ಬಸವತತ್ತ್ವಕ್ಕೆ ಅಪಚಾರ ಎಸಗುವವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ | ಪುಸ್ತಕ ಮುಟ್ಟುಗೋಲು ಹಾಕಿ, ಲೇಖಕರನ್ನು ಬಂಧಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ
ಸಾಣೇಹಳ್ಳಿ: ಶತಮಾನಗಳ ಇತಿಹಾಸ, ಸಮಾನತೆಯ ಸಂದೇಶ, ಕಾಯಕ-ದಾಸೋಹದ ತತ್ತ್ವ ಹಾಗೂ ಮಾನವೀಯ ಮೌಲ್ಯಗಳ ಮೂಲಕ ಜಗತ್ತಿಗೆ ಬೆಳಕಾದ ಜಗಜ್ಯೋತಿ ಬಸವಣ್ಣನವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಬಸವಣ್ಣನವರ ಚಿಂತನೆಗಳನ್ನು ತಿರುಚಿ, ವಚನಗಳ ಆಶಯಕ್ಕೆ ವಿರುದ್ಧವಾದ ಅರ್ಥಗಳನ್ನು ಕಲ್ಪಿಸಿ, ಶರಣ ಪರಂಪರೆಯ ಘನತೆಗೆ ಧಕ್ಕೆ ತರುವ ಕೃತಿಯನ್ನು ಪ್ರಕಟಿಸಿರುವವರ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಆಗ್ರಹಿಸಿದ್ದಾರೆ.
ಬಸವಣ್ಣನವರ ವಿಚಾರಧಾರೆಗೆ ಅಪಚಾರ ಎಸಗುವ ಮೂಲಕ ಒಂದು ಧರ್ಮದ ಅಸ್ಮಿತೆ, ಶರಣ ಪರಂಪರೆಯ ಗೌರವ ಹಾಗೂ ಕೋಟ್ಯಂತರ ಭಕ್ತರ ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸ್ವಯಂ ಘೋಷಿತ ಸಂಶೋಧಕ ರವಿ ಹಂಜ್ ಅವರು ಮೊದಲಿನಿಂದಲೂ ಬಸವಣ್ಣನವರು, ಲಿಂಗಾಯತ ಧರ್ಮ ಹಾಗೂ ಲಿಂಗಾಯತ ಸಮುದಾಯದ ಕುರಿತು ಅವಹೇಳನಕಾರಿ ಬರಹಗಳನ್ನು ಪ್ರಕಟಿಸುತ್ತಾ ಬಂದಿದ್ದಾರೆ. ಇದೀಗ ‘ಬಸವ ಮಂಟಪ’ ಎಂಬ 564 ಪುಟಗಳ ಕೃತಿಯನ್ನು ವಿಶ್ವವಾಣಿ ಪ್ರಕಾಶನದ ಮೂಲಕ ಪ್ರಕಟಿಸಿ, ನವೆಂಬರ್ 15ರಂದು ಬಿಡುಗಡೆ ಮಾಡಿರುವುದು ವಿವಾದಕ್ಕೆ ಮತ್ತಷ್ಟು ಕಿಡಿ ಹಚ್ಚಿದೆ ಎಂದು ಸಾಣೇಹಳ್ಳಿ ಶ್ರೀಗಳು ತಿಳಿಸಿದ್ದಾರೆ.
ವಿಶ್ವೇಶ್ವರ ಭಟ್ ಅವರ ಪತ್ರಿಕೆಯಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ರವಿ ಹಂಜ್ ಅವರು ಲಿಂಗಾಯತರು ಮತ್ತು ಬಸವಣ್ಣನವರ ಕುರಿತು ತುಚ್ಛವಾಗಿ ಬರೆಯುತ್ತಿದ್ದರೂ, ಅದಕ್ಕೆ ವಿಶ್ವೇಶ್ವರ ಭಟ್ ಅವರು ಬೆಂಬಲ ನೀಡುತ್ತಾ ಬಂದಿದ್ದಾರೆ ಎಂಬುದು ನಮ್ಮ ಆಕ್ಷೇಪವಾಗಿದೆ. ಇದೀಗ ಅವರ ಪ್ರಕಾಶನ ಸಂಸ್ಥೆಯಿಂದಲೇ ಇಂತಹ ಕೃತಿ ಪ್ರಕಟವಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೃತಿಯ ಮೊದಲ ಮತ್ತು ಎರಡನೇ ಆವೃತ್ತಿಗಳ ಪ್ರಕಟಣೆಯ ದಿನಾಂಕವನ್ನು ಅಕ್ಟೋಬರ್ 2026 ಎಂದು ನಮೂದಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ವಚನಗಳ ಅರ್ಥವನ್ನೇ ತಿರುಚುವ ಪ್ರಯತ್ನ
‘ಬಸವ ಮಂಟಪ’ ಕೃತಿಯುದ್ದಕ್ಕೂ ಬಸವಣ್ಣನವರ ವ್ಯಕ್ತಿತ್ವವನ್ನು ಕುಗ್ಗಿಸುವ, ಅವರ ಐತಿಹಾಸಿಕ ಮಹತ್ವವನ್ನು ಪ್ರಶ್ನಿಸುವ ಹಾಗೂ ಶರಣರ ತತ್ತ್ವಗಳಿಗೆ ಅಪಚಾರ ಎಸಗುವ ವಿಚಾರಗಳನ್ನು ದಾಖಲಿಸಲಾಗಿದೆ ಎಂಬುದು ಸಾಣೇಹಳ್ಳಿ ಶ್ರೀಗಳ ಆರೋಪವಾಗಿದೆ.
ಬಸವಣ್ಣನವರು ಪೌರಾಣಿಕ ವ್ಯಕ್ತಿ, ಬಿಜ್ಜಳನ ಕೊಲೆಗೆ ಕಾರಣರಾದವರು, ಭಂಡಾರದ ಲೂಟಿ ಮಾಡಿದ್ದಾರೆ ಎಂಬಂತಹ ಗಂಭೀರ ಆರೋಪಗಳನ್ನು ಕೃತಿಯಲ್ಲಿ ಮಾಡಲಾಗಿದೆ. ‘ಕಳಬೇಡ’ ಎಂದು ಜಗತ್ತಿಗೆ ನೀತಿಯ ಪಾಠ ಹೇಳಿದ ಬಸವಣ್ಣನವರನ್ನೇ ಲೂಟಿಕೋರರು, ಕೊಲೆಗಡುಕರು, ಸುಳ್ಳುಗಾರರು ಎಂದು ಬಿಂಬಿಸುವ ಪ್ರಯತ್ನ ಮಾಡಲಾಗಿದೆ. ವಚನಗಳ ಮೂಲ ಆಶಯವನ್ನು ಬದಿಗೊತ್ತಿ, ತಮ್ಮದೇ ಭಾವನೆ ಮತ್ತು ಪೂರ್ವಗ್ರಹಗಳಿಗೆ ಅನುಗುಣವಾಗಿ ಅವುಗಳನ್ನು ಅರ್ಥೈಸಿರುವುದು ಶರಣ ಸಾಹಿತ್ಯದ ಘನತೆಗೆ ಧಕ್ಕೆ ತರುವ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಸವಣ್ಣನವರಷ್ಟೇ ಅಲ್ಲದೆ, ಇತರ ಶರಣರ ವಚನಗಳಲ್ಲಿಯೂ ದ್ವಂದ್ವಗಳಿವೆ. ಶರಣರ ವಿಚಾರ ಮತ್ತು ಆಚಾರಗಳಿಗೆ ಸಂಬಂಧವಿಲ್ಲ ಎಂಬಿತ್ಯಾದಿ ಆಪಾದನೆಗಳನ್ನು ಮಾಡಲಾಗಿದೆ. ಇಂತಹ ಹೇಳಿಕೆಗಳು ಕೇವಲ ಒಬ್ಬ ವ್ಯಕ್ತಿಯ ಅಭಿಪ್ರಾಯಕ್ಕೆ ಸೀಮಿತವಾಗದೆ, ಬಸವ ಪರಂಪರೆ, ಲಿಂಗಾಯತ ಧರ್ಮ, ಸಮುದಾಯದ ನಂಬಿಕೆ ಹಾಗೂ ಬಸವತತ್ತ್ವ ಪ್ರೇಮಿಗಳ ಭಾವನೆಗಳಿಗೆ ನೋವುಂಟುಮಾಡಿವೆ. ನಮ್ಮ ಮಠದ ವಿಚಾರಗಳ ಬಗ್ಗೆಯೂ ಅಪಪ್ರಚಾರ ಮಾಡುವ ಮೂಲಕ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ನಡೆದಿದೆ ಎಂದು ಸಾಣೇಹಳ್ಳಿ ಶ್ರೀಗಳು ಕಿಡಿಕಾರಿದ್ದಾರೆ.

ಬಸವಣ್ಣನವರ ಬೆಳಕು ಆರಿಸಲು ಯಾರಿಂದಲೂ ಸಾಧ್ಯವಿಲ್ಲ
ವಿಶ್ವಗುರು, ಭಕ್ತಭಂಡಾರಿ, ಸಾಂಸ್ಕೃತಿಕ ನಾಯಕ, ಸಮಾನತೆಯ ಹರಿಕಾರ ಹಾಗೂ ಕಾಯಕ, ದಾಸೋಹ ಮತ್ತು ಲಿಂಗನಿಷ್ಠೆಯ ಪ್ರತಿಪಾದಕರಾದ ಬಸವಣ್ಣನವರ ವಿಚಾರಧಾರೆ ಇಡೀ ಜಗತ್ತಿಗೆ ದಾರಿದೀಪವಾಗಿದೆ. ಜಾತಿ, ವರ್ಣ, ಲಿಂಗಭೇದಗಳನ್ನು ಮೀರಿ ಮನುಕುಲದ ಒಳಿತಿಗಾಗಿ ಬದುಕಿನ ಮೌಲ್ಯಗಳನ್ನು ಬೋಧಿಸಿದ ಮಹಾನ್ ಚೇತನದ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನವನ್ನು ಸಮಾಜ ಮೌನವಾಗಿ ನೋಡಲು ಸಾಧ್ಯವಿಲ್ಲ.
ಬಸವಣ್ಣನವರ ವಿಚಾರಧಾರೆಯ ಬೆಳಕನ್ನು ಆರಿಸಲು ಹೊರಟಿರುವ ಇಂತಹ ಮನೋಭಾವದ ವಿರುದ್ಧ ಸಮಾಜ ಜಾಗೃತವಾಗಬೇಕು. ತಮ್ಮ ಮನಸ್ಸಿನ ವಿಕೃತ ಆಲೋಚನೆಗಳನ್ನು ಮಾತು ಮತ್ತು ಬರಹಗಳ ಮೂಲಕ ಹೊರಹಾಕಿ, ಶರಣ ಪರಂಪರೆಯ ಘನತೆಯನ್ನು ಕುಗ್ಗಿಸುವ ಪ್ರಯತ್ನ ಮಾಡುವುದು ಖಂಡನೀಯ. ಬಳಿಕ ತಮ್ಮ ಮಾತುಗಳನ್ನು ಅಪಾರ್ಥ ಮಾಡಿಕೊಂಡದ್ದಕ್ಕಾಗಿ ಕ್ಷಮೆ ಕೇಳುವ ತಂತ್ರ ಅನುಸರಿಸುವುದರಿಂದ ಆಗಿರುವ ಅಪಚಾರದ ಗಂಭೀರತೆ ಕಡಿಮೆಯಾಗುವುದಿಲ್ಲ ಎಂದು ಸಾಣೇಹಳ್ಳಿ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.

ಕೃತಿ ಮುಟ್ಟುಗೋಲು ಹಾಕಿ, ಕಾನೂನು ಕ್ರಮ ಜರುಗಿಸಲು ಆಗ್ರಹ
ಸರ್ಕಾರ ಕೂಡಲೇ ‘ಬಸವ ಮಂಟಪ’ ಕೃತಿಯನ್ನು ನಿಷೇಧಿಸಿ, ಮುಟ್ಟುಗೋಲು ಹಾಕಿಕೊಳ್ಳಬೇಕು. ರವಿ ಹಂಜ್ ಹಾಗೂ ಈ ಕೃತಿಯ ಹಿಂದೆ ಇರುವವರ ವಿರುದ್ಧವೂ ಕಾನೂನುಬದ್ಧವಾಗಿ ಸೂಕ್ತ ತನಿಖೆ ನಡೆಸಿ ಕ್ರಮ ಜರುಗಿಸಬೇಕು. ಈ ಸಂಬಂಧ ಮುಖ್ಯಮಂತ್ರಿಗಳು, ಗೃಹ ಸಚಿವರು ಹಾಗೂ ಸಂಬಂಧಪಟ್ಟ ಇಲಾಖೆಗಳು ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಒತ್ತಾಯಿಸಿದ್ದಾರೆ.

ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ದೃಷ್ಟಿಯಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮೊದಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ವಿವಾದಾತ್ಮಕ ಕೃತಿಯ ಪ್ರಕಟಣೆ ಮತ್ತು ಅದರಲ್ಲಿರುವ ವಿಚಾರಗಳ ಕುರಿತು ಸಮಗ್ರ ತನಿಖೆ ನಡೆಸಿ, ಕಾನೂನಿನ ಚೌಕಟ್ಟಿನಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಸವಣ್ಣನವರ ಘನತೆ, ಶರಣರ ವಚನಗಳ ಪಾವಿತ್ರ್ಯ ಹಾಗೂ ಲಿಂಗಾಯತ ಧರ್ಮದ ಗೌರವವನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅವರು ಆಗ್ರಹಿಸಿದ್ದಾರೆ.






