ಪ್ರಶಸ್ತಿಗಳಿಗಿಂತ ಆತ್ಮಸಾಕ್ಷಿಗೆ ತೃಪ್ತಿ ನೀಡುವ ಸಾಧನೆ ಮುಖ್ಯ | ರಾಜಕಾರಣದಲ್ಲಿ ಪ್ರಾಮಾಣಿಕತೆ, ಮದುವೆಗಳಲ್ಲಿ ಸರಳತೆ, ಬದುಕಿನಲ್ಲಿ ನಡೆನುಡಿಯ ಸಮನ್ವಯ ಅಗತ್ಯ | ಅನ್ನದ ಅಪವ್ಯಯ ರೈತರಿಗೆ ಮಾಡುವ ದ್ರೋಹ | ಸಂಸ್ಕಾರಯುತ ಕುಟುಂಬಗಳಿಂದ ಮೌಲ್ಯಯುತ ಸಮಾಜ ನಿರ್ಮಾಣ
ಶಿವಮೊಗ್ಗ: ಕೈಮುಗಿಯುವುದು ಸುಲಭ, ಆದರೆ ಆ ಕೈಮುಗಿಯುವಿಕೆಯ ಹಿಂದೆ ಹೃದಯಪೂರ್ವಕ ಭಕ್ತಿ ಇರಬೇಕು. ಮಾತಿನಲ್ಲಿ ಸತ್ಯದ ಪ್ರತಿಪಾದನೆ ಮಾಡುವುದು ಸುಲಭ, ಆದರೆ ಅದೇ ಸತ್ಯವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ನಿಜವಾದ ಸವಾಲು. ಹೊರಗೆ ಕಾಣುವ ವ್ಯಕ್ತಿತ್ವಕ್ಕೂ ಒಳಗಿರುವ ಮನಸ್ಸಿಗೂ ಅಂತರವಿರಬಾರದು. ಅಂತರಂಗದಲ್ಲಿ ಶುದ್ಧತೆ, ಬಹಿರಂಗದಲ್ಲಿ ಪ್ರಾಮಾಣಿಕತೆ ಎರಡೂ ಒಂದಾದಾಗ ಮಾತ್ರ ಮನುಷ್ಯನ ಬದುಕು ಸಾರ್ಥಕವಾಗುತ್ತದೆ. ಇಂತಹ ನಡೆನುಡಿಯ ಸಮನ್ವಯವನ್ನೇ 900 ವರ್ಷಗಳ ಹಿಂದೆಯೇ ಬಸವಣ್ಣನವರು ತಮ್ಮ ವಚನಗಳ ಮೂಲಕ ಇಡೀ ಜಗತ್ತಿಗೆ ಸಾರಿದ್ದಾರೆ. ಅವರ ಚಿಂತನೆಗಳನ್ನು ಕೇವಲ ಓದುವುದರಿಂದ ಸಾಲದು, ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬಸವಕೇಂದ್ರದ ಪೂಜ್ಯ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿಗಳು ಕರೆ ನೀಡಿದರು.
ಶಿವಮೊಗ್ಗ ತಾಲ್ಲೂಕಿನ ಸೋಮಿನಕೊಪ್ಪದ ನಿವಾಸಿಗಳಾದ ಸೇವಾರ್ಥಿಗಳಾದ ಶ್ರೀಮತಿ ಎಸ್. ಗಾಯತ್ರಿ, ಎಸ್.ಎಚ್. ಷಣ್ಮುಖಪ್ಪ ಹಾಗೂ ಕೆಳಗಿನ ಮನೆ ಕುಟುಂಬದವರ ಆಶ್ರಯದಲ್ಲಿ, ಶ್ರೀ ಬಸವತತ್ವ ಪೀಠ, ಚಿಕ್ಕಮಗಳೂರು, ಬಸವಕೇಂದ್ರ, ಶಿವಮೊಗ್ಗ, ಅರಳಿಕಟ್ಟೆ ಅನುಭವ ಮಂಟಪ–5 ಹಾಗೂ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಇವರ ಸಹಯೋಗದಲ್ಲಿ ಆಯೋಜಿಸಿದ್ದ 20ನೇ ವರ್ಷದ ಚಿಂತನ ಕಾರ್ತಿಕ ಕಾರ್ಯಕ್ರಮದ ನಾಲ್ಕನೇ ದಿನದ ಧಾರ್ಮಿಕ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಪ್ರಶಸ್ತಿಗಿಂತ ಆತ್ಮಸಾಕ್ಷಿಯ ತೃಪ್ತಿ ದೊಡ್ಡದು
ಷಣ್ಮುಖಪ್ಪನವರ ಮನೆಗೆ ಎರಡನೇ ಬಾರಿ ಬರುತ್ತಿದ್ದೇನೆ. ಮೊದಲ ಬಾರಿ ಅವರೇ ಬಿನ್ನಹ ಹಾಕಿ ನಮ್ಮನ್ನು ಆಹ್ವಾನಿಸಿದ್ದರು. ಈ ಬಾರಿ ನಾವೇ ನುಗ್ಗು ಬಿನ್ನಹ ಹಾಕಿಕೊಂಡು ಬಂದಿದ್ದೇವೆ. ಅಂದರೆ, ನಿಮ್ಮ ಮನೆಗೆ ಬರುತ್ತೇವೆ, ನೀವು ಬೇಡ ಎಂದರೂ ಬರುತ್ತೇವೆ ಎಂದು ಪ್ರೀತಿಯಿಂದ ಹೇಳಿಕೊಂಡು ಬರುವುದೇ ನುಗ್ಗು ಬಿನ್ನಹ. ಆದರೆ ನಾವು ಬರುತ್ತೇವೆ ಎಂದ ತಕ್ಷಣವೇ ಷಣ್ಮುಖಪ್ಪನವರು, ‘ಬುದ್ಧಿ, ನೀವು ನುಗ್ಗುವುದು ಬೇಡ. ನಾವೇ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡುತ್ತೇವೆ’ ಎಂದು ಹಿಂದಿನ ವರ್ಷವೇ ಚಿಂತನ ಕಾರ್ತಿಕ ಕಾರ್ಯಕ್ರಮವನ್ನು ತಮ್ಮ ಮನೆಯಲ್ಲಿ ನಡೆಸಬೇಕೆಂದು ಸಂಕಲ್ಪಿಸಿದ್ದರು. ಅದರಂತೆ ಇಂದು ಅತ್ಯಂತ ಅರ್ಥಪೂರ್ಣವಾಗಿ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದು ಬಸವಕೇಂದ್ರ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಷಣ್ಮುಖಪ್ಪನವರು ತಮ್ಮ ತಂದೆ-ತಾಯಿಯ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ, ಅದರ ಮೂಲಕ ಸಮಾಜದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರಶಸ್ತಿ ನೀಡುವ ಕಾರ್ಯ ಮಾಡುತ್ತಿದ್ದಾರೆ. ಆ ವರ್ಷದ ಪ್ರಶಸ್ತಿಯನ್ನು ನಮಗೆ ನೀಡಬೇಕೆಂದು ನಿರ್ಧರಿಸಿ, ಬಿನ್ನಹ ಹಾಕಿ ಆಹ್ವಾನಿಸಲು ಬಂದಿದ್ದರು. ನಂತರ ಈ ಬಾರಿ ನಿಮಗೆ ಪ್ರಶಸ್ತಿ ನೀಡುತ್ತೇವೆ ಎಂದು ತಿಳಿಸಿದರು.
ಆದರೆ, ಪ್ರಶಸ್ತಿ ಸ್ವೀಕರಿಸುವ ವಿಚಾರದಲ್ಲಿ ನಮಗೆ ಒಂದು ರೀತಿಯ ಮುಜುಗರವಿತ್ತು. ಬಸವಣ್ಣನವರು ತಮ್ಮ ವಚನದಲ್ಲಿ ಹೇಳುವಂತೆ, ‘ಇಲ್ಲದ ಸೊಪ್ಪಿಗೆ ಏರಿಸಿ ನುಡಿದಂತೆ’ ಆಗಬಾರದು. ಯುದ್ಧವನ್ನೇ ಮಾಡದವನನ್ನು ಮಹಾಯೋಧ ಎಂದು ಹೊಗಳಿದರೆ ಅವನಿಗೆ ಏನು ಉತ್ತರಿಸಬೇಕೆಂಬ ಪರಿಸ್ಥಿತಿ ಉಂಟಾಗುತ್ತದೆ. ಅದೇ ರೀತಿ, ನಾವು ಏನಾದರೂ ದೊಡ್ಡ ಸಾಧನೆ ಮಾಡಿದ್ದೇವೆ ಎಂಬ ಆತ್ಮತೃಪ್ತಿ ನಮಗೇ ಉಂಟಾಗದಿರುವಾಗ ಪ್ರಶಸ್ತಿ ಸ್ವೀಕರಿಸುವುದು ಹೇಗೆ ಎಂಬ ಪ್ರಶ್ನೆ ನಮ್ಮನ್ನು ಕಾಡಿತು.
ಪ್ರಶಸ್ತಿಗಳನ್ನು ನೀಡುವ ಮತ್ತು ಸ್ವೀಕರಿಸುವ ಇಂದಿನ ಕೆಲವು ವಿಧಾನಗಳನ್ನು ಗಮನಿಸಿದರೆ ಅವುಗಳ ಮೌಲ್ಯ ಕುಸಿಯುತ್ತಿರುವುದು ಬೇಸರದ ಸಂಗತಿ. ಕೆಲವರು ಕಾರ್ಯಕ್ರಮಕ್ಕೆ ದೇಣಿಗೆ ನೀಡಿದ ಕಾರಣಕ್ಕೆ ಪ್ರಶಸ್ತಿ ಪಡೆಯುತ್ತಾರೆ. ಇನ್ನು ಕೆಲವರು ಯಾವುದೇ ಸಾಧನೆಯ ಹಿನ್ನೆಲೆಯಿಲ್ಲದೆ, ಪ್ರಶಸ್ತಿ ನೀಡುತ್ತೇವೆ ಎಂದ ತಕ್ಷಣ ಸ್ವೀಕರಿಸಿ ಬರುತ್ತಾರೆ. ಇಂತಹ ವಾತಾವರಣದಲ್ಲಿ ನಿಜವಾದ ಗೌರವದಿಂದ, ಅಭಿಮಾನದಿಂದ ನೀಡುವ ಪ್ರಶಸ್ತಿಯ ಮೌಲ್ಯಕ್ಕೆ ಧಕ್ಕೆ ಉಂಟಾಗಬಾರದು ಎಂಬುದು ನಮ್ಮ ಭಾವನೆಯಾಗಿತ್ತು.
ಆದ್ದರಿಂದ ಷಣ್ಮುಖಪ್ಪನವರಿಗೆ, ‘ನಾವು ಏನಾದರೂ ಸಾಧನೆ ಮಾಡಿದ್ದೇವೆ ಎಂಬುದು ನಮ್ಮ ಆತ್ಮಸಾಕ್ಷಿಗೆ ಅನಿಸಿದ ದಿನ ನಿಮ್ಮ ಕೈಯಿಂದಲೇ ಈ ಪ್ರಶಸ್ತಿಯನ್ನು ಸ್ವೀಕರಿಸುತ್ತೇವೆ. ಅಲ್ಲಿಯವರೆಗೆ ಪ್ರಶಸ್ತಿ ನಿಮ್ಮ ಮನೆಯಲ್ಲಿಯೇ ಇರಲಿ‘ ಎಂದು ಹೇಳಿ ಹಿಂದಿರುಗಿಸಿದ್ದೆವು. ಕಲ್ಯಾಣಪ್ಪನವರು ಸೇರಿದಂತೆ ಅನೇಕ ಮುಖಂಡರು ದೂರವಾಣಿ ಮೂಲಕ ಮಾತನಾಡಿ ಪ್ರಶಸ್ತಿ ಸ್ವೀಕರಿಸಬೇಕೆಂದು ಒತ್ತಾಯಿಸಿದರು. ಅವರ ಅಭಿಮಾನಕ್ಕೆ ಗೌರವ ನೀಡಿ ಕಾರ್ಯಕ್ರಮಕ್ಕೆ ಬಂದರೂ, ಪ್ರಶಸ್ತಿಯನ್ನು ಸ್ವೀಕರಿಸುವ ನಿರ್ಧಾರವನ್ನು ಮುಂದೂಡಿದ್ದೇವೆ.
ಚಿಕ್ಕಮಗಳೂರಿನಲ್ಲಿ ಮಠ ಕಟ್ಟಿದ್ದೀರಿ, ಅದಕ್ಕಿಂತ ದೊಡ್ಡ ಸಾಧನೆ ಇನ್ನೇನು ಬೇಕು ಎಂದು ಷಣ್ಮುಖಪ್ಪನವರು ಹೇಳಿದಾಗ, ಮಠಗಳನ್ನು ಕಟ್ಟಿದವರೂ ಇದ್ದಾರೆ, ಮನೆಗಳನ್ನು ಕಟ್ಟಿದವರೂ ಇದ್ದಾರೆ. ಆದರೆ ನಮ್ಮ ಆತ್ಮಸಾಕ್ಷಿಗೆ ತೃಪ್ತಿ ನೀಡುವಂತಹ ಸಾಧನೆ ಮಾಡುವುದು ಮುಖ್ಯ. ಆ ಸಾಧನೆಯ ಗುರಿಯನ್ನು ನಾವು ಈಗಾಗಲೇ ನಿರ್ಧರಿಸಿದ್ದೇವೆ. ಅದು ಈಡೇರಿದ ದಿನ ನೀವೇ ಬಂದು ಪ್ರಶಸ್ತಿ ನೀಡುವಂತಾಗಬೇಕು. ಅಂದು ಖಂಡಿತ ಸ್ವೀಕರಿಸುತ್ತೇವೆ ಎಂದು ಅವರಿಗೆ ತಿಳಿಸಿದ್ದೇನೆ ಎಂದರು.

ಸಂಸ್ಕಾರಯುತ ಕುಟುಂಬವೇ ಸಮಾಜದ ನಿಜವಾದ ಸಂಪತ್ತು
ಷಣ್ಮುಖಪ್ಪನವರು, ಅವರ ಪತ್ನಿ ಗಾಯತ್ರಮ್ಮ ಹಾಗೂ ಕುಟುಂಬದವರು ತಮ್ಮ ಮಗ ಹಾಲೇಶ್ವರನನ್ನು ಉತ್ತಮ ಸಂಸ್ಕಾರಗಳೊಂದಿಗೆ ಬೆಳೆಸಿರುವುದು ಸಂತೋಷದ ಸಂಗತಿ. ನಮ್ಮ ಮನೆ ಹಲವು ತಲೆಮಾರುಗಳಿಂದ ಹರಗುರು ಚರಮೂರ್ತಿಗಳು ಹಾಗೂ ಮಠಮಾನ್ಯಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಹಿರಿಯರಿಂದ ದೊರೆತ ಆಶೀರ್ವಾದದ ಪತ್ರಗಳೂ ನಮ್ಮ ಮನೆಯಲ್ಲಿವೆ. ಆ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂದು ಅವರು ಹೇಳಿದ ಮಾತು ನಮ್ಮಲ್ಲಿ ಸಂತೋಷ ಮೂಡಿಸಿತು.
ಒಮ್ಮೆ ಷಣ್ಮುಖಪ್ಪನವರು ಮತ್ತು ಅವರ ಮಗ ಇಬ್ಬರೂ ನಮ್ಮನ್ನು ಆಹ್ವಾನಿಸಲು ಬಂದಿದ್ದರು. ಇಬ್ಬರಿಗೂ ಕುರ್ಚಿ ಹಾಕಿದರೂ ಹಾಲೇಶ್ವರ ಕುಳಿತುಕೊಳ್ಳಲಿಲ್ಲ. ‘ಹಿರಿಯರು ಇರುವಾಗ ನಾವು ಕುಳಿತುಕೊಳ್ಳಬಾರದು’ ಎಂಬ ಭಾವನೆಯಿಂದ ನಿಂತುಕೊಂಡೇ ಮಾತನಾಡಿದರು. ಕಾಲು ನೋವಾದಾಗ ನೆಲದ ಮೇಲೆ ಕುಳಿತರು. ಹಿರಿಯರಿಗೆ ಗೌರವ ನೀಡಬೇಕು ಎಂಬ ಸಂಸ್ಕಾರವನ್ನು ಅವರಲ್ಲಿ ಕಾಣಲು ಸಾಧ್ಯವಾಯಿತು. ಇಂತಹ ನಡೆನುಡಿ ಹೊಂದಿರುವ ಯುವಕರು ಹೆಚ್ಚಾಗಬೇಕು. ತಂದೆ-ತಾಯಿಯರು ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಸಂಸ್ಕಾರ ನೀಡುವುದು ಬಹಳ ಮುಖ್ಯ ಎಂದರು.

ಹಣದ ಬಲವಲ್ಲ, ಜನರ ವಿಶ್ವಾಸವೇ ರಾಜಕೀಯದ ಶಕ್ತಿ
ಇಂದಿನ ರಾಜಕೀಯ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಅವರು, ಷಣ್ಮುಖಪ್ಪನವರು ಚುನಾವಣೆಗೆ ಸ್ಪರ್ಧಿಸುವ ವಿಚಾರದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿಯೇ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಪರಿಸ್ಥಿತಿ ಇದೆ. ಒಂದು ಕೋಟಿ ರೂಪಾಯಿ ಖರ್ಚು ಮಾಡಿ ಗೆದ್ದರೆ, ನಂತರ ಜನರ ಕೆಲಸ ಮಾಡಿಕೊಡುವುದರ ಜೊತೆಗೆ ಮನೆ ಬಾಗಿಲಿಗೆ ಬರುವವರಿಗೆ ಕಾರ್ಯಕ್ರಮಕ್ಕೊಂದು ಇಂತಿಷ್ಟು ಎಂದು ಹಣ ನೀಡಬೇಕಾಗುತ್ತದೆ. ನಮ್ಮ ತಂದೆ-ತಾಯಿಯವರು ಸಂಪಾದಿಸಿದ ಆಸ್ತಿಯನ್ನು ಉಳಿಸಿಕೊಂಡು, ಸ್ವಲ್ಪ ಜಮೀನು ಹೆಚ್ಚಿಸಿಕೊಂಡಿದ್ದೇವೆ. ಇಂದಿನ ರಾಜಕೀಯದಲ್ಲಿ ತೊಡಗಿಸಿಕೊಂಡರೆ ಅದನ್ನೂ ಕಳೆದುಕೊಳ್ಳುವ ಪರಿಸ್ಥಿತಿ ಬರಬಹುದು. ದೇವರು ಕೊಟ್ಟಿರುವುದರಲ್ಲಿ ಒಂದಿಷ್ಟನ್ನು ಸಮಾಜ ಸೇವೆಗೆ ವಿನಿಯೋಗಿಸುತ್ತೇನೆ. ರಾಜಕೀಯ ನನಗೆ ಬೇಡ ಎಂದು ಷಣ್ಮುಖಪ್ಪನವರು ಹೇಳಿದ್ದರು.
ಆದರೆ, ಸಮಾಜಮುಖಿಯಾಗಿ ಕೆಲಸ ಮಾಡುವವರು ರಾಜಕೀಯದಿಂದ ದೂರ ಉಳಿಯಬಾರದು. ಒಳ್ಳೆಯವರಿಗೆ ಅವಕಾಶ ಮತ್ತು ಒತ್ತಡ ಎರಡೂ ಬಂದಾಗ ಜನರ ಸೇವೆಗಾಗಿ ಮುಂದೆ ಬರಬೇಕು. ಜನರ ವಿಶ್ವಾಸವಿದ್ದರೆ ಗೆಲ್ಲುವ ಅವಕಾಶವೂ ಇರುತ್ತದೆ ಎಂದು ಅವರಿಗೆ ತಿಳಿಸಿದ್ದೇನೆ.
ಇಂದು ಮೌಲ್ಯಾಧಾರಿತ ರಾಜಕಾರಣ ಮರೆಯಾಗುತ್ತಿರುವುದು ಆತಂಕಕಾರಿ. ಪಕ್ಷಗಳು ಬದಲಾಗುತ್ತಿವೆ, ಪಾತ್ರಗಳು ಬದಲಾಗುತ್ತಿವೆ. ಆದರೆ ಪದಾರ್ಥಗಳು ಮಾತ್ರ ಅದೇ ಆಗಿವೆ. ಭ್ರಷ್ಟಾಚಾರ ಪಕ್ಷಾತೀತವಾಗಿ ವ್ಯಾಪಿಸುತ್ತಿದೆ. ಒಬ್ಬರು ಮತ್ತೊಬ್ಬರತ್ತ ಬೆರಳು ತೋರಿಸುತ್ತಾರೆ. ಆದರೆ ರಾಜಕೀಯದಲ್ಲಿರುವ ಪ್ರತಿಯೊಬ್ಬರೂ ಮೊದಲು ತಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಬೇಕು. ನನ್ನನ್ನು ನಂಬಿರುವ ಜನರಿಗೆ ನಾನು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದೇನೆಯೇ ಎಂಬ ಪ್ರಶ್ನೆ ಪ್ರತಿದಿನವೂ ಕಾಡಬೇಕು. ಆತ್ಮಸಾಕ್ಷಿಗೆ ಉತ್ತರಿಸುವ ಸಾಮರ್ಥ್ಯ ಹೊಂದಿದವನೇ ನಿಜವಾದ ಜನಪ್ರತಿನಿಧಿಯಾಗಲು ಸಾಧ್ಯ ಬಸವಕೇಂದ್ರ ಶ್ರೀಗಳು ಎಂದು ಹೇಳಿದರು.
ಮದುವೆಗಳಲ್ಲಿ ಆಡಂಬರಕ್ಕಿಂತ ಸರಳತೆಗೆ ಆದ್ಯತೆ ನೀಡಿ
ಇಂದಿನ ಮದುವೆಗಳು ದೊಡ್ಡ ರಾಜಕೀಯ ಸಮಾವೇಶಗಳಂತೆ ನಡೆಯುತ್ತಿವೆ. ಸಾವಿರಾರು ಜನರನ್ನು ಆಹ್ವಾನಿಸಿ, ಅತಿಯಾದ ಖರ್ಚು ಮಾಡಿ ಮದುವೆ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಉಳ್ಳವರು ಮಾಡುವ ಆಡಂಬರವನ್ನು ನೋಡಿ, ಅನುಕೂಲವಿಲ್ಲದ ಕುಟುಂಬಗಳೂ ಸಾಲಸೋಲ ಮಾಡಿ ಮದುವೆ ಮಾಡಿಕೊಳ್ಳುತ್ತಿವೆ. ಕೊನೆಗೆ ಮದುವೆಯಾದ ದಂಪತಿಗಳು ಜೀವನಪೂರ್ತಿ ಸಾಲ ತೀರಿಸುವ ಪರಿಸ್ಥಿತಿ ಎದುರಾಗುತ್ತಿದೆ. ಇದು ಸಮಾಜದ ಆರೋಗ್ಯಕರ ಬೆಳವಣಿಗೆಯಲ್ಲ.
ಸರಳ ಮದುವೆ ಎಂದರೆ ಕಲ್ಯಾಣ ಮಂಟಪ ಮಾಡಬಾರದು, ಒಡವೆ-ವಸ್ತ್ರ ಧರಿಸಬಾರದು ಅಥವಾ ಅಲಂಕಾರ ಮಾಡಬಾರದು ಎಂದಲ್ಲ. ಯಾವುದು ಅಗತ್ಯ, ಯಾವುದು ಅನಿವಾರ್ಯ ಎಂಬುದನ್ನು ಗುರುತಿಸಿ ಅಷ್ಟಕ್ಕೆ ಸೀಮಿತವಾಗಬೇಕು. ಅನಗತ್ಯ ದುಂದು ವೆಚ್ಚವನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದರು.
ಶಿವಮೊಗ್ಗದ ಕೆಲವು ಕಲ್ಯಾಣ ಮಂಟಪಗಳಲ್ಲಿ ಮದುವೆಗಳನ್ನು ಗಮನಿಸಿದಾಗ ಅತಿಯಾದ ತಿಂಡಿ-ತಿನಿಸುಗಳ ವ್ಯವಸ್ಥೆ ಮಾಡಿರುವುದು ಕಂಡುಬರುತ್ತದೆ. ವಧು-ವರರಿಗೆ ಶುಭ ಹಾರೈಸಲು ಬರುವವರು ಮೊದಲು ಹೊರಗಡೆ ತಿಂಡಿ, ಚಾರ್ಟ್ಗಳನ್ನು ಸೇವಿಸಿ, ನಂತರ ಒಳಗೆ ಹೋಗಿ ಆಶೀರ್ವದಿಸಿ ಊಟಕ್ಕೆ ಬರುತ್ತಾರೆ. ಇಷ್ಟೆಲ್ಲ ವ್ಯವಸ್ಥೆ ಮಾಡುವ ಅಗತ್ಯವೇನು ಎಂಬ ಪ್ರಶ್ನೆ ಮೂಡುತ್ತದೆ.
ಕೆಲವು ಮದುವೆಗಳಲ್ಲಿ 50ರಿಂದ 60 ಬಗೆಯ ಖಾದ್ಯಗಳನ್ನು ಸಿದ್ಧಪಡಿಸಲಾಗುತ್ತದೆ. ಒಂದೊಂದು ಪದಾರ್ಥವನ್ನು ಸ್ವಲ್ಪ ಪ್ರಮಾಣದಲ್ಲಿ ತೆಗೆದುಕೊಂಡರೂ ಸಾಕು, ಹೊಟ್ಟೆ ತುಂಬುತ್ತದೆ. ಆದರೆ ಅನೇಕರು ಎಲ್ಲವನ್ನೂ ರುಚಿ ನೋಡಬೇಕೆಂಬ ಕಾರಣಕ್ಕೆ ತಟ್ಟೆಯಲ್ಲಿ ಹೆಚ್ಚು ಆಹಾರ ಹಾಕಿಸಿಕೊಂಡು ಕೊನೆಗೆ ಎಸೆಯುತ್ತಾರೆ. ಊಟ ಮಾಡುವವರ ಹಿಂದೆ ಮತ್ತೊಬ್ಬರು ನಿಂತು ಕುರ್ಚಿಗಾಗಿ ಕಾಯುವಂತಹ ಪರಿಸ್ಥಿತಿಯೂ ನಿರ್ಮಾಣವಾಗುತ್ತದೆ. ಇದು ಅತಿಥಿಗಳಿಗೂ ಮುಜುಗರ ಉಂಟುಮಾಡುತ್ತದೆ.
ಆಯನೂರು ಮಂಜುನಾಥ್ ಅವರ ಮಗನ ಮದುವೆಯಲ್ಲಿ ಸರಳವಾದ ಊಟದ ವ್ಯವಸ್ಥೆ ಮಾಡಲಾಗಿತ್ತು. ರೊಟ್ಟಿ, ಪಲ್ಯ, ಅನ್ನ, ಉಳ್ಳಿಕಟ್ಟು ಪಲ್ಯ, ಕೋಸಂಬರಿ ಮತ್ತು ಒಂದು ಪಾಯಸ. ಬಂದವರೆಲ್ಲರೂ ತೃಪ್ತಿಯಿಂದ ಊಟ ಮಾಡಿದರು. ಆಹಾರದ ವ್ಯರ್ಥವೂ ಆಗಲಿಲ್ಲ. ಮದುವೆಗಳಲ್ಲಿ ಇಂತಹ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದರೆ ಸಾಕು.
ಆಹಾರದ ಅಪವ್ಯಯ ಎಂದರೆ ಕೇವಲ ಆಹಾರವನ್ನು ಎಸೆಯುವುದಲ್ಲ. ಅದು ಅನ್ನದಾತ ರೈತನಿಗೆ ಮಾಡುವ ದ್ರೋಹ. ಪ್ರಸಾದಕ್ಕೆ ಮಾಡುವ ಅವಮಾನವೂ ಹೌದು. ರೈತರು ಬೆವರು ಸುರಿಸಿ ಬೆಳೆದ ಆಹಾರವನ್ನು ಗೌರವದಿಂದ ಬಳಸಬೇಕು. ಮದುವೆ ಸೇರಿದಂತೆ ಎಲ್ಲ ಶುಭಕಾರ್ಯಗಳಲ್ಲಿ ಸರಳತೆ ಮತ್ತು ಮಿತವ್ಯಯಕ್ಕೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.

16 ವರ್ಷ ಸಂಬಳವಿಲ್ಲದೆ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಗೌರವ
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಪ್ರೌಢಶಾಲೆಯ ನಾಲ್ವರು ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿರುವುದನ್ನು ಶ್ಲಾಘಿಸಿದ ಸ್ವಾಮೀಜಿಗಳು, ಸುಮಾರು 15ರಿಂದ 16 ವರ್ಷಗಳ ಕಾಲ ಯಾವುದೇ ಸಂಬಳವಿಲ್ಲದೆ ಶಾಲೆಯ ಮಕ್ಕಳಿಗೆ ಶಿಕ್ಷಣ ನೀಡಿದ ಶಿಕ್ಷಕರ ಸೇವೆ ಅಪಾರವಾದುದು ಎಂದರು.
ವೈಯಕ್ತಿಕವಾಗಿ ಎಷ್ಟೇ ಕಷ್ಟಗಳಿದ್ದರೂ ಮಕ್ಕಳನ್ನು ಸರಿದಾರಿಗೆ ತರಬೇಕು, ಶಾಲೆಯನ್ನು ಉಳಿಸಿ ಬೆಳೆಸಬೇಕು ಎಂಬ ಸಂಕಲ್ಪದಿಂದ ಅವರು ಕೆಲಸ ಮಾಡಿದ್ದಾರೆ. ಅಂತಹ ಶಿಕ್ಷಕರನ್ನು ಸನ್ಮಾನಿಸುವುದು ಅತ್ಯಂತ ಅರ್ಥಪೂರ್ಣವಾದ ಕಾರ್ಯ. ಈ ಸನ್ಮಾನದ ಮೂಲಕ ಶಿಕ್ಷಕರ ಗೌರವ ಮಾತ್ರವಲ್ಲ, ಅವರನ್ನು ಗೌರವಿಸಿದ ಕುಟುಂಬದ ಘನತೆಯೂ ಹೆಚ್ಚಾಗಿದೆ.
ನಾವೂ ಇದೇ ರೀತಿಯ ಪ್ರೌಢಶಾಲೆಯಲ್ಲಿ ಓದಿ ಬಂದವರು. ನಮ್ಮ ಕಾಲದಲ್ಲಿ ಶಿಕ್ಷಕರು ಅನುಭವಿಸಿದ ಕಷ್ಟಗಳನ್ನು ಕಣ್ಣಾರೆ ನೋಡಿದ್ದೇವೆ. ಮಕ್ಕಳಿಗೆ ಪಾಠ ಹೇಳುವುದರ ಜೊತೆಗೆ ಟ್ಯೂಷನ್ ಮಾಡುತ್ತಿದ್ದರು. ವಿದ್ಯಾರ್ಥಿಗಳಿಂದ ಶುಲ್ಕ ಪಡೆಯುವುದಕ್ಕೂ ಸಾಧ್ಯವಾಗದ ಸಂದರ್ಭಗಳಿದ್ದವು. ಕೆಲವರು ಸೊಸೈಟಿಯಿಂದ ಅಕ್ಕಿ ಕಳುಹಿಸುತ್ತಿದ್ದರು, ಇನ್ನು ಕೆಲವರು ಊಟದ ವ್ಯವಸ್ಥೆ ಮಾಡುತ್ತಿದ್ದರು. ಅದನ್ನೇ ಸ್ವೀಕರಿಸಿ ಶಿಕ್ಷಕರು ತಮ್ಮ ಕರ್ತವ್ಯ ಮುಂದುವರಿಸುತ್ತಿದ್ದರು. ಇಂತಹ ಶಿಕ್ಷಕರ ಸೇವೆಯನ್ನು ಮರೆಯಬಾರದು. ಸನ್ಮಾನಿತರಾದ ನಾಲ್ವರು ಶಿಕ್ಷಕರಿಗೂ ಉತ್ತಮ ಆರೋಗ್ಯ, ನೆಮ್ಮದಿ ಮತ್ತು ಸಂತೋಷದ ನಿವೃತ್ತ ಜೀವನ ದೊರೆಯಲಿ ಎಂದು ಬಸವಕೇಂದ್ರ ಶ್ರೀಗಳು ಹಾರೈಸಿದರು.

ಹರಳಿಕಟ್ಟೆ ಅನುಭವ ಮಂಟಪ: ಹಳ್ಳಿಗಳಲ್ಲಿ ಮರೆಯಾಗುತ್ತಿರುವ ಒಗ್ಗಟ್ಟಿನ ಬದುಕಿಗೆ ಮರುಜೀವ
ಹರಳಿಕಟ್ಟೆ ಅನುಭವ ಮಂಟಪದ ಪರಿಕಲ್ಪನೆಯನ್ನು ವಿವರಿಸಿದ ಸ್ವಾಮೀಜಿಗಳು, ಹಿಂದಿನ ಕಾಲದಲ್ಲಿ ಮೊಬೈಲ್, ದೂರದರ್ಶನಗಳಿಲ್ಲದ ದಿನಗಳಲ್ಲಿ ಹಳ್ಳಿಯ ಜನರು ದಿನವಿಡೀ ಹೊಲಗದ್ದೆಗಳಲ್ಲಿ ದುಡಿದು ಸಂಜೆ ಮನೆಗೆ ಬಂದು ಊಟ ಮುಗಿಸಿ ಊರ ಕಟ್ಟೆಯ ಮೇಲೆ ಸೇರುತ್ತಿದ್ದರು. ಪರಸ್ಪರ ತಮ್ಮ ಹೊಲದ ಬೆಳೆ, ಕೃಷಿ ಪದ್ಧತಿ, ಗೊಬ್ಬರ, ಕುಟುಂಬದ ಕಷ್ಟ-ಸುಖಗಳ ಬಗ್ಗೆ ಚರ್ಚಿಸುತ್ತಿದ್ದರು. ಒಬ್ಬರ ಅನುಭವ ಮತ್ತೊಬ್ಬರಿಗೆ ಮಾರ್ಗದರ್ಶನವಾಗುತ್ತಿತ್ತು.
ಕಾಯಕ ಜೀವಿಗಳು ಒಟ್ಟಿಗೆ ಸೇರಿ ತಮ್ಮ ಬದುಕಿನ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ರೂಪುಗೊಳ್ಳುವುದೇ ಅನುಭವ ಮಂಟಪದ ಆಶಯ. ಇಂತಹ ಸಂಸ್ಕೃತಿಯನ್ನು ಮತ್ತೆ ಗ್ರಾಮೀಣ ಬದುಕಿನಲ್ಲಿ ಬೆಳೆಸುವ ಉದ್ದೇಶದಿಂದ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಹರಳಿಕಟ್ಟೆ ಅನುಭವ ಮಂಟಪ ಕಾರ್ಯಕ್ರಮವನ್ನು ನಡೆಸುತ್ತಿದೆ. ಸೋಮಿನಕೊಪ್ಪದಲ್ಲಿ ನಡೆದ ಇಂದಿನ ಕಾರ್ಯಕ್ರಮವೂ ಇದೇ ದೃಷ್ಟಿಯಿಂದ ಅರ್ಥಪೂರ್ಣವಾಗಿದೆ.
ಇತ್ತೀಚಿನ ದಿನಗಳಲ್ಲಿ ಹಳ್ಳಿಗಳು ವೃದ್ಧಾಶ್ರಮಗಳಂತಾಗುತ್ತಿವೆ. ಯುವಕರು ಉದ್ಯೋಗಕ್ಕಾಗಿ ನಗರಗಳಿಗೆ ತೆರಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಷಣ್ಮುಖಪ್ಪನವರ ಮಗ ಹಾಲೇಶ್ವರ ಶಿವಮೊಗ್ಗದಲ್ಲಿ ಉದ್ಯೋಗ ಮಾಡಿಕೊಂಡಿದ್ದರೂ ಹಳ್ಳಿಯಲ್ಲಿಯೇ ನೆಲೆಸಿ ಬದುಕುತ್ತಿರುವುದು ಮೆಚ್ಚುವಂತಹ ಬೆಳವಣಿಗೆ. ಹಳ್ಳಿಗಳಲ್ಲಿ ಯುವಕರು ನೆಲೆಸಿದಾಗ ಮಾತ್ರ ಗ್ರಾಮೀಣ ಸಂಸ್ಕೃತಿ, ಕೃಷಿ ಮತ್ತು ಸಾಮಾಜಿಕ ಬಾಂಧವ್ಯ ಉಳಿಯಲು ಸಾಧ್ಯ ಎಂದರು.
ಅಂತರಂಗದ ಭಾವನೆ ಮತ್ತು ಬಹಿರಂಗದ ನಡೆ ಒಂದಾಗಲಿ
ಇಂದಿನ ಚಿಂತನ ಕಾರ್ತಿಕದ ವಿಷಯ ‘ಬಸವಣ್ಣ: ಅಂತರಂಗ ಮತ್ತು ಬಹಿರಂಗ’. ಅಂತರಂಗ ಎಂದರೆ ಮನಸ್ಸಿನೊಳಗಿನ ಭಾವನೆ, ಬಹಿರಂಗ ಎಂದರೆ ಹೊರಗೆ ಕಾಣಿಸುವ ನಡೆನುಡಿ. ಯಾರಾದರೂ ನಮಗೆ ಕೈಮುಗಿದಾಗ ಕೈಜೋಡಿಸಿ ನಮಸ್ಕರಿಸುವುದು ಬಹಿರಂಗ. ಆದರೆ ಆ ಮನಸ್ಸಿನಲ್ಲಿ ಭಕ್ತಿ ಇದೆಯೋ, ದ್ವೇಷ ಇದೆಯೋ ಎಂಬುದು ಅಂತರಂಗಕ್ಕೆ ಸಂಬಂಧಿಸಿದ್ದು. ಕೈಮುಗಿಯುವುದು ಸುಲಭ. ಹೃದಯಪೂರ್ವಕವಾಗಿ ನಮಸ್ಕರಿಸುವುದು ಮುಖ್ಯ. ಅಂತರಂಗ ಮತ್ತು ಬಹಿರಂಗ ಒಂದಾದಾಗ ಮಾತ್ರ ನಮ್ಮ ವ್ಯಕ್ತಿತ್ವಕ್ಕೆ ನಿಜವಾದ ಮೌಲ್ಯ ಬರುತ್ತದೆ ಎಂದರು.
ಬಸವಣ್ಣನವರ ಪ್ರಸಿದ್ಧ ವಚನವನ್ನು ಉಲ್ಲೇಖಿಸಿದ ಅವರು,
ಕಳಬೇಡ, ಕೊಲಬೇಡ; ಹುಸಿಯ ನುಡಿಯಲು ಬೇಡ;
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ;
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ.
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ!
ಈ ವಚನದ ಸಾರವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡರೆ ಅಂತರಂಗವೂ ಶುದ್ಧವಾಗುತ್ತದೆ, ಬಹಿರಂಗದ ನಡವಳಿಕೆಯೂ ಶುದ್ಧವಾಗುತ್ತದೆ. ಕಳ್ಳತನ ಮಾಡಬಾರದು, ಹಿಂಸೆ ನೀಡಬಾರದು, ಸುಳ್ಳು ಹೇಳಬಾರದು, ಕೋಪ ಮತ್ತು ದ್ವೇಷ ಬೆಳೆಸಬಾರದು, ತಮ್ಮನ್ನು ತಾವು ಹೊಗಳಿಕೊಳ್ಳಬಾರದು, ಇತರರನ್ನು ನಿಂದಿಸಬಾರದು ಎಂಬ ಮೌಲ್ಯಗಳು ಬದುಕಿನ ಭಾಗವಾಗಬೇಕು ಎಂದು ತಿಳಿಸಿದರು.
ಮಾತಿಗಿಂತ ನಡೆ ದೊಡ್ಡದು
ಬಸವಣ್ಣನವರ ಮತ್ತೊಂದು ವಚನವನ್ನು ಉಲ್ಲೇಖಿಸಿದ ಸ್ವಾಮೀಜಿಗಳು,
“ನುಡಿಯಲ್ಲಿ ಎಚ್ಚೆತ್ತು ನಡೆಯಲ್ಲಿ ತಪ್ಪಿದಡೆ,
ಹಿಡಿದಿರ್ಪ ಲಿಂಗವು ಘಟಸರ್ಪ ನೋಡಾ!
ನುಡಿಯಲೂ ಬಾರದು, ನಡೆಯಲೂ ಬಾರದು,
ಲಿಂಗದೇವ ದಿವ್ಯವಯ್ಯಾ!
ಬಡವನ ಕೋಪ ಅವುಡಿಗೆ ಮೃತ್ಯುವಾದಂತೆ
ಕಡೆಯ ದಾಂಟದು ಕಾಣಾ ಕೂಡಲಸಂಗಮದೇವ.”
ಮಾತಿನಲ್ಲಿ ದೊಡ್ಡ ದೊಡ್ಡ ಆದರ್ಶಗಳನ್ನು ಹೇಳಿ, ನಡೆದುಕೊಳ್ಳುವಾಗ ಅದಕ್ಕೆ ವಿರುದ್ಧವಾಗಿ ಬದುಕುವುದು ಸರಿಯಲ್ಲ. ನಾನು ಹೇಳಿದಂತೆ ನೀವು ಮಾಡಿ, ಆದರೆ ನಾನು ಮಾಡಿದಂತೆ ಮಾಡಬೇಡಿ ಎನ್ನುವ ಮನೋಭಾವ ಅನೇಕ ಕಡೆ ಕಂಡುಬರುತ್ತದೆ. ಉಪದೇಶ ಮಾಡುವವರು ಮೊದಲು ಅದನ್ನು ತಮ್ಮ ಬದುಕಿನಲ್ಲಿ ಪಾಲಿಸಬೇಕು. ಜನರಿಗೆ ಮೋಸ ಮಾಡಬಹುದು, ಆದರೆ ಆತ್ಮಸಾಕ್ಷಿಗೆ ಮೋಸ ಮಾಡಲು ಸಾಧ್ಯವಿಲ್ಲ. ನಮ್ಮ ನಡೆನುಡಿಗಳಲ್ಲಿ ವ್ಯತ್ಯಾಸ ಉಂಟಾದಾಗ ಆತ್ಮಸಾಕ್ಷಿಯೇ ನಮ್ಮನ್ನು ಪ್ರಶ್ನಿಸುತ್ತದೆ. ಹೀಗಾಗಿ ಮಾತಿನಲ್ಲಿ ಹೇಳುವುದನ್ನು ಕೃತಿಯಲ್ಲಿಯೂ ತೋರಿಸಬೇಕು ಎಂದರು.
ಮುತ್ತಿನ ಹಾರದಂತಿರಲಿ ಮಾತು, ಸ್ಪಟಿಕದಂತಿರಲಿ ವ್ಯಕ್ತಿತ್ವ
ಬಸವಣ್ಣನವರ ‘ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕು’ ಎಂಬ ವಚನವನ್ನು ವಿವರಿಸಿದ ಅವರು, ಮನುಷ್ಯ ಮಾತನಾಡುವ ಪ್ರತಿಯೊಂದು ಮಾತಿಗೂ ಅರ್ಥ ಮತ್ತು ಮೌಲ್ಯ ಇರಬೇಕು ಎಂದರು.
ಮುತ್ತಿನ ಹಾರದಲ್ಲಿ ಒಂದೊಂದು ಮುತ್ತು ಹೇಗೆ ಅಚ್ಚುಕಟ್ಟಾಗಿ ಪೋಣಿಸಲ್ಪಟ್ಟಿರುತ್ತದೆಯೋ, ಹಾಗೆಯೇ ನಮ್ಮ ಮಾತುಗಳೂ ಅರ್ಥಪೂರ್ಣವಾಗಿ ಮತ್ತು ಸುಂದರವಾಗಿ ಜೋಡಣೆಗೊಂಡಿರಬೇಕು. ಮಾಣಿಕ್ಯವು ತನ್ನದೇ ಆದ ಪ್ರಕಾಶವನ್ನು ಹೊಂದಿರುವಂತೆ ನಮ್ಮ ಮಾತುಗಳು ಜ್ಞಾನದ ಬೆಳಕನ್ನು ಇತರರಿಗೆ ಹಂಚುವಂತಿರಬೇಕು.
ಸ್ಪಟಿಕದ ವಿಶೇಷತೆ ಅದರ ಪಾರದರ್ಶಕತೆ. ಅದರ ಮೇಲೆ ಯಾವುದೇ ಬಣ್ಣದ ವಸ್ತುವನ್ನು ಇಟ್ಟರೂ ಅದರ ಪ್ರತಿಫಲನ ಕಾಣುತ್ತದೆ. ಅದೇ ರೀತಿ ನಮ್ಮ ವ್ಯಕ್ತಿತ್ವದಲ್ಲಿಯೂ ಮುಚ್ಚಿಡುವಂತಹ ಕಪಟ ಇರಬಾರದು. ಒಳಗಿರುವ ಭಾವನೆ ಮತ್ತು ಹೊರಗೆ ವ್ಯಕ್ತವಾಗುವ ಮಾತು ಒಂದೇ ಆಗಿರಬೇಕು.
ಇವೆಲ್ಲಕ್ಕಿಂತ ಮುಖ್ಯವಾಗಿ ನಮ್ಮ ಮಾತುಗಳನ್ನು ಕೇಳಿದಾಗ ದೇವರೇ ಮೆಚ್ಚಿ ‘ಹೌದು, ಇದೇ ಸರಿಯಾದ ಮಾತು’ ಎನ್ನುವಂತಿರಬೇಕು. ಆದರೆ ಕೇವಲ ಒಳ್ಳೆಯ ಮಾತುಗಳನ್ನಾಡಿದರೆ ಸಾಲದು. ಆ ಮಾತುಗಳನ್ನು ನಮ್ಮ ನಡತೆಯ ಮೂಲಕ ಸಾಬೀತುಪಡಿಸಬೇಕು. ನಾನು ಇನ್ನು ಮುಂದೆ ದುಶ್ಚಟ ಮಾಡುವುದಿಲ್ಲ ಎಂದು ನಿರ್ಧರಿಸಿದರೆ ಅದನ್ನು ಪಾಲಿಸಬೇಕು. ನನ್ನ ಅಂಗಡಿಯಲ್ಲಿ ತಂಬಾಕು ಮಾರಾಟ ಮಾಡುವುದಿಲ್ಲ ಎಂದು ಸಂಕಲ್ಪ ಮಾಡಿದರೆ ಅದಕ್ಕೆ ಬದ್ಧನಾಗಿರಬೇಕು. ಮಾತು ಮತ್ತು ಕೃತಿಗಳಲ್ಲಿ ಏಕತೆ ಇದ್ದಾಗ ಮಾತ್ರ ದೇವರ ಕೃಪೆಗೆ ಪಾತ್ರರಾಗಲು ಸಾಧ್ಯ ಎಂದರು.
ಬಸವಣ್ಣನವರ ಬದುಕೇ ಅಂತರಂಗ ಶುದ್ಧಿಗೆ ಸಾಕ್ಷಿ
ಬಸವಣ್ಣನವರು ಏಕೆ ಮಹಾನ್ ವ್ಯಕ್ತಿಯಾದರು ಎಂಬುದನ್ನು ವಿವರಿಸಿದ ಬಸವಕೇಂದ್ರ ಶ್ರೀಗಳು, ಡಾ. ಜಿ.ಎಸ್. ಶಿವರುದ್ರಪ್ಪನವರ ಕಾವ್ಯಭಾವವನ್ನು ನೆನಪಿಸಿಕೊಂಡು, ಬಸವಣ್ಣನವರಿಗಿಂತ ದೊಡ್ಡ ತಪಸ್ವಿಗಳು, ಮೇಧಾವಿಗಳು, ತತ್ವಜ್ಞಾನಿಗಳು ಇರಬಹುದು. ಆದರೆ ಅಂತರಂಗ ಮತ್ತು ಬಹಿರಂಗದಲ್ಲಿದ್ದ ಎಲ್ಲ ಕಲ್ಮಶಗಳನ್ನು ತೊಳೆದು, ತಮ್ಮ ಬದುಕನ್ನೇ ಶುದ್ಧತೆಯ ಪ್ರತಿರೂಪವನ್ನಾಗಿ ಮಾಡಿಕೊಂಡವರು ಅಪರೂಪ. ಅದೇ ಬಸವಣ್ಣನವರ ಮಹತ್ವ ಎಂದರು.
ಬಸವಣ್ಣನವರು ತಮ್ಮ ಬದುಕಿನಲ್ಲಿ ಹೇಳಿದ ಮೌಲ್ಯಗಳನ್ನು ಅಕ್ಷರಶಃ ಪಾಲಿಸುತ್ತಿದ್ದರು. ಮನೆಯಲ್ಲಿ ಸಂಪತ್ತನ್ನು ಸಂಗ್ರಹಿಸಬಾರದು ಎಂಬ ನಿಲುವು ಹೊಂದಿದ್ದ ಅವರು, ತಮ್ಮ ಪತ್ನಿ ನೀಲಮ್ಮನವರ ಮೈಮೇಲೆ ಆಭರಣಗಳಿರುವುದನ್ನು ಕಂಡಾಗಲೂ ತಮ್ಮ ತತ್ವಕ್ಕೆ ವಿರುದ್ಧವಾಗಿ ನಡೆದುಕೊಂಡೆನೆಂದು ಆತ್ಮಪರಿಶೀಲನೆ ಮಾಡಿಕೊಳ್ಳುವ ಪ್ರಸಂಗವನ್ನು ವಚನದ ಮೂಲಕ ವಿವರಿಸಿದರು.
ಒಮ್ಮೆ ಕಳ್ಳನೊಬ್ಬ ಮನೆಗೆ ನುಗ್ಗಿ ನೀಲಮ್ಮನವರ ಆಭರಣಗಳನ್ನು ಕದ್ದು ಓಡುತ್ತಿದ್ದಾಗ ಸೈನಿಕರು ಆತನನ್ನು ಹಿಡಿದು ಬಸವಣ್ಣನವರ ಮುಂದೆ ನಿಲ್ಲಿಸಿದರು. ಆಗ ಬಸವಣ್ಣನವರು ಕಳ್ಳನನ್ನು ಶಿಕ್ಷಿಸುವ ಬದಲು, ತಮ್ಮ ಮನೆಯಲ್ಲಿ ಆಭರಣಗಳಿರುವುದಕ್ಕೆ ತಮ್ಮ ತತ್ವದ ದೃಷ್ಟಿಯಿಂದಲೇ ಪ್ರಶ್ನೆ ಮಾಡಿಕೊಂಡರು. ಆಭರಣಗಳನ್ನು ಕಳ್ಳನಿಗೆ ಕೊಡುವಂತೆ ನೀಲಮ್ಮನವರಿಗೆ ತಿಳಿಸಿದರು. ಈ ನಡೆ ಕಳ್ಳನ ಮನಸ್ಸಿನ ಮೇಲೆಯೇ ಪರಿಣಾಮ ಬೀರಿತು. ತನ್ನ ಕಳ್ಳತನಕ್ಕೆ ಪ್ರತಿಯಾಗಿ ಶಿಕ್ಷೆ ಸಿಗಬೇಕಾದ ಜಾಗದಲ್ಲಿ ಇಂತಹ ಉದಾರತೆ ಮತ್ತು ತತ್ವನಿಷ್ಠೆಯನ್ನು ಕಂಡ ಕಳ್ಳ ಪಶ್ಚಾತ್ತಾಪಪಟ್ಟು ಪರಿವರ್ತನೆಯಾದ.
ಒಬ್ಬ ವ್ಯಕ್ತಿಯನ್ನು ಬದಲಾಯಿಸಬೇಕಾದರೆ ಕೇವಲ ಉಪದೇಶದಿಂದ ಸಾಧ್ಯವಿಲ್ಲ. ನಮ್ಮ ವ್ಯಕ್ತಿತ್ವವೇ ಆತನ ಮನಸ್ಸಿನ ಮೇಲೆ ಪ್ರಭಾವ ಬೀರುವಂತಿರಬೇಕು. ಬಸವಣ್ಣನವರ ಅಂತರಂಗದ ಶುದ್ಧತೆ ಮತ್ತು ಬಹಿರಂಗದ ನಡೆ ಅಷ್ಟು ಪ್ರಬಲವಾಗಿದ್ದವು. ಅದರಿಂದಲೇ ಕಳ್ಳನೂ ಪರಿವರ್ತನೆಯಾಗಿ ಶರಣನಾದ ಎಂಬುದು ಈ ಪ್ರಸಂಗದ ಸಂದೇಶವಾಗಿದೆ.
ನಾವು ಹೊರಗೆ ಬಸವಣ್ಣನವರ ಹೆಸರನ್ನು ಹೇಳಿಕೊಂಡು, ಒಳಗೆ ಅದಕ್ಕೆ ವಿರುದ್ಧವಾಗಿ ಬದುಕಬಾರದು. ಹೊರಗೂ ಬಸವಣ್ಣನವರ ತತ್ವ, ಒಳಗೂ ಬಸವಣ್ಣನವರ ತತ್ವ ಇರಬೇಕು. ಅಂತರಂಗ ಮತ್ತು ಬಹಿರಂಗ ಒಂದಾದಾಗ ಮಾತ್ರ ಸಮಾಜದಲ್ಲಿ ನಿಜವಾದ ಬದಲಾವಣೆ ತರಲು ಸಾಧ್ಯ ಎಂದು ಹೇಳಿದರು.

ಪ್ರಾಮಾಣಿಕತೆಯೇ ಶರಣಜೀವನದ ಅಡಿಪಾಯ
ಕಾರ್ಯಕ್ರಮದ ಉಪನ್ಯಾಸ ನೀಡಿದ ಬಸವನಗೌಡ ಮಾಳಿಗೆಯವರನ್ನು ಅಭಿನಂದಿಸಿದ ಬಸವಕೇಂದ್ರ ಶ್ರೀಗಳು, ಅವರು ಪ್ರಾಧ್ಯಾಪಕರಾಗಲಿ, ಉಪನ್ಯಾಸಕರಾಗಲಿ ಅಲ್ಲ. ವಿಎಸ್ಐಎಲ್ನಲ್ಲಿ ಕೆಲಸ ಮಾಡುತ್ತಿದ್ದವರು. ಯಂತ್ರಗಳೊಂದಿಗೆ ದುಡಿದ ಅನುಭವ ಹೊಂದಿರುವ ಅವರು ಕಳೆದ 25ರಿಂದ 30 ವರ್ಷಗಳಿಂದ ಶರಣ ಸಾಹಿತ್ಯ ಪರಿಷತ್ತಿನೊಂದಿಗೆ ಒಡನಾಟ ಬೆಳೆಸಿಕೊಂಡು, ಶರಣರ ವಿಚಾರಗಳನ್ನು ಅಧ್ಯಯನ ಮಾಡುತ್ತಾ ಇಂದು ಉತ್ತಮ ಪ್ರವಚನಕಾರರಾಗಿ ರೂಪುಗೊಂಡಿದ್ದಾರೆ ಎಂದರು.
ಚಿಕ್ಕಮಗಳೂರಿನ ಮಠದಲ್ಲಿ ಐದು ದಿನಗಳ ಕಾಲ ಪಂಚಾಚಾರಗಳ ಕುರಿತು ಪ್ರವಚನ ನೀಡಲು ಅವರನ್ನು ಆಹ್ವಾನಿಸಲಾಗಿತ್ತು. ಪ್ರವಚನದ ನಂತರ ಗೌರವಧನ ನೀಡಿದಾಗ, ತಮಗೆ ಹೆಚ್ಚು ಹಣ ನೀಡಲಾಗಿದೆ ಎಂದು ಭಾವಿಸಿ, ಅದನ್ನು ಹಿಂದಿರುಗಿಸಬೇಕೆಂದು ಕುಟುಂಬದವರೇ ಸಲಹೆ ನೀಡಿದ್ದರು. ತಮ್ಮ ಪರಿಶ್ರಮಕ್ಕೆ ಎಷ್ಟು ಗೌರವಧನ ಪಡೆಯಬೇಕೋ ಅಷ್ಟನ್ನೇ ಸ್ವೀಕರಿಸಬೇಕು ಎಂಬ ಪ್ರಾಮಾಣಿಕ ಮನೋಭಾವ ಅವರಲ್ಲಿದೆ. ಇಂತಹ ನಡೆನುಡಿಯ ಸಮನ್ವಯ ಹೊಂದಿರುವವರು ನಿಜವಾದ ಶರಣಜೀವಿಗಳು. ಬಸವನಗೌಡ ಮಾಳಿಗೆಯವರು ತಮ್ಮ ಮಾತು ಮತ್ತು ಬದುಕಿನ ಮೂಲಕ ಉತ್ತಮ ಆದರ್ಶವನ್ನು ತೋರಿಸಿದ್ದಾರೆ ಎಂದು ಪ್ರಶಂಸಿಸಿದರು.

ಹಿರಿಯರ ಆರೋಗ್ಯ, ಯುವಕರ ಸಂಸ್ಕಾರಕ್ಕೆ ಮೆಚ್ಚುಗೆ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯರಾದ ಕಲ್ಯಾಣಪ್ಪನವರು ಸೇರಿದಂತೆ ಅನೇಕರು ವಯಸ್ಸಾದರೂ ಉತ್ತಮ ಆರೋಗ್ಯ ಮತ್ತು ಚೈತನ್ಯದಿಂದಿರುವುದನ್ನು ಸ್ವಾಮೀಜಿಗಳು ಮೆಚ್ಚಿದರು. 89 ವರ್ಷ ವಯಸ್ಸಿನ ಕಲ್ಯಾಣಪ್ಪನವರು ಇನ್ನೂ ಮಂಡಿಯೂರಿ ನಮಸ್ಕರಿಸುವಷ್ಟು ಆರೋಗ್ಯ ಹೊಂದಿರುವುದು ಉತ್ತಮ ಜೀವನಶೈಲಿಯ ಪ್ರತಿಬಿಂಬವಾಗಿದೆ. ಹಿರಿಯರ ಮುಖದಲ್ಲಿರುವ ಉತ್ಸಾಹ, ಚೈತನ್ಯ ಮತ್ತು ನೆಮ್ಮದಿ ಎಲ್ಲರಿಗೂ ಮಾದರಿಯಾಗಬೇಕು. ಸಾಧ್ಯವಾದಷ್ಟು ಪ್ರಾಮಾಣಿಕವಾಗಿ, ಸರಳವಾಗಿ ಮತ್ತು ಮೌಲ್ಯಯುತವಾಗಿ ಬದುಕಿದಾಗ ಜೀವನದಲ್ಲಿ ನೆಮ್ಮದಿ ದೊರೆಯುತ್ತದೆ ಎಂದರು.

ಷಣ್ಮುಖಪ್ಪನವರ ಮೊಮ್ಮಗಳು ನೃತ್ಯ ಪ್ರದರ್ಶಿಸಿದ ಸಂದರ್ಭವನ್ನು ನೆನಪಿಸಿಕೊಂಡ ಅವರು, ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಮಕ್ಕಳ ತುಂಟತನವನ್ನೇ ಅಪರಾಧವೆಂಬಂತೆ ನೋಡದೆ, ಒಳ್ಳೆಯದು ಮತ್ತು ಕೆಟ್ಟದ್ದು ಯಾವುದು ಎಂಬುದನ್ನು ಪ್ರೀತಿಯಿಂದ ತಿಳಿಸಬೇಕು. ಅಂತಹ ಮಕ್ಕಳೇ ಮುಂದೆ ಸಮಾಜದ ಆಸ್ತಿಯಾಗಿ ಬೆಳೆಯುತ್ತಾರೆ ಎಂದು ಸಲಹೆ ನೀಡಿದರು.

ಶರಣ ಸಾಹಿತ್ಯ ಪರಿಷತ್ತಿನ ಕಾರ್ಯಕ್ಕೆ ಶ್ಲಾಘನೆ
ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಲವಕುಮಾರಸ್ವಾಮಿ ಅವರ ನೇತೃತ್ವದಲ್ಲಿ ತಂಡವು ಹಳ್ಳಿಹಳ್ಳಿಗಳಿಗೆ, ಶಾಲಾ-ಕಾಲೇಜುಗಳಿಗೆ ತೆರಳಿ ಶರಣರ ವಿಚಾರಗಳನ್ನು ತಲುಪಿಸುತ್ತಿರುವುದು ಶ್ಲಾಘನೀಯ ಕಾರ್ಯ. ನಿವೃತ್ತ ಶಿಕ್ಷಕರಾಗಿರುವ ಲವಕುಮಾರಸ್ವಾಮಿ ಅವರು ತಮ್ಮ ದುಡಿಮೆಯಲ್ಲಿಯೂ ಸಮಾಜಮುಖಿ ಮನೋಭಾವ ಬೆಳೆಸಿಕೊಂಡಿದ್ದಾರೆ. ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾಗ ದೊರೆಯುತ್ತಿದ್ದ ಅಲ್ಪ ಸಂಬಳದಲ್ಲಿಯೂ ಮಕ್ಕಳಿಗಾಗಿ ಒಂದಿಷ್ಟು ಹಣವನ್ನು ಮೀಸಲಿಡುತ್ತಿದ್ದ ದಾಸೋಹದ ಮನೋಭಾವ ಹೊಂದಿದ್ದರು.
ಅವರೊಂದಿಗೆ ಬಸವರಾಜಪ್ಪನವರು, ಕುಮಾರ್, ಹಿರೇಮಠ ಸೇರಿದಂತೆ ಅನೇಕರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಅಕ್ಕನ ಬಳಗದವರು, ಕದಳಿ ಮಹಿಳಾ ಸಮಾಜದ ತಾಯಂದಿರು ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಸೇರಿ ರೂಪಿಸಿರುವ ತಂಡ ಗ್ರಾಮೀಣ ಪ್ರದೇಶಗಳಲ್ಲಿ ಶರಣರ ವಿಚಾರಗಳನ್ನು ಹರಡುವಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ಇಂತಹ ಸಂಘಟಿತ ಪ್ರಯತ್ನಗಳಿಂದಲೇ ಸಮಾಜದಲ್ಲಿ ಮೌಲ್ಯಗಳ ಪುನರುಜ್ಜೀವನ ಸಾಧ್ಯ ಎಂದು ಮೆಚ್ಚುಗೆ ಬಸವಕೇಂದ್ರ ಶ್ರೀಗಳು ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೆ ಹೊಲಗದ್ದೆಗಳ ಕೆಲಸ ಮುಗಿಸಿಕೊಂಡು ಬಂದಿದ್ದರೂ, ಕೊನೆಯವರೆಗೂ ತಾಳ್ಮೆಯಿಂದ ಕುಳಿತು ಆಶೀರ್ವಚನ ಆಲಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಷಣ್ಮುಖಪ್ಪ ಹಾಗೂ ಅವರ ಕುಟುಂಬದವರು ಎಲ್ಲರನ್ನು ಒಗ್ಗೂಡಿಸಿ ಅತ್ಯಂತ ಅರ್ಥಪೂರ್ಣವಾಗಿ ಚಿಂತನ ಕಾರ್ತಿಕ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ. ಇಂತಹ ಕುಟುಂಬಗಳು ಹೆಚ್ಚಾದಾಗ ಮಾತ್ರ ಸಂಸ್ಕಾರಯುತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಹಾರೈಸಿ, ಎಲ್ಲರಿಗೂ ಶುಭವನ್ನು ಕೋರಿದರು.
ಈ ಸಂದರ್ಭದಲ್ಲಿ ಸೋಮಿನಕೊಪ್ಪದ ಮುಖಂಡರಾದ ಎಂ. ಚಂದ್ರಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು. ಹೊಳಲೂರಿನ ಮುಖಂಡರಾದ ಕಲ್ಯಾಣಪ್ಪನವರು, ಲವಕುಮಾರಸ್ವಾಮಿ ಎನ್.ಎಸ್, ಬಸವರಾಜಪ್ಪ ಎಂ, ಕುಮಾರ್ ವೈ.ಎಂ., ಬಸವರಾಜಪ್ಪ ಎಲ್.ಹೆಚ್, ಜಿ.ಸಿ. ಹಿರೇಮಠ್, ಶ್ರೀಮತಿ ಮಮತ, ಶ್ರೀಮತಿ ಸುಧಾ, ಸೇರಿದಂತೆ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು, ಶಿವಮೊಗ್ಗ ಹಾಗೂ ತಾಲ್ಲೂಕು ಕದಳಿ ಮಹಿಳಾ ವೇದಿಕೆ, ಶಿವಮೊಗ್ಗದ ಪದಾಧಿಕಾರಿಗಳು ಮತ್ತು ಸೋಮಿನಕೊಪ್ಪದ ಗ್ರಾಮಸ್ಥರು ಉಪಸ್ಥಿತರಿದ್ದರು.










