ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ದೀಪದ ಬೆಳಕಿನಲ್ಲಿ ಮಲೆನಾಡಿನ ಜಾನಪದ ಕಲೆಯ ಸೊಬಗು; ಮನೆ-ಮನಗಳಲ್ಲಿ ಅಂಟಿಗೆ ಪಿಂಟಿಗೆ ಸಂಭ್ರಮದ ಕಂಪು!

On: November 9, 2026 11:47 AM
Follow Us:

ಶಿವಮೊಗ್ಗ: ಒಂದೆಡೆ ಸಾಲು ಸಾಲಾಗಿ ಹೊಳೆಯುವ ಹಣತೆಗಳು, ಮತ್ತೊಂದೆಡೆ ಮನೆಗಳ ಅಂಗಳದಲ್ಲಿ ರಂಗು ತುಂಬಿದ ರಂಗೋಲಿಗಳು, ಎಲ್ಲೆಡೆ ಪಟಾಕಿಗಳ ಸದ್ದು, ದೀಪಗಳ ಬೆಳಕಿನ ನಡುವೆ ಹಬ್ಬದ ಸಂಭ್ರಮ. ಇಂತಹ ದೀಪಾವಳಿಯ ಸಡಗರಕ್ಕೆ ಮಲೆನಾಡಿನ ಮಣ್ಣಿನ ಘಮಲು, ಜಾನಪದ ಪರಂಪರೆಯ ಇಂಪು ಹಾಗೂ ಸಂಸ್ಕೃತಿಯ ಶ್ರೀಮಂತಿಕೆಯನ್ನು ಬೆರೆಸಿದ ಅಪರೂಪದ ಕಲೆಯೊಂದು ಶಿವಮೊಗ್ಗದ ಮನೆಮನೆಗಳಲ್ಲಿ ಸಂಭ್ರಮದ ಬೆಳಕು ಚೆಲ್ಲಿತು. ತಲೆಮಾರುಗಳಿಂದ ಮಲೆನಾಡಿನ ಜನಜೀವನದೊಂದಿಗೆ ಬೆಸೆದುಕೊಂಡಿರುವ ಅಂಟಿಗೆ ಪಿಂಟಿಗೆಯ ಜಾನಪದ ಗಾಯನ, ದೀಪದ ಜ್ಯೋತಿಯೊಂದಿಗೆ ಬೀದಿಬೀದಿಗಳಲ್ಲಿ ಸಂಚರಿಸಿ, ಮನೆಗಳ ಹೊಸ್ತಿಲಲ್ಲಿ ನಿಂತು ಶುಭ ಹಾರೈಸಿದ ಕ್ಷಣಗಳು ನೋಡುಗರ ಮನಸ್ಸಿನಲ್ಲಿ ಸಂಸ್ಕೃತಿಯ ಸವಿನೆನಪನ್ನು ಮೂಡಿಸಿದವು. ಆಧುನಿಕತೆಯ ಭರಾಟೆಯಲ್ಲಿಯೂ ಮಣ್ಣಿನ ಸೊಗಡಿನ ಸಂಪ್ರದಾಯವನ್ನು ಜೀವಂತವಾಗಿರಿಸಿದ ಅಂಟಿಗೆ ಪಿಂಟಿಗೆ ಕಲಾವಿದರ ಹೆಜ್ಜೆ, ದೀಪಾವಳಿ ಹಬ್ಬದ ಸೌಂದರ್ಯಕ್ಕೆ ಮತ್ತೊಂದು ವಿಶೇಷ ಮೆರುಗು ನೀಡಿತು.

ಕರ್ನಾಟಕ ಜಾನಪದ ಪರಿಷತ್ತು, ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಅಂಟಿಗೆ ಪಿಂಟಿಗೆ ಜಾನಪದ ಕಲಾ ಸಂಭ್ರಮವು ಶಿವಮೊಗ್ಗ ನಗರದ ವಿವಿಧ ಬಡಾವಣೆಗಳಲ್ಲಿ ವಿಶೇಷ ಆಕರ್ಷಣೆಯಾಗಿ ಮೂಡಿಬಂತು. ತೀರ್ಥಹಳ್ಳಿ ತಾಲೂಕಿನ ಬಂದ್ಯಾ ಗ್ರಾಮದ ರಾಜ್ಯ ಪ್ರಶಸ್ತಿ ಪುರಸ್ಕೃತ ಎರಡು ಅಂಟಿಗೆ ಪಿಂಟಿಗೆ ತಂಡಗಳು ಮನೆಮನೆಗೆ ತೆರಳಿ ಜಾನಪದ ಗೀತೆಗಳನ್ನು ಹಾಡುತ್ತಾ ದೀಪಾವಳಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡವು.

ನಗರದ ಆದಿಚುಂಚನಗಿರಿ ಕಾಲಭೈರವೇಶ್ವರ ದೇವಸ್ಥಾನದಿಂದ ಸಂಜೆ ಹೊರಟ ಕಲಾತಂಡಗಳಿಗೆ ಸಾಂಪ್ರದಾಯಿಕವಾಗಿ ಚಾಲನೆ ನೀಡಲಾಯಿತು. ಬಳಿಕ ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿದ ಕಲಾವಿದರು ಸುಮಾರು 70ಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿದರು. ಕಲಾವಿದರ ಆಗಮನವನ್ನು ನಿವಾಸಿಗಳು ಆತ್ಮೀಯವಾಗಿ ಸ್ವಾಗತಿಸಿ, ಸಂಪ್ರದಾಯದಂತೆ ಜ್ಯೋತಿಗೆ ಎಣ್ಣೆ ಅರ್ಪಿಸಿ ಭಕ್ತಿ ಗೌರವ ಸಲ್ಲಿಸಿದರು.

ಅಂಟಿಗೆ ಪಿಂಟಿಗೆಯ ವಿಶೇಷತೆಯೇ ಅದರ ಹಾಡುಗಳಲ್ಲಿದೆ. ಇದು ಕೇವಲ ಮನೆಮನೆಗೆ ತೆರಳಿ ದೀಪ ಬೆಳಗಿಸುವ ಆಚರಣೆಯಲ್ಲ; ಪ್ರತಿಯೊಂದು ಮನೆಯ ವಾಸ್ತು, ಮನೆಯವರ ಬದುಕು, ಊರಿನ ದೇವರು ಹಾಗೂ ಬಲಿಚಕ್ರವರ್ತಿಯ ಸ್ಮರಣೆಯನ್ನು ಒಳಗೊಂಡಿರುವ ಜಾನಪದ ಸಂಸ್ಕೃತಿಯ ಜೀವಂತ ಅಭಿವ್ಯಕ್ತಿ.

ತಂಡವು ಊರಿನ ಬೀದಿಗಳಲ್ಲಿ ಸಾಗುವಾಗ ಹಾದಿ ಪದಗಳನ್ನು ಹಾಡುತ್ತಾ ಮನೆಯ ಮುಂದೆ ಬಂದು ನಿಲ್ಲುತ್ತದೆ. ಮನೆಯ ಬಾಗಿಲು ತೆರೆಯುವ ಮೊದಲು ಮನೆಯ ಹೊಸ್ತಿಲಿನ ಸೌಂದರ್ಯವನ್ನು ವರ್ಣಿಸುವ ಬಾಗಿಲು ಪದಗಳನ್ನು ಇಂಪಾಗಿ ಹಾಡುತ್ತದೆ.

‘ಬಾಗಿಲು ಬಾಗಿಲು ಚೆಂದ, ಬಾಗಿಲ ಗೆರೆ ಚೆಂದ, ಬಾಗಿಲು ಬಿಡಿಸಿದವರು ಯಾರಯ್ಯ? ಈ ಮನೆಯ ಮುತ್ತೂರು ಆಚಾರಿ… ಮಗ ಬಂದು ಮಾಡಿದ ಕೆಲಸ ಕಿತ್ತಳೆ ಹಣ್ಣೇ ಸುಲಿದಂಗೆ…’ ಎಂಬ ಜಾನಪದ ಸಾಲುಗಳ ಮೂಲಕ ಮನೆಯ ಬಾಗಿಲು ಹಾಗೂ ಅದನ್ನು ನಿರ್ಮಿಸಿದವರ ಕೈಚಳಕವನ್ನು ಸುಂದರವಾಗಿ ವರ್ಣಿಸುತ್ತಾರೆ.

ಈ ಹಾಡಿನ ಇಂಪು ಕೇಳಿದ ಮನೆಯ ಹಿರಿಯರು ಸಂಭ್ರಮದಿಂದ ಬಾಗಿಲು ತೆರೆದು ಕಲಾವಿದರನ್ನು ಬರಮಾಡಿಕೊಳ್ಳುತ್ತಾರೆ. ಅಲ್ಲಿ ಆರಂಭವಾಗುವುದೇ ದೀಪದ ಜ್ಯೋತಿ ಮತ್ತು ಜಾನಪದ ಗೀತೆಯ ಅಪೂರ್ವ ಸಂಗಮ.

ಅಂಟಿಗೆ ಪಿಂಟಿಗೆ ಹಾಡುಗಳಲ್ಲಿ ದೀಪಾವಳಿಯ ಪೌರಾಣಿಕ ಹಿನ್ನೆಲೆ, ಬಲಿಚಕ್ರವರ್ತಿಯ ನೆನಪು ಹಾಗೂ ಬೆಳಕಿನ ಮಹತ್ವವೂ ಅಡಕವಾಗಿದೆ.

‘ದೀಪೋಳಿ ಎನ್ನಿರಣ್ಣಾ… ಈ ಊರ ದೇವ್ರಿಗೆ, ದೀಪೋಳಿಗೆ ಎನ್ನಿರೋ ಅಣ್ಣಾ ಬಲಿಂದ್ರ ರಾಯಗೆ…, ಅಣ್ಣಾ ಬಲಿಂದ್ರ ರಾಯಗೆ ಏನು ಎಲ್ಲಾ ಪೂಜೆಯೋ… ಹಾಲು ಹಣ್ಣಿನ ಪೂಜೆಯೋ…’ ಎಂಬ ಹಾಡುಗಳ ಮೂಲಕ ದೀಪಾವಳಿಯ ಸಾಂಪ್ರದಾಯಿಕ ಮಹತ್ವವನ್ನು ಸಾರುತ್ತಾರೆ.

ಅದೇ ರೀತಿ,

‘ಮಣ್ಣಲ್ಲಿ ಹುಟ್ಟಿದೆ, ಮಣ್ಣಲ್ಲಿ ಬೆಳೆದೆ, ಎಣ್ಣೆಲಿ ಕಣ್ಣ ಬಿಟ್ಟಿದೆ, ಜಗಜ್ಯೋತಿ ನಾ ಸತ್ಯದಿಂದ ಉರಿವೆ ಜಗಜ್ಯೋತಿ’ ಎಂಬ ಸಾಲುಗಳು ದೀಪದ ಮಹತ್ವವನ್ನು ಮನಮುಟ್ಟುವಂತೆ ಬಿಂಬಿಸುತ್ತವೆ.

ಮಣ್ಣಿನಿಂದ ರೂಪುಗೊಂಡ ಹಣತೆ, ಅದರಲ್ಲಿ ತುಂಬಿದ ಎಣ್ಣೆ, ಬೆಳಗುವ ಬತ್ತಿ ಹಾಗೂ ಕತ್ತಲೆಯನ್ನು ದೂರ ಮಾಡುವ ಜ್ಯೋತಿ ಇವೆಲ್ಲವೂ ಬದುಕಿನ ಸತ್ಯ, ನಂಬಿಕೆ ಮತ್ತು ಒಳಿತಿನ ಸಂಕೇತಗಳಾಗಿ ಹಾಡುಗಳಲ್ಲಿ ಅನಾವರಣಗೊಳ್ಳುತ್ತವೆ.

ಅಂಟಿಗೆ ಪಿಂಟಿಗೆ ತಂಡದವರು ಹೊತ್ತು ತರುವ ಪವಿತ್ರ ಜ್ಯೋತಿಯನ್ನು ಮನೆಯೊಳಗೆ ಬರಮಾಡಿಕೊಳ್ಳುವುದು ಈ ಆಚರಣೆಯ ಪ್ರಮುಖ ಭಾಗವಾಗಿದೆ. ಕಲಾವಿದರು ಮನೆಗೆ ಬಂದಾಗ ಮನೆಯವರು ಭಕ್ತಿಯಿಂದ ದೀಪಕ್ಕೆ ಎಣ್ಣೆ ಎರೆಯುವ ಮೂಲಕ ಪೂಜೆ ಸಲ್ಲಿಸುತ್ತಾರೆ. ಜ್ಯೋತಿಯ ಬೆಳಕನ್ನು ಮನೆಯೊಳಗೆ ಸ್ವಾಗತಿಸಿ, ಸಂಪ್ರದಾಯದಂತೆ ಗೌರವಿಸುತ್ತಾರೆ.

ಅಂಟಿಗೆ ಪಿಂಟಿಗೆ ತಂಡದ ಜ್ಯೋತಿಯನ್ನು ಮನೆಗೆ ಬರಮಾಡಿಕೊಂಡು ಬೆಳಗಿಸುವುದರಿಂದ ವರ್ಷವಿಡೀ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ. ಕಷ್ಟ-ಕಾರ್ಪಣ್ಯಗಳು ದೂರವಾಗಿ ಕುಟುಂಬದಲ್ಲಿ ನೆಮ್ಮದಿ ಮೂಡುತ್ತದೆ ಎಂಬ ನಂಬಿಕೆ ಮಲೆನಾಡಿನ ಜನರಲ್ಲಿ ಇಂದಿಗೂ ಗಟ್ಟಿಯಾಗಿ ಉಳಿದಿದೆ.

ಹೀಗಾಗಿ ಅಂಟಿಗೆ ಪಿಂಟಿಗೆ ಕೇವಲ ಒಂದು ಜಾನಪದ ಪ್ರದರ್ಶನವಲ್ಲ. ಅದು ಮನೆಯವರನ್ನು ಒಂದೆಡೆ ಸೇರಿಸುವ, ಹಿರಿಯರ ಸಂಪ್ರದಾಯವನ್ನು ಕಿರಿಯರಿಗೆ ಪರಿಚಯಿಸುವ ಹಾಗೂ ನಮ್ಮ ನೆಲದ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ಮಹತ್ವದ ಆಚರಣೆಯಾಗಿದೆ.

ಇಂದಿನ ವೇಗದ ಬದುಕಿನಲ್ಲಿ ಗ್ರಾಮೀಣ ಜಾನಪದ ಕಲೆಗಳು ನಿಧಾನವಾಗಿ ಮರೆಯಾಗುತ್ತಿರುವ ಆತಂಕದ ನಡುವೆಯೂ ಅಂಟಿಗೆ ಪಿಂಟಿಗೆ ತಂಡಗಳು ತಮ್ಮ ಕಲೆಯನ್ನು ಉಳಿಸಿ ಬೆಳೆಸುತ್ತಿರುವುದು ಶ್ಲಾಘನೀಯ. ಹಬ್ಬಗಳ ಆಚರಣೆಗೆ ಕೇವಲ ಅಲಂಕಾರ, ಪಟಾಕಿ ಮತ್ತು ಸಿಹಿತಿಂಡಿಗಳಷ್ಟೇ ಸೀಮಿತವಾಗದೆ, ಇಂತಹ ಸಾಂಪ್ರದಾಯಿಕ ಕಲೆಗಳಿಗೂ ಅವಕಾಶ ಕಲ್ಪಿಸುವ ಮೂಲಕ ನಮ್ಮ ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸಬೇಕಿದೆ.

ಮನೆಯ ಹೊಸ್ತಿಲಿಗೆ ಬರುವ ಕಲಾವಿದರನ್ನು ಗೌರವದಿಂದ ಬರಮಾಡಿಕೊಳ್ಳುವುದು, ಅವರ ಹಾಡುಗಳನ್ನು ಆಲಿಸುವುದು ಹಾಗೂ ಜಾನಪದ ಪರಂಪರೆಯನ್ನು ಮಕ್ಕಳಿಗೆ ಪರಿಚಯಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗ ನಗರದಲ್ಲಿ ಆಯೋಜಿಸಿದ್ದ ಅಂಟಿಗೆ ಪಿಂಟಿಗೆ ಕಾರ್ಯಕ್ರಮವು ದೀಪಾವಳಿಯ ಸಂಭ್ರಮಕ್ಕೆ ಸಾಂಸ್ಕೃತಿಕ ಆಯಾಮವನ್ನು ನೀಡಿತು.

ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಾದಮಯಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಡಿ. ಮಂಜುನಾಥ, ಪದಾಧಿಕಾರಿಗಳಾದ ಭೈರಾಪುರ ಶಿವಪ್ಪ ಮೇಷ್ಟು, ಕೃಷ್ಣಮೂರ್ತಿ ಹಿಳ್ಳೋಡಿ, ನಾರಾಯಣ್, ಪಿ.ಕೆ. ಸತೀಶ್, ಡಿ. ಗಣೇಶ್, ಭಾರತಿ ರಾಮಕೃಷ್ಣ, ಶ್ರೀನಿವಾಸ ನಗಲಾಪುರ, ದೀಪಕ್ ಸಾಗರ, ಬಾಲರಾಜ್, ಅಮೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ದೀಪಾವಳಿಯ ಬೆಳಕಿನ ಹಬ್ಬದಲ್ಲಿ ಹಣತೆಗಳು ಮನೆಗಳನ್ನು ಬೆಳಗಿದರೆ, ಅಂಟಿಗೆ ಪಿಂಟಿಗೆಯ ಜಾನಪದ ಗೀತೆಗಳು ಜನರ ಮನಸ್ಸನ್ನು ಬೆಳಗಿಸಿದವು. ತಲೆಮಾರುಗಳ ಸಂಸ್ಕೃತಿಯನ್ನು ಹೊತ್ತು ತಂದ ಕಲಾವಿದರ ಹೆಜ್ಜೆಗುರುತುಗಳು ಶಿವಮೊಗ್ಗದ ಬೀದಿಗಳಲ್ಲಿ ಹೊಸ ಸಂಭ್ರಮ ಮೂಡಿಸಿದವು. ದೀಪದ ಬೆಳಕಿನಲ್ಲಿ ಮಲೆನಾಡಿನ ಮಣ್ಣಿನ ಸೊಗಡು ಮತ್ತೊಮ್ಮೆ ಅನಾವರಣಗೊಂಡಿತು.

K.M.Sathish Gowda

Join WhatsApp

Join Now

Facebook

Join Now

Read more

ಭಾಷೆಗಳ ನಡುವೆ ಗೋಡೆ ಬೇಡ, ಹೃದಯಗಳ ನಡುವೆ ಸೇತುವೆ ನಿರ್ಮಿಸೋಣ! ಉರ್ದು ಅಕಾಡೆಮಿಗೆ ಹೆಚ್ಚಿನ ಅನುದಾನ; ಅಲ್ಪಸಂಖ್ಯಾತ ಧರ್ಮಗಳ ಸಮಸ್ಯೆ ಆಲಿಸಲು ಮುಂದಿನ ವಾರ ಪ್ರತ್ಯೇಕ ಸಭೆ – ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

ಅಕ್ರಮ ಕಟ್ಟಡಗಳ ಸಕ್ರಮ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ: ಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ

ಸಿದ್ದರಾಮಯ್ಯ ನನ್ನ ನಾಯಕರು, ನಮ್ಮ ನಡುವೆ ಯಾವುದೇ ಮುನಿಸಿಲ್ಲ; ರಾಜಕೀಯ ವದಂತಿಗಳಿಗೆ ಡೋಂಟ್ ಕೇರ್!

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ವಿಮಾನಯಾನ ಸಂಸ್ಥೆಗಳ ನಿರ್ಲಕ್ಷ್ಯದ ಬರೆ; ಸ್ಟಾರ್ ಏರ್ ಸೇವೆ ಸ್ಥಗಿತದತ್ತ! ಉಡಾನ್ 6.0 ಯೋಜನೆಯಡಿ ಶಿವಮೊಗ್ಗ ವಿಮಾನ ನಿಲ್ದಾಣ ಸೇರ್ಪಡೆಗೆ ಕೇಂದ್ರ – ರಾಜ್ಯ ಸರ್ಕಾರಗಳು ತುರ್ತು ಕ್ರಮ ಕೈಗೊಳ್ಳಲಿ: ಸಂಸದ ಬಿ.ವೈ. ರಾಘವೇಂದ್ರ ಆಗ್ರಹ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆಗಳಿಗೆ ಕುತ್ತು; ಜನರು ಮತ್ತೆ ಅಧಿಕಾರ ನೀಡುವುದಿಲ್ಲ: ಸಿಎಂ ಡಿ.ಕೆ. ಶಿವಕುಮಾರ್

ದೀಪಾವಳಿ ಸಂಭ್ರಮಕ್ಕೂ ಬೆಲೆ ಏರಿಕೆಯ ಕರಿನೆರಳು; ಜನಸಾಮಾನ್ಯರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ: ಬಿ.ವೈ. ವಿಜಯೇಂದ್ರ

Leave a Comment