ಕನ್ನಡ ಎನ್ನುವುದು ಕೇವಲ ಒಂದು ಭಾಷೆಯಲ್ಲ, ಅದೊಂದು ಅಖಂಡ ಜಾಗತಿಕ ಭಾವನೆ, ಕೋಟ್ಯಂತರ ಕನ್ನಡಿಗರ ರಕ್ತನಾಳಗಳಲ್ಲಿ ಹರಿಯುವ ಸಾಂಸ್ಕೃತಿಕ ಚೈತನ್ಯ. ‘ಅಕ್ಕಾ’ (Association of Kannada Kutas of America) ಸಂಸ್ಥೆಯು ಕಳೆದ ಕಾಲು ಶತಮಾನದಿಂದ ಉತ್ತರ ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದೇ ಸೂರಿನಡಿ ತಂದು, ವಿದೇಶಿ ನೆಲದಲ್ಲೂ ತಾಯ್ನಾಡಿನ ಕಂಪು ಪಸರಿಸುತ್ತಿರುವ ಹೆಮ್ಮೆಯ ಸಾಂಸ್ಕೃತಿಕ ಸೇತುವೆಯಾಗಿದೆ.
ಅಮೆರಿಕದ ಫಿಲಡೆಲ್ಫಿಯಾದಲ್ಲಿರುವ ಪೆನ್ಸಿಲ್ವೇನಿಯಾ ಕನ್ವೆನ್ಷನ್ ಸೆಂಟರ್ನಲ್ಲಿ ಆರಂಭಗೊಂಡ ‘ಅಕ್ಕಾ’ ರಜತ ಮಹೋತ್ಸವ ವಿಶ್ವ ಕನ್ನಡ ಸಮ್ಮೇಳನವು ವಿದೇಶದಲ್ಲೂ ಕನ್ನಡದ ಅಸ್ಮಿತೆ ಎಷ್ಟು ಗಟ್ಟಿಯಾಗಿದೆ ಎಂಬುದಕ್ಕೆ ಜೀವಂತ ಸಾಕ್ಷಿಯಾಯಿತು. ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯ ಹಾಗೂ ಆಶೀರ್ವಚನದೊಂದಿಗೆ ಚಾಲನೆ ಪಡೆದ ಈ ಸಮಾವೇಶದಲ್ಲಿ ಜಗತ್ತಿನ ಮೂಲೆಮೂಲೆಗಳಿಂದ ಆಗಮಿಸಿದ ಸಾವಿರಾರು ಕನ್ನಡಿಗರು ತಮ್ಮ ಭಾಷಾ ಪ್ರೇಮವನ್ನು ಪ್ರದರ್ಶಿಸಿದರು. “ಭೌಗೋಳಿಕ ಕರ್ನಾಟಕಕ್ಕೆ ಗಡಿಯಿದೆ, ಆದರೆ ಕನ್ನಡದ ಕರ್ನಾಟಕಕ್ಕೆ ಗಡಿಯಿಲ್ಲ” ಎಂಬ ಜಗದ್ಗುರುಗಳ ನುಡಿಮುತ್ತುಗಳು ಇಡೀ ಸಮ್ಮೇಳನದ ಮುಖ್ಯ ಆಶಯವಾಗಿ ಪ್ರತಿಧ್ವನಿಸಿದವು.

‘ಅಕ್ಕಾ’ದ ರಜತ ಪಯಣ ಕನ್ನಡದ ಜಾಗತಿಕ ಹೆಮ್ಮೆಯ ಪ್ರತೀಕ: ಶ್ರೀ ತರಳಬಾಳು ಜಗದ್ಗುರುಗಳು
ಸಮ್ಮೇಳನದಲ್ಲಿ ಆಶೀರ್ವಚನ ನೀಡಿದ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ‘ಅಕ್ಕಾ’ ಸಂಸ್ಥೆಯ 25 ವರ್ಷಗಳ ಪಯಣವನ್ನು ಶ್ಲಾಘಿಸಿ, ಇದು ಕೇವಲ ಒಂದು ಸಂಘಟನೆಯ ರಜತ ಮಹೋತ್ಸವವಲ್ಲ, ಕನ್ನಡದ ಜಾಗತಿಕ ಪಯಣದ ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದರು.
“ಇಪ್ಪತ್ತೈದು ವರ್ಷಗಳ ಹಿಂದೆ ಉತ್ತರ ಅಮೆರಿಕದ ಕನ್ನಡಿಗರು ಕಂಡ ಕನಸು ಇಂದು ರಜತ ಮಹೋತ್ಸವದ ರೂಪದಲ್ಲಿ ಸಾಕಾರಗೊಂಡಿದೆ. ‘ಅಕ್ಕಾ’ದ ಬೆಳವಣಿಗೆ ಕನ್ನಡಿಗರ ಸಂಘಟನಾ ಶಕ್ತಿ, ತಾಯ್ನುಡಿಯ ಮೇಲಿನ ಅಭಿಮಾನ ಮತ್ತು ತಾಯ್ನಾಡಿನೊಂದಿಗೆ ಇರುವ ಭಾವನಾತ್ಮಕ ಸಂಬಂಧಕ್ಕೆ ಸಾಕ್ಷಿಯಾಗಿದೆ” ಎಂದು ಅವರು ಹೇಳಿದರು.
ಕನ್ನಡಿಗರು ಭೌಗೋಳಿಕವಾಗಿ ವಿವಿಧ ದೇಶಗಳಲ್ಲಿ ಹರಡಿಕೊಂಡಿದ್ದರೂ ಭಾಷೆ ಮತ್ತು ಸಂಸ್ಕೃತಿಯ ಮೂಲಕ ಒಂದೇ ಕುಟುಂಬದಂತೆ ಬದುಕುತ್ತಿರುವುದು ಕನ್ನಡದ ವೈಶಿಷ್ಟ್ಯ. ‘ಅಕ್ಕಾ’ ಅಂತಹ ಜಾಗತಿಕ ಕನ್ನಡ ಸಮುದಾಯವನ್ನು ಒಗ್ಗೂಡಿಸುವ ಮಹತ್ವದ ಸಾಂಸ್ಕೃತಿಕ ವೇದಿಕೆಯಾಗಿ ಬೆಳೆದಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ದೇಶ ಬದಲಾದರೂ ದೇಸಿಯ ಸ್ಮೃತಿ ಬದಲಾಗದು
ಅಕ್ಕಮಹಾದೇವಿಯ ಪ್ರಸಿದ್ಧ ವಚನವಾದ “ಅಕ್ಕಾ ಕೇಳವ್ವಾ, ನಾನೊಂದು ಕನಸ ಕಂಡೆ” ಎಂಬ ಸಾಲುಗಳನ್ನು ಸ್ಮರಿಸಿದ ಜಗದ್ಗುರುಗಳು, ಉತ್ತರ ಅಮೆರಿಕದ ಕನ್ನಡಿಗರು ಹಲವು ವರ್ಷಗಳ ಹಿಂದೆ ಕಂಡ ಕನಸಿನ ಸಾಕಾರ ರೂಪವೇ ಇಂದಿನ ‘ಅಕ್ಕಾ’ ಎಂದು ಹೇಳಿದರು.
“ದೇಶ ದೂರವಾದರೂ ದೇಸಿಯ ಸ್ಮೃತಿ ದೂರವಾಗುವುದಿಲ್ಲ. ನೆಲ ಬದಲಾದರೂ ನುಡಿಯ ಬಂಧ ಬದಲಾಗುವುದಿಲ್ಲ. ಸಾಗರದಾಚೆ ನೆಲೆಸಿರುವ ಕನ್ನಡಿಗರ ಹೃದಯದಲ್ಲಿ ಕನ್ನಡದ ನೆಲ, ನುಡಿ, ಸಂಸ್ಕೃತಿ ಮತ್ತು ಪರಂಪರೆ ಸದಾ ಜೀವಂತವಾಗಿರುತ್ತದೆ” ಎಂದು ಶ್ರೀ ತರಳಬಾಳು ಜಗದ್ಗುರುಗಳು ಅವರು ಹೇಳಿದರು.
ತಾಯ್ನಾಡಿನಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿದ್ದರೂ ಕನ್ನಡಿಗರು ತಮ್ಮ ಮಕ್ಕಳಿಗೆ ಕನ್ನಡ ಕಲಿಸುವ, ಕನ್ನಡ ಹಬ್ಬಗಳನ್ನು ಆಚರಿಸುವ, ಕನ್ನಡ ಸಾಹಿತ್ಯ-ಸಂಸ್ಕೃತಿಯನ್ನು ಪರಿಚಯಿಸುವ ಮತ್ತು ಹೊಸ ಪೀಳಿಗೆಯನ್ನು ತಮ್ಮ ಸಾಂಸ್ಕೃತಿಕ ಬೇರುಗಳೊಂದಿಗೆ ಬೆಸೆಯುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.

“ಭೌಗೋಳಿಕ ಕರ್ನಾಟಕಕ್ಕೆ ಗಡಿಯಿದೆ; ಕನ್ನಡದ ಕರ್ನಾಟಕಕ್ಕೆ ಗಡಿಯಿಲ್ಲ”: ಶ್ರೀ ತರಳಬಾಳು ಜಗದ್ಗುರುಗಳು
ಸಮ್ಮೇಳನದ ಪ್ರಮುಖ ಸಂದೇಶವಾಗಿ ಜಗದ್ಗುರುಗಳ “ಭೌಗೋಳಿಕ ಕರ್ನಾಟಕಕ್ಕೆ ಗಡಿಯಿದೆ; ಕನ್ನಡದ ಕರ್ನಾಟಕಕ್ಕೆ ಗಡಿಯಿಲ್ಲ” ಎಂಬ ಮಾತು ಕನ್ನಡಿಗರ ಮನದಲ್ಲಿ ವಿಶೇಷವಾಗಿ ಪ್ರತಿಧ್ವನಿಸಿತು.
ಕರ್ನಾಟಕದ ಭೌಗೋಳಿಕ ಗಡಿ ನಕ್ಷೆಯಲ್ಲಿ ನಿರ್ದಿಷ್ಟವಾಗಿರಬಹುದು. ಆದರೆ ಕನ್ನಡದ ಗಡಿ ಕನ್ನಡಿಗರ ಹೃದಯದೊಂದಿಗೆ ವಿಸ್ತರಿಸುತ್ತಲೇ ಹೋಗುತ್ತದೆ. ಕನ್ನಡ ಮಾತನಾಡುವ ಪ್ರತಿಯೊಬ್ಬರ ಮನಸ್ಸಿನಲ್ಲೂ ಕರ್ನಾಟಕದ ಒಂದು ತುಣುಕು ಜೀವಂತವಾಗಿದೆ. ಹೀಗಾಗಿ ಕನ್ನಡವು ಕೇವಲ ಒಂದು ಭಾಷೆಯಲ್ಲ; ಅದು ಜನರ ಜೀವನಾನುಭವ, ಭಾವನೆ, ಸಂಸ್ಕೃತಿ, ಇತಿಹಾಸ, ಚಿಂತನೆ ಹಾಗೂ ಅಸ್ಮಿತೆಯನ್ನು ಪೀಳಿಗೆಯಿಂದ ಪೀಳಿಗೆಗೆ ಕೊಂಡೊಯ್ಯುವ ಜೀವಂತ ಸೇತುವೆಯಾಗಿದೆ ಎಂದು ಅವರು ವಿವರಿಸಿದರು.
ವಿದೇಶಗಳಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚುತ್ತಿರುವುದು ಕನ್ನಡ ಭಾಷೆಯ ಜಾಗತಿಕ ವ್ಯಾಪ್ತಿಗೆ ಸಾಕ್ಷಿಯಾಗಿದೆ. ಈ ಅವಕಾಶವನ್ನು ಕನ್ನಡದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ವಿಶ್ವದ ಮುಂದೆ ಪರಿಚಯಿಸಲು ಬಳಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಮುಂದಿನ ಪೀಳಿಗೆಗೆ ಕನ್ನಡದ ಬೇರು ಪರಿಚಯಿಸುವ ಜವಾಬ್ದಾರಿ
ವಿದೇಶದಲ್ಲಿ ಹುಟ್ಟಿ ಬೆಳೆದು ಬರುತ್ತಿರುವ ಕನ್ನಡಿಗರ ಮಕ್ಕಳಿಗೆ ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಪರಿಚಯ ಮಾಡಿಸುವುದು ಪ್ರತಿಯೊಬ್ಬ ಪೋಷಕರ ಮತ್ತು ಕನ್ನಡ ಸಂಘಟನೆಗಳ ಮಹತ್ವದ ಜವಾಬ್ದಾರಿ ಎಂದು ಶ್ರೀ ತರಳಬಾಳು ಜಗದ್ಗುರುಗಳು ಹೇಳಿದರು.
ಮಕ್ಕಳಿಗೆ ಕನ್ನಡ ಕಲಿಸುವುದು ಕೇವಲ ಒಂದು ಭಾಷೆಯನ್ನು ಕಲಿಸುವುದಲ್ಲ. ಅದು ಅವರನ್ನು ತಮ್ಮ ಪೂರ್ವಜರು, ತಾಯ್ನಾಡು, ಕುಟುಂಬದ ಪರಂಪರೆ ಹಾಗೂ ಸಾಂಸ್ಕೃತಿಕ ಬೇರುಗಳೊಂದಿಗೆ ಬೆಸೆಯುವ ಕಾರ್ಯವಾಗಿದೆ. ಭಾಷೆಯ ಮೂಲಕವೇ ಒಂದು ಸಮುದಾಯದ ಇತಿಹಾಸ ಮತ್ತು ಸಂಸ್ಕೃತಿ ಮುಂದಿನ ಪೀಳಿಗೆಗೆ ವರ್ಗಾವಣೆಯಾಗುತ್ತದೆ ಎಂದು ಅವರು ಹೇಳಿದರು.
ಕನ್ನಡವು ಕೇವಲ ಭೂತಕಾಲದ ವೈಭವವನ್ನು ಸ್ಮರಿಸುವ ಭಾಷೆಯಾಗಿ ಉಳಿಯಬಾರದು. ಜ್ಞಾನ, ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ, ಉದ್ಯಮಶೀಲತೆ ಹಾಗೂ ಸೃಜನಶೀಲ ಕ್ಷೇತ್ರಗಳಲ್ಲೂ ಕನ್ನಡದ ಬಳಕೆ ವಿಸ್ತರಿಸಬೇಕು. ವಿಶ್ವದ ಜ್ಞಾನವನ್ನು ಕನ್ನಡಕ್ಕೆ ತರುವುದರ ಜೊತೆಗೆ ಕನ್ನಡದ ಜ್ಞಾನ ಮತ್ತು ಸೃಜನಶೀಲತೆಯನ್ನು ವಿಶ್ವಕ್ಕೆ ಪರಿಚಯಿಸುವ ಕಾರ್ಯವೂ ನಡೆಯಬೇಕು ಎಂದು ಕರೆ ನೀಡಿದರು.

‘ಅಕ್ಕಾ’ ಸಾಂಸ್ಕೃತಿಕ ಸೇತುವೆಯಾಗಿ ಇನ್ನಷ್ಟು ಬಲಗೊಳ್ಳಲಿ
ಮುಂದಿನ ದಿನಗಳಲ್ಲಿ ‘ಅಕ್ಕಾ’ ಸಂಸ್ಥೆಯ ಕಾರ್ಯಚಟುವಟಿಕೆಗಳು ಕೇವಲ ಸಮ್ಮೇಳನಗಳ ಆಯೋಜನೆಗೆ ಸೀಮಿತವಾಗದೆ, ವಿಶ್ವದ ಕನ್ನಡಿಗರನ್ನು ನಿರಂತರವಾಗಿ ಸಂಪರ್ಕಿಸುವ ಶಕ್ತಿಯುತ ಸಾಂಸ್ಕೃತಿಕ ಸೇತುವೆಯಾಗಿ ರೂಪುಗೊಳ್ಳಬೇಕು ಎಂದು ಶ್ರೀ ತರಳಬಾಳು ಜಗದ್ಗುರುಗಳು ಆಶಿಸಿದರು.
ತಾಯ್ನುಡಿಯಿಂದ ತಾಯ್ನಾಡಿಗೆ, ಪರಂಪರೆಯಿಂದ ಮುಂದಿನ ಪೀಳಿಗೆಗೆ ಮತ್ತು ಕನ್ನಡದಿಂದ ವಿಶ್ವಮಾನವೀಯತೆಗೆ ಸಂಪರ್ಕ ಕಲ್ಪಿಸುವ ಸೇತುವೆಯಾಗಿ ‘ಅಕ್ಕಾ’ ಬೆಳೆಯಬೇಕು. ವಿಶ್ವದ ಯಾವುದೇ ಮೂಲೆಯಲ್ಲಿ ಕನ್ನಡಿಗರು ನೆಲೆಸಿದ್ದರೂ ಅವರ ಹೃದಯದಲ್ಲಿ ಕನ್ನಡದ ಅಖಂಡ ದೀಪ ಬೆಳಗುತ್ತಿರಬೇಕು ಎಂದು ಅವರು ಹಾರೈಸಿದರು.
“ಕನ್ನಡಿಗರು ಎಲ್ಲೆಲ್ಲಿ ನೆಲೆಸಿದ್ದಾರೋ ಅಲ್ಲೆಲ್ಲ ಕನ್ನಡದ ಕಂಪು, ಕನ್ನಡದ ಕರುಳು, ಕನ್ನಡದ ಕೀರ್ತಿ ಮತ್ತು ಕನ್ನಡದ ಕರುಣೆ ಪಸರಿಸಲಿ. ವಿಶ್ವದ ಕನ್ನಡಿಗರ ಹೃದಯಗಳಲ್ಲಿ ಕನ್ನಡದ ಅಖಂಡ ದೀಪ ಎಂದೆಂದಿಗೂ ಬೆಳಗುತ್ತಿರಲಿ” ಎಂದು ಶ್ರೀ ತರಳಬಾಳು ಜಗದ್ಗುರುಗಳು ಆಶಿಸಿದರು.

ಭಕ್ತಿ–ಗೌರವದಿಂದ ಶ್ರೀ ತರಳಬಾಳು ಜಗದ್ಗುರುಗಳಿಗೆ ಸನ್ಮಾನ
‘ಅಕ್ಕಾ’ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸಮ್ಮೇಳನದ ಆಯೋಜಕರು ಪೂಜನೀಯ ಶ್ರೀ ತರಳಬಾಳು ಜಗದ್ಗುರುಗಳನ್ನು ಭಕ್ತಿಪೂರ್ವಕವಾಗಿ ಗೌರವಿಸಿದರು. ಶ್ರೀ ಜಗದ್ಗುರುಗಳ ಅಮೆರಿಕಾ ಪ್ರವಾಸ ಹಾಗೂ ‘ಅಕ್ಕಾ’ ರಜತ ಮಹೋತ್ಸವ ಸಮ್ಮೇಳನದಲ್ಲಿ ಅವರ ಸಾನ್ನಿಧ್ಯ ಕನ್ನಡಿಗರಲ್ಲಿ ವಿಶೇಷ ಭಕ್ತಿ, ಗೌರವ ಹಾಗೂ ಸಂಭ್ರಮ ಮೂಡಿಸಿತು.
ಸಮ್ಮೇಳನದಲ್ಲಿ ಅವರ ಆಶೀರ್ವಚನವನ್ನು ಭಕ್ತಿಯಿಂದ ಆಲಿಸಿದ ಕನ್ನಡಿಗರು, ಕನ್ನಡದ ಜಾಗತಿಕ ಏಕತೆ, ಭಾಷಾಭಿಮಾನ, ಸಾಂಸ್ಕೃತಿಕ ಅಸ್ಮಿತೆ ಹಾಗೂ ಮುಂದಿನ ಪೀಳಿಗೆಗೆ ಕನ್ನಡವನ್ನು ಉಳಿಸಿ ಬೆಳೆಸುವ ಕುರಿತ ಸಂದೇಶಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿದೇಶಿ ನೆಲದಲ್ಲಿ ಕನ್ನಡದ ಧ್ವಜವನ್ನು ಎತ್ತಿಹಿಡಿಯುತ್ತಿರುವ ಕನ್ನಡ ಸಂಘಟನೆಗಳು, ಕನ್ನಡಿಗರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವುದರ ಜೊತೆಗೆ ಹೊಸ ಪೀಳಿಗೆಯಲ್ಲಿ ಕನ್ನಡದ ಬಗ್ಗೆ ಅಭಿಮಾನ ಬೆಳೆಸುತ್ತಿರುವುದು ಸ್ತುತ್ಯರ್ಹ ಎಂದು ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಕನ್ನಡದ ಕಲೆ–ಸಂಸ್ಕೃತಿಯ ವೈಭವದ ಅನಾವರಣ
ರಜತ ಮಹೋತ್ಸವದ ಅಂಗವಾಗಿ ಆಯೋಜಿಸಲಾದ ವಿವಿಧ ಕಾರ್ಯಕ್ರಮಗಳು ಕನ್ನಡದ ಸಾಂಸ್ಕೃತಿಕ ವೈವಿಧ್ಯತೆಯನ್ನು ಅನಾವರಣಗೊಳಿಸಿದವು. ಕನ್ನಡ ನಾಡಿನ ವಿವಿಧ ಭಾಗಗಳ ಜನಪದ ಪರಂಪರೆ, ಸಂಗೀತ, ನೃತ್ಯ, ಸಾಹಿತ್ಯ ಹಾಗೂ ಕಲಾ ಪ್ರಕಾರಗಳಿಗೆ ವೇದಿಕೆ ಕಲ್ಪಿಸುವ ಮೂಲಕ ಸಮ್ಮೇಳನವು ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ಅಮೆರಿಕದ ನೆಲದಲ್ಲಿ ಪ್ರತಿಬಿಂಬಿಸಿತು.
ವಿವಿಧ ದೇಶಗಳು ಹಾಗೂ ಅಮೆರಿಕದ ಹಲವು ರಾಜ್ಯಗಳಿಂದ ಆಗಮಿಸಿದ ಕನ್ನಡಿಗರು ಪರಸ್ಪರ ಭೇಟಿಯಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ವಿದೇಶದಲ್ಲಿ ನೆಲೆಸಿದ್ದರೂ ಕನ್ನಡದ ಮೇಲಿನ ಪ್ರೀತಿ ಮತ್ತು ತಾಯ್ನಾಡಿನೊಂದಿಗಿನ ಭಾವನಾತ್ಮಕ ನಂಟು ತಮ್ಮನ್ನು ಒಂದೆಡೆ ಸೇರಿಸಿದೆ ಎಂಬ ಭಾವನೆ ಸಮ್ಮೇಳನದಲ್ಲಿ ವ್ಯಕ್ತವಾಯಿತು.
ಗಣ್ಯರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಪರಮಪೂಜ್ಯ ಜಗದ್ಗುರು ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ರಾಜ್ಯ ಸಚಿವ ಶಿವರಾಜ ತಂಗಡಗಿ, ವಿಧಾನ ಪರಿಷತ್ ಸದಸ್ಯರಾದ ಭೋಜೇಗೌಡ, ಸರವಣ, ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು, ಸಾ.ರಾ. ಮಹೇಶ್, ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ, ಅಶ್ವಿನಿ ಪುನೀತ್ ರಾಜಕುಮಾರ್ ಸೇರಿದಂತೆ ಹಲವು ಗಣ್ಯರು, ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿ ಸಮ್ಮೇಳನಕ್ಕೆ ಶುಭ ಹಾರೈಸಿದರು.
ವಿಶ್ವದ ವಿವಿಧ ಭಾಗಗಳಿಂದ ಆಗಮಿಸಿದ ಕನ್ನಡಿಗರ ಸಮ್ಮುಖದಲ್ಲಿ ನಡೆದ ‘ಅಕ್ಕಾ’ ರಜತ ಮಹೋತ್ಸವವು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಜಾಗತಿಕ ಪಯಣಕ್ಕೆ ಹೊಸ ಚೈತನ್ಯ ನೀಡಿತು. ಸಾಗರದಾಚೆಯ ನೆಲದಲ್ಲೂ ಕನ್ನಡದ ಕಹಳೆ ಮೊಳಗಿಸುವ ಮೂಲಕ, ಕನ್ನಡಕ್ಕೆ ಗಡಿ ಇಲ್ಲ, ಕನ್ನಡಿಗರ ಭಾವನೆಗೆ ಎಲ್ಲೆ ಇಲ್ಲ ಎಂಬ ಸಂದೇಶವನ್ನು ಸಮ್ಮೇಳನ ಮತ್ತೊಮ್ಮೆ ಸಾರಿತು.











