ಶಿವಮೊಗ್ಗ: ಶಿಕ್ಷಣವೆಂದರೆ ಕೇವಲ ಅಂಕ ಗಳಿಸುವುದು ಅಥವಾ ಉದ್ಯೋಗ ಪಡೆಯುವುದಕ್ಕಷ್ಟೇ ಸೀಮಿತವಾಗಿರಬಾರದು. ಉತ್ತಮ ಸಂಸ್ಕಾರ, ಸಮಾಜಮುಖಿ ಚಿಂತನೆ ಮತ್ತು ದೇಶಸೇವೆಯ ಮನೋಭಾವವನ್ನು ಬೆಳೆಸುವ ಸಾಧನವಾಗಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು ಹಾಗೂ ಶಿವಕುಮಾರ ಸ್ವಾಮೀಜಿಗಳ ನೌಕರರ ಸಂಘ, ಶಿವಮೊಗ್ಗದ ಅಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಹೇಳಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಶಿವಕುಮಾರ ಸ್ವಾಮೀಜಿಗಳ ನೌಕರರ ಸಂಘ, ಶಿವಮೊಗ್ಗ ವತಿಯಿಂದ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಳೆಯ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.

ಸಿದ್ಧಗಂಗಾ ಶ್ರೀಗಳ ದಾಸೋಹ ಪರಂಪರೆಯ ಪ್ರೇರಣೆ
ನಡೆದಾಡುವ ದೇವರು, ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳೊಂದಿಗಿನ ತಮ್ಮ ಒಡನಾಟ ಹಾಗೂ ಮಠದ ಹಿನ್ನೆಲೆಯನ್ನು ಸ್ಮರಿಸಿದ ಅವರು ಭಾವುಕರಾದರು. “1967ರಲ್ಲಿ ಮಠ ಬೆಳೆಯುತ್ತಿದ್ದ ಸಂದರ್ಭದಲ್ಲಿ ಕೇವಲ 4-5 ಸಾವಿರ ವಿದ್ಯಾರ್ಥಿಗಳಿದ್ದರು, ಇಂದು 10-12 ಸಾವಿರ ವಿದ್ಯಾರ್ಥಿಗಳಿದ್ದಾರೆ. ನಾನು ಕೂಡ ಅದೇ ಮಠದ ವಿದ್ಯಾರ್ಥಿ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಒಮ್ಮೆ ಸಿದ್ಧಗಂಗಾ ಶ್ರೀಗಳು ಬೆಂಗಳೂರಿಗೆ ಪಾದಪೂಜೆಗೆ ಹೋಗಿದ್ದಾಗ, ಭಕ್ತರು ನೀಡಿದ ಕಾಣಿಕೆಯನ್ನು ಸಂಗ್ರಹಿಸಿ ಮರಳಿ ಬರಬೇಕಾದರೆ ರೈಲು ತಪ್ಪಿಹೋಗಿತ್ತು. ಅಂದು ರೈಲು ಚಾರ್ಜ್ ಕೇವಲ ಒಂದೂವರೆ ರೂಪಾಯಿ ಆಗಿತ್ತು. ಆದರೆ ಆ ಒಂದೂವರೆ ರೂಪಾಯಿ ಹಣ ಉಳಿದರೆ ಮಠದ ವಿದ್ಯಾರ್ಥಿಗಳ ದಾಸೋಹಕ್ಕೆ ಅನುಕೂಲವಾಗುತ್ತದೆ ಎಂದು ಯೋಚಿಸಿದ ಶ್ರೀಗಳು, ಬೆಂಗಳೂರಿನಿಂದ ತುಮಕೂರಿಗೆ ನಡೆದುಕೊಂಡೇ ಬಂದಿದ್ದರು! ಅವರು ಮಠಕ್ಕೆ ಬಂದಾಗ ರಾತ್ರಿ ಒಂದೂವರೆ ಆಗಿತ್ತು” ಎಂದು ಹಳೆಯ ಪ್ರಸಂಗವನ್ನು ಬಿಚ್ಚಿಟ್ಟರು.
“ತಮ್ಮ ಊರಿನ ಸಣ್ಣ ಪ್ರಾಯದ ದಿನಗಳಲ್ಲಿ, ಮಠದ ವಿದ್ಯಾರ್ಥಿಗಳ ತ್ರಿವಿಧಿ ದಾಸೋಹಕ್ಕಾಗಿ ತಾವೂ ಕೂಡ ಮನೆ ಮನೆಗೆ ಹೋಗಿ ದವಸ-ಧಾನ್ಯ, ತರಕಾರಿಗಳನ್ನು ಸಂಗ್ರಹಿಸಿ ಶ್ರೀಗಳ ಎತ್ತಿನಗಾಡಿ/ಟ್ರಾಕ್ಟರ್‌ಗೆ ತುಂಬಿಸುತ್ತಿದ್ದೆವು. ಭಿಕ್ಷಾಟನೆ ಮಾಡಿಯಾದರೂ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಅನ್ನ, ಆಶ್ರಯ, ಅಕ್ಷರ ನೀಡಿದ ಮಹಾನ್ ಪರಂಪರೆ ಸಿದ್ಧಗಂಗಾ ಮಠದ್ದು. ಅಂತಹ ಮಹಾತ್ಮರ ಹೆಸರಿನಲ್ಲಿ ನಮ್ಮ ನೌಕರರ ಸಂಘ ಬೆಳೆದು ನಿಂತಿರುವುದು ಹೆಮ್ಮೆಯ ವಿಚಾರ. ಈ ಬದ್ಧತೆಯ ಹಿನ್ನೆಲೆಯಲ್ಲೇ ನಮ್ಮ ‘ಬಸವ ಸಂಗಮ’ ಮತ್ತು ನೌಕರರ ಸಂಘದ ವತಿಯಿಂದ ಕಳೆದ ಆರು ತಿಂಗಳಿಂದ ಎರಡು ಲಾರಿ ಲೋಡ್ ಅಕ್ಕಿಯನ್ನು ಸಿದ್ಧಗಂಗಾ ಮಠಕ್ಕೆ ದಾಸೋಹಕ್ಕಾಗಿ ಅರ್ಪಿಸಿದ್ದೇವೆ” ಎಂದು ಹೆಮ್ಮೆಯಿಂದ ನುಡಿದರು.


ನಿರಂತರ ಪರಿಶ್ರಮಕ್ಕೆ ಸಿಕ್ಕ ಫಲ
ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಮತ್ತು ಅವರ ಪೋಷಕರನ್ನು ಅಭಿನಂದಿಸಿದ ಸಿ.ಎಸ್. ಷಡಾಕ್ಷರಿ, “ವಿದ್ಯಾರ್ಥಿಗಳು ದಿನಗಳ ಕಾಲ ನಿದ್ದೆ ಬಿಟ್ಟು, ನಿರಂತರವಾಗಿ ಓದಿನಲ್ಲಿ ತೊಡಗಿಸಿಕೊಂಡು ಪಟ್ಟ ಪರಿಶ್ರಮದ ಫಲವಾಗಿ ಇವತ್ತು ಈ ಅತ್ಯುನ್ನತ ಸಾಧನೆ ಸಾಧ್ಯವಾಗಿದೆ. ಈ ಸಂತಸದ ಕ್ಷಣದಲ್ಲಿ ನಿಮ್ಮ ಇಡೀ ಕುಟುಂಬ ಭಾಗಿಯಾಗಿರುವುದು ಹೆಮ್ಮೆಯ ಸಂಗತಿ. ಆದರೆ ವಿದ್ಯಾರ್ಥಿಗಳ ಸಾಧನೆ ಇಷ್ಟಕ್ಕೆ ಸೀಮಿತವಾಗಬಾರದು. ಮುಂಬರುವ ದಿನಗಳಲ್ಲಿ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಹೀಗೆ ಶಿಕ್ಷಣದ ಪ್ರತಿಯೊಂದು ಹಂತದಲ್ಲೂ ಟಾಪರ್ಸ್ ಆಗಿ ಹೊರಹೊಮ್ಮಬೇಕು. ಎತ್ತರೆತ್ತರಕ್ಕೆ ಬೆಳೆದು ಈ ಸಮಾಜದ ಕೀರ್ತಿ ಪತಾಕೆಯನ್ನು ಎತ್ತಿಹಿಡಿಯಬೇಕು” ಎಂದು ಸಿ.ಎಸ್.ಷಡಾಕ್ಷರಿ ಕರೆ ನೀಡಿದರು.

ಪ್ರತಿಭಾವಂತ ವಿದ್ಯಾರ್ಥಿಗಳ ಪ್ರೋತ್ಸಾಹಕ್ಕೆ ₹21 ಕೋಟಿ: ನೌಕರರ ಸಂಘದ ಮಾದರಿ ಸೇವೆ
ನೌಕರರ ಸಂಘದ ಜನಪರ ಕಾರ್ಯಕ್ರಮಗಳನ್ನು ಶ್ಲಾಘಿಸಿದ ಅವರು, “ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿಯೂ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಗಳಲ್ಲಿ ಶೇಕಡಾ 90ಕ್ಕಿಂತ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾದ ಸರ್ಕಾರಿ ನೌಕರರ ಪ್ರತಿಭಾವಂತ ಮಕ್ಕಳನ್ನು ಗುರುತಿಸಲಾಗುತ್ತಿದೆ. ಅವರ ಸ್ವಂತ ಜಿಲ್ಲಾ ಕೇಂದ್ರಗಳಲ್ಲಿಯೇ ಕಾರ್ಯಕ್ರಮಗಳನ್ನು ಆಯೋಜಿಸಿ, ತಲಾ 2000/- ರೂ.ಗಳ ನಗದು ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ. ಕಳೆದ 7 ವರ್ಷಗಳಿಂದ ಈ ಶ್ಲಾಘನೀಯ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಸಂಘವು ಬರೋಬ್ಬರಿ 21 ಕೋಟಿ ರೂಪಾಯಿಗಳನ್ನು ವ್ಯಯ ಮಾಡಿದೆ. ಇಂತಹ ಸಾಧಕ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಮತ್ತು ಪ್ರೋತ್ಸಾಹ ನೀಡುತ್ತಿರುವುದು ನಮಗೆ ಅಪಾರ ಸಂತೋಷ ಹಾಗೂ ಸಾರ್ಥಕತೆಯನ್ನು ತಂದಿದೆ” ಎಂದು ಸಿ.ಎಸ್.ಷಡಾಕ್ಷರಿ ಹೇಳಿದರು.

ಪೋಷಕರಿಗೆ ಕಿವಿಮಾತು: ಹೋಲಿಕೆ ಬೇಡ, ಪ್ರೋತ್ಸಾಹ ನೀಡಿ
ಇದೇ ಸಂದರ್ಭದಲ್ಲಿ ಪೋಷಕರ ಜವಾಬ್ದಾರಿಯನ್ನು ನೆನಪಿಸಿದ ಅವರು, “ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಕೇವಲ ಅಂಕಗಳನ್ನು ಗಳಿಸಬೇಕು ಎನ್ನುವ ನಿಟ್ಟಿನಲ್ಲಿ ಪೋಷಕರು ಮಕ್ಕಳ ಮೇಲೆ ಅತಿಯಾದ ಮಾನಸಿಕ ಒತ್ತಡ (Pressure) ಹೇರುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ‘ಪಕ್ಕದ ಮನೆಯ ಮಗು 99 ಅಂಕ ಗಳಿಸಿದೆ, ನೀನು ಕೇವಲ 85 ಅಂಕ ಗಳಿಸಿದ್ದೀಯಾ’ ಎನ್ನುವಂತಹ ಅನಗತ್ಯ ಹೋಲಿಕೆಗಳನ್ನು ಮಾಡಬೇಡಿ. ಮಕ್ಕಳ ಸಾಮರ್ಥ್ಯವನ್ನು ಗುರುತಿಸಿ, ಅವರನ್ನು ಪ್ರೀತಿಯಿಂದ ಪೋಷಿಸಿ, ಸದಾ ಪ್ರೋತ್ಸಾಹಿಸುವ ಕೆಲಸ ಮಾಡಿ. ಮಕ್ಕಳ ವಿದ್ಯಾಭ್ಯಾಸದ ವಿಚಾರಕ್ಕೆ ಬಂದಾಗ ನಮ್ಮ ಸಂಘವು ಸದಾ ಸಕಾರಾತ್ಮಕವಾಗಿ ಸ್ಪಂದಿಸಲು ಮತ್ತು ಸೂಕ್ತ ಸಹಕಾರ ನೀಡಲು ಸಿದ್ಧವಿದೆ” ಎಂದು ಭರವಸೆ ನೀಡಿದರು.

ಸಂಸ್ಕಾರಯುತ ಶಿಕ್ಷಣದ ತುರ್ತು ಅಗತ್ಯ: ಸಿ.ಎಸ್.ಷಡಾಕ್ಷರಿ
ಇಂದಿನ ಶಿಕ್ಷಣ ವ್ಯವಸ್ಥೆ ಮತ್ತು ಯುವ ಪೀಳಿಗೆಯ ಸ್ಥಿತಿಗತಿಯ ಬಗ್ಗೆ ಕಳಕಳಿ ವ್ಯಕ್ತಪಡಿಸಿದ ಷಡಾಕ್ಷರಿ ಅವರು, “ಇವತ್ತಿನ ದಿನಗಳಲ್ಲಿ ವಿದ್ಯೆ ಬಂದಿದೆ ಆದರೆ ವಿನಯ ಹೋಗಿದೆ. ಬುದ್ಧಿ ಬಂದಿದೆ ಆದರೆ ಸಂಸ್ಕಾರಗಳು ಮಾಯವಾಗುತ್ತಿವೆ. ಇಂತಹ ಸಂದರ್ಭದಲ್ಲಿ ನಾವು ಸಂಸ್ಕಾರಯುತವಾದ ಶಿಕ್ಷಣಕ್ಕೆ ಒತ್ತು ನೀಡಬೇಕಾಗಿದೆ. ನಮ್ಮ ಸಮಾಜ, ಸಮುದಾಯ, ಕುಟುಂಬ ಮತ್ತು ಗುರು-ಹಿರಿಯರ ಕಡೆಗೆ ಗಮನ ಕೊಡುವುದು ಅತ್ಯಂತ ಅವಶ್ಯಕವಾಗಿದೆ. ಇವತ್ತು ಯುವಶಕ್ತಿಯು ಸಮಾಜದ ಸತ್ಪ್ರಜೆಗಳಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಜಾತಿ, ಉಪಜಾತಿಗಳ ನಡುವೆ ಇರುವ ಸಂಘರ್ಷಗಳನ್ನು ತೊಡೆದುಹಾಕುವಲ್ಲಿ ಮತ್ತು ಸಮಾಜವನ್ನು ಸುಧರ್ಮದ ಹಾದಿಯಲ್ಲಿ ಮುನ್ನಡೆಸುವಲ್ಲಿ ಇವತ್ತಿನ ಯುವಶಕ್ತಿಯೇ ದಾರಿದೀಪವಾಗಬೇಕು” ಎಂದರು.
ಶಿವಕುಮಾರ ಸ್ವಾಮೀಜಿಗಳ ನೌಕರರ ಸಂಘವು ಇಷ್ಟು ದೊಡ್ಡ ಹೆಮ್ಮರವಾಗಿ ಬೆಳೆಯಲು ಕಾರಣರಾದ ಶಕ್ತಿಗಳನ್ನು ಸ್ಮರಿಸಿದ ಸಿ.ಎಸ್. ಷಡಾಕ್ಷರಿ ಅವರು, ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪನವರು ಹಾಗೂ ಸಂಸದರಾದ ಬಿ. ವೈ. ರಾಘವೇಂದ್ರ ಅವರ ನಿರಂತರ ಬೆಂಬಲ ಮತ್ತು ಸಹಕಾರವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು,
ಕಾರ್ಯಕ್ರಮಕ್ಕೆ ಶ್ರೀ ಬೆಕ್ಕಿನಕಲ್ಮಠದ ಪೂಜ್ಯ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾಗೂ ಸಾಣೆಹಳ್ಳಿಯ ಪೂಜ್ಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಶಿವಕುಮಾರ ಸ್ವಾಮೀಜಿಗಳ ನೌಕರರ ಸಂಘ, ಶಿವಮೊಗ್ಗದ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಸಂಸದರಾದ ಬಿ.ವೈ. ರಾಘವೇಂದ್ರ ಮಾಜಿ ಸಂಸದ ಆಯನೂರು ಮಂಜುನಾಥ್, ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಅಭಿಯಂತರ ಶಿವಾನಂದ ಬಣಕಾರ್, ಕಾವೇರಿ ಎಂಪೋರಿಯಂನ ವ್ಯವಸ್ಥಾಪಕ ನಿರ್ದೇಶಕ ಹೆಚ್.ಆರ್. ರಾಜಪ್ಪ, ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಜಂಟಿ ನಿರ್ದೇಶಕ ಎ.ಆರ್. ರವಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಶಿವಮೊಗ್ಗ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಆರ್. ಮೋಹನ್ ಕುಮಾರ್, ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ಗೌರವ ಕಾರ್ಯದರ್ಶಿ ಎಸ್.ಪಿ. ದಿನೇಶ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಿ. ಸಿದ್ದಬಸಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಮುನಿ ಸಜ್ಜನ್, ಶ್ರೀ ಬಸವೇಶ್ವರ ಸ್ವಾಮಿ ಪಟ್ಟಣ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಳ್ಳೇಕೆರೆ ಸಂತೋಷ್ ಸೇರಿದಂತೆ ವಿವಿಧ ಸಂಘ–ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.






