ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಬಸವಕೇಂದ್ರದ ಶ್ರೀಗಳ ಸಾನ್ನಿಧ್ಯದಲ್ಲಿ ಚಿಂತನ ಕಾರ್ತಿಕದ 20ನೇ ವರ್ಷದ ಸಂಭ್ರಮ; ಧರ್ಮದ ಹೆಸರಿನಲ್ಲಿ ವಿಭಜನೆ ಬೇಡ, ಬಸವಣ್ಣನವರ ಹಾದಿಯಲ್ಲಿ ಸಮ ಸಮಾಜ ನಿರ್ಮಿಸೋಣ: ಕರಿಬಸವಯ್ಯ ಹಾರ್ನಳ್ಳಿ

On: November 15, 2026 1:02 PM
Follow Us:

ಶಿವಮೊಗ್ಗ: ಧರ್ಮದ ಹೆಸರಿನಲ್ಲಿ ಮನುಷ್ಯ ಮನುಷ್ಯನ ನಡುವೆ ಗೋಡೆಗಳು ನಿರ್ಮಾಣವಾಗುತ್ತಿರುವ ಕಾಲಘಟ್ಟದಲ್ಲಿ, 900 ವರ್ಷಗಳ ಹಿಂದೆಯೇ ದಯೆ, ಸಮಾನತೆ, ಸಹಬಾಳ್ವೆ ಮತ್ತು ಮಾನವೀಯತೆಯ ಬೆಳಕಿನಲ್ಲಿ ಇಡೀ ಸಮಾಜವನ್ನು ಕಟ್ಟಲು ಕನಸು ಕಂಡ ಬಸವಣ್ಣನವರ ಚಿಂತನೆಗಳು ಇಂದಿಗೂ ದಾರಿದೀಪವಾಗಿವೆ. ಧರ್ಮ ಮನುಷ್ಯನನ್ನು ಮನುಷ್ಯನನ್ನಾಗಿ ರೂಪಿಸಬೇಕೇ ಹೊರತು, ಮತ್ತೊಬ್ಬರನ್ನು ದ್ವೇಷಿಸುವಂತೆ, ಹಿಂಸಿಸುವಂತೆ ಅಥವಾ ತನ್ನ ಧರ್ಮವೇ ಶ್ರೇಷ್ಠವೆಂದು ಅಹಂಕಾರದಿಂದ ವರ್ತಿಸುವಂತೆ ಮಾಡಬಾರದು. ಸಕಲ ಜೀವಿಗಳಲ್ಲೂ ದಯೆ ತೋರುವುದು, ಎಲ್ಲರ ಒಳಿತನ್ನು ಬಯಸುವುದು ಮತ್ತು ಸಮಾನತೆಯ ನೆಲೆಯಲ್ಲಿ ಬದುಕುವುದೇ ಬಸವಣ್ಣನವರು ಪ್ರತಿಪಾದಿಸಿದ ನಿಜವಾದ ಧರ್ಮ ಎಂದು ಅಧ್ಯಾಪಕರಾದ ಕರಿಬಸವಯ್ಯ ಹಾರ್ನಳ್ಳಿ ಹೇಳಿದರು.

ನಗರದ ಜೆ.ಎಚ್. ಪಟೇಲ್ ಬಡಾವಣೆ ನಿವಾಸಿಗಳಾದ ಸಂಪತ್ ಕುಮಾರ್ ಜಿ.ಎಸ್. ಮತ್ತು ಕುಟುಂಬದವರ ಸೇವಾರ್ಥದೊಂದಿಗೆ, ಶ್ರೀ ಬಸವತತ್ವ ಪೀಠ, ಚಿಕ್ಕಮಗಳೂರು ಹಾಗೂ ಬಸವಕೇಂದ್ರ, ಶಿವಮೊಗ್ಗ ಆಶ್ರಯದಲ್ಲಿ, ಪೂಜ್ಯ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆಯುತ್ತಿರುವ 20ನೇ ವರ್ಷದ ಚಿಂತನ ಕಾರ್ತಿಕ ಕಾರ್ಯಕ್ರಮದ ಎರಡನೇ ದಿನ ‘ಬಸವಣ್ಣ-ಧರ್ಮ’ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ಬಸವಣ್ಣನವರ ವಚನವಾದ, “ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ: ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯಾ; ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯಾ, ಕೂಡಲಸಂಗಮದೇವಾ.” ಎಂಬ ಸಾಲುಗಳನ್ನು ಉಲ್ಲೇಖಿಸಿದ ಅವರು, ಮನುಷ್ಯನ ಬದುಕಿನ ಸಾರ್ಥಕತೆ ಮತ್ತು ಧರ್ಮದ ನಿಜವಾದ ಅರ್ಥವನ್ನು ಅರಿಯಲು ಈ ಒಂದು ವಚನವೇ ಸಾಕು ಎಂದರು.

ಈ ವರ್ಷದ ಚಿಂತನ ಕಾರ್ತಿಕದಲ್ಲಿ ‘ಬಸವಣ್ಣನವರ ಅನನ್ಯ ವ್ಯಕ್ತಿತ್ವದೊಂದಿಗೆ ಮುಖಾಮುಖಿ’ ಎಂಬ ವಿಷಯವನ್ನು ಆಯ್ಕೆ ಮಾಡಿಕೊಂಡಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ. ದೇಶದಲ್ಲಿ ಮಹಾತ್ಮ ಗಾಂಧೀಜಿಯವರ ವ್ಯಕ್ತಿತ್ವ ಮತ್ತು ವಿಚಾರಗಳ ವಿರುದ್ಧ ಅಪಪ್ರಚಾರ ಹಾಗೂ ಅವಹೇಳನಕಾರಿ ಹೇಳಿಕೆಗಳು ಕೇಳಿಬರುತ್ತಿರುವಂತೆಯೇ, ಕನ್ನಡ ನಾಡಿನಲ್ಲಿಯೂ ಬಸವಣ್ಣನವರ ಚಿಂತನೆಗಳ ವಿರುದ್ಧ ಬೌದ್ಧಿಕ ದಾಳಿಗಳು ನಡೆಯುತ್ತಿರುವ ಸಂದರ್ಭವಿದೆ. ಇಂತಹ ಸಂದರ್ಭದಲ್ಲಿ ಬಸವಣ್ಣನವರ ವ್ಯಕ್ತಿತ್ವವನ್ನು ಎಲ್ಲ ಆಯಾಮಗಳಿಂದ ಅರಿಯುವ ಮತ್ತು ಅವರ ವಿಚಾರಗಳನ್ನು ಸಮಕಾಲೀನ ಸಮಾಜದ ಎದುರು ಮತ್ತೊಮ್ಮೆ ಪರಿಚಯಿಸುವ ಪ್ರಯತ್ನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಚಿಂತನ ಕಾರ್ತಿಕದ ವಿಷಯ ಆಯ್ಕೆ ವಿಶೇಷ ಮಹತ್ವ ಪಡೆದುಕೊಂಡಿದೆ ಎಂದರು.

ಬಸವಣ್ಣನವರು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾದ ಮಹಾಪುರುಷರಲ್ಲ. ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಏಕಕಾಲದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಯುಗಪುರುಷರು. ಇಡೀ ಸಮಾಜವನ್ನು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸುವ ದೂರದೃಷ್ಟಿ ಹೊಂದಿದ್ದ ಅವರು, ಸಮಾನತೆಯ ಸಮಾಜ ನಿರ್ಮಾಣಕ್ಕೆ ಧರ್ಮವನ್ನೇ ತಳಹದಿಯಾಗಿಸಿಕೊಂಡರು ಎಂದು ತಿಳಿಸಿದರು.

ಮನುಷ್ಯ ಹುಟ್ಟಿದ ದಿನದಿಂದಲೇ ಧರ್ಮದ ಕಲ್ಪನೆಯೂ ಹುಟ್ಟಿದೆ. ಅದನ್ನು ಮನುಷ್ಯ ಧರ್ಮ ಎಂದು ಕರೆಯಬಹುದು. ಪಂಪನ ‘ಮನುಷ್ಯ ಕುಲಂ ತಾನೊಂದೇ ವಲಂ’ ಎಂಬ ಮಾತು ಮನುಕುಲದ ಏಕತೆಯನ್ನು ಸಾರುತ್ತದೆ. ಎಲ್ಲರೂ ಒಂದೇ ಮಾನವ ಕುಲಕ್ಕೆ ಸೇರಿದವರು. ಆದರೆ ಕಾಲಕ್ರಮೇಣ ಸಂಕುಚಿತ ಮನೋಭಾವ ಬೆಳೆದು ಧರ್ಮಗಳ ಹೆಸರಿನಲ್ಲಿ ಗೆರೆಗಳನ್ನು ಎಳೆದುಕೊಂಡು, ಮನುಷ್ಯರೇ ನಿರ್ಮಿಸಿಕೊಂಡ ಕಟ್ಟಳೆಗಳೊಳಗೆ ಬಂಧಿಗಳಾಗಿದ್ದೇವೆ ಎಂದು ವಿಷಾದಿಸಿದರು.

ಕ್ರಿಸ್ತಪೂರ್ವ ಆರನೇ ಶತಮಾನದಲ್ಲಿ ಬುದ್ಧರು ಅಂದಿನ ಧಾರ್ಮಿಕ ಆಚರಣೆಗಳಲ್ಲಿದ್ದ ಅನಿಷ್ಟಗಳನ್ನು ಪ್ರಶ್ನಿಸಿ, ಸತ್ಯ, ಅಹಿಂಸೆ, ಅಪರಿಗ್ರಹ ಮತ್ತು ಬ್ರಹ್ಮಚರ್ಯದಂತಹ ತತ್ವಗಳಿಗೆ ಮಹತ್ವ ನೀಡಿದರು. ಆರಂಭದಲ್ಲಿ ಮೋಕ್ಷದ ಹುಡುಕಾಟಕ್ಕಾಗಿ ಕಾಡಿನಲ್ಲಿ ತಪಸ್ಸು, ಉಪವಾಸ ಮತ್ತು ದೇಹದಂಡನೆಗೆ ಮುಂದಾದರೂ, ಇವುಗಳಿಂದ ಮಾತ್ರ ಆತ್ಮಜ್ಞಾನ ಸಾಧ್ಯವಿಲ್ಲ ಎಂಬ ಅರಿವು ಅವರಿಗಾಯಿತು. ಜನರ ಮಧ್ಯೆ ಇದ್ದುಕೊಂಡು ಅವರಿಗೆ ಜ್ಞಾನ, ತಿಳುವಳಿಕೆ ನೀಡುವುದು ಮತ್ತು ಜನಸೇವೆ ಮಾಡುವುದೇ ನಿಜವಾದ ಧರ್ಮ ಎಂಬ ಸಂದೇಶವನ್ನು ಸಾರಿದರು.

ಬೌದ್ಧ ಧರ್ಮದ ತತ್ವಗಳು ಭಾರತದಲ್ಲಿ ವ್ಯಾಪಕವಾಗಿ ನೆಲೆಗೊಳ್ಳಲು ಹಲವು ಅಡೆತಡೆಗಳು ಎದುರಾದವು. ನಂತರದ ಕಾಲಘಟ್ಟದಲ್ಲಿ ಜೈನ ಧರ್ಮವೂ ಕರ್ನಾಟಕದಲ್ಲಿ ಪ್ರಭಾವಶಾಲಿಯಾಗಿ ಬೆಳೆಯಿತು. ಅಹಿಂಸೆಯನ್ನು ಮೂಲತತ್ವವಾಗಿಟ್ಟುಕೊಂಡ ಜೈನ ಧರ್ಮವು ಜನರನ್ನು ಆಕರ್ಷಿಸಿದರೂ, ಸಲ್ಲೇಖನ ವ್ರತದಂತಹ ಕಠಿಣ ಆಚರಣೆಗಳು ಸಾಮಾನ್ಯ ಜನರಿಗೆ ಸುಲಭವಾಗಿ ಅನುಸರಿಸಲು ಸಾಧ್ಯವಾಗದ ಪರಿಸ್ಥಿತಿಯನ್ನು ನಿರ್ಮಿಸಿದವು.

ಈ ಹಿನ್ನೆಲೆಯಲ್ಲಿ ಕವಿರಾಜಮಾರ್ಗದಲ್ಲಿ ಶ್ರೀವಿಜಯರು ಹೇಳಿರುವ, ಬಂಗಾರ, ವಜ್ರ, ವೈಢೂರ್ಯಗಳಿಗಿಂತಲೂ ಅಮೂಲ್ಯವಾದದ್ದು ಬೇರೆಯವರ ಧರ್ಮ ಮತ್ತು ವಿಚಾರಗಳನ್ನು ಸಹಿಸಿಕೊಳ್ಳುವ ಗುಣ. ಅನ್ಯರ ನಂಬಿಕೆಗಳನ್ನು ಗೌರವಿಸುವ ಮನೋಭಾವವೇ ನಿಜವಾದ ಸಂಪತ್ತು ಮತ್ತು ಮನುಷ್ಯತ್ವದ ಲಕ್ಷಣ ಎಂದು ಅವರು ವಿವರಿಸಿದರು.

12ನೇ ಶತಮಾನ ಕನ್ನಡ ನಾಡಿನ ಇತಿಹಾಸದಲ್ಲಿ ಮಹತ್ವದ ಕಾಲಘಟ್ಟ. ಬಸವಣ್ಣನವರ ವ್ಯಕ್ತಿತ್ವದಿಂದ ಪ್ರಭಾವಿತರಾದ ಗಿರೀಶ್ ಕಾರ್ನಾಡರು ‘ತಲೆದಂಡ’ ನಾಟಕ ರಚಿಸುವಾಗ ಬಸವಣ್ಣನವರ ಪ್ರತಿಭೆ ಮತ್ತು ವ್ಯಕ್ತಿತ್ವದಿಂದ ತಾವು ಬೆರಗಾಗಿದ್ದಾಗಿ ದಾಖಲಿಸಿದ್ದಾರೆ. ನೋವಿನ ನಡುವೆಯೂ ಮತ್ತೆ ಮತ್ತೆ ನೆನಪಾಗುವಂತಹ ಬಸವಣ್ಣನವರ ಚಿಂತನೆಗಳು ತಮ್ಮನ್ನು ಆಕರ್ಷಿಸಿವೆ ಎಂಬುದು ಅವರ ಮಾತಿನ ಸಾರವಾಗಿದೆ.

ಬಸವಣ್ಣನವರು ಸಮಾಜವನ್ನು ಧರ್ಮದ ತಳಹದಿಯ ಮೇಲೆ ಕಟ್ಟಲು ಬಯಸಿದರು. ಆದರೆ ಅದು ಜನಸಾಮಾನ್ಯರನ್ನು ದೂರವಿಡುವ, ಕೆಲವೇ ವರ್ಗಗಳ ಹಿಡಿತದಲ್ಲಿರುವ ಧರ್ಮವಾಗಿರಲಿಲ್ಲ. ಲಿಂಗ, ವರ್ಗ, ವರ್ಣ ಮತ್ತು ಜಾತಿಯ ತಾರತಮ್ಯವಿಲ್ಲದ, ಪ್ರತಿಯೊಬ್ಬರಿಗೂ ಆತ್ಮಕಲ್ಯಾಣದ ಜೊತೆಗೆ ಸಮಾಜಕಲ್ಯಾಣದ ಅವಕಾಶ ಕಲ್ಪಿಸುವ ಸಾರ್ವತ್ರಿಕ ಧರ್ಮವಾಗಿತ್ತು.

ಅವರ ಮತ್ತೊಂದು ದೊಡ್ಡ ಸಾಧನೆ ಎಂದರೆ ಜನರ ಭಾಷೆಯನ್ನೇ ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ಮಾಡಿಕೊಂಡಿದ್ದು. ಧರ್ಮದ ವಿಚಾರಗಳು ಜನಸಾಮಾನ್ಯರಿಗೆ ಅರ್ಥವಾಗಬೇಕಾದರೆ ಅವರ ಭಾಷೆಯಲ್ಲಿಯೇ ಹೇಳಬೇಕು ಎಂಬ ಅರಿವು ಬಸವಣ್ಣನವರಿಗಿತ್ತು. ಅದಕ್ಕಾಗಿ ವಚನಗಳ ಮೂಲಕ ಅತ್ಯಂತ ಸರಳವಾದ ಭಾಷೆಯಲ್ಲಿ ಗಹನವಾದ ತತ್ವಗಳನ್ನು ಜನರಿಗೆ ತಲುಪಿಸಿದರು. ಕನ್ನಡ ಸಾಹಿತ್ಯಕ್ಕೆ ಅಮೂಲ್ಯವಾದ ಕೊಡುಗೆ ನೀಡುವುದರ ಜೊತೆಗೆ ಸಾಮಾನ್ಯ ಜನರಲ್ಲಿಯೂ ಚಿಂತನೆಯ ಶಕ್ತಿಯನ್ನು ಬೆಳೆಸಿದರು.

ಬಸವಣ್ಣನವರ ಬಾಲ್ಯದ ಒಂದು ಘಟನೆ ಅವರ ಸಮಾನತೆಯ ಚಿಂತನೆಗೆ ಸಾಕ್ಷಿಯಾಗಿದೆ. ಅಕ್ಕ ನಾಗಮ್ಮನಿಗೆ ಜನಿವಾರ ಧರಿಸುವ ವಿಚಾರ ಬಂದಾಗ, ಹೆಣ್ಣು ಶೂದ್ರಳು ಎಂಬ ಕಾರಣ ನೀಡಿ ಆಕೆಗೆ ಜನಿವಾರ ಧರಿಸಲು ಅವಕಾಶ ನಿರಾಕರಿಸಲಾಯಿತು. ಮನೆಯೊಳಗಿರುವ ಹೆಣ್ಣನ್ನೇ ಕೀಳಾಗಿ ಕಾಣುವ ಇಂತಹ ಮನೋಭಾವದಿಂದ ಬಸವಣ್ಣನವರು ತೀವ್ರವಾಗಿ ನೊಂದರು.

ಅಕ್ಕನಿಗೆ ಸಲ್ಲದ ಜನಿವಾರ ತನಗೂ ಬೇಡ ಎಂದು ನಿರ್ಧರಿಸಿ, ತಾವು ಧರಿಸಿದ್ದ ಜನಿವಾರವನ್ನು ತ್ಯಜಿಸಿದರು. ಹೆಣ್ಣು-ಗಂಡು ಎಂಬ ಭೇದವಿಲ್ಲದೆ ಎಲ್ಲರೂ ಸಮಾನರು ಎಂಬ ಚಿಂತನೆ ಬಾಲ್ಯದಲ್ಲಿಯೇ ಅವರಲ್ಲಿ ಮೂಡಿತ್ತು. 900 ವರ್ಷಗಳ ಹಿಂದೆ ಸ್ತ್ರೀ ಸಮಾನತೆಯ ಕುರಿತು ಇಂತಹ ಸ್ಪಷ್ಟ ನಿಲುವು ತಳೆದಿದ್ದ ಬಸವಣ್ಣನವರ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ.

ಇಂದಿಗೂ ಹೆಣ್ಣನ್ನು ಕೀಳಾಗಿ ಕಾಣುವ ಮನೋಭಾವ ಸಂಪೂರ್ಣವಾಗಿ ಹೋಗಿಲ್ಲ. ಉನ್ನತ ಶಿಕ್ಷಣ ಪಡೆದವರಲ್ಲಿಯೂ ಜಾತಿ ಮತ್ತು ಲಿಂಗದ ಹೆಸರಿನಲ್ಲಿ ತಾರತಮ್ಯ ಮಾಡುವ ಮನಸ್ಥಿತಿ ಉಳಿದಿದೆ. ಕಾಶಿಯಲ್ಲಿ ಉನ್ನತ ಶಿಕ್ಷಣ ಪಡೆದಿದ್ದ ವ್ಯಕ್ತಿಯೊಬ್ಬರು, ಹೆಣ್ಣು ಶೂದ್ರಳು ಎಂಬ ಕಾರಣಕ್ಕೆ ಪತ್ನಿ ಮಾಡಿದ ಅಡುಗೆಯನ್ನು ಸೇವಿಸದೆ ತಾವೇ ಅಡುಗೆ ಮಾಡಿಕೊಳ್ಳುತ್ತಿದ್ದ ಪ್ರಸಂಗವನ್ನು ಉಲ್ಲೇಖಿಸಿದ ಅವರು, ಶಿಕ್ಷಣವೊಂದರಿಂದಲೇ ಮನುಷ್ಯನ ಮನಸ್ಸು ಬದಲಾಗುವುದಿಲ್ಲ. ಸಮಾನತೆಯ ಮೌಲ್ಯಗಳು ಬದುಕಿನಲ್ಲಿ ಅಳವಡಿಕೆಯಾಗಬೇಕು ಎಂದರು.

ಆ ಕಾಲದಲ್ಲಿ ಧರ್ಮದ ಹೆಸರಿನಲ್ಲಿ ಅನೇಕ ದೇವತೆಗಳ ಆರಾಧನೆ, ಆಚರಣೆಗಳು ಜನರನ್ನು ಗೊಂದಲಕ್ಕೆ ದೂಡಿದ್ದವು. ಮಡಕೆ, ಮರ, ಬೀದಿಯ ಕಲ್ಲು ಸೇರಿದಂತೆ ಕಂಡ ಕಂಡ ವಸ್ತುಗಳಿಗೆ ದೈವತ್ವ ನೀಡಿ ಪೂಜಿಸುವ ಪ್ರವೃತ್ತಿಯನ್ನು ಬಸವಣ್ಣನವರು ತಮ್ಮ ವಚನಗಳಲ್ಲಿ ಪ್ರಶ್ನಿಸಿದ್ದಾರೆ.

“ಮಡಕೆ ದೈವ, ಮೊರ ದೈವ, ಬೀದಿಯ ಕಲ್ಲು ದೈವ, ಹಣಿಗೆ ದೈವ, ಬಿಲ್ಲನಾರಿ ದೈವ, ಕಾಣಿರೊ ! ಕೊಳಗ ದೈವ, ಗಿಣ್ಣಿಲು ದೈವ, ಕಾಣಿರೊ ! ದೈವ ದೈವವೆಂದು ಕಾಲಿಡಲಿಂಬಿಲ್ಲ, ದೈವನೊಬ್ಬನೆ ಕೂಡಲಸಂಗಮದೇವ.” ಎಂದು ಆರಂಭವಾಗುವ ವಚನದ ಮೂಲಕ ಎಲ್ಲೆಂದರಲ್ಲಿ ದೈವವನ್ನು ಹುಡುಕುವ ಅಂಧ ಆಚರಣೆಗಳನ್ನು ಟೀಕಿಸಿದ್ದಾರೆ. ಅದೇ ರೀತಿ,

“ನೀರ ಕಂಡಲ್ಲಿ ಮುಳುಗುವರಯ್ಯಾ,
ಮರನ ಕಂಡಲ್ಲಿ ಸುತ್ತುವರಯ್ಯಾ!
ಬತ್ತುವ ಜಲವನೊಣಗುವ ಮರನ
ಮಚ್ಚಿದವರು ನಿಮ್ಮನೆತ್ತ ಬಲ್ಲರು
ಕೂಡಲಸಂಗಮದೇವಾ?
” ಎಂಬ ವಚನದ ಮೂಲಕ ನಾಶವಾಗುವ ವಸ್ತುಗಳನ್ನು ನಂಬಿ ಬದುಕುವುದರಲ್ಲಿ ಅರ್ಥವಿಲ್ಲ ಎಂಬ ಸಂದೇಶ ನೀಡಿದ್ದಾರೆ.

ಧರ್ಮ ಎಂದರೆ ಪ್ರಶ್ನಾತೀತವಾದದ್ದು ಎಂಬ ಭಾವನೆ ಇದ್ದ ಕಾಲದಲ್ಲಿಯೇ ಬಸವಣ್ಣನವರು ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಆಚರಣೆಗಳನ್ನು ಪ್ರಶ್ನಿಸಿದರು. ಧರ್ಮದ ನಿಜವಾದ ಉದ್ದೇಶವೇನು? ಅದು ಮನುಷ್ಯನ ಬದುಕಿಗೆ ಏನು ಕೊಡುಗೆ ನೀಡಬೇಕು? ಎಂಬ ಪ್ರಶ್ನೆಗಳನ್ನು ಎತ್ತಿದರು. ಈ ಕಾರಣದಿಂದಲೇ ಬಸವಣ್ಣನವರ ಚಿಂತನೆಗಳು ವಿಶಿಷ್ಟವಾಗಿವೆ ಎಂದು ಹೇಳಿದರು.

“ದಯವಿಲ್ಲದ ಧರ್ಮ ಯಾವುದಯ್ಯ? ದಯವಿರಬೇಕು ಸಕಲ ಜೀವಿಗಳಲ್ಲಿ. ದಯವೇ ಧರ್ಮದ ಮೂಲವಯ್ಯ ಕೂಡಲ ಸಂಗಮದೇವ” ಎಂಬ ಬಸವಣ್ಣನವರ ವಚನವನ್ನು ಉಲ್ಲೇಖಿಸಿದ ಕರಿಬಸವಯ್ಯ ಅವರು, ಧರ್ಮದ ಮೂಲದಲ್ಲಿ ದಯೆ ಇರಬೇಕು ಎಂಬುದನ್ನು ಜಗತ್ತಿಗೆ ಸಾರಿದವರು ಬಸವಣ್ಣನವರು ಎಂದು ಹೇಳಿದರು.

ಧರ್ಮ ಮನುಷ್ಯನನ್ನು ಹದಗೊಳಿಸಿ ಪಕ್ವತೆಯತ್ತ ಕೊಂಡೊಯ್ಯಬೇಕು. ಆದರೆ ಇಂದು ಧರ್ಮದ ಹೆಸರಿನಲ್ಲಿ ಕೆಲವರು ದ್ವೇಷ, ಹಿಂಸೆ ಮತ್ತು ಕ್ರೌರ್ಯಕ್ಕೆ ಮುಂದಾಗುತ್ತಿದ್ದಾರೆ. ಧರ್ಮ ಮನುಷ್ಯನನ್ನು ತಿದ್ದಬೇಕಾದರೆ, ಮನುಷ್ಯನೇ ಧರ್ಮದ ಹೆಸರಿನಲ್ಲಿ ಮತ್ತೊಬ್ಬನನ್ನು ಹಿಂಸಿಸುವ ಮಟ್ಟಕ್ಕೆ ಇಳಿದಿರುವುದು ದುರಂತ. ದಯೆಯಿಲ್ಲದ ಧರ್ಮದಿಂದ ಸಮಾಜಕ್ಕೆ ಯಾವ ಪ್ರಯೋಜನವೂ ಇಲ್ಲ. ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸಾಚಾರಕ್ಕೆ ಬಸವಣ್ಣನವರ ದಯಾಮೂಲ ತತ್ವವೇ ಸೂಕ್ತ ಉತ್ತರವಾಗಿದೆ ಎಂದರು.

ಅಲ್ಲಮಪ್ರಭುಗಳ “ಅಗ್ನಿಗೆ ತಂಪುಂಟೆ? ವಿಷಕ್ಕೆ ರುಚಿಯುಂಟೆ ಹೇಳಾ?
ಕಂಗಳಿಗೆ ಮರೆಯುಂಟೆ ಹೇಳಾ ಲಿಂಗವೆ?
ದಾಳಿಕಾರಂಗೆ ಧರ್ಮವುಂಟೆ? [ಕನ್ನಗಳ್ಳಂಗೆ] ಕರುಳುಂಟೆ?
ಗುಹೇಶ್ವರಾ, ನಿಮ್ಮ ಶರಣರು,
ಮೂರು ಲೋಕವರಿಯೆ ನಿಶ್ಚಟರಯ್ಯಾ
” ಎಂಬ ವಚನವನ್ನು ಪ್ರಸ್ತಾಪಿಸಿದ ಅವರು, ಧರ್ಮದ ಹೆಸರಿನಲ್ಲಿ ದಾಳಿ ಮಾಡುವವರಿಗೆ ನಿಜವಾದ ಧರ್ಮದ ಅರಿವಿದೆಯೇ ಎಂದು ಪ್ರಶ್ನಿಸಿದರು.

ಇತ್ತೀಚಿನ ದಿನಗಳಲ್ಲಿ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಅಮಾನವೀಯ ಘಟನೆಗಳು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡುತ್ತಿವೆ. ರಾಯಚೂರು ಭಾಗದಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ದೇವಸ್ಥಾನದ ಒಳಗೆ ಹೋದ ಬಾಲಕಿಯೊಬ್ಬಳನ್ನು ಜಾತಿಯ ಕಾರಣಕ್ಕೆ ಅವಮಾನಿಸಿ ದಂಡ ವಿಧಿಸಿದ ಘಟನೆ ಇದಕ್ಕೆ ಉದಾಹರಣೆ. ಶಿಕ್ಷಣ ಮತ್ತು ನಾಗರಿಕತೆಯಲ್ಲಿ ಸಾಕಷ್ಟು ಮುಂದುವರಿದಿದ್ದರೂ ಇಂತಹ ತಾರತಮ್ಯಗಳು ಮುಂದುವರಿಯುತ್ತಿರುವುದು ವಿಷಾದನೀಯ ಎಂದರು.

ಬಸವಣ್ಣನವರು ಸಕಲ ಜೀವಿಗಳ ಒಳಿತನ್ನು ಬಯಸುವ ಧರ್ಮವನ್ನು ಪ್ರತಿಪಾದಿಸಿದರು. ಮನುಷ್ಯರಷ್ಟೇ ಅಲ್ಲ, ಪ್ರಾಣಿ, ಪಕ್ಷಿ ಮತ್ತು ಪರಿಸರದಲ್ಲಿರುವ ಪ್ರತಿಯೊಂದು ಜೀವಿಯನ್ನೂ ಪ್ರೀತಿಯಿಂದ ಕಾಣಬೇಕು. ಸಕಲ ಜೀವಾತ್ಮರ ಒಳಿತನ್ನು ಬಯಸುವವರೇ ನಿಜವಾದ ಕುಲಜರು ಎಂಬ ಬಸವಣ್ಣನವರ ಸಂದೇಶವನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಧರ್ಮದ ಹೆಸರಿನಲ್ಲಿ ನಡೆಯುವ ಸಂಘರ್ಷಗಳನ್ನು ವಿವರಿಸಲು ಚಲನಚಿತ್ರಗಳಲ್ಲಿಯೂ ಹಲವು ಪ್ರಸಂಗಗಳನ್ನು ಕಟ್ಟಿಕೊಡಲಾಗಿದೆ. ‘ಕ್ರಾಂತಿವೀರ’ ಚಿತ್ರದ ಪ್ರಸಂಗವೊಂದನ್ನು ಉಲ್ಲೇಖಿಸಿದ ಅವರು, ಧರ್ಮದ ಹೆಸರಿನಲ್ಲಿ ಹಿಂಸೆಗೆ ಮುಂದಾಗಿದ್ದ ಗುಂಪೊಂದು ವೃದ್ಧನೊಬ್ಬನನ್ನು ತಡೆದು ನೀನು ಯಾವ ಧರ್ಮದವನು ಎಂದು ಪ್ರಶ್ನಿಸುತ್ತದೆ. ತಮ್ಮ ಧರ್ಮದ ಹೆಸರಿನಲ್ಲಿ ಆತನನ್ನು ಕೊಲ್ಲಲು ಮುಂದಾಗುವವರ ಮನಸ್ಥಿತಿಯನ್ನು ಅರಿತ ವೃದ್ಧ, ನೀವು ಯಾವ ಧರ್ಮದವರಾಗಿದ್ದರೂ ನನ್ನನ್ನು ವಿರುದ್ಧ ಧರ್ಮದವನೆಂದು ಭಾವಿಸಿ ಕೊಂದುಬಿಡಿ ಎಂದು ನೋವಿನಿಂದ ಹೇಳುವ ಪ್ರಸಂಗ ಮಾನವೀಯತೆ ಎಷ್ಟು ಕುಸಿಯಬಹುದು ಎಂಬುದನ್ನು ತೋರಿಸುತ್ತದೆ ಎಂದು ಹೇಳಿದರು.

“ಗುಡಿ ಚರ್ಚ್ ಮಸೀದಿಗಳನ್ನು ಬಿಟ್ಟು ಹೊರಬನ್ನಿ, ಬಡತನವ ಬಡಮುಟ್ಟ ಕೇಳಿ ಬನ್ನಿ, ವಿಜ್ಞಾನ ದೀಪ್ತಿಗೆ ಇಡಿಯ ಬನ್ನಿ, ಓ ಬನ್ನಿ ಸಹೋದರರೇ ಬೇಗ ಬನ್ನಿ”

ಎಂಬ ಸಂದೇಶದಂತೆ ಮತದ ಸಂಕುಚಿತ ಭಾವನೆಗಳಿಂದ ಹೊರಬಂದು ವಿಶ್ವಮಾನವರಾಗಬೇಕು. ಮತ, ಧರ್ಮಗಳ ಹೆಸರಿನಲ್ಲಿ ಮನುಷ್ಯರನ್ನು ವಿಭಜಿಸುವ ಬದಲು ಮಾನವೀಯತೆಯ ನೆಲೆಯಲ್ಲಿ ಒಂದಾಗಬೇಕು ಎಂದು ಕರಿಬಸವಯ್ಯ ಅವರು ಕರೆ ನೀಡಿದರು.

ಮದರ್ ಥೆರೆಸಾ ಅವರ ಬದುಕಿನ ಒಂದು ಪ್ರಸಂಗವನ್ನು ವಿವರಿಸಿದ ಅವರು, ಕಲ್ಕತ್ತಾದಲ್ಲಿ ಒಂದು ವಾರದಿಂದ ಊಟವಿಲ್ಲದೆ ಕಷ್ಟಪಡುತ್ತಿದ್ದ ಬಡ ಕುಟುಂಬಕ್ಕೆ ಅವರು ಅಕ್ಕಿಯನ್ನು ನೀಡಿದರು. ಅದನ್ನು ಪಡೆದ ಮಹಿಳೆ ತನ್ನ ಕುಟುಂಬಕ್ಕೆ ಅಗತ್ಯವಿದ್ದ ಅಕ್ಕಿಯಲ್ಲಿ ಅರ್ಧವನ್ನು ಮತ್ತೊಂದು ಬಡ ಕುಟುಂಬಕ್ಕೆ ನೀಡಿದಳು. ಆ ಕುಟುಂಬ ಬೇರೆ ಧರ್ಮಕ್ಕೆ ಸೇರಿದ್ದರೂ ಹಸಿವಿನ ಮುಂದೆ ಧರ್ಮದ ಭೇದ ಇರಲಿಲ್ಲ.

ಅಕ್ಕಿ ನೀಡಿದವರು ಕ್ರೈಸ್ತ ಧರ್ಮದ ಮದರ್ ಥೆರೆಸಾ, ನೆರವು ಪಡೆದವರು ಹಿಂದೂ ಕುಟುಂಬ, ಆ ಕುಟುಂಬದಿಂದ ನೆರವು ಪಡೆದವರು ಮುಸ್ಲಿಂ ಕುಟುಂಬ. ಇಲ್ಲಿ ಧರ್ಮದ ಗೋಡೆಗಳಿರಲಿಲ್ಲ, ಇದ್ದದ್ದು ಹಸಿವು, ಕರುಣೆ ಮತ್ತು ಪರಸ್ಪರ ನೆರವಾಗುವ ಮಾನವೀಯತೆ. ಇಂತಹ ಘಟನೆಗಳೇ ನಿಜವಾದ ಧರ್ಮದ ಅರ್ಥವನ್ನು ತಿಳಿಸುತ್ತವೆ. ಸಾಮಾನ್ಯ ಜನರ ಬದುಕಿನಲ್ಲಿ ಧರ್ಮದ ಹೆಸರಿನ ಭೇದಕ್ಕಿಂತ ಪರಸ್ಪರ ಪ್ರೀತಿ ಮತ್ತು ಸಹಕಾರವೇ ಮುಖ್ಯವಾಗಿರುತ್ತದೆ ಎಂದು ಹೇಳಿದರು.

ತಮ್ಮ ಉಪನ್ಯಾಸದ ಕೊನೆಯಲ್ಲಿ ರಾಜನ ಆಸ್ಥಾನಕ್ಕೆ ಬಂದ ಪಂಡಿತನೊಬ್ಬನ ಸವಾಲು ಮತ್ತು ಹತ್ತು ವರ್ಷದ ಬಾಲಕನ ನಡುವಿನ ಸಂವಾದದ ಸ್ವಾರಸ್ಯಕರ ಕಥೆಯನ್ನು ವಿವರಿಸಿದರು.

ಒಮ್ಮೆ ರಾಜನ ಆಸ್ಥಾನಕ್ಕೆ ಬಂದ ವಿದ್ವಾಂಸನೊಬ್ಬ ತನ್ನ ಪ್ರಶ್ನೆಗಳಿಗೆ ಉತ್ತರ ನೀಡುವವರು ಯಾರಾದರೂ ಇದ್ದಾರೆಯೇ ಎಂದು ಸವಾಲು ಹಾಕುತ್ತಾನೆ. ಆ ದಿನ ಆಸ್ಥಾನದಲ್ಲಿ ಸಮರ್ಥ ಪಂಡಿತರಿಲ್ಲದ ಕಾರಣ, ರಾಜನು ಒಬ್ಬ ಪಂಡಿತನ ಮಗನನ್ನು ಕರೆಸುತ್ತಾನೆ. ಆದರೆ ಆ ಬಾಲಕನಿಗೆ ವಿದ್ಯಾಭ್ಯಾಸದ ಜ್ಞಾನವಿರಲಿಲ್ಲ. ಗೋಲಿ ಆಡುತ್ತಿದ್ದ ಆತನನ್ನು ಬಲವಂತವಾಗಿ ಆಸ್ಥಾನಕ್ಕೆ ಕರೆತರಲಾಗುತ್ತದೆ.

ಅಲ್ಲಿ ಪಂಡಿತ ಮತ್ತು ಬಾಲಕನ ನಡುವೆ ಮಾತಿಲ್ಲದ ಸನ್ನೆಗಳ ಮೂಲಕ ಸಂವಾದ ನಡೆಯುತ್ತದೆ. ಪಂಡಿತ ಒಂದು ಬೆರಳನ್ನು ತೋರಿಸಿದಾಗ ಬಾಲಕ ಎರಡು ಬೆರಳುಗಳನ್ನು ತೋರಿಸುತ್ತಾನೆ. ಪಂಡಿತ ಐದು ಬೆರಳುಗಳನ್ನು ತೋರಿಸಿದಾಗ ಬಾಲಕ ಮುಷ್ಟಿ ಬಿಗಿಯುತ್ತಾನೆ. ಇದನ್ನು ಕಂಡ ಪಂಡಿತ ಸೋಲನ್ನು ಒಪ್ಪಿಕೊಂಡು ಬಾಲಕನಿಗೆ ನಮಸ್ಕರಿಸಿ ಹೊರಟುಹೋಗುತ್ತಾನೆ.

ನಂತರ ರಾಜನು ಬಾಲಕನನ್ನು ಕರೆದು ಈ ಸಂವಾದದ ಅರ್ಥವೇನು ಎಂದು ಕೇಳಿದಾಗ, ಬಾಲಕ ನೀಡುವ ಉತ್ತರವೇ ಸ್ವಾರಸ್ಯಕರವಾಗಿರುತ್ತದೆ. ಪಂಡಿತ ಒಂದು ಬೆರಳು ತೋರಿಸಿ ನನ್ನ ಒಂದು ಕಣ್ಣು ತೆಗೆಯುತ್ತೇನೆ ಎಂದ. ಅದಕ್ಕೆ ನಾನು ಎರಡು ಕಣ್ಣುಗಳನ್ನು ತೆಗೆಯುತ್ತೇನೆ ಎಂದು ಎರಡು ಬೆರಳು ತೋರಿಸಿದೆ. ಐದು ಬೆರಳು ತೋರಿಸಿ ಹೊಡೆಯುತ್ತೇನೆ ಎಂದಾಗ, ಮುಷ್ಟಿ ಬಿಗಿದು ಗುದ್ದುತ್ತೇನೆ ಎಂದು ಉತ್ತರಿಸಿದೆ ಎನ್ನುತ್ತಾನೆ.

ಆದರೆ ಪಂಡಿತನ ದೃಷ್ಟಿಯಲ್ಲಿ ಆ ಸನ್ನೆಗಳು ಬೇರೆ ಅರ್ಥ ಪಡೆದುಕೊಂಡಿದ್ದವು. ಒಂದು ಬೆರಳಿನಿಂದ ಏಕತತ್ತ್ವವನ್ನು ಸೂಚಿಸಿದಾಗ ಬಾಲಕ ಎರಡು ಬೆರಳು ತೋರಿಸಿ ಸೃಷ್ಟಿಯಲ್ಲಿನ ಎರಡು ಲಿಂಗಗಳನ್ನು ವಿವರಿಸಿದ್ದಾನೆ ಎಂದು ಭಾವಿಸಿದ. ಐದು ಬೆರಳುಗಳಿಂದ ಪಂಚಭೂತಗಳನ್ನು ಸೂಚಿಸಿದಾಗ, ಬಾಲಕ ಮುಷ್ಟಿ ಬಿಗಿದು ಪಂಚಭೂತಗಳೂ ಮನುಷ್ಯನ ದೇಹದಲ್ಲಿಯೇ ಅಡಕವಾಗಿವೆ ಎಂಬ ಅರ್ಥದಲ್ಲಿ ಉತ್ತರಿಸಿದ್ದಾನೆ ಎಂದು ಪಂಡಿತ ತಿಳಿದುಕೊಂಡಿದ್ದ.

ಒಂದೇ ಘಟನೆಗೆ ಇಬ್ಬರು ಬೇರೆ ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು ಎಂಬುದನ್ನು ಈ ಕಥೆ ತಿಳಿಸುತ್ತದೆ. ಬಸವಣ್ಣನವರ ವಿಚಾರಗಳನ್ನೂ ನಾವು ಎಷ್ಟು ಆಳವಾಗಿ ಅಧ್ಯಯನ ಮಾಡುತ್ತೇವೆಯೋ ಅಷ್ಟು ವಿಶಾಲವಾದ ಅರ್ಥವನ್ನು ಕಂಡುಕೊಳ್ಳಲು ಸಾಧ್ಯ. ಅವರ ಚಿಂತನೆಗಳನ್ನು ಮೇಲ್ನೋಟಕ್ಕೆ ಅರ್ಥಮಾಡಿಕೊಳ್ಳುವುದಕ್ಕಿಂತ ಅವುಗಳ ಒಳಾರ್ಥವನ್ನು ಗ್ರಹಿಸುವುದು ಮುಖ್ಯ ಎಂದರು.

ಬಸವಣ್ಣನವರ “ಜಗದಗಲ, ಮುಗಿಲಗಲ, ಮಿಗೆಯಗಲ ನಿಮ್ಮಗಲ” ಎಂಬ ವಚನದ ಸಾಲುಗಳನ್ನು ಉಲ್ಲೇಖಿಸಿದ ಅವರು, ಬಸವಣ್ಣನವರ ವಿಚಾರಗಳ ವ್ಯಾಪ್ತಿ ಅಪಾರವಾದದ್ದು. ಆದರೆ ಅದನ್ನು ಗ್ರಹಿಸುವ ಸಾಮರ್ಥ್ಯ ಮತ್ತು ಅಧ್ಯಯನದ ಆಳಕ್ಕೆ ಅನುಗುಣವಾಗಿ ಪ್ರತಿಯೊಬ್ಬರಿಗೂ ಅದರ ಅರ್ಥ ವಿಸ್ತಾರವಾಗುತ್ತದೆ. ನಮ್ಮ ಅರಿವಿನ ವ್ಯಾಪ್ತಿ ಎಷ್ಟು ವಿಶಾಲವಾಗಿರುತ್ತದೆಯೋ ಅಷ್ಟೇ ವಿಶಾಲವಾಗಿ ಬಸವಣ್ಣನವರ ಚಿಂತನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯ ಎಂದು ವಿಶ್ಲೇಷಿಸಿದರು.

ಬಸವಣ್ಣನವರ ಧರ್ಮವೆಂದರೆ ದಯೆ, ಸಮಾನತೆ, ಕಾಯಕ, ಮಾನವೀಯತೆ ಮತ್ತು ಸಕಲ ಜೀವಿಗಳ ಒಳಿತನ್ನು ಬಯಸುವ ವಿಶಾಲ ಜೀವನದೃಷ್ಟಿ. ಈ ತತ್ವಗಳನ್ನು ಕೇವಲ ಭಾಷಣಗಳಿಗೆ ಸೀಮಿತಗೊಳಿಸದೆ ನಮ್ಮ ನಡೆ-ನುಡಿಗಳಲ್ಲಿ ಅಳವಡಿಸಿಕೊಂಡಾಗ ಮಾತ್ರ ಬಸವಣ್ಣನವರ ಆಶಯದ ಸಮಾಜ ನಿರ್ಮಾಣ ಸಾಧ್ಯ. ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಗೌರವದಿಂದ ಬದುಕುವುದೇ ನಿಜವಾದ ಮನುಷ್ಯ ಧರ್ಮ ಎಂದು ಕರಿಬಸವಯ್ಯ ಅವರು ಹೇಳಿದರು.

20ನೇ ವರ್ಷದ ಚಿಂತನ ಕಾರ್ತಿಕದ ಎರಡನೇ ದಿನ ನಡೆದ ಈ ಉಪನ್ಯಾಸವು ಬಸವಣ್ಣನವರ ಧಾರ್ಮಿಕ ಚಿಂತನೆ, ಸಾಮಾಜಿಕ ಸಮಾನತೆಯ ಆಶಯ ಮತ್ತು ಮಾನವೀಯ ಮೌಲ್ಯಗಳ ಮಹತ್ವವನ್ನು ಮತ್ತೊಮ್ಮೆ ನೆನಪಿಸಿತು.

ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್. ಮೋಹನ್ ಕುಮಾರ್, ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜದ ನಿರ್ದೇಶಕ ಟಿ.ಬಿ. ಜಗದೀಶ್, ಶಂಕರಪ್ಪ, ಎನ್.ಜಿ. ಮಹೇಶ್ವರಪ್ಪ, ಚಂದ್ರಶೇಖರ್ ತಳಗಿನಾಳ ಸೇರಿದಂತೆ ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಹಣ, ಅಧಿಕಾರ, ಅಂತಸ್ತು ಶಾಶ್ವತವಲ್ಲ; ಆಧ್ಯಾತ್ಮದ ಜ್ಞಾನಸಂಪತ್ತೇ ನಿಜವಾದ ಸಂಪತ್ತು, ಜಾತಿ-ಮತಗಳ ಭೇದ ಮರೆತು ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬದುಕಬೇಕು: ಶ್ರೀ ರಂಭಾಪುರಿ ಜಗದ್ಗುರುಗಳು

ಬಸವಕೇಂದ್ರದ ಶ್ರೀಗಳ ಸಾನ್ನಿಧ್ಯದಲ್ಲಿ ಚಿಂತನ ಕಾರ್ತಿಕದ 20ನೇ ವರ್ಷದ ಸಂಭ್ರಮ; ಮನೆಮನೆಗೆ ತಲುಪಿದ ಬಸವತತ್ವದ ಬೆಳಕು – ಜನರ ಮನಸ್ಸಿನಲ್ಲಿ ಚಿಂತನದ ಕಿಡಿ ಹೊತ್ತಿಸಿದ ‘ಚಿಂತನ ಕಾರ್ತಿಕ’

ವಚನಗಳ ತತ್ವ ಕೇವಲ ಮಾತಿಗೆ ಸೀಮಿತವಾಗದೆ ನಮ್ಮ ನಡೆ-ನುಡಿಯಲ್ಲಿ ಸಾಕಾರಗೊಳ್ಳಲಿ; ಜಾತಿ-ಉಪಜಾತಿಗಳ ಗೋಡೆ ಒಡೆದು ಸಮಾನತೆಯ ಸಮಾಜ ಕಟ್ಟೋಣ: ಉಪಕುಲಪತಿ ಡಾ. ಎಂ.ವಿ. ಧನಂಜಯ

ದೇವಸ್ಥಾನಗಳು ಸಮಾಜದಲ್ಲಿ ಸಾಮರಸ್ಯ, ಸದ್ಭಾವನೆ ಬೆಳೆಸುವ ಪವಿತ್ರ ಕೇಂದ್ರಗಳು: ಶ್ರೀ ರಂಭಾಪುರಿ ಜಗದ್ಗುರುಗಳು

ಮನುಷ್ಯನ ಬದುಕಿಗೆ ಬೆಳಕನ್ನು ನೀಡುವುದೇ ನಿಜವಾದ ಧರ್ಮ; ಧರ್ಮವೆಂದರೆ ವಿಭಜನೆಯಲ್ಲ, ಮನುಕುಲವನ್ನು ಪ್ರೀತಿ ಮತ್ತು ಮಾನವೀಯತೆಯಿಂದ ಒಂದುಗೂಡಿಸುವ ಶಕ್ತಿ: ಶ್ರೀ ರಂಭಾಪುರಿ ಜಗದ್ಗುರುಗಳು

ಬಸವತತ್ವದ ಬೆಳಕಿನಲ್ಲಿ ಬದುಕಿನ ಅರಿವಿನ ಪಯಣ; ಪೂಜ್ಯ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ 20ನೇ ವರ್ಷದ ಚಿಂತನ ಕಾರ್ತಿಕ

Leave a Comment