಪಕಾರ, ದಯೆ, ಪ್ರೀತಿ, ಸತ್ಯ, ಸದಾಚಾರ ಹಾಗೂ ನೈತಿಕತೆಯಂತಹ ಲೋಕೋತ್ತರ ಗುಣಗಳು ಇರಬೇಕು ಎಂದು ಶ್ರೀಶೈಲ ಜಗದ್ಗುರುಗಳು ತಿಳಿಸಿದರು.

ಪ್ರತಿನಿತ್ಯ ಪೂಜೆ ಮಾಡುತ್ತಿದ್ದರೂ ಮನಸ್ಸಿನಲ್ಲಿ ದುರ್ಗುಣಗಳನ್ನು, ದುರಾಚಾರಗಳನ್ನು ಮತ್ತು ಅನೀತಿಯನ್ನು ಬೆಳೆಸಿಕೊಂಡಿದ್ದರೆ ಆ ಪೂಜೆಯಿಂದ ನಿರೀಕ್ಷಿತ ಫಲ ದೊರೆಯುವುದಿಲ್ಲ. ಮಹಾ ಶಿವಭಕ್ತನೂ, ಅಪಾರ ಶಕ್ತಿವಂತನೂ ಆಗಿದ್ದ ರಾವಣನು ಸಹ ಲೋಕಕಂಟಕವಾಗುವ ದುಷ್ಕೃತ್ಯಗಳಲ್ಲಿ ತೊಡಗಿಕೊಂಡ ಪರಿಣಾಮವಾಗಿ ಅಂತಿಮವಾಗಿ ಅವನತಿ ಹೊಂದಬೇಕಾಯಿತು ಎಂಬುದನ್ನು ನೆನಪಿಸಿದರು.

ಬದುಕು ಸುಂದರವಾಗಿ ಸಾಗಲು ಪ್ರೀತಿ ಎಷ್ಟು ಮುಖ್ಯವೋ, ವ್ಯಕ್ತಿಯು ಮತ್ತು ಸಮಾಜವು ಉನ್ನತಿ ಸಾಧಿಸಲು ನೀತಿ ಕೂಡ ಅಷ್ಟೇ ಮುಖ್ಯವಾಗಿದೆ. ಭಕ್ತಿ ಮತ್ತು ನೈತಿಕತೆ ಒಂದಕ್ಕೊಂದು ಪೂರಕವಾಗಿದ್ದು, ಧಾರ್ಮಿಕ ಆಚರಣೆಗಳು ವ್ಯಕ್ತಿಯ ಬದುಕನ್ನು ಉತ್ತಮಗೊಳಿಸುವ ದಿಕ್ಕಿನಲ್ಲಿ ಸಾಗಬೇಕು ಎಂದು ಹೇಳಿದರು.

ಪಂಚಪೀಠಗಳು ಸನಾತನ ಕಾಲದಿಂದಲೂ ಯಾವುದೇ ತಾರತಮ್ಯವಿಲ್ಲದೆ ಸರ್ವಜನರಿಗೂ ಧಾರ್ಮಿಕ ಸಂಸ್ಕಾರಗಳನ್ನು ನೀಡುವುದರ ಜೊತೆಗೆ ನೈತಿಕ ಮತ್ತು ಆಧ್ಯಾತ್ಮಿಕ ಮಾರ್ಗದರ್ಶನವನ್ನು ದಯಪಾಲಿಸುತ್ತ ಬಂದಿವೆ ಎಂದು ಜಗದ್ಗುರುಗಳು ಹೇಳಿದರು.

ಸಮಾಜದಲ್ಲಿ ಸಮಾನತೆ, ಸದಾಚಾರ, ಭಕ್ತಿ ಮತ್ತು ಶಿವತತ್ತ್ವದ ಅರಿವನ್ನು ಬೆಳೆಸುವಲ್ಲಿ ಬಸವಾದಿ ಶಿವಶರಣರ ಪಾತ್ರವೂ ಅತ್ಯಂತ ಮಹತ್ವದ್ದಾಗಿದೆ. ಆದ್ದರಿಂದ ಸನಾತನ ಆಚಾರ್ಯ ಪರಂಪರೆ ಮತ್ತು ಶರಣ ಪರಂಪರೆ ಎರಡನ್ನೂ ಸಮಾನ ಗೌರವದಿಂದ ನೋಡುವ ವಿಶಾಲವಾದ ದೃಷ್ಟಿಕೋನವನ್ನು ಸಮಾಜ ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಜೈನಾಪುರದ ರೇಣುಕ ಶಿವಾಚಾರ್ಯ ಸ್ವಾಮಿಗಳು ದೀಕ್ಷಾರ್ಥಿಗಳಿಗೆ ಹಾಗೂ ವಟುಗಳಿಗೆ ಲಿಂಗದೀಕ್ಷೆ ಮತ್ತು ಅಯ್ಯಾಚಾರದ ಸಂಸ್ಕಾರಗಳನ್ನು ನೆರವೇರಿಸಿದರು. ನೂರಕ್ಕೂ ಅಧಿಕ ಜಂಗಮ ವಟುಗಳು ಅಯ್ಯಾಚಾರದ ಸಂಸ್ಕಾರವನ್ನು ಸ್ವೀಕರಿಸಿದರೆ, ಅನೇಕ ಭಕ್ತರು ಲಿಂಗದೀಕ್ಷೆ ಪಡೆದು ಇಷ್ಟಲಿಂಗಧಾರಿಗಳಾದರು.

ಭ್ರಮರಾಂಬ ಮಲ್ಲಿಕಾರ್ಜುನ ದೇವಸ್ಥಾನದ ಆಡಳಿತಾಧಿಕಾರಿ ಎಂ. ಶ್ರೀನಿವಾಸ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಶೈಲ ಪೀಠದ ಧಾರ್ಮಿಕ ಹಾಗೂ ಸಾಮಾಜಿಕ ಸೇವಾಕಾರ್ಯಗಳನ್ನು ಶ್ಲಾಘಿಸಿದರು.

ಶ್ರೀ ಮಲ್ಲಿಕಾರ್ಜುನ ಶಾಸ್ತ್ರಿಗಳು ಹಾಗೂ ಶಿವಶಂಕರ ಸ್ವಾಮಿಗಳು ದೀಕ್ಷೆಯ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ದೀಕ್ಷಾರ್ಥಿಗಳಿಗೆ ಧರ್ಮೋಪದೇಶ ನೀಡಿದರು. ಶ್ರೀ ಪೀಠದ ಮುಖ್ಯ ವ್ಯವಸ್ಥಾಪಕ ಎಂ.ಬಿ. ಮಂಜುನಾಥ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಶ್ರೀಶೈಲಂ ಜಂಗಮ ಸಮಾಜದ ಕಾರ್ಯದರ್ಶಿ ನಟರಾಜ ಅವರು ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಅನೇಕ ಭಕ್ತರು ಸಾಮೂಹಿಕ ಅಯ್ಯಾಚಾರ ಮತ್ತು ಲಿಂಗದೀಕ್ಷೆ ಕಾರ್ಯಕ್ರಮದಲ್ಲಿ ಭಕ್ತಿಪೂರ್ವಕವಾಗಿ ಪಾಲ್ಗೊಂಡಿದ್ದರು.

K.M.Sathish Gowda

Join WhatsApp

Join Now

Facebook

Join Now

Leave a Comment