ರಾಜ್ಯದಲ್ಲಿ ಮತ್ತೊಮ್ಮೆ ಜಾತಿಗಣತಿ ಅರ್ಥಾತ್ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲು ರಾಜ್ಯದ ಸಿಎಂ ಸಿದ್ದರಾಮಯ್ಯ ಸರ್ಕಾರ ನಿರ್ಧರಿಸಿದೆ. ರಾಜ್ಯದಲ್ಲಿ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರವರೆಗೆ ಜಾತಿ ಗಣತಿ ಅರ್ಥಾತ್ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಯಲಿದೆ. ಗಣತಿದಾರರು ಎಲ್ಲರ ಮನೆಗಳಿಗೂ ಭೇಟಿ ನೀಡಿ ಜನರ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಯನ್ನು ದಾಖಲು ಮಾಡಿಕೊಳ್ಳಲಾಗುತ್ತಿದೆ.
2014-15ರಲ್ಲಿ ನಡೆಸಿದ್ದ ಸಮೀಕ್ಷೆಯು ಹತ್ತು ವರ್ಷ ಹಳೆಯದಾಗಿದೆ ಹಾಗೂ ವೈಜ್ಞಾನಿಕವಾಗಿ ಸಮೀಕ್ಷೆ ನಡೆದಿಲ್ಲ. ಎಲ್ಲರ ಮನೆ ಬಾಗಿಲಿಗೂ ಹೋಗಿ ಸಮೀಕ್ಷೆ ನಡೆಸದೇ ಎಲ್ಲೋ ಕುಳಿತುಕೊಂಡು ಸಮೀಕ್ಷೆಯ ಅಂಕಿಅಂಶಗಳನ್ನು ದಾಖಲಿಸಿದ್ದಾರೆ.
ಉದ್ದೇಶಪೂರ್ವಕವಾಗಿಯೇ ರಾಜ್ಯದ ಪ್ರಭಾವಿ ಜಾತಿಗಳಾದ ಲಿಂಗಾಯತ, ಒಕ್ಕಲಿಗ ಸಮುದಾಯದ ಜನಸಂಖ್ಯೆಯನ್ನು ಕಡಿಮೆ ಮಾಡಿದ್ದಾರೆ ಎಂಬೆಲ್ಲಾ ಆರೋಪಗಳಿದ್ದವು. ಹೀಗಾಗಿ ಕಾಂಗ್ರೆಸ್ ಹೈಕಮ್ಯಾಂಡ್ ಮತ್ತೊಮ್ಮೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲು ಸಿಎಂ ಸಿದ್ದರಾಮಯ್ಯಗೆ ಸೂಚಿಸಿತ್ತು. ಹೀಗಾಗಿ ಇಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರು, ಅಧಿಕಾರಿಗಳ ಜೊತೆ ಸಭೆ ನಡೆಸಿ ಮತ್ತೊಮ್ಮೆ ಸಮೀಕ್ಷೆಗೆ ಮುಹೂರ್ತ ನಿಗದಿಪಡಿಸಿದ್ದಾರೆ. ಈ ತೀರ್ಮಾನದ ಪ್ರಕಾರ, ರಾಜ್ಯದಲ್ಲಿ ಸೆಪ್ಟೆಂಬರ್ 22 ರಿಂದ ಆಕ್ಟೋಬರ್ 7 ರವರೆಗೆ ಸಮೀಕ್ಷೆ ನಡೆಯಲಿದೆ. ಇದರ ಆಧಾರದ ಮೇಲೆ ಮುಂದೆ ಆಯಾ ಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಶೈಕ್ಷಣಿಕ , ಔದ್ಯೋಗಿಕ ಮೀಸಲಾತಿ ನೀಡುವ ತೀರ್ಮಾನ ಕೈಗೊಳ್ಳಬಹುದು. ಸಮೀಕ್ಷೆಯ ಅಂತಿಮ ಅಂಕಿಅಂಶಗಳ ಆಧಾರದ ಮೇಲೆ ಮೀಸಲಾತಿಯನ್ನು ಪರಿಷ್ಕರಿಸಲೂಬಹುದು.