ಸಿಎಂ ಡಿ.ಕೆ. ಶಿವಕುಮಾರ್, ಡಿಸಿಎಂ ಪರಮೇಶ್ವರ್ ಸೇರಿದಂತೆ ಗಣ್ಯರ ಉಪಸ್ಥಿತಿ
ಮೈಸೂರು: ನಾಡಿನ ಸಾಂಸ್ಕೃತಿಕ ಪರಂಪರೆ, ಧಾರ್ಮಿಕ ಶ್ರದ್ಧೆ ಹಾಗೂ ವೈಭವದ ಪ್ರತೀಕವಾದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಭಾನುವಾರ ಚಾಮುಂಡಿ ಬೆಟ್ಟದಲ್ಲಿ ಅದ್ಧೂರಿ ಚಾಲನೆ ದೊರೆಯಿತು. ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ದೇವಿಯ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಮಹೋತ್ಸವವನ್ನು ಉದ್ಘಾಟಿಸಿದರು.


ಚಾಮುಂಡಿ ಬೆಟ್ಟದಲ್ಲಿ ಭಾನುವಾರ ಬೆಳಗ್ಗೆ 11.50ರಿಂದ ಮಧ್ಯಾಹ್ನ 12.13ರ ನಡುವಿನ ಶುಭ ಧನುರ್ ಲಗ್ನದಲ್ಲಿ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆದ ಈ ಕಾರ್ಯಕ್ರಮವು ನಾಡಿನ ಜನರಲ್ಲಿ ದಸರಾ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು. ನಾಡಿನ ಸುಖ, ಶಾಂತಿ, ಸಮೃದ್ಧಿ ಹಾಗೂ ಜನಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜನಸಂದಣಿ ನಿಯಂತ್ರಣ ಹಾಗೂ ಭದ್ರತೆಯ ದೃಷ್ಟಿಯಿಂದ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಪಾಸ್ ಹೊಂದಿದ್ದವರಿಗೆ ಮಾತ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು.


ನಾಡಿನ ಪರಂಪರೆ ಮತ್ತು ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ಮೈಸೂರು ದಸರಾ ಮಹೋತ್ಸವವು ಪ್ರತಿವರ್ಷದಂತೆ ಈ ಬಾರಿಯೂ ಧಾರ್ಮಿಕ ಆಚರಣೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಜನೋತ್ಸವದ ಮೂಲಕ ಜನಮನ ಸೆಳೆಯಲು ಸಜ್ಜಾಗಿದೆ.


ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಪರಮೇಶ್ವರ್, ಸಚಿವ ಯತೀಂದ್ರ ಸಿದ್ದರಾಮಯ್ಯ, ಸಚಿವರಾದ ರಾಮಲಿಂಗ ರೆಡ್ಡಿ, ಈಶ್ವರ್ ಬಿ.ಖಂಡ್ರೆ, ಶಿವರಾಜ್ ತಂಗಡಗಿ, ಬಸವಣಪ್ಪ, ಬಾಲಕೃಷ್ಣ, ಪುಟ್ಟರಂಗಶೆಟ್ಟಿ, ಅಜಯ್ ಸಿಂಗ್, ರಿಝ್ವಾನ್ ಹರ್ಷದ್, ಮಾಜಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಸಂಸದ ಸುನೀಲ್ ಬೋಸ್, ಸ್ಥಳೀಯ ಶಾಸಕ ಜಿ.ಟಿ.ದೇವೇಗೌಡ, ಶಾಸಕರುಗಳಾದ ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು, ಕೆ.ಹರೀಶ್ ಗೌಡ, ಟಿ.ಎಸ್.ಶ್ರೀವತ್ಸ, ಡಿ.ರವಿಶಂಕರ್, ದರ್ಶನ್ ಧ್ರುವನಾರಾಯಣ್, ಎ.ಆರ್.ಕೃಷ್ಣಮೂರ್ತಿ, ಗಣೇಶ್ ಪ್ರಸಾದ್, ರಾಘವೇಂದ್ರ ಹಿಟ್ನಾಳ್, ವಿಧಾನ ಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ, ಡಾ.ಡಿ.ತಿಮ್ಮಯ್ಯ, ಕೆ.ಶಿವಕುಮಾರ್, ವಿವೇಕಾನಂದ, ರಘು ಕೌಟಿಲ್ಯ, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರುಗಳು ಆಗಮಿಸಿದ್ದರು.

ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ, ಜಿ.ಪಂ. ಸಿಇಓ ಎಸ್ .ಯುಕೇಶ್ ಕುಮಾರ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿಸಿಎಫ್ ಪ್ರಭುಗೌಡ, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.










