ಶಿವಮೊಗ್ಗ: ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ಅಭಿವೃದ್ಧಿ ಹಾಗೂ ಜನಸೇವೆಯನ್ನು ಒಟ್ಟುಗೂಡಿಸಿದ ಮಹತ್ವದ ಕಾರ್ಯಕ್ರಮವು ವಿಧಾನಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಡಿ. ಎಸ್. ಅರುಣ್ ಅವರ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಕಟ್ಟಡದ ಉದ್ಘಾಟನೆ ಹಾಗೂ ನಿವೇಶನ ಹಕ್ಕುಪತ್ರ ವಿತರಣಾ ಕಾರ್ಯಕ್ರಮಗಳು ಆಯೋಜಿಸಲಾಯಿತು.
ಡಿ. ಎಸ್. ಅರುಣ್ ಅವರು ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ (ಎಂಎಲ್ಸಿ ಲಾಡ್) ಅಡಿಯಲ್ಲಿ ರೂ. 5 ಲಕ್ಷ ಅನುದಾನವನ್ನು ಮಂಜೂರು ಮಾಡಿ, ಆ ಅನುದಾನದ ಮೂಲಕ ನಿರ್ಮಿಸಲಾದ ನೂತನ ಹಾರನಹಳ್ಳಿ ಗ್ರಾಮ ಪಂಚಾಯಿತಿ ಕಟ್ಟಡವನ್ನು ಅಧಿಕೃತವಾಗಿ ಉದ್ಘಾಟಿಸಿದರು. ಈ ನೂತನ ಕಟ್ಟಡದಿಂದ ಗ್ರಾಮ ಪಂಚಾಯಿತಿಯ ಆಡಳಿತ ಕಾರ್ಯಗಳಿಗೆ ಮತ್ತಷ್ಟು ಚುರುಕು ದೊರೆಯಲಿದ್ದು, ಸಾರ್ವಜನಿಕರಿಗೆ ಸುಲಭ ಹಾಗೂ ಪರಿಣಾಮಕಾರಿ ಸೇವೆ ಒದಗಿಸುವಲ್ಲಿ ಸಹಕಾರಿಯಾಗಲಿದೆ.

ಇದೇ ಸಂದರ್ಭದಲ್ಲಿ ನಾಗರಬಾವಿ ಗ್ರಾಮ ಠಾಣಾ ವ್ಯಾಪ್ತಿಯಲ್ಲಿನ ಅರ್ಹ ಫಲಾನುಭವಿಗಳಿಗೆ ಒಟ್ಟು 173 ನಿವೇಶನಗಳ ಹಕ್ಕುಪತ್ರಗಳನ್ನು ವಿತರಿಸಲಾಯಿತು. ಅನೇಕ ವರ್ಷಗಳಿಂದ ನಿವೇಶನ ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಈ ಕಾರ್ಯಕ್ರಮದ ಮೂಲಕ ಕಾನೂನುಬದ್ಧ ಸ್ವಾಮ್ಯ ಹಕ್ಕು ಲಭಿಸಿದ್ದು, ಅವರ ಜೀವನದಲ್ಲಿ ಹೊಸ ಭರವಸೆ ಮೂಡಿಸಿದೆ.
ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿ, ಬಡವರ ಬದುಕಿನ ಭದ್ರತೆ ಹಾಗೂ ಸಾಮಾನ್ಯ ನಾಗರಿಕರ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಸದಾ ಸ್ಪಂದಿಸುತ್ತಿರುವ ಡಿ. ಎಸ್. ಅರುಣ್ ಅವರು, ತಮ್ಮ ನಿರಂತರ ಪ್ರಯತ್ನ ಹಾಗೂ ಜನಪರ ಕಾಳಜಿಯ ಫಲವಾಗಿ ಈ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಇದರ ಪರಿಣಾಮವಾಗಿ ನಾಗರಬಾವಿ ಗ್ರಾಮ ಠಾಣಾ ವ್ಯಾಪ್ತಿಯ ಅನೇಕ ಕುಟುಂಬಗಳಿಗೆ ಶಾಶ್ವತ ನೆಲೆ ಸಿಗುವಂತಾಗಿದ್ದು, ಭದ್ರ ಭವಿಷ್ಯದ ಮೇಲಿನ ವಿಶ್ವಾಸ ಮತ್ತಷ್ಟು ಬಲವಾಗಿದೆ.
ಕಾರ್ಯಕ್ರಮದ ವೇಳೆ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯರು, ಡಿ. ಎಸ್. ಅರುಣ್ ಅವರ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಿದರು. ಸಾರ್ವಜನಿಕ ಹಿತದೃಷ್ಟಿಯಿಂದ ಕೈಗೊಳ್ಳಲಾಗಿರುವ ಈ ರೀತಿಯ ಯೋಜನೆಗಳು ಗ್ರಾಮೀಣ ಅಭಿವೃದ್ಧಿಗೆ ಮಹತ್ವದ ಪಾತ್ರ ವಹಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.








