ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ₹2,000 ಕೋಟಿ ಬಿಡುಗಡೆ ಮಾಡಿ; ಇಲ್ಲದಿದ್ದರೆ 2028ರಲ್ಲಿ ತಕ್ಕ ಪಾಠ ಕಲಿಸುತ್ತಾರೆ: ರಘು ಕೌಟಿಲ್ಯ

On: November 19, 2026 12:29 PM
Follow Us:

ಶಿವಮೊಗ್ಗ: ಅಧಿಕಾರದ ಗದ್ದುಗೆ ಏರಿದಾಗ ಸಾಮಾಜಿಕ ನ್ಯಾಯದ ಭರವಸೆ ನೀಡಿದವರು, ಆಡಳಿತದ ಮೂರು ವರ್ಷಗಳ ನಂತರ ಹಿಂದುಳಿದ ವರ್ಗಗಳ ಬದುಕಿಗೆ ಬೆಳಕು ನೀಡುವ ಬದಲು ಅವರ ಅಭಿವೃದ್ಧಿ ನಿಗಮಗಳನ್ನೇ ಅನುದಾನವಿಲ್ಲದೆ ಕತ್ತಲಲ್ಲಿಟ್ಟಿದ್ದಾರೆ. ಒಂದು ಕಡೆ ಬೆಲೆ ಏರಿಕೆಯ ಬಿಸಿ, ಮತ್ತೊಂದೆಡೆ ರೈತರ ಆತ್ಮಹತ್ಯೆ, ಇನ್ನೊಂದೆಡೆ ಕಾಯಕವನ್ನೇ ನಂಬಿ ಬದುಕುತ್ತಿರುವ ನೂರಾರು ಸಮುದಾಯಗಳ ಆರ್ಥಿಕ ಸಂಕಷ್ಟ. ಇಂತಹ ಸಂದರ್ಭದಲ್ಲಿ ಸಾಮಾಜಿಕ ನ್ಯಾಯದ ಭಾಷಣಗಳಿಗೆ ಅರ್ಥವೇನು? ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಕನಿಷ್ಠ ₹2,000 ಕೋಟಿ ಅನುದಾನ ಬಿಡುಗಡೆ ಮಾಡದಿದ್ದರೆ, 2028ರ ಚುನಾವಣೆಯಲ್ಲಿ ಈ ಸಮುದಾಯಗಳೇ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿವೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷರಾದ ರಘು ಕೌಟಿಲ್ಯ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಮೂರು ವರ್ಷಗಳ ಆಡಳಿತದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದ್ದು, ಭ್ರಷ್ಟಾಚಾರ, ಬೆಲೆ ಏರಿಕೆ ಮತ್ತು ಜನವಿರೋಧಿ ಆಡಳಿತವೇ ಪ್ರಮುಖವಾಗಿ ಕಾಣಿಸುತ್ತಿದೆ ಎಂದು ಆರೋಪಿಸಿದರು.

ಕಳೆದ ಬಾರಿ ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ್ದೆ. ಇದೀಗ ವಿಧಾನ ಪರಿಷತ್ತಿಗೆ ಆಯ್ಕೆಯಾದ ನಂತರ ಮತ್ತೊಮ್ಮೆ ಶಿವಮೊಗ್ಗಕ್ಕೆ ಆಗಮಿಸಿದ್ದೇನೆ. ಸಂಘಟನಾತ್ಮಕವಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು, ಹಾಸನದ ನಂತರ ಶಿವಮೊಗ್ಗಕ್ಕೆ ಬಂದಿದ್ದೇನೆ. ಕಲ್ಯಾಣ ಕರ್ನಾಟಕ ಸೇರಿದಂತೆ ವಿವಿಧ ಭಾಗಗಳಲ್ಲಿ ಪ್ರವಾಸ ನಡೆಸಿ ಅಲ್ಲಿನ ಹಿಂದುಳಿದ ವರ್ಗಗಳ ಸ್ಥಿತಿಗತಿಗಳನ್ನು ಅರಿಯುವ ಪ್ರಯತ್ನ ಮಾಡಿದ್ದೇನೆ. ಹಿಂದುಳಿದ ವರ್ಗಗಳ ಧ್ವನಿಯಾಗಿ ಕೆಲಸ ಮಾಡುವುದು ನನ್ನ ಪ್ರಮುಖ ಉದ್ದೇಶವಾಗಿದೆ ಎಂದರು.

ರಾಜ್ಯದಲ್ಲಿ ಜನಸಂಖ್ಯೆಯ ಅರ್ಧದಷ್ಟು ಪಾಲು ಹೊಂದಿರುವ ಹಿಂದುಳಿದ ಹಾಗೂ ಅತಿ ಹಿಂದುಳಿದ ವರ್ಗಗಳು, ಕುಲಕಸುಬು ಆಧಾರಿತ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರ ಯಾವುದೇ ಪರಿಣಾಮಕಾರಿ ಕಾರ್ಯಕ್ರಮ ರೂಪಿಸಿಲ್ಲ. ಈ ಸಮುದಾಯಗಳ ಅಭಿವೃದ್ಧಿ ನಿಗಮಗಳಿಗೆ ಅಗತ್ಯ ಅನುದಾನ ನೀಡದೆ ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರು, ವಾಸ್ತವದಲ್ಲಿ ಈ ಸಮುದಾಯಗಳ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೆ ಯಾವ ಕೊಡುಗೆ ನೀಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸವಾಲು ಹಾಕಿದರು.

ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿರುವ ರೈತರು ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿದಾಗ, ರೈತರನ್ನು ಅವಲಂಬಿಸಿ ಬದುಕುವ ಸವಿತಾ, ಮಡಿವಾಳ, ಕುಂಬಾರ, ವಿಶ್ವಕರ್ಮ, ಅಂಬಿಗ, ಉಪ್ಪಾರ ಸೇರಿದಂತೆ ಅನೇಕ ಕಾಯಕಾಧಾರಿತ ಸಮುದಾಯಗಳ ಜೀವನವೂ ಸಂಕಷ್ಟಕ್ಕೆ ಸಿಲುಕುತ್ತದೆ. ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಸ್ಥಿತಿಯೂ ಗಂಭೀರವಾಗಿದೆ. ಆದರೆ, ಇಂತಹ ಸಮುದಾಯಗಳಿಗೆ ನೆರವಾಗಬೇಕಾದ ಸರ್ಕಾರವೇ ಅಭಿವೃದ್ಧಿ ನಿಗಮಗಳಿಗೆ ಅನುದಾನ ನೀಡದೆ ಕೈಕಟ್ಟಿ ಕುಳಿತಿದೆ ಎಂದು ಟೀಕಿಸಿದರು.

ಶಿಕಾರಿಪುರ ಕ್ಷೇತ್ರ ವ್ಯಾಪ್ತಿಯಲ್ಲಿ ರಮೇಶ್ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿರುವುದು ರಾಜ್ಯದ ಕೃಷಿ ವಲಯ ಎದುರಿಸುತ್ತಿರುವ ಸಂಕಷ್ಟಕ್ಕೆ ಉದಾಹರಣೆಯಾಗಿದೆ. ರೈತರಿಗೆ ಆತ್ಮಸ್ಥೈರ್ಯ ತುಂಬುವ ಹಾಗೂ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗುವಂತಹ ಪರಿಣಾಮಕಾರಿ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿವಿಧ ಸಮುದಾಯಗಳ ಅಭಿವೃದ್ಧಿಗಾಗಿ ರಚಿಸಿರುವ ನಿಗಮಗಳಿಗೆ ಸರ್ಕಾರ ನೀಡಿರುವ ಅನುದಾನದ ವಿವರಗಳನ್ನು ಪ್ರಸ್ತಾಪಿಸಿದ ರಘು ಕೌಟಿಲ್ಯ ಅವರು, ಅನೇಕ ನಿಗಮಗಳಿಗೆ ಅತ್ಯಲ್ಪ ಮೊತ್ತ ನೀಡಲಾಗಿದೆ ಎಂದು ಆರೋಪಿಸಿದರು.

  • ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ₹125 ಕೋಟಿ.
  • ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ₹11 ಕೋಟಿ.
  • ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ₹17 ಕೋಟಿ.
  • ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ₹6.88 ಕೋಟಿ.
  • ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ₹16.50 ಕೋಟಿ.
  • ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ₹82 ಕೋಟಿ.
  • ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ ₹82 ಕೋಟಿ.
  • ಸವಿತಾ ಸಮಾಜ ಅಭಿವೃದ್ಧಿ ನಿಗಮಕ್ಕೆ ₹6.88 ಕೋಟಿ.
  • ಮಾಚಿದೇವ ಅಭಿವೃದ್ಧಿ ನಿಗಮಕ್ಕೆ ₹12 ಕೋಟಿ.
  • ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ₹20 ಕೋಟಿ.
  • ಮರಾಠ ಅಭಿವೃದ್ಧಿ ನಿಗಮಕ್ಕೆ ₹68 ಕೋಟಿ.
  • ತಿಗಳ ಸಮುದಾಯ ಅಭಿವೃದ್ಧಿ ನಿಗಮಕ್ಕೆ ₹2 ಕೋಟಿ.
  • ಕುಂಬಾರ ಅಭಿವೃದ್ಧಿ ನಿಗಮಕ್ಕೆ ₹2 ಕೋಟಿ.
  • ಗಾಣಿಗ ಅಭಿವೃದ್ಧಿ ನಿಗಮಕ್ಕೆ ₹2 ಕೋಟಿ.
  • ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ₹10 ಕೋಟಿ.
  • ಕೊಡವ ಅಭಿವೃದ್ಧಿ ನಿಗಮಕ್ಕೆ ₹2 ಕೋಟಿ.

ಕೆಲವು ಸಮುದಾಯಗಳ ಅಭಿವೃದ್ಧಿ ನಿಗಮಗಳಿಗೆ ಅತ್ಯಲ್ಪ ಅನುದಾನ ನೀಡಲಾಗಿದ್ದರೆ, ಕೆಲವು ಸಮುದಾಯಗಳಿಗೆ ಯಾವುದೇ ಅನುದಾನ ನೀಡಿಲ್ಲ. ಸದನದಲ್ಲಿ ಪ್ರಶ್ನೆ ಕೇಳಿ ಪಡೆದುಕೊಂಡಿರುವ ದಾಖಲೆಗಳ ಆಧಾರದಲ್ಲಿಯೇ ಈ ಮಾಹಿತಿಯನ್ನು ನೀಡುತ್ತಿದ್ದೇನೆ. ಸರ್ಕಾರ ಇದಕ್ಕೆ ಉತ್ತರಿಸಬೇಕು ಎಂದು ಆಗ್ರಹಿಸಿದರು.

ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಗೆ ಮುಂದಿನ ಅಧಿವೇಶನದೊಳಗೆ ಕನಿಷ್ಠ ₹2,000 ಕೋಟಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಬೇಕು. ಕೇವಲ ನಿಗಮಗಳನ್ನು ಸ್ಥಾಪಿಸಿ ಕಚೇರಿಗಳನ್ನು ತೆರೆದು ಅಧಿಕಾರಿಗಳನ್ನು ನೇಮಕ ಮಾಡಿದರೆ ಸಮುದಾಯಗಳ ಅಭಿವೃದ್ಧಿಯಾಗುವುದಿಲ್ಲ. ಆರ್ಥಿಕ ನೆರವು, ಸ್ವಯಂ ಉದ್ಯೋಗ, ಶಿಕ್ಷಣ, ಉದ್ಯೋಗ ಮತ್ತು ವೃತ್ತಿ ಅಭಿವೃದ್ಧಿಗೆ ನಿರ್ದಿಷ್ಟ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಎಸ್‌ಸಿಪಿ-ಟಿಎಸ್‌ಪಿ ಕಾಯ್ದೆಯ ಮಾದರಿಯಲ್ಲಿ ಹಿಂದುಳಿದ ಹಾಗೂ ಅತಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೂ ಪ್ರತ್ಯೇಕ ಕಾಯ್ದೆ ರೂಪಿಸಬೇಕು. ವಿಶೇಷವಾಗಿ ಕುಲಕಸುಬು ಆಧಾರಿತ ಸಮುದಾಯಗಳ ಅಭಿವೃದ್ಧಿಗೆ ಪ್ರತಿ ವರ್ಷ ಬಜೆಟ್‌ನಲ್ಲಿ ಕನಿಷ್ಠ ₹20,000 ಕೋಟಿ ಮೊತ್ತವನ್ನು ನಿಗದಿಪಡಿಸುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಇಂದಿನ ಆಧುನಿಕ ತಂತ್ರಜ್ಞಾನ ಮತ್ತು ಯಾಂತ್ರೀಕರಣದಿಂದ ಅನೇಕ ಸಾಂಪ್ರದಾಯಿಕ ವೃತ್ತಿಗಳು ನಶಿಸುತ್ತಿವೆ. ತಲೆಮಾರುಗಳಿಂದ ಕುಲಕಸುಬನ್ನೇ ನಂಬಿಕೊಂಡು ಬದುಕುತ್ತಿದ್ದ ಕುಟುಂಬಗಳು ಉದ್ಯೋಗ ಕಳೆದುಕೊಳ್ಳುತ್ತಿವೆ. ಬಹುತೇಕ ಕುಟುಂಬಗಳಿಗೆ ಸ್ವಂತ ಭೂಮಿಯಿಲ್ಲ, ಆರ್ಥಿಕ ಶಕ್ತಿಯಿಲ್ಲ, ರಾಜಕೀಯ ಪ್ರಾತಿನಿಧ್ಯವೂ ಇಲ್ಲ. ಮೀಸಲಾತಿಯ ಸೌಲಭ್ಯಗಳಿದ್ದರೂ ಅವುಗಳ ಪ್ರಯೋಜನ ಎಲ್ಲರಿಗೂ ಸಮರ್ಪಕವಾಗಿ ತಲುಪುತ್ತಿಲ್ಲ. ಇಂತಹ ಸಮುದಾಯಗಳಿಗೆ ವಿಶೇಷ ಆರ್ಥಿಕ ಭದ್ರತೆ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.

ರಾಜ್ಯ ಸರ್ಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವಿಚಾರದಲ್ಲಿಯೂ ಜನರನ್ನು ಗೊಂದಲದಲ್ಲಿಟ್ಟಿದೆ ಎಂದು ಆರೋಪಿಸಿದ ಅವರು, ಕಾಂತರಾಜು ವರದಿಗಾಗಿ ಸುಮಾರು ₹160 ಕೋಟಿ ವೆಚ್ಚ ಮಾಡಲಾಗಿದೆ. ನಂತರ ಮಧುಸೂದನ್ ನಾಯಕ್ ವರದಿಗಾಗಿ ಸುಮಾರು ₹400 ಕೋಟಿ ವೆಚ್ಚವಾಗಿದೆ. ಒಟ್ಟಾರೆ ಸಾರ್ವಜನಿಕರ ತೆರಿಗೆ ಹಣದಲ್ಲಿ ಸುಮಾರು ₹600 ಕೋಟಿ ಖರ್ಚಾಗಿದ್ದರೂ, ರಾಜ್ಯದ ವಿವಿಧ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ತಿಳಿಸುವ ವರದಿಯನ್ನು ಜನರ ಮುಂದಿಡಲು ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು.

ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ವರದಿಗಳ ವಿಚಾರದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಮಧುಸೂದನ್ ನಾಯಕ್ ವರದಿಯನ್ನು ಕೂಡಲೇ ಬಿಡುಗಡೆ ಮಾಡಬೇಕು. ವರದಿಯ ಆಧಾರದಲ್ಲಿ ಹಿಂದುಳಿದ ವರ್ಗಗಳ ನೈಜ ಸ್ಥಿತಿಗತಿಗಳನ್ನು ಗುರುತಿಸಿ, ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳ ಪ್ರಮುಖ ಉದ್ದೇಶ ಸ್ವಯಂ ಉದ್ಯೋಗಕ್ಕೆ ನೆರವು ನೀಡುವುದು, ವಿದ್ಯಾರ್ಥಿಗಳಿಗೆ ಶಿಕ್ಷಣದ ಅವಕಾಶ ಕಲ್ಪಿಸುವುದು, ಸಣ್ಣ ಹಿಡುವಳಿದಾರರಿಗೆ ಕೃಷಿ ಚಟುವಟಿಕೆಗಳಿಗೆ ಸಹಾಯ ಮಾಡುವುದು ಹಾಗೂ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಸುವ ಮೂಲಕ ಆರ್ಥಿಕವಾಗಿ ಸಬಲಗೊಳಿಸುವುದಾಗಿದೆ.

ಆದರೆ, ಶಿವಮೊಗ್ಗ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ನಿಗಮಗಳ ಮೂಲಕ ಎಷ್ಟು ಫಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಸೌಲಭ್ಯ ಕಲ್ಪಿಸಲಾಗಿದೆ ಎಂಬುದನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಮಾಹಿತಿ ಪಡೆದು ಬಹಿರಂಗಪಡಿಸಬೇಕು. 10 ಕೊಳವೆಬಾವಿ ಕೊರೆಸಿದ್ದೀರಾ, 20 ಕೊಳವೆಬಾವಿ ಕೊರೆಸಿದ್ದೀರಾ ಎಂಬುದಕ್ಕೆ ದಾಖಲೆ ಸಹಿತ ಉತ್ತರ ನೀಡಬೇಕು. ಹಿಂದುಳಿದ ವರ್ಗಗಳ ಪರವಾಗಿ ಭಾಷಣ ಮಾಡುವುದಷ್ಟೇ ಸಾಕಾಗುವುದಿಲ್ಲ, ನೆಲಮಟ್ಟದಲ್ಲಿ ಎಷ್ಟು ಜನರಿಗೆ ನೆರವು ತಲುಪಿದೆ ಎಂಬುದನ್ನು ತಿಳಿಸಬೇಕು ಎಂದು ಸವಾಲು ಹಾಕಿದರು.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿಯೂ ಸಂಘಟಿತವಾಗದೆ ಉಳಿದಿರುವ ಹಿಂದುಳಿದ ಹಾಗೂ ಕಾಯಕಾಧಾರಿತ ಸಮುದಾಯಗಳ ಮತದಾರರ ಸಂಖ್ಯೆ ಗಣನೀಯವಾಗಿದೆ. ಅಂದಾಜು 75ರಿಂದ 80 ಸಾವಿರ ಮತದಾರರನ್ನು ಹೊಂದಿರುವ ಈ ಸಮುದಾಯಗಳ ರಾಜಕೀಯ ಶಕ್ತಿಯನ್ನು ಯಾವುದೇ ಪಕ್ಷ ನಿರ್ಲಕ್ಷಿಸುವಂತಿಲ್ಲ. ಇಷ್ಟು ದೊಡ್ಡ ಸಂಖ್ಯೆಯ ಜನರನ್ನು ಕಡೆಗಣಿಸಿರುವ ಕಾಂಗ್ರೆಸ್ ಸರ್ಕಾರಕ್ಕೆ 2028ರ ವಿಧಾನಸಭಾ ಚುನಾವಣೆಯಲ್ಲಿ ಜನರೇ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು.

ರಾಜ್ಯದ ಖಜಾನೆ ಆರ್ಥಿಕ ಸಂಕಷ್ಟದಲ್ಲಿದೆ. ಸರ್ಕಾರದ ಬಳಿ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಕೇಂದ್ರ ಸರ್ಕಾರ ಮತ್ತು ದೇಶದ ಆರ್ಥಿಕ ಸ್ಥಿತಿಯ ಬಗ್ಗೆ ಟೀಕೆ ಮಾಡುವ ಮೊದಲು ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಕಾಂಗ್ರೆಸ್ ನಾಯಕರು ಪರಿಶೀಲಿಸಬೇಕು. ರಾಹುಲ್ ಗಾಂಧಿ ಅವರು ವಿದೇಶಗಳಲ್ಲಿ ಭಾರತದ ಆರ್ಥಿಕ ಸ್ಥಿತಿಯ ಬಗ್ಗೆ ಮಾತನಾಡುವ ಬದಲು ಕರ್ನಾಟಕದ ಆಡಳಿತದ ಸ್ಥಿತಿಯನ್ನೂ ಗಮನಿಸಬೇಕು ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಮ್ಮ ಮೇಲೆ ವಿಶ್ವಾಸವಿಟ್ಟು ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷ ಜವಾಬ್ದಾರಿ ನೀಡುವುದರ ಜೊತೆಗೆ ವಿಧಾನ ಪರಿಷತ್ತಿಗೆ ಆಯ್ಕೆಯಾಗುವ ಅವಕಾಶ ಕಲ್ಪಿಸಿದ್ದಾರೆ. ಮಡಿವಾಳ ಸಮುದಾಯದಂತಹ ಸಣ್ಣ ಸಮುದಾಯದಿಂದ ಬಂದಿರುವ ನನಗೆ ನೂರಾರು ಹಿಂದುಳಿದ ಮತ್ತು ಅತಿ ಹಿಂದುಳಿದ ಸಮುದಾಯಗಳ ಧ್ವನಿಯಾಗುವ ಅವಕಾಶ ದೊರೆತಿದೆ. ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವುದು ನನ್ನ ಕರ್ತವ್ಯವಾಗಿದೆ ಎಂದರು.

ಸಂಘಟಿತ ಸಮುದಾಯಗಳಿಗೆ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಹೆಚ್ಚಿನ ಪ್ರಾತಿನಿಧ್ಯ ದೊರೆಯುತ್ತಿದೆ. ಆದರೆ, ಅಸಂಘಟಿತ ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವ ಸಣ್ಣ ಸಮುದಾಯಗಳು ಇನ್ನೂ ಅವಕಾಶಗಳಿಂದ ವಂಚಿತವಾಗಿವೆ. ಸಂಘಟಿತ ಸಮುದಾಯಗಳ ಭೂಮಿಗೆ ಆರ್‌ಟಿಸಿ ಇರುವಂತೆ, ಅಸಂಘಟಿತ ಸಮುದಾಯಗಳನ್ನು ಖರಾಬು ಭೂಮಿಯಂತೆ ಪರಿಗಣಿಸುವ ಮನೋಭಾವ ಬದಲಾಗಬೇಕು. ಈ ಸಮುದಾಯಗಳಿಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಮೌಲ್ಯ ಹಾಗೂ ಗೌರವ ದೊರೆಯುವಂತಾಗಬೇಕು ಎಂಬ ಉದ್ದೇಶದಿಂದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವಿಶೇಷ ಸಂಘಟನಾ ಅಭಿಯಾನ ಆರಂಭಿಸಿದೆ ಎಂದು ತಿಳಿಸಿದರು.

ಹಿಂದುಳಿದ ವರ್ಗಗಳ ಹೆಸರಿನಲ್ಲಿ ಗುರುತಿಸದೆ ಉಳಿದಿರುವ ನೂರಾರು ಸಣ್ಣ ಸಮುದಾಯಗಳನ್ನು ಗುರುತಿಸಿ, ಅವರಲ್ಲಿ ಸಂಘಟನಾ ಜಾಗೃತಿ ಮೂಡಿಸುವುದು ನಮ್ಮ ಗುರಿಯಾಗಿದೆ. ಶಿಕ್ಷಣ, ಉದ್ಯೋಗ, ಸ್ವಯಂ ಉದ್ಯೋಗ, ರಾಜಕೀಯ ಪ್ರಾತಿನಿಧ್ಯ ಹಾಗೂ ಸಂವಿಧಾನಬದ್ಧ ಹಕ್ಕುಗಳನ್ನು ಪಡೆಯಲು ಅವರಿಗೆ ಮಾರ್ಗದರ್ಶನ ನೀಡಲಾಗುವುದು. ಈ ಸಮುದಾಯಗಳು ತಾವು ಒಂಟಿಯಲ್ಲ, ತಮ್ಮ ಧ್ವನಿಗೂ ರಾಜಕೀಯ ವೇದಿಕೆಯಲ್ಲಿ ಅವಕಾಶವಿದೆ ಎಂಬ ವಿಶ್ವಾಸ ಮೂಡಿಸುವ ಕೆಲಸ ಮಾಡುತ್ತೇವೆ ಎಂದರು.

ನವೆಂಬರ್ 19ರಂದು ಸಂಜೆ 5 ಗಂಟೆಗೆ ಶಿವಮೊಗ್ಗ ಚೇಂಬರ್ ಆಫ್ ಕಾಮರ್ಸ್‌ನಲ್ಲಿ ರಘು ಕೌಟಿಲ್ಯ ಅವರ ನೇತೃತ್ವದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಹಾಗೂ ಜನಸಾಮಾನ್ಯರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಹಿಂದುಳಿದ ವರ್ಗಗಳ ಮುಖಂಡರು, ಸಮುದಾಯಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ತಮ್ಮ ಸಮಸ್ಯೆ ಮತ್ತು ಬೇಡಿಕೆಗಳನ್ನು ನೇರವಾಗಿ ಪ್ರಸ್ತಾಪಿಸಬಹುದು. ಮಾಧ್ಯಮ ಮಿತ್ರರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಹಿಂದುಳಿದ ವರ್ಗಗಳ ಅಭಿವೃದ್ಧಿ ಕೇವಲ ಚುನಾವಣಾ ಘೋಷಣೆಯಾಗದೆ, ಬಜೆಟ್‌ನಲ್ಲಿ ಅನುದಾನ, ಕಾಯ್ದೆಯ ರೂಪದಲ್ಲಿ ರಕ್ಷಣೆ ಮತ್ತು ಅನುಷ್ಠಾನದಲ್ಲಿ ಬದ್ಧತೆಯಾಗಿ ಕಾಣಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಮುದಾಯಗಳನ್ನು ಸಂಘಟಿಸಿ, ಅವರ ಹಕ್ಕುಗಳಿಗಾಗಿ ಹೋರಾಟ ನಡೆಸಲಾಗುವುದು ಎಂದು ರಘು ಕೌಟಿಲ್ಯ ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಕುಬೇರಪ್ಪ, ಜಿಲ್ಲಾಧ್ಯಕ್ಷ ಸುಧಾಕರ್, ಜಿಲ್ಲಾ ಮಾಧ್ಯಮ ಪ್ರಮುಖರಾದ ಚಂದ್ರಶೇಖರ್ ಎಸ್. ಮತ್ತು ಮಂಜುನಾಥ್ ಎನ್., ಪಕ್ಷದ ಪ್ರಮುಖರಾದ ಲೋಕೇಶ್, ಪ್ರಭಾಕರ್, ಸಂತೋಷ್ ಶೇಟ್, ರಂಗನಾಥ್ ಹಾಗೂ ಪ್ರದೀಪ್ ಹೊನ್ನಪ್ಪ ಸೇರಿದಂತೆ ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಬಸವಣ್ಣನವರ ಘನತೆಗೆ ಧಕ್ಕೆ ಆರೋಪ: ‘ಬಸವ ಮಂಟಪ’ ಕೃತಿ ಮುಟ್ಟುಗೋಲಿಗೆ ರಾಜ್ಯ ಸಚಿವ ಸಂಪುಟ ಅಸ್ತು!

ಬಸವಣ್ಣನವರ ಗೌರವಕ್ಕೆ ಧಕ್ಕೆ ತರುವ ಕೃತಿಗಳ ವಿರುದ್ಧ ಕ್ರಮ ಕೈಗೊಳ್ಳಲಿ: ಸುನೀಲ್ ಕುಮಾರ್

ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸುವ ಹೊಣೆ ಶಿಕ್ಷಕರ ಮೇಲಿದೆ: ಸಿಎಂ ಡಿ.ಕೆ. ಶಿವಕುಮಾರ್

ಬಸವಣ್ಣನವರ ತೇಜೋವಧೆ ಸಹಿಸುವುದಿಲ್ಲ; ‘ಬಸವ ಮಂಟಪ’ ಕೃತಿ ನಿಷೇಧಿಸಿ: ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಬಸವಣ್ಣನವರ ವಿರುದ್ಧ ಅವಹೇಳನಕಾರಿ ಹೇಳಿಕೆ; ರವಿ ಹಂಜ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರ: ಶಂಕರ್ ಬಿದರಿ

ಬಸವಣ್ಣನವರ ಗೌರವಕ್ಕೆ ಧಕ್ಕೆ ತರುವ ಕೃತ್ಯ ಸಹಿಸುವುದಿಲ್ಲ; ವಿವಾದಾತ್ಮಕ ಕೃತಿ ಮುಟ್ಟುಗೋಲಿಗೆ ಬಿ.ವೈ. ವಿಜಯೇಂದ್ರ ಆಗ್ರಹ

Leave a Comment