ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ರೈತರ ಬಗ್ಗೆ ಮಾತನಾಡುವ ಮೊದಲು ನಿಮ್ಮ ಸಾಧನೆಗಳ ಪಟ್ಟಿ ಕೊಡಿ; ಅಭಿವೃದ್ಧಿ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಸಿದ್ಧ: ಸಚಿವ ಮಧು ಬಂಗಾರಪ್ಪಗೆ ಸಂಸದ ಬಿ.ವೈ. ರಾಘವೇಂದ್ರ ತಿರುಗೇಟು

On: November 17, 2026 10:37 PM
Follow Us:

‘ಪುಕ್ಸಟ್ಟೆ’ ಎಂಬ ಪದ ಬಳಸಿ ರೈತರ ಸ್ವಾಭಿಮಾನಕ್ಕೆ ಧಕ್ಕೆ ತರಬೇಡಿ; ಶಿವಮೊಗ್ಗದ ಅಭಿವೃದ್ಧಿಗೆ ಯಾರು ಏನು ಕೊಡುಗೆ ನೀಡಿದ್ದಾರೆ ಎಂಬುದಕ್ಕೆ ದಾಖಲೆ ಸಮೇತ ಉತ್ತರ ನೀಡುತ್ತೇನೆ: ಬಿ.ವೈ.ರಾಘವೇಂದ್ರ

ಶಿವಮೊಗ್ಗ: ರಾಜಕೀಯದಲ್ಲಿ ಆರೋಪ-ಪ್ರತ್ಯಾರೋಪಗಳು ಸಹಜ. ಆದರೆ ರೈತರ ಬೆವರು, ಅವರ ಬದುಕು, ಸ್ವಾಭಿಮಾನ ಮತ್ತು ಕಣ್ಣೀರನ್ನೇ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡು ಮಾತನಾಡುವುದು ಎಷ್ಟು ಸರಿ? ಅಭಿವೃದ್ಧಿಯ ವಿಚಾರದಲ್ಲಿ ಮಾತನಾಡುವವರು ಮೊದಲು ತಮ್ಮ ಸಾಧನೆಗಳ ಲೆಕ್ಕ ಕೊಡಲಿ. ದಾಖಲೆಗಳೊಂದಿಗೆ ಬಹಿರಂಗ ಚರ್ಚೆಗೆ ಬನ್ನಿ, ಶಿವಮೊಗ್ಗ ಜಿಲ್ಲೆಗೆ ಯಾರು ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಜನರ ಮುಂದೆಯೇ ತೆರೆದಿಡೋಣ. ಹೀಗೆ ಸಚಿವ ಮಧು ಬಂಗಾರಪ್ಪ ಅವರ ಹೇಳಿಕೆಗಳಿಗೆ ತೀಕ್ಷ್ಣ ತಿರುಗೇಟು ನೀಡಿದವರು ಸಂಸದ ಬಿ.ವೈ. ರಾಘವೇಂದ್ರ.

ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಹೂವಿನ ವಿಚಾರದಿಂದ ಹಿಡಿದು ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ, ರೈತರ ಸಮಸ್ಯೆ, ತೆವರೆತೆಪ್ಪ ಗ್ರಾಮದ ಅಡಿಕೆ ತೋಟ ತೆರವು ಪ್ರಕರಣ, ಆಸ್ಪತ್ರೆ, ಮೆಡಿಕಲ್ ಕಾಲೇಜು, ಕೃಷಿ ವಿಶ್ವವಿದ್ಯಾಲಯ ಹಾಗೂ ರಾಷ್ಟ್ರೀಯ ಹೆದ್ದಾರಿ ಯೋಜನೆಗಳವರೆಗೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಸಚಿವ ಮಧು ಬಂಗಾರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

ರಾಷ್ಟ್ರೀಯ ಹೂವಾದ ಕಮಲವನ್ನು ವಿಮಾನ ನಿಲ್ದಾಣದಲ್ಲಿ ಮೇಲ್ಭಾಗದಲ್ಲಿ ಅಳವಡಿಸಿರುವ ವಿಚಾರವನ್ನು ಪ್ರಸ್ತಾಪಿಸಿದ ಅವರು, ಇದು ನಮ್ಮ ರಾಷ್ಟ್ರೀಯ ಹೂವು. ಅದರ ಬಗ್ಗೆ ಪ್ರಶ್ನೆ ಮಾಡುವುದಕ್ಕೆ ನೀವು ಯಾರು? ಈ ವಿಚಾರದಲ್ಲಿ ಚರ್ಚೆ ಮಾಡುವುದಾದರೆ ದಾಖಲೆಗಳನ್ನು ತೆಗೆದುಕೊಂಡು ಬನ್ನಿ. ನಮ್ಮ ಶಾಸಕ ಎಸ್.ಎನ್. ಚನ್ನಬಸಪ್ಪ, ಅರುಣ್ ಸೇರಿದಂತೆ ನಾವೆಲ್ಲರೂ ಅಗತ್ಯ ದಾಖಲೆಗಳೊಂದಿಗೆ ಬರುತ್ತೇವೆ. ಯಾರು ಏನು ಮಾಡಿದ್ದಾರೆ ಎಂಬುದನ್ನು ದಾಖಲೆ ಸಮೇತ ಚರ್ಚಿಸೋಣ ಎಂದು ಸವಾಲು ಹಾಕಿದರು.

ರೈತರಿಗೆ ಉಚಿತ ವಿದ್ಯುತ್ ನೀಡಿದಾಗ ಅವರು ಪುಕ್ಸಟ್ಟೆಯಾಗಿ ತೋಟ ಬೆಳೆಸಿದರೇ? ರೈತರನ್ನು ಏನೆಂದು ತಿಳಿದುಕೊಂಡಿದ್ದೀರಿ? ಪದೇಪದೇ ಪುಕ್ಸಟ್ಟೆ ಎಂದು ಹೇಳುವ ಮೂಲಕ ಅವರ ಶ್ರಮವನ್ನು ಅವಮಾನಿಸಬೇಡಿ. ರೈತರು ಬೆವರು ಸುರಿಸಿ, ತಮ್ಮ ಸ್ವಾಭಿಮಾನದಿಂದ ಬದುಕು ಕಟ್ಟಿಕೊಂಡಿದ್ದಾರೆ. ಅವರ ಪರಿಶ್ರಮದಿಂದಲೇ ತೋಟಗಳು ಬೆಳೆದಿವೆ. ಯಾವುದೋ ಒಂದು ತೋಟದ ಅಭಿವೃದ್ಧಿಗೆ ನಾವೇ ಕಾರಣ ಎಂಬ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ. ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಅಗತ್ಯವಿದ್ದಾಗ ಉತ್ತರ ನೀಡುತ್ತಾರೆ ಎಂದು ತಿರುಗೇಟು ನೀಡಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಏನೇನು ಅಭಿವೃದ್ಧಿ ಕಾರ್ಯಗಳಾಗಿವೆ, ಈಗಿನ ಕಾಂಗ್ರೆಸ್ ಸರ್ಕಾರದಿಂದ ಏನೇನು ಕೆಲಸಗಳಾಗಿವೆ ಎಂಬುದರ ಕುರಿತು ಬಹಿರಂಗ ಚರ್ಚೆಯಾಗಲಿ. ಸೇತುವೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಯಾರು ಏನು ಮಾಡಿದ್ದಾರೆ ಎಂಬುದನ್ನು ಜನರ ಮುಂದಿಡೋಣ ಎಂದರು.

ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಅವಧಿಯಲ್ಲಿ ಮೆಗ್ಗಾನ್ ಆಸ್ಪತ್ರೆಯ ಅಭಿವೃದ್ಧಿಗೆ 400 ಹಾಸಿಗೆಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹೆಚ್ಚುವರಿ ಹಾಸಿಗೆಗಳ ವ್ಯವಸ್ಥೆ ಸೇರಿದಂತೆ ಆಸ್ಪತ್ರೆಯ ಸಾಮರ್ಥ್ಯವನ್ನು ವಿಸ್ತರಿಸುವ ಕೆಲಸ ಮಾಡಿದ್ದೇವೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಮ್ಮ ಅವಧಿಯಲ್ಲಿ ಮಂಜೂರಾಗಿದೆ. ಮೆಡಿಕಲ್ ಕಾಲೇಜನ್ನು ನಮ್ಮ ನಾಯಕರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಿಲ್ಲೆಗೆ ತರಲು ಪ್ರಯತ್ನಿಸಿದ್ದೇವೆ ಎಂದು ಹೇಳಿದರು.

ಎಸ್. ಬಂಗಾರಪ್ಪ ಅವರ ಕಾಲದಲ್ಲಿ ಕೃಷಿ ಕಾಲೇಜು ಸ್ಥಾಪನೆಯಾಗಿತ್ತು. ಅದನ್ನು ಕೃಷಿ ವಿಶ್ವವಿದ್ಯಾಲಯವಾಗಿ ಮೇಲ್ದರ್ಜೆಗೇರಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ. ಕೇಂದ್ರ ಸರ್ಕಾರದಿಂದ ಶಿವಮೊಗ್ಗ ಜಿಲ್ಲೆಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ ಸುಮಾರು 20 ಸಾವಿರ ಕೋಟಿ ರೂ. ಅನುದಾನ ತಂದಿದ್ದೇವೆ. ನೀರಾವರಿ ಯೋಜನೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಸಂಪೂರ್ಣ ಪಟ್ಟಿಯನ್ನು ನೀಡಲು ಸಿದ್ಧನಿದ್ದೇನೆ. ಸಚಿವರು ಕೂಡ ತಮ್ಮ ಅವಧಿಯಲ್ಲಿ ಮಾಡಿರುವ ಕೆಲಸಗಳ ಪಟ್ಟಿಯನ್ನು ತರಲಿ ಎಂದು ಸವಾಲು ಹಾಕಿದರು.

ಸೊರಬ ತಾಲ್ಲೂಕಿನ ಎಣ್ಣೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆವರೆತೆಪ್ಪ ಗ್ರಾಮದ ಅಡಿಕೆ ತೋಟ ತೆರವು ಪ್ರಕರಣದ ಕುರಿತು ಮಾತನಾಡಿದ ಅವರು, ರೈತನ ತೋಟ ಕಡಿದಿರುವುದು ನೋವಿನ ಸಂಗತಿ. ಆ ಕುಟುಂಬದ ಸಂಕಷ್ಟವನ್ನು ಕಂಡು ನಾವು ಕಣ್ಣೀರು ಹಾಕಿದ್ದೇವೆ. ರೈತನ ಮನೆತನವೇ ಬೀದಿಗೆ ಬಂದಿರುವುದು ಸತ್ಯ. ಆ ಸಂದರ್ಭದಲ್ಲಿ ನಾನು ಸ್ಥಳಕ್ಕೆ ಭೇಟಿ ನೀಡದಿದ್ದರೆ ಆ ಕುಟುಂಬದಲ್ಲಿ ಆತ್ಮಹತ್ಯೆಯಂತಹ ದುರಂತ ಸಂಭವಿಸಿದ್ದರೂ ಆಶ್ಚರ್ಯಪಡಬೇಕಾಗಿರಲಿಲ್ಲ. ಅಷ್ಟು ಸಂಕಷ್ಟದಲ್ಲಿ ಆ ಕುಟುಂಬ ಇತ್ತು. ಅವರಿಗೆ ಧೈರ್ಯ ತುಂಬಿ, ನಮ್ಮಿಂದ ಸಾಧ್ಯವಾದ ಸಹಾಯ ಮಾಡಬೇಕು ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಮತ್ತು ನಾನು ಪ್ರಯತ್ನಿಸಿದ್ದೇವೆ ಎಂದು ತಿಳಿಸಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ರೈತನನ್ನು ಪಕ್ಕದಲ್ಲಿ ಕೂರಿಸಿಕೊಂಡು ಮಾತನಾಡಿಸಿರುವುದರ ಹಿಂದಿನ ಉದ್ದೇಶವೇನು? ಅವರನ್ನು ಯಾವ ಕಾರಣಕ್ಕೆ ಕರೆತಂದಿದ್ದೀರಿ ಎಂಬುದು ನನಗೆ ತಿಳಿದಿಲ್ಲ. ಆದರೆ ತೋಟ ತೆರವುಗೊಂಡಿರುವುದರಿಂದ ಆ ಕುಟುಂಬ ಅನುಭವಿಸಿರುವ ನೋವು ಮತ್ತು ನಷ್ಟವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ರೈತರ ಸಂಕಷ್ಟದ ಬಗ್ಗೆ ಮಾತನಾಡುವವರು ತಮ್ಮ ಕ್ಷೇತ್ರಗಳಲ್ಲಿಯೂ ರೈತರಿಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.

ಮಾಜಿ ಸಚಿವ ಹರತಾಳು ಹಾಲಪ್ಪ ಅವರ ಬಗ್ಗೆ ಸಚಿವ ಮಧು ಬಂಗಾರಪ್ಪ ಹಗುರವಾಗಿ ಮಾತನಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಂಸದರು, ಹಾಲಪ್ಪ ಅವರು ತಮ್ಮ ತಂದೆಗೂ ಒಳ್ಳೆಯ ಹೆಸರು ತಂದಿದ್ದಾರೆ. ಬಿಜೆಪಿ ಸಿದ್ಧಾಂತವನ್ನು ಒಪ್ಪಿಕೊಂಡು ಪಕ್ಷಕ್ಕೆ ಬಂದ ನಂತರ ಪಕ್ಷದ ಗೌರವ ಹೆಚ್ಚಿಸುವ ಕೆಲಸ ಮಾಡಿದ್ದಾರೆ. ಅವರ ರಾಜಕೀಯ ಜೀವನ ಮತ್ತು ಸಾರ್ವಜನಿಕ ಸೇವೆಯನ್ನು ಗೌರವಿಸಬೇಕು. ವೈಯಕ್ತಿಕ ಟೀಕೆಗಳನ್ನು ಮಾಡುವುದರಿಂದ ಯಾರಿಗೂ ಲಾಭವಿಲ್ಲ ಎಂದರು.

ನೀವು ಕೂಡ ಒಂದು ಕಾಲದಲ್ಲಿ ಬಿಜೆಪಿಯಲ್ಲಿದ್ದವರು. ನಂತರ ಜೆಡಿಎಸ್‌ಗೆ ಹೋಗಿ, ಆ ಬಳಿಕ ಕಾಂಗ್ರೆಸ್ ಸೇರಿದ್ದೀರಿ. ಅದು ನಿಮ್ಮ ರಾಜಕೀಯ ನಿರ್ಧಾರ. ಅದನ್ನು ನಾವು ಪ್ರಶ್ನಿಸುವುದಿಲ್ಲ. ಆದರೆ ಇತರರ ಬಗ್ಗೆ ಮಾತನಾಡುವಾಗ ಅವರ ರಾಜಕೀಯ ಸೇವೆ ಮತ್ತು ವ್ಯಕ್ತಿತ್ವವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ತಿರುಗೇಟು ನೀಡಿದರು.

ಶಾಸಕ ಎಸ್.ಎನ್. ಚನ್ನಬಸಪ್ಪ ಅವರ ನೇತೃತ್ವದಲ್ಲಿ ಶಿವಮೊಗ್ಗ ದಸರಾ ಉತ್ಸವ ಮೈಸೂರಿನ ನಂತರ ಅತ್ಯಂತ ಅದ್ದೂರಿಯಾಗಿ ನಡೆದಿದೆ. ದಸರಾ ಕೊನೆಯ ದಿನ ಅಂಬಾರಿ ಮೆರವಣಿಗೆಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳು ಎದುರಾದರೂ, ಜಿಲ್ಲೆಯ ಜನರು ನಾಡಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಒಂದು ದಿನ ಬಂದು ಚರ್ಚೆ ನಡೆಸಿದ್ದನ್ನು ಹೊರತುಪಡಿಸಿ, ಜಿಲ್ಲೆಯ ಹಬ್ಬದ ಸಂಭ್ರಮದಲ್ಲಿ ಅವರ ಪಾಲ್ಗೊಳ್ಳುವಿಕೆ ಎಷ್ಟಿತ್ತು ಎಂಬುದನ್ನು ಜನರೇ ಗಮನಿಸಿದ್ದಾರೆ ಎಂದು ಹೇಳಿದರು.

ಜಿಲ್ಲೆಯ ಬಗ್ಗೆ ನಿಜವಾದ ಕಾಳಜಿ ಮತ್ತು ಅಭಿಮಾನವಿದ್ದರೆ ನಾಡಹಬ್ಬದ ಕನಿಷ್ಠ ಒಂದು ಕಾರ್ಯಕ್ರಮದಲ್ಲಾದರೂ ಭಾಗವಹಿಸಬೇಕಿತ್ತು. ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸುವುದನ್ನು ಬಿಟ್ಟು ಅನಗತ್ಯ ರಾಜಕೀಯ ಟೀಕೆಗಳಿಗೆ ಆದ್ಯತೆ ನೀಡುವುದು ಸರಿಯಲ್ಲ ಎಂದು ಹೇಳಿದರು.

ರಾಜಕೀಯವಾಗಿ ದೊಡ್ಡ ಸ್ಥಾನದಲ್ಲಿರುವವರು ಆ ಸ್ಥಾನದ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು. ಮುಖ್ಯಮಂತ್ರಿ ಪುತ್ರನಾಗಿ, ಸಚಿವರಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಮಧು ಬಂಗಾರಪ್ಪ ಅವರು ಶಿವಮೊಗ್ಗ ಜಿಲ್ಲೆಗೆ ಇನ್ನಷ್ಟು ಏನು ಮಾಡಬಹುದು ಎಂಬ ಚಿಂತನೆ ಮಾಡಬೇಕು. ತಂದೆಯ ರಾಜಕೀಯ ಹಿನ್ನೆಲೆ, ಜೈಲು ವಿಚಾರ ಸೇರಿದಂತೆ ವೈಯಕ್ತಿಕ ಟೀಕೆಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದರಿಂದ ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದರು.

ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ, ರೈತರ ಬದುಕು, ನೀರಾವರಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ವಿಚಾರದಲ್ಲಿ ಚರ್ಚೆಯಾಗಲಿ. ಯಾರು ಎಷ್ಟು ಕೆಲಸ ಮಾಡಿದ್ದಾರೆ ಎಂಬುದನ್ನು ದಾಖಲೆಗಳ ಮೂಲಕ ಜನರ ಮುಂದೆ ಇಡಲು ನಾನು ಸಿದ್ಧನಿದ್ದೇನೆ. ಸಚಿವರು ಕೂಡ ತಮ್ಮ ಸಾಧನೆಗಳ ಪಟ್ಟಿಯೊಂದಿಗೆ ಬರಲಿ. ಆರೋಪಗಳಿಗೆ ಆರೋಪಗಳೇ ಉತ್ತರವಾಗಬಾರದು, ಅಭಿವೃದ್ಧಿಯ ಕೆಲಸಗಳೇ ಉತ್ತರವಾಗಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

K.M.Sathish Gowda

Join WhatsApp

Join Now

Facebook

Join Now

Read more

ಅಡಿಕೆ ತೋಟ ತೆರವು ಪ್ರಕರಣದಲ್ಲಿ ಬಿಜೆಪಿಯ ರಾಜಕೀಯ ಬಣ್ಣ ಬಯಲು: ಮಧು ಬಂಗಾರಪ್ಪ ವಾಗ್ದಾಳಿ

ಭದ್ರಾ ನೀರು ಹಂಚಿಕೆ ವಿವಾದಕ್ಕೆ ಕಾಂಗ್ರೆಸ್‌ನಲ್ಲಿ ಭಿನ್ನಮತದ ಬಿಸಿ; ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಶಾಂತನಗೌಡ ಸಜ್ಜು!

ಎಐ, ಡೀಪ್ ಟೆಕ್ ಮತ್ತು ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಕರ್ನಾಟಕವನ್ನು ಜಾಗತಿಕ ಕೇಂದ್ರವನ್ನಾಗಿಸುವ ಗುರಿ: ಸಿಎಂ ಡಿ.ಕೆ. ಶಿವಕುಮಾರ್

ವೀರಶೈವ–ಲಿಂಗಾಯತ ಒಂದೇ ಧರ್ಮ, ಸಮಾಜವನ್ನು ಒಡೆಯುವುದಲ್ಲ; ಒಗ್ಗೂಡಿಸುವುದೇ ನಮ್ಮೆಲ್ಲರ ಸಂಕಲ್ಪವಾಗಲಿ: ಶಂಕರ್ ಮಹಾದೇವ ಬಿದರಿ

ಪೆಗಾಸಸ್ ಗೂಢಚರ್ಯೆ ವಿವಾದಕ್ಕೆ ಹೊಸ ತಿರುವು: ಬಿಜೆಪಿ ನಾಯಕರ ಫೋನ್‌ಗಳನ್ನೂ ಕೇಂದ್ರ ಸರ್ಕಾರ ಕದ್ದಾಲಿಸಿತ್ತು – ಪ್ರಿಯಾಂಕ್ ಖರ್ಗೆ ಆರೋಪ

ಶಾಲಾ ಮಕ್ಕಳ ಮುಂದೆ ದ್ವೇಷದ ಭಾಷಣ: ಶಾಸಕ ಹರೀಶ್ ಪೂಂಜಾ ವಿರುದ್ಧ ಕಾನೂನು ಕ್ರಮಕ್ಕೆ ಸಚಿವ ಮಧು ಬಂಗಾರಪ್ಪ ಸೂಚನೆ

Leave a Comment