ಜಿಲ್ಲೆಯಲ್ಲಿ ಸುಮಾರು ₹9,000 ಕೋಟಿ ಮೌಲ್ಯದ ರೈಲ್ವೆ ಯೋಜನೆಗಳ ನಿರೀಕ್ಷೆ – ಶಿವಮೊಗ್ಗ ರೈಲು ನಿಲ್ದಾಣಕ್ಕೆ ₹50 ಕೋಟಿ ವೆಚ್ಚದಲ್ಲಿ ಮಾದರಿ ಅಭಿವೃದ್ಧಿ, ಸಾಗರ–ಭದ್ರಾವತಿ ನಿಲ್ದಾಣಗಳಿಗೂ ಆದ್ಯತೆ
ಕೋಟೆಗಂಗೂರಿನಲ್ಲಿ ಕೋಚಿಂಗ್ ಡಿಪೋ, ಶಿವಮೊಗ್ಗ–ಬೀರೂರು ರೈಲು ಮಾರ್ಗದ ದ್ವಿಪಥಕ್ಕೆ ಅನುಮೋದನೆ, ಹಲವು ಹೊಸ ರೈಲು ಮಾರ್ಗಗಳ ಪ್ರಗತಿ ಕುರಿತು ಸಚಿವರ ಮಾಹಿತಿ
ಶಿವಮೊಗ್ಗ: ಜಿಲ್ಲೆಯ ಮುಂದಿನ 25ರಿಂದ 30 ವರ್ಷಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ರೈಲು ಸಂಪರ್ಕ ವ್ಯವಸ್ಥೆ ಹಾಗೂ ಮೂಲಸೌಕರ್ಯವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಹಲವು ವರ್ಷಗಳಿಂದ ಬಾಕಿ ಉಳಿದಿರುವ ರೈಲ್ವೆ ಯೋಜನೆಗಳಿಗೆ ವೇಗ ನೀಡುವುದರ ಜತೆಗೆ, ಹೊಸ ರೈಲು ಮಾರ್ಗಗಳ ನಿರ್ಮಾಣ, ನಿಲ್ದಾಣಗಳ ಅಭಿವೃದ್ಧಿ, ರೈಲುಗಳ ಸಂಚಾರ ಸಾಮರ್ಥ್ಯ ಹೆಚ್ಚಳ ಹಾಗೂ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.

ಶಿವಮೊಗ್ಗ ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ–ಶಿಕಾರಿಪುರ ರೈಲು ಮಾರ್ಗದ ಕಾಮಗಾರಿಗೆ ಅಡ್ಡಿಯಾಗಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡು, ಎರಡು ತಿಂಗಳೊಳಗೆ ಹೊಸ ಗುತ್ತಿಗೆದಾರರನ್ನು ನೇಮಿಸಿ ಕಾಮಗಾರಿ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಶಿವಮೊಗ್ಗ–ಬೀರೂರು ರೈಲು ಮಾರ್ಗದ ಡಬ್ಲಿಂಗ್, ಶಿವಮೊಗ್ಗ–ಶೃಂಗೇರಿ–ಮಂಗಳೂರು ಹೊಸ ರೈಲು ಮಾರ್ಗ, ತಾಳಗುಪ್ಪ–ಸಿದ್ದಾಪುರ–ಶಿರಸಿ–ಮುಂಡಗೋಡ–ಹುಬ್ಬಳ್ಳಿ ರೈಲು ಮಾರ್ಗ ಹಾಗೂ ಭಧ್ರಾವತಿ–ಚಿಕ್ಕಜಾಜೂರು–ಚನ್ನಗಿರಿ ಮಾರ್ಗ ಸೇರಿದಂತೆ ಜಿಲ್ಲೆಯ ರೈಲ್ವೆ ಸಂಪರ್ಕಕ್ಕೆ ಸಂಬಂಧಿಸಿದ ಹಲವು ಯೋಜನೆಗಳ ಪ್ರಗತಿಯನ್ನು ಅವರು ವಿವರಿಸಿದರು.
ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಜಿಲ್ಲೆಯ ರೈಲ್ವೆ ಅಭಿವೃದ್ಧಿಗೆ ಸಂಬಂಧಿಸಿದಂತೆ ನಿರಂತರವಾಗಿ ಮುಂದಿಟ್ಟಿರುವ ಬೇಡಿಕೆಗಳು ಹಾಗೂ ಯೋಜನೆಗಳ ಕುರಿತು ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಜಿಲ್ಲೆಗೆ ಅಗತ್ಯವಿರುವ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಕರ್ನಾಟಕದಲ್ಲಿ ₹52 ಸಾವಿರ ಕೋಟಿ ಮೊತ್ತದ ರೈಲ್ವೆ ಕಾಮಗಾರಿಗಳು
ರೈಲ್ವೆ ಸಂಪರ್ಕವು ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಹಲವು ದಶಕಗಳಿಂದ ಬಾಕಿ ಉಳಿದಿದ್ದ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದೆ. ರಸ್ತೆ ಮೇಲ್ಸೇತುವೆ, ಕೆಳಸೇತುವೆ ಹಾಗೂ ರೈಲು ಸಂಚಾರಕ್ಕೆ ಸಂಬಂಧಿಸಿದ ವಿವಿಧ ಮೂಲಸೌಕರ್ಯ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದಿಂದ ಅನುದಾನ ಒದಗಿಸಲಾಗುತ್ತಿದೆ ಎಂದು ವಿ. ಸೋಮಣ್ಣ ತಿಳಿಸಿದರು.
ಕರ್ನಾಟಕದಲ್ಲಿ ಸುಮಾರು ₹52 ಸಾವಿರ ಕೋಟಿ ಮೊತ್ತದ ರೈಲ್ವೆ ಕಾಮಗಾರಿಗಳು ನಡೆಯುತ್ತಿವೆ. ಹಿಂದಿನ ಸರ್ಕಾರಗಳ ಸಾಧನೆಗಳೊಂದಿಗೆ ಹೋಲಿಕೆ ಮಾಡುವ ಉದ್ದೇಶ ತಮಗಿಲ್ಲ. ಆದರೆ, ರಾಜ್ಯದ ವಿವಿಧ ಭಾಗಗಳಿಗೆ ಭವಿಷ್ಯದಲ್ಲಿ ಅಗತ್ಯವಿರುವ ರೈಲು ಸಂಪರ್ಕವನ್ನು ಗುರುತಿಸಿ, ಜನರ ಬೇಡಿಕೆ ಹಾಗೂ ಅಭಿವೃದ್ಧಿಯ ಅಗತ್ಯಕ್ಕೆ ಅನುಗುಣವಾಗಿ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.
ಶಿವಮೊಗ್ಗ ಜಿಲ್ಲೆಯ ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಮೂಲಸೌಕರ್ಯ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರವಾಸೋದ್ಯಮ, ವ್ಯಾಪಾರ, ಕೈಗಾರಿಕೆ, ಕೃಷಿ ಉತ್ಪನ್ನಗಳ ಸಾಗಣೆ ಮತ್ತು ಸಾರ್ವಜನಿಕರ ಪ್ರಯಾಣಕ್ಕೆ ಅನುಕೂಲವಾಗುವಂತೆ ರೈಲು ಸಂಪರ್ಕವನ್ನು ಬಲಪಡಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು.

ಶಿವಮೊಗ್ಗ–ಶಿಕಾರಿಪುರ ಮಾರ್ಗ: ಗುತ್ತಿಗೆದಾರರ ವಿರುದ್ಧ ಕ್ರಮ
ಶಿವಮೊಗ್ಗ–ಶಿಕಾರಿಪುರ ರೈಲು ಮಾರ್ಗದ ಕಾಮಗಾರಿಗೆ 2019–20ರಲ್ಲಿ ಸುಮಾರು ₹995 ಕೋಟಿ ವೆಚ್ಚದ ಅನುಮೋದನೆ ನೀಡಲಾಗಿತ್ತು. ಆದರೆ, ಗುತ್ತಿಗೆದಾರರು ನಿಗದಿತ ರೀತಿಯಲ್ಲಿ ಕಾಮಗಾರಿ ಮುಂದುವರಿಸಲು ವಿಫಲರಾದ ಕಾರಣ ಯೋಜನೆ ವಿಳಂಬವಾಗಿದೆ ಎಂದು ಸಚಿವರು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಗುತ್ತಿಗೆದಾರರಿಗೆ ಚಾರ್ಜ್ಶೀಟ್ ಸಲ್ಲಿಸಿ, ಕಾನೂನುಬದ್ಧ ಕ್ರಮ ಕೈಗೊಳ್ಳುವುದರ ಜತೆಗೆ ಗುತ್ತಿಗೆ ರದ್ದುಪಡಿಸಲು ಹಾಗೂ ಕಪ್ಪುಪಟ್ಟಿಗೆ ಸೇರಿಸಲು ನಿರ್ಧರಿಸಲಾಗಿದೆ. ಹೊಸ ಗುತ್ತಿಗೆದಾರರನ್ನು ನೇಮಿಸಲು ತಕ್ಷಣ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು. ಮುಂದಿನ ಎರಡು ತಿಂಗಳೊಳಗೆ ಹೊಸ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಿ ಕೆಲಸ ಪ್ರಾರಂಭಿಸುವ ಗುರಿ ಹೊಂದಲಾಗಿದೆ ಎಂದರು.
ಯೋಜನೆ ವಿಳಂಬಕ್ಕೆ ಗುತ್ತಿಗೆದಾರರ ವೈಫಲ್ಯದ ಜತೆಗೆ ಕೆಲವು ಸಂದರ್ಭಗಳಲ್ಲಿ ರಾಜ್ಯ ಸರ್ಕಾರದಿಂದ ಅಗತ್ಯ ಸಹಕಾರ ದೊರೆಯದಿರುವುದೂ ಕಾರಣವಾಗಿದೆ ಎಂದು ಅವರು ಹೇಳಿದರು.
ಶಿವಮೊಗ್ಗ–ಶಿಕಾರಿಪುರ ರೈಲು ಮಾರ್ಗವು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದೆ. ಯೋಜನೆಯಲ್ಲಿನ ಅಡಚಣೆಗಳನ್ನು ಕಾನೂನುಬದ್ಧವಾಗಿ ನಿವಾರಿಸಿ, ಕಾಮಗಾರಿಯನ್ನು ಮತ್ತೆ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಶಿವಮೊಗ್ಗ–ಚಿಕ್ಕಜಾಜೂರು ಸೇರಿದಂತೆ ಹಲವು ಯೋಜನೆಗಳಿಗೆ 2027ರ ಫೆಬ್ರವರಿ–ಮಾರ್ಚ್ ವೇಳೆಗೆ ಚಾಲನೆ ಅಥವಾ ಉದ್ಘಾಟನೆ ನೀಡುವ ನಿರೀಕ್ಷೆಯಿದೆ ಎಂದು ಸಚಿವರು ತಿಳಿಸಿದರು.

ಶಿವಮೊಗ್ಗ–ಶೃಂಗೇರಿ–ಮಂಗಳೂರು ಹೊಸ ರೈಲು ಮಾರ್ಗ
ಶಿವಮೊಗ್ಗ–ಶೃಂಗೇರಿ–ಮಂಗಳೂರು ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ರೈಲ್ವೆ ಮಂಡಳಿಯು 2018ರಲ್ಲೇ ಅನುಮೋದನೆ ನೀಡಿತ್ತು. ಇದೀಗ ಶೃಂಗೇರಿ–ಮಂಗಳೂರು ವಿಭಾಗಕ್ಕೆ ಸಂಬಂಧಿಸಿದ ಸಮೀಕ್ಷೆ ಪೂರ್ಣಗೊಂಡಿದ್ದು, ಅಂತಿಮ ಅಧಿಸೂಚನೆಗಾಗಿ ಟೆಂಡರ್ ಕರೆಯಲಾಗಿದೆ ಎಂದು ಸಚಿವರು ವಿವರಿಸಿದರು.
ಈ ಮಾರ್ಗದ ಮುಂದಿನ ಪ್ರಕ್ರಿಯೆಗಳನ್ನು ತ್ವರಿತಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಶಿವಮೊಗ್ಗದಿಂದ ಮಂಗಳೂರು ಹಾಗೂ ಕರಾವಳಿ ಪ್ರದೇಶಗಳಿಗೆ ರೈಲು ಸಂಪರ್ಕ ಬಲಗೊಂಡರೆ ಪ್ರಯಾಣಿಕರಿಗೆ ಮಾತ್ರವಲ್ಲದೆ ವ್ಯಾಪಾರ, ಪ್ರವಾಸೋದ್ಯಮ ಮತ್ತು ಸರಕು ಸಾಗಣೆಗೂ ಅನುಕೂಲವಾಗಲಿದೆ ಎಂಬ ನಿರೀಕ್ಷೆಯಿದೆ.
ಕರಾವಳಿ ಪ್ರದೇಶಗಳೊಂದಿಗೆ ಮಲೆನಾಡಿನ ಸಂಪರ್ಕವನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವದ್ದಾಗಿದೆ. ಯೋಜನೆಗೆ ಸಂಬಂಧಿಸಿದ ತಾಂತ್ರಿಕ ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಮುಂದಿನ ಹಂತಕ್ಕೆ ಕೊಂಡೊಯ್ಯಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಶಿವಮೊಗ್ಗ–ತೀರ್ಥಹಳ್ಳಿ–ಶೃಂಗೇರಿ ರೈಲು ಸಂಪರ್ಕವು ತಮ್ಮ ವೈಯಕ್ತಿಕ ಆಸೆಯೂ ಆಗಿದೆ ಎಂದು ಸಚಿವರು ತಿಳಿಸಿದರು. ಬಾಲ್ಯದಲ್ಲಿ ತಾಯಿಯೊಂದಿಗೆ ಶೃಂಗೇರಿಗೆ ಭೇಟಿ ನೀಡಿದ ನೆನಪುಗಳನ್ನು ಹಂಚಿಕೊಂಡ ಅವರು, ಶೃಂಗೇರಿ ಮಠದ ಗುರುಗಳೊಂದಿಗೆ ತಮ್ಮ ಕುಟುಂಬಕ್ಕೆ ಆತ್ಮೀಯ ಸಂಬಂಧವಿದ್ದ ಕಾರಣ ಈ ಮಾರ್ಗದ ಅಭಿವೃದ್ಧಿಯಲ್ಲಿ ವಿಶೇಷ ಆಸಕ್ತಿ ಹೊಂದಿರುವುದಾಗಿ ಹೇಳಿದರು.

ಬೀರೂರು–ಶಿವಮೊಗ್ಗ ಡಬ್ಲಿಂಗ್ ಆದ್ಯತೆ
ಬೀರೂರು–ಶಿವಮೊಗ್ಗ ರೈಲು ಮಾರ್ಗದ ಡಬ್ಲಿಂಗ್ ನಿಂದ ಜಿಲ್ಲೆಯ ರೈಲ್ವೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಪ್ರಮುಖ ಯೋಜನೆಯಾಗಿದೆ. ಈ ಕಾಮಗಾರಿಯನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಲು ಕ್ರಮ ವಹಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.
ರೈಲು ಮಾರ್ಗದ ದ್ವಿಪಥೀಕರಣದಿಂದ ರೈಲುಗಳ ಸಂಚಾರ ನಿರ್ವಹಣೆ ಸುಲಭವಾಗುವುದರ ಜತೆಗೆ, ಭವಿಷ್ಯದಲ್ಲಿ ಹೆಚ್ಚುವರಿ ರೈಲುಗಳನ್ನು ಓಡಿಸಲು ಅವಕಾಶ ಹೆಚ್ಚಲಿದೆ. ಶಿವಮೊಗ್ಗದ ಪ್ರಯಾಣಿಕರು ರಾಜ್ಯದ ಇತರ ನಗರಗಳಿಗೆ ಹಾಗೂ ದೂರದ ಪ್ರದೇಶಗಳಿಗೆ ತೆರಳಲು ಅನುಕೂಲವಾಗುವಂತೆ ರೈಲ್ವೆ ವ್ಯವಸ್ಥೆಯನ್ನು ವಿಸ್ತರಿಸುವುದು ಅಗತ್ಯವಾಗಿದೆ ಎಂದರು.

ತಾಳಗುಪ್ಪ–ಹುಬ್ಬಳ್ಳಿ ರೈಲು ಮಾರ್ಗಕ್ಕೆ ಐದು ಪರ್ಯಾಯಗಳ ಪರಿಶೀಲನೆ
ತಾಳಗುಪ್ಪ–ಸಿದ್ದಾಪುರ–ಶಿರಸಿ–ಮುಂಡಗೋಡ–ಹುಬ್ಬಳ್ಳಿ ಹೊಸ ರೈಲು ಮಾರ್ಗಕ್ಕಾಗಿ ಐದು ಪರ್ಯಾಯ ಮಾರ್ಗಗಳ ಸಮೀಕ್ಷೆ ನಡೆಸಲಾಗಿದೆ ಎಂದು ವಿ. ಸೋಮಣ್ಣ ತಿಳಿಸಿದರು.
ಈ ಪೈಕಿ ತಾಳಗುಪ್ಪ–ಸಿದ್ದಾಪುರ–ಶಿರಸಿ–ಮುಂಡಗೋಡ–ದಕ್ಷಿಣ ಹುಬ್ಬಳ್ಳಿ ಮಾರ್ಗವು ಸುಮಾರು 161 ಕಿ.ಮೀ. ಉದ್ದವಿರಲಿದೆ. ಮತ್ತೊಂದು ಪರ್ಯಾಯವು ಬಂಕಾಪುರ–ಯಲವಗಿ ಮೂಲಕ ಸಾಗಲಿದೆ. ತಾಳಗುಪ್ಪದಿಂದ ಸಿದ್ದಾಪುರ, ಶಿರಸಿ, ಮುಂಡಗೋಡ ಮೂಲಕ ಹುಬ್ಬಳ್ಳಿ ಹಾಗೂ ಅಂಕೋಲಾ ಸಂಪರ್ಕಿಸುವ ಮಾರ್ಗದ ಆಯ್ಕೆಗಳನ್ನೂ ಪರಿಶೀಲಿಸಲಾಗುತ್ತಿದೆ.
ಇನ್ನೊಂದು ಪರ್ಯಾಯ ಮಾರ್ಗವು ಸುಮಾರು 178 ಕಿ.ಮೀ. ಉದ್ದವಿರಲಿದೆ. ವಿವಿಧ ಮಾರ್ಗಗಳ ಉದ್ದ, ಭೌಗೋಳಿಕ ಪರಿಸ್ಥಿತಿ, ಅರಣ್ಯ ಪ್ರದೇಶ ಹಾಗೂ ಪರಿಸರದ ಮೇಲಿನ ಪರಿಣಾಮಗಳನ್ನು ಪರಿಗಣಿಸಿ ಸೂಕ್ತ ಮಾರ್ಗವನ್ನು ಅಂತಿಮಗೊಳಿಸಲಾಗುವುದು ಎಂದರು.
ತಾಳಗುಪ್ಪ–ಹುಬ್ಬಳ್ಳಿ ಹೊಸ ರೈಲು ಮಾರ್ಗದ ಕಾರ್ಯಸಾಧ್ಯತಾ ಸಮೀಕ್ಷೆ ಪೂರ್ಣಗೊಂಡಿದ್ದು, ಸುಮಾರು ₹1,511 ಕೋಟಿ ಮೊತ್ತದ ವರದಿ ಸಿದ್ಧವಾಗಿದೆ. ಯೋಜನೆಗೆ ಸಂಬಂಧಿಸಿದ ಅಂತಿಮ ಸ್ಥಳ ಪರಿಶೀಲನೆಯೂ ಪೂರ್ಣಗೊಂಡಿದೆ. 2025ರ ಡಿಸೆಂಬರ್ 15ರಂದು ಟೆಂಡರ್ ಕರೆಯಲು ಆದೇಶ ನೀಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಮುಂದಿಟ್ಟಿರುವ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲಾಗಿದೆ. ಅರಣ್ಯ ಮತ್ತು ಪರಿಸರಕ್ಕೆ ಸಂಬಂಧಿಸಿದ ಅಂಶಗಳನ್ನು ಪರಿಶೀಲಿಸಿದ ನಂತರ ಸೂಕ್ತ ಮಾರ್ಗವನ್ನು ಆಯ್ಕೆ ಮಾಡಲಾಗುವುದು ಎಂದರು.

ಭಧ್ರಾವತಿ–ಚಿಕ್ಕಜಾಜೂರು–ಚನ್ನಗಿರಿ ಮಾರ್ಗದ ಸಮೀಕ್ಷೆ
ಭಧ್ರಾವತಿ–ಚಿಕ್ಕಜಾಜೂರು–ಚನ್ನಗಿರಿ ರೈಲು ಮಾರ್ಗದ ಅಂತಿಮ ಸ್ಥಳ ಸಮೀಕ್ಷೆ ನಡೆಯುತ್ತಿದೆ. ಸುಮಾರು 173 ಕಿ.ಮೀ. ಉದ್ದದ ಈ ಯೋಜನೆಗೆ ಸಮೀಕ್ಷೆ ನಡೆಸಲು ಈಗಾಗಲೇ ಅನುಮೋದನೆ ನೀಡಲಾಗಿದೆ. ಸಮೀಕ್ಷೆಗಾಗಿ ಸಂಸ್ಥೆಯನ್ನು ನಿಗದಿಪಡಿಸಲಾಗಿದ್ದು, ಮುಂದಿನ ಹಂತದ ವ್ಯವಸ್ಥೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ವಿ. ಸೋಮಣ್ಣ ತಿಳಿಸಿದರು.
ಶಿವಮೊಗ್ಗ ಜಿಲ್ಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ರೈಲು ಸಂಪರ್ಕವನ್ನು ವಿಸ್ತರಿಸುವ ಉದ್ದೇಶದಿಂದ ಹಲವು ಯೋಜನೆಗಳನ್ನು ಒಟ್ಟಾಗಿ ಪರಿಗಣಿಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜಿಲ್ಲೆಗೆ ಸುಮಾರು ₹9,000 ಕೋಟಿ ಮೊತ್ತದ ರೈಲ್ವೆ ಯೋಜನೆಗಳು ಹಾಗೂ ಅನುದಾನದ ನಿರೀಕ್ಷೆಯಿದ್ದು, ಇದು ಕೇವಲ ಘೋಷಣೆಗೆ ಸೀಮಿತವಾಗದೆ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಉದ್ದೇಶ ಹೊಂದಿದೆ ಎಂದು ಹೇಳಿದರು.

ಕೊಂಕಣ ರೈಲ್ವೆಗೆ ₹9,000 ಕೋಟಿ ಅನುದಾನ
ಕೊಂಕಣ್ ರೈಲ್ವೆ ಆರಂಭವಾಗಿ 30 ವರ್ಷಕ್ಕೂ ಹೆಚ್ಚು ಕಾಲ ಕಳೆದಿದ್ದರೂ, ಹಿಂದಿನ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ನಿರೀಕ್ಷಿತ ಮಟ್ಟದ ಅನುದಾನ ದೊರೆತಿರಲಿಲ್ಲ ಎಂದು ಸಚಿವರು ಹೇಳಿದರು.
ಪ್ರಯಾಣಿಕರ ದಟ್ಟಣೆ, ಪಾರ್ಸೆಲ್ ಸಾಗಣೆ ಹಾಗೂ ಸರಕು ಸಾಗಣೆಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ ಕೊಂಕಣ ರೈಲ್ವೆಗೆ ಸುಮಾರು ₹9,000 ಕೋಟಿ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.
ಕರ್ನಾಟಕದ ಮಂಗಳೂರು, ಉಡುಪಿ ಮತ್ತು ಬೈಂದೂರು ಭಾಗಗಳ ರೈಲು ನಿಲುಗಡೆ ಹಾಗೂ ಇತರ ಬೇಡಿಕೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಗಡಿಭಾಗದ ಪ್ರಯಾಣಿಕರ ಸಮಸ್ಯೆಗಳನ್ನು ಅಧಿಕಾರಿಗಳು ದಾಖಲಿಸಿಕೊಂಡು ನಿರಂತರವಾಗಿ ಅನುಸರಣೆ ಮಾಡಬೇಕು ಎಂದು ಸೂಚಿಸಲಾಗಿದೆ ಎಂದರು.

ಶಿವಮೊಗ್ಗ ರೈಲು ನಿಲ್ದಾಣಕ್ಕೆ ₹50 ಕೋಟಿ ವೆಚ್ಚದಲ್ಲಿ ಮಾದರಿ ಅಭಿವೃದ್ಧಿ
ಶಿವಮೊಗ್ಗ ರೈಲು ನಿಲ್ದಾಣಕ್ಕೆ ಐತಿಹಾಸಿಕ ಹಿನ್ನೆಲೆಯಿದೆ. ರಾಷ್ಟ್ರಕವಿ ಕುವೆಂಪು, ಕರ್ನಾಡ್ ಸದಾಶಿವರಾವ್, ಬಂಗಾರಪ್ಪ, ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ಪ್ರಮುಖ ವ್ಯಕ್ತಿಗಳೊಂದಿಗೆ ಶಿವಮೊಗ್ಗ ಜಿಲ್ಲೆ ನಂಟು ಹೊಂದಿದೆ. ಜಿಲ್ಲಾ ಕೇಂದ್ರದ ಮಹತ್ವಕ್ಕೆ ಅನುಗುಣವಾಗಿ ರೈಲು ನಿಲ್ದಾಣವನ್ನೂ ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ವಿ. ಸೋಮಣ್ಣ ಹೇಳಿದರು.
ತುಮಕೂರಿನ ಸಿದ್ಧಗಂಗಾ ಸ್ವಾಮೀಜಿ ರೈಲು ನಿಲ್ದಾಣದ ಅಭಿವೃದ್ಧಿಗೆ ನೀಡಿರುವ ಆದ್ಯತೆಯ ಮಾದರಿಯಲ್ಲಿ ಶಿವಮೊಗ್ಗ ರೈಲು ನಿಲ್ದಾಣವನ್ನೂ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಕನಿಷ್ಠ ₹50 ಕೋಟಿ ವೆಚ್ಚದಲ್ಲಿ ನಿಲ್ದಾಣವನ್ನು ಮಾದರಿ ನಿಲ್ದಾಣವನ್ನಾಗಿ ರೂಪಿಸಲು ಯೋಜನೆ ಸಿದ್ಧಪಡಿಸುವಂತೆ ಸಂಸದ ಬಿ.ವೈ. ರಾಘವೇಂದ್ರ ಹಾಗೂ ರೈಲ್ವೆ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಅಗತ್ಯಕ್ಕೆ ಅನುಗುಣವಾಗಿ ₹100 ಕೋಟಿವರೆಗಿನ ಯೋಜನೆಯ ಸಾಧ್ಯತೆಯನ್ನೂ ಪರಿಶೀಲಿಸಲಾಗುವುದು ಎಂದರು.
ಪ್ರಯಾಣಿಕರಿಗೆ ವಿಶಾಲವಾದ ನಿರೀಕ್ಷಣಾ ಕೊಠಡಿ, ಕಡಿಮೆ ಶುಲ್ಕದಲ್ಲಿ ಬಳಸಬಹುದಾದ ಅತಿಥಿ ಕೊಠಡಿಗಳು, ಸ್ವಚ್ಛ ಶೌಚಾಲಯಗಳು ಹಾಗೂ ಇತರ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಸಾಮಾನ್ಯ ಪ್ರಯಾಣಿಕರಿಗೆ ಕೈಗೆಟುಕುವ ದರದಲ್ಲಿ ಸೌಲಭ್ಯಗಳು ದೊರೆಯುವಂತೆ ಅಭಿವೃದ್ಧಿ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.

ಸಾಗರ, ತಾಳಗೊಪ್ಪ ಮತ್ತು ಭದ್ರಾವತಿ ನಿಲ್ದಾಣಗಳ ಅಭಿವೃದ್ಧಿ
ಸಾಗರ ರೈಲು ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಸುಮಾರು ಶೇ.85ರಷ್ಟು ಪೂರ್ಣಗೊಂಡಿದ್ದು, ಈವರೆಗೆ ಸುಮಾರು ₹24 ಕೋಟಿ ವೆಚ್ಚವಾಗಿದೆ. 2026ರ ನವೆಂಬರ್–ಡಿಸೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳಿಸಿ ನಿಲ್ದಾಣವನ್ನು ಲೋಕಾರ್ಪಣೆ ಮಾಡುವ ಗುರಿ ಹೊಂದಲಾಗಿದೆ ಎಂದು ಸಚಿವರು ತಿಳಿಸಿದರು.
ತಾಳಗೊಪ್ಪ ರೈಲು ನಿಲ್ದಾಣದ ಅಭಿವೃದ್ಧಿಗೆ ಸುಮಾರು ₹25 ಕೋಟಿ ವೆಚ್ಚವಾಗುವ ನಿರೀಕ್ಷೆಯಿದೆ. ಸ್ಥಳೀಯ ಅಗತ್ಯಗಳನ್ನು ಪರಿಶೀಲಿಸಿ ಪ್ರಯಾಣಿಕರಿಗೆ ಬೇಕಾದ ಹೆಚ್ಚುವರಿ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು.
ಭದ್ರಾವತಿ ರೈಲು ನಿಲ್ದಾಣದ ಅಭಿವೃದ್ಧಿಗೆ ಸುಮಾರು ₹20 ಕೋಟಿ ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಕುರಿತು ಕ್ರಮ ನಡೆದಿದೆ. ಭದ್ರಾವತಿಯೂ ಹೆಚ್ಚಿನ ಜನಸಂದಣಿ ಹೊಂದಿರುವ ಪ್ರಮುಖ ಪ್ರದೇಶವಾಗಿರುವುದರಿಂದ ಶಿವಮೊಗ್ಗದ ಮಾದರಿಯಲ್ಲೇ ಇಲ್ಲಿಯೂ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂಬ ಬೇಡಿಕೆಯನ್ನು ಪರಿಗಣಿಸಲಾಗುವುದು. ರೈಲ್ವೆ ಮಂಡಳಿ ಹಾಗೂ ಸಂಬಂಧಿಸಿದ ವಿಭಾಗಗಳು ಒಟ್ಟಾಗಿ ಮಾಸ್ಟರ್ ಪ್ಲಾನ್ ರೂಪಿಸಲಿವೆ ಎಂದು ಹೇಳಿದರು.

ಸಣ್ಣ ನಿಲ್ದಾಣಗಳಿಗೂ ಮೂಲಸೌಕರ್ಯ ಸೌಲಭ್ಯ
ದೊಡ್ಡ ರೈಲು ನಿಲ್ದಾಣಗಳ ಅಭಿವೃದ್ಧಿಯ ಜತೆಗೆ ಸಣ್ಣ ನಿಲ್ದಾಣಗಳಲ್ಲಿಯೂ ಪ್ರಯಾಣಿಕರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದು ವಿ. ಸೋಮಣ್ಣ ತಿಳಿಸಿದರು.
ಅರಸಾಳಹಳ್ಳಿ ರೈಲು ನಿಲ್ದಾಣದ ಸಣ್ಣ ಪ್ಲಾಟ್ಫಾರ್ಮ್ ವಿಸ್ತರಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಸುಮಾರು ₹1.60 ಕೋಟಿ ವೆಚ್ಚ ಮಾಡಲಾಗುತ್ತಿದೆ. ಆನಂದಪುರ ರೈಲು ನಿಲ್ದಾಣಕ್ಕೆ ಸುಮಾರು ₹5 ಕೋಟಿ ಮೀಸಲಿಡಲಾಗಿದ್ದು, ಅದರಲ್ಲಿ ₹4.60 ಕೋಟಿ ಮೊತ್ತದ ಕಾಮಗಾರಿಗಳು ಈಗಾಗಲೇ ನಡೆದಿವೆ. ಹೆಚ್ಚುವರಿ ಅಗತ್ಯ ಕಂಡುಬಂದರೆ ಮತ್ತಷ್ಟು ಅನುದಾನ ನೀಡಲಾಗುವುದು ಎಂದರು.
ಶಿವಮೊಗ್ಗದ ಆಡ್ ಸ್ಟೇಷನ್ನಲ್ಲಿ ಹೆಚ್ಚುವರಿ ಪ್ಲಾಟ್ಫಾರ್ಮ್ ಹಾಗೂ ಶೆಲ್ಟರ್ಗಳನ್ನು ನಿರ್ಮಿಸಲು ಈಗಾಗಲೇ ₹40 ಲಕ್ಷ ನೀಡಲಾಗಿದೆ. ಭದ್ರಾವತಿ ಮತ್ತು ಕುಂಸಿಯಲ್ಲಿ ಅಗತ್ಯವಿರುವ ಪಾದಚಾರಿ ಮೇಲ್ಸೇತುವೆಗಳ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

₹300 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ, ಕೆಳಸೇತುವೆ ಕಾಮಗಾರಿಗಳು
ಕಳೆದ 10 ವರ್ಷಗಳಲ್ಲಿ ಶಿವಮೊಗ್ಗ ಭಾಗದಲ್ಲಿ ಏಳು ರಸ್ತೆ ಮೇಲ್ಸೇತುವೆಗಳು, ಒಂಬತ್ತು ಸೀಮಿತ ಎತ್ತರದ ಕೆಳಸೇತುವೆಗಳು ಹಾಗೂ ಒಂದು ರಸ್ತೆ ಕೆಳಸೇತುವೆ ಸೇರಿದಂತೆ ಸುಮಾರು ₹300 ಕೋಟಿ ಮೊತ್ತದ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಸಚಿವರು ಹೇಳಿದರು.
ಜಿಲ್ಲೆಯ ವಿವಿಧ ರೈಲ್ವೆ ಕ್ರಾಸಿಂಗ್ಗಳಲ್ಲಿ ಎದುರಾಗುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಲಾಗಿದೆ. ಸುಮಾರು ಎಂಟರಿಂದ ಹತ್ತು ಲೆವೆಲ್ ಕ್ರಾಸಿಂಗ್ ಗೇಟ್ಗಳಿಗೆ ಸಂಬಂಧಿಸಿದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಸಂಸದ ಬಿ.ವೈ. ರಾಘವೇಂದ್ರ ಅವರು ನಿರಂತರವಾಗಿ ಗಮನಹರಿಸಿ ಸಲ್ಲಿಸಿರುವ ಬೇಡಿಕೆಗಳನ್ನು ವಿವರವಾಗಿ ಪರಿಶೀಲಿಸಲಾಗುತ್ತಿದೆ. ರೈಲು ಹಳಿಗಳ ಸುರಕ್ಷತೆ, ರಸ್ತೆ ಸಂಚಾರದ ಸುಗಮತೆ ಹಾಗೂ ಸಾರ್ವಜನಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಕಾಮಗಾರಿಗಳನ್ನು ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು ಎಂದರು.

ಕೋಟೆಗಂಗೂರಿನಲ್ಲಿ ಕೋಚಿಂಗ್ ಡಿಪೋ ನಿರ್ಮಾಣಕ್ಕೆ ಕ್ರಮ
ಶಿವಮೊಗ್ಗದ ಕೋಟೆಗಂಗೂರಿನಲ್ಲಿ ಕೋಚಿಂಗ್ ಸೆಂಟರ್ ಹಾಗೂ ರೈಲು ಕೋಚಿಂಗ್ ಡಿಪೋ ನಿರ್ಮಾಣಕ್ಕೆ ಎದುರಾಗಿರುವ ಅಡಚಣೆಗಳನ್ನು ನಿವಾರಿಸಲು ಜಿಲ್ಲಾಡಳಿತ ಮತ್ತು ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ವಿ. ಸೋಮಣ್ಣ ತಿಳಿಸಿದರು.
ಈ ಕೇಂದ್ರದಲ್ಲಿ ಒಂದೇ ಸಮಯದಲ್ಲಿ ಆರು ರೈಲುಗಳನ್ನು ನಿರ್ವಹಿಸಲು ಸಾಧ್ಯವಾಗುವ ವ್ಯವಸ್ಥೆ ಕಲ್ಪಿಸುವ ಉದ್ದೇಶವಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಕೋಟೆಗಂಗೂರಿನಲ್ಲಿ ಪಿಟ್ ಲೈನ್ ನಿರ್ಮಾಣವಾಗಲಿದೆ. ರೈಲುಗಳ ಸ್ವಚ್ಛತೆ, ತಾಂತ್ರಿಕ ಪರಿಶೀಲನೆ ಹಾಗೂ ನಿರ್ವಹಣೆಗೆ ಇದು ನೆರವಾಗಲಿದೆ.
ಕೋಚಿಂಗ್ ಡಿಪೋ ಮತ್ತು ಪಿಟ್ ಲೈನ್ ನಿರ್ಮಾಣವಾದರೆ ವಿವಿಧ ರೈಲುಗಳನ್ನು ಶಿವಮೊಗ್ಗಕ್ಕೆ ತಂದು ನಿಲ್ಲಿಸಲು ಹಾಗೂ ನಿರ್ವಹಿಸಲು ರೈಲ್ವೆ ಇಲಾಖೆಗೆ ಅನುಕೂಲವಾಗುತ್ತದೆ. ಇದರಿಂದ ಹೊಸ ರೈಲುಗಳನ್ನು ಶಿವಮೊಗ್ಗದಿಂದಲೇ ಆರಂಭಿಸುವುದು, ಇಲ್ಲಿ ರೈಲುಗಳಿಗೆ ನಿಲುಗಡೆ ನೀಡುವುದು ಹಾಗೂ ಭವಿಷ್ಯದಲ್ಲಿ ರೈಲು ಸೇವೆಗಳನ್ನು ವಿಸ್ತರಿಸುವ ಸಾಧ್ಯತೆ ಹೆಚ್ಚಲಿದೆ ಎಂದು ಹೇಳಿದರು.
ಈ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ ಅಥವಾ ಉದ್ಘಾಟನೆ ನೀಡುವ ಉದ್ದೇಶವಿದೆ. ಶಿವಮೊಗ್ಗವನ್ನು ರೈಲ್ವೆ ಸಂಪರ್ಕದ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಕೋಟೆಗಂಗೂರು ಕೋಚಿಂಗ್ ಡಿಪೋ ಮಹತ್ವದ ಪಾತ್ರ ವಹಿಸಲಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಬೈಂದೂರು, ಮೂಕಾಂಬಿಕಾ ನಿಲ್ದಾಣಗಳಲ್ಲಿ ಹೆಚ್ಚುವರಿ ರೈಲು ನಿಲುಗಡೆ
ಶಿವಮೊಗ್ಗ ಜಿಲ್ಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಪ್ರಯಾಣಿಕರು ಮತ್ತು ಭಕ್ತರ ಅನುಕೂಲಕ್ಕಾಗಿ ಬೈಂದೂರು ರೈಲು ನಿಲ್ದಾಣದಲ್ಲಿ ಹೆಚ್ಚುವರಿ ರೈಲು ನಿಲುಗಡೆಗಳನ್ನು ಕಲ್ಪಿಸಲಾಗಿದೆ. ಮೂಕಾಂಬಿಕಾ ರೋಡ್ ಮತ್ತು ಬೈಂದೂರು ನಿಲ್ದಾಣಗಳಲ್ಲಿ ಇನ್ನಷ್ಟು ರೈಲುಗಳಿಗೆ ನಿಲುಗಡೆ ನೀಡುವ ಬೇಡಿಕೆಗಳನ್ನೂ ಪರಿಶೀಲಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಬೈಂದೂರು ನಿಲ್ದಾಣದಲ್ಲಿರುವ ಪ್ಲಾಟ್ಫಾರ್ಮ್ನಲ್ಲಿ ಹೆಚ್ಚಿನ ರೈಲುಗಳಿಗೆ ನಿಲುಗಡೆ ನೀಡಲು ಸ್ಥಳಾವಕಾಶದ ಸಮಸ್ಯೆಯಿದೆ. ಹೀಗಾಗಿ ಹೆಚ್ಚುವರಿ ಪ್ಲಾಟ್ಫಾರ್ಮ್ ನಿರ್ಮಿಸುವ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ. ಅಗತ್ಯವಿದ್ದರೆ ಹೆಚ್ಚಿನ ಪ್ರಮಾಣದಲ್ಲಿ ಭೂಮಿ ಪಡೆದು ಪ್ಲಾಟ್ಫಾರ್ಮ್ ವಿಸ್ತರಿಸುವ ಬಗ್ಗೆಯೂ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದರು.
ಶಿವಮೊಗ್ಗ ಜಿಲ್ಲೆಯ ಪ್ರಯಾಣಿಕರ ಬೇಡಿಕೆಯನ್ನು ಪರಿಗಣಿಸಿ ಎರ್ನಾಕುಳಂ–ಮಡಗಾಂವ್ ವಾರದ ಸೂಪರ್ಫಾಸ್ಟ್ ರೈಲನ್ನು ಈಗಾಗಲೇ ಓಡಿಸಲಾಗುತ್ತಿದೆ. ಜಿಲ್ಲೆಯ ವಿವಿಧ ಭಾಗಗಳಿಂದ ಬರುವ ಬೇಡಿಕೆಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿ, ರೈಲು ನಿಲುಗಡೆ, ಪ್ಲಾಟ್ಫಾರ್ಮ್ ವಿಸ್ತರಣೆ ಹಾಗೂ ಪ್ರಯಾಣಿಕರ ಸೌಲಭ್ಯಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯ ಸರ್ಕಾರದ ಅನುದಾನವಿಲ್ಲದೆ ಕೇಂದ್ರದ ಯೋಜನೆಗಳು
ಶಿವಮೊಗ್ಗ ಜಿಲ್ಲೆಯ ರೈಲ್ವೆ ಕಾಮಗಾರಿಗಳಿಗೆ ರಾಜ್ಯ ಸರ್ಕಾರದಿಂದ ಅನುದಾನ ದೊರೆತಿಲ್ಲ; ಕೇಂದ್ರ ಸರ್ಕಾರವೇ ಯೋಜನೆಗಳಿಗೆ ಹಣ ಒದಗಿಸುತ್ತಿದೆ ಎಂದು ವಿ. ಸೋಮಣ್ಣ ಹೇಳಿದರು.
ಶಿವಮೊಗ್ಗ ಟರ್ಮಿನಲ್ ಕಾಮಗಾರಿಗೆ ಸುಮಾರು ₹97 ಕೋಟಿ ಮಂಜೂರಾಗಿದೆ. ಈ ಅನುದಾನವನ್ನು ಬಳಸಿಕೊಂಡು ಕಾಮಗಾರಿ ಮುಂದುವರಿಸಲಾಗುವುದು. ರೈಲ್ವೆಯನ್ನು ಕೇವಲ ಲಾಭ–ನಷ್ಟದ ಲೆಕ್ಕದಲ್ಲಿ ನೋಡಬಾರದು. ದೇಶದ ಅಭಿವೃದ್ಧಿಗೆ ಅಗತ್ಯವಿರುವ ಪ್ರದೇಶಗಳಿಗೆ ರೈಲು ಸಂಪರ್ಕ ಕಲ್ಪಿಸುವುದು ಮುಖ್ಯವಾಗಿದೆ ಎಂದು ತಿಳಿಸಿದರು.
ರೈಲ್ವೆ ಅಭಿವೃದ್ಧಿಯು ಜನಸಾಮಾನ್ಯರ ಜೀವನಮಟ್ಟ, ಉದ್ಯೋಗಾವಕಾಶ, ವ್ಯಾಪಾರ ವಹಿವಾಟು ಹಾಗೂ ಪ್ರಾದೇಶಿಕ ಆರ್ಥಿಕ ಬೆಳವಣಿಗೆಯೊಂದಿಗೆ ನೇರ ಸಂಬಂಧ ಹೊಂದಿದೆ. ಆದ್ದರಿಂದ ಶಿವಮೊಗ್ಗಕ್ಕೆ ಅಗತ್ಯವಿರುವ ಯೋಜನೆಗಳಿಗೆ ಅನುದಾನದ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪ್ರಯಾಣಿಕರ ಟಿಕೆಟ್ ದರ ಇಳಿಕೆ ಬೇಡಿಕೆ ಪರಿಶೀಲನೆ
ಕೋವಿಡ್ ಅವಧಿಯಲ್ಲಿ ₹100ರ ಟಿಕೆಟ್ ದರವನ್ನು ₹56 ಅಥವಾ ₹46ಕ್ಕೆ ಇಳಿಸಲಾಗಿತ್ತು. ನಂತರ ಮತ್ತೆ ದರ ಹೆಚ್ಚಳವಾಗಿರುವ ಕುರಿತು ಪ್ರಯಾಣಿಕರು ಹಾಗೂ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬೇಡಿಕೆ ಶಿವಮೊಗ್ಗಕ್ಕೆ ಮಾತ್ರ ಸೀಮಿತವಾಗಿಲ್ಲ; ದೇಶದ ವಿವಿಧ ಭಾಗಗಳಿಂದಲೂ ಇದೇ ರೀತಿಯ ಮನವಿಗಳು ಬರುತ್ತಿವೆ ಎಂದು ಸಚಿವರು ಹೇಳಿದರು.
ತಾವು ಸಚಿವರಾದ ಎರಡು ವರ್ಷ ಎರಡು ತಿಂಗಳ ಅವಧಿಯಲ್ಲಿ 25 ರಾಜ್ಯಗಳಿಗೆ ಭೇಟಿ ನೀಡಿದ್ದು, ವಿವಿಧ ಪ್ರದೇಶಗಳ ಜನರ ಬೇಡಿಕೆಗಳನ್ನು ಗಮನಿಸಿದ್ದೇನೆ. ಹಿರಿಯ ನಾಗರಿಕರು ಸೇರಿದಂತೆ ಎಲ್ಲ ವರ್ಗದ ಪ್ರಯಾಣಿಕರು ಅನುಕೂಲಕರ ದರದಲ್ಲಿ ಪ್ರಯಾಣಿಸಲು ಸಾಧ್ಯವಾಗುವಂತೆ ಕ್ರಮ ಕೈಗೊಳ್ಳುವ ಕುರಿತು ಪ್ರಧಾನಮಂತ್ರಿಗಳೊಂದಿಗೆ ಚರ್ಚಿಸಿ ಪ್ರಯತ್ನಿಸಲಾಗುವುದು ಎಂದರು.
ಟಿಕೆಟ್ ದರದ ವಿಷಯವು ಸಾಮಾನ್ಯ ಜನರ ಪ್ರಯಾಣ ವೆಚ್ಚಕ್ಕೆ ಸಂಬಂಧಿಸಿದ್ದಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳುವ ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಸಚಿವರ ಹೇಳಿಕೆ
ಪತ್ರಿಕಾಗೋಷ್ಠಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಕುರಿತು ಕೇಳಿಬಂದ ಪ್ರಶ್ನೆಗಳಿಗೆ ಉತ್ತರಿಸಿದ ವಿ. ಸೋಮಣ್ಣ, ಈ ವಿಷಯವನ್ನು ಅಧಿಕೃತ ದಾಖಲೆಗಳ ಆಧಾರದ ಮೇಲೆ ಪರಿಶೀಲಿಸಬೇಕು ಎಂದು ಹೇಳಿದರು.
ಮತದಾರರ ಪಟ್ಟಿಗೆ ಹೆಸರು ಸೇರಿಸುವುದು ಅಥವಾ ತೆಗೆದುಹಾಕುವುದು ಕಾನೂನುಬದ್ಧ ಪ್ರಕ್ರಿಯೆಯಾಗಿದ್ದು, ಹಲವು ಹಂತಗಳ ಪರಿಶೀಲನೆಗೆ ಒಳಪಟ್ಟಿರುತ್ತದೆ. ವಿದೇಶಿ ನಾಗರಿಕರ ಹೆಸರುಗಳು ಪಟ್ಟಿಯಲ್ಲಿ ಸೇರಿರುವುದು, ಮೃತಪಟ್ಟವರ ಹೆಸರುಗಳು ಮುಂದುವರಿದಿರುವುದು ಅಥವಾ ಅನಧಿಕೃತವಾಗಿ ಹೆಸರುಗಳನ್ನು ಸೇರಿಸಿರುವುದಕ್ಕೆ ಸಂಬಂಧಿಸಿದಂತೆ ಆರೋಪಗಳಿದ್ದರೆ ಅವುಗಳಿಗೆ ದೃಢವಾದ ದಾಖಲೆಗಳಿರಬೇಕು. ದಾಖಲೆಗಳು ಲಭ್ಯವಾದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬಹುದು ಎಂದರು.
ಮತದಾರರ ಪಟ್ಟಿ ಪರಿಷ್ಕರಣೆಯಂತಹ ವಿಷಯಗಳನ್ನು ಆಧಾರರಹಿತ ಆರೋಪಗಳ ಮೂಲಕ ರಾಜಕೀಯಗೊಳಿಸಿ ಜನರನ್ನು ತಪ್ಪುದಾರಿಗೆ ಎಳೆಯಬಾರದು ಎಂದು ಅವರು ವಿರೋಧ ಪಕ್ಷಗಳಿಗೆ ಮನವಿ ಮಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತು ಹಗುರವಾದ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು. ಯಾವುದೇ ಆರೋಪವಿದ್ದರೂ ಅಧಿಕೃತ ದಾಖಲೆಗಳೊಂದಿಗೆ ಮಂಡಿಸಬೇಕು. ನಿರ್ದಿಷ್ಟ ಅರ್ಜಿ ಅಥವಾ ದೃಢವಾದ ಉದಾಹರಣೆಗಳನ್ನು ನೀಡಿದರೆ ಅವುಗಳನ್ನು ಪರಿಶೀಲಿಸಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ತಾವು ಬೆಂಗಳೂರಿನಲ್ಲಿ 12 ಚುನಾವಣೆಗಳನ್ನು ಎದುರಿಸಿದ್ದು, ಮೂರು ಚುನಾವಣೆಗಳಲ್ಲಿ ಸೋತಿದ್ದೇನೆ ಹಾಗೂ ಉಳಿದ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದೇನೆ ಎಂದು ತಮ್ಮ ರಾಜಕೀಯ ಅನುಭವವನ್ನು ಉಲ್ಲೇಖಿಸಿದರು.
ರೈಲು ಸುರಕ್ಷತೆಗೆ ‘ಕವಚ’ ವ್ಯವಸ್ಥೆ
ಶಿವಮೊಗ್ಗದ ರೈಲು ಸಂಪರ್ಕ ವ್ಯವಸ್ಥೆ ಸುಧಾರಿಸಿದ್ದು, ಹೆಚ್ಚಿನ ಜನರಿಗೆ ಅನುಕೂಲವಾಗುತ್ತಿದೆ ಎಂದು ಸಚಿವರು ಹೇಳಿದರು. ಪ್ರಯಾಣಿಕರ ಸುರಕ್ಷತೆಗೆ ರೈಲ್ವೆ ಇಲಾಖೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಹಳೆಯ ರೈಲು ಬೋಗಿಗಳನ್ನು ಹಂತ ಹಂತವಾಗಿ ಬದಲಾಯಿಸುವ ಕಾರ್ಯ ಕರ್ನಾಟಕ ಮಾತ್ರವಲ್ಲದೆ ದೇಶಾದ್ಯಂತ ನಡೆಯುತ್ತಿದೆ ಎಂದರು.
ರೈಲು ಅಪಘಾತಗಳನ್ನು ತಡೆಯುವ ಉದ್ದೇಶದಿಂದ ‘ಕವಚ’ ಎಂಬ ಸ್ವಯಂಚಾಲಿತ ರೈಲು ಸುರಕ್ಷತಾ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ರೈಲುಗಳ ಸುರಕ್ಷಿತ ಸಂಚಾರಕ್ಕೆ ನೆರವಾಗುವ ಈ ತಂತ್ರಜ್ಞಾನದಿಂದ ಅಪಘಾತಗಳ ಅಪಾಯವನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಮುಂದಿನ ಒಂದೂವರೆರಿಂದ ಎರಡು ವರ್ಷಗಳಲ್ಲಿ ಹಳೆಯ ಬೋಗಿಗಳ ಬಳಕೆ ಬಹುತೇಕ ಕಡಿಮೆಯಾಗುವ ನಿರೀಕ್ಷೆಯಿದೆ. ರೈಲುಗಳ ಸುರಕ್ಷತೆ, ಆಧುನಿಕ ತಂತ್ರಜ್ಞಾನ ಮತ್ತು ಉತ್ತಮ ಪ್ರಯಾಣಿಕರ ಸೌಲಭ್ಯಗಳನ್ನು ಒದಗಿಸುವುದು ವಿಕಸಿತ ಭಾರತದ ನಿರ್ಮಾಣದ ಭಾಗವಾಗಿದೆ ಎಂದು ಅಭಿಪ್ರಾಯಪಟ್ಟರು.
ಶಿವಮೊಗ್ಗ ನಗರದಲ್ಲಿ ರೈಲು ಹಳಿಗಳಿಗೆ ಹಾನಿಯಾಗಿರುವ ಅಥವಾ ಸಾರ್ವಜನಿಕರ ಸುರಕ್ಷತೆಗೆ ಅಪಾಯವಿರುವ ಸ್ಥಳಗಳಲ್ಲಿ ಬೇಲಿ ನಿರ್ಮಿಸುವ ಪ್ರಸ್ತಾವನೆಗೂ ಅನುಮೋದನೆ ನೀಡಲಾಗುತ್ತಿದೆ. ರೈಲು ನಿಲ್ದಾಣಗಳ ಸ್ವಚ್ಛತೆ, ಪ್ಲಾಟ್ಫಾರ್ಮ್ ವಿಸ್ತರಣೆ, ಹೊಸ ರೈಲು ನಿಲುಗಡೆಗಳು ಹಾಗೂ ಕೋಚಿಂಗ್ ಡಿಪೋ ನಿರ್ಮಾಣ ಸೇರಿದಂತೆ ಜಿಲ್ಲೆಯ ಎಲ್ಲ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ
ಶಿವಮೊಗ್ಗ ಜಿಲ್ಲೆಯ ರೈಲ್ವೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಘೋಷಿಸಿರುವ ಯೋಜನೆಗಳು ನಿಗದಿತ ಅವಧಿಯಲ್ಲಿ ಕಾರ್ಯರೂಪಕ್ಕೆ ಬರಬೇಕಾದರೆ ರೈಲ್ವೆ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಆಡಳಿತ ಸಮನ್ವಯದಿಂದ ಕೆಲಸ ಮಾಡಬೇಕು ಎಂದು ವಿ. ಸೋಮಣ್ಣ ಹೇಳಿದರು.
ಯೋಜನೆಗಳಿಗೆ ಮಂಜೂರಾದ ಅನುದಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದು ಮುಖ್ಯವಾಗಿದೆ. ಭೂಸ್ವಾಧೀನ, ಪರಿಸರ ಅನುಮತಿ, ಗುತ್ತಿಗೆದಾರರ ಸಮಸ್ಯೆ ಹಾಗೂ ಆಡಳಿತಾತ್ಮಕ ವಿಳಂಬಗಳಿಂದ ಯೋಜನೆಗಳು ಸ್ಥಗಿತಗೊಳ್ಳದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಶಿವಮೊಗ್ಗ–ಶಿಕಾರಿಪುರ ರೈಲು ಮಾರ್ಗದ ಕಾಮಗಾರಿ ಪುನರಾರಂಭದಿಂದ ಹಿಡಿದು ಹೊಸ ರೈಲು ಮಾರ್ಗಗಳ ಸಮೀಕ್ಷೆ, ನಿಲ್ದಾಣಗಳ ಅಭಿವೃದ್ಧಿ, ಕೋಟೆಗಂಗೂರು ಕೋಚಿಂಗ್ ಡಿಪೋ ಹಾಗೂ ಸುರಕ್ಷತಾ ಕಾಮಗಾರಿಗಳವರೆಗೆ ವಿವಿಧ ಯೋಜನೆಗಳ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸಲಾಗುವುದು. ಜಿಲ್ಲೆಯ ಜನರ ಅಗತ್ಯಕ್ಕೆ ತಕ್ಕಂತೆ ರೈಲು ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಸಚಿವರು ಪುನರುಚ್ಚರಿಸಿದರು.
ಶಿವಮೊಗ್ಗ ಜಿಲ್ಲೆಯನ್ನು ಮುಂದಿನ 25ರಿಂದ 30 ವರ್ಷಗಳ ಅಗತ್ಯಗಳಿಗೆ ಸಿದ್ಧಗೊಳಿಸುವ ನಿಟ್ಟಿನಲ್ಲಿ ರೈಲ್ವೆ ಮೂಲಸೌಕರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ. ಯೋಜನೆಗಳು ಪೂರ್ಣಗೊಂಡರೆ ಮಲೆನಾಡು, ಕರಾವಳಿ ಹಾಗೂ ರಾಜ್ಯದ ಇತರ ಭಾಗಗಳ ನಡುವಿನ ಸಂಪರ್ಕ ಸುಧಾರಿಸುವುದರ ಜತೆಗೆ ಪ್ರಯಾಣಿಕರು, ರೈತರು, ವ್ಯಾಪಾರಿಗಳು ಮತ್ತು ಕೈಗಾರಿಕಾ ವಲಯಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂಬ ನಿರೀಕ್ಷೆಯನ್ನು ಸಚಿವರು ವ್ಯಕ್ತಪಡಿಸಿದರು.
ಶಿವಮೊಗ್ಗದ ಪ್ರವಾಸಿ ಮಂದಿರದಲ್ಲಿ ಕೇಂದ್ರ ಸಚಿವ ಸೋಮಣ್ಣ ಅವರು ರೈಲ್ವೆ ಅಧಿಕಾರಿಗಳೊಂದಿಗೆ ರೈಲ್ವೆ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕರಾದ ಚನ್ನಬಸಪ್ಪ (ಚೆನ್ನಿ), ವಿಧಾನ ಪರಿಷತ್ ಸದಸ್ಯರಾದ ಧನಂಜಯ ಸರ್ಜಿ, ಡಿ.ಎಸ್. ಅರುಣ್, ರೈಲ್ವೆ ಅಧಿಕಾರಿ ಮುದಿತ್ ಮಿತ್ತಲ್, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ಎನ್.ಕೆ., ಪ್ರಮುಖರಾದ ದತ್ತಾತ್ರಿ, ನಗರಾಧ್ಯಕ್ಷ ಮೋಹನ್ ರೆಡ್ಡಿ, ಜಿಲ್ಲಾ ಮಾಧ್ಯಮ ಪ್ರಮುಖ ಚಂದ್ರಶೇಖರ್, ಮಾಧ್ಯಮ ಸಹ ಪ್ರಮುಖ ಮಂಜುನಾಥ್ ಎನ್. ಶ್ರೀನಾಗ್, ಕಲ್ಯಾಣಿ, ದಿನೇಶ್ ಸೇರಿದಂತೆ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.







