ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

‘ಎಂಪಿ, ಎಂಎಲ್‌ಎ ಆಗುವುದಕ್ಕಿಂತ ನೌಕರರ ವಿಶ್ವಾಸ ಗಳಿಸುವುದೇ ದೊಡ್ಡ ಸಾಧನೆ’: ಸಿ.ಎಸ್. ಷಡಾಕ್ಷರಿ ಕಾರ್ಯವೈಖರಿಗೆ ಸಂಸದ ಬಿ.ವೈ. ರಾಘವೇಂದ್ರ ಮೆಚ್ಚುಗೆ

On: June 29, 2026 2:07 PM
Follow Us:

ಶಿವಮೊಗ್ಗ: “ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರ ವಿಶ್ವಾಸವನ್ನು ಗಳಿಸಿ, ಅವರ ಸಂಘಟನೆಯ ಸಮರ್ಥ ನೇತೃತ್ವ ವಹಿಸುವುದು ಯಾವುದೇ ಶಾಸಕ ಅಥವಾ ಸಂಸದರಾಗುವುದಕ್ಕಿಂತಲೂ ಮಿಗಿಲಾದ ಹಿರಿದಾದ ಸವಾಲು. ಇಂತಹ ಕಠಿಣ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸುತ್ತಾ, ಕೇವಲ ನೌಕರರ ಹಿತರಕ್ಷಣೆಗೆ ಸೀಮಿತವಾಗದೆ ಅದ್ಭುತ ಸಮಾಜಮುಖಿ ಕಾರ್ಯಗಳ ಮೂಲಕ ಇಂದು ಆಲದ ಮರದಂತೆ ಬೃಹತ್ತಾಗಿ ಬೆಳೆದು ನಿಂತಿರುವ ಸಿ.ಎಸ್. ಷಡಾಕ್ಷರಿ ಅವರ ಧೀಮಂತ ನಾಯಕತ್ವ ಇಡೀ ಸಮಾಜಕ್ಕೇ ಮಾದರಿಯಾಗಿದೆ,” ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ಯೈ. ರಾಘವೇಂದ್ರ ಅವರು ಮುಕ್ತಕಂಠದಿಂದ ಶ್ಲಾಘಿಸಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಶಿವಕುಮಾರ ಸ್ವಾಮೀಜಿಗಳ ನೌಕರರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಸಂಸದರ ಬಿ.ವೈ.ರಾಘವೇಂದ್ರ ಮಾತನಾಡಿದರು.

📌 ಮೆಚ್ಚುಗೆ ನುಡಿ

ಸಿ.ಎಸ್. ಷಡಾಕ್ಷರಿ ಅವರ ಸಮಾಜಮುಖಿ ನಾಯಕತ್ವಕ್ಕೆ ಸಂಸದ ಬಿ.ವೈ. ರಾಘವೇಂದ್ರ ಮುಕ್ತಕಂಠದ ಶ್ಲಾಘನೆ; ಉಚಿತ ವಿದ್ಯಾರ್ಥಿನಿಲಯ, ಶಿಕ್ಷಣ ಮತ್ತು ಸಂಸ್ಕಾರದಿಂದ ಸಮಾಜ ಕಟ್ಟುವ ಕಾರ್ಯಕ್ಕೆ ಮೆಚ್ಚುಗೆ.


ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಅವರ ಸಂಕಲ್ಪ, ನಾಯಕತ್ವ ಹಾಗೂ ಸಮಾಜಮುಖಿ ಸೇವೆಯನ್ನು ಸಂಸದ ಬಿ.ವೈ. ರಾಘವೇಂದ್ರ ಮುಕ್ತಕಂಠದಿಂದ ಶ್ಲಾಘಿಸಿದರು.

“ಬಿ.ಎಸ್. ಯಡಿಯೂರಪ್ಪ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಹಾಗೂ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರೊಂದಿಗೆ ಸೇವೆ ಸಲ್ಲಿಸಿದ್ದ ಷಡಾಕ್ಷರಿ ಅವರು, ಇಂದು ತಮ್ಮ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ರಾಜ್ಯ ಸರ್ಕಾರಿ ನೌಕರರ ಸಂಘದ ನೇತೃತ್ವ ವಹಿಸಿ, ಸಾವಿರಾರು ನೌಕರರ ಪ್ರೀತಿ ಮತ್ತು ವಿಶ್ವಾಸವನ್ನು ಗಳಿಸಿದ್ದಾರೆ. ಆಲದ ಮರದಂತೆ ಎತ್ತರಕ್ಕೆ ಬೆಳೆದರೂ ಅಹಂಕಾರವನ್ನು ಮೈಗೂಡಿಸಿಕೊಳ್ಳದೆ, ತಳಮಟ್ಟದ ಜನರ ಸೇವೆ ಮತ್ತು ಸಮಾಜದ ಏಳಿಗೆಗಾಗಿ ತಮ್ಮನ್ನು ಸಮರ್ಪಿಸಿಕೊಂಡಿರುವುದು ಅವರ ವ್ಯಕ್ತಿತ್ವದ ವಿಶೇಷತೆ,” ಎಂದು ಹೇಳಿದರು.

ನಡೆದಾಡುವ ದೇವರೆಂದೇ ಖ್ಯಾತರಾದ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳ ‘ಕಾಯಕವೇ ಕೈಲಾಸ’ ಎಂಬ ಆದರ್ಶವನ್ನು ಸ್ಮರಿಸಿದ ಅವರು, ಶ್ರೀಗಳ ಹೆಸರಿನಲ್ಲಿ ಶಿವಮೊಗ್ಗ ಜಿಲ್ಲೆಯ ಸರ್ಕಾರಿ ನೌಕರರ ಬಳಗವು ವಿದ್ಯಾರ್ಥಿಗಳಿಗಾಗಿ ಉಚಿತ ವಸತಿ ನಿಲಯಗಳನ್ನು ನಡೆಸುತ್ತಿದ್ದು, ಅನ್ನದಾಸೋಹದ ಜೊತೆಗೆ ಜ್ಞಾನದಾಸೋಹವನ್ನೂ ನೀಡುತ್ತಿರುವುದು ಅತ್ಯಂತ ಪವಿತ್ರ ಮತ್ತು ಆದರ್ಶಪ್ರಾಯವಾದ ಸೇವಾಕಾರ್ಯ ಎಂದು ಬಣ್ಣಿಸಿದರು.

“ಜಿಲ್ಲೆಯ ಸರ್ಕಾರಿ ನೌಕರರು ತಮ್ಮ ತನು-ಮನ-ಧನದಿಂದ ಈ ಮಹತ್ಕಾರ್ಯಕ್ಕೆ ಕೈಜೋಡಿಸಿರುವುದು ಸಮಾಜಕ್ಕೆ ಮಾದರಿಯಾಗಿದೆ. ಇಂತಹ ನಿಸ್ವಾರ್ಥ ಸೇವೆಯನ್ನು ಕೇವಲ ಮಾತುಗಳಲ್ಲಿ ಹೊಗಳಲು ಸಾಧ್ಯವಿಲ್ಲ. ಇದು ಶಿಕ್ಷಣದ ಮೂಲಕ ಸಮಾಜ ನಿರ್ಮಾಣ ಮಾಡುವ ಅಪರೂಪದ ಯಜ್ಞವಾಗಿದೆ,” ಎಂದು ಬಿ.ವೈ. ರಾಘವೇಂದ್ರ ಪ್ರಶಂಸಿಸಿದರು.

ಬಸವಣ್ಣನವರ ವಾಣಿ ಮತ್ತು ಯುವಶಕ್ತಿಯ ಕರ್ತವ್ಯ

“ಜ್ಞಾನದ ಬಲದಿಂದ ಅಜ್ಞಾನದ ಕೇಡನ್ನು ನೋಡಯ್ಯ”

ಎಂಬ ವಿಶ್ವಗುರು ಬಸವಣ್ಣನವರ ವಚನವನ್ನು ಉಲ್ಲೇಖಿಸಿದ ಸಂಸದರು, ಇವತ್ತಿನ ಜಗತ್ತಿನಲ್ಲಿ ಶಿಕ್ಷಣ ಮತ್ತು ಜ್ಞಾನವೇ ಅತಿ ದೊಡ್ಡ ಶಕ್ತಿ. ಈ ಶಕ್ತಿಯನ್ನು ಪೂರ್ಣವಾಗಿ ಗಳಿಸಿಕೊಂಡು ದೇಶಕ್ಕಾಗಿ ಧನಾತ್ಮಕವಾಗಿ ತೊಡಗಿಸಿಕೊಳ್ಳಬೇಕು. ದೇಶದ ಗಡಿ ಕಾಯಲು ಮಗನನ್ನು ಕಳುಹಿಸಿಕೊಟ್ಟ ಸುಜಯ್ ಎಂಬ ಯುವಕನ ಹೆತ್ತವರ ದೇಶಪ್ರೇಮ ಮತ್ತು ಸೈನಿಕರ ರಕ್ತದ ಬೆಲೆಯನ್ನು ಇಂದಿನ ಯುವ ಪೀಳಿಗೆಗೆ ಅರ್ಥ ಮಾಡಿಸುವ ಕೆಲಸವನ್ನು ಈ ಸಂಸ್ಥೆ ಮಾಡುತ್ತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಬೆಳೆದ ಆಲದ ಮರಗಳು ಸಸಿಗಳಿಗೆ ದಾರಿದೀಪವಾಗಲಿ

ಉಚಿತ ವಸತಿ ನಿಲಯದ ಸೌಲಭ್ಯವನ್ನು ಪಡೆದು ಇಂದು ದೇಶ-ವಿದೇಶಗಳ ವಿವಿಧ ಉನ್ನತ ಹುದ್ದೆಗಳಲ್ಲಿರುವ ಹಳೆಯ ವಿದ್ಯಾರ್ಥಿಗಳಿಗೆ ಕರೆ ನೀಡಿದ ರಾಘವೇಂದ್ರ ಅವರು, “ನೀವೆಲ್ಲರೂ ಇಂದು ಬೆಳೆದು ನಿಂತ ಆಲದ ಮರಗಳಿದ್ದಂತೆ. ಸಮಾಜದ ಹಿಂದುಳಿದ, ಪ್ರತಿಭಾವಂತ ಪುಟ್ಟ ಸಸಿಗಳಂತಿರುವ ಬಡ ವಿದ್ಯಾರ್ಥಿಗಳಿಗೆ ದಾರಿದೀಪವಾಗುವ ಮತ್ತು ಅವರಿಗೆ ಆಸರೆಯಾಗುವ ದೊಡ್ಡ ಸವಾಲು ಹಾಗೂ ಜವಾಬ್ದಾರಿ ನಿಮ್ಮ ಮೇಲಿದೆ,” ಎಂದು ನೆನಪಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಅಧಿಕಾರಾವಧಿಯನ್ನು ಸ್ಮರಿಸಿದ ಅವರು, “ಅಧಿಕಾರ ಯಾವುದೂ ಶಾಶ್ವತವಲ್ಲ. ಆದರೆ ಯಡಿಯೂರಪ್ಪನವರು ತಮ್ಮ ಅಧಿಕಾರಾವಧಿಯಲ್ಲಿ ಇಂತಹ ಶಿಕ್ಷಣ ನೀಡುವ ಮಠ-ಮಂದಿರಗಳಿಗೆ, ವಿದ್ಯಾರ್ಥಿ ನಿಲಯಗಳಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದರು. ಒಬ್ಬ ಮಗನಾಗಿ ಮತ್ತು ಸಂಸದನಾಗಿ ಆ ಕೃತಜ್ಞತೆಯನ್ನು ನೆನೆಯುವುದು ನನ್ನ ಕರ್ತವ್ಯ,” ಎಂದರು.

ಯುವ ಪೀಳಿಗೆಯಲ್ಲಿನ ನಡವಳಿಕೆ ಬದಲಾವಣೆ ಹಾಗೂ ಮೊಬೈಲ್ ವ್ಯಸನದ ಬಗ್ಗೆ ಕಳವಳ

ಇಂದಿನ ಯುವ ಸಮೂಹದಲ್ಲಿ ಕಾಣಿಸಿಕೊಳ್ಳುತ್ತಿರುವ ಮಾನಸಿಕ ವಿಚಿತ್ರತೆ ಹಾಗೂ ಹಿಂಸಾತ್ಮಕ ಪ್ರವೃತ್ತಿಯ ಬಗ್ಗೆ ಸಂಸದರು ತೀವ್ರ ಕಳವಳ ವ್ಯಕ್ತಪಡಿಸಿದರು. ಇತ್ತೀಚೆಗೆ ಉತ್ತರ ಕರ್ನಾಟಕದಲ್ಲಿ ಕ್ಷುಲ್ಲಕ ಕಾರಣಕ್ಕೆ 16 ವರ್ಷದ ಬಾಲಕನೊಬ್ಬ ಅಕ್ಕ ಹಾಗೂ ಪೋಷಕರ ಮೇಲೆಯೇ ನಡೆಸಿದ ಮಾರಣಾಂತಿಕ ದಾಳಿಯ ಘಟನೆಯನ್ನು ಪ್ರಸ್ತಾಪಿಸಿದ ಅವರು, “ಇಂತಹ ರಾಕ್ಷಸ ಕೃತ್ಯಗಳು ಯುವಶಕ್ತಿಯಲ್ಲಿ ಏಕೆ ಮೂಡುತ್ತಿವೆ? ಯಾವ ಪ್ರಚೋದನೆ ಇದಕ್ಕೆ ಕಾರಣ ಎಂಬುದನ್ನು ನಾವೆಲ್ಲರೂ ಗಂಭೀರವಾಗಿ ಯೋಚಿಸಬೇಕಾಗಿದೆ,” ಎಂದರು.

“ಇಂದಿನ ಯುವಕರು ತಡವಾಗಿ ಮಲಗುವುದು, ತಡವಾಗಿ ಏಳುವುದು ಹವ್ಯಾಸ ಮಾಡಿಕೊಂಡಿದ್ದಾರೆ. ಮೊಬೈಲ್ ವ್ಯಸನ ಹಾಗೂ ಇತರೆ ಅನಗತ್ಯ ಚಟುವಟಿಕೆಗಳಿಂದಾಗಿ ಯುವಶಕ್ತಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದೆ. ಇಂದು ಶಿಕ್ಷಣವು ಕೇವಲ ಉನ್ನತ ಸ್ಥಾನ ಮತ್ತು ಮೆರಿಟ್‌ಗೆ ಸೀಮಿತವಾಗುತ್ತಿದ್ದು, ಸಮಾಜದಲ್ಲಿ ಹೇಗೆ ಬದುಕಬೇಕು ಎಂಬ ಸಂಸ್ಕಾರದ ಕೊರತೆ ಎದ್ದುಕಾಣುತ್ತಿದೆ,” ಎಂದು ಬಿ.ವೈ. ರಾಘವೇಂದ್ರ ವಿಷಾದಿಸಿದರು.

​”ಪಠ್ಯಪುಸ್ತಕದಲ್ಲಿ ಸಿಗದ ಬದುಕಿನ ಮೌಲ್ಯಗಳು ನಮಗೆ ಸಿದ್ಧಗಂಗಾ ಮಠ, ತರಳಬಾಳು ಮಠ, ಅಲಂಪುರ ಮಠಗಳಂತಹ ಧಾರ್ಮಿಕ ಕೇಂದ್ರಗಳಿಂದ ಸಿಗುತ್ತವೆ. ಪೋಷಕರು ತಮ್ಮ ಮಕ್ಕಳನ್ನು ಇಂತಹ ಸಾರ್ವಜನಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಕರೆತರಬೇಕು. ಆಗ ಮಾತ್ರ ಗುರು ಹಿರಿಯರ ಸತ್ಚಿಂತನೆಗಳು ಅವರ ತಲೆಗೆ ಹೋಗಲು ಸಾಧ್ಯ,” ಎಂದು ಕಿವಿಮಾತು ಹೇಳಿದರು.

​ವೇದಿಕೆಯ ಮೇಲಿದ್ದ ಪೂಜ್ಯ ಗುರುಗಳಾದ ಬೆಕ್ಕಿನಕಲ್ಮಠ ಶ್ರೀಗಳು ಹಾಗೂ ಸಾಣೆಹಳ್ಳಿ ಶ್ರೀಗಳ ಸಮ್ಮುಖದಲ್ಲಿ ನಡೆಯುತ್ತಿರುವ ಈ ಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಯುವಶಕ್ತಿಯ ಪೂರ್ವಜನ್ಮದ ಪುಣ್ಯ. ವಿದ್ಯಾರ್ಥಿಗಳು ತಂದೆ-ತಾಯಿಗೆ ಹಾಗೂ ಸಮಾಜಕ್ಕೆ ಭಾರವಾಗದೆ, ಅತ್ಯುತ್ತಮ ವ್ಯಕ್ತಿಗಳಾಗಿ ರೂಪುಗೊಂಡಾಗ ಮಾತ್ರ ಈ ಹಾಸ್ಟೆಲ್‌ನಲ್ಲಿ ಓದಿದ್ದಕ್ಕೂ ಸಾರ್ಥಕತೆ ಬರುತ್ತದೆ ಎಂದು ತಿಳಿಸುತ್ತಾ, ಕಾರ್ಯಕ್ರಮ ಆಯೋಜಿಸಿದ ಸರ್ಕಾರಿ ನೌಕರರ ಬಳಗಕ್ಕೆ ಹಾಗೂ ಸಿ.ಎಸ್. ಷಡಾಕ್ಷರಿ ಅವರಿಗೆ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಕುಮಾರ ಸ್ವಾಮೀಜಿಗಳ ನೌಕರರ ಸಂಘ, ಶಿವಮೊಗ್ಗದ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ವಹಿಸಿದ್ದರು.

ವೇದಿಕೆಯಲ್ಲಿ ಮಾಜಿ ಸಂಸದ ಆಯನೂರು ಮಂಜುನಾಥ್, ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಅಭಿಯಂತರ ಶಿವಾನಂದ ಬಣಕಾರ್, ಕಾವೇರಿ ಎಂಪೋರಿಯಂನ ವ್ಯವಸ್ಥಾಪಕ ನಿರ್ದೇಶಕ ಹೆಚ್.ಆರ್. ರಾಜಪ್ಪ, ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಜಂಟಿ ನಿರ್ದೇಶಕ ಎ.ಆರ್. ರವಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಶಿವಮೊಗ್ಗ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಆರ್. ಮೋಹನ್ ಕುಮಾರ್, ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ಗೌರವ ಕಾರ್ಯದರ್ಶಿ ಎಸ್.ಪಿ. ದಿನೇಶ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಿ. ಸಿದ್ದಬಸಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಮುನಿ ಸಜ್ಜನ್, ಶ್ರೀ ಬಸವೇಶ್ವರ ಸ್ವಾಮಿ ಪಟ್ಟಣ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಳ್ಳೇಕೆರೆ ಸಂತೋಷ್ ಸೇರಿದಂತೆ ವಿವಿಧ ಸಂಘ–ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹೆಚ್.ವಿ. ಮಹೇಶ್ವರಪ್ಪ, ಬಿ.ಜಿ. ಬೆನಕಪ್ಪ, ವಿರುಪಾಕ್ಷಪ್ಪ ಜವಳಿ, ಈಶ್ವರ ಎಣ್ಣೆರ, ಹೆಚ್.ಎಂ. ಮಹಾರುದ್ರ, ಹಂಜಿ ರುದ್ರಪ್ಪ, ವಿರೂಪಾಕ್ಷಯ್ಯ ಶಾಸ್ತ್ರಿ, ಚಂದ್ರಯ್ಯ, ಚೇತನ್ ದುಮ್ಮಳ್ಳಿ, ಶ್ರೀಮತಿ ವಾಗ್ಗೇವಿ ಬಸವರಾಜ್, ಶ್ರೀಮತಿ ಪ್ರೇಮಾ ವೀರಪ್ಪಯ್ಯ, ರುದ್ರಾರಾಧ್ಯ, ಶ್ರೀಮತಿ ರತ್ನಮ್ಮ ಸೇರಿದಂತೆ ವೀರಶೈವ–ಲಿಂಗಾಯತ ಸಮಾಜದ ಮುಖಂಡರು, ವಿವಿಧ ಸಂಘ–ಸಂಸ್ಥೆಗಳ ಪ್ರತಿನಿಧಿಗಳು, ಸರ್ಕಾರಿ ನೌಕರರು, ವಿದ್ಯಾರ್ಥಿಗಳು ಹಾಗೂ ಶಿವಮೊಗ್ಗ ಜಿಲ್ಲೆಯ ನೂರಾರು ಸಮಾಜಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

​ವಿದ್ಯೆಯ ಜೊತೆಗೆ ಸಂಸ್ಕಾರಯುತ ಶಿಕ್ಷಣ ಇಂದಿನ ತುರ್ತು ಅಗತ್ಯ; ಸಿದ್ಧಗಂಗಾ ಶ್ರೀಗಳ ದಾಸೋಹ ಪರಂಪರೆಯೇ ನಮಗೆ ಪ್ರೇರಣೆ: ಸಿ.ಎಸ್. ಷಡಾಕ್ಷರಿ

ಶಿವಮೊಗ್ಗದ ನೀರಾವರಿ ಯೋಜನೆಗಳಿಗೆ ತುರ್ತು ಅನುದಾನ ಬಿಡುಗಡೆ ಮಾಡಿ; ರೈತರ ಹಿತಕ್ಕೆ ಆದ್ಯತೆ ನೀಡಿ: ಸಚಿವ ರಾಮಲಿಂಗಾರೆಡ್ಡಿಗೆ ಸಂಸದ ಬಿ.ವೈ. ರಾಘವೇಂದ್ರ ಒತ್ತಾಯ

ಜರ್ಮನಿಯಲ್ಲೂ ಶರಣ ಸಂಸ್ಕೃತಿಯ ವೈಭವ: “ವಿದೇಶದಲ್ಲೂ ತಾಯ್ನಾಡಿನ ಸಂಸ್ಕಾರ ಉಳಿಸಿಕೊಳ್ಳುವುದೇ ನಿಜವಾದ ಧರ್ಮನಿಷ್ಠೆ” – ಮ್ಯೂನಿಚ್‌ನಲ್ಲಿ ತರಳಬಾಳು ಶ್ರೀಗಳ ಜಾಗತಿಕ ಕರೆ

“ವೋಟಿಗೆ ಹಣ ಕೊಡುವ ದೇಶದಲ್ಲಿ ಪ್ರಜಾಪ್ರಭುತ್ವ ಸತ್ತಂತೆಯೇ!”: ಚುನಾವಣಾ ವ್ಯವಸ್ಥೆ, ಭ್ರಷ್ಟಾಚಾರದ ವಿರುದ್ಧ ಸಾಣೆಹಳ್ಳಿ ಶ್ರೀಗಳ ಎಚ್ಚರಿಕೆ

ಶಿವಮೊಗ್ಗದಲ್ಲಿ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ: ‘ಪೋಲಿಯೋ ಮುಕ್ತ ಭಾರತ’ ನಿರ್ಮಾಣಕ್ಕೆ ಡಾ. ರಘು ನಂದನ್ ಕರೆ

ಕೆಂಪೇಗೌಡರ ಆದರ್ಶ, ವಾಲ್ಮೀಕಿ ಮಹರ್ಷಿಗಳ ಮೌಲ್ಯಗಳು ಸಮಾಜಕ್ಕೆ ದಾರಿದೀಪ: ಬಿ.ವೈ. ರಾಘವೇಂದ್ರ

Leave a Comment