ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಆಟೋಮೊಬೈಲ್, ಇಂಧನ, ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಸಹಕಾರಕ್ಕೆ ಆಹ್ವಾನ; ಬೆಂಗಳೂರಿಗೆ ಸೀಮಿತವಾಗದೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಹೂಡಿಕೆ ಮಾಡಿ: ಝೆಕ್ ಗಣರಾಜ್ಯದ ಉಪಪ್ರಧಾನಿ ನೇತೃತ್ವದ ನಿಯೋಗದೊಂದಿಗೆ ಸಿಎಂ ಡಿ.ಕೆ. ಶಿವಕುಮಾರ್ ಮಾತುಕತೆ

On: October 14, 2026 1:09 PM
Follow Us:

ಬೆಂಗಳೂರು, ಅ.14: ಝೆಕ್ ಗಣರಾಜ್ಯದ ಕಂಪನಿಗಳು ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿಯೂ ಹೂಡಿಕೆ ಮಾಡುವ ಮೂಲಕ ಕೈಗಾರಿಕಾ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಕೊಡುಗೆ ನೀಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.

ಝೆಕ್ ಗಣರಾಜ್ಯದ ಉಪಪ್ರಧಾನಿ ಕಾರೆಲ್ ಹಾವ್ಲಿಕ್ ನೇತೃತ್ವದ ನಿಯೋಗವು ಬುಧವಾರ ವಿಧಾನಸೌಧದಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ಕರ್ನಾಟಕ ಮತ್ತು ಝೆಕ್ ಗಣರಾಜ್ಯದ ನಡುವಿನ ವ್ಯಾಪಾರ, ಹೂಡಿಕೆ ಹಾಗೂ ತಂತ್ರಜ್ಞಾನ ಸಹಕಾರದ ಕುರಿತು ಚರ್ಚಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಿವಕುಮಾರ್, ಕೃಷಿ, ಅರಣ್ಯ, ತೋಟಗಾರಿಕೆ, ಪುಷ್ಪಕೃಷಿ, ಉತ್ಪಾದನೆ ಮತ್ತು ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕರ್ನಾಟಕ ಗಮನಾರ್ಹ ಸಾಮರ್ಥ್ಯ ಹೊಂದಿದೆ. ಝೆಕ್ ಕಂಪನಿಗಳು ರಾಜ್ಯವನ್ನು ದೀರ್ಘಾವಧಿಯ ಹೂಡಿಕೆ ಪಾಲುದಾರನಾಗಿ ಪರಿಗಣಿಸಬೇಕು ಎಂದು ಹೇಳಿದರು.

ಕರ್ನಾಟಕವು ಪ್ರಮುಖ ಸೌರ ವಿದ್ಯುತ್ ಯೋಜನೆಗಳು ಮತ್ತು ಜಲವಿದ್ಯುತ್ ಸ್ಥಾವರಗಳನ್ನು ಹೊಂದಿದ್ದು, ಹೆಚ್ಚುತ್ತಿರುವ ಇಂಧನ ಬೇಡಿಕೆಗೆ ಅನುಗುಣವಾಗಿ ಈ ಕ್ಷೇತ್ರದಲ್ಲಿ ಹೂಡಿಕೆಗೆ ಸಾಕಷ್ಟು ಅವಕಾಶಗಳಿವೆ. ನವೀಕರಿಸಬಹುದಾದ ಇಂಧನ, ವಿದ್ಯುತ್ ಉತ್ಪಾದನೆ ಮತ್ತು ಆಧುನಿಕ ಇಂಧನ ತಂತ್ರಜ್ಞಾನಗಳಲ್ಲಿ ಝೆಕ್ ಕಂಪನಿಗಳು ಹೂಡಿಕೆ ಮಾಡಲು ಮುಂದೆ ಬರಬೇಕು ಎಂದು ಆಹ್ವಾನಿಸಿದರು.

ವಾಹನ ಬಿಡಿಭಾಗಗಳ ಉತ್ಪಾದನೆ, ವಿದ್ಯುತ್ ವಾಹನಗಳು (EV), ಮುಂದಿನ ಪೀಳಿಗೆಯ ಸಾರಿಗೆ ತಂತ್ರಜ್ಞಾನ, ನಿಖರ ಎಂಜಿನಿಯರಿಂಗ್ ಹಾಗೂ ವಿಶೇಷ ಯಂತ್ರೋಪಕರಣಗಳ ತಯಾರಿಕೆಯಲ್ಲಿ ಎರಡೂ ಕಡೆಯ ಉದ್ಯಮಗಳು ಸಹಕರಿಸಬಹುದು ಎಂದು ಶಿವಕುಮಾರ್ ತಿಳಿಸಿದರು.

ವೈಮಾಂತರಿಕ್ಷ, ಬಾಹ್ಯಾಕಾಶ, ರಕ್ಷಣಾ ಉತ್ಪಾದನೆ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳಲ್ಲಿಯೂ ಹೂಡಿಕೆ ಹಾಗೂ ತಂತ್ರಜ್ಞಾನ ವಿನಿಮಯಕ್ಕೆ ಅವಕಾಶಗಳಿವೆ. ಝೆಕ್ ಗಣರಾಜ್ಯದ ತಾಂತ್ರಿಕ ಪರಿಣತಿಯನ್ನು ಕರ್ನಾಟಕದ ಕೈಗಾರಿಕಾ ಸಾಮರ್ಥ್ಯದೊಂದಿಗೆ ಸಂಯೋಜಿಸುವುದರಿಂದ ಹೊಸ ಉದ್ಯಮಾವಕಾಶಗಳು ಸೃಷ್ಟಿಯಾಗಲಿವೆ ಎಂದರು.

ಇನ್ವೆಸ್ಟ್ ಕರ್ನಾಟಕ, ಕರ್ನಾಟಕ ಉದ್ಯೋಗ ಮಿತ್ರ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಮತ್ತು ಏಕಗವಾಕ್ಷಿ ವ್ಯವಸ್ಥೆಯ ಮೂಲಕ ಹೂಡಿಕೆದಾರರಿಗೆ ಅಗತ್ಯ ಮಾರ್ಗದರ್ಶನ ಹಾಗೂ ಅನುಮೋದನೆಗಳ ಪ್ರಕ್ರಿಯೆಯಲ್ಲಿ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.

ಹೊಸ ತಂತ್ರಜ್ಞಾನವನ್ನು ರಾಜ್ಯಕ್ಕೆ ತರುವುದು, ಸ್ಥಳೀಯ ಕೈಗಾರಿಕೆಗಳನ್ನು ಬಲಪಡಿಸುವುದು, ಗುಣಮಟ್ಟದ ಉದ್ಯೋಗ ಸೃಷ್ಟಿಸುವುದು ಮತ್ತು ರಫ್ತು ವಹಿವಾಟು ಹೆಚ್ಚಿಸುವುದು ಸರ್ಕಾರದ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಝೆಕ್ ಉದ್ಯಮಗಳು ಕರ್ನಾಟಕದೊಂದಿಗೆ ದೀರ್ಘಾವಧಿಯ ಪಾಲುದಾರಿಕೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಬೆಂಗಳೂರು ಭಾರತದ ಪ್ರಮುಖ ತಂತ್ರಜ್ಞಾನ, ಸಂಶೋಧನೆ ಮತ್ತು ಉದ್ಯಮಶೀಲತಾ ಕೇಂದ್ರವಾಗಿದ್ದು, ನುರಿತ ಎಂಜಿನಿಯರ್‌ಗಳು, ಸಂಶೋಧನಾ ಸಂಸ್ಥೆಗಳು ಹಾಗೂ ನವೋದ್ಯಮಗಳ ವ್ಯವಸ್ಥೆಯನ್ನು ಹೊಂದಿದೆ. ನಿಖರ ಎಂಜಿನಿಯರಿಂಗ್, ಯಂತ್ರೋಪಕರಣಗಳು, ವಾಹನ ಬಿಡಿಭಾಗಗಳು ಮತ್ತು ಕೈಗಾರಿಕಾ ತಂತ್ರಜ್ಞಾನಗಳಲ್ಲಿ ಝೆಕ್ ಗಣರಾಜ್ಯದ ಪರಿಣತಿ ಕರ್ನಾಟಕದ ಉತ್ಪಾದನೆ, ವೈಮಾಂತರಿಕ್ಷ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳಿಗೆ ಪೂರಕವಾಗಲಿದೆ ಎಂದು ಶಿವಕುಮಾರ್ ಹೇಳಿದರು.

ಝೆಕ್ ಗಣರಾಜ್ಯದ ತಾಂತ್ರಿಕ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳು ಕರ್ನಾಟಕದ ವಿಶ್ವವಿದ್ಯಾಲಯಗಳು ಹಾಗೂ ಕೈಗಾರಿಕೆಗಳೊಂದಿಗೆ ಸಹಭಾಗಿತ್ವ ಬೆಳೆಸುವ ಮೂಲಕ ಅನ್ವಯಿಕ ಸಂಶೋಧನೆ, ಕೌಶಲ್ಯಾಭಿವೃದ್ಧಿ ಮತ್ತು ಹೊಸ ತಂತ್ರಜ್ಞಾನಗಳ ಬಳಕೆಗೆ ಉತ್ತೇಜನ ನೀಡಬಹುದು ಎಂದರು.

ಭಾರತ ಮತ್ತು ಝೆಕ್ ಗಣರಾಜ್ಯವು ಜನವರಿ 2024ರಲ್ಲಿ ನಾವೀನ್ಯತೆ ಕ್ಷೇತ್ರದಲ್ಲಿ ಕಾರ್ಯತಂತ್ರದ ಪಾಲುದಾರಿಕೆಗೆ ಒಪ್ಪಿಕೊಂಡಿದ್ದು, ಸಂಶೋಧನೆ, ಉದಯೋನ್ಮುಖ ತಂತ್ರಜ್ಞಾನ ಮತ್ತು ನವೋದ್ಯಮಗಳ ಸಹಕಾರ ವಿಸ್ತರಣೆಗೆ ಇದು ನೆರವಾಗಲಿದೆ ಎಂದು ತಿಳಿಸಿದರು.

ಸ್ಕೋಡಾ, ಬಾಟಾ ಸೇರಿದಂತೆ ಝೆಕ್ ಕಂಪನಿಗಳ ಅನುಭವವನ್ನು ಕರ್ನಾಟಕದ ಕೈಗಾರಿಕಾ ಬೆಳವಣಿಗೆಗೆ ಬಳಸಿಕೊಳ್ಳುವ ಸಾಧ್ಯತೆಗಳನ್ನು ಪರಿಶೀಲಿಸಬೇಕು ಎಂದು ಶಿವಕುಮಾರ್ ಹೇಳಿದರು. ಸ್ಕೋಡಾ ಆಟೋ ಮತ್ತು ಡೂಸನ್ ಸ್ಕೋಡಾ ಪವರ್‌ನಂತಹ ಕಂಪನಿಗಳೊಂದಿಗೆ ಉತ್ಪಾದನೆ, ಎಂಜಿನಿಯರಿಂಗ್, ಬಿಡಿಭಾಗಗಳ ಪೂರೈಕೆ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಸಹಕಾರಕ್ಕೆ ಅವಕಾಶಗಳಿವೆ ಎಂದರು.

ರೈಲ್ವೆ ಬಿಡಿಭಾಗಗಳ ಕ್ಷೇತ್ರದಲ್ಲಿ ಟಾಟಾ ಆಟೋಕಾಂಪ್–ಸ್ಕೋಡಾ ಗ್ರೂಪ್ ಪಾಲುದಾರಿಕೆಯ ಮಾದರಿಯಲ್ಲಿ ಕರ್ನಾಟಕದ ಸ್ಥಳೀಯ ಕಂಪನಿಗಳೊಂದಿಗೂ ಸಹಭಾಗಿತ್ವ ರೂಪಿಸಬಹುದು ಎಂದು ಸಲಹೆ ನೀಡಿದರು.

ವಿದೇಶಿ ಹೂಡಿಕೆಗಳು ಬೆಂಗಳೂರಿನಾಚೆಗೂ ವಿಸ್ತರಿಸಿದರೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚುವುದರ ಜತೆಗೆ ಸ್ಥಳೀಯ ಕೈಗಾರಿಕೆಗಳ ಬೆಳವಣಿಗೆಗೂ ಉತ್ತೇಜನ ದೊರೆಯಲಿದೆ. ಕರ್ನಾಟಕ ಮತ್ತು ಝೆಕ್ ಗಣರಾಜ್ಯದ ನಡುವಿನ ಸಂಬಂಧವನ್ನು ವ್ಯಾಪಾರಕ್ಕೆ ಸೀಮಿತಗೊಳಿಸದೆ ತಂತ್ರಜ್ಞಾನ, ಸಂಶೋಧನೆ, ಶಿಕ್ಷಣ ಮತ್ತು ಕೈಗಾರಿಕಾ ಸಹಕಾರದ ಮೂಲಕ ದೀರ್ಘಾವಧಿಯ ಪಾಲುದಾರಿಕೆಯಾಗಿ ಬೆಳೆಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಸಂಸದ ಹಾಗೂ ಮುಖ್ಯಮಂತ್ರಿ ಅವರ ಮುಖ್ಯ ಸಲಹೆಗಾರ ಡಾ. ಜಿ.ಸಿ. ಚಂದ್ರಶೇಖರ್, ಝೆಕ್ ಗಣರಾಜ್ಯದ ವಿದೇಶಾಂಗ ಸಚಿವೆ ಮರಿಯಾ ಚಟರ್ಡೋವ ಸೇರಿದಂತೆ ನಿಯೋಗದ ಪ್ರತಿನಿಧಿಗಳಾದ ಮಾರೆಟ್ ಲಿಬ್ರರ್ಕಿ, ಕ್ಯಾತರಿನ ಗಜುರ್ನೋವಾ, ರಿಚರ್ಡ್ ಲಾವರ್ಟಿ, ಮಿರೋಸ್ಲಾವ್ ಒಕ್ರೂಲಿ, ಕ್ಯಾತರಿನ ಪೀಟರ್ಸನ್, ಕ್ಯಾತರಿನ ವವ್ಕೊವಾ, ಜನ್ ರಾಫಾಜ್, ಗುನ್ನತ್ ಚೌಧರಿ ಹಾಗೂ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಮತ್ತಿತರರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಜನರ ಪ್ರೀತಿ, ಸಮಾಜದ ವಿಶ್ವಾಸವೇ ಯುವ ನಾಯಕತ್ವಕ್ಕೆ ಆನೆಬಲ!: ಸಂತೋಷ್ ಬಳ್ಳೇಕೆರೆ ಅವರ ಜನ್ಮದಿನದ ಅಂಗವಾಗಿ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಯುವ ಘಟಕದಿಂದ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಪೂಜೆ

ಯೋಗದ ಮೂಲಕ ಆರೋಗ್ಯ ಕ್ರಾಂತಿಗೆ ಶಿವಮೊಗ್ಗ ಸಜ್ಜು! ಮೆಗಾ ಯೋಗ ದಸರಾ–2026: 3,000ಕ್ಕೂ ಹೆಚ್ಚು ಜನರ ಸಾಮೂಹಿಕ ಯೋಗಾಭ್ಯಾಸಕ್ಕೆ ಸಿದ್ಧತೆ: ವಿಶ್ವದಾಖಲೆಯ ಗುರಿಯತ್ತ ಮಹತ್ವದ ಹೆಜ್ಜೆ

ಶಿವಮೊಗ್ಗದ ಜೆ.ಎನ್.ಎನ್.ಸಿ.ಇ.ಯಲ್ಲಿ ಸಂಪ್ರದಾಯದ ಸೊಬಗು: ‘ಎಂಸಿಎ ದಸರಾ’ ಸಂಭ್ರಮಕ್ಕೆ ಚಾಲನೆ

ಶಿವಮೊಗ್ಗ–ಶಿಕಾರಿಪುರ ರೈಲು ಮಾರ್ಗದ ಗುತ್ತಿಗೆ ರದ್ದು: ಎರಡು ತಿಂಗಳಲ್ಲಿ ಹೊಸ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮ: ಶಿವಮೊಗ್ಗದ ಸಮಗ್ರ ರೈಲ್ವೆ ಅಭಿವೃದ್ಧಿಗೆ ಕೇಂದ್ರದ ಬದ್ಧತೆ: ರೈಲ್ವೆ ಸಚಿವ ವಿ. ಸೋಮಣ್ಣ

‘ವಂದೇ ಮಾತರಂ’ ಗೀತೆಗೆ ನಿರ್ಬಂಧ ಹೇರುವ ಪ್ರಯತ್ನ ಖಂಡನೀಯ: ಸಂಪೂರ್ಣ ಗೀತೆಯ ಗಾಯನಕ್ಕೆ ಕಾಂಗ್ರೆಸ್ ನಾಯಕರ ಆಕ್ಷೇಪ: ಬಿಜೆಪಿ ನಗರಾಧ್ಯಕ್ಷ ಮೋಹನ್ ರೆಡ್ಡಿ ತಿರುಗೇಟು

ಮೈಸೂರು ದಸರಾ ನಾಡಿನ ಸಂಸ್ಕೃತಿ, ಸಮಾನತೆ ಮತ್ತು ಮಾನವೀಯತೆಯ ಪ್ರತೀಕ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

Leave a Comment