ವಚನ ಸಾಹಿತ್ಯದಲ್ಲಿ ಅಡಕವಾಗಿರುವ ಕೃಷಿ ವಿಜ್ಞಾನ, ಮಣ್ಣಿನ ಆರೋಗ್ಯ ಮತ್ತು ಮಾನವೀಯ ಮೌಲ್ಯಗಳ ಕುರಿತು ವಿಶೇಷ ವಿಶ್ಲೇಷಣೆ
ಶಿವಮೊಗ್ಗ: ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಹಾಗೂ ಶರಣರು ಸಮಾಜಕ್ಕೆ ನೀಡಿದ ಸಮಾನತೆ, ಕಾಯಕ, ದಾಸೋಹ, ದಯೆ ಮತ್ತು ಮಾನವೀಯತೆಯ ಸಂದೇಶಗಳು ಇಂದಿನ ಆಧುನಿಕ ಜಗತ್ತಿಗೂ ದಾರಿದೀಪವಾಗಿವೆ. ಅಂದು ಶರಣರು ವಚನಗಳ ಮೂಲಕ ಸಾರಿದ ಜೀವನದರ್ಶನವನ್ನು ಇಂದು ನಾವು ವೈಜ್ಞಾನಿಕ ಸಂಶೋಧನೆಗಳ ಮೂಲಕ ಮತ್ತೆ ಅರಿಯುತ್ತಿದ್ದೇವೆ. ಮಣ್ಣಿನ ಗುಣ, ಬೆಳೆಯ ಗುಣಮಟ್ಟ, ಆಹಾರ ಪದಾರ್ಥಗಳ ಆರೋಗ್ಯಕರ ಬಳಕೆ, ಕೃಷಿಯಲ್ಲಿ ರಾಸಾಯನಿಕಗಳ ಮಿತಬಳಕೆ ಸೇರಿದಂತೆ ಅನೇಕ ವಿಚಾರಗಳಿಗೆ ವಚನ ಸಾಹಿತ್ಯದಲ್ಲಿಯೇ ಮೌಲಿಕ ಚಿಂತನೆಗಳಿವೆ. ಆದರೆ ವಚನಗಳನ್ನು ಕೇವಲ ಓದುವುದರಿಂದ ಅಥವಾ ಕೇಳುವುದರಿಂದ ಸಮಾಜ ಬದಲಾಗುವುದಿಲ್ಲ. ಅವುಗಳ ಆಶಯಗಳನ್ನು ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಬಸವಣ್ಣನವರ ಕನಸಿನ ಸಮಸಮಾಜ ನಿರ್ಮಾಣ ಸಾಧ್ಯ ಎಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿಯ ಉಪಕುಲಪತಿ ಎಂ.ವಿ. ಧನಂಜಯ ಅವರು ಹೇಳಿದರು.
ನಗರದ ಬಸವಕೇಂದ್ರದಲ್ಲಿ ಶ್ರೀ ಬಸವತತ್ವ ಪೀಠ, ಚಿಕ್ಕಮಗಳೂರು ಹಾಗೂ ಬಸವಕೇಂದ್ರ, ಶಿವಮೊಗ್ಗದ ಆಶ್ರಯದಲ್ಲಿ ಪೂಜ್ಯ ಡಾ. ಬಸವ ಮರುಳಸಿದ್ಧ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಆಯೋಜಿಸಿದ್ದ 20ನೇ ವರ್ಷದ ಚಿಂತನ ಕಾರ್ತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತರಳಬಾಳು ಹುಣ್ಣಿಮೆ ಸೇರಿದಂತೆ ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಗುರುಗಳು ನೀಡಿದ ಅವಕಾಶವನ್ನು ತಮ್ಮ ಜೀವನದ ಸೌಭಾಗ್ಯವೆಂದು ಭಾವಿಸಿರುವುದಾಗಿ ತಿಳಿಸಿದ ಅವರು, ಶರಣರ ವಿಚಾರಧಾರೆಗಳನ್ನು ಅಧ್ಯಯನ ಮಾಡುವುದರ ಜೊತೆಗೆ ಅವುಗಳನ್ನು ಇಂದಿನ ಕೃಷಿ, ವಿಜ್ಞಾನ ಮತ್ತು ಸಾಮಾಜಿಕ ವ್ಯವಸ್ಥೆಗೆ ಹೇಗೆ ಅನ್ವಯಿಸಬಹುದು ಎಂಬುದನ್ನು ವಿವರಿಸಿದರು.

ವಚನವೆಂದರೆ ಕೇವಲ ಸಾಹಿತ್ಯವಲ್ಲ, ಬದುಕಿನ ದರ್ಶನ
ವಚನ ಸಾಹಿತ್ಯದ ಮಹತ್ವವನ್ನು ವಿವರಿಸಿದ ಧನಂಜಯ, ವಚನವೆಂದರೆ ಕೇವಲ ಸಾಹಿತ್ಯಿಕ ಅಭಿವ್ಯಕ್ತಿಯಲ್ಲ. ಅದೊಂದು ಜೀವನದರ್ಶನ, ಆತ್ಮಸಾಕ್ಷಿಯ ಧ್ವನಿ. ವ್ಯಕ್ತಿಯ ನಿತ್ಯದ ನಡೆ-ನುಡಿ, ಕುಟುಂಬದ ಸಂಬಂಧಗಳು, ಸಾಮಾಜಿಕ ಜವಾಬ್ದಾರಿಗಳು ಹಾಗೂ ವಿಶ್ವದ ಒಳಿತಿನ ಕುರಿತು ಚಿಂತನೆಗೆ ಪ್ರೇರಣೆ ನೀಡುವ ಶಕ್ತಿಯಾಗಿದೆ. ಧಾರ್ಮಿಕ ಉಪದೇಶಕ್ಕೆ ಮಾತ್ರ ಸೀಮಿತವಾಗದೆ ವ್ಯಕ್ತಿ, ಸಮಾಜ ಮತ್ತು ವಿಶ್ವದ ಪರಿವರ್ತನೆಗೆ ಮಾರ್ಗದರ್ಶನ ನೀಡುವ ವಿಶಿಷ್ಟ ಸಾಹಿತ್ಯ ವಚನ ಸಾಹಿತ್ಯವಾಗಿದೆ ಎಂದರು.
ಬಸವಣ್ಣನವರು ಕನ್ನಡ ನಾಡಿನ ಮಹಾನ್ ದಾರ್ಶನಿಕರು, ಸಮಾಜ ಸುಧಾರಕರು ಮತ್ತು ಮಾನವೀಯ ಮೌಲ್ಯಗಳ ಪ್ರತಿಪಾದಕರು. ಹನ್ನೆರಡನೇ ಶತಮಾನದಲ್ಲಿಯೇ ಸಮಾನತೆ, ಕಾಯಕ, ದಾಸೋಹ, ಸ್ತ್ರೀ ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ವೈಚಾರಿಕ ಸ್ವಾತಂತ್ರ್ಯದ ಆಶಯಗಳನ್ನು ಜಗತ್ತಿಗೆ ಸಾರಿದರು. ಸಾಮಾಜಿಕ ಬದಲಾವಣೆಗೆ ಚಿಂತನೆ ಮತ್ತು ಸಂವಾದದ ವೇದಿಕೆ ಅಗತ್ಯವೆಂದು ತೋರಿಸಿಕೊಟ್ಟ ಅನುಭವ ಮಂಟಪವು ಜಗತ್ತಿನ ಆರಂಭಿಕ ಜನಸಂಸತ್ತುಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಇಂದಿನ 21ನೇ ಶತಮಾನದಲ್ಲಿಯೂ ದ್ವೇಷ, ಅಸೂಯೆ, ಅಸಮಾನತೆ ಮತ್ತು ಜಾತೀಯತೆಗಳು ಸಮಾಜದಲ್ಲಿ ಕಾಣಿಸುತ್ತಿರುವಾಗ, ಹನ್ನೆರಡನೇ ಶತಮಾನದಲ್ಲಿಯೇ ಇಂತಹ ವಿಶಾಲ ಚಿಂತನೆಗಳನ್ನು ರೂಪಿಸಿದ ಬಸವಣ್ಣನವರ ದೂರದೃಷ್ಟಿಯನ್ನು ನಾವು ಅರಿಯಬೇಕು ಎಂದು ಹೇಳಿದರು.
ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರ್ಕಾರ ಗೌರವಿಸಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. ವಚನ ಸಾಹಿತ್ಯ ಕನ್ನಡದ ಅಸ್ಮಿತೆಯೂ ಹೌದು. ಜನರ ಭಾಷೆಯಲ್ಲಿಯೇ ಜನರಿಗಾಗಿ, ಜನರಿಂದ ರೂಪುಗೊಂಡ ಸರಳ ಮತ್ತು ಅರ್ಥಪೂರ್ಣ ಸಾಹಿತ್ಯ ಬೇರೆಡೆ ಇಷ್ಟು ವ್ಯಾಪಕವಾಗಿ ಕಾಣುವುದು ಅಪರೂಪ. ಶರಣರು ಸಮಾಜದಲ್ಲಿ ನಡೆಯುತ್ತಿದ್ದ ಸಂಗತಿಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವ ಭಾಷೆಯಲ್ಲಿ ವಚನಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಈ ಸಾಹಿತ್ಯಕ್ಕೆ ಇನ್ನಷ್ಟು ಪ್ರಚಾರ ನೀಡುವುದರ ಜೊತೆಗೆ ಯುವಜನರಲ್ಲಿ ಅದರ ಅರಿವು ಮೂಡಿಸಿ, ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.

ಮಣ್ಣಿನ ಗುಣ ಮತ್ತು ಮಾನವನ ಆರೋಗ್ಯದ ಸಂಬಂಧವನ್ನು ಸಾರಿದ ಶರಣರು
ಕೃಷಿ ವಿಜ್ಞಾನ ಮತ್ತು ವಚನ ಸಾಹಿತ್ಯದ ನಡುವಿನ ಸಂಬಂಧವನ್ನು ವಿಶ್ಲೇಷಿಸಿದ ಅವರು, ಹನ್ನೆರಡನೇ ಶತಮಾನದ ಶರಣರು ಕೃಷಿ ಕ್ಷೇತ್ರದ ಬಗ್ಗೆಯೂ ಆಳವಾದ ಚಿಂತನೆಗಳನ್ನು ಹೊಂದಿದ್ದರು ಎಂಬುದಕ್ಕೆ ಕಾಡಸಿದ್ಧೇಶ್ವರರ ವಚನವನ್ನು ಉದಾಹರಿಸಿದರು.
ಸೌಳು ಭೂಮಿಯಲ್ಲಿ ಬೆಳೆದ ಹುಳ್ಳಿ, ಮೂಲಂಗಿ, ಬೆಳ್ಳುಳ್ಳಿ ತಿಂದವರಿಗೆ ರೋಗ ಪ್ರಾಪ್ತಿಯಾಗುತ್ತದೆ ಕೆಂಪು ಮಣ್ಣಿನಲ್ಲಿ ಬೆಳೆದ ಇಂತಹ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ರೋಗ ಪರಿಹಾರವಾಗುತ್ತದೆ ಎಂಬ ಆಶಯವನ್ನು ಒಳಗೊಂಡ ವಚನವನ್ನು ಉಲ್ಲೇಖಿಸಿದರು.
ಮಣ್ಣಿನ ಗುಣಧರ್ಮಕ್ಕೂ ಬೆಳೆಯ ಗುಣಮಟ್ಟಕ್ಕೂ, ಬೆಳೆಯ ಗುಣಮಟ್ಟಕ್ಕೂ ಮಾನವನ ಆರೋಗ್ಯಕ್ಕೂ ಇರುವ ಸಂಬಂಧವನ್ನು ಅಂದಿನ ಶರಣರು ತಮ್ಮ ಅನುಭವ ಮತ್ತು ಅಧ್ಯಯನದ ಮೂಲಕ ಗುರುತಿಸಿದ್ದರು. ಇಂದು ಕೃಷಿ ವಿಜ್ಞಾನಿಗಳು ಮಣ್ಣಿನ ಆರೋಗ್ಯ, ಪೋಷಕಾಂಶಗಳು, ಆಹಾರದ ಗುಣಮಟ್ಟ ಮತ್ತು ಮಾನವನ ಆರೋಗ್ಯದ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ. ಆದರೆ ಈ ವಿಚಾರಗಳ ಮೂಲಭೂತ ಚಿಂತನೆಗಳು ಹನ್ನೆರಡನೇ ಶತಮಾನದ ವಚನಗಳಲ್ಲಿಯೇ ವ್ಯಕ್ತವಾಗಿರುವುದು ವಿಶೇಷ ಎಂದರು.
ಭಾರತದಲ್ಲಿ ಸುಮಾರು 67 ಲಕ್ಷ ಹೆಕ್ಟೇರ್ ಪ್ರದೇಶ ಸೌಳು ಭೂಮಿಯಾಗಿದ್ದು, ಕರ್ನಾಟಕದಲ್ಲಿ ಸುಮಾರು 4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈ ಸಮಸ್ಯೆ ಇದೆ. ಸೌಳು ಮಣ್ಣಿನಿಂದ ಕೃಷಿ ಉತ್ಪಾದನೆಯ ಮೇಲೆ ವಾರ್ಷಿಕವಾಗಿ ಸಾವಿರಾರು ಕೋಟಿ ರೂಪಾಯಿಗಳಷ್ಟು ನಷ್ಟ ಉಂಟಾಗುತ್ತಿದೆ. ಇಂತಹ ಭೂಮಿಯನ್ನು ಸುಧಾರಿಸಿ, ಮಣ್ಣಿನ ಗುಣಮಟ್ಟ ಹೆಚ್ಚಿಸಿ, ಪೌಷ್ಟಿಕಾಂಶಯುಕ್ತ ಬೆಳೆಗಳನ್ನು ಬೆಳೆಯುವ ಕುರಿತು ಹೆಚ್ಚಿನ ಸಂಶೋಧನೆ ನಡೆಸಬೇಕಾಗಿದೆ. ವಚನಗಳಲ್ಲಿನ ಇಂತಹ ಚಿಂತನೆಗಳು ಆಧುನಿಕ ಕೃಷಿ ಸಂಶೋಧನೆಗೆ ಹೊಸ ದಿಕ್ಕನ್ನು ನೀಡಬಲ್ಲವು ಎಂದು ಅಭಿಪ್ರಾಯಪಟ್ಟರು.

ಅಧಿಕಾರ ಹೆಚ್ಚಿದಂತೆ ವಿನಮ್ರತೆ ಬೆಳೆಯಬೇಕು
ಬಸವಣ್ಣನವರ ಮತ್ತೊಂದು ವಚನವನ್ನು ಉಲ್ಲೇಖಿಸಿದ ಅವರು,
‘ಲಿಂಗವ ಪೂಜಿಸಿದ ಬಳಿಕ ಜಂಗಮಕ್ಕಂಜಲೇಬೇಕು,ದಕ್ಕ ನುಂಗಿದಂತೆ ಬೆರೆತುಕೊಂಡಿರಬೇಡ: ಬೀಗಿ ಬೆಳೆದ ಗೊನೆವಾಳೆಯಂತೆ ಬಾಗಿಕೊಂಡಿದ್ದಡೆ ಬೇಡಿದ ಪದವಿಯನೀವ ಕೂಡಲಸಂಗಮದೇವ‘ ಎಂಬ ವಚನದಲ್ಲಿ ಅಡಕವಾಗಿರುವ ಜೀವನ ಸಂದೇಶವನ್ನು ವಿವರಿಸಿದರು.
ಬೆಳೆ ಬೆಳೆದಂತೆ ತೆನೆ ಬಾಗುವಂತೆ, ಜ್ಞಾನ, ಅಧಿಕಾರ, ಸಂಪತ್ತು ಮತ್ತು ಸಾಧನೆ ಹೆಚ್ಚಾದಂತೆ ಮನುಷ್ಯನಲ್ಲಿ ವಿನಮ್ರತೆ ಹೆಚ್ಚಾಗಬೇಕು. ದೊಡ್ಡ ಹುದ್ದೆ ಅಥವಾ ಅಧಿಕಾರ ಸಿಕ್ಕಾಗ ಸಾಮಾನ್ಯ ಜನರಿಂದ ದೂರವಾಗುವ ಮನೋಭಾವ ಬೆಳೆಸಿಕೊಳ್ಳಬಾರದು. ಎತ್ತರಕ್ಕೆ ಬೆಳೆದಷ್ಟು ಜನಸಾಮಾನ್ಯರೊಂದಿಗೆ ಹೆಚ್ಚು ಆತ್ಮೀಯವಾಗಿ ಬೆರೆಯಬೇಕು. ಈ ಮಹತ್ವದ ಜೀವನಪಾಠವನ್ನು ಬಸವಣ್ಣನವರು ಅಂದಿನ ಕಾಲದಲ್ಲಿಯೇ ಸಾರಿದ್ದಾರೆ ಎಂದರು.

ಎಲ್ಲರನ್ನೂ ನಮ್ಮವರೆಂದು ಕಾಣುವ ಮನೋಭಾವ ಬೆಳೆಸಿಕೊಳ್ಳಿ
ಸಾಮಾಜಿಕ ಸಮಾನತೆಯ ಕುರಿತು ಮಾತನಾಡಿದ ಅವರು, ಬಸವಣ್ಣನವರ ‘ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯ; ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯ’ ಎಂಬ ವಚನವನ್ನು ಉಲ್ಲೇಖಿಸಿದರು.
ಯಾರನ್ನೂ ಹೊರಗಿನವರೆಂದು ಕಾಣದೆ ಎಲ್ಲರನ್ನೂ ನಮ್ಮವರೆಂದು ಸ್ವೀಕರಿಸುವ ವಿಶಾಲ ಮನೋಭಾವ ಸಮಾಜದಲ್ಲಿ ಬೆಳೆಯಬೇಕು. ಸಣ್ಣ ರೈತರು, ಕೃಷಿ ಕಾರ್ಮಿಕರು, ಮಹಿಳೆಯರು, ಹಿಂದುಳಿದ ವರ್ಗಗಳು ಸೇರಿದಂತೆ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವುದು ನಮ್ಮ ಜವಾಬ್ದಾರಿಯಾಗಿದೆ. ಕೃಷಿ ಕ್ಷೇತ್ರದಲ್ಲಿಯೂ ರೈತರ ನಡುವೆ ಯಾವುದೇ ತಾರತಮ್ಯವಿಲ್ಲದೆ ಪ್ರತಿಯೊಬ್ಬರಿಗೂ ಜ್ಞಾನ, ತಂತ್ರಜ್ಞಾನ ಮತ್ತು ಸೌಲಭ್ಯಗಳು ತಲುಪಬೇಕು ಎಂದು ಹೇಳಿದರು.
ಆದರೆ ಇಂದಿನ ಸಮಾಜದಲ್ಲಿ ಲಿಂಗಾಯತ ಧರ್ಮದ ಮೂಲ ಆಶಯಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬಸವಣ್ಣನವರು ಜಾತಿ-ಮೇಲುಕೀಳುಗಳ ಭೇದವಿಲ್ಲದ ಸಮಾನತೆಯ ಸಮಾಜವನ್ನು ಕಟ್ಟಲು ಪ್ರಯತ್ನಿಸಿದ್ದರು. ವಿವಿಧ ಹಿನ್ನೆಲೆಯ ಜನರು ಶರಣರ ತತ್ವಗಳನ್ನು ಒಪ್ಪಿಕೊಂಡು ಅನುಭವ ಮಂಟಪದಲ್ಲಿ ಪಾಲ್ಗೊಂಡಿದ್ದರು. ಇಂತಹ ವಿಶಾಲವಾದ ಸಮಾನತೆಯ ಆಶಯವನ್ನು ಹೊಂದಿರುವ ಧರ್ಮವನ್ನು ನಾವು ಮತ್ತೆ ಜಾತಿ ಮತ್ತು ಉಪಜಾತಿಗಳ ಸಂಕೋಲೆಯಲ್ಲಿ ಬಂಧಿಸುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ವಿಷಾದಿಸಿದರು.
ಇಂದಿಗೂ ವಿವಿಧ ಅರ್ಜಿಗಳಲ್ಲಿ ಉಪಜಾತಿಯ ವಿವರಗಳನ್ನು ಕೇಳುವ ವ್ಯವಸ್ಥೆ ಇದೆ. ಇದು ಸಮಾಜದಲ್ಲಿ ಜಾತಿ ಗುರುತಿನ ಪ್ರಭಾವ ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ತೋರಿಸುತ್ತದೆ. ಬಸವಣ್ಣನವರ ಸಮಾನತೆಯ ತತ್ವವನ್ನು ಗೌರವಿಸುವುದಾದರೆ ಜಾತಿ, ಉಪಜಾತಿಗಳ ಸಂಕುಚಿತ ಮನೋಭಾವದಿಂದ ಹೊರಬರಬೇಕು. ಯುವಜನರಲ್ಲಿ ವಿಶಾಲ ಮನೋಭಾವ ಬೆಳೆಸಬೇಕು. ಅಂತರಜಾತಿ ವಿವಾಹಗಳು ಸೇರಿದಂತೆ ಜಾತಿ ಭೇದಗಳನ್ನು ಕಡಿಮೆ ಮಾಡುವ ಸಾಮಾಜಿಕ ಬದಲಾವಣೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಕರೆ ನೀಡಿದರು.

‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ’ ಬದುಕಿನ ಮಂತ್ರವಾಗಲಿ
ಶರಣರ ನೈತಿಕ ಮೌಲ್ಯಗಳನ್ನು ಪ್ರಸ್ತಾಪಿಸಿದ ಅವರು, ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ’ ಎಂಬ ವಚನವನ್ನು ಪ್ರತಿಯೊಬ್ಬರೂ ಜೀವನದ ಧ್ಯೇಯವಾಕ್ಯವನ್ನಾಗಿ ಮಾಡಿಕೊಳ್ಳಬೇಕು ಎಂದರು.
ಕಳ್ಳತನ ಮಾಡಬಾರದು, ಹಿಂಸೆ ಮಾಡಬಾರದು, ಸುಳ್ಳು ಹೇಳಬಾರದು ಎಂಬ ಸರಳ ಸಂದೇಶದ ಹಿಂದೆ ಆಳವಾದ ಸಾಮಾಜಿಕ ಮತ್ತು ನೈತಿಕ ಚಿಂತನೆ ಇದೆ. ಅಂತರಂಗದ ಶುದ್ಧಿ ಮತ್ತು ಬಹಿರಂಗದ ಶುದ್ಧಿ ಎರಡೂ ವ್ಯಕ್ತಿಯ ಬದುಕಿನಲ್ಲಿ ಇರಬೇಕು. ವಚನಗಳನ್ನು ಬಾಯಿಪಾಠ ಮಾಡುವುದಕ್ಕಿಂತ ಅವುಗಳ ಆಶಯದಂತೆ ನಡೆದುಕೊಳ್ಳುವುದು ಮುಖ್ಯ. ಸಾಧ್ಯವಾದಷ್ಟು ಈ ಮೌಲ್ಯಗಳನ್ನು ಪಾಲಿಸಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂದು ಹೇಳಿದರು.

ಕೃಷಿಯಲ್ಲಿಯೂ ದಯೆ ಮತ್ತು ಮಾನವೀಯತೆ ಅಗತ್ಯ
‘ದಯವೇ ಧರ್ಮದ ಮೂಲವಯ್ಯ, ದಯವಿಲ್ಲದ ಧರ್ಮ ಅದಾವುದಯ್ಯ‘ ಎಂಬ ಶರಣರ ಅಮೂಲ್ಯ ಸಂದೇಶವನ್ನು ಕೃಷಿ ಕ್ಷೇತ್ರಕ್ಕೆ ಅನ್ವಯಿಸಿದ ಧನಂಜಯ ಅವರು, ದಯೆ ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಾಗಬಾರದು. ಸಕಲ ಜೀವಜಾಲ, ಪ್ರಕೃತಿ, ಮಣ್ಣು, ನೀರು ಮತ್ತು ಪರಿಸರದ ಮೇಲೂ ಕರುಣೆ ಇರಬೇಕು ಎಂದರು.
ಇಂದು ಕೃಷಿಯಲ್ಲಿ ರಾಸಾಯನಿಕ ಕೀಟನಾಶಕಗಳ ಬಳಕೆ ಮಿತಿಮೀರುತ್ತಿದೆ. ಕೆಲವೆಡೆ ಕೀಟನಾಶಕ ಸಿಂಪಡಿಸಿದ ಮರುದಿನವೇ ತರಕಾರಿ ಮತ್ತು ಸೊಪ್ಪುಗಳನ್ನು ಕೊಯ್ದು ಮಾರುಕಟ್ಟೆಗೆ ತರುತ್ತಿರುವುದು ಆತಂಕಕಾರಿ ಬೆಳವಣಿಗೆ. ಇಂತಹ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ರೈತರು ತಾವು ಬೆಳೆದ ಆಹಾರವನ್ನು ಇತರ ಮನುಷ್ಯರು ಸೇವಿಸುತ್ತಾರೆ ಎಂಬ ಜವಾಬ್ದಾರಿಯನ್ನು ಮರೆಯಬಾರದು ಎಂದು ಎಚ್ಚರಿಸಿದರು.

ಕೀಟನಾಶಕ ಸಿಂಪಡಿಸಿದ ನಂತರ ಕೊಯ್ಲು ಮಾಡಲು ಎಷ್ಟು ದಿನ ಕಾಯಬೇಕು ಎಂಬುದಕ್ಕೆ ವೈಜ್ಞಾನಿಕ ಮಾರ್ಗಸೂಚಿಗಳಿವೆ. ಕೃಷಿ ವಿಶ್ವವಿದ್ಯಾಲಯಗಳು ಪ್ರಕಟಿಸುವ ‘ಪ್ಯಾಕೇಜ್ ಆಫ್ ಪ್ರಾಕ್ಟೀಸಸ್‘ನಲ್ಲಿ ಯಾವ ರಾಸಾಯನಿಕವನ್ನು ಬಳಸಿದ ನಂತರ ಎಷ್ಟು ದಿನಗಳ ಅಂತರದಲ್ಲಿ ಬೆಳೆ ಕೊಯ್ಲು ಮಾಡಬೇಕು ಎಂಬ ಮಾಹಿತಿಯನ್ನು ಸ್ಪಷ್ಟವಾಗಿ ನೀಡಬೇಕು. ನಿಷೇಧಿತ ಅಥವಾ ಹೆಚ್ಚು ಅಪಾಯಕಾರಿ ರಾಸಾಯನಿಕಗಳ ಬಳಕೆಯನ್ನು ನಿಯಂತ್ರಿಸಬೇಕು. ಸುರಕ್ಷಿತ ಕೃಷಿ ಪದ್ಧತಿಗಳನ್ನು ರೈತರಿಗೆ ತಲುಪಿಸುವ ಮೂಲಕ ಆರೋಗ್ಯಕರ ಆಹಾರ ಉತ್ಪಾದನೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಕೃಷಿಯ ಉದ್ದೇಶ ಕೇವಲ ಹೆಚ್ಚು ಉತ್ಪಾದನೆ ಮತ್ತು ಲಾಭ ಗಳಿಸುವುದಲ್ಲ. ಜನರ ಆರೋಗ್ಯವನ್ನು ಕಾಪಾಡುವ ಗುಣಮಟ್ಟದ ಆಹಾರ ಉತ್ಪಾದನೆಯೂ ರೈತರ ಸಾಮಾಜಿಕ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ದಯೆ, ಕಾಯಕ ಮತ್ತು ಮಾನವೀಯತೆಯ ತತ್ವಗಳು ಕೃಷಿ ಕ್ಷೇತ್ರದಲ್ಲಿಯೂ ಪ್ರತಿಫಲಿಸಬೇಕು ಎಂದರು.

ಕೃಷಿ ಮೇಳದ ಮೂಲಕ 10 ಲಕ್ಷಕ್ಕೂ ಹೆಚ್ಚು ರೈತರಿಗೆ ಪ್ರಯೋಜನ
ತಮ್ಮ ಕೃಷಿ ಕ್ಷೇತ್ರದ ಸೇವೆ ಮತ್ತು ಕೃಷಿ ಮೇಳದ ಅನುಭವವನ್ನು ಹಂಚಿಕೊಂಡ ಧನಂಜಯ, 1996ರಲ್ಲಿ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕೃಷಿ ಸಂಶೋಧನಾ ಸೇವೆಗೆ ಆಯ್ಕೆಯಾದ ಬಳಿಕ ಸುಮಾರು 28 ವರ್ಷಗಳಿಂದ ಕೃಷಿ ಕ್ಷೇತ್ರದಲ್ಲಿ ಸಂಶೋಧನೆ, ರೈತರ ಮಾರ್ಗದರ್ಶನ ಮತ್ತು ಕೃಷಿ ವಿಸ್ತರಣಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ರೈತರು ಮತ್ತು ಕೃಷಿ ಮಿತ್ರರಿಗೆ ಸಾಧ್ಯವಾದಷ್ಟು ಸೇವೆ ಸಲ್ಲಿಸುವ ಪ್ರಯತ್ನ ಮಾಡಿದ್ದೇನೆ. ಈ ಸೇವೆಯನ್ನು ಗುರುತಿಸಿ ಗೌರವಾನ್ವಿತ ರಾಜ್ಯಪಾಲರು ಹಾಗೂ ಸರ್ಕಾರವು ನನಗೆ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಸೇವೆ ಸಲ್ಲಿಸುವ ಅವಕಾಶ ನೀಡಿದೆ. ನಾನು ಹುಟ್ಟಿ ಬೆಳೆದ ಶಿವಮೊಗ್ಗ ಭಾಗದ ಜನರಿಗಾಗಿ ಕೆಲಸ ಮಾಡಲು ಸಿಕ್ಕಿರುವ ಅವಕಾಶ ಹೆಮ್ಮೆಯ ಸಂಗತಿ ಎಂದರು.

ಶಿವಮೊಗ್ಗದಲ್ಲಿ ಆಯೋಜಿಸಿದ್ದ ಕೃಷಿ ಮೇಳ ಅತ್ಯಂತ ಯಶಸ್ವಿಯಾಗಿದ್ದು, 10 ಲಕ್ಷಕ್ಕೂ ಅಧಿಕ ರೈತರು ಹಾಗೂ ಕೃಷಿ ಆಸಕ್ತರು ಅದರ ಪ್ರಯೋಜನ ಪಡೆದುಕೊಂಡಿದ್ದಾರೆ. ಎಲ್ಲರ ಸಹಕಾರದಿಂದ ಕೃಷಿ ಮೇಳವನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸಲು ಸಾಧ್ಯವಾಯಿತು. ಕೃಷಿ ಮೇಳವು ಕೇವಲ ಪ್ರದರ್ಶನ ಅಥವಾ ಮಾಹಿತಿ ನೀಡುವ ಕಾರ್ಯಕ್ರಮವಾಗದೆ ರೈತರು, ವಿಜ್ಞಾನಿಗಳು ಮತ್ತು ಕೃಷಿ ವಿದ್ಯಾರ್ಥಿಗಳನ್ನು ಸಂಪರ್ಕಿಸುವ ಶಾಶ್ವತ ವ್ಯವಸ್ಥೆಯಾಗಿ ಬೆಳೆಯಬೇಕು ಎಂಬ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

4,000 ವಿದ್ಯಾರ್ಥಿಗಳ ಮೂಲಕ ಎರಡು ಲಕ್ಷ ರೈತರನ್ನು ತಲುಪುವ ಪ್ರಯತ್ನ
ಕೃಷಿ ಜ್ಞಾನವನ್ನು ಗ್ರಾಮೀಣ ಪ್ರದೇಶಗಳಿಗೆ ತಲುಪಿಸುವ ವಿನೂತನ ಯೋಜನೆಯ ಕುರಿತು ವಿವರಿಸಿದ ಅವರು, ವಿಶ್ವವಿದ್ಯಾಲಯದಿಂದ ಹೊರಬರುವ ಸುಮಾರು 4,000 ವಿದ್ಯಾರ್ಥಿಗಳು ತಮ್ಮ ತಮ್ಮ ಊರುಗಳಲ್ಲಿ ಕನಿಷ್ಠ 25ರಿಂದ 50 ರೈತರ ಸಂಪರ್ಕ ಗುಂಪುಗಳನ್ನು ರಚಿಸಬೇಕು ಎಂಬ ಚಿಂತನೆ ರೂಪಿಸಲಾಗಿತ್ತು ಎಂದರು.
ವಿದ್ಯಾರ್ಥಿಗಳು ತಮ್ಮ ಗ್ರಾಮಗಳ ರೈತರೊಂದಿಗೆ ವಾಟ್ಸ್ಆ್ಯಪ್ ಗುಂಪುಗಳನ್ನು ರಚಿಸಿ, ವಿಶ್ವವಿದ್ಯಾಲಯದ ಹೊಸ ತಳಿಗಳು, ಗುಣಮಟ್ಟದ ಬೀಜಗಳು, ಸಸಿಗಳು, ಕೃಷಿ ತಂತ್ರಜ್ಞಾನ, ಕೌಶಲ್ಯ ತರಬೇತಿ ಹಾಗೂ ಸಂಶೋಧನಾ ಮಾಹಿತಿಗಳನ್ನು ನಿರಂತರವಾಗಿ ಹಂಚಿಕೊಳ್ಳಬೇಕು. ಈ ಮಾದರಿಯ ಮೂಲಕ ಸುಮಾರು ಎರಡು ಲಕ್ಷ ರೈತರನ್ನು ಸಂಪರ್ಕಿಸುವ ಅವಕಾಶವಾಗಿದೆ ಎಂದು ಹೇಳಿದರು.

ಕೃಷಿ ಮೇಳದ ಪೋಸ್ಟರ್ಗಳನ್ನು ಆರು ಜಿಲ್ಲೆಗಳ ಗ್ರಾಮಗಳು, ಗ್ರಾಮ ಪಂಚಾಯಿತಿಗಳು ಮತ್ತು ಹೋಬಳಿ ಮಟ್ಟಕ್ಕೆ ವಿದ್ಯಾರ್ಥಿಗಳ ಮೂಲಕ ತಲುಪಿಸುವ ಪ್ರಯತ್ನ ಮಾಡಲಾಗಿತ್ತು. ಇದಕ್ಕಾಗಿ ದೊಡ್ಡ ಪ್ರಮಾಣದ ಹಣದ ಅವಶ್ಯಕತೆಯಿಲ್ಲ. ವಿದ್ಯಾರ್ಥಿಗಳು ತಮ್ಮ ಊರಿನ ರೈತರನ್ನು ಸಂಪರ್ಕಿಸಿ, ಗುಂಪು ರಚಿಸಿ, ವಿಶ್ವವಿದ್ಯಾಲಯದ ಚಟುವಟಿಕೆಗಳ ಮಾಹಿತಿಯನ್ನು ಹಂಚಿಕೊಂಡರೆ ಸಾಕು. ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯವನ್ನು ಎರಡೂವರೆ ಸಾವಿರದಿಂದ ಮೂರು ಸಾವಿರ ಹಳ್ಳಿಗಳೊಂದಿಗೆ ಶಾಶ್ವತವಾಗಿ ಸಂಪರ್ಕಿಸುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.
ಇದು ಕೇವಲ ಒಂದು ಕೃಷಿ ಮೇಳಕ್ಕೆ ಸೀಮಿತವಾಗುವ ಯೋಜನೆಯಲ್ಲ. ವಿಶ್ವವಿದ್ಯಾಲಯದಲ್ಲಿ ಹೊಸ ತಳಿಗಳು ಅಥವಾ ತಂತ್ರಜ್ಞಾನಗಳು ಅಭಿವೃದ್ಧಿಯಾದಾಗ ಅವುಗಳ ಮಾಹಿತಿ ಪ್ರತಿಯೊಂದು ಹಳ್ಳಿಗೂ ತಲುಪಬೇಕು. ಆಯಾ ಊರಿನ ವಿದ್ಯಾರ್ಥಿಗಳೇ ಅದಕ್ಕೆ ಸಂಪರ್ಕ ಸೇತುವೆಯಾಗಬೇಕು. ಈ ಪ್ರಯತ್ನ ಕೃಷಿ ವಿಸ್ತರಣಾ ಕ್ಷೇತ್ರದಲ್ಲಿ ಪರಿಣಾಮಕಾರಿ ಬದಲಾವಣೆಗೆ ಕಾರಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಿಂತನ ಕಾರ್ತಿಕ ಉಪನ್ಯಾಸದ ಸರಣಿಯಲ್ಲ, ಆತ್ಮಾವಲೋಕನದ ಅಭಿಯಾನವಾಗಲಿ
20ನೇ ವರ್ಷದ ಚಿಂತನ ಕಾರ್ತಿಕದ ಆಶಯವನ್ನು ಶ್ಲಾಘಿಸಿದ ಅವರು, ಕಳೆದ ಹಲವು ವರ್ಷಗಳಿಂದ ಗುರುಗಳು ನಿರಂತರವಾಗಿ ಚಿಂತನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಸಮಾಜದಲ್ಲಿ ಜ್ಞಾನ ಮತ್ತು ವಿಚಾರಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ಕಾರ್ತಿಕ ಮಾಸ ಬೆಳಕಿನ ಸಂಕೇತ. ಆದರೆ ನಿಜವಾದ ಬೆಳಕು ಕೇವಲ ದೀಪಗಳಿಂದ ಬರುವುದಿಲ್ಲ. ಪ್ರತಿಯೊಬ್ಬರ ಅಂತರಂಗದಲ್ಲಿ ಜ್ಞಾನದೀಪ ಬೆಳಗಿದಾಗ ಮಾತ್ರ ಬದುಕಿನಲ್ಲಿ ಬದಲಾವಣೆ ಸಾಧ್ಯ ಎಂದರು.
ಈ ಒಂದು ತಿಂಗಳ ಕಾರ್ಯಕ್ರಮ ಕೇವಲ ಉಪನ್ಯಾಸಗಳ ಸರಣಿಯಾಗಿ ಮುಗಿಯಬಾರದು. ಅದು ಆತ್ಮಾವಲೋಕನದ ಅಭಿಯಾನವಾಗಬೇಕು. ಕೃಷಿ ಕ್ಷೇತ್ರದಲ್ಲಿರಲಿ, ವಚನಗಳ ಪಾಲನೆಯಲ್ಲಿರಲಿ, ಸಾಮಾಜಿಕ ಸಮಾನತೆಯ ವಿಚಾರದಲ್ಲಿರಲಿ ಪ್ರತಿಯೊಬ್ಬರೂ ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು. ಕೇಳಿದ ವಿಚಾರಗಳನ್ನು ಜೀವನದಲ್ಲಿ ಎಷ್ಟರಮಟ್ಟಿಗೆ ಅಳವಡಿಸಿಕೊಂಡಿದ್ದೇವೆ ಎಂಬುದನ್ನು ಪರಿಶೀಲಿಸಬೇಕು. ಪ್ರತಿಯೊಂದು ಉಪನ್ಯಾಸವೂ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಬೇಕು, ಪ್ರತಿಯೊಂದು ವಚನವೂ ನಮ್ಮ ನಡೆ-ನುಡಿಯಲ್ಲಿ ಪ್ರತಿಫಲಿಸಬೇಕು ಎಂದು ಹೇಳಿದರು.
ಕಾಯಕದ ಗೌರವ, ಸಂಪತ್ತಿನ ಹಂಚಿಕೆ ಮತ್ತು ದಾಸೋಹದ ಸಂಸ್ಕೃತಿ ಬೆಳೆಯಲಿ
ಬಸವತತ್ವದ ಪ್ರಮುಖ ಆಶಯಗಳನ್ನು ವಿವರಿಸಿದ ಅವರು, ಮನುಷ್ಯನನ್ನು ಮನುಷ್ಯನನ್ನಾಗಿ ಕಾಣಬೇಕು, ಪ್ರತಿಯೊಬ್ಬರ ದುಡಿಮೆಯನ್ನು ಗೌರವಿಸಬೇಕು ಮತ್ತು ನಮ್ಮ ಸಂಪತ್ತಿನಲ್ಲಿ ಸಾಧ್ಯವಾದಷ್ಟನ್ನು ಸಮಾಜದ ಒಳಿತಿಗಾಗಿ ಹಂಚಿಕೊಳ್ಳಬೇಕು ಎಂದರು.
ದಾಸೋಹ ಮಾಡಲು ಕೋಟ್ಯಂತರ ರೂಪಾಯಿ ಸಂಪತ್ತು ಇರಬೇಕೆಂದಿಲ್ಲ. ನಮ್ಮ ಬಳಿ ಇರುವ ಒಂದು ಸಾವಿರ ರೂಪಾಯಿಯಲ್ಲಿ ಹತ್ತು ರೂಪಾಯಿಯನ್ನು ಸಮಾಜದ ಒಳಿತಿಗಾಗಿ ನೀಡಿದರೂ ಅದು ದಾಸೋಹವೇ. ನಮ್ಮ ಗಳಿಕೆಯ ಒಂದು ಸಣ್ಣ ಭಾಗವನ್ನು ಮಠಗಳು, ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳು ಮತ್ತು ಸಮಾಜದ ಅಗತ್ಯವಿರುವ ಜನರಿಗೆ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು. ಶರಣರು ಸಾರಿದ ದಾಸೋಹ ಸಂಸ್ಕೃತಿಯ ನಿಜವಾದ ಅರ್ಥ ಇದೇ ಎಂದು ತಿಳಿಸಿದರು.
ಶಿಕ್ಷಣ, ಅನ್ನದಾಸೋಹ ಮತ್ತು ಸಮಾಜದ ಸೇವಾ ಕಾರ್ಯಗಳಿಗೆ ತಮ್ಮ ಕೈಲಾದ ಸಹಾಯ ಮಾಡುವ ಮನೋಭಾವ ಪ್ರತಿಯೊಬ್ಬರಲ್ಲೂ ಬೆಳೆದಾಗ ಸಮಾಜದಲ್ಲಿ ಸಮಾನತೆ ಮತ್ತು ಮಾನವೀಯತೆ ಬಲಗೊಳ್ಳುತ್ತದೆ. ಸತ್ಯವನ್ನು ನುಡಿಯುವುದು, ದುಡಿಮೆಗೆ ಗೌರವ ನೀಡುವುದು, ಸಂಪತ್ತನ್ನು ಹಂಚಿಕೊಳ್ಳುವುದು ಮತ್ತು ಸಮಸ್ತ ಜೀವಿಗಳ ಒಳಿತನ್ನು ಬಯಸುವುದು ಬಸವತತ್ವದ ನಿಜವಾದ ಸಾರವಾಗಿದೆ ಎಂದು ಹೇಳಿದರು.
ವಚನಗಳ ಬೆಳಕು ಬದುಕನ್ನು ಬದಲಿಸಲಿ
ಚಿಂತನ ಕಾರ್ತಿಕದ ಮೂಲಕ ಗುರುಗಳು ಸಮಾಜಕ್ಕೆ ನೀಡುತ್ತಿರುವ ಸಂದೇಶ ಪ್ರತಿಯೊಂದು ಮನೆಗೂ, ಪ್ರತಿಯೊಂದು ಗ್ರಾಮಕ್ಕೂ ತಲುಪಬೇಕು. ವಚನಗಳ ಬೆಳಕು ನಮ್ಮ ಮನಸ್ಸುಗಳನ್ನು ಬೆಳಗಲಿ. ಬಸವಣ್ಣನವರ ಚಿಂತನೆಗಳು ನಮ್ಮ ಬದುಕನ್ನು ಬದಲಿಸಲಿ. ಸಮಾನತೆ, ಕಾಯಕ ಮತ್ತು ದಾಸೋಹದ ತತ್ವಗಳು ಸಮಾಜದ ಎಲ್ಲ ಸ್ತರಗಳಿಗೂ ವಿಸ್ತರಿಸಲಿ. ಹೊಸ ಚಿಂತನೆಗಳು ಹೊಸ ಅರಿವಿಗೆ ಕಾರಣವಾಗಲಿ. ಮನುಷ್ಯರನ್ನು ಜಾತಿ, ಧರ್ಮ ಮತ್ತು ಅಂತಸ್ತಿನ ಆಧಾರದಲ್ಲಿ ವಿಭಜಿಸದೆ ಮಾನವೀಯತೆಯ ದೃಷ್ಟಿಯಿಂದ ನೋಡುವ ಮನೋಭಾವ ಬೆಳೆಯಲಿ ಎಂದು ಎಂ.ವಿ. ಧನಂಜಯ ಅವರು ಆಶಿಸಿದರು.
ಕಾರ್ಯಕ್ರಮದಲ್ಲಿ ಬಸವಕೇಂದ್ರ, ಶಿವಮೊಗ್ಗದ ಅಧ್ಯಕ್ಷರಾದ ಜಿ. ಬೆನಕಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು. ಡಾ. ಕೆ.ಸಿ. ಶಶಿಧರ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು ಹಾಗೂ ಲವಕುಮಾರ್ ಅವರು ನಿರೂಪಿಸಿದರು.
ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಜಿ. ಮಧುಸೂದನ್, ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಹೆಚ್.ಪಿ. ಗಿರೀಶ್, ವಿದ್ಯುತ್ ಇಲಾಖೆ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಜಿ. ಶಶಿಧರ್, ಚಂದ್ರಶೇಖರ್ ತಳಗಿಹಾಳ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಶಿವಮೊಗ್ಗದ ಅಕ್ಕನ ಬಳಗದಿಂದ ವಚನಗಾಯನ ನಡೆಯಿತು. ವಿದ್ಯುತ್ ಇಲಾಖೆ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸೇವಾರ್ಥ ಕಾರ್ಯಕ್ರಮ ನೆರವೇರಿಸಲಾಯಿತು.










