ಫ್ರೀಡಂ ಪಾರ್ಕ್ನಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ; ಯಡಿಯೂರಪ್ಪ, ವಿಜಯೇಂದ್ರ, ಅಶೋಕ್ ಸೇರಿದಂತೆ ಪ್ರಮುಖ ನಾಯಕರಿಂದ ಸರಕಾರದ ವಿರುದ್ಧ ವಾಗ್ದಾಳಿ
ಬೆಂಗಳೂರು: ಬೆಲೆ ಏರಿಕೆಯ ಬಿಸಿಯಲ್ಲಿ ಬೆಂದುಹೋಗುತ್ತಿರುವ ಜನಸಾಮಾನ್ಯರ ಆಕ್ರೋಶಕ್ಕೆ ಧ್ವನಿಯಾಗಿ ಬಿಜೆಪಿ ನಾಯಕರು ಬೀದಿಗಿಳಿದಿದ್ದಾರೆ. ಒಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆ, ಮತ್ತೊಂದೆಡೆ ಗ್ಯಾರಂಟಿಗಳ ಹೆಸರಿನಲ್ಲಿ ಜನರಿಗೆ ನೀಡಿದ ಭರವಸೆಗಳ ಅನುಷ್ಠಾನದಲ್ಲಿನ ಗೊಂದಲ, ಅದರ ಬೆನ್ನಲ್ಲೇ ಹೆಚ್ಚುತ್ತಿರುವ ಆರ್ಥಿಕ ಹೊರೆ. ಇವೆಲ್ಲದರ ನಡುವೆ ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ನಾಯಕರು ಫ್ರೀಡಂ ಪಾರ್ಕ್ನಲ್ಲಿ ಸಮರ ಸಾರಿದರು. ವೇದಿಕೆಯ ಮೇಲೆ ನಾಯಕರ ಆಕ್ರೋಶದ ಮಾತುಗಳು ಮೊಳಗಿದರೆ, ಕಾರ್ಯಕರ್ತರ ಘೋಷಣೆಗಳು ಹೋರಾಟಕ್ಕೆ ಮತ್ತಷ್ಟು ಕಿಚ್ಚು ಹಚ್ಚಿದವು. 2028ರ ವಿಧಾನಸಭೆ ಚುನಾವಣೆಯನ್ನು ಗುರಿಯಾಗಿಸಿಕೊಂಡು ಬಿಜೆಪಿ-ಎನ್ಡಿಎ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸದೊಂದಿಗೆ ಕಾಂಗ್ರೆಸ್ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಸಂಕಲ್ಪವನ್ನು ನಾಯಕರು ವ್ಯಕ್ತಪಡಿಸಿದರು.
ರಾಜ್ಯ ಸರಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಬಿಜೆಪಿ ರಾಜ್ಯ ಘಟಕದ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್, ಮಾಜಿ ಸಚಿವರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಪಕ್ಷದ ಪ್ರಮುಖ ಮುಖಂಡರು ಭಾಗವಹಿಸಿದ್ದರು.
ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್, ಹಾಲು, ಮೊಸರು, ತುಪ್ಪ, ವಿದ್ಯುತ್, ಬಸ್ ಪ್ರಯಾಣ ದರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬೆಲೆ ಏರಿಕೆಯಾಗಿದೆ ಎಂದು ಆರೋಪಿಸಿದ ಬಿಜೆಪಿ ನಾಯಕರು, ಜನಸಾಮಾನ್ಯರ ಬದುಕಿನ ಮೇಲೆ ಸರಕಾರ ಆರ್ಥಿಕ ಹೊರೆ ಹೇರುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿ, ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯಿರಿ: ಯಡಿಯೂರಪ್ಪ
ಬಿಜೆಪಿ ಮುಖಂಡರು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಬೇಕು. ಕಾಂಗ್ರೆಸ್ ಸರಕಾರದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು, ಈ ಸರಕಾರವನ್ನು ಅಧಿಕಾರದಿಂದ ಕಿತ್ತೊಗೆಯಲು ಕಾರ್ಯಕರ್ತರನ್ನು ಪ್ರೇರೇಪಿಸಬೇಕು. ಆಗ ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ ಅಧಿಕಾರಕ್ಕೆ ಬರುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ಕಾಂಗ್ರೆಸ್ ಸರಕಾರ ದಿವಾಳಿಯಾಗಿದೆ. ಸರಕಾರಿ ಬಸ್ಸುಗಳಿಗೆ ಡೀಸೆಲ್ ಹಾಕಿಸಲು ಸಾಧ್ಯವಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಹೇಳಿದ್ದಾರೆ. ಇಂತಹ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿರುವುದು ಸರಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿ ಎಂದು ಟೀಕಿಸಿದರು.
ಹಣ, ಹೆಂಡ, ತೋಳ್ಬಲ ಮತ್ತು ಅಧಿಕಾರ ಬಲದಿಂದ ಮತ್ತೆ ಅಧಿಕಾರಕ್ಕೆ ಬರಬಹುದು ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಪಕ್ಷವಿದೆ. ಆದರೆ ಜನರು ಈಗಾಗಲೇ ಆ ಪಕ್ಷದ ಆಡಳಿತದ ಬಗ್ಗೆ ಬೇಸರಗೊಂಡಿದ್ದಾರೆ. ಜನರ ತೀರ್ಪು ಕಾಂಗ್ರೆಸ್ಗೆ ವಿರುದ್ಧವಾಗಿರಲಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಮಾತುಗಳನ್ನು ಇಡೀ ವಿಶ್ವವೇ ಕುತೂಹಲದಿಂದ ಆಲಿಸುತ್ತದೆ. ಅಂತಹ ಮಹಾನ್ ನಾಯಕ ನರೇಂದ್ರ ಮೋದಿ ಅವರು ನಾಡಿದ್ದು ಮೈಸೂರಿಗೆ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕರ್ತರು ಮೈಮರೆತು ಕೂರದೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟ ನಡೆಸಬೇಕು. ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ನಿರಂತರವಾಗಿ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.

2028ರಲ್ಲಿ ಕಾಂಗ್ರೆಸ್ ಮುಖಕ್ಕೆ ಜನತೆ ಮಂಗಳಾರತಿ ಮಾಡಲಿದ್ದಾರೆ: ಆರ್.ಅಶೋಕ್
ಎಥೆನಾಲ್ ವಿಚಾರವನ್ನು ಮುಂದಿಟ್ಟುಕೊಂಡು ರಾಜ್ಯದ ಬೆಲೆ ಏರಿಕೆ ಸಮಸ್ಯೆಯಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಕಾಂಗ್ರೆಸ್ ಸರಕಾರ ಪ್ರಯತ್ನಿಸುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದರು.
ಜಗತ್ತಿನ ಹಲವು ದೇಶಗಳಲ್ಲಿ ಶೇ.80ರಷ್ಟು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ. ರೈತರ ಹಿತದೃಷ್ಟಿಯಿಂದ ಈ ವ್ಯವಸ್ಥೆ ಜಾರಿಯಲ್ಲಿದೆ. ಭಾರತದಲ್ಲಿಯೂ ಶೇ.20ರಷ್ಟು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದ್ದು, ಇದರಿಂದ ರೈತರಿಗೆ ಅನುಕೂಲವಾಗುತ್ತಿದೆ. ಆದರೆ ರೈತರ ಆದಾಯಕ್ಕೆ ನೆರವಾಗುವ ಈ ವ್ಯವಸ್ಥೆಗೂ ಅಡ್ಡಿಪಡಿಸುವ ಪ್ರಯತ್ನವನ್ನು ರಾಜ್ಯ ಸರಕಾರ ಮಾಡುತ್ತಿದೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರನ್ನು ತಟ್ಟುತ್ತಿದೆ. ಬಸ್ ಪ್ರಯಾಣ ದರ ಹೆಚ್ಚಳ, ಹಾಲಿನ ಬೆಲೆ ಏರಿಕೆ, ಮೊಸರು ಮತ್ತು ತುಪ್ಪದ ದರ ಹೆಚ್ಚಳದ ಬಗ್ಗೆ ಜನರು ಪ್ರಶ್ನಿಸುತ್ತಿದ್ದಾರೆ. ಈ ವಿಚಾರಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಎಥೆನಾಲ್ ವಿಚಾರವನ್ನು ಮುನ್ನೆಲೆಗೆ ತರಲಾಗಿದೆ ಎಂದು ಆಕ್ಷೇಪಿಸಿದರು.
ಮೊಸರಿನ ದರದಲ್ಲಿ ಹೆಚ್ಚಳವಾಗಿರುವ ಪ್ರತಿ ಕೆ.ಜಿ.ಗೆ ಹೆಚ್ಚುವರಿ 14 ರೂ.ಗಳಲ್ಲಿ ರೈತರಿಗೆ ಎಷ್ಟು ಹಣ ಸಿಗುತ್ತಿದೆ? ತುಪ್ಪದ ದರ ಹೆಚ್ಚಳದಿಂದ ಯಾರಿಗೆ ಲಾಭವಾಗುತ್ತಿದೆ? ಎಂಬ ಪ್ರಶ್ನೆಗಳಿಗೆ ಸರಕಾರ ಉತ್ತರಿಸಬೇಕು ಎಂದು ಆಗ್ರಹಿಸಿದರು.
ಬೆಲೆ ಏರಿಕೆಯಿಂದ ಜನರು ಸಂಕಷ್ಟದಲ್ಲಿದ್ದರೂ ಸರಕಾರ ತನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಿಲ್ಲ. ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲು ವಿಷಯಾಂತರ ಮಾಡುವ ಕೆಲಸದಲ್ಲಿ ತೊಡಗಿದೆ. 2028ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನರೇ ಕಾಂಗ್ರೆಸ್ ಮುಖಕ್ಕೆ ಮಂಗಳಾರತಿ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಡಿಕೆ, ಬಿಕೆ, ಪಿಕೆ ಆಟ ಇನ್ನು ನಡೆಯುವುದಿಲ್ಲ: ವಿಜಯೇಂದ್ರ
ಕಾಂಗ್ರೆಸ್ ಸರಕಾರಕ್ಕೆ ಮಾನ-ಮರ್ಯಾದೆ ಇದೆಯೇ ಎಂದು ರಾಜ್ಯದ ಬಡವರು ಮತ್ತು ರೈತರು ಪ್ರಶ್ನಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಮೂರೂವರೆ ವರ್ಷಗಳಲ್ಲಿ ಈ ಸರಕಾರದ ಪ್ರಮುಖ ಸಾಧನೆಯೆಂದರೆ ಬೆಲೆ ಏರಿಕೆ ಮಾತ್ರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಬೆಲೆ ಏರಿಕೆಯ ನೀತಿಯಿಂದ ಜನಸಾಮಾನ್ಯರು, ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳು ಜೀವನ ಸಾಗಿಸುವುದೇ ಕಷ್ಟವಾಗಿದೆ. ಮನುಷ್ಯತ್ವವಿಲ್ಲದ ಕಾಂಗ್ರೆಸ್ ಸರಕಾರಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ ಎಂದು ಹೇಳಿದರು.
ಕಳೆದ ಮೂರೂವರೆ ವರ್ಷಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ನಾಲ್ಕು ಬಾರಿ ಹೆಚ್ಚಿಸಲಾಗಿದೆ. ಸ್ಟಾಂಪ್ ಡ್ಯೂಟಿ ಹೆಚ್ಚಳ ಮಾಡಲಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿಯೂ ವಿವಿಧ ಸೇವೆಗಳ ದರ ಏರಿಸುವ ಮೂಲಕ ಬಡವರ ಮೇಲೆ ಹೊರೆ ಹಾಕಲಾಗಿದೆ. ದೀಪಾವಳಿ ಸಂದರ್ಭದಲ್ಲಿ ಹಾಲಿನ ದರವನ್ನು 8 ರೂ. ಹೆಚ್ಚಿಸಲಾಗಿದ್ದು, ಮೊಸರು ಮತ್ತು ತುಪ್ಪದ ದರವನ್ನೂ ಏರಿಸಲಾಗಿದೆ ಎಂದು ಆರೋಪಿಸಿದರು.
ರೈತರಿಗೆ ಅನುಕೂಲವಾಗುವಂತೆ ಬೆಲೆ ಏರಿಕೆಯ ಹೊರೆ ಕಡಿಮೆ ಮಾಡಲು ಸರಕಾರ ಸಬ್ಸಿಡಿ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿತ್ತು. ಆದರೆ ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಡಳಿತದ ಮಾದರಿಯಲ್ಲಿ ರೈತರಿಗೆ ನೆರವಾಗುವ ಕ್ರಮಗಳನ್ನು ಈ ಸರಕಾರ ಕೈಗೊಂಡಿಲ್ಲ ಎಂದು ಟೀಕಿಸಿದರು.
ಹೈಕೋರ್ಟ್ ಚಾಟಿ ಬೀಸಿದೆ
ಬೆಲೆ ಏರಿಕೆ ವಿಚಾರದಲ್ಲಿ ರಾಜ್ಯ ಸರಕಾರದ ವಿರುದ್ಧ ಹೈಕೋರ್ಟ್ ಚಾಟಿ ಬೀಸಿರುವುದನ್ನು ಉಲ್ಲೇಖಿಸಿದ ವಿಜಯೇಂದ್ರ, ಸರಕಾರದ ಆಡಳಿತ ವೈಖರಿಯ ಬಗ್ಗೆ ನ್ಯಾಯಾಂಗವೂ ಪ್ರಶ್ನೆ ಎತ್ತುವ ಪರಿಸ್ಥಿತಿ ಬಂದಿದೆ ಎಂದು ಹೇಳಿದರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆಡಳಿತದಲ್ಲಿ ರಾಜ್ಯದ ಬಡವರು ಕಣ್ಣೀರು ಹಾಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ರೈತರನ್ನು ಭಿಕ್ಷುಕರಂತೆ ನೋಡಿದ ಸರಕಾರ
ರಾಜ್ಯದಲ್ಲಿ ಭೀಕರ ಬರಗಾಲ ಎದುರಾದ ಸಂದರ್ಭದಲ್ಲಿ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಬಿಜೆಪಿ ಒತ್ತಾಯಿಸಿತ್ತು. ಈ ಹಿನ್ನೆಲೆಯಲ್ಲಿ ಬಳ್ಳಾರಿ ಚಲೋ ಪಾದಯಾತ್ರೆ ನಡೆಸಲಾಗಿತ್ತು. ಆದರೆ ಮುಖ್ಯಮಂತ್ರಿ ವಿಶೇಷ ಅಧಿವೇಶನದ ಹೆಸರಿನಲ್ಲಿ ನಾಟಕವಾಡಿ, ಒಂದು ಕುಟುಂಬಕ್ಕೆ 2,500 ರೂ. ಪರಿಹಾರ ಘೋಷಿಸಿದರು. ಅನ್ನ ನೀಡುವ ರೈತರನ್ನು ಭಿಕ್ಷುಕರಂತೆ ಪರಿಗಣಿಸುವ ಮನೋಭಾವವನ್ನು ಸರಕಾರ ತೋರಿದೆ ಎಂದು ಟೀಕಿಸಿದರು.
ಕೆಲವು ರೈತರಿಗೆ 200, 300 ರೂ.ಗಳಷ್ಟು ಪರಿಹಾರ ನೀಡಿ ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದಂತೆ ತೋರಿಸಲಾಗುತ್ತಿದೆ. ಇದು ರೈತರಿಗೆ ಮಾಡುತ್ತಿರುವ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮನೆಗೆ ಹೋಗುವ ದಿನ ಹತ್ತಿರ ಬಂದಿದೆ
ವಿಧಾನಪರಿಷತ್ತಿನ ನಾಲ್ಕು ಕ್ಷೇತ್ರಗಳ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ-ಎನ್ಡಿಎಗೆ ಜನರು ಆಶೀರ್ವಾದ ಮಾಡಿದ್ದಾರೆ. ಇದು ಕಾಂಗ್ರೆಸ್ ಸರಕಾರದ ವಿರುದ್ಧ ಜನರಲ್ಲಿರುವ ಅಸಮಾಧಾನಕ್ಕೆ ಸಾಕ್ಷಿ ಎಂದು ಹೇಳಿದರು.
ಡಿಕೆ, ಬಿಕೆ, ಪಿಕೆ ಅವರಿಗೆ ಒಂದು ಮಾತು ಹೇಳಬಯಸುತ್ತೇನೆ. ನಿಮ್ಮ ಆಟ ಇನ್ನು ನಡೆಯುವುದಿಲ್ಲ. ಗಂಟುಮೂಟೆ ಕಟ್ಟಿಕೊಂಡು ಮನೆಗೆ ಹೋಗುವ ದಿನಗಳು ಹತ್ತಿರ ಬಂದಿವೆ ಎಂದು ವಿಜಯೇಂದ್ರ ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಯಾವಾಗ ಚುನಾವಣೆ ನಡೆದರೂ ಜನರು ಕಾಂಗ್ರೆಸ್ ಸರಕಾರವನ್ನು ಮನೆಗೆ ಕಳುಹಿಸಲಿದ್ದಾರೆ. ಗ್ಯಾರಂಟಿಗಳ ಜೊತೆಗೆ ಬೆಲೆ ಏರಿಕೆಯನ್ನು ಆರನೇ ಗ್ಯಾರಂಟಿಯಾಗಿ ಜನರಿಗೆ ನೀಡಲಾಗಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರವನ್ನು ಜನರು ಅಧಿಕಾರಕ್ಕೆ ತರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಖಜಾನೆ ಖಾಲಿಯಾದ ಸರಕಾರ: ಜಗದೀಶ ಶೆಟ್ಟರ್
ರಾಜ್ಯದ ಖಜಾನೆ ಖಾಲಿಯಾಗಿದೆ. ಸರಕಾರ ಪ್ರತಿಯೊಂದು ವಸ್ತುವಿನ ಬೆಲೆಯನ್ನೂ ಹೆಚ್ಚಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆರೋಪಿಸಿದರು.
ರಾಜ್ಯ ಸರಕಾರದ ಆಡಳಿತದ ಮೇಲೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಿಯಂತ್ರಣವೇ ಇಲ್ಲದಂತಾಗಿದೆ ಎಂದು ಟೀಕಿಸಿದರು. ಕಾಂಗ್ರೆಸ್ ಶಾಸಕರೇ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಉಚಿತ ಸಾರಿಗೆ ಯೋಜನೆಯಡಿ ಸಾರಿಗೆ ಸಂಸ್ಥೆಗಳಿಗೆ ಪಾವತಿಸಬೇಕಾದ ಸುಮಾರು 6,000 ಕೋಟಿ ರೂ. ಹಣವನ್ನು ಸರಕಾರ ಬಾಕಿ ಉಳಿಸಿಕೊಂಡಿದೆ ಎಂದು ಆರೋಪಿಸಿದರು.
ಸ್ಟಿಂಗ್ ಆಪರೇಷನ್ ಮತ್ತು ಎಥೆನಾಲ್ ವಿಚಾರಗಳನ್ನು ಮುನ್ನೆಲೆಗೆ ತಂದು ಜನರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಶಿವಕುಮಾರ್ ನೇತೃತ್ವದ ಸರಕಾರದ ಅಂತ್ಯ ಸಮೀಪಿಸುತ್ತಿದೆ ಎಂದು ಹೇಳಿದರು.
ಪ್ರತಿಯೊಂದು ಉತ್ಪನ್ನಕ್ಕೂ ಬೆಲೆ ಹೆಚ್ಚಳ: ಯದುವೀರ ಒಡೆಯರ್
ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ರಾಜ್ಯದಲ್ಲಿ ಶೂನ್ಯ ಪ್ರಗತಿಯ ಸರಕಾರ ಆಡಳಿತ ನಡೆಸುತ್ತಿದೆ ಎಂದು ಟೀಕಿಸಿದರು.
ಪ್ರತಿಯೊಂದು ಉತ್ಪನ್ನದ ಬೆಲೆಯನ್ನೂ ಹೆಚ್ಚಿಸಲಾಗಿದೆ. ಜನರಿಗೆ ನೀಡುವುದಾಗಿ ಘೋಷಿಸಿದ ಗ್ಯಾರಂಟಿ ಯೋಜನೆಗಳನ್ನೂ ಸಮರ್ಪಕವಾಗಿ ಜಾರಿಗೊಳಿಸುತ್ತಿಲ್ಲ. ಬೆಲೆ ಏರಿಕೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

ಯಾವುದಕ್ಕೆ ಬೆಲೆ ಏರಿಸಿಲ್ಲ ಎಂದು ಹುಡುಕುವುದೇ ಕಷ್ಟ: ಛಲವಾದಿ ನಾರಾಯಣಸ್ವಾಮಿ
ಕಾಂಗ್ರೆಸ್ ಸರಕಾರ ಯಾವುದಕ್ಕೆ ಬೆಲೆ ಏರಿಸಿಲ್ಲ ಎಂದು ಹುಡುಕುವುದೇ ಕಷ್ಟವಾಗಿದೆ ಎಂದು ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದರು.
ಜನರ ಆಕ್ರೋಶಕ್ಕೆ ಸ್ಪಂದಿಸಿ ಬಿಜೆಪಿ ಹೋರಾಟಕ್ಕೆ ಮುಂದಾಗಿದೆ. ಹಾಲು, ನೀರು, ಬಸ್ ಪ್ರಯಾಣ ದರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಬೆಲೆ ಏರಿಕೆಯಾಗಿದೆ. ವಿದ್ಯುತ್ ದರವೂ ಹೆಚ್ಚಳವಾಗುವ ಆತಂಕ ಜನರನ್ನು ಕಾಡುತ್ತಿದೆ. ಜನರ ಮೇಲೆ ನಿರಂತರವಾಗಿ ಆರ್ಥಿಕ ಹೊರೆ ಹಾಕಿ ಇನ್ನೊಂದು ವರ್ಷ ಕಳೆಯುವ ಲೆಕ್ಕಾಚಾರದಲ್ಲಿ ಸರಕಾರ ತೊಡಗಿದೆ ಎಂದು ಆರೋಪಿಸಿದರು.
ಚುನಾವಣೆಗೂ ಮೊದಲು ಜನರ ಬಳಿ ಮತಭಿಕ್ಷೆ ಕೇಳಿದ ಕಾಂಗ್ರೆಸ್ ನಾಯಕರು, ಅಧಿಕಾರಕ್ಕೆ ಬಂದ ನಂತರ ಎಲ್ಲದಕ್ಕೂ ಕತ್ತರಿ ಹಾಕುತ್ತಿದ್ದಾರೆ. ಕೇಂದ್ರ ಸರಕಾರ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನೀಡುತ್ತಿರುವ ಅಕ್ಕಿಯನ್ನೇ ರಾಜ್ಯ ಸರಕಾರ ಜನರಿಗೆ ವಿತರಿಸುತ್ತಿದೆ ಎಂದು ಟೀಕಿಸಿದರು.
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳನ್ನೂ ಸಂಕಷ್ಟಕ್ಕೆ ಸಿಲುಕಿಸಲಾಗಿದೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರಿಗೆ ಭರವಸೆ ನೀಡಿ, ಮತ್ತೊಂದೆಡೆ ಬೆಲೆ ಏರಿಕೆ ಮೂಲಕ ಹಣ ವಸೂಲಿ ಮಾಡಲಾಗುತ್ತಿದೆ. ಇದು ಗ್ಯಾರಂಟಿ ಚೋರಿ ಸರಕಾರ ಎಂದು ಕಿಡಿಕಾರಿದರು.
ಗ್ಯಾರಂಟಿ ಹಣವನ್ನು 300, 400, 700 ಹಾಗೂ 2,000 ರೂ.ಗಳಂತೆ ವಿವಿಧ ಮೊತ್ತಗಳಲ್ಲಿ ಜಮೆ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ಮತ ಕೇಳಲು ಹೋದಾಗ ಜನರ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.
ಚಾಕು, ಚೂರಿ ಸಂಸ್ಕೃತಿಯ ಆರೋಪ
ಕಾಂಗ್ರೆಸ್ ಪಕ್ಷದ ಸಂಸ್ಕೃತಿಯೇ ಚಾಕು, ಚೂರಿ ಸಂಸ್ಕೃತಿಯಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು. 2028ರಲ್ಲಿ ರಾಜ್ಯದ ಜನರು ಮನಸ್ಸು ಮಾಡಿದರೆ ಕಾಂಗ್ರೆಸ್ ನಾಯಕರನ್ನು ಅರಬ್ಬಿ ಸಮುದ್ರದಲ್ಲಿ ಹುಡುಕಿದರೂ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದರು.

ಬೆಲೆ ಏರಿಕೆಯಿಂದ ಜನರ ಬದುಕು ದುಸ್ತರ: ಅರಗ ಜ್ಞಾನೇಂದ್ರ
ರಾಜ್ಯದಲ್ಲಿ ಜನರು ಬದುಕುವುದೇ ದುಸ್ತರ ಎಂಬ ಮಟ್ಟಕ್ಕೆ ಬೆಲೆ ಏರಿಕೆ ತಲುಪಿದೆ. ಬೆಲೆ ಏರಿಕೆಯ ಮೂಲಕ ಸರಕಾರ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದು ಮಾಜಿ ಸಚಿವ ಅರಗ ಜ್ಞಾನೇಂದ್ರ ಆರೋಪಿಸಿದರು.
ಹಾಲು ಮತ್ತು ಮದ್ಯದ ದರಗಳನ್ನು ಹಲವು ಬಾರಿ ಹೆಚ್ಚಿಸಲಾಗಿದೆ. ವಿದ್ಯುತ್ ಬಿಲ್ ಜನರಿಗೆ ಮಾರಕ ಹೊಡೆತ ನೀಡುತ್ತಿದೆ. ವಿದ್ಯುತ್ ಮುಟ್ಟಿದರೆ ಕರೆಂಟ್ ಹೊಡೆಯುವುದಿಲ್ಲ, ಆದರೆ ಬಿಲ್ ನೋಡಿದರೆ ಜನರಿಗೆ ಶಾಕ್ ಹೊಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಅವ್ಯವಹಾರಗಳು ಮಿತಿ ಮೀರಿವೆ. ಹಾಲಿನ ಡೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಯಲು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದರು.
ಎ ಟು ಜೆಡ್ ವಸ್ತುಗಳ ಬೆಲೆ ಏರಿಕೆ: ಎನ್.ರವಿಕುಮಾರ್
ವಿಧಾನಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಮಾತನಾಡಿ, ಕಾಂಗ್ರೆಸ್ ಸರಕಾರ ಎ ಟು ಜೆಡ್ ವಸ್ತುಗಳ ಬೆಲೆಯನ್ನೂ ಹೆಚ್ಚಿಸಿದೆ ಎಂದು ಆರೋಪಿಸಿದರು.
ಲೂಟಿ, ದರ್ಬಾರು ಮತ್ತು ದರೋಡೆಯ ಆಡಳಿತ ನಡೆಸುತ್ತಿರುವ ಈ ಸರಕಾರ ಅಧಿಕಾರದಿಂದ ತೊಲಗಬೇಕು. ಮದ್ಯದಿಂದ ಹಿಡಿದು ದಿನಬಳಕೆಯ ವಸ್ತುಗಳವರೆಗೆ ಬೆಲೆ ಏರಿಕೆ ಮಾಡಲಾಗಿದೆ. ಜಮೀನು ಖರೀದಿ ಹಾಗೂ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಸಾಮಗ್ರಿಗಳ ಬೆಲೆಯೂ ಹೆಚ್ಚಾಗಿದೆ ಎಂದು ದೂರಿದರು.
ಸರಕಾರದ ಆಡಳಿತದಿಂದ ಗುತ್ತಿಗೆದಾರರು, ವ್ಯಾಪಾರಿಗಳು ಹಾಗೂ ಜನಸಾಮಾನ್ಯರು ಬೇಸತ್ತಿದ್ದಾರೆ. ಕೈಲಾಗದ ಗ್ಯಾರಂಟಿಗಳನ್ನು ಘೋಷಿಸಿ ಅವುಗಳ ಹೊರೆ ಜನರ ಮೇಲೆ ಹಾಕುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಲೆ ಏರಿಕೆ ನೆನೆದರೆ ಬಡವರ ಎದೆ ಡವಡವ: ಬಿ.ಶ್ರೀರಾಮುಲು
ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಹೊಸ ಯೋಜನೆಗಳನ್ನು ನೀಡದ ಈ ಸರಕಾರದ ಸಂಪುಟ ಸಭೆ ಎಂದರೆ ಜನರಿಗೆ ಬೆಲೆ ಏರಿಕೆಯ ಆತಂಕ ಶುರುವಾಗುತ್ತದೆ ಎಂದು ವ್ಯಂಗ್ಯವಾಡಿದರು.
ಒಂದೆಡೆ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಜನರಿಗೆ ಹಣ ನೀಡಿದಂತೆ ಮಾಡುತ್ತಾರೆ. ಮತ್ತೊಂದೆಡೆ ಬೆಲೆ ಏರಿಕೆ ಮೂಲಕ ಅದಕ್ಕಿಂತ ಹೆಚ್ಚಿನ ಹಣವನ್ನು ಜನರಿಂದಲೇ ವಸೂಲಿ ಮಾಡುತ್ತಿದ್ದಾರೆ. ಇದು ಜನಪರ ಆಡಳಿತವಲ್ಲ, ಬೆಲೆ ಏರಿಕೆಯ ಆಡಳಿತ ಎಂದು ಟೀಕಿಸಿದರು.
ಬಡವರ ರಕ್ತ ಹೀರುವ ಸರಕಾರ: ಡಾ.ಉಮೇಶ್ ಜಾಧವ್
ಮಾಜಿ ಸಂಸದ ಡಾ.ಉಮೇಶ್ ಜಾಧವ್ ಮಾತನಾಡಿ, ಹಾಲು, ತುಪ್ಪ ಮತ್ತು ಬೆಣ್ಣೆಯ ದರ ಹೆಚ್ಚಿಸಿರುವ ಸರಕಾರ ಜನರ ಹಬ್ಬದ ಸಂಭ್ರಮಕ್ಕೂ ಅಡ್ಡಿಯಾಗಿದೆ ಎಂದು ಟೀಕಿಸಿದರು.
ದೀಪಾವಳಿ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿರುವುದರಿಂದ ಜನರು ಹಬ್ಬವನ್ನು ಸಂತೋಷದಿಂದ ಆಚರಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಬಸ್ ಪ್ರಯಾಣ ದರವನ್ನೂ ಹೆಚ್ಚಿಸುವ ಮೂಲಕ ಬಡವರ ಹಣದಿಂದಲೇ ಸರಕಾರ ನಡೆಸುವ ಪ್ರಯತ್ನ ನಡೆಯುತ್ತಿದೆ. ಬಡವರ ರಕ್ತ ಹೀರುವ ಆಡಳಿತ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನಾಕ್ರೋಶಕ್ಕೆ ಸಿಲುಕಿದ ಕಾಂಗ್ರೆಸ್ ಸರಕಾರ: ಗೋಪಾಲಯ್ಯ
ಮಾಜಿ ಸಚಿವ ಗೋಪಾಲಯ್ಯ ಮಾತನಾಡಿ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಯಾವುದೇ ವಸ್ತುವಿನ ಬೆಲೆ ಕಡಿಮೆಯಾಗಿಲ್ಲ. ಎಲ್ಲ ಕ್ಷೇತ್ರಗಳಲ್ಲಿಯೂ ಬೆಲೆ ಏರಿಕೆಯಾಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇದೆ. ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ. ಕೆರೆಕಟ್ಟೆಗಳಲ್ಲಿ ನೀರಿಲ್ಲ. ಇಂತಹ ಸಂದರ್ಭದಲ್ಲಿ ರೈತರಿಗೆ ನೆರವಾಗಬೇಕಾದ ಸರಕಾರ ತನ್ನ ಖಜಾನೆ ಖಾಲಿಯಾಗಿದೆ ಎಂಬ ನೆಪದಲ್ಲಿ ಬೆಲೆ ಏರಿಕೆಯ ಮೂಲಕ ಜನರ ಮೇಲೆ ಹೊರೆ ಹಾಕುತ್ತಿದೆ ಎಂದು ಟೀಕಿಸಿದರು.
ಸರಕಾರದ ಜನವಿರೋಧಿ ನೀತಿಗಳಿಂದ ಜನರು ರೋಸಿಹೋಗಿದ್ದು, ಮುಂದಿನ ದಿನಗಳಲ್ಲಿ ಜನಾಕ್ರೋಶವೇ ಕಾಂಗ್ರೆಸ್ಗೆ ದೊಡ್ಡ ಸವಾಲಾಗಲಿದೆ ಎಂದು ಹೇಳಿದರು.
ಅತ್ಯಂತ ಕೆಟ್ಟ ಸರಕಾರ: ಪ್ರಮೋದ್ ಮಧ್ವರಾಜ್
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಇದು ಕರ್ನಾಟಕದ ಅತ್ಯಂತ ಕೆಟ್ಟ ಸರಕಾರ ಎಂದು ಟೀಕಿಸಿದರು.
ಕರ್ನಾಟಕ ಈ ಹಿಂದೆ ಆರ್ಥಿಕ ಶಿಸ್ತು ಮತ್ತು ಪ್ರಗತಿಪರ ಆಡಳಿತಕ್ಕೆ ಹೆಸರಾಗಿತ್ತು. ಆದರೆ ಈಗಿನ ಸರಕಾರ ರಾಜ್ಯವನ್ನು ಆರ್ಥಿಕ ಸಂಕಷ್ಟದತ್ತ ಕೊಂಡೊಯ್ದಿದೆ. ಸರಕಾರ ನಡೆಸಲು ಜನರ ಮೇಲೆ ಬೆಲೆ ಏರಿಕೆಯ ಹೊರೆ ಹಾಕುವ ಮೂಲಕ ಹಣ ಸಂಗ್ರಹಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವ ಬದಲು ಜನರ ಜೇಬಿಗೆ ಕತ್ತರಿ ಹಾಕುವ ಕೆಲಸ ನಡೆಯುತ್ತಿದೆ. ಇಂತಹ ಆಡಳಿತದಿಂದ ರಾಜ್ಯದ ಪ್ರಗತಿಗೆ ಹಿನ್ನಡೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬಿಜೆಪಿ ನಾಯಕರ ಒಗ್ಗಟ್ಟಿನ ಹೋರಾಟ
ಫ್ರೀಡಂ ಪಾರ್ಕ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ನಾಯಕರು ರಾಜ್ಯ ಸರಕಾರದ ಬೆಲೆ ಏರಿಕೆ ನೀತಿಯನ್ನು ತೀವ್ರವಾಗಿ ಖಂಡಿಸಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ, ರೈತರ ಸಮಸ್ಯೆಗಳು, ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ಥಿತಿ, ಹಾಲು ಮತ್ತು ವಿದ್ಯುತ್ ದರ ಏರಿಕೆ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಕೋರ್ ಕಮಿಟಿ ಸದಸ್ಯರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ರಾಜ್ಯ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು ಹಾಗೂ ಪಕ್ಷದ ವಿವಿಧ ಘಟಕಗಳ ಪ್ರಮುಖರು ಉಪಸ್ಥಿತರಿದ್ದರು.
ಬೆಲೆ ಏರಿಕೆಯನ್ನು ಪ್ರಮುಖ ಅಸ್ತ್ರವನ್ನಾಗಿಸಿಕೊಂಡ ಬಿಜೆಪಿ ನಾಯಕರು ಕಾಂಗ್ರೆಸ್ ಸರಕಾರದ ವಿರುದ್ಧ ರಾಜಕೀಯ ಸಮರಕ್ಕೆ ಮತ್ತಷ್ಟು ವೇಗ ನೀಡುವ ಸಂದೇಶವನ್ನು ಫ್ರೀಡಂ ಪಾರ್ಕ್ನಿಂದ ಸಾರಿದರು. 2028ರ ಚುನಾವಣೆಯಲ್ಲಿ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಿ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರವನ್ನು ಅಧಿಕಾರಕ್ಕೆ ತರಬೇಕೆಂಬ ಸಂಕಲ್ಪವನ್ನು ನಾಯಕರು ವ್ಯಕ್ತಪಡಿಸಿದರು.





