57 ಕೆರೆಗಳ ಜಲಸಾಧನೆಗೆ ಮೆಚ್ಚುಗೆ; ರೈತರಲ್ಲಿ ವಿಶಾಲ ಮನೋಭಾವ, ಪರಸ್ಪರ ಸಹಕಾರವಿರಲಿ ಎಂದು ಆಶೀರ್ವಚನ – ‘ಆಧುನಿಕ ಭಗೀರಥರ 57ರ ಸಡಗರ’ಕ್ಕೆ ಸಾವಿರಾರು ಜನರ ಸಾಕ್ಷಿ; 57 ಎತ್ತಿನ ಬಂಡಿ, 57 ಕಹಳೆ, 57 ತಮಟೆ, 57 ಉರಿಮೆಗಳೊಂದಿಗೆ ಅದ್ಧೂರಿ ಜನಪದ ಮೆರವಣಿಗೆ
ಜಗಳೂರು: ಒಂದು ಕಾಲದಲ್ಲಿ ಹನಿ ನೀರಿಗಾಗಿ ಆಕಾಶದತ್ತ ಮುಖಮಾಡಿ ಕಾಯುತ್ತಿದ್ದ ಬರದನಾಡು ಇಂದು ಕೆರೆಗಳ ಒಡಲಲ್ಲಿ ನೀರು ತುಂಬಿ ಹರಿಯುವುದನ್ನು ಕಣ್ತುಂಬಿಕೊಳ್ಳುತ್ತಿದೆ. ಬತ್ತಿದ ಭೂಮಿಯಲ್ಲಿ ಹಸಿರಿನ ಕನಸು ಚಿಗುರೊಡೆದಿದೆ. ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಊರೂರುಗಳಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ. ಕೆರೆಗಳಿಗೆ ನೀರು ಹರಿದ ಸಂಭ್ರಮಕ್ಕೆ ಜನರ ಹೃದಯದಲ್ಲೂ ಸಂತಸದ ಕೋಡಿ ಹರಿದಿದೆ. ಇದು ಕೇವಲ ನೀರು ತುಂಬಿದ ಕೆರೆಗಳ ಸಂಭ್ರಮವಲ್ಲ, ಹಲವು ವರ್ಷಗಳ ನಿರೀಕ್ಷೆ, ಪರಿಶ್ರಮ, ಸಂಕಲ್ಪ, ಗುರುಕೃಪೆ ಹಾಗೂ ಜನರ ಒಗ್ಗಟ್ಟಿನ ಪ್ರಯತ್ನಕ್ಕೆ ದೊರೆತ ಐತಿಹಾಸಿಕ ಯಶಸ್ಸಿನ ಸಂಭ್ರಮ. 57 ಕೆರೆಗಳ ಒಡಲಲ್ಲಿ ಜಲಧಾರೆ ತುಂಬಿದ ಈ ಅಪೂರ್ವ ಕ್ಷಣಕ್ಕೆ 57ರ ವೈಭವವೇ ಸಾಕ್ಷಿಯಾಗಿ ನಿಂತಿತ್ತು.

ಪರಮಪೂಜ್ಯ ಶ್ರೀ ತರಳಬಾಳು ಜಗದ್ಗುರುಗಳ ಮಾರ್ಗದರ್ಶನದಲ್ಲಿ ಸಾಕಾರಗೊಂಡ ಜಗಳೂರು ತಾಲ್ಲೂಕಿನ 57 ಕೆರೆ ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆಯ ಯಶಸ್ಸನ್ನು ಸ್ಮರಣೀಯವಾಗಿಸುವ ಉದ್ದೇಶದಿಂದ ನವೆಂಬರ್ 8ರಂದು ‘ಆಧುನಿಕ ಭಗೀರಥರ 57ರ ಸಡಗರ’ ಎಂಬ ವಿನೂತನ ಹೆಸರಿನಲ್ಲಿ ಅದ್ಧೂರಿ ಜಲಸಂಭ್ರಮ ಆಯೋಜಿಸಲಾಗಿತ್ತು. ಜಗಳೂರು ತಾಲ್ಲೂಕಿನ ಮಡ್ರಹಳ್ಳಿ (ಗುರುಸಿದ್ಧಾಪುರ) ಶ್ರೀ ಚೌಡೇಶ್ವರಿ ದೇವಿಯ ಸನ್ನಿಧಿಯ ಕೊಂಡುಕುರಿ ಅರಣ್ಯಧಾಮದ ಸಮೀಪ ನಡೆದ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಪರಮಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

57ರ ಸಂಖ್ಯೆಯಲ್ಲಿ ಅನಾವರಣಗೊಂಡ ಜನಪದ ವೈಭವ
57 ಕೆರೆಗಳ ಸಾಧನೆಯನ್ನು 57ರ ಸಂಖ್ಯೆಯಲ್ಲೇ ಪ್ರತಿಬಿಂಬಿಸುವಂತೆ ಕಾರ್ಯಕ್ರಮವನ್ನು ಅತ್ಯಂತ ವಿಶಿಷ್ಟವಾಗಿ ರೂಪಿಸಲಾಗಿತ್ತು. 57 ಉರಿಮೆಗಳು, 57 ಕಹಳೆಗಳು, 57 ತಮಟೆಗಳು, 57 ಎತ್ತಿನ ಬಂಡಿಗಳು ಹಾಗೂ 57 ಮಹಿಳೆಯರಿಂದ ಕುಂಭಮೇಳದೊಂದಿಗೆ ನಡೆದ ಭವ್ಯ ಮೆರವಣಿಗೆ ಜಲಸಂಭ್ರಮಕ್ಕೆ ಅಪೂರ್ವ ಮೆರುಗು ನೀಡಿತು.

ಗ್ರಾಮೀಣ ಸಂಸ್ಕೃತಿಯ ಸೊಗಡು, ಜನಪದ ಕಲೆಯ ವೈಭವ, ಸಾಂಪ್ರದಾಯಿಕ ವಾದ್ಯಗಳ ಮೊಳಗು, ಎತ್ತುಗಳ ಶೃಂಗಾರ, ಬಣ್ಣಬಣ್ಣದ ಅಲಂಕಾರಗಳಿಂದ ಕಂಗೊಳಿಸಿದ ಎತ್ತಿನ ಬಂಡಿಗಳು, ಮಹಿಳೆಯರ ಕುಂಭಮೇಳ ಹೀಗೆ ಎಲ್ಲವೂ ಸೇರಿ ಜಗಳೂರಿನ ನೆಲದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿತ್ತು. ರಸ್ತೆಯುದ್ದಕ್ಕೂ ಜನಸಾಗರವೇ ಹರಿದುಬಂದಿತ್ತು. ಸಾವಿರಾರು ಜನರು, ಭಕ್ತರು, ರೈತರು ಹಾಗೂ ಗ್ರಾಮಸ್ಥರು ಸಂಭ್ರಮೋತ್ಸವದಲ್ಲಿ ಪಾಲ್ಗೊಂಡು ಜಲಸಾಧನೆಯ ಕ್ಷಣಗಳನ್ನು ಕಣ್ತುಂಬಿಕೊಂಡರು.

ಇಲ್ಲಿ 57 ಎಂಬುದು ಕೇವಲ ಸಂಖ್ಯೆಯಲ್ಲ. ಬರದನಾಡಿನ 57 ಕೆರೆಗಳ ಪುನಶ್ಚೇತನದ ಸಂಕೇತ. ಸಾವಿರಾರು ರೈತ ಕುಟುಂಬಗಳ ಬದುಕಿನಲ್ಲಿ ಮೂಡಿದ ಹೊಸ ಭರವಸೆಯ ಪ್ರತಿಬಿಂಬ. ನೀರಿಗಾಗಿ ನಡೆದ ಸುದೀರ್ಘ ಹೋರಾಟ, ನಿರಂತರ ಪ್ರಯತ್ನ ಮತ್ತು ಮುಂದಿನ ಪೀಳಿಗೆಗೆ ನೀರಿನ ಮಹತ್ವ ಸಾರುವ ಸಂದೇಶದ ಪ್ರತೀಕವಾಗಿತ್ತು.

ಕೆರೆಯ ನೀರು ಕಂಡು ಭಾವುಕರಾದ ತರಳಬಾಳು ಶ್ರೀಗಳು
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀ ತರಳಬಾಳು ಜಗದ್ಗುರುಗಳು, ಜನರ ಅಪಾರ ಭಕ್ತಿ, ಅಭಿಮಾನ ಮತ್ತು ಸಂಭ್ರಮವನ್ನು ಕಂಡು ಭಾವುಕರಾದರು. ಮಧ್ಯಾಹ್ನ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿದಾಗ ಕೆರೆಯಲ್ಲಿ ಉಕ್ಕಿ ಹರಿಯುತ್ತಿದ್ದ ನೀರು ಹಾಗೂ ಸುತ್ತಲೂ ನೆರೆದಿದ್ದ ಜನಸಮೂಹವನ್ನು ಕಂಡು ಹೃದಯ ತುಂಬಿಬಂದಿತು. ಜನರ ಹೃದಯದಲ್ಲಿರುವ ಭಕ್ತಿಯ ಚಿಲುಮೆ ಅಲ್ಲಿ ನೀರಿನ ರೂಪದಲ್ಲಿ ಹರಿಯುತ್ತಿರುವಂತೆ ಭಾಸವಾಯಿತು ಎಂದು ತಮ್ಮ ಸಂತಸ ಹಂಚಿಕೊಂಡರು.

ಬೆರಣಿಯ ಉದಾಹರಣೆಯೊಂದಿಗೆ ಬಸವಣ್ಣನವರ ವಚನ ಸ್ಮರಣೆ
ಜನರ ಉತ್ಸಾಹ ಮತ್ತು ಕಾರ್ಯಕ್ರಮದ ಸಂಭ್ರಮವನ್ನು ಕಂಡಾಗ ಬಸವಣ್ಣನವರ ವಚನ ನೆನಪಾಗುತ್ತದೆ ಎಂದು ತರಳಬಾಳು ಶ್ರೀಗಳು ಹೇಳಿದರು.
ಬಸವಣ್ಣನವರ, “ಏನಯ್ಯಾ ಎಂತ ಎನ್ನಯ ಪೂರ್ವಲೇಖಿತ ಬೆರಣೆಯ ನಾಯಲ್ಲದೆ ಅಟ್ಟುಣ್ಣ ತೆರಹಿಲ್ಲವೆನಗೆ” ಎಂಬ ವಚನವನ್ನು ಉಲ್ಲೇಖಿಸಿ, ಬೆರಣಿ ಎಂದರೆ ಒಲೆ ಹಚ್ಚಲು ಬಳಸುತ್ತಿದ್ದ ಕುರುಡು ಎಂದು ವಿವರಿಸಿದರು. ಹಿಂದೆ ಮನೆಗಳಲ್ಲಿ ಅಡುಗೆ ಮಾಡಲು ಮಹಿಳೆಯರು ಬೆರಣಿಯನ್ನು ಬಳಸುತ್ತಿದ್ದರು. ಈಗ ಗ್ಯಾಸ್ ಒಲೆಗಳು ಬಂದಿರುವುದರಿಂದ ಬೆರಣಿಯ ಬಳಕೆ ಕಡಿಮೆಯಾಗಿದೆ. ಒಂದು ಕಾಲದಲ್ಲಿ ಬೆರಣಿ ಸಂಗ್ರಹಿಸಿ, ಒಲೆ ಹಚ್ಚಿ ಅಡುಗೆ ಮಾಡುವುದು ದೈನಂದಿನ ಬದುಕಿನ ಭಾಗವಾಗಿತ್ತು ಎಂದರು.
ಬೆಳಗ್ಗೆಯಿಂದ ಸಂಜೆವರೆಗೆ ಬರೀ ಬೆರಣಿಯನ್ನೇ ನೋಡುತ್ತಾ ಕುಳಿತರೆ ಬೆಂಕಿ ಹಚ್ಚುವುದು ಯಾವಾಗ, ಅಡುಗೆ ಮಾಡುವುದು ಯಾವಾಗ, ಊಟ ಮಾಡುವುದು ಯಾವಾಗ ಎಂಬ ಪ್ರಶ್ನೆಯ ಮೂಲಕ, ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಮಧ್ಯಾಹ್ನ ಆರಂಭವಾದ ಮೆರವಣಿಗೆಯಲ್ಲಿ ಪಾಲ್ಗೊಂಡು, ಇಲ್ಲಿಗೆ ಬಂದು ಇಷ್ಟೊಂದು ಹೊತ್ತು ಭಾಷಣಗಳನ್ನು ಕೇಳುತ್ತಾ ಕುಳಿತರೆ ಜನ ಊಟ ಮಾಡುವುದು ಯಾವಾಗ ಎಂದು ಹಾಸ್ಯಭರಿತವಾಗಿ ಪ್ರಶ್ನಿಸಿದರು.
ಇಷ್ಟೆಲ್ಲ ಕಾರ್ಯಕ್ರಮಗಳು, ಭಾಷಣಗಳು, ಮೆರವಣಿಗೆಗಳು ನಡೆಯುತ್ತಿರುವುದು ಜನರು ನೆಮ್ಮದಿಯಿಂದ ಬದುಕಬೇಕು, ಸುಖವಾಗಿ ಊಟ ಮಾಡಬೇಕು ಮತ್ತು ಜೀವನದಲ್ಲಿ ಸಂತೋಷವಾಗಿರಬೇಕು ಎಂಬ ಉದ್ದೇಶಕ್ಕಾಗಿ. ಗುರುಗಳ ಬಗ್ಗೆ, ರಾಜಕೀಯ ಮುಖಂಡರ ಬಗ್ಗೆ ಮತ್ತು ಅವರು ಮಾಡಿದ ಕಾರ್ಯಗಳ ಬಗ್ಗೆ ಜನರಿಗಿರುವ ಕೃತಜ್ಞತೆಯ ಭಾವದಿಂದ ಹಸಿವನ್ನೂ ಮರೆತು ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನಿಜವಾದ ಕೃತಜ್ಞತೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೃತಜ್ಞತೆ ಮತ್ತು ಕೃತಜ್ಞತಾ ಭಾವದ ನಡುವಿನ ಅರ್ಥದ ವ್ಯತ್ಯಾಸವನ್ನು ವಿವರಿಸಿದ ಅವರು, ಮಧ್ಯಾಹ್ನ ಇಲ್ಲಿಗೆ ಆಗಮಿಸಿದಾಗ ಕೆರೆಯಲ್ಲಿ ಉಕ್ಕಿ ಹರಿಯುತ್ತಿದ್ದ ನೀರನ್ನು ಕಂಡು ಭಾವುಕರಾದೆವು. ಸುತ್ತಲೂ ಸೇರಿದ್ದ ಜನರ ಭಕ್ತಿಭಾವವನ್ನು ನೋಡಿದಾಗ ಅವರ ಹೃದಯದಲ್ಲಿದ್ದ ಭಕ್ತಿಯ ಭುಗ್ಗೆ ನೀರಿನಂತೆ ಹರಿಯುತ್ತಿದೆ ಎಂಬ ಅನುಭವವಾಯಿತು. ಎಲ್ಲರೂ ಅತ್ಯಂತ ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಸಂತೋಷ ತಂದಿದೆ ಎಂದರು.
ಭಕ್ತಿ ಮತ್ತು ಅಭಿಮಾನ ವ್ಯಕ್ತವಾಗುವ ರೀತಿ ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಕೆಲವರು ಪಟಾಕಿ ಸಿಡಿಸುವ ಮೂಲಕ, ಇನ್ನು ಕೆಲವರು ಹೂವಿನ ಹಾರ ಹಾಕುವ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಜಗಳೂರಿನಲ್ಲಿ ಗುರುಗಳಿಗೆ ಹಾರ ಹಾಕಲು ಕ್ರೇನ್ ಬಳಸಿರುವುದು ಭಕ್ತಿಯ ಅಪರೂಪದ ಅಭಿವ್ಯಕ್ತಿ. ವಿಜ್ಞಾನಿಗಳು ಭಾರವಾದ ವಸ್ತುಗಳನ್ನು ಎತ್ತಲು ರೂಪಿಸಿದ ಕ್ರೇನ್ ಅನ್ನು ಭಕ್ತರು ಗುರುಗಳಿಗೆ ಹಾರ ಹಾಕಲು ಬಳಸಿರುವುದು ಅವರ ಭಾವನೆಯ ಎತ್ತರವನ್ನು ತೋರಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

57 ಕೆ.ಜಿ. ತೂಕದ ಬೃಹತ್ ಹಾರ; ಹೂ ಬೆಳೆಗಾರರ ಬದುಕಿಗೂ ಆಸರೆ
ಕಾರ್ಯಕ್ರಮದಲ್ಲಿ 57 ಕೆ.ಜಿ. ತೂಕದ ಬೃಹತ್ ಹಾರವನ್ನು ನಾಗೇಂದ್ರ ಬಿ.ಟಿ. ನಾಗೇಂದ್ರ ರೆಡ್ಡಿ ಅವರು ಶ್ರೀಗಳಿಗೆ ಸಮರ್ಪಿಸಿದ್ದು ವಿಶೇಷವಾಗಿತ್ತು. ಈ ಹಾರಕ್ಕೆ ಸುಮಾರು 38 ಸಾವಿರ ರೂ. ವೆಚ್ಚವಾಗಿದೆ ಎಂಬ ವಿಚಾರವನ್ನು ಪ್ರಸ್ತಾಪಿಸಿದ ತರಳಬಾಳು ಶ್ರೀಗಳು, ಕೆಲವರು ವಿಚಾರವಾದಿಗಳೆಂದು ಹೇಳಿಕೊಂಡು ಹಾರ ಹಾಕಿಸಿಕೊಳ್ಳುವುದನ್ನು ನಿರಾಕರಿಸುವುದನ್ನು ಪ್ರಶ್ನಿಸಿದರು.
ಹೂವಿನ ಹಾರದಿಂದ ದೊರೆಯುವ ಆದಾಯ ಹೂ ಬೆಳೆಗಾರರು ಮತ್ತು ಮಾಲೆಗಾರರ ಬದುಕಿಗೆ ಆಸರೆಯಾಗುತ್ತದೆ. ಗಣ್ಯರಿಗೆ ಹಾರ ಹಾಕುವ ಮೂಲಕ ಅವರ ಶ್ರಮಕ್ಕೆ ಗೌರವ ದೊರೆಯುತ್ತದೆ. ಹಾರ ಹಾಕಿಸಿಕೊಳ್ಳುವುದನ್ನು ನಿರಾಕರಿಸುವುದು ಬಡ ಹೂ ಬೆಳೆಗಾರರು ಮತ್ತು ಮಾಲೆಗಾರರ ದುಡಿಮೆಗೆ ಪರೋಕ್ಷವಾಗಿ ಅಡ್ಡಿಯಾದಂತೆ. ಆದ್ದರಿಂದ ಇಂತಹ ಸಂಪ್ರದಾಯಗಳ ಹಿಂದಿರುವ ಸಾಮಾಜಿಕ ಮತ್ತು ಆರ್ಥಿಕ ಆಯಾಮವನ್ನೂ ಅರ್ಥಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ನೀರಿನಿಂದ ಸಿಗುವ ಸಂತೋಷ ಮತ್ತು ಮದ್ಯದಿಂದ ಸಿಗುವ ಸಂತೋಷವನ್ನು ಹೋಲಿಸಿದ ಶ್ರೀಗಳು, ಮದ್ಯದ ಅಮಲು ಕೆಲಕಾಲ ಮಾತ್ರ ಇರುತ್ತದೆ. ಆದರೆ ಕೆರೆಯಲ್ಲಿ ನೀರು ತುಂಬಿರುವುದನ್ನು ಕಂಡು ಜನರ ಮನಸ್ಸಿನಲ್ಲಿ ಮೂಡುವ ಸಂತೋಷ ನಿರಂತರವಾಗಿರುತ್ತದೆ ಎಂದು ಮಾರ್ಮಿಕವಾಗಿ ನುಡಿದರು. ಈ ಸಂದರ್ಭದಲ್ಲಿ ನಿವೃತ್ತ ಪ್ರಾಧ್ಯಾಪಕ ವೆಂಕಟೇಶ್ ಶೆಟ್ಟರು ರಚಿಸಿರುವ ‘ಡ್ರೈವರ್ ವೇದಾಂತ’ ಕವಿತೆಯನ್ನು ಪ್ರಸ್ತಾಪಿಸಿ, ದ್ವೈತ, ಅದ್ವೈತ, ವಿಶಿಷ್ಟಾದ್ವೈತ ತತ್ವಗಳನ್ನು ಹಾಸ್ಯಮಿಶ್ರಿತವಾಗಿ ವಿವರಿಸಿ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು.

ಅಪರೂಪದ ಕೊಂಡುಕುರಿ ಸಂರಕ್ಷಣೆಗೆ ಮೆಚ್ಚುಗೆ
ಮಡ್ರಹಳ್ಳಿ ಪರಿಸರದ ಕೊಂಡುಕುರಿ ಅರಣ್ಯಧಾಮದ ವಿಶೇಷತೆಯನ್ನು ಪ್ರಸ್ತಾಪಿಸಿದ ತರಳಬಾಳು ಶ್ರೀಗಳು, ಕೊಂಡುಕುರಿ ಅಪರೂಪದ ಪ್ರಾಣಿ. ಇದು ಬಹಳ ಭಯಭೀತ ಸ್ವಭಾವ ಹೊಂದಿದ್ದು, ಜಿಂಕೆಯಂತೆ ಚುರುಕಾಗಿ ಓಡುವ ಗುಣ ಹೊಂದಿದೆ. ಏಷ್ಯಾದಲ್ಲೇ ಅಪರೂಪವಾಗಿ ಕಂಡುಬರುವ ಈ ಪ್ರಾಣಿಯ ಸಂರಕ್ಷಣೆಗೆ ಸ್ಥಳೀಯರು ಸಹಕರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಇಂತಹ ಅಪರೂಪದ ಜೀವವೈವಿಧ್ಯವನ್ನು ಹೊಂದಿರುವ ಪ್ರದೇಶದಲ್ಲಿ ವಾಸಿಸುತ್ತಿರುವ ಜನರನ್ನು ಮಡ್ಡು ಎಂದು ಕರೆಯಬಾರದು. ಬದಲಿಗೆ ಜಾಣರ ನಾಡು ಎಂದು ಗುರುತಿಸಬೇಕು ಎಂದು ಹಾಸ್ಯಭರಿತವಾಗಿ ಹೇಳಿ ಸ್ಥಳೀಯರ ಮೆಚ್ಚುಗೆಗೆ ಪಾತ್ರರಾದರು.

2018ರಲ್ಲೇ ಯೋಜನೆಗೆ ಬುನಾದಿ; ಸಿದ್ದರಾಮಯ್ಯ ಸರ್ಕಾರದ 500 ಕೋಟಿ ರೂ. ನೆರವು
ಜಗಳೂರು ಭಾಗದ ಜನರ ನೀರಿನ ಸಮಸ್ಯೆ ನಿವಾರಣೆಗೆ ರೂಪುಗೊಂಡ ಯೋಜನೆಯ ಆರಂಭಿಕ ಹಂತವನ್ನು ಸ್ಮರಿಸಿದ ಶ್ರೀಗಳು, 2018ರಲ್ಲಿ ತರಳಬಾಳು ಹುಣ್ಣಿಮೆ ಸಂದರ್ಭದಲ್ಲಿ ಚೀಲೂರು ಪ್ರದೇಶದಲ್ಲಿ ಯೋಜನೆಗೆ ಚಾಲನೆ ದೊರೆತ ವಿಚಾರವನ್ನು ನೆನಪಿಸಿಕೊಂಡರು.
ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಬಳಿ ಯೋಜನೆಗೆ ಅನುದಾನ ನೀಡುವಂತೆ ಮನವಿ ಮಾಡಲಾಗಿತ್ತು. ಸಭೆಯಲ್ಲಿ ನಡೆದ ಕೆಲವು ಘಟನೆಗಳಿಂದ ಅಸಮಾಧಾನ ಉಂಟಾದರೂ, ಅವರು ಬೆಂಗಳೂರಿಗೆ ಮರಳಿದ ಬಳಿಕ ಕೇವಲ 15 ದಿನಗಳೊಳಗೆ ಮಂಡಿಸಬೇಕಿದ್ದ ಬಜೆಟ್‌ನಲ್ಲಿ ತಮ್ಮ ಮನವಿಯ ಮೇರೆಗೆ 500 ಕೋಟಿ ರೂ. ಅನುದಾನವನ್ನು ಸೇರಿಸಿದ್ದರು ಎಂದು ವಿವರಿಸಿದರು.
ಆಗಿನ ಶಾಸಕ ರಾಜೇಶ್ ಅವರು ಅನುದಾನ ಸೇರ್ಪಡೆಯಾಗಿದೆ ಎಂದು ತಿಳಿಸಿದಾಗ ತಕ್ಷಣ ನಂಬದೆ, ಬಜೆಟ್ ಮುದ್ರಣವಾಗುವವರೆಗೂ ಕಾಯುವಂತೆ ಹೇಳಿದ್ದೆ. ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರಿಂದಲೂ ಮಾಹಿತಿ ಪಡೆದು, ಬಜೆಟ್‌ನ ಕರಡು ಪ್ರತಿಯನ್ನು ತರಿಸಿಕೊಂಡು ಪರಿಶೀಲಿಸಿದ ನಂತರವೇ ಅನುದಾನ ಸೇರ್ಪಡೆಯಾಗಿರುವುದು ಖಚಿತವಾಯಿತು. ಇದರಿಂದ ಅಪಾರ ಸಂತೋಷವಾಯಿತು ಎಂದು ಹಳೆಯ ನೆನಪುಗಳನ್ನು ಹಂಚಿಕೊಂಡರು.

ಶಾಸಕ ದೇವೇಂದ್ರಪ್ಪ ಅವರ ಸರಳತೆ, ಜನರ ಕಷ್ಟ ಅರಿತ ನಾಯಕತ್ವ
ಶಾಸಕ ದೇವೇಂದ್ರಪ್ಪ ಅವರು ಸಾರ್ವಜನಿಕ ಜೀವನದ ಸರಳತೆ ಮತ್ತು ಜನರೊಂದಿಗೆ ಬೆರೆಯುವ ಗುಣವನ್ನು ತರಳಬಾಳು ಶ್ರೀಗಳು ಪ್ರಶಂಸಿಸಿದರು. ಬಡತನ ಮತ್ತು ಸಂಕಷ್ಟದ ಬದುಕನ್ನು ಅನುಭವಿಸಿದವರು ಜನರ ಕಷ್ಟವನ್ನು ಹೆಚ್ಚು ಆಳವಾಗಿ ಅರ್ಥಮಾಡಿಕೊಳ್ಳಬಲ್ಲರು. ಅಧಿಕಾರದಲ್ಲಿದ್ದಾಗಲೂ ಅಹಂಕಾರ ತೋರದೆ, ಜನರೊಂದಿಗೆ ಬೆರೆಯುವ ಗುಣ ದೇವೇಂದ್ರಪ್ಪರಲ್ಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ದೇವೇಂದ್ರಪ್ಪ, ಮಾಜಿ ಶಾಸಕರು ಹಾಗೂ ಹಾಲಿ ಶಾಸಕರೊಂದಿಗೆ ಆತ್ಮೀಯವಾಗಿ ಮಾತನಾಡಿದ ಸಂದರ್ಭವನ್ನು ನೆನಪಿಸಿಕೊಂಡರು. ಮೆರವಣಿಗೆಯಲ್ಲಿ ಜನರೊಂದಿಗೆ ಬೆರೆತು ಕುಣಿಯುವ ಆಸೆಯನ್ನು ವ್ಯಕ್ತಪಡಿಸಿದ್ದ ಅವರ ಸರಳತೆ ಮತ್ತು ಆತ್ಮೀಯತೆ ಮನಸ್ಸಿಗೆ ಆನಂದ ನೀಡಿತು ಎಂದರು.
ಅದೇ ರೀತಿ ಸ್ಥಳೀಯ ಜನಪ್ರತಿನಿಧಿಗಳಾದ ರಾಜೇಶ್, ರಾಮಚಂದ್ರಪ್ಪ ಮತ್ತು ದೇವೇಂದ್ರಪ್ಪ ಅವರು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸುತ್ತಿರುವುದನ್ನು ಶ್ಲಾಘಿಸಿದರು. ಜಗಳೂರು ಕ್ಷೇತ್ರದ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಶ್ರಮಿಸುತ್ತಿರುವ ಈ ಮೂವರನ್ನು ಸಮಾಜಸೇವೆಯ ತ್ರಿಮೂರ್ತಿಗಳೆಂದು ಬಣ್ಣಿಸಿದರು.

ಕತ್ತರಿ-ಸೂಜಿಯ ಉದಾಹರಣೆಯಲ್ಲಿ ಮಾನವೀಯ ಸಂದೇಶ
ಕಾರ್ಯಕ್ರಮದಲ್ಲಿ ಕತ್ತರಿ ಮತ್ತು ಸೂಜಿಯ ಉದಾಹರಣೆಯ ಮೂಲಕ ತರಳಬಾಳು ಶ್ರೀಗಳು ಮಹತ್ವದ ಸಂದೇಶ ನೀಡಿದರು. ಕೆಲವರು ಕತ್ತರಿ ಕೆಟ್ಟದ್ದು, ಸೂಜಿ ಒಳ್ಳೆಯದು ಎಂಬ ರೀತಿಯಲ್ಲಿ ವಾದಿಸುತ್ತಾರೆ. ಆದರೆ ಕತ್ತರಿ ಮತ್ತು ಸೂಜಿ ಎರಡೂ ಉಪಕರಣಗಳು. ಅವುಗಳನ್ನು ಬಳಸುವ ವ್ಯಕ್ತಿಯ ಉದ್ದೇಶ ಮುಖ್ಯವೇ ಹೊರತು ಉಪಕರಣವಲ್ಲ ಎಂದರು.
ವೈದ್ಯರು ಕತ್ತರಿಯನ್ನು ಬಳಸಿದರೆ ರೋಗಿಯ ಜೀವ ಉಳಿಸಬಹುದು. ಮಹಿಳೆಯರು ಅದನ್ನೇ ದಿನನಿತ್ಯದ ಕೆಲಸಗಳಿಗೆ ಬಳಸುತ್ತಾರೆ. ಆದರೆ ದುರುದ್ದೇಶದ ವ್ಯಕ್ತಿಯ ಕೈಗೆ ಸಿಕ್ಕರೆ ಅದೇ ಉಪಕರಣ ಅಪಾಯಕಾರಿಯಾಗುತ್ತದೆ. ಸೂಜಿಯೂ ಒಳ್ಳೆಯ ಕೆಲಸಕ್ಕೆ ಬಳಕೆಯಾಗಬಹುದು, ಕೆಟ್ಟ ಉದ್ದೇಶಕ್ಕೂ ಬಳಕೆಯಾಗಬಹುದು. ಹೀಗಾಗಿ ಯಾವುದೇ ವಸ್ತುವಿನಲ್ಲೂ ಮೂಲತಃ ದೋಷವಿಲ್ಲ; ಅದನ್ನು ಬಳಸುವ ಕೈ ಮತ್ತು ಮನಸ್ಸಿನ ಉದ್ದೇಶದಲ್ಲಿ ದೋಷವಿರುತ್ತದೆ ಎಂಬುದನ್ನು ಸಮಾಜ ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಈ ತತ್ವವನ್ನು ಜಲಯೋಜನೆಗಳಿಗೂ ಅನ್ವಯಿಸಿದ ಅವರು, ಕೆರೆಗಳಿಗೆ ನೀರು ಹರಿಸುವ ಸಂದರ್ಭದಲ್ಲಿ ಕೆಲವರು ತಮ್ಮ ಕೆರೆಗೆ ಹೆಚ್ಚು ನೀರು ಬರಬೇಕೆಂಬ ಸ್ವಾರ್ಥದಿಂದ ನೀರಿನ ಹರಿವಿನ ನಿಯಂತ್ರಣ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುವುದರಿಂದ ಇತರ ಪ್ರದೇಶಗಳ ರೈತರಿಗೆ ತೊಂದರೆಯಾಗುತ್ತದೆ ಎಂಬ ಕಹಿ ಅನುಭವವನ್ನು ಹಂಚಿಕೊಂಡರು.
ನಮಗೆ ಹೆಚ್ಚು ನೀರು ಸಿಗದಿದ್ದರೂ ಪರವಾಗಿಲ್ಲ, ಇನ್ನೊಬ್ಬರಿಗೂ ನೀರು ದೊರೆಯಲಿ ಎಂಬ ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು. ಅದೇ ನಿಜವಾದ ಮಾನವೀಯತೆ. ಎಲ್ಲ ರೈತರೂ ಪರಸ್ಪರ ಸಹಕಾರದಿಂದ ನಡೆದುಕೊಂಡಾಗ ಮಾತ್ರ ಜಲಯೋಜನೆಗಳ ಉದ್ದೇಶ ಸಾರ್ಥಕವಾಗುತ್ತದೆ ಎಂದರು.

ವೈಜ್ಞಾನಿಕವಾಗಿ ರೂಪುಗೊಂಡ 57 ಕೆರೆಗಳ ಯೋಜನೆ
ಹಿಂದಿನ ಜಲಯೋಜನೆಗಳ ಅನುಭವದಿಂದ ಹಲವು ಪಾಠಗಳನ್ನು ಕಲಿಯಲಾಗಿದೆ. ನೀರಿನ ಹಂಚಿಕೆ, ಕೆರೆಗಳ ಸಾಮರ್ಥ್ಯ, ತಾಂತ್ರಿಕ ನಿರ್ವಹಣೆ ಮತ್ತು ನೀರಿನ ಹರಿವಿನ ನಿಯಂತ್ರಣದ ವಿಚಾರಗಳಲ್ಲಿ ಎದುರಾದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಪರಮಸಾಗರ ಮತ್ತು ಜಗಳೂರು ಎತ್ತಿನಹೊಳೆ ಯೋಜನೆಗಳನ್ನು ವೈಜ್ಞಾನಿಕವಾಗಿ ರೂಪಿಸಲಾಗಿದೆ ಎಂದು ತರಳಬಾಳು ಶ್ರೀಗಳು ಹೇಳಿದರು.
ಚನ್ನಗಿರಿ, ಉಬ್ರಾಣಿ ಸೇರಿದಂತೆ ಇತರ ಭಾಗಗಳ ಯೋಜನೆಗಳಲ್ಲಿ ಎದುರಾದ ಸಮಸ್ಯೆಗಳನ್ನು ಉಲ್ಲೇಖಿಸಿದ ಅವರು, ಹಿಂದಿನ ಅನುಭವಗಳ ಆಧಾರದ ಮೇಲೆ ಹೊಸ ಯೋಜನೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸುವ ಪ್ರಯತ್ನ ಮಾಡಲಾಗಿದೆ ಎಂದರು.
ಜಗಳೂರು ಭಾಗದ ಜನರು ಹಲವು ವರ್ಷಗಳಿಂದ ಬರಗಾಲದ ಸಂಕಷ್ಟ ಅನುಭವಿಸಿದ್ದಾರೆ. ನೀರಿನ ಮಹತ್ವ ಮತ್ತು ಅದರ ಅಗತ್ಯತೆ ಅವರಿಗೆ ಚೆನ್ನಾಗಿ ತಿಳಿದಿದೆ. ಕಷ್ಟ ಅನುಭವಿಸಿದವರಿಗೆ ನೀರಿನ ಮೌಲ್ಯ ಹೆಚ್ಚು ಅರ್ಥವಾಗುತ್ತದೆ. ಆದ್ದರಿಂದ ನೀರು ದೊರೆತಿರುವ ಈ ಸಂದರ್ಭದಲ್ಲಿ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಜವಾಬ್ದಾರಿಯೂ ಜನರ ಮೇಲಿದೆ ಎಂದು ತಿಳಿಸಿದರು.

ಫಲವತ್ತಾದ ಭೂಮಿಯಲ್ಲಿ ಸಮೃದ್ಧಿಯ ಹೊಸ ಅಧ್ಯಾಯ
ಜಗಳೂರು ಭಾಗದ ಭೂಮಿಯ ಫಲವತ್ತತೆಯನ್ನು ಮೆಚ್ಚಿದ ತರಳಬಾಳು ಶ್ರೀಗಳು, ಈ ಪ್ರದೇಶದ ಕೃಷಿಭೂಮಿ ಅತ್ಯಂತ ಉತ್ಕೃಷ್ಟವಾಗಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಜಗಳೂರು ತಾಲ್ಲೂಕು ಕೃಷಿ ಮತ್ತು ವಾಣಿಜ್ಯ ಚಟುವಟಿಕೆಗಳಲ್ಲಿ ಚನ್ನಗಿರಿ ತಾಲ್ಲೂಕನ್ನೂ ಮೀರಿಸುವ ಸಾಮರ್ಥ್ಯ ಹೊಂದಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಇಲ್ಲಿನ ಪ್ರಕೃತಿ ಸಂಪತ್ತು, ಕೃಷಿಗೆ ಅನುಕೂಲಕರವಾದ ಮಣ್ಣು ಮತ್ತು ನೀರಿನ ಲಭ್ಯತೆ ರೈತರ ಬದುಕಿನಲ್ಲಿ ದೊಡ್ಡ ಬದಲಾವಣೆ ತರಲಿದೆ. ನೀರಾವರಿ ಸೌಲಭ್ಯ ಸಮರ್ಪಕವಾಗಿ ಬಳಕೆಯಾದರೆ ಕೃಷಿ ಮಾತ್ರವಲ್ಲದೆ ವ್ಯಾಪಾರ, ಉದ್ಯಮಗಳೂ ಬೆಳೆಯಲಿವೆ. ರೈತರ ಆದಾಯ ಹೆಚ್ಚಾಗಿ ಗ್ರಾಮೀಣ ಆರ್ಥಿಕತೆ ಬಲಗೊಳ್ಳಲಿದೆ ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸಿದರು.

ಕೆರೆಗಳ ಕೋಡಿಯಂತೆ ಜನರ ಹೃದಯದಲ್ಲೂ ಸಂತಸದ ಕೋಡಿ ಹರಿಯಲಿ
ಜಗಳೂರಿನ 57 ಕೆರೆಗಳು ತುಂಬಿರುವುದು ಸಂತಸದ ಸಂಗತಿ. ಆದರೆ ಕೆರೆಗಳ ಕೋಡಿ ಹರಿಯುವುದಕ್ಕಿಂತಲೂ ಜನರ ಹೃದಯದಲ್ಲಿ ಸಂತೋಷದ ಕೋಡಿ ಹರಿಯುವುದು ಮುಖ್ಯ ಎಂದು ತರಳಬಾಳು ಶ್ರೀಗಳು ಹೇಳಿದರು.
ನವೆಂಬರ್ ಅಥವಾ ಡಿಸೆಂಬರ್‌ವರೆಗೆ ಕಾಯದೆ, ನೀರು ಬಂದಿರುವ ಒಂದು ಅಥವಾ ಎರಡು ತಿಂಗಳಲ್ಲಿಯೇ ಜನರ ಬದುಕಿನಲ್ಲಿ ಬದಲಾವಣೆಯ ಲಕ್ಷಣಗಳು ಕಾಣಿಸಿಕೊಳ್ಳಲಿವೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು. ಕಳೆದ ವರ್ಷ ತುಪ್ಪದಹಳ್ಳಿ ಕೆರೆ ತುಂಬಿ ಅಗರಿಹಳ್ಳದಲ್ಲಿ ನೀರು ಹರಿದಾಗ ಆ ಭಾಗದ ಜನರಲ್ಲಿ ಉಂಟಾದ ಸಂಭ್ರಮವನ್ನು ನೆನಪಿಸಿಕೊಂಡರು.
ಸಿರಿಗೆರೆಯ ಶಾಂತಿವನದಿಂದ ಅಗರಿಹಳ್ಳದ ಮೂಲಕ ಮಲ್ಲವಿ ಡ್ಯಾಂವರೆಗೂ ನೀರು ಹರಿಯುವಂತೆ ಮಾಡುವ ಕನಸನ್ನು ವ್ಯಕ್ತಪಡಿಸಿದ ಅವರು, ಹಿಂದಿನ ರಾಜಮಹಾರಾಜರು ನಿರ್ಮಿಸಿದ ಜಲಮೂಲಗಳ ಮಹತ್ವವನ್ನು ಈಗ ಮತ್ತಷ್ಟು ಅರಿಯುವಂತಾಗಿದೆ. ಮುಂದಿನ ದಿನಗಳಲ್ಲಿ ಈ ಭಾಗದ ಎಲ್ಲ ಕೆರೆಗಳಿಗೂ ನೀರು ಹರಿಯುವಂತೆ ಪ್ರಯತ್ನ ಮುಂದುವರಿಯಲಿದೆ ಎಂದು ಭರವಸೆ ನೀಡಿದರು.
ಗುರುಸಿದ್ಧಾಪುರದ ಕೆರೆಯ ಕೋಡಿ ಹರಿಯಲಿ, ಅದರಂತೆ ಜನರ ಬದುಕಿನಲ್ಲೂ ಸಂತೋಷ, ಸಮೃದ್ಧಿ ತುಂಬಿ ತುಳುಕಲಿ ಎಂದು ಹಾರೈಸಿದರು.

ರಾಜಕೀಯಕ್ಕಿಂತ ಸಮಾಜದ ಅಭಿವೃದ್ಧಿಯೇ ಮುಖ್ಯ
ಜಗಳೂರು ಕ್ಷೇತ್ರದ ಜನಪ್ರತಿನಿಧಿಗಳಾದ ರಾಜೇಶ್, ರಾಮಚಂದ್ರಪ್ಪ ಮತ್ತು ದೇವೇಂದ್ರಪ್ಪ ಅವರು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಅಭಿವೃದ್ಧಿ ಕಾರ್ಯಗಳಿಗೆ ಒಟ್ಟಾಗಿ ಕೈಜೋಡಿಸಿರುವುದು ಇತರರಿಗೆ ಮಾದರಿಯಾಗಿದೆ ಎಂದು ತರಳಬಾಳು ಶ್ರೀಗಳು ಹೇಳಿದರು.
ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಆದರೆ ಸಮಾಜದ ಅಭಿವೃದ್ಧಿ, ರೈತರ ಹಿತ ಮತ್ತು ಜನರ ಬದುಕಿನ ಪ್ರಶ್ನೆ ಬಂದಾಗ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು. ಇಂತಹ ಒಗ್ಗಟ್ಟಿನ ಮನೋಭಾವವೇ ಕ್ಷೇತ್ರದ ಪ್ರಗತಿಗೆ ಬಲ ನೀಡುತ್ತದೆ ಎಂದರು.

ಎತ್ತುಗಳ ಶೃಂಗಾರ, ಎತ್ತಿನ ಬಂಡಿಗಳ ಮೆರವಣಿಗೆಗೆ ತರಳಬಾಳು ಶ್ರೀಗಳ ಮೆಚ್ಚುಗೆ
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದ 57 ಎತ್ತಿನ ಬಂಡಿಗಳ ಮೆರವಣಿಗೆಯ ಕುರಿತು ತರಳಬಾಳು ಶ್ರೀಗಳು ವಿಶೇಷವಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಎರಡು ಸಾಲುಗಳಲ್ಲಿ ಅಲಂಕೃತವಾಗಿ ನಿಂತಿದ್ದ ಎತ್ತುಗಳು, ಬಂಡಿಗಳಿಗೆ ಮಾಡಿದ್ದ ಸಾಂಪ್ರದಾಯಿಕ ಶೃಂಗಾರ ಹಾಗೂ ಗ್ರಾಮೀಣ ಸಂಸ್ಕೃತಿಯ ಪ್ರತಿಬಿಂಬವಾಗಿದ್ದ ಮೆರವಣಿಗೆ ಮನಸ್ಸಿಗೆ ಅಪಾರ ಸಂತೋಷ ನೀಡಿತು ಎಂದರು.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಎತ್ತುಗಳನ್ನು ಶೃಂಗರಿಸುವ ಸಂಪ್ರದಾಯದಂತೆ, ಇಲ್ಲಿ ಎತ್ತುಗಳಿಗೆ ಅಲಂಕಾರ ಮಾಡಿರುವುದು ಗ್ರಾಮೀಣ ಬದುಕಿನ ಸೊಗಡನ್ನು ನೆನಪಿಸಿತು. ಇಂತಹ ಆಚರಣೆಗಳು ನಮ್ಮ ಕೃಷಿ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುತ್ತವೆ ಎಂದು ಹೇಳಿದರು.

ಜಗಳೂರಿನ ಈ ಜಲಸಂಭ್ರಮ ಕೇವಲ ಒಂದು ದಿನದ ಕಾರ್ಯಕ್ರಮವಾಗಿ ಉಳಿಯದೆ, ಮುಂದಿನ ವರ್ಷಗಳಲ್ಲಿಯೂ ಇದೇ ರೀತಿಯ ಸಂಭ್ರಮ, ಸಂತೋಷ ಮತ್ತು ಸಮೃದ್ಧಿ ಈ ಭಾಗದಲ್ಲಿ ನಿರಂತರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಜಗಳೂರಿನ 57 ಕೆರೆಗಳ ತುಂಬುವಿಕೆ ಬರದನಾಡಿನ ಇತಿಹಾಸದಲ್ಲಿ ಹೊಸ ಅಧ್ಯಾಯ ತೆರೆದಿದೆ. ಕೆರೆಗಳ ಒಡಲಲ್ಲಿ ನೀರು ತುಂಬಿದಂತೆ ರೈತರ ಬದುಕಿನಲ್ಲಿ ಭರವಸೆ ತುಂಬಿದೆ. 57 ಎತ್ತಿನ ಬಂಡಿಗಳ ಮೆರವಣಿಗೆ, ಜನಪದ ಕಲೆಯ ವೈಭವ, ಮಹಿಳೆಯರ ಕುಂಭಮೇಳ, ಸಾಂಪ್ರದಾಯಿಕ ವಾದ್ಯಗಳ ನಾದ ಹಾಗೂ ಸಾವಿರಾರು ಜನರ ಭಾಗವಹಿಸುವಿಕೆ ಈ ಜಲಸಂಭ್ರಮವನ್ನು ಸ್ಮರಣೀಯವಾಗಿಸಿದೆ. ನೀರಿನ ಹನಿಯಿಂದ ಸಮೃದ್ಧಿಯ ಬೆಳೆಯವರೆಗೆ ಸಾಗುವ ಜಗಳೂರಿನ ಹೊಸ ಪಯಣಕ್ಕೆ ಈ ಸಂಭ್ರಮೋತ್ಸವ ಸಾಕ್ಷಿಯಾಗಿದೆ





