ಒಂದು ಲಕ್ಷ ಆಸ್ತಿದಾರರಿಗೆ ಭೂ ಗ್ಯಾರಂಟಿ ಭಾಗ್ಯ – ಡಿಸೆಂಬರ್ 17ರೊಳಗೆ ಅರ್ಜಿ ಸಲ್ಲಿಸಲು ಅವಕಾಶ; ಭೂಮಿ ನೀಡಿದ ರೈತರಿಗೆ ಪ್ರೋತ್ಸಾಹಕ ನಿವೇಶನ, ಅಂಚಿನ ಜಾಗ ಹಂಚಿಕೆಗೂ ನಿರ್ಧಾರ
ಬೆಂಗಳೂರು, ನ.09: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವ್ಯಾಪ್ತಿಯಲ್ಲಿ 2008ರ ಜುಲೈ 10ಕ್ಕೂ ಮೊದಲು ನಿರ್ಮಿಸಲಾಗಿರುವ ಅನಧಿಕೃತ ಕಟ್ಟಡಗಳನ್ನು ಸಕ್ರಮಗೊಳಿಸುವ ಪ್ರಕ್ರಿಯೆಗೆ ವೇಗ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಹಿಂದೆ ನಿಗದಿಪಡಿಸಿದ್ದ ಸಕ್ರಮ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲು ತೀರ್ಮಾನಿಸಲಾಗಿದ್ದು, ಇದರಿಂದ ಸುಮಾರು ಒಂದು ಲಕ್ಷ ಆಸ್ತಿದಾರರಿಗೆ ತಮ್ಮ ಆಸ್ತಿಯ ಹಕ್ಕು ಪಡೆಯಲು ಅವಕಾಶ ದೊರೆಯಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಘೋಷಿಸಿದ್ದಾರೆ.
ಬಿಡಿಎಯ 50ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಅಭಿವೃದ್ಧಿ, ಆಸ್ತಿ ದಾಖಲೆಗಳ ಸಮಸ್ಯೆ ಪರಿಹಾರ, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರೈತರಿಗೆ ನ್ಯಾಯಯುತ ಪ್ರೋತ್ಸಾಹ, ಸಾರ್ವಜನಿಕರಿಗೆ ಶುದ್ಧ ಕ್ರಯಪತ್ರ ವಿತರಣೆ ಹಾಗೂ ಪ್ರಾಧಿಕಾರದ ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಹಲವು ಹೊಸ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸೋಮವಾರ ಬಿಡಿಎ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅನಧಿಕೃತ ಕಟ್ಟಡಗಳ ಸಕ್ರಮೀಕರಣ, ಭೂ ಗ್ಯಾರಂಟಿ, ಅಂಚಿನ ಜಾಗ ಹಂಚಿಕೆ, ಶುದ್ಧ ಕ್ರಯಪತ್ರ ಮೇಳ ಸೇರಿದಂತೆ ಹಲವು ಮಹತ್ವದ ನಿರ್ಧಾರಗಳ ಕುರಿತು ಮಾಹಿತಿ ನೀಡಿದರು.

ಒಂದು ಲಕ್ಷ ಆಸ್ತಿದಾರರಿಗೆ ಭೂ ಗ್ಯಾರಂಟಿ
ಬಿಡಿಎ ಭೂಸ್ವಾಧೀನಪಡಿಸಿಕೊಂಡಿರುವ ಜಮೀನುಗಳಲ್ಲಿ 2008ರ ಜುಲೈ 10ಕ್ಕೂ ಮೊದಲು ನಿರ್ಮಿಸಿರುವ ಅನಧಿಕೃತ ಕಟ್ಟಡಗಳನ್ನು ಸಕ್ರಮಗೊಳಿಸಲು ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ಈ ಹಿಂದೆ ನಿಗದಿಪಡಿಸಿದ್ದ ಸಕ್ರಮ ಶುಲ್ಕವನ್ನು ಶೇ.50ರಷ್ಟು ಕಡಿತಗೊಳಿಸಿ, ಆಸ್ತಿದಾರರಿಗೆ ಮತ್ತೊಂದು ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಸುಮಾರು ಒಂದು ಲಕ್ಷ ಆಸ್ತಿದಾರರಿಗೆ ಆಸ್ತಿ ಹಕ್ಕು ದೊರಕಿಸಿಕೊಡುವ ಉದ್ದೇಶದಿಂದ ಹಿಂದಿನ ಸರ್ಕಾರ ಈ ಸಂಬಂಧ ಅವಕಾಶ ಕಲ್ಪಿಸಿತ್ತು. 2021ರಲ್ಲಿ ಸಕ್ರಮೀಕರಣಕ್ಕೆ ದರ ನಿಗದಿಪಡಿಸಲಾಗಿತ್ತು. ಆದರೆ, ಶುಲ್ಕ ಹೆಚ್ಚಾಗಿದೆ ಎಂಬ ಕಾರಣಕ್ಕೆ ಕೇವಲ 600 ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಸಾರ್ವಜನಿಕರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈಗ ಶುಲ್ಕವನ್ನು ಶೇ.50ರಷ್ಟು ಇಳಿಸಿ ಮತ್ತೊಮ್ಮೆ ಅವಕಾಶ ನೀಡಲಾಗಿದೆ ಎಂದು ವಿವರಿಸಿದರು.
ಈ ಸೌಲಭ್ಯವು ಕಲಂ 38(ಡಿ)ಗೆ ಮಾಡಿರುವ ತಿದ್ದುಪಡಿಯ ಅನ್ವಯ ಜಾರಿಗೆ ಬಂದಿದ್ದು, ಅರ್ಹ ಆಸ್ತಿದಾರರು ಅಗತ್ಯ ದಾಖಲೆಗಳೊಂದಿಗೆ 2026ರ ಡಿಸೆಂಬರ್ 17ರೊಳಗೆ ಅರ್ಜಿ ಸಲ್ಲಿಸಬೇಕು. ನಿಗದಿತ ಅವಧಿಯಲ್ಲಿ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಬೇಕು. ಈ ಅವಕಾಶವನ್ನು ಬಳಸಿಕೊಳ್ಳದೆ ಎರಡು ವರ್ಷಗಳ ಅವಧಿಯೊಳಗೆ ಸಕ್ರಮ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ, ಪ್ರಾಧಿಕಾರದ ಭೂಮಿಯಲ್ಲಿರುವ ಅಂತಹ ಕಟ್ಟಡಗಳನ್ನು ತೆರವುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಿವೇಶನದ ಅಳತೆಗೆ ಅನುಗುಣವಾಗಿ ಸಕ್ರಮ ಶುಲ್ಕ ನಿಗದಿ
ಅನಧಿಕೃತ ಕಟ್ಟಡಗಳ ಸಕ್ರಮೀಕರಣಕ್ಕೆ ನಿವೇಶನದ ವಿಸ್ತೀರ್ಣಕ್ಕೆ ಅನುಗುಣವಾಗಿ ಮಾರ್ಗಸೂಚಿ ಮೌಲ್ಯದ ಆಧಾರದಲ್ಲಿ ಶುಲ್ಕ ನಿಗದಿಪಡಿಸಲಾಗಿದೆ. ಮೂಲೆ ನಿವೇಶನಗಳನ್ನು ಹೊರತುಪಡಿಸಿ ಉಳಿದ ನಿವೇಶನಗಳಿಗೆ ಈ ಕೆಳಗಿನಂತೆ ದರ ನಿಗದಿಪಡಿಸಲಾಗಿದೆ.
- 20×30 ಅಡಿ ವಿಸ್ತೀರ್ಣದವರೆಗೆ: ಪ್ರಸ್ತುತ ಮಾರ್ಗಸೂಚಿ ಮೌಲ್ಯದ ಶೇ.5ರಷ್ಟು.
- 20×30 ಅಡಿಗಿಂತ ಹೆಚ್ಚು ಹಾಗೂ 30×40 ಅಡಿವರೆಗೆ: ಶೇ.12.5ರಷ್ಟು.
- 30×40 ಅಡಿಗಿಂತ ಹೆಚ್ಚು ಹಾಗೂ 40×60 ಅಡಿವರೆಗೆ: ಶೇ.20ರಷ್ಟು.
- 40×60 ಅಡಿಗಿಂತ ಹೆಚ್ಚು ಹಾಗೂ 50×80 ಅಡಿವರೆಗೆ: ಶೇ.25ರಷ್ಟು.
ಈ ದರಗಳು ಹಿಂದಿನ ಸರ್ಕಾರ ನಿಗದಿಪಡಿಸಿದ್ದ ಶುಲ್ಕಕ್ಕಿಂತ ಶೇ.50ರಷ್ಟು ಕಡಿಮೆಯಾಗಿವೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಆಸ್ತಿಯ ಹಕ್ಕುಗಳನ್ನು ಕಾನೂನುಬದ್ಧವಾಗಿ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಭೂಮಿ ನೀಡಿದ ರೈತರಿಗೆ ಪ್ರೋತ್ಸಾಹಕ ನಿವೇಶನ
ಬಿಡಿಎ ಬಡಾವಣೆಗಳ ನಿರ್ಮಾಣಕ್ಕಾಗಿ ರೈತರಿಂದ ಭೂಮಿ ಸ್ವಾಧೀನಪಡಿಸಿಕೊಳ್ಳುವ ಸಂದರ್ಭದಲ್ಲಿ ವ್ಯಾಜ್ಯವಿಲ್ಲದೆ ಸ್ವಯಂಪ್ರೇರಣೆಯಿಂದ ಜಮೀನು ಬಿಟ್ಟುಕೊಟ್ಟವರಿಗೆ ಪ್ರೋತ್ಸಾಹಕವಾಗಿ ನಿವೇಶನ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಸಿಎಂ ತಿಳಿಸಿದರು.
ಕೆಂಪೇಗೌಡ ಬಡಾವಣೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಪ್ರಾಧಿಕಾರಕ್ಕೆ ಜಮೀನು ನೀಡಿದ ರೈತರಿಗೆ ಒಂದು ಎಕರೆ ಜಮೀನಿಗೆ 30×40 ಅಳತೆಯ ನಿವೇಶನ ನೀಡುವ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗಿದೆ. ಈ ವಿಶೇಷ ಪ್ರೋತ್ಸಾಹಕ ನಿವೇಶನ ನೀಡುವ ಕಾರ್ಯ 2014ರಿಂದ ಬಾಕಿ ಉಳಿದಿತ್ತು. 1989ರ ಕಾನೂನಿನ ಪ್ರಕಾರ ಇದಕ್ಕಾಗಿ ಅರ್ಜಿ ಸಲ್ಲಿಸಬೇಕಾಗಿದ್ದು, ನಿವೇಶನಕ್ಕೆ ಸೂಕ್ತ ಬೆಲೆ ನಿಗದಿಪಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರೈತರು ನೀಡಿರುವ ಜಮೀನಿನ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಬಡಾವಣೆಯಲ್ಲಿ ‘ವಾಲ್ ಆಫ್ ಗ್ರಾಟಿಟ್ಯೂಡ್’ ನಿರ್ಮಿಸಲಾಗಿದೆ. ರೈತರ ಕೊಡುಗೆಯನ್ನು ಗೌರವಿಸುವ ಈ ಪ್ರಯತ್ನ ದೇಶದ ಇತಿಹಾಸದಲ್ಲೇ ಮೊದಲನೆಯದು ಎಂದು ಅವರು ತಿಳಿಸಿದರು.
ಶಿವರಾಮ ಕಾರಂತ ಬಡಾವಣೆಯಲ್ಲಿ ಜಮೀನು ನೀಡಿದ ರೈತರಿಗೆ ಒಂದೇ ದಿನದಲ್ಲಿ ಪಾರದರ್ಶಕವಾಗಿ ನಿವೇಶನ ಮಂಜೂರಾತಿ ಮಾಡಿರುವುದು ಬಿಡಿಎ ಇತಿಹಾಸದಲ್ಲೇ ಮೊದಲ ಬಾರಿಯಾಗಿದೆ ಎಂದು ವಿವರಿಸಿದರು.
ಅಂಚಿನ ಜಾಗಗಳ ಹಂಚಿಕೆಗೂ ಅವಕಾಶ
ಬಿಡಿಎಯಿಂದ ಈಗಾಗಲೇ ನಿವೇಶನಗಳನ್ನು ಹಂಚಿಕೆ ಮಾಡಿರುವ ಬಡಾವಣೆಗಳಲ್ಲಿ ನಿವೇಶನಗಳ ಹಿಂಭಾಗ ಹಾಗೂ ಅಕ್ಕಪಕ್ಕದಲ್ಲಿ ಪ್ರಾಧಿಕಾರಕ್ಕೆ ಸೇರಿದ ಅಂಚಿನ ಜಾಗಗಳು (Marginal Land) ಲಭ್ಯವಿದ್ದರೆ, ಅವುಗಳನ್ನು ಹಂಚಿಕೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.
ಈ ರೀತಿಯ ಅಂಚಿನ ಜಾಗಗಳನ್ನು ಖರೀದಿಸಲು ಆಸಕ್ತಿ ಹೊಂದಿರುವ ಸಂಬಂಧಪಟ್ಟ ನಿವೇಶನ ಹಂಚಿಕೆದಾರರು 2026ರ ಡಿಸೆಂಬರ್ 17ರೊಳಗೆ ಅರ್ಜಿ ಸಲ್ಲಿಸಬಹುದು. 600 ಚದರ ಅಡಿವರೆಗಿನ ಅಂಚಿನ ಜಾಗಗಳನ್ನು ಹಂಚಿಕೆ ಮಾಡಲು ಕಾಯ್ದೆಯಲ್ಲಿ ಅವಕಾಶವಿದ್ದು, ಅರ್ಹರು ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಮುಖ್ಯಮಂತ್ರಿ ಮನವಿ ಮಾಡಿದರು.
ಇದರಿಂದ ಈಗಾಗಲೇ ನಿವೇಶನ ಹೊಂದಿರುವವರು ತಮ್ಮ ನಿವೇಶನದ ಪಕ್ಕದಲ್ಲಿರುವ ಪ್ರಾಧಿಕಾರದ ಜಾಗವನ್ನು ನಿಯಮಾನುಸಾರ ಪಡೆಯಲು ಅವಕಾಶ ಸಿಗಲಿದೆ.
20 ಸಾವಿರ ಆಸ್ತಿದಾರರಿಗೆ ಶುದ್ಧ ಕ್ರಯಪತ್ರ ಮೇಳ
ಬಿಡಿಎಯಿಂದ ನಿವೇಶನ ಹಂಚಿಕೆ ಪಡೆದು, ಗುತ್ತಿಗೆ ಅವಧಿ ಪೂರ್ಣಗೊಂಡಿದ್ದರೂ ವಿವಿಧ ಕಾರಣಗಳಿಂದ ಶುದ್ಧ ಕ್ರಯಪತ್ರ (Absolute Sale Deed) ಮಾಡಿಸಿಕೊಳ್ಳದಿರುವ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ವಿಶೇಷ ಶುದ್ಧ ಕ್ರಯಪತ್ರ ಮೇಳ ಆಯೋಜಿಸಲಾಗುತ್ತಿದೆ ಎಂದು ಸಿಎಂ ತಿಳಿಸಿದರು.
ಸಾಮಾನ್ಯವಾಗಿ ಬಿಡಿಎ ನಿವೇಶನಗಳನ್ನು ಹಂಚಿಕೆ ಮಾಡುವಾಗ 10 ವರ್ಷಗಳ ಗುತ್ತಿಗೆ ಅವಧಿ ನಿಗದಿಪಡಿಸಲಾಗುತ್ತದೆ. ಈ ಅವಧಿ ಮುಗಿದ ಬಳಿಕ ಹಂಚಿಕೆದಾರರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಶುದ್ಧ ಕ್ರಯಪತ್ರ ನೋಂದಣಿ ಮಾಡಿಸಿಕೊಳ್ಳಬೇಕು. ಆದರೆ, ಹಲವು ಕಾರಣಗಳಿಂದ ಸುಮಾರು 20 ಸಾವಿರ ನಿವೇಶನ ಹಂಚಿಕೆದಾರರು ಈ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ.
ಇಂತಹ ಸಾರ್ವಜನಿಕರ ಸಮಸ್ಯೆ ಪರಿಹರಿಸುವ ಉದ್ದೇಶದಿಂದ ವಿಶೇಷ ಮೇಳ ಆಯೋಜಿಸಲಾಗುತ್ತಿದೆ. ಸಂಬಂಧಪಟ್ಟ ನಿವೇಶನದ ಅಗತ್ಯ ದಾಖಲೆಗಳೊಂದಿಗೆ 2026ರ ಡಿಸೆಂಬರ್ 17ರೊಳಗೆ ಅರ್ಜಿ ಸಲ್ಲಿಸಿದರೆ, ಅರ್ಜಿ ಸ್ವೀಕರಿಸಿದ 60 ದಿನಗಳೊಳಗೆ ನಿಯಮಾನುಸಾರ ಶುದ್ಧ ಕ್ರಯಪತ್ರ ನೋಂದಾಯಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಮೂಲಕ ಹಲವು ವರ್ಷಗಳಿಂದ ಆಸ್ತಿ ದಾಖಲೆಗಳನ್ನು ಪೂರ್ಣಗೊಳಿಸಿಕೊಳ್ಳಲು ಕಾಯುತ್ತಿದ್ದ ಸಾವಿರಾರು ಹಂಚಿಕೆದಾರರಿಗೆ ಅನುಕೂಲವಾಗಲಿದೆ.
ಬಿಡಿಎಗೆ 1 ಲಕ್ಷ ಚದರ ಅಡಿ ವಿಸ್ತೀರ್ಣದ ಸುಸಜ್ಜಿತ ಕಟ್ಟಡ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ 50ನೇ ವರ್ಷಾಚರಣೆಯ ಸ್ಮರಣಾರ್ಥವಾಗಿ ಒಂದು ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಸುಸಜ್ಜಿತ ಬಹುಪಯೋಗಿ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಪ್ರಾಧಿಕಾರದ ಆಡಳಿತಾತ್ಮಕ ಕಾರ್ಯಚಟುವಟಿಕೆಗಳು, ಸಾರ್ವಜನಿಕ ಸೇವೆಗಳು ಹಾಗೂ ವಿವಿಧ ವಿಭಾಗಗಳ ಕಾರ್ಯನಿರ್ವಹಣೆಗೆ ಅನುಕೂಲವಾಗುವಂತೆ ಕಟ್ಟಡ ನಿರ್ಮಿಸುವ ಉದ್ದೇಶವಿದೆ. ಬಿಡಿಎಯ ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು.
‘ಕ್ಲೀನ್ ಬಿಡಿಎ’ ಮೂಲಕ ಪಾರದರ್ಶಕ ಆಡಳಿತದ ಗುರಿ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಡಳಿತದಲ್ಲಿ ಪಾರದರ್ಶಕತೆ, ಸಾರ್ವಜನಿಕರಿಗೆ ಸುಲಭವಾಗಿ ಸೇವೆ ಲಭ್ಯವಾಗುವ ವ್ಯವಸ್ಥೆ ಹಾಗೂ ಆಸ್ತಿ ಸಂಬಂಧಿತ ಸಮಸ್ಯೆಗಳಿಗೆ ಕಾಲಮಿತಿಯೊಳಗೆ ಪರಿಹಾರ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ‘ಕ್ಲೀನ್ ಬಿಡಿಎ’ ಪರಿಕಲ್ಪನೆಯಡಿ ಬೆಂಗಳೂರಿನ ನಾಗರಿಕರಿಗೆ ಪರಿಶುದ್ಧ ಆಡಳಿತದ ಭರವಸೆ ನೀಡಲಾಗುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಅನಧಿಕೃತ ಕಟ್ಟಡಗಳ ಸಕ್ರಮೀಕರಣಕ್ಕೆ ಶುಲ್ಕ ಕಡಿತ, ಭೂಮಿ ನೀಡಿದ ರೈತರಿಗೆ ಪ್ರೋತ್ಸಾಹಕ ನಿವೇಶನ, ಅಂಚಿನ ಜಾಗಗಳ ಹಂಚಿಕೆ ಹಾಗೂ ಶುದ್ಧ ಕ್ರಯಪತ್ರ ಮೇಳದಂತಹ ಕ್ರಮಗಳು ಸಾರ್ವಜನಿಕರ ಆಸ್ತಿ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುವ ಗುರಿ ಹೊಂದಿವೆ. ಅರ್ಹ ಫಲಾನುಭವಿಗಳು ನಿಗದಿತ ಕಾಲಮಿತಿಯೊಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.





