ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಆಸ್ತಿ-ಅಂತಸ್ತಿಗಿಂತ ಮಾನವೀಯ ಸಂಬಂಧಗಳೇ ದೊಡ್ಡ ಸಂಪತ್ತು; ಬಸವಣ್ಣನವರ ವಚನಗಳಲ್ಲಿ ಬದುಕಿನ ಸಾರ್ಥಕತೆಯ ದರ್ಶನ: ಡಾ. ಬಸವ ಮರುಳಸಿದ್ಧ ಸ್ವಾಮೀಜಿ

On: November 16, 2026 1:28 PM
Follow Us:

ಶಿವಮೊಗ್ಗ: ಒಂದು ಒನಕೆಯ ಪಾಲಿಗಾಗಿ ಅಣ್ಣ-ತಮ್ಮಂದಿರು ನ್ಯಾಯಾಲಯದ ಮೆಟ್ಟಿಲೇರಿ, ಕೊನೆಗೆ ಇಡೀ ಆಸ್ತಿಯನ್ನೇ ಕಳೆದುಕೊಂಡರು. ಮತ್ತೊಂದೆಡೆ, ಕೇವಲ 34 ಗುಂಟೆ ಜಮೀನಿನ ಹಂಚಿಕೆಗಾಗಿ ವಯಸ್ಸಾದ ಅಕ್ಕ-ತಂಗಿಯರು ನ್ಯಾಯದ ಮೊರೆ ಹೋದರು. ಇವು ಕೇವಲ ಕಥೆಗಳಲ್ಲ, ಆಸ್ತಿ ವ್ಯಾಮೋಹ ಮನುಷ್ಯ ಸಂಬಂಧಗಳನ್ನು ಎಷ್ಟರಮಟ್ಟಿಗೆ ಹದಗೆಡಿಸುತ್ತಿದೆ ಎಂಬುದಕ್ಕೆ ಸಮಾಜದ ಕಣ್ಣಮುಂದಿರುವ ಕಹಿ ವಾಸ್ತವಗಳು. ಹಣ, ಆಸ್ತಿ, ಅಧಿಕಾರಕ್ಕಿಂತ ಪ್ರೀತಿ, ವಿಶ್ವಾಸ ಮತ್ತು ಮಾನವೀಯ ಸಂಬಂಧಗಳೇ ಬದುಕಿನ ನಿಜವಾದ ಸಂಪತ್ತು ಎಂಬ ಅರಿವು ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದು ಪೂಜ್ಯ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿಗಳು ಹೇಳಿದರು.

ಕುವೆಂಪುನಗರದ ನಿವಾಸಿಗಳಾದ ಸೇವಾರ್ಥಿ ಶ್ರೀಮತಿ ಶ್ವೇತಾ ವೇದಾನಂದ್ ಮತ್ತು ಕುಟುಂಬದವರು, ಶ್ರೀ ಬಸವತತ್ವ ಪೀಠ, ಚಿಕ್ಕಮಗಳೂರು ಹಾಗೂ ಬಸವಕೇಂದ್ರ, ಶಿವಮೊಗ್ಗ ಇವರ ಆಶ್ರಯದಲ್ಲಿ ಆಯೋಜಿಸಿದ್ದ 20ನೇ ವರ್ಷದ ಚಿಂತನ ಕಾರ್ತಿಕ ಕಾರ್ಯಕ್ರಮದ ಮೂರನೇ ದಿನದಂದು ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಕೋಯಮತ್ತೂರು ನಗರ ವೀರಶೈವ ಲಿಂಗಾಯತ ವೇದಿಕೆಯ ಅಧ್ಯಕ್ಷರಾದ ಶರಣ ಪಿ.ಆರ್. ಜಯದೇವಪ್ಪ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅಣ್ಣ-ತಮ್ಮಂದಿರ ನಡುವಿನ ಆಸ್ತಿ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿದ ಪ್ರಸಂಗವನ್ನು ಪ್ರಸ್ತಾಪಿಸಿದ್ದು ಸಂತೋಷ ತಂದಿತು. ಇಂದಿನ ದಿನಗಳಲ್ಲಿ ಇಂತಹ ಮನೋಭಾವದ ಕುಟುಂಬಗಳು ಸಿಗುವುದೇ ಅಪರೂಪ. ಸಮಸ್ಯೆಗಳನ್ನು ಪರಸ್ಪರ ಕುಳಿತು ಮಾತನಾಡಿ, ವಿಶ್ವಾಸದಿಂದ ಬಗೆಹರಿಸಿಕೊಳ್ಳುವ ಮನಸ್ಸು ಎಲ್ಲರಲ್ಲೂ ಇರಬೇಕು ಎಂದು ಬಸವಕೇಂದ್ರ ಶ್ರೀಗಳು ಹೇಳಿದರು.

ಕೆಲವರು ಸಮಾಜದಲ್ಲಿ ಸಮಸ್ಯೆಗಳನ್ನು ಬಗೆಹರಿಸುವ ಬದಲು, ಇಲ್ಲದ ಸಮಸ್ಯೆಗಳನ್ನು ಹುಟ್ಟುಹಾಕಿ ಪಂಚಾಯಿತಿ ಮಾಡುವುದರಲ್ಲೇ ಆಸಕ್ತಿ ಹೊಂದಿರುತ್ತಾರೆ. ಒಂದು ಊರಿನಲ್ಲಿ ಆಸ್ತಿ ಹಂಚಿಕೆ ಮಾಡಿಕೊಂಡು ಅಣ್ಣ-ತಮ್ಮಂದಿರು ಯಾವುದೇ ಗಲಾಟೆ, ಮನಸ್ತಾಪವಿಲ್ಲದೆ ಸಂತೋಷದಿಂದ ಬೇರ್ಪಟ್ಟಿದ್ದರು. ಆದರೆ ಊರಿನಲ್ಲಿ ಪಂಚಾಯಿತಿ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಪ್ರವಾಸದಿಂದ ಮರಳಿದಾಗ ಈ ವಿಷಯ ತಿಳಿದುಕೊಂಡ. ಅಣ್ಣ-ತಮ್ಮಂದಿರು ತನ್ನನ್ನು ನೆನಪಿಸಿಕೊಳ್ಳದೆ ಆಸ್ತಿ ಹಂಚಿಕೊಂಡರಲ್ಲ ಎಂಬ ಅಸಮಾಧಾನದಿಂದ ಅವರ ನಡುವೆ ಬಿರುಕು ಮೂಡಿಸಲು ಸಂಚು ರೂಪಿಸಿದ.

ಅಣ್ಣನಿಗೆ ಸಿಕ್ಕಿದ್ದ ಒನಕೆಯೇ ಕುಟುಂಬದ ಅದೃಷ್ಟದ ಸಂಕೇತ, ಅದನ್ನು ತಮ್ಮನಿಗೆ ಕೊಡಬಾರದು ಎಂದು ಹೇಳಿದ. ಅದೇ ರೀತಿ ತಮ್ಮನಿಗೂ ಒನಕೆಯಲ್ಲೇ ಮನೆಯ ಲಕ್ಷ್ಮಿ ಇದ್ದಾಳೆ, ಅದನ್ನು ಪಡೆದುಕೊಳ್ಳಬೇಕು ಎಂದು ಬುದ್ಧಿ ಹೇಳಿದ. ಕೊನೆಗೆ ಒನಕೆಯ ಪಾಲಿಗಾಗಿ ಅಣ್ಣ-ತಮ್ಮಂದಿರು ನ್ಯಾಯಾಲಯದ ಮೆಟ್ಟಿಲೇರಿದರು. ನ್ಯಾಯಾಲಯ ಒನಕೆಯನ್ನು ಎರಡು ಭಾಗ ಮಾಡಿ ಇಬ್ಬರಿಗೂ ಹಂಚಿತು. ಅಲ್ಲಿಗೂ ನಿಲ್ಲದೆ ಅದರ ಭಾಗಗಳಿಗಾಗಿ ಮೇಲ್ಮನವಿ ಸಲ್ಲಿಸುತ್ತಾ ಹೋದರು. ಕೊನೆಗೆ ಆಸ್ತಿ-ಪಾಸ್ತಿಯನ್ನೆಲ್ಲ ಕಳೆದುಕೊಂಡು, ಕೈಗೆ ಸಿಕ್ಕಿದ್ದು ಒನಕೆಯ ತುಂಡುಗಳು ಮಾತ್ರ.

ಇದು ನಗೆ ತರಿಸುವ ಕಥೆಯಂತೆ ಕಂಡರೂ, ನಮ್ಮ ಸಮಾಜದಲ್ಲಿ ಇಂತಹ ಘಟನೆಗಳು ನಿಜವಾಗಿಯೂ ನಡೆಯುತ್ತಿವೆ. ಆಸ್ತಿ ಹಂಚಿಕೆಯ ವಿಚಾರದಲ್ಲಿ ಸಂಬಂಧಗಳನ್ನೇ ಬಲಿಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಚಿಕ್ಕಮಗಳೂರಿನಲ್ಲಿ 34 ಗುಂಟೆ ಜಮೀನಿನ ಹಂಚಿಕೆಗಾಗಿ ವಯಸ್ಸಾದ ಅಕ್ಕ-ತಂಗಿಯರು ನ್ಯಾಯದ ಮೊರೆ ಹೋದ ಪ್ರಸಂಗವೂ ನಡೆದಿದೆ. ಮೊಮ್ಮಕ್ಕಳ ಮದುವೆ ಮಾಡುವ ವಯಸ್ಸಿಗೆ ಬಂದಿದ್ದರೂ ಆಸ್ತಿ ವಿಚಾರದಲ್ಲಿ ನ್ಯಾಯಾಲಯದ ಮೆಟ್ಟಿಲೇರುವ ಸ್ಥಿತಿ ಬಂದಿರುವುದು ವಿಷಾದನೀಯ.

ಇಂದು 25 ಅಡಿ ಜಾಗವನ್ನು ಐದು ಜನರಿಗೆ ಹೇಗೆ ಹಂಚಬೇಕು, 80 ಅಡಿ ಉದ್ದದ ಜಾಗದಲ್ಲಿ ಪ್ರತಿಯೊಬ್ಬರಿಗೂ ಪ್ರತ್ಯೇಕ ಪಾಲು ಹೇಗೆ ನೀಡಬೇಕು ಎಂಬಂತಹ ವಿಚಾರಗಳಿಗೂ ಸಂಬಂಧಗಳು ಹದಗೆಡುತ್ತಿವೆ. ಆಸ್ತಿ ಉಳಿಸಿಕೊಳ್ಳುವ ಭರದಲ್ಲಿ ಸಂಬಂಧಗಳನ್ನೇ ಕಳೆದುಕೊಳ್ಳುತ್ತಿದ್ದೇವೆ. ಯಾವುದಕ್ಕೆ ಬೆಲೆ ಕೊಡಬೇಕು, ಯಾವುದಕ್ಕೆ ಕೊಡಬಾರದು ಎಂಬ ವಿವೇಕ ಪ್ರತಿಯೊಬ್ಬರಲ್ಲೂ ಇರಬೇಕು. ಮಾನವ ಸಂಬಂಧಗಳು ನೀಡುವ ತೃಪ್ತಿಯನ್ನು ಯಾವುದೇ ಸಂಪತ್ತು ನೀಡಲಾರದು ಎಂಬುದನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದರು.

ಇಂದಿನ ಕಾರ್ಯಕ್ರಮದಲ್ಲಿ ಶರಣ ತುರುವನೂರು ಮಲ್ಲಿಕಾರ್ಜುನ ಅವರು ಬಸವಣ್ಣನವರ ವಚನಗಳನ್ನು ಆಧರಿಸಿ ನೀಡಿದ ಉಪನ್ಯಾಸ ಅತ್ಯಂತ ಅಧ್ಯಯನಪೂರ್ಣವಾಗಿತ್ತು. ವಿಷಯಾಂತರವಾಗದೆ, ವಚನಗಳ ಆಳವಾದ ಅರ್ಥವನ್ನು ಸರಳವಾಗಿ ಮತ್ತು ಆಕರ್ಷಕವಾಗಿ ಪ್ರಸ್ತುತಪಡಿಸಿದ ಅವರ ಶೈಲಿ ಎಲ್ಲರ ಮನಸೆಳೆಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಸವಣ್ಣನವರ,

“ಉದಕದೊಳಗೆ ಬಚ್ಚಿಟ್ಟ ಬಯಕೆಯ ಕಿಚ್ಚಿನಂತೆ ಇದ್ದಿತ್ತು, ಶಶಿಯೊಳಗಣ ರಸದ ರುಚಿಯಂತೆ ಇದ್ದಿತ್ತು,
ನನೆಯೊಳಗಣ ಪರಿಮಳದಂತೆ ಇದ್ದಿತ್ತು,
ಕೂಡಲಸಂಗಮದೇವ ಕನ್ನೆಯ ಸ್ನೇಹದಂತೆ ಇದ್ದಿತ್ತು
”

ಎಂಬ ವಚನದಲ್ಲಿ ದೇವರ ಅಸ್ತಿತ್ವವನ್ನು ಅತ್ಯಂತ ಸುಂದರವಾದ ರೂಪಕಗಳ ಮೂಲಕ ವಿವರಿಸಲಾಗಿದೆ.

ನೀರಿನೊಳಗೆ ಅಡಗಿರುವ ಅಗ್ನಿಯಂತೆ, ಚಂದ್ರನ ಬೆಳಕಿನ ಸತ್ವ ಹಣ್ಣಿನೊಳಗೆ ಸೇರುವಂತೆ, ಮೊಗ್ಗಿನೊಳಗೆ ಅಡಗಿರುವ ಸುಗಂಧ ಸೂಕ್ತ ಸಮಯದಲ್ಲಿ ಹೊರಹೊಮ್ಮುವಂತೆ, ಕನ್ಯೆಯೊಳಗೆ ಸುಪ್ತವಾಗಿರುವ ತಾಯ್ತನ ತಾಯಿಯಾದಾಗ ಪ್ರಕಟವಾಗುವಂತೆ ದೇವರು ಕೂಡ ಪ್ರತಿಯೊಬ್ಬರ ಅಂತರಂಗದಲ್ಲಿದ್ದಾನೆ. ಆದರೆ ಆತನ ಅನುಭವವಾಗಬೇಕಾದರೆ ನಮ್ಮ ಬದುಕು ಸಾಧನೆ, ಪರಿಶುದ್ಧತೆ ಮತ್ತು ಪರಿಪಕ್ವತೆಯ ಹಾದಿಯಲ್ಲಿ ಸಾಗಬೇಕು.

ಒಂದು ಸಂಪಿಗೆ ಅಥವಾ ಮಲ್ಲಿಗೆ ಮೊಗ್ಗಿನೊಳಗೆ ಸುಗಂಧವಿದ್ದರೂ ಅದು ಅರಳುವವರೆಗೆ ಹೊರಹೊಮ್ಮುವುದಿಲ್ಲ. ಸೂಕ್ತವಾದ ವಾತಾವರಣ, ಬೆಳಕು ಮತ್ತು ಪೋಷಣೆ ದೊರೆತಾಗ ಮಾತ್ರ ಅದರ ಪರಿಮಳ ಜಗತ್ತಿಗೆ ಹರಡುತ್ತದೆ. ಅದೇ ರೀತಿ ಮನುಷ್ಯನೊಳಗೆ ಅಡಗಿರುವ ದೈವತ್ವವೂ ಸಾಧನೆ ಮತ್ತು ಗುರುಕೃಪೆಯಿಂದ ಪ್ರಕಟವಾಗುತ್ತದೆ. ನಮ್ಮೊಳಗಿನ ಒಳ್ಳೆಯತನವನ್ನು ಬೆಳೆಸಿಕೊಂಡಾಗ ಮಾತ್ರ ದೇವರ ಸಾಕ್ಷಾತ್ಕಾರದ ಅನುಭವ ಸಾಧ್ಯವಾಗುತ್ತದೆ ಎಂದು ಬಸವಕೇಂದ್ರ ಶ್ರೀಗಳು ವಿವರಿಸಿದರು.

ಬಸವಣ್ಣನವರ ಮತ್ತೊಂದು ವಚನವಾದ,

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ:
ಪಾತಾಳದಿಂದತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮಕುಟ!
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ,
ಕೂಡಲಸಂಗಮದೇವಯ್ಯಾ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ!

ಎಂಬ ವಚನದ ಮೂಲಕ ದೇವರ ಅಗಾಧತೆಯನ್ನು ವಿವರಿಸಿದರು.

ದೇವರನ್ನು ಅಳತೆ ಮಾಡುವುದು ಸಾಧ್ಯವಿಲ್ಲ. ಆತನ ಪಾದಗಳು ಪಾತಾಳದವರೆಗೆ, ಮುಕುಟ ಬ್ರಹ್ಮಾಂಡದವರೆಗೆ ವ್ಯಾಪಿಸಿದೆ. ಮಾನವನ ಕಲ್ಪನೆಗೂ, ಇಂದ್ರಿಯಗಳ ಅನುಭವಕ್ಕೂ ನಿಲುಕದ ಅಗಮ್ಯ, ಅಗೋಚರ, ಅಪ್ರತಿಮ ಶಕ್ತಿಯೇ ದೇವರು. ಅಂತಹ ವಿಶ್ವವ್ಯಾಪಿ ಪರಮಾತ್ಮನು ಇಷ್ಟಲಿಂಗದ ರೂಪದಲ್ಲಿ ಭಕ್ತನ ಕರಸ್ಥಳದಲ್ಲಿ ನೆಲೆಸಿದ್ದಾನೆ ಎಂಬುದು ಬಸವಣ್ಣನವರ ಚಿಂತನೆಯ ಮಹತ್ವವಾಗಿದೆ.

ದೇವರು ದೇವಸ್ಥಾನದಲ್ಲಿ ಮಾತ್ರ ಇದ್ದಾನೆ, ನಿರ್ದಿಷ್ಟ ಕ್ಷೇತ್ರಗಳಲ್ಲಿ ಮಾತ್ರ ನೆಲೆಸಿದ್ದಾನೆ ಎಂಬ ಸಂಕುಚಿತ ದೃಷ್ಟಿಕೋನವನ್ನು ಬಿಟ್ಟು, ಅಣುರೇಣು ತೃಣಕಾಷ್ಠಗಳಲ್ಲೂ ದೇವರ ಅಸ್ತಿತ್ವವನ್ನು ಕಾಣುವ ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು. ನೋಡುವ ಕಣ್ಣು, ಮುಟ್ಟುವ ಕೈ, ನಡೆಯುವ ಕಾಲು, ನಾವು ನಡೆಯುವ ನೆಲ ಹೀಗೆ ಸಕಲ ಚರಾಚರಗಳಲ್ಲೂ ದೈವತ್ವದ ಇರುವಿಕೆಯನ್ನು ಗುರುತಿಸಬೇಕು. ನಮ್ಮೊಳಗೆ ದೇವರನ್ನು ಕಾಣಲು ಕಲಿತಾಗ ಇಡೀ ಜಗತ್ತೇ ದೇವರ ರೂಪವಾಗಿ ಗೋಚರಿಸುತ್ತದೆ ಎಂದರು.

ದೇವರನ್ನು ಒಲಿಸಿಕೊಳ್ಳಲು ಪೂಜೆ, ಪುನಸ್ಕಾರ, ತೀರ್ಥಯಾತ್ರೆಗಳು ಮಾಡಬಾರದು ಎಂದಲ್ಲ. ಅವುಗಳಿಂದ ನಮ್ಮ ಮನಸ್ಸು, ಹೃದಯ, ಬುದ್ಧಿ ಮತ್ತು ಭಾವನೆಗಳು ಪರಿಶುದ್ಧವಾಗಲು ನೆರವಾಗುತ್ತದೆ. ಆದರೆ ಇವುಗಳನ್ನು ಮಾಡುವುದರಿಂದಲೇ ದೇವರ ಅನುಗ್ರಹ ದೊರೆಯುತ್ತದೆ ಎಂದು ಭಾವಿಸಬಾರದು. ನಮ್ಮ ನಡವಳಿಕೆ, ನೈತಿಕ ಮೌಲ್ಯಗಳು ಮತ್ತು ವ್ಯಕ್ತಿತ್ವವೂ ಪರಿಶುದ್ಧವಾಗಬೇಕು.

ಬಸವಣ್ಣನವರು ಸಾರಿದ “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ” ಎಂಬ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಇವುಗಳನ್ನು ಹೇಳುವುದು ಸುಲಭ, ಅನುಸರಿಸುವುದು ಕಷ್ಟ. ಆದರೂ ಸಣ್ಣ ಸಣ್ಣ ವಿಚಾರಗಳಿಂದಲೇ ನಮ್ಮ ಅಂತರಂಗದ ಶುದ್ಧೀಕರಣ ಆರಂಭವಾಗಬೇಕು. ನೈತಿಕ ಮೌಲ್ಯಗಳನ್ನು ಪಾಲಿಸುವ ವ್ಯಕ್ತಿತ್ವವನ್ನು ರೂಪಿಸಿಕೊಂಡಾಗ ದೇವರ ಅನುಗ್ರಹಕ್ಕೆ ನಾವು ಅರ್ಹರಾಗುತ್ತೇವೆ ಎಂದು ತಿಳಿಸಿದರು.

ದೇವರ ಸ್ವರೂಪವನ್ನು ವಿವರಿಸುವಾಗ ದೇವರು ಕೇವಲ ನಮ್ಮ ಇಷ್ಟಾರ್ಥಗಳನ್ನು ಈಡೇರಿಸುವ ಶಕ್ತಿಯಲ್ಲ ಎಂಬುದನ್ನು ಬಸವಣ್ಣನವರು ಮತ್ತೊಂದು ವಚನದಲ್ಲಿ ಹೇಳಿದ್ದಾರೆ.

ದೇವನೊಳ್ಳಿದನೆಂದು ಮುಯ್ಯಾನಲು ಬೇಡ!
ಕರಕಟ ಕಾಡಿದನೊಳ್ಳಿದನೆ?
ಅಳಿಸುವ ನಗಿಸುವನೊಳ್ಳಿದನೆ?
ಬೆಚ್ಚದೆ ಬೆದರದೆ ತೊತ್ತುತನವ ಮಾಡಲು,
ತನ್ನನೀವ ಕೂಡಲಸಂಗಮದೇವ.

ಎಂಬ ವಚನದ ಆಶಯವನ್ನು ವಿವರಿಸಿದ ಅವರು, ಜೀವನದಲ್ಲಿ ಸುಖ-ದುಃಖ, ನೋವು-ನಲಿವು, ಕಷ್ಟ-ನಷ್ಟಗಳು ಸಹಜ. ಸಂಕಷ್ಟ ಎದುರಾದಾಗ ಎದೆಗುಂದದೆ, ದೇವರು ನೀಡಿದ್ದನ್ನು ಪ್ರಸಾದವೆಂದು ಸ್ವೀಕರಿಸುವ ವಿನೀತ ಮನೋಭಾವ ಬೆಳೆಸಿಕೊಳ್ಳಬೇಕು. ಕಷ್ಟಗಳ ನಡುವೆಯೂ ಧೈರ್ಯ, ನಂಬಿಕೆ ಮತ್ತು ಸತ್ಕಾರ್ಯಗಳ ಹಾದಿಯಲ್ಲಿ ಮುನ್ನಡೆಯುವ ವ್ಯಕ್ತಿಗೆ ದೇವರ ಅನುಗ್ರಹ ದೊರೆಯುತ್ತದೆ ಎಂದರು.

ಇದೇ ಸಂದರ್ಭದಲ್ಲಿ “ಕಲ್ಲು ದೇವರು ದೇವರಲ್ಲ, ಮಣ್ಣು ದೇವರು ದೇವರಲ್ಲ…” ಎಂದು ಆರಂಭವಾಗುವ ಪ್ರಸಿದ್ಧ ವಚನವನ್ನು ಬಸವಣ್ಣನವರ ಹೆಸರಿನಲ್ಲಿ ಕೆಲವರು ಉಲ್ಲೇಖಿಸುತ್ತಾರೆ. ಆದರೆ ಅದು ಶರಣ ಬಾಲಸಂಗಯ್ಯನವರ ವಚನವಾಗಿದ್ದು, ಅದನ್ನು ಬಸವಣ್ಣನವರ ವಚನವೆಂದು ತಪ್ಪಾಗಿ ಗುರುತಿಸಲಾಗುತ್ತಿದೆ ಎಂಬುದನ್ನು ಸ್ವಾಮೀಜಿ ಸ್ಪಷ್ಟಪಡಿಸಿದರು. ಈ ವಚನದ ಆಶಯವೂ ದೇವರ ಸರ್ವವ್ಯಾಪಕತ್ವವನ್ನು ನಿರಾಕರಿಸುವುದಲ್ಲ ದೇವರನ್ನು ಹೊರಗಿನ ರೂಪಗಳಲ್ಲಿ ಮಾತ್ರ ಹುಡುಕದೆ ಮೊದಲು ನಮ್ಮೊಳಗೆ ಕಂಡುಕೊಳ್ಳಬೇಕು ಎಂಬುದಾಗಿದೆ ಎಂದು ವಿಶ್ಲೇಷಿಸಿದರು.

ಪಿ.ಆರ್. ಜಯದೇವಪ್ಪ ಅವರು ಈ ಭಾಗದಲ್ಲಿ ವೀರಶೈವ ಲಿಂಗಾಯತ ಸಂಘಟನೆಯನ್ನು ಕಟ್ಟಿ ಬೆಳೆಸುವಲ್ಲಿ ಶ್ರಮಿಸಿದ್ದಾರೆ. ಸಂಘಟನೆಯ ಹೆಸರಿನಲ್ಲಿ ಒಂದು ಸಮುದಾಯಕ್ಕೆ ಸೀಮಿತವಾಗದೆ, ಸಮಾಜದ ಎಲ್ಲ ವರ್ಗಗಳಿಗೂ ಅನುಕೂಲವಾಗುವ ಕಾರ್ಯಗಳನ್ನು ಕೈಗೊಂಡಿರುವುದು ಶ್ಲಾಘನೀಯ. ಗಿಡ ನೆಡುವುದು, ಸ್ವಚ್ಛತಾ ಕಾರ್ಯಕ್ರಮಗಳು, ಜನರಿಗೆ ಅಗತ್ಯ ಸಂಪರ್ಕ ಕಲ್ಪಿಸುವುದು, ಕೋವಿಡ್ ಸಂದರ್ಭದಲ್ಲಿ ಆಹಾರ ಧಾನ್ಯಗಳ ಕಿಟ್ ವಿತರಿಸುವುದು ಸೇರಿದಂತೆ ಅನೇಕ ಜನಪರ ಕಾರ್ಯಗಳನ್ನು ಜಾತಿ-ಮತಗಳ ಭೇದವಿಲ್ಲದೆ ಮಾಡಿದ್ದಾರೆ.

ಜಯದೇವಪ್ಪ ಅವರ ಮೂವರು ಸಹೋದರರು ಪ್ರತ್ಯೇಕ ಮನೆಗಳಲ್ಲಿ ವಾಸಿಸುತ್ತಿದ್ದರೂ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಬಾಂಧವ್ಯದಿಂದ ಬದುಕುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ. ಅವರ ಕುಟುಂಬದೊಂದಿಗೆ ನಮ್ಮದು ಆತ್ಮೀಯವಾದ ಸಂಬಂಧ. ಕುಟುಂಬದ ಶುಭಕಾರ್ಯಗಳಲ್ಲಿಯೂ ನಮ್ಮನ್ನು ಪ್ರೀತಿಯಿಂದ ಆಹ್ವಾನಿಸುತ್ತಾರೆ. ಇಂತಹ ಬಾಂಧವ್ಯಗಳು ಸಮಾಜದಲ್ಲಿ ಹೆಚ್ಚಾಗಬೇಕು ಎಂದು ಬಸವಕೇಂದ್ರ ಶ್ರೀಗಳು ಹಾರೈಸಿದರು.

ಕಾರ್ಯಕ್ರಮದ ಸೇವಾರ್ಥಿಗಳಾದ ಶರಣ ಶ್ವೇತಾ ಮತ್ತು ಶರಣ ವೇದಾನಂದ್ ದಂಪತಿಗಳು ಕೋವಿಡ್ ಸಂಕಷ್ಟದ ಕಾಲದಲ್ಲಿಯೂ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿ, ಪರಿಶ್ರಮದಿಂದ ಬೆಳೆಸಿರುವುದು ಅಭಿನಂದನೀಯ. ಲಿಟಲ್ ಬ್ರಿಡ್ಜ್ ಪ್ರೀಸ್ಕೂಲ್‌ನಲ್ಲಿ ಸುಮಾರು 150 ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸಿರುವುದು ಅವರ ಶ್ರಮ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ. ಕೇವಲ ದೇವರ ಅನುಗ್ರಹವಿದ್ದರೆ ಸಾಲದು, ಅದನ್ನು ಪಡೆಯಲು ಪರಿಶ್ರಮವೂ ಇರಬೇಕು. ದುಡಿಮೆ ಮತ್ತು ಬದ್ಧತೆ ಇದ್ದಾಗ ಸಾಧನೆಯ ಹಾದಿ ಸುಗಮವಾಗುತ್ತದೆ. ಈ ದಂಪತಿಗಳು ಇನ್ನಷ್ಟು ಉತ್ತಮ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಬೆಳೆಯಲಿ ಎಂದು ಬಸವಕೇಂದ್ರ ಶ್ರೀಗಳು ಶುಭ ಹಾರೈಸಿದರು.

ಡಾ. ಸಿ. ರೇಣುಕ ಅವರು ನಿವೃತ್ತಿಯ ನಂತರವೂ ಅಧ್ಯಯನದ ಆಸಕ್ತಿಯನ್ನು ಮುಂದುವರಿಸಿ, ಜೈನ ಸಿದ್ಧಾಂತ ಮತ್ತು ವೀರಶೈವ ಸಿದ್ಧಾಂತಗಳ ಎರಡನ್ನು ಅಧ್ಯಯನ ನಡೆಸಿ ಪಿಎಚ್.ಡಿ ಪದವಿ ಪಡೆದಿರುವುದು ಹೆಮ್ಮೆಯ ಸಂಗತಿ. ಕೇವಲ ಉದ್ಯೋಗ ಅಥವಾ ವೇತನ ಹೆಚ್ಚಳಕ್ಕಾಗಿ ಅಲ್ಲದೆ, ಜ್ಞಾನಾರ್ಜನೆಯ ಆಸಕ್ತಿಯಿಂದ ಸಂಶೋಧನೆ ನಡೆಸಿರುವುದು ಇಂದಿನ ಪೀಳಿಗೆಗೆ ಮಾದರಿಯಾಗಿದೆ ಎಂದರು.

ಶರಣ ತುರುವೂರು ಮಲ್ಲಿಕಾರ್ಜುನ ಅವರು ಶಿಕ್ಷಕರಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ಉತ್ತಮ ಕೆಲಸ ಮಾಡುತ್ತಿದ್ದಾರೆ. ಇಂದಿನ ಮೊಬೈಲ್ ಮತ್ತು ಎಮೋಜಿಗಳ ಯುಗದಲ್ಲಿ ಪತ್ರ ಬರೆಯುವ ಸಂಸ್ಕೃತಿ ಮರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ತಂದೆ-ತಾಯಂದಿರಿಗೆ ಪತ್ರ ಬರೆಸಿ, ಸುಮಾರು 500-600 ಪುಟಗಳ ಅಪರೂಪದ ಕೃತಿಯನ್ನು ಹೊರತಂದಿರುವುದು ವಿಶೇಷ. ಈ ಪತ್ರಗಳನ್ನು ಓದಿದರೆ ಪ್ರತಿಯೊಬ್ಬರೂ ಭಾವನಾತ್ಮಕವಾಗಿ ಸ್ಪಂದಿಸುತ್ತಾರೆ. ಅಲ್ಲದೆ, ಮಲೆನಾಡಿನಿಂದ ಬಾಹ್ಯಾಕಾಶದವರೆಗೆ ಎಂಬ ಶೀರ್ಷಿಕೆಯಡಿ ಒಬ್ಬ ವಿಜ್ಞಾನಿಯ ಜೀವನಗಾಥೆಯನ್ನು ಪರಿಚಯಿಸುವ ಕೃತಿಯನ್ನೂ ರಚಿಸಿರುವುದು ಅವರ ಸಾಹಿತ್ಯಿಕ ಆಸಕ್ತಿಗೆ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಅಕ್ಕನ ಬಳಗದ ಸದಸ್ಯರು ವಚನ ಗಾಯನದ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು. ಗುರುಕರ್ಣ ತ್ರಿವೇಣಿ ಅವರು ಬಸವಣ್ಣನವರ ಕುರಿತಾದ ವಚನಗಾಯನ ಪ್ರಸ್ತುತಪಡಿಸಿದರು. ಸಿದ್ಧಲಿಂಗ ಅವರು ಮುಪ್ಪಿನ ಷಡಾಕ್ಷರಿಯವರ ಗೀತೆಯನ್ನು ಹಾಡಿ, ಬೈದವರಿಗೂ ಒಳ್ಳೆಯದಾಗಲಿ ಎಂಬ ಭಾವನೆಯನ್ನು ಸಾರಿದರು.

ಬಸವಣ್ಣನವರ ವಚನಗಳ ಮೂಲಕ ದೇವರ ಅಸ್ತಿತ್ವ, ಭಕ್ತಿ, ನೈತಿಕತೆ, ಮಾನವೀಯ ಸಂಬಂಧಗಳು ಮತ್ತು ಸಮಾಜಮುಖಿ ಬದುಕಿನ ಮಹತ್ವವನ್ನು ತಿಳಿಸಿಕೊಟ್ಟ ಮೂರನೇ ದಿನದ ಚಿಂತನ ಕಾರ್ತಿಕ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.

ನಾಳಿನ ಕಾರ್ಯಕ್ರಮವು ಶರಣೆ ಗಾಯತ್ರಿ ಮತ್ತು ಶರಣ ಎಸ್.ಎಚ್. ಷಣ್ಮುಖಪ್ಪ ಅವರ ಸೋಮಿನಕೊಪ್ಪದ ನಿವಾಸದ ಆವರಣದಲ್ಲಿ ನಡೆಯಲಿದ್ದು, ಶರಣ ಬಸವನಗೌಡ ಮಾಳಿಗೆ ಅವರು ‘ಬಸವಣ್ಣ: ಅಂತರಂಗ ಮತ್ತು ಬಹಿರಂಗ’ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬಸವಕೇಂದ್ರ ಶ್ರೀಗಳು ಆಹ್ವಾನಿಸಿದರು.

ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ವೇದಿಕೆ, ಕುವೆಂಪುನಗರದ ಅಧ್ಯಕ್ಷರಾದ ಬಿ.ಆರ್. ಜಯದೇವಪ್ಪ, ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ನಿರ್ದೇಶಕರಾದ ಡಾ. ರೇಣುಕಾರಾಧ್ಯ ಸಿ. ಹಾಗೂ ಅಧ್ಯಾಪಕರಾದ ತುರುವನೂರು ಮಲ್ಲಿಕಾರ್ಜುನ ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಭಯ ಹುಟ್ಟಿಸುವುದಲ್ಲ ಧರ್ಮ; ದಯೆ, ಸಮಾನತೆ ಮತ್ತು ಕಾಯಕವೇ ಬಸವಣ್ಣನವರ ಧರ್ಮದ ಜೀವಾಳ: ಡಾ. ಬಸವ ಮರುಳಸಿದ್ಧ ಸ್ವಾಮೀಜಿ

ಬಸವಣ್ಣನವರ ಸಮಾನತೆಯ ಸಂದೇಶ ಇಂದಿನ ಯುವಜನತೆಗೆ ತಲುಪಬೇಕು; ಜಾತಿ, ಉಪಜಾತಿಗಳ ಕಂದಕ ಹೆಚ್ಚಿಸುವ ಬದಲು ಸಮಾನತೆಯ ಸಮಾಜ ನಿರ್ಮಾಣಕ್ಕೆ ಆದ್ಯತೆ ನೀಡೋಣ: ಸಿ.ಎಸ್. ಷಡಾಕ್ಷರಿ

ಬಸವಕೇಂದ್ರದ ಶ್ರೀಗಳ ಸಾನ್ನಿಧ್ಯದಲ್ಲಿ ಚಿಂತನ ಕಾರ್ತಿಕದ 20ನೇ ವರ್ಷದ ಸಂಭ್ರಮ; ಧರ್ಮದ ಹೆಸರಿನಲ್ಲಿ ವಿಭಜನೆ ಬೇಡ, ಬಸವಣ್ಣನವರ ಹಾದಿಯಲ್ಲಿ ಸಮ ಸಮಾಜ ನಿರ್ಮಿಸೋಣ: ಕರಿಬಸವಯ್ಯ ಹಾರ್ನಳ್ಳಿ

ಹಣ, ಅಧಿಕಾರ, ಅಂತಸ್ತು ಶಾಶ್ವತವಲ್ಲ; ಆಧ್ಯಾತ್ಮದ ಜ್ಞಾನಸಂಪತ್ತೇ ನಿಜವಾದ ಸಂಪತ್ತು, ಜಾತಿ-ಮತಗಳ ಭೇದ ಮರೆತು ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬದುಕಬೇಕು: ಶ್ರೀ ರಂಭಾಪುರಿ ಜಗದ್ಗುರುಗಳು

ಬಸವಕೇಂದ್ರದ ಶ್ರೀಗಳ ಸಾನ್ನಿಧ್ಯದಲ್ಲಿ ಚಿಂತನ ಕಾರ್ತಿಕದ 20ನೇ ವರ್ಷದ ಸಂಭ್ರಮ; ಮನೆಮನೆಗೆ ತಲುಪಿದ ಬಸವತತ್ವದ ಬೆಳಕು – ಜನರ ಮನಸ್ಸಿನಲ್ಲಿ ಚಿಂತನದ ಕಿಡಿ ಹೊತ್ತಿಸಿದ ‘ಚಿಂತನ ಕಾರ್ತಿಕ’

ವಚನಗಳ ತತ್ವ ಕೇವಲ ಮಾತಿಗೆ ಸೀಮಿತವಾಗದೆ ನಮ್ಮ ನಡೆ-ನುಡಿಯಲ್ಲಿ ಸಾಕಾರಗೊಳ್ಳಲಿ; ಜಾತಿ-ಉಪಜಾತಿಗಳ ಗೋಡೆ ಒಡೆದು ಸಮಾನತೆಯ ಸಮಾಜ ಕಟ್ಟೋಣ: ಉಪಕುಲಪತಿ ಡಾ. ಎಂ.ವಿ. ಧನಂಜಯ

Leave a Comment