ಹೊಸದುರ್ಗ: ಶಿಕ್ಷಣವು ಕೇವಲ ಉದ್ಯೋಗ ಪಡೆಯುವ ಸಾಧನವಲ್ಲ; ಅದು ಬಡತನ ನಿರ್ಮೂಲನೆ, ಸಾಮಾಜಿಕ ನ್ಯಾಯ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಅತ್ಯಂತ ಶಕ್ತಿಶಾಲಿ ಬ್ರಹ್ಮಾಸ್ತ್ರವಾಗಿದೆ ಎಂದು ಹೊಸದುರ್ಗದ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶಾಂತವೀರ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.
ಹೊಸದುರ್ಗದ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠದ ಆಶ್ರಯದಲ್ಲಿ, ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಉಪನ್ಯಾಸ ಹಾಗೂ ಸ್ವಾಗತ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ವಿದ್ಯಾರ್ಥಿಗಳು ಜ್ಞಾನದ ಹಸಿವನ್ನು ಎಂದಿಗೂ ಕಳೆದುಕೊಳ್ಳಬಾರದು ಎಂದು ಕರೆ ನೀಡಿದರು.

“ಜ್ಞಾನವೇ ಶ್ರೇಷ್ಠ ಮನಸ್ಸಿನ ಆಹಾರ; ಉತ್ತಮ ಸ್ನೇಹ, ನೈತಿಕ ಶಿಕ್ಷಣ ಮತ್ತು ಪರಿಶ್ರಮವೇ ಯಶಸ್ಸಿನ ಮಂತ್ರ”: ಶ್ರೀ ಶಾಂತವೀರ ಮಹಾಸ್ವಾಮೀಜಿ
“ಶಿಕ್ಷಣದಿಂದ ಮಾತ್ರ ವ್ಯಕ್ತಿಯ ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ಸಾಧ್ಯ. ಸಮಾಜದಲ್ಲಿರುವ ಅಜ್ಞಾನ, ಮೂಢನಂಬಿಕೆ ಹಾಗೂ ಕಂದಾಚಾರಗಳನ್ನು ದೂರ ಮಾಡಿ ಸುಸಂಸ್ಕೃತ ಸಮಾಜ ನಿರ್ಮಿಸಲು ಶಿಕ್ಷಣವೇ ಮೂಲಾಧಾರ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಸತತ ಪರಿಶ್ರಮ, ಶಿಸ್ತು ಮತ್ತು ಗುರಿನಿಷ್ಠೆಯಿಂದ ವಿದ್ಯಾಭ್ಯಾಸ ಮಾಡಿ ಜೀವನದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಬೇಕು” ಎಂದು ಹೇಳಿದರು.
ಜ್ಞಾನವು ಶ್ರೇಷ್ಠ ಮನಸ್ಸುಗಳಿಗೆ ಆಹಾರವಾಗಿದ್ದು, ವಿದ್ಯಾರ್ಥಿಗಳು ಸದಾ ಜ್ಞಾನದ ಅನ್ವೇಷಣೆಯಲ್ಲಿ ತೊಡಗಿರಬೇಕು. ಒಳ್ಳೆಯ ಸ್ನೇಹಿತರನ್ನು ಹಣ ಕೊಟ್ಟಾದರೂ ಸಂಪಾದಿಸಬೇಕು; ದುಷ್ಟ ಸ್ನೇಹಿತರನ್ನು ಹಣ ಕೊಟ್ಟಾದರೂ ದೂರ ಮಾಡಬೇಕು ಎಂಬ ಮಾತಿನ ಮೂಲಕ ಉತ್ತಮ ಸ್ನೇಹ ಬಳಗದ ಮಹತ್ವವನ್ನು ಶ್ರೀಗಳು ವಿವರಿಸಿದರು.
“ಶಿಕ್ಷಣ ಎಂದರೆ ಕೇವಲ ಅಂಕ ಗಳಿಸುವುದಲ್ಲ. ನೈತಿಕ ಶಿಕ್ಷಣ, ಮಾನವೀಯ ಮೌಲ್ಯಗಳು, ಜವಾಬ್ದಾರಿಯುತ ಬದುಕು ಮತ್ತು ಉತ್ತಮ ವ್ಯಕ್ತಿತ್ವವನ್ನು ರೂಪಿಸುವ ಶಿಕ್ಷಣವೇ ನಿಜವಾದ ಶಿಕ್ಷಣ. ಆತ್ಮವಿಶ್ವಾಸ, ಜೀವನೋತ್ಸಾಹ ಹಾಗೂ ಆತ್ಮಬಲವನ್ನು ಬೆಳೆಸಲು ನೈತಿಕ ಶಿಕ್ಷಣ ಅತ್ಯಗತ್ಯವಾಗಿದೆ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳೇ ನಾಳಿನ ಜನನಾಯಕರು: ಕಾಂತರಾಜ್
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸಾಣೇಹಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಕಾಂತರಾಜು ಅವರು, “ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸರಿಯಾದ ದಾರಿಯನ್ನು ಆಯ್ದುಕೊಂಡು, ಸಂಪೂರ್ಣ ಏಕಾಗ್ರತೆಯಿಂದ ಅಧ್ಯಯನ ಮಾಡಬೇಕು. ದೇಶ ಹಾಗೂ ಸಮಾಜದ ಉನ್ನತಿಯಲ್ಲಿ ವಿದ್ಯಾರ್ಥಿಗಳ ಕೊಡುಗೆ ಅಪಾರವಾಗಿದೆ,” ಎಂದರು.
“ಮುಂದಿನ ದಿನಗಳಲ್ಲಿ ದೇಶದ ಜನನಾಯಕರಾಗಬೇಕಾದ ಮತ್ತು ಜವಾಬ್ದಾರಿಯುತ ಸ್ಥಾನಗಳನ್ನು ಅಲಂಕರಿಸಬೇಕಾದ ವಿದ್ಯಾರ್ಥಿಗಳು ಇಂದಿನಿಂದಲೇ ಪರಿಪೂರ್ಣವಾಗಿ ಸಿದ್ಧರಾಗಬೇಕು. ಬದುಕಿಗೆ ಶಿಸ್ತು ಮತ್ತು ಸಂಯಮ ಅತ್ಯಂತ ಅಗತ್ಯ. ಶಿಕ್ಷಣದ ಜೊತೆ ಜೊತೆಗೆ ಸಂಸ್ಕಾರವನ್ನು ಕಲಿತು, ಗುರು-ಹಿರಿಯರನ್ನು ಗೌರವದಿಂದ ಕಾಣುವ ಗುಣವನ್ನು ಬೆಳೆಸಿಕೊಳ್ಳಬೇಕು.”

ಸಿನಿಮಾ ನಟರಲ್ಲ, ಮಹನೀಯರೇ ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕು: ಸುರೇಶ್
ಮುಖ್ಯ ಉಪನ್ಯಾಸ ನೀಡಿದ ಮದುರೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸುರೇಶ್ ಅವರು, ವಿದ್ಯಾರ್ಥಿಗಳು ಸಿನಿಮಾ ನಟರನ್ನು ಆದರ್ಶವಾಗಿಸಿಕೊಳ್ಳುವುದಕ್ಕಿಂತ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ, ಡಾ. ಬಿ.ಆರ್. ಅಂಬೇಡ್ಕರ್, ಗೌತಮ ಬುದ್ಧ, ಬಸವಣ್ಣ ಹಾಗೂ ಮಹಾತ್ಮ ಗಾಂಧೀಜಿ ಅವರಂತಹ ಮಹನೀಯರ ಜೀವನವನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.
“ಶ್ರೀ ಶಾಂತವೀರ ಮಹಾಸ್ವಾಮೀಜಿಗಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಅವರು ಕಾಯಕಯೋಗಿ, ಸಮಾಜ ಚಿಂತಕ ಹಾಗೂ ಮೌಲ್ಯಾಧಾರಿತ ಸಮಾಜ ನಿರ್ಮಾಣದ ಹರಿಕಾರರಾಗಿದ್ದಾರೆ. ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರು ಕನಸು ಕಂಡ ಸಮಸಮಾಜ ನಿರ್ಮಾಣಕ್ಕೆ ನಿರಂತರ ಶ್ರಮಿಸುತ್ತಿದ್ದಾರೆ” ಎಂದು ಪ್ರಶಂಸಿಸಿದರು.
ವಿದ್ಯಾರ್ಥಿಗಳು ಮಾಹಿತಿಯ ಕಣಜಗಳಾಗಬೇಕು, ಶಿಸ್ತಿನ ಸಿಪಾಯಿಗಳಾಗಬೇಕು, ಅಧ್ಯಯನಶೀಲರು, ಸೌಮ್ಯ ಸ್ವಭಾವದವರು ಹಾಗೂ ಉತ್ತಮ ನಡವಳಿಕೆಯ ಆದರ್ಶ ವ್ಯಕ್ತಿಗಳಾಗಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಹನುಮಂತಪ್ಪನವರು ವಹಿಸಿದ್ದರು. ವೇದಿಕೆಯಲ್ಲಿ ಪ್ರಮುಖರಾದ ಶ್ರೀಮತಿ ನೇತ್ರಾವತಿ, ಚನ್ನರಾಯಪ್ಪ, ಇಸ್ಮೈಲ್, ಮನೋಹರ್, ವಸಂತ್ ಕುಮಾರ್, ಶ್ರೀಮತಿ ರಜನಿ ಶ್ರೀನಿವಾಸ್ ಹಾಗೂ ತಿಮ್ಮಣ್ಣ ಸೇರಿದಂತೆ ಕಾಲೇಜಿನ ಉಪನ್ಯಾಸಕ ವೃಂದ, ಸಿಬ್ಬಂದಿ ವರ್ಗ ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.











