20ನೇ ವರ್ಷದ ಸಂಭ್ರಮದಲ್ಲಿ ಬಸವಕೇಂದ್ರದ ಚಿಂತನ ಕಾರ್ತಿಕ, ಹಳ್ಳಿಗಳಲ್ಲಿ ಆರಂಭವಾದ ಪುಟ್ಟ ಪ್ರಯತ್ನ ಇಂದು ಜನರೇ ಆಹ್ವಾನಿಸುವ ಜನಾಂದೋಲನವಾಗಿ ಬೆಳೆದಿದೆ – ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಅರ್ಥಪೂರ್ಣ ಕಾರ್ಯಕ್ರಮ
ಶಿವಮೊಗ್ಗ: ಕೆಲವೊಂದು ಮಹತ್ತರ ಕಾರ್ಯಗಳು ದೊಡ್ಡ ವೇದಿಕೆಗಳಲ್ಲಿ, ಅದ್ಧೂರಿ ಸಿದ್ಧತೆಗಳೊಂದಿಗೆ ಆರಂಭವಾಗುವುದಿಲ್ಲ. ಬದಲಾಗಿ, ಬೆರಳೆಣಿಕೆಯಷ್ಟು ಜನರ ಆಸಕ್ತಿ, ಒಂದಿಷ್ಟು ಸಂಕಲ್ಪ, ಕೈಯಲ್ಲೊಂದು ಮೈಕ್, ಪ್ರಯಾಣಕ್ಕೆ ಹಳೆಯ ಅಂಬಾಸಿಡರ್ ಕಾರು, ಮನಸ್ಸಿನಲ್ಲಿ ಬಸವತತ್ವದ ಮೇಲಿನ ಅಪಾರ ನಂಬಿಕೆ – ಇಷ್ಟನ್ನೇ ಬಂಡವಾಳವಾಗಿಸಿಕೊಂಡು ಆರಂಭವಾಗುತ್ತವೆ. ಆರಂಭದಲ್ಲಿ ಕಾರ್ಯಕ್ರಮಕ್ಕೆ ಜನರು ಬರುತ್ತಾರೋ ಇಲ್ಲವೋ ಎಂಬ ಆತಂಕ, ಹಳ್ಳಿಗಳಿಗೆ ತೆರಳಿ ಜನರನ್ನು ಆಹ್ವಾನಿಸುವ ಅನಿವಾರ್ಯತೆ, ದೇವಸ್ಥಾನದ ಆವರಣದಲ್ಲಿ ನಾಲ್ಕು ಕುರ್ಚಿಗಳನ್ನು ಹಾಕಿಕೊಂಡು ಪ್ರವಚನ ನಡೆಸಿದ ದಿನಗಳು. ಹೀಗೆ ಸಣ್ಣ ಹೆಜ್ಜೆಗಳಿಂದ ಆರಂಭವಾದ ಬಸವಕೇಂದ್ರದ ‘ಚಿಂತನ ಕಾರ್ತಿಕ’ ಇಂದು ಎರಡು ದಶಕಗಳ ಸಾರ್ಥಕ ಪಯಣವನ್ನು ಪೂರೈಸಿ, ಜನರೇ ಕಾರ್ಯಕ್ರಮಕ್ಕೆ ಆಹ್ವಾನಿಸುವ ಮಟ್ಟಕ್ಕೆ ಬೆಳೆದಿರುವುದು ಬಸವತತ್ವದ ಚಿಂತನೆಗೆ ಸಂದ ದೊಡ್ಡ ಗೌರವವಾಗಿದೆ.

ಶ್ರೀ ಬಸವತತ್ವ ಪೀಠ, ಚಿಕ್ಕಮಗಳೂರು ಹಾಗೂ ಬಸವಕೇಂದ್ರ, ಶಿವಮೊಗ್ಗದ ಆಶ್ರಯದಲ್ಲಿ ನಗರದ ಬಸವಕೇಂದ್ರದಲ್ಲಿ ನಡೆದ 20ನೇ ವರ್ಷದ ಚಿಂತನ ಕಾರ್ತಿಕ ಕಾರ್ಯಕ್ರಮವು ಬಸವ ಚಿಂತನೆ, ಶರಣರ ಆದರ್ಶ, ಸಾಮಾಜಿಕ ಸಾಮರಸ್ಯ ಮತ್ತು ಆತ್ಮಾವಲೋಕನದ ಸಂದೇಶವನ್ನು ಸಾರಿತು. ಪೂಜ್ಯ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಚಿಂತನ ಕಾರ್ತಿಕದ ಎರಡು ದಶಕಗಳ ಪಯಣವನ್ನು ಸ್ಮರಿಸಿದ ಬಸವಕೇಂದ್ರದ ಪ್ರಮುಖರು, ಆರಂಭದ ದಿನಗಳ ಸವಾಲುಗಳು, ಗ್ರಾಮೀಣ ಭಾಗದಲ್ಲಿ ಜನರನ್ನು ತಲುಪಲು ನಡೆಸಿದ ಪ್ರಯತ್ನಗಳು, ಕೋವಿಡ್ ಸಂಕಷ್ಟದಲ್ಲಿಯೂ ಕಾರ್ಯಕ್ರಮದ ನಿರಂತರತೆ ಕಾಪಾಡಿದ ಬದ್ಧತೆ ಹಾಗೂ ಪ್ರತಿ ವರ್ಷ ವಿಭಿನ್ನ ವಿಷಯಗಳ ಮೂಲಕ ಸಮಾಜಕ್ಕೆ ಮಹತ್ವದ ಚಿಂತನೆಗಳನ್ನು ಪರಿಚಯಿಸಿದ ಅನುಭವಗಳನ್ನು ಬಸವಕೇಂದ್ರ ಶ್ರೀಗಳು ಹಂಚಿಕೊಂಡರು.

ಅಂಬಾಸಿಡರ್ ಕಾರಿನಲ್ಲಿ ಆರಂಭವಾದ ಬಸವತತ್ವದ ಪಯಣ
ಚಿಂತನ ಕಾರ್ತಿಕದ ಆರಂಭದ ದಿನಗಳನ್ನು ಸ್ಮರಿಸಿದ ಅವರು, ಕಾರ್ಯಕ್ರಮ ಇಷ್ಟೊಂದು ವರ್ಷಗಳ ಕಾಲ ಮುಂದುವರಿಯುತ್ತದೆ ಎಂಬ ಭರವಸೆಯೇ ಇರಲಿಲ್ಲ. ಆದರೂ ಎರಡನೇ, ಮೂರನೇ ವರ್ಷದಿಂದ ಗ್ರಾಮೀಣ ಪ್ರದೇಶಗಳಿಗೂ ಬಸವತತ್ವದ ಚಿಂತನೆಗಳನ್ನು ಕೊಂಡೊಯ್ಯಬೇಕು ಎಂಬ ಉದ್ದೇಶದಿಂದ ಹಳ್ಳಿಗಳಲ್ಲಿ ಕಾರ್ಯಕ್ರಮ ಆಯೋಜಿಸಲು ಮುಂದಾದೆವು. ಆರಂಭದಲ್ಲಿ ಎಂಟರಿಂದ ಹತ್ತು ಮನೆಗಳಲ್ಲಿ ಕಾರ್ಯಕ್ರಮ ನಡೆಸುವ ಪ್ರಯತ್ನ ಮಾಡಿದೆವು. ನಂತರ ಸುಮಾರು 20 ಮನೆಗಳವರೆಗೆ ಈ ಚಿಂತನೆ ವಿಸ್ತರಿಸಿತು ಎಂದು ಬಸವಕೇಂದ್ರ ಶ್ರೀಗಳು ತಿಳಿಸಿದರು.
ಆ ದಿನಗಳಲ್ಲಿ ಬಸವಕೇಂದ್ರದ ಕಾರ್ಯಕರ್ತರ ಮೂಲಕ ಹಳ್ಳಿಗಳನ್ನು ಸಂಪರ್ಕಿಸುವ ಕೆಲಸ ಮಾಡಲಾಗುತ್ತಿತ್ತು. ಕೆಲವರು ಆಸಕ್ತಿಯಿಂದ ಮುಂದೆ ಬಂದು ಗ್ರಾಮಗಳಲ್ಲಿ ಕಾರ್ಯಕ್ರಮ ಆಯೋಜಿಸಲು ಸಹಕರಿಸಿದರು. ಆದರೆ ಕೆಲವು ಹಳ್ಳಿಗಳಿಗೆ ಕಾರ್ಯಕ್ರಮದ ಮಾಹಿತಿ ತಲುಪಿರಲಿಲ್ಲ. ಹೀಗಾಗಿ ಅಂದು ₹600 ಬಾಡಿಗೆ ನೀಡಿ ಅಂಬಾಸಿಡರ್ ಕಾರನ್ನು ಪಡೆದು, ಖ್ಯಾತ ಪ್ರವಚನಕಾರರಾದ ಸಿದ್ಧಬಸವ ಕಬೀರ ಸ್ವಾಮೀಜಿಗಳನ್ನು ಜೊತೆಯಲ್ಲಿ ಕರೆದುಕೊಂಡು ಗ್ರಾಮಗಳಿಗೆ ತೆರಳುತ್ತಿದ್ದೆವು.
ಸಂಜೆ 5 ಗಂಟೆಗೆ ಬಸವಕೇಂದ್ರದಿಂದ ಹೊರಟರೆ, ಕೆಲವೊಮ್ಮೆ 6 ಅಥವಾ 6.30ರ ವೇಳೆಗೆ ಹಳ್ಳಿಗಳನ್ನು ತಲುಪುತ್ತಿದ್ದೆವು. ಕೆಲವು ಗ್ರಾಮಗಳಲ್ಲಿ ಪಾದಯಾತ್ರೆ, ವಾದ್ಯಮೇಳ ಹಾಗೂ ಭಕ್ತರ ಮೆರವಣಿಗೆಯೊಂದಿಗೆ ಅದ್ಧೂರಿಯಾಗಿ ಸ್ವಾಗತಿಸುತ್ತಿದ್ದರು. ಆದರೆ ಕೆಲವು ಕಡೆ ಚಿಂತನ ಕಾರ್ತಿಕ ಕಾರ್ಯಕ್ರಮ ನಡೆಯುತ್ತಿದೆ ಎಂಬ ಮಾಹಿತಿಯೇ ಜನರಿಗೆ ಇರುತ್ತಿರಲಿಲ್ಲ.

ಅಂತಹ ಸಂದರ್ಭದಲ್ಲಿ ನಾವೇ ವಾಹನದಿಂದ ಮೈಕ್ ತೆಗೆದುಕೊಂಡು ದೇವಸ್ಥಾನದ ಆವರಣದಲ್ಲಿ ನಿಂತು, ‘ಶಿವಮೊಗ್ಗದ ಬಸವಕೇಂದ್ರದಿಂದ ಬಸವ ಮರುಳಸಿದ್ಧ ಸ್ವಾಮೀಜಿಗಳು ಆಗಮಿಸಿದ್ದಾರೆ. ಕಲಬುರಗಿಯಿಂದ ಖ್ಯಾತ ಪ್ರವಚನಕಾರರಾದ ಸಿದ್ಧಬಸವ ಕಬೀರ ಸ್ವಾಮೀಜಿಗಳು ಬಂದಿದ್ದಾರೆ. ಭಕ್ತಾದಿಗಳು ದೇವಸ್ಥಾನದ ಆವರಣಕ್ಕೆ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು‘ ಎಂದು ಘೋಷಣೆ ಮಾಡುತ್ತಿದ್ದೆವು.
ನಂತರ ಸ್ಥಳೀಯರಿಂದ ನಾಲ್ಕು ಕುರ್ಚಿಗಳನ್ನು ಪಡೆದು ದೇವಸ್ಥಾನದ ಆವರಣದಲ್ಲಿ ವೇದಿಕೆ ಸಿದ್ಧಪಡಿಸಿ ಕಾರ್ಯಕ್ರಮ ನಡೆಸುತ್ತಿದ್ದೆವು. ಕಾರ್ಯಕ್ರಮ ಮುಗಿದ ಬಳಿಕ ಯಾರಾದರೂ ಮನೆಗೆ ಆಹ್ವಾನಿಸಿದರೆ, ಅಲ್ಲಿಯೇ ಪೂಜೆ ಮತ್ತು ಪ್ರಸಾದದ ವ್ಯವಸ್ಥೆ ಮಾಡಲಾಗುತ್ತಿತ್ತು. ಇಂತಹ ಸರಳ ವ್ಯವಸ್ಥೆಗಳ ನಡುವೆ ಆರಂಭವಾದ ಕಾರ್ಯಕ್ರಮ ಇಂದು 20ನೇ ವರ್ಷಕ್ಕೆ ತಲುಪಿರುವುದನ್ನು ನೋಡಿದಾಗ ನಿಜಕ್ಕೂ ಆಶ್ಚರ್ಯ ಮತ್ತು ಹೆಮ್ಮೆ ಉಂಟಾಗುತ್ತದೆ ಎಂದರು.
ಈ ಪಯಣದಲ್ಲಿ ಅನೇಕರು ತಮ್ಮ ಸಮಯ, ಶ್ರಮ ಮತ್ತು ಸಂಪನ್ಮೂಲಗಳನ್ನು ಧಾರೆಯೆರೆದಿದ್ದಾರೆ. ಕೆಲವೊಮ್ಮೆ ತಲೆಬಾಗಬೇಕಾಗುತ್ತದೆ, ಕೆಲವೊಮ್ಮೆ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಯಾವುದೇ ಸಾಮಾಜಿಕ ಕಾರ್ಯ ಯಶಸ್ಸು ಕಾಣಬೇಕಾದರೆ ಅದರ ಹಿಂದೆ ಅನೇಕ ಜನರ ಪರಿಶ್ರಮ ಇರುತ್ತದೆ. ಚಿಂತನ ಕಾರ್ತಿಕದ ಬೆಳವಣಿಗೆಗೆ ಕೈಜೋಡಿಸಿದ ಎಲ್ಲರ ಸೇವೆಯನ್ನು ಹೃತ್ಪೂರ್ವಕವಾಗಿ ಸ್ಮರಿಸುತ್ತೇನೆ ಎಂದು ಕೃತಜ್ಞತೆ ಸಲ್ಲಿಸಿದರು.

ಕೋವಿಡ್ ಸಂಕಷ್ಟದಲ್ಲೂ ನಿಲ್ಲದ ಚಿಂತನದ ಬೆಳಕು
2020ರಲ್ಲಿ ಕೋವಿಡ್ ಮಹಾಮಾರಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿತ್ತು. ಜನರು ಒಂದೆಡೆ ಸೇರುವುದಕ್ಕೂ ನಿರ್ಬಂಧವಿದ್ದ ಸಂದರ್ಭದಲ್ಲಿ ಚಿಂತನ ಕಾರ್ತಿಕವನ್ನು ನಿಲ್ಲಿಸಬಾರದು ಎಂಬ ದೃಢ ಸಂಕಲ್ಪದೊಂದಿಗೆ ಆನ್ಲೈನ್ ಮೂಲಕ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಯಿತು.
ಅಲ್ಲಮಪ್ರಭು ದೇವರ ವ್ಯಕ್ತಿತ್ವವನ್ನು ಕೇಂದ್ರವಾಗಿಟ್ಟುಕೊಂಡು ವಿಶೇಷ ಉಪನ್ಯಾಸ ಸರಣಿಯನ್ನು ರೂಪಿಸಲಾಯಿತು. ಕಾರ್ಯಕ್ರಮದ ಪ್ರಸಾರ, ವಿಡಿಯೋ ಚಿತ್ರೀಕರಣ ಮತ್ತು ಸಂಪಾದನೆ ಸೇರಿದಂತೆ ಎಲ್ಲ ವೆಚ್ಚಗಳನ್ನು ನಿರ್ವಹಿಸಲು ದಿನವೊಂದಕ್ಕೆ ₹5,000ರಂತೆ ಸಹಕಾರ ನೀಡುವ 30 ಮಂದಿ ಸೇವಾಕರ್ತರು ದೊರೆತರೆ ಕಾರ್ಯಕ್ರಮ ನಡೆಸಬಹುದು ಎಂಬ ಯೋಜನೆ ರೂಪಿಸಲಾಯಿತು.
ನಾಡಿನ ಪ್ರಮುಖ ಕನ್ನಡ ವಿದ್ವಾಂಸರು ಅಲ್ಲಮಪ್ರಭು ದೇವರ ವ್ಯಕ್ತಿತ್ವದ ಕುರಿತು ತಲಾ 20 ನಿಮಿಷಗಳ ಉಪನ್ಯಾಸಗಳನ್ನು ಸಿದ್ಧಪಡಿಸಿ ಕಳುಹಿಸಿದರು. ಆ ಸಮಯದಲ್ಲಿ ತಂತ್ರಜ್ಞಾನದ ಬಳಕೆಯಲ್ಲಿಯೂ ಅನೇಕರು ಹೊಸ ಅನುಭವ ಪಡೆಯಬೇಕಾಯಿತು. ಆದರೂ ಸ್ಟುಡಿಯೋಗಳಲ್ಲಿ ಉಪನ್ಯಾಸಗಳನ್ನು ಚಿತ್ರೀಕರಿಸಿ ಕಳುಹಿಸುವ ಮೂಲಕ ಕಾರ್ಯಕ್ರಮಕ್ಕೆ ಸಹಕರಿಸಿದರು.
ಖ್ಯಾತ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಅವರು ಕಾರ್ಯಕ್ರಮ ಉದ್ಘಾಟಿಸಿದರೆ, ಖ್ಯಾತ ನಟ ಧನಂಜಯ್ ಅವರು ನುಡಿಮಾತುಗಳ ಮೂಲಕ ಶುಭ ಹಾರೈಸಿದರು. ಚಿತ್ರೀಕರಣದ ಕೆಲಸದ ನಿಮಿತ್ತ ಹೈದರಾಬಾದ್ನಲ್ಲಿದ್ದರೂ ವಿಡಿಯೋ ಸಂದೇಶ ಕಳುಹಿಸಿ ಸಹಕರಿಸಿದ್ದು ವಿಶೇಷವಾಗಿತ್ತು.
ಹಾಲಸ್ವಾಮಿಯವರ ಟಿವಿ, ಯೂಟ್ಯೂಬ್ ಮತ್ತು ಫೇಸ್ಬುಕ್ ಚಾನೆಲ್ಗಳ ಮೂಲಕ ಪ್ರತಿದಿನ ಸಂಜೆ ಕಾರ್ಯಕ್ರಮ ಪ್ರಸಾರ ಮಾಡಲಾಯಿತು. ಪರಿಸ್ಥಿತಿ ಎಷ್ಟೇ ಕಠಿಣವಾಗಿದ್ದರೂ ಚಿಂತನದ ನಿರಂತರತೆ ನಿಲ್ಲಬಾರದು ಎಂಬ ಬದ್ಧತೆಯೇ ಈ ಪ್ರಯತ್ನದ ಹಿಂದಿನ ಶಕ್ತಿಯಾಗಿತ್ತು ಎಂದು ಶ್ರೀಗಳು ಸ್ಮರಿಸಿದರು.

ನಿತ್ಯ ಪ್ರವಚನದಿಂದ ಜನ ಚಳವಳಿಯವರೆಗೆ
ಬಸವಕೇಂದ್ರದಲ್ಲಿ ಚಿಂತನ ಕಾರ್ತಿಕದ ಆರಂಭಕ್ಕೆ ನಿತ್ಯದ ಪ್ರವಚನ ಪರಂಪರೆಯೇ ಮೂಲ ಪ್ರೇರಣೆಯಾಗಿತ್ತು. 2006ರ ಡಿಸೆಂಬರ್ 20ರಂದು ಬಸವಕೇಂದ್ರಕ್ಕೆ ಆಗಮಿಸಿದ ನಂತರ ಪ್ರತಿದಿನ ಪ್ರವಚನ ಕಾರ್ಯಕ್ರಮಗಳು ಆರಂಭವಾದವು. ವೆಂಕಟಪ್ಪ, ದಾನಪ್ಪ, ಶ್ರೀಪತಿ, ಎಂ.ಸಿ.ಎನ್. ರಾಜು, ಎಚ್.ಕೆ. ಮಂಜಪ್ಪ, ಶಂಕರಪ್ಪ, ಜಿ.ಆರ್. ಮುರುಗೇಂದ್ರಪ್ಪ ಸೇರಿದಂತೆ ಕೆಲವೇ ಕೆಲವು ಸಮಾನ ಮನಸ್ಕರು ಪ್ರತಿದಿನ ಸೇರಿ ಭಜನೆ ಮತ್ತು ಪ್ರವಚನಗಳಲ್ಲಿ ಭಾಗವಹಿಸುತ್ತಿದ್ದರು.
ಆರಂಭದಲ್ಲಿ ಐದಾರು ಜನರಿಂದ ಶುರುವಾದ ಈ ಚಟುವಟಿಕೆಯಲ್ಲಿ ಕೆಲವೊಮ್ಮೆ ಹತ್ತು-ಹನ್ನೆರಡು ಜನರು ಭಾಗವಹಿಸುತ್ತಿದ್ದರು. ಜನರ ಸಂಖ್ಯೆ ಕಡಿಮೆ ಇದ್ದರೂ ಒಳ್ಳೆಯ ಪುಸ್ತಕಗಳನ್ನು ಓದಬೇಕು, ಶರಣರ ವಿಚಾರಗಳನ್ನು ಅಧ್ಯಯನ ಮಾಡಬೇಕು ಎಂಬ ಉದ್ದೇಶದಿಂದ ಪ್ರವಚನಗಳು ಮುಂದುವರಿದವು.
ಈ ಚಿಂತನೆಗಳನ್ನು ಬಸವಕೇಂದ್ರದ ನಾಲ್ಕು ಗೋಡೆಗಳಿಗೆ ಸೀಮಿತಗೊಳಿಸದೆ ಹೊರಗಿನ ಜನರಿಗೂ ತಲುಪಿಸಬೇಕು ಎಂಬ ಆಶಯ ಮೂಡಿತು. ಚಿತ್ರದುರ್ಗದ ಮಠದಿಂದ ಆಯೋಜಿಸಿದ್ದ ಶ್ರೀಶೈಲದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪ್ರವಾಸ ಕೈಗೊಂಡಾಗ, ಪ್ರವಾಸದಲ್ಲಿ ಭಾಗವಹಿಸಿದ್ದ ಭಕ್ತರ ಮನೆಗಳಲ್ಲಿಯೂ ಕಾರ್ಯಕ್ರಮ ಆಯೋಜಿಸುವಂತೆ ಮನವಿ ಮಾಡಲಾಯಿತು. ಅವರ ಸಹಕಾರದೊಂದಿಗೆ ಮನೆಮನೆಗೆ ತೆರಳಿ ಚಿಂತನ ಕಾರ್ತಿಕ ಕಾರ್ಯಕ್ರಮ ನಡೆಸುವ ಪರಂಪರೆ ಆರಂಭವಾಯಿತು.
ಆಗ ಮನೆಗಳಲ್ಲಿ ಕಾರ್ಯಕ್ರಮ ನಡೆಸಲು ಜನರನ್ನು ಮನವೊಲಿಸಬೇಕಾಗಿತ್ತು. ಇಂದು ಕಾರ್ಯಕ್ರಮ ನಡೆಸಲು ಅವಕಾಶ ನೀಡುವಂತೆ ಜನರೇ ಮುಂದೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಎರಡು ದಶಕಗಳ ನಿರಂತರ ಪ್ರಯತ್ನಕ್ಕೆ ದೊರೆತ ಯಶಸ್ಸು ಎಂದು ಶ್ರೀಗಳು ಸಂತಸ ವ್ಯಕ್ತಪಡಿಸಿದರು.

ಸಮಾಜಕ್ಕೆ ಮಾದರಿಯಾದ ಮಠಾಧಿಪತಿಗಳ ಸಾಧನೆ ಪರಿಚಯ
ಚಿಂತನ ಕಾರ್ತಿಕದ ವಿಶೇಷತೆಯೆಂದರೆ ಪ್ರತಿ ವರ್ಷವೂ ಸಮಾಜಕ್ಕೆ ಅಗತ್ಯವಾದ ವಿಭಿನ್ನ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಚರ್ಚೆ ಮತ್ತು ಉಪನ್ಯಾಸಗಳನ್ನು ಆಯೋಜಿಸುತ್ತಿರುವುದು. ಸಮಾಜದಲ್ಲಿ ಕೆಲವರ ಅನಿರೀಕ್ಷಿತ ನಡವಳಿಕೆಗಳಿಂದ ಇಡೀ ಶರಣ ಪರಂಪರೆಯನ್ನೇ ತಪ್ಪಾಗಿ ಅರ್ಥೈಸುವ ಪರಿಸ್ಥಿತಿ ನಿರ್ಮಾಣವಾದಾಗ, ಮಹತ್ತರ ಸಾಧನೆ ಮಾಡಿರುವ ಮಠಾಧಿಪತಿಗಳ ಬದುಕು ಮತ್ತು ಸಮಾಜಸೇವೆಯನ್ನು ಜನರಿಗೆ ಪರಿಚಯಿಸುವ ಕಾರ್ಯಕ್ರಮ ರೂಪಿಸಲಾಯಿತು.
ಒಂದು ಸಮುದಾಯದಲ್ಲಿರುವ ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡುವುದು ಸರಿಯಲ್ಲ. ಕೆಲವರ ತಪ್ಪುಗಳಿಂದ ಇಡೀ ಪರಂಪರೆಯನ್ನು ಅಳೆಯಬಾರದು. ಸಮಾಜದ ಅಭ್ಯುದಯಕ್ಕೆ ಶ್ರಮಿಸಿದ ಮಹನೀಯರ ಸಾಧನೆಗಳನ್ನು ಗುರುತಿಸಿ ಪರಿಚಯಿಸಬೇಕು ಎಂಬ ಉದ್ದೇಶದಿಂದ ಕರ್ನಾಟಕದ ವಿವಿಧ ಮಠಗಳ ಸಾಧಕ ಸ್ವಾಮೀಜಿಗಳ ಕುರಿತು ಉಪನ್ಯಾಸಗಳನ್ನು ಆಯೋಜಿಸಲಾಯಿತು.
ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಗಳು ಸಾವಿರಾರು ಮಕ್ಕಳಿಗೆ ಅನ್ನ, ಅಕ್ಷರ ಮತ್ತು ಆಶ್ರಯ ನೀಡುವ ಮೂಲಕ ತ್ರಿವಿಧ ದಾಸೋಹಕ್ಕೆ ಹೊಸ ಅರ್ಥ ನೀಡಿದರು. ಶರಣರ ಪರಿಕಲ್ಪನೆಯಲ್ಲಿ ತನು, ಮನ ಮತ್ತು ಧನವನ್ನು ಗುರು, ಲಿಂಗ ಹಾಗೂ ಜಂಗಮಕ್ಕೆ ಅರ್ಪಿಸುವುದು ತ್ರಿವಿಧ ದಾಸೋಹ. ಆದರೆ ಕಾಲದ ಅಗತ್ಯಕ್ಕೆ ಅನುಗುಣವಾಗಿ ಮಕ್ಕಳಿಗೆ ಅನ್ನ, ಶಿಕ್ಷಣ ಮತ್ತು ವಸತಿ ಒದಗಿಸುವ ಮೂಲಕ ಅದರ ಸಾಮಾಜಿಕ ಆಯಾಮವನ್ನು ವಿಸ್ತರಿಸಿದವರು ಸಿದ್ಧಗಂಗಾ ಶ್ರೀಗಳು ಎಂದು ವಿವರಿಸಿದರು.
ತರಳಬಾಳು ಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಗ್ರಾಮೀಣ ಪ್ರದೇಶಗಳಿಗೆ ಶಿಕ್ಷಣ ತಲುಪಿಸುವ ಸಂಕಲ್ಪದೊಂದಿಗೆ ಹತ್ತು ಪ್ರೌಢಶಾಲೆಗಳನ್ನು ಸ್ಥಾಪಿಸುವ ಸವಾಲು ಸ್ವೀಕರಿಸಿದರು. ಇಂದು ತರಳಬಾಳು ಮಠದ ಶಿಕ್ಷಣ ಸಂಸ್ಥೆಗಳು ಸುಮಾರು 250ರ ಮಟ್ಟಿಗೆ ಬೆಳೆದಿರುವುದು ಅವರ ದೂರದೃಷ್ಟಿ ಮತ್ತು ಪರಿಶ್ರಮಕ್ಕೆ ಸಾಕ್ಷಿಯಾಗಿದೆ ಎಂದರು.

ಬೆಳಗಾವಿಯ ಶಿವಬಸವ ಸ್ವಾಮೀಜಿಗಳು ಕನ್ನಡ ಭಾಷೆಯ ಅಸ್ತಿತ್ವವೇ ಸವಾಲಾಗಿದ್ದ ಕಾಲದಲ್ಲಿ ಕನ್ನಡ ಶಿಕ್ಷಣ ಉಳಿಸಲು ಶ್ರಮಿಸಿದರು. ಮರಾಠಿ ಫಲಕದ ಹಿಂದೆ ಕನ್ನಡ ಶಾಲೆ ನಡೆಸಿ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿದ ಅವರ ಸೇವೆ ಸ್ಮರಣೀಯವಾಗಿದೆ. ಅದೇ ರೀತಿ ಬೀದರ್ ಭಾಗದಲ್ಲಿ ರಜಾಕಾರರ ಹಾವಳಿ ಇದ್ದ ಸಂದರ್ಭದಲ್ಲಿ ಕನ್ನಡ ಭಾಷೆ, ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕ ಏಕೀಕರಣದ ಚಟುವಟಿಕೆಗಳಿಗೆ ಬೆಂಬಲ ನೀಡಿದ ಬಾಲ್ಕಿಯ ಹಿರೇಮಠದ ಚನ್ನಬಸಪ್ಪ ಸ್ವಾಮೀಜಿಗಳ ಕೊಡುಗೆಯನ್ನೂ ಸ್ಮರಿಸಿದರು.
ಪುಟ್ಟರಾಜ ಗವಾಯಿಗಳು, ಪಂಚಾಕ್ಷರ ಗವಾಯಿಗಳು ಸೇರಿದಂತೆ ಅನೇಕ ಮಹನೀಯರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಪರಿಚಯಿಸಲಾಯಿತು. ಹೀಗೆ ಸುಮಾರು 30 ಸಾಧಕ ಮಠಾಧಿಪತಿಗಳ ವ್ಯಕ್ತಿತ್ವ ಮತ್ತು ಸೇವೆಯನ್ನು ಜನರ ಮುಂದಿಡುವ ಪ್ರಯತ್ನ ನಡೆಯಿತು ಎಂದು ಶ್ರೀಗಳು ತಿಳಿಸಿದರು.

ಲಿಂಗಾಯತ ಮಹನೀಯರ ಕೊಡುಗೆಗಳಿಗೆ ಬೆಳಕು
ನಾಡಿನ ಮತ್ತು ದೇಶದ ಅಭ್ಯುದಯಕ್ಕೆ ಮಹತ್ವದ ಕೊಡುಗೆ ನೀಡಿದ ಲಿಂಗಾಯತ ಮಹನೀಯರ ಸಾಧನೆಗಳನ್ನು ಪರಿಚಯಿಸುವ ಕಾರ್ಯಕ್ರಮವನ್ನೂ ಚಿಂತನ ಕಾರ್ತಿಕದಲ್ಲಿ ಹಮ್ಮಿಕೊಳ್ಳಲಾಯಿತು. ರುದ್ರಮುನಿಗಳು, ವಾರಂ ಮಲ್ಲಪ್ಪನವರು, ಮೈಸೂರು ಎಂ. ಬಸವಯ್ಯನವರು, ಬಿ. ಲಿಂಗಯ್ಯನವರು, ಎಸ್. ನಿಜಲಿಂಗಪ್ಪನವರು ಸೇರಿದಂತೆ ಅನೇಕ ಸಾಧಕರ ಬದುಕು ಮತ್ತು ಸಾಧನೆಗಳ ಕುರಿತು ಉಪನ್ಯಾಸಗಳನ್ನು ಆಯೋಜಿಸಲಾಯಿತು.
ಇದೇ ಸಂದರ್ಭದಲ್ಲಿ ಕುಮಾರ ಗಂಧರ್ವ ಅವರ ಬದುಕಿನ ಹೋರಾಟ ಮತ್ತು ಸಂಗೀತ ಸಾಧನೆಯನ್ನು ವಿವರಿಸಿದರು. ಕಲಬುರಗಿ ಭಾಗದ ಜಂಗಮ ಪರಂಪರೆಗೆ ಸೇರಿದ ಕುಮಾರ ಗಂಧರ್ವ ಅವರು ಬಾಲ್ಯದಲ್ಲಿಯೇ ಅದ್ಭುತ ಗಾಯನ ಪ್ರತಿಭೆ ಹೊಂದಿದ್ದರು. ಅವರ ಗುರುಗಳು ಅವರ ಪ್ರತಿಭೆಯನ್ನು ಗುರುತಿಸಿ ‘ಸವಾಯಿ ಗಂಧರ್ವರಂತೆ ನೀನು ಕುಮಾರ ಗಂಧರ್ವ’ ಎಂದು ಹೆಸರಿಟ್ಟಿದ್ದರು.
ನಂತರ ಶ್ವಾಸಕೋಶದ ಸೋಂಕಿನಿಂದಾಗಿ ಶಸ್ತ್ರಚಿಕಿತ್ಸೆ ನಡೆಸಿ ಒಂದು ಶ್ವಾಸಕೋಶವನ್ನು ತೆಗೆದುಹಾಕಬೇಕಾಯಿತು. ಇದರಿಂದ ಗಾಯನ ವೃತ್ತಿಗೆ ಅಡ್ಡಿಯಾಗಿದ್ದರೂ ಅವರು ಧೃತಿಗೆಡಲಿಲ್ಲ. ಉತ್ತರ ಭಾರತದಲ್ಲಿ ನೆಲೆಸಿ ಜನಪದ ಗೀತೆಗಳನ್ನು ಸಂಗ್ರಹಿಸುವ ಕೆಲಸ ಮಾಡಿದರು. ಕೊನೆಗೆ ಒಂದೇ ಶ್ವಾಸಕೋಶದ ನೆರವಿನಿಂದಲೂ ಅದ್ಭುತ ಗಾಯನ ಪ್ರದರ್ಶಿಸಿ, ಕಬೀರರ ದೋಹೆಗಳನ್ನು ಸಂಗೀತದ ಮೂಲಕ ಜನರಿಗೆ ತಲುಪಿಸಿದರು. ಅವರ ಗಾಯನವನ್ನು ಕೇಳಲು ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರೂ ಆಸಕ್ತಿಯಿಂದ ಆಗಮಿಸುತ್ತಿದ್ದರು ಎಂಬುದು ಅವರ ಸಾಧನೆಯ ಮಹತ್ವವನ್ನು ತೋರಿಸುತ್ತದೆ ಎಂದರು.

ಬಸವಣ್ಣನವರ ಅನನ್ಯ ವ್ಯಕ್ತಿತ್ವದೊಂದಿಗೆ ಮುಖಾಮುಖಿ
ಈ ವರ್ಷದ ಚಿಂತನ ಕಾರ್ತಿಕವನ್ನು ‘ಬಸವಣ್ಣನವರ ಅನನ್ಯ ವ್ಯಕ್ತಿತ್ವದೊಂದಿಗೆ ಮುಖಾಮುಖಿ’ ಎಂಬ ವಿಶೇಷ ಶೀರ್ಷಿಕೆಯಡಿ ಆಯೋಜಿಸಲಾಗಿದೆ. ಬಸವಣ್ಣನವರ ಚಿಂತನೆ, ಧರ್ಮ, ದೇವರು, ಅಂತರಂಗ-ಬಹಿರಂಗ, ಕಾಯಕ ಮತ್ತು ಕನ್ನಡದ ಅಸ್ಮಿತೆ ಸೇರಿದಂತೆ ಹಲವು ಆಯಾಮಗಳನ್ನು ಆಧರಿಸಿ ಉಪನ್ಯಾಸ ಸರಣಿಯನ್ನು ರೂಪಿಸಲಾಗಿದೆ.
ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆಯ ಮುಖಪುಟದಲ್ಲಿ ಚಾಮರಸನ ‘ಪ್ರಭುಲಿಂಗ ಲೀಲೆ’ ಕೃತಿಯ ಅಪರೂಪದ ಪದ್ಯವನ್ನು ಪ್ರಕಟಿಸಲಾಗಿದೆ. ಆ ಪದ್ಯದಲ್ಲಿ ಬಸವಣ್ಣನವರ ವ್ಯಕ್ತಿತ್ವವನ್ನು ಕೇವಲ ಆರು ಸಾಲುಗಳಲ್ಲಿ ಅತ್ಯಂತ ಅರ್ಥಪೂರ್ಣವಾಗಿ ವಿವರಿಸಲಾಗಿದೆ.
‘ಕಾಯದೊಳು ಗುರು ಲಿಂಗ ಜಂಗಮದಾಯತವನರಿಯಲ್ಕೆ ಸುಲಭೋಪಾಯದಿಂದಿದಿರಿಟ್ಟು ಬಾಹ್ಯಸ್ಥಲಕೆ ಕುರುಹಾಗಿ ದಾಯದೋರಿ ಸಮಸ್ತ ಭಕ್ತನಿಕಾಯವನು ಪಾವನವ ಮಾಡಿದ ರಾಯ ಪೂರ್ವಾಚಾರ್ಯ ಸಂಗನಬಸವ ಶರಣಾರ್ಥಿ..’ ಎಂಬ ಪದ್ಯದ ಮೂಲಕ ಮಾನವನ ದೇಹದಲ್ಲಿಯೇ ಗುರು, ಲಿಂಗ ಮತ್ತು ಜಂಗಮದ ಅರಿವು ಅಡಕವಾಗಿದೆ ಎಂಬ ಶರಣ ತತ್ವವನ್ನು ಚಾಮರಸ ವಿವರಿಸಿದ್ದಾರೆ. ಅಂತರಂಗದ ಅರಿವು ಮತ್ತು ಆಚಾರವನ್ನು ಗುರುತಿಸಲು ಸಾಧ್ಯವಾಗುವಂತೆ ಇಷ್ಟಲಿಂಗದ ಮೂಲಕ ಬಾಹ್ಯ ಸಂಕೇತವನ್ನು ನೀಡಿದವರು ಬಸವಣ್ಣನವರು. ಶರಣ ಮತ್ತು ಲಿಂಗಾಯತ ಪರಂಪರೆಗೆ ಪ್ರಥಮ ಗುರು ಎಂಬ ಗೌರವವನ್ನು ಚಾಮರಸ ಈ ಪದ್ಯದ ಮೂಲಕ ಬಸವಣ್ಣನವರಿಗೆ ನೀಡಿದ್ದಾರೆ ಎಂದು ವಿಶ್ಲೇಷಿಸಿದರು.
ಅಕ್ಕಮಹಾದೇವಿಯ ವ್ಯಕ್ತಿತ್ವವನ್ನು ವಿವರಿಸುವ ಮತ್ತೊಂದು ಪದ್ಯದಲ್ಲಿಯೂ ಚಾಮರಸ ಅವರ ಆಧ್ಯಾತ್ಮಿಕ ಸಾಧನೆಯನ್ನು ಆರು ಸಾಲುಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಕಾಮ ಸೇರಿದಂತೆ ಮನುಷ್ಯನನ್ನು ದಾರಿ ತಪ್ಪಿಸುವ ವಿಷಯಾಸಕ್ತಿಗಳನ್ನು ಮೀರಿ ಅಂತರಂಗದಲ್ಲಿ ಶಿವಪ್ರೇಮವನ್ನು ಬೆಳೆಸಿಕೊಂಡ ಮಹಾನ್ ಶರಣೆಯಾಗಿ ಅಕ್ಕಮಹಾದೇವಿಯನ್ನು ಚಿತ್ರಿಸಿದ್ದಾರೆ.
ಇಂದಿನ ಕಾಲಘಟ್ಟದಲ್ಲಿ ಮೊಬೈಲ್ ಬಳಕೆ, ಸಾಮಾಜಿಕ ಜಾಲತಾಣಗಳ ರೀಲ್ಸ್ ಮತ್ತು ಅನಗತ್ಯ ಆಕರ್ಷಣೆಗಳು ಮನುಷ್ಯನನ್ನು ಹೇಗೆ ವ್ಯಸನದ ಕಡೆಗೆ ಕೊಂಡೊಯ್ಯುತ್ತವೆ ಎಂಬುದಕ್ಕೆ ಉದಾಹರಣೆ ನೀಡಿದ ಅವರು, ಮನುಷ್ಯ ತನ್ನ ಆಸೆ-ಆಕಾಂಕ್ಷೆಗಳ ಮೇಲೆ ನಿಯಂತ್ರಣ ಸಾಧಿಸಬೇಕು. ಅಕ್ಕಮಹಾದೇವಿಯ ಬದುಕು ಆತ್ಮಸಂಯಮ ಮತ್ತು ಅಂತರಂಗದ ಶುದ್ಧತೆಗೆ ಮಾದರಿಯಾಗಿದೆ ಎಂದು ತಿಳಿಸಿದರು.

ಬಸವಣ್ಣನವರ ತತ್ವದ ಮೂಲ ಆತ್ಮಸಾಕ್ಷಿ
ಬಸವಣ್ಣನವರ ತತ್ವಗಳು ಯಾವುದೋ ಪೂರ್ವಗ್ರಂಥಗಳ ಆಧಾರದಲ್ಲಿ ಮಾತ್ರ ರೂಪುಗೊಂಡಿದ್ದಲ್ಲ. ಬದುಕಿನ ಸವಾಲುಗಳೊಂದಿಗೆ ಮುಖಾಮುಖಿಯಾಗುತ್ತಾ, ತನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಕಂಡ ಸತ್ಯಗಳನ್ನು ತತ್ವಗಳನ್ನಾಗಿ ರೂಪಿಸಿದವರು ಬಸವಣ್ಣನವರು. ತಮ್ಮ ಅನುಭವ ಮತ್ತು ಆತ್ಮಸಾಕ್ಷಿಯ ಮೂಲಕ ಕಂಡುಕೊಂಡ ವಿಚಾರಗಳಿಗೆ ಪೂರಕವಾಗಿ ವೇದ ಮತ್ತು ಇತರ ಪೂರ್ವಗ್ರಂಥಗಳ ಪ್ರಮಾಣಗಳನ್ನು ಉಲ್ಲೇಖಿಸಿದ್ದಾರೆ.
‘ದೇವನೊಬ್ಬ ನಾಮ ಹಲವು’ ಎಂಬ ವಿಚಾರವನ್ನು ವಚನಗಳ ಮೂಲಕ ಪ್ರತಿಪಾದಿಸಿದ ಬಸವಣ್ಣನವರು, ದೇವರು ಒಬ್ಬನೇ, ಆತನಿಗೆ ಹಲವು ಹೆಸರುಗಳಿವೆ ಎಂಬ ಏಕದೈವದ ಸಂದೇಶವನ್ನು ಸಾರಿದರು. ಇಬ್ಬರು-ಮೂರು ದೇವರುಗಳೆಂದು ಗೊಂದಲ ಸೃಷ್ಟಿಸಬಾರದು, ಸತ್ಯವಸ್ತು ಒಂದೇ ಎಂಬ ತತ್ವವನ್ನು ಜನರಿಗೆ ತಿಳಿಸಿದರು.
ಹೀಗಾಗಿ ಬಸವಣ್ಣನವರ ವ್ಯಕ್ತಿತ್ವದೊಂದಿಗೆ ಮುಖಾಮುಖಿಯಾಗುವುದು ಎಂದರೆ ನಮ್ಮ ಆತ್ಮಸಾಕ್ಷಿಯೊಂದಿಗೆ ಮುಖಾಮುಖಿಯಾಗುವುದೇ ಆಗಿದೆ. ನಾವು ನಮ್ಮ ಬದುಕನ್ನು, ನಡವಳಿಕೆಯನ್ನು ಮತ್ತು ನೈತಿಕತೆಯನ್ನು ಪರಿಶೀಲಿಸಿಕೊಳ್ಳುವ ಆತ್ಮಾವಲೋಕನದ ಪ್ರಯತ್ನವೇ ಈ ವರ್ಷದ ಚಿಂತನ ಕಾರ್ತಿಕದ ಮುಖ್ಯ ಉದ್ದೇಶವಾಗಿದೆ ಎಂದರು.
ಬಸವಣ್ಣನವರನ್ನು ಸಂಪೂರ್ಣವಾಗಿ ಅರಿಯಲು ಅವರ ವಚನಗಳ ಅಧ್ಯಯನವೇ ಮುಖ್ಯ. ಈ ವರ್ಷದ ಕಾರ್ಯಕ್ರಮದಲ್ಲಿ ಆಯ್ಕೆ ಮಾಡಿರುವ ವಿಷಯಗಳು ಬಸವಣ್ಣನವರ ಸಮಗ್ರ ವ್ಯಕ್ತಿತ್ವವನ್ನು ತಿಳಿಸುವ ಅಂತಿಮ ಪ್ರಯತ್ನವಲ್ಲ. ಬದಲಾಗಿ ಅವರ ಚಿಂತನೆಗಳನ್ನು ಅರ್ಥಮಾಡಿಕೊಳ್ಳಲು ಕೆಲವು ಮಾದರಿಗಳನ್ನು ಜನರ ಮುಂದಿಡುವ ಪ್ರಯತ್ನವಾಗಿದೆ. ಈ ಉಪನ್ಯಾಸಗಳು ಮತ್ತಷ್ಟು ವಚನಗಳನ್ನು ಓದಲು ಮತ್ತು ಅವುಗಳ ಅರ್ಥವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಪ್ರೇರಣೆಯಾಗಬೇಕು ಎಂದು ಆಶಿಸಿದರು.

ಬಸವಣ್ಣನವರು ಕನ್ನಡದ ಅಸ್ಮಿತೆಯ ಪ್ರತೀಕ: ಕುಲಪತಿ ಡಾ. ಎಂ.ವಿ. ಧನಂಜಯ
ಕಾರ್ಯಕ್ರಮ ಉದ್ಘಾಟಿಸಿದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ವಿ. ಧನಂಜಯ ಅವರು ಅತ್ಯಂತ ಅರ್ಥಪೂರ್ಣ ವಿಚಾರಗಳನ್ನು ಮಂಡಿಸಿದರು.
ಲಿಂಗಾಯತ ಎಂಬುದು ಧರ್ಮವಾಗಿದ್ದು, ಅದನ್ನು ಜಾತಿಯ ಚೌಕಟ್ಟಿಗೆ ಸೀಮಿತಗೊಳಿಸುವ ಪ್ರಯತ್ನ ನಡೆಯುತ್ತಿದೆ. ಅಷ್ಟೇ ಅಲ್ಲದೆ, ಜಾತಿಯೊಳಗೆ ಮತ್ತೆ ಉಪಜಾತಿಗಳನ್ನು ಸೃಷ್ಟಿಸಿಕೊಂಡು ಮೇಲು-ಕೀಳು ಎಂಬ ಭೇದಭಾವ ಬೆಳೆಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಬಸವಣ್ಣನವರ ಹೆಸರನ್ನು ಹೇಳಿಕೊಳ್ಳುವ ನೈತಿಕ ಅರ್ಹತೆ ನಮಗಿದೆಯೇ ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಬಸವಣ್ಣನವರು ಕನ್ನಡದ ಅಸ್ಮಿತೆ. ಕನ್ನಡದ ಸಂಸ್ಕೃತಿ, ಸಾಹಿತ್ಯ, ಧಾರ್ಮಿಕ ಮತ್ತು ಸಾಮಾಜಿಕ ವಿಕಾಸಕ್ಕೆ ಮಹತ್ವದ ಕೊಡುಗೆ ನೀಡಿದ ಕೆಲವೇ ಕೆಲವು ಮಹಾನ್ ವ್ಯಕ್ತಿತ್ವಗಳಲ್ಲಿ ಬಸವಣ್ಣನವರು ಅಗ್ರಗಣ್ಯರು ಎಂದು ಹೇಳಿದರು.
ಬಸವಣ್ಣನವರಿಗಿಂತ ಪೂರ್ವದಲ್ಲಿ ಕನ್ನಡ ಸಾಹಿತ್ಯದಲ್ಲಿ ಜೈನ ಮತ್ತು ವೈದಿಕ ಪರಂಪರೆಯ ಕಥಾನಕಗಳು ಪ್ರಮುಖವಾಗಿದ್ದವು. ಆದರೆ ಬಸವಾದಿ ಶರಣರ ವಚನ ಚಳವಳಿಯು ಸಾಮಾನ್ಯ ಮನುಷ್ಯನನ್ನೂ ಸಾಹಿತ್ಯದ ನಾಯಕನನ್ನಾಗಿ ರೂಪಿಸುವ ಹೊಸ ಚಿಂತನೆಗೆ ದಾರಿ ಮಾಡಿಕೊಟ್ಟಿತು. ಹರಿಹರರು ಮಾದಾರ ಚೆನ್ನಯ್ಯನವರನ್ನು ಕಥಾನಾಯಕನನ್ನಾಗಿ ಮಾಡಿದರು. ಕೋಳೂರು ಕೊಡಗೂಸು, ಅಲ್ಲಮಪ್ರಭು, ಅಕ್ಕಮಹಾದೇವಿ ಮೊದಲಾದವರ ವ್ಯಕ್ತಿತ್ವಗಳು ಸಾಹಿತ್ಯದ ಪ್ರಮುಖ ಭಾಗವಾದವು.
ಇದರಿಂದ ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮ ದೊರೆಯಿತು. ಸಾಮಾಜಿಕವಾಗಿ, ಧಾರ್ಮಿಕವಾಗಿ ಮತ್ತು ಸಾಹಿತ್ಯಿಕವಾಗಿ ಕನ್ನಡ ಸಂಸ್ಕೃತಿಯ ಬೆಳವಣಿಗೆಗೆ ಬಸವಣ್ಣನವರ ಚಿಂತನೆ ಪ್ರೇರಕ ಶಕ್ತಿಯಾಯಿತು. ಹೀಗಾಗಿ ಬಸವಣ್ಣನವರ ಕುರಿತ ಚರ್ಚೆ ಕೇವಲ ವ್ಯಕ್ತಿಯ ಕುರಿತ ಚರ್ಚೆಯಾಗದೆ ಆತ್ಮಾವಲೋಕನದ ಅಭಿಯಾನವಾಗಬೇಕು ಎಂದು ಬಸವಕೇಂದ್ರ ಶ್ರೀಗಳು ಹೇಳಿದರು.

ಸಾವಯವ ಕೃಷಿಯತ್ತ ರೈತರ ಒಲವು ಹೆಚ್ಚಲಿ
ಕಾರ್ಯಕ್ರಮದಲ್ಲಿ ಕೃಷಿ ಮತ್ತು ಸಾವಯವ ಪದ್ಧತಿಗಳ ಕುರಿತು ನಡೆದ ಚರ್ಚೆಯನ್ನೂ ಸ್ಮರಿಸಲಾಯಿತು. ಕೃಷಿಯಲ್ಲಿ ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡಿ, ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ. ರೈತರು ಪಶುಸಂಗೋಪನೆಯನ್ನೂ ಕೃಷಿಯೊಂದಿಗೆ ಬೆಸೆಯಬೇಕು. ವೈಜ್ಞಾನಿಕವಾಗಿ ತಿಳಿದುಕೊಂಡ ವಿಧಾನಗಳನ್ನು ಸರಿಯಾದ ಪ್ರಮಾಣದಲ್ಲಿ ಅನುಸರಿಸಬೇಕು ಎಂದು ಸಲಹೆ ನೀಡಿದರು.
ಹಸುವಿನ ಗಂಜಲವನ್ನು ಕ್ರಿಮಿನಾಶಕವಾಗಿ ಬಳಸುವ ಕುರಿತು ನೀಡಲಾಗುವ ಸಲಹೆಗಳನ್ನು ಉದಾಹರಿಸಿ, ಯಾವುದೇ ಕೃಷಿ ಪದ್ಧತಿಯನ್ನು ಅನುಸರಿಸುವಾಗ ಅದರ ಪ್ರಮಾಣ ಮತ್ತು ವಿಧಾನವನ್ನು ಸರಿಯಾಗಿ ತಿಳಿದುಕೊಳ್ಳಬೇಕು. ತಪ್ಪು ಪ್ರಮಾಣದಲ್ಲಿ ಬಳಸಿದರೆ ಬೆಳೆಗಳಿಗೆ ಹಾನಿಯಾಗಬಹುದು ಎಂಬುದನ್ನು ವಿವರಿಸಿದರು.
ಮನೆಯಲ್ಲಿನ ಸಕ್ಕರೆಗೆ ಇರುವೆಗಳು ಬಾರದಿರುವುದು, ಜಿರಲೆಗಳಿಗೆ ಹುಳುಗಳು ಹತ್ತದಿರುವುದು ಮುಂತಾದ ಸಾಮಾನ್ಯ ಸಂಗತಿಗಳನ್ನೂ ಗಮನಿಸಿ ಆಹಾರ ಪದಾರ್ಥಗಳ ಗುಣಮಟ್ಟ ಮತ್ತು ರಾಸಾಯನಿಕ ಬಳಕೆಯ ಕುರಿತು ಯೋಚಿಸಬೇಕು. ವಿಷಮುಕ್ತ ಆಹಾರ ಸೇವನೆಯ ಸಂಕಲ್ಪ ಬೆಳೆಸಿಕೊಂಡರೆ ಸಾವಯವ ಕೃಷಿಯ ಯಶಸ್ಸಿಗೆ ಮತ್ತಷ್ಟು ಬಲ ಸಿಗಲಿದೆ ಎಂಬ ಸಂದೇಶವನ್ನು ಶ್ರೀಗಳು ನೀಡಿದರು.
ವಚನ ಸಾಹಿತ್ಯದಲ್ಲೂ ಅಡಗಿದೆ ಕೃಷಿ ವಿಜ್ಞಾನದ ಜ್ಞಾನ
ಕೃಷಿ ವಿಜ್ಞಾನಿ ಡಾ. ಕೆ.ಜಿ. ಶಶಿಧರ್ ಅವರು ವಚನ ಸಾಹಿತ್ಯ ಮತ್ತು ಕೃಷಿ ವಿಜ್ಞಾನದ ನಡುವಿನ ಸಂಬಂಧವನ್ನು ಅತ್ಯಂತ ಆಸಕ್ತಿದಾಯಕವಾಗಿ ಪರಿಚಯಿಸಿದರು.
ಚಿಂತನ ಕಾರ್ತಿಕದ ದಶಮಾನೋತ್ಸವದ ಸಂದರ್ಭದಲ್ಲಿ ಪರಿಚಯವಾದ ಅವರು, ನಂತರ ವಚನಗಳನ್ನು ಗಂಭೀರವಾಗಿ ಅಧ್ಯಯನ ಮಾಡಲು ಆರಂಭಿಸಿದರು. ಕೃಷಿ ವಿಜ್ಞಾನಿಯಾಗಿದ್ದರೂ ಪಠ್ಯಪುಸ್ತಕಗಳಲ್ಲಿ ಓದಿದ್ದ ವಚನಗಳಾಚೆಗೆ ವಚನ ಸಾಹಿತ್ಯದ ವಿಶಾಲ ಜಗತ್ತನ್ನು ಅರಿಯುವ ಪ್ರಯತ್ನ ಮಾಡಿದರು.
ಇದರ ಪರಿಣಾಮವಾಗಿ ‘ವಚನಗಳಲ್ಲಿ ಕೃಷಿ ವಿಜ್ಞಾನ’ ಎಂಬ ವಿಷಯದ ಕುರಿತು ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸುವ ಮಟ್ಟಕ್ಕೆ ಅವರ ಅಧ್ಯಯನ ವಿಸ್ತರಿಸಿತು. ಗುರು ಚಂದ್ರಸೋಮರನ್ನು ಆಹ್ವಾನಿಸಿ ವಚನಗಳಲ್ಲಿನ ಕೃಷಿ ಸಂಬಂಧಿತ ಜ್ಞಾನವನ್ನು ಚರ್ಚೆಗೆ ಒಳಪಡಿಸಲಾಯಿತು.
ಕಾಳಸಿದ್ಧೇಶ್ವರರ ವಚನಗಳಲ್ಲಿ ಮಣ್ಣಿನ ಗುಣ, ಆಹಾರ ಪದಾರ್ಥಗಳು ಮತ್ತು ಆರೋಗ್ಯದ ನಡುವಿನ ಸಂಬಂಧವನ್ನು ವಿವರಿಸುವ ವಿಚಾರಗಳಿವೆ. ಯಾವ ಮಣ್ಣಿನಲ್ಲಿ ಬೆಳೆದ ಆಹಾರ ಪದಾರ್ಥಗಳನ್ನು ಸೇವಿಸಬೇಕು, ಯಾವ ಆಹಾರ ಆರೋಗ್ಯಕ್ಕೆ ಪೂರಕವಾಗುತ್ತದೆ ಎಂಬ ಅನುಭವಾಧಾರಿತ ಜ್ಞಾನ ವಚನಗಳಲ್ಲಿ ದೊರೆಯುತ್ತದೆ ಎಂದು ವಿವರಿಸಿದರು.
ಹಸುವಿನ ಹಾಲಿನ ಗುಣಮಟ್ಟ, ಅದರಲ್ಲಿನ ಪೌಷ್ಟಿಕಾಂಶ ಹಾಗೂ ಸಮಾಜದ ವಿವಿಧ ವರ್ಗಗಳಿಗೆ ಆಹಾರ ಹಂಚುವ ಕುರಿತು ವಚನಗಳಲ್ಲಿ ವ್ಯಕ್ತವಾಗಿರುವ ವಿಚಾರಗಳನ್ನೂ ಉಲ್ಲೇಖಿಸಿದರು. ಇಂದಿನ ವಿಜ್ಞಾನ ಪ್ರಯೋಗಾಲಯಗಳಲ್ಲಿ ಸಂಶೋಧನೆ ಮೂಲಕ ಕಂಡುಕೊಳ್ಳುವ ಅನೇಕ ಸಂಗತಿಗಳನ್ನು ಹಿಂದಿನ ಶರಣರು ತಮ್ಮ ಅನುಭವದ ಮೂಲಕವೇ ಅರಿತು ವಚನಗಳಲ್ಲಿ ದಾಖಲಿಸಿದ್ದಾರೆ ಎಂಬುದು ವಚನ ಸಾಹಿತ್ಯದ ಮಹತ್ವವನ್ನು ತೋರಿಸುತ್ತದೆ.
ಸಿದ್ಧರಾಮೇಶ್ವರರ ಕೃಷಿ ಸಂಬಂಧಿತ ವಿಚಾರಗಳು, ಕಾಳಸಿದ್ಧೇಶ್ವರರ ವಚನಗಳು ಹಾಗೂ ಕೃಷಿಯ ವಿವಿಧ ವೈಜ್ಞಾನಿಕ ಪದ್ಧತಿಗಳ ಕುರಿತು ಡಾ. ಶಶಿಧರ್ ಅವರು ನಡೆಸಿರುವ ಅಧ್ಯಯನ ಶ್ಲಾಘನೀಯವಾಗಿದೆ ಎಂದು ಶ್ರೀಗಳು ಅಭಿನಂದಿಸಿದರು.
ಸಾಧಕರಿಗೆ ಗೌರವ, ಸಂಘಟನೆಯ ಸೇವೆಗೆ ಮೆಚ್ಚುಗೆ
ಕಾರ್ಯಕ್ರಮ ಉದ್ಘಾಟಿಸಿದ ಡಾ. ಎಂ.ವಿ. ಧನಂಜಯ ಅವರ ಕೃಷಿ ಕ್ಷೇತ್ರದ ಸಾಧನೆಗಳನ್ನೂ ಸ್ಮರಿಸಲಾಯಿತು. ಗುಲಾಬಿ, ಕುಂಬಳಕಾಯಿ, ರಾಗಿ, ಜೋಳ ಸೇರಿದಂತೆ ವಿವಿಧ ಬೆಳೆಗಳ ಅಭಿವೃದ್ಧಿಗೆ ಅವರು ನೀಡಿರುವ ಕೊಡುಗೆಗಳು ರೈತರಿಗೆ ಅನುಕೂಲವಾಗಿವೆ. ಕರ್ನಾಟಕದ ರಾಜ್ಯಪಾಲರಿಂದ ಹತ್ತು ಬಾರಿ ಗೌರವ ಡಾಕ್ಟರೇಟ್ಗೆ ನಾಮನಿರ್ದೇಶನಗೊಂಡಿರುವುದು ಅವರ ಸಂಶೋಧನೆ ಮತ್ತು ಸಾಧನೆಗೆ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸೂಡಾ ಅಧ್ಯಕ್ಷ ಡಾ. ಸಿ.ಜಿ. ಮಧುಸೂದನ್ ಅವರು ಬಸವಣ್ಣನವರು ಯಾವುದೇ ಒಂದು ಜನಾಂಗಕ್ಕೆ ಸೀಮಿತವಾದವರಲ್ಲ, ಅವರು ಎಲ್ಲರಿಗೂ ಸೇರಿದ ಮಹಾನ್ ವ್ಯಕ್ತಿತ್ವ ಎಂದು ಹೇಳಿದರು. ಬಸವಣ್ಣನವರ ಚಿಂತನೆಗಳು ಸಾರ್ವಕಾಲಿಕವಾಗಿದ್ದು, ಸಮಾಜದ ಎಲ್ಲ ವರ್ಗಗಳಿಗೂ ಮಾರ್ಗದರ್ಶನ ನೀಡುತ್ತವೆ ಎಂಬ ಸಂದೇಶ ನೀಡಿದರು.
ಬಸವಕೇಂದ್ರದ ಆರಂಭದ ದಿನಗಳಿಂದಲೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದ ಗಿರೀಶ್ ಎಚ್.ಪಿ. ಅವರು ಮೊದಲ ಚಿಂತನ ಕಾರ್ತಿಕದ ಆಹ್ವಾನ ಪತ್ರಿಕೆಯ ವಿನ್ಯಾಸ ಮತ್ತು ಮುದ್ರಣ ಕಾರ್ಯದಲ್ಲಿ ಸ್ನೇಹಿತರೊಂದಿಗೆ ಕೈಜೋಡಿಸಿದ್ದನ್ನು ಸ್ಮರಿಸಲಾಯಿತು. ಇಂದು ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕರಾಗಿ ಆಯ್ಕೆಯಾಗಿರುವುದು ಶಿವಮೊಗ್ಗದವರಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಅಭಿನಂದಿಸಲಾಯಿತು.

ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ನೂತನ ಅನುಭವ ಮಂಟಪದ ಮಹತ್ವವನ್ನು ವಿವರಿಸಿದ ಅವರು, ಹಲವು ಸರ್ಕಾರಗಳ ಕೊಡುಗೆ ಮತ್ತು ಪರಿಶ್ರಮದಿಂದ ಸುಮಾರು ₹700ರಿಂದ ₹1,000 ಕೋಟಿ ವೆಚ್ಚದಲ್ಲಿ ಈ ಯೋಜನೆ ರೂಪುಗೊಳ್ಳುತ್ತಿದೆ ಎಂದು ತಿಳಿಸಿದರು. ಬಸವಣ್ಣನವರ ಅನುಭವ ಮಂಟಪದ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ರೀತಿಯಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ವಾಸ್ತುಶಿಲ್ಪದೊಂದಿಗೆ ಈ ಕಟ್ಟಡ ನಿರ್ಮಾಣವಾಗುತ್ತಿದೆ. ದೇಶದ ಸ್ವಾತಂತ್ರ್ಯ ಹೋರಾಟಗಾರರು, ಪ್ರಜಾಪ್ರಭುತ್ವದ ಬೆಳವಣಿಗೆಗೆ ಶ್ರಮಿಸಿದ ಮಹನೀಯರ ಹೆಸರುಗಳನ್ನು ದಾಖಲಿಸುವ ಮಹತ್ವದ ಕಾರ್ಯವೂ ಅಲ್ಲಿ ನಡೆಯುತ್ತಿದೆ ಎಂದು ಹೇಳಿದರು.

ನಿವೃತ್ತಿಯ ನಂತರವೂ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಲು ಕರೆ
ವಿದ್ಯುತ್ ಇಲಾಖೆಯಲ್ಲಿ 40 ವರ್ಷಗಳಿಗೂ ಹೆಚ್ಚು ಕಾಲ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ಸೋಮಶೇಖರ್ ಹಾಗೂ ಅವರ ಕುಟುಂಬದವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ನಿವೃತ್ತಿಯ ನಂತರದ ಜೀವನ ಕುಟುಂಬಕ್ಕೆ ಮಾತ್ರ ಸೀಮಿತವಾಗದೆ, ಸಮಾಜದ ಸೇವೆಯಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಆರೋಗ್ಯ ಮತ್ತು ಅನುಭವವನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳಬೇಕು ಎಂದು ಶುಭ ಹಾರೈಸಲಾಯಿತು.
ವಿದ್ಯುತ್ ಇಲಾಖೆ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಎಸ್.ಜಿ. ಶಶಿಧರ್ ಅವರು ಸಂಘಟನೆಯನ್ನು ರಾಜ್ಯಮಟ್ಟದಲ್ಲಿ ಬಲಪಡಿಸಲು ನಡೆಸುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಲಾಯಿತು. ಯುವಕರು, ಅನುಭವಿಗಳು ಮತ್ತು ನಿವೃತ್ತ ನೌಕರರನ್ನು ಒಗ್ಗೂಡಿಸಿ ಶರಣ ಪರಂಪರೆಯ ಜನರನ್ನು ಒಂದೇ ವೇದಿಕೆಗೆ ತರುವ ಕೆಲಸ ನಡೆಯುತ್ತಿದೆ. ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಿಸುವ ಉದ್ದೇಶದಿಂದ ವಿನ್ಯಾಸ ಸಿದ್ಧಪಡಿಸಿರುವುದು ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.

ಸಂಘದ ವತಿಯಿಂದ ಪ್ರತಿ ವರ್ಷ ಚಿಂತನ ಕಾರ್ತಿಕದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿಕೊಂಡು ಬರುತ್ತಿರುವುದು ವಿಶೇಷ. ಅರ್ಥಪೂರ್ಣ ಕ್ಯಾಲೆಂಡರ್, ಸ್ಮರಣ ಸಂಚಿಕೆ, ಬಸವ ಜಯಂತಿ ಆಚರಣೆ ಹಾಗೂ ಸಂಕಷ್ಟದಲ್ಲಿರುವವರಿಗೆ ನೆರವು ನೀಡುವಂತಹ ಅನೇಕ ಸಮಾಜಮುಖಿ ಕಾರ್ಯಗಳನ್ನು ಸಂಘ ನಡೆಸುತ್ತಿದೆ. ಈ ಕಾರ್ಯಗಳಿಗೆ ಇನ್ನಷ್ಟು ಶಕ್ತಿ ದೊರೆಯಲಿ ಎಂದು ಹಾರೈಸಿದರು.
ಅಕ್ಕನ ಬಳಗದವರು ಮತ್ತು ಕದಂಬ ಸಮಾಜದವರು ವಚನ ಗಾಯನದ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು. ಎಸ್.ಜಿ. ಶಶಿಧರ್ ಅವರು ರಚಿಸಿದ ಪದ್ಯವನ್ನು ನಾಗರತ್ನ ಅವರ ಮೂಲಕ ಪ್ರಸ್ತುತಪಡಿಸಿದ್ದು 20ನೇ ವರ್ಷದ ಸಂಭ್ರಮಕ್ಕೆ ಮತ್ತಷ್ಟು ಅರ್ಥಪೂರ್ಣತೆಯನ್ನು ತಂದಿತು ಎಂದು ಬಸವಕೇಂದ್ರ ಶ್ರೀಗಳು ಹೇಳಿದರು.

ಮನೆಮನೆಗೆ ಬಸವತತ್ವದ ಚಿಂತನೆ – ಮುಂದುವರಿಯಲಿ ಅಭಿಯಾನ
ಚಿಂತನ ಕಾರ್ತಿಕದ ಮುಂದಿನ ಕಾರ್ಯಕ್ರಮವು ನವೆಂಬರ್ 15ರಂದು ಸಂಜೆ 6.30ಕ್ಕೆ ಶಿವಮೊಗ್ಗದ ಸೊಮನಕೊಪ್ಪ ರಸ್ತೆ, ಜೆ.ಎಸ್. ಪಟೇಲ್ ಬಡಾವಣೆಯಲ್ಲಿರುವ ಶರಣ ಸಂಪತ್ ಕುಮಾರ್ ಜಿ.ಎಸ್. ಅವರ ಮನೆಯಲ್ಲಿ ನಡೆಯಲಿದೆ. ‘ಬಸವಣ್ಣ ಮತ್ತು ಧರ್ಮ’ ವಿಷಯದ ಕುರಿತು ಹಾರ್ನಳ್ಳಿ ಕರಿಬಸವಯ್ಯ ಅವರು ಉಪನ್ಯಾಸ ನೀಡಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಆಹ್ವಾನಿಸಿದರು.
ಚಿಂತನ ಕಾರ್ತಿಕದ ಸಮಾರೋಪ ಸಮಾರಂಭವನ್ನು ಸುವರ್ಣ ಸಂಸ್ಕೃತಿ ಭವನದಲ್ಲಿ ಆಯೋಜಿಸುವ ಹಾಗೂ ಸಾಣೇಹಳ್ಳಿಯ ಶ್ರೀಗಳ ಶಿವಸಂಚಾರ ನಾಟಕಗಳನ್ನು ಪ್ರದರ್ಶಿಸುವ ಕುರಿತು ಚಿಂತನೆ ನಡೆಸಲಾಗಿದೆ. ಸ್ಥಳ ಮತ್ತು ದಿನಾಂಕದ ಹೊಂದಾಣಿಕೆ ದೊರೆತರೆ ಸಮಾರೋಪ ಸಮಾರಂಭದೊಂದಿಗೆ ನಾಟಕೋತ್ಸವವನ್ನೂ ಆಯೋಜಿಸುವ ಉದ್ದೇಶವಿದೆ ಎಂದು ಬಸವಕೇಂದ್ರ ಶ್ರೀಗಳು ತಿಳಿಸಿದರು.
ಎರಡು ದಶಕಗಳ ಹಿಂದೆ ಕೆಲವೇ ಜನರೊಂದಿಗೆ, ಹಳ್ಳಿಗಳ ದೇವಸ್ಥಾನದ ಆವರಣದಲ್ಲಿ ನಾಲ್ಕು ಕುರ್ಚಿಗಳನ್ನು ಹಾಕಿಕೊಂಡು ಆರಂಭವಾದ ಚಿಂತನ ಕಾರ್ತಿಕ ಇಂದು ಸಮಾಜದ ವಿವಿಧ ಕ್ಷೇತ್ರಗಳ ಸಾಧಕರು, ವಿದ್ವಾಂಸರು, ಕೃಷಿ ವಿಜ್ಞಾನಿಗಳು, ಯುವಕರು ಮತ್ತು ಸಾರ್ವಜನಿಕರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಚಿಂತನಾ ವೇದಿಕೆಯಾಗಿ ಬೆಳೆದಿದೆ. ಈ ಪಯಣಕ್ಕೆ ಬೆಂಬಲ ನೀಡಿದ ಪ್ರತಿಯೊಬ್ಬರ ಸಹಕಾರವನ್ನು ಸ್ಮರಿಸಿದ ಬಸವಕೇಂದ್ರ ಶ್ರೀಗಳು, ಮುಂದಿನ ದಿನಗಳಲ್ಲಿಯೂ ಬಸವತತ್ವದ ಚಿಂತನೆ ಮನೆಮನೆಗೂ ತಲುಪಬೇಕು. ಶರಣರ ವಚನಗಳು ಕೇವಲ ಪುಸ್ತಕಗಳಲ್ಲಿ ಉಳಿಯದೆ ಜನರ ಬದುಕಿನ ನಡೆ-ನುಡಿಗಳಲ್ಲಿ ಪ್ರತಿಬಿಂಬಿಸಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬಸವಕೇಂದ್ರ, ಶಿವಮೊಗ್ಗದ ಅಧ್ಯಕ್ಷ ಜಿ. ಬೆನಕಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು. ಡಾ. ಕೆ.ಸಿ. ಶಶಿಧರ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು ಹಾಗೂ ಲವಕುಮಾರ್ ನಿರೂಪಣೆ ಮಾಡಿದರು.
ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಜಿ. ಮಧುಸೂದನ್, ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಹೆಚ್.ಪಿ. ಗಿರೀಶ್, ವಿದ್ಯುತ್ ಇಲಾಖೆ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಜಿ. ಶಶಿಧರ್, ಚಂದ್ರಶೇಖರ್ ತಳಗಿಹಾಳ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಶಿವಮೊಗ್ಗದ ಅಕ್ಕನ ಬಳಗದಿಂದ ವಚನಗಾಯನ ನಡೆಯಿತು. ವಿದ್ಯುತ್ ಇಲಾಖೆ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸೇವಾರ್ಥ ಕಾರ್ಯಕ್ರಮ ನೆರವೇರಿಸಲಾಯಿತು.









