ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಬಸವಣ್ಣನವರ ಗೌರವಕ್ಕೆ ಧಕ್ಕೆ ತರುವ ಕೃತ್ಯ ಸಹಿಸುವುದಿಲ್ಲ; ವಿವಾದಾತ್ಮಕ ಕೃತಿ ಮುಟ್ಟುಗೋಲಿಗೆ ಬಿ.ವೈ. ವಿಜಯೇಂದ್ರ ಆಗ್ರಹ

On: November 19, 2026 3:36 PM
Follow Us:

ಬೆಂಗಳೂರು: ಶತಮಾನಗಳು ಉರುಳಿದರೂ ಬಸವಣ್ಣನವರ ಚಿಂತನೆಗಳ ಬೆಳಕು ಮಸುಕಾಗಿಲ್ಲ. ಕಾಲ ಬದಲಾದರೂ ಅವರ ವಿಚಾರಧಾರೆಗೆ ಸಾವಿಲ್ಲ. ಜಾತಿ, ಧರ್ಮ, ವರ್ಣ, ವರ್ಗ ಹಾಗೂ ಲಿಂಗಭೇದಗಳ ಗೋಡೆಗಳನ್ನು ಒಡೆದು ಸಮಾನತೆಯ ಸಮಾಜದ ಕನಸು ಕಂಡ ಜಗಜ್ಯೋತಿ ಬಸವಣ್ಣನವರು ಕೇವಲ ಒಂದು ಸಮುದಾಯದ ನಾಯಕರಲ್ಲ, ಇಡೀ ಮಾನವಕುಲಕ್ಕೆ ಸಮಾನತೆ, ಕಾಯಕ, ದಾಸೋಹ ಮತ್ತು ಮಾನವೀಯತೆಯ ಸಂದೇಶ ಸಾರಿದ ವಿಶ್ವಮಾನವ. ಇಂತಹ ಮಹಾನ್ ದಾರ್ಶನಿಕರ ಗೌರವಕ್ಕೆ ಚ್ಯುತಿ ತರುವಂತಹ ಹೇಳಿಕೆಗಳು ಅಥವಾ ಕೃತಿಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಸದ್ಯ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಲೇಖಕ ರವಿ ಹಂಜ್ ಅವರ ವಿವಾದಾತ್ಮಕ ಕೃತಿಯಲ್ಲಿ ಬಸವಣ್ಣನವರ ವ್ಯಕ್ತಿತ್ವ, ಗೌರವ ಹಾಗೂ ತತ್ವಾದರ್ಶಗಳಿಗೆ ಧಕ್ಕೆ ತರುವ ರೀತಿಯಲ್ಲಿ ವಿಚಾರಗಳನ್ನು ಮಂಡಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ, ಕೃತಿಯಲ್ಲಿನ ಆಕ್ಷೇಪಾರ್ಹ ಅಂಶಗಳನ್ನು ಪರಿಶೀಲಿಸಬೇಕು. ಕಾನೂನಿನ ಚೌಕಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಂಡು ವಿವಾದಕ್ಕೆ ತೆರೆ ಎಳೆಯಬೇಕು ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.

ಬಸವಣ್ಣನವರು ಜಗತ್ತಿಗೆ ಸಾರಿದ ಸಮಾನತೆ, ಸಹಬಾಳ್ವೆ ಮತ್ತು ಮಾನವೀಯತೆಯ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಸಮಾಜದಲ್ಲಿ ಮೇಲು-ಕೀಳು, ಅಸ್ಪೃಶ್ಯತೆ, ಲಿಂಗತಾರತಮ್ಯ ಹಾಗೂ ವರ್ಣಭೇದಗಳಿಗೆ ಅವಕಾಶವಿಲ್ಲದ ಸಮ ಸಮಾಜ ನಿರ್ಮಾಣವಾಗಬೇಕು ಎಂಬ ಮಹತ್ತರ ಆಶಯವನ್ನು ಅವರು ಹೊಂದಿದ್ದರು. ಅನುಭವ ಮಂಟಪದ ಮೂಲಕ ವಿಚಾರ ವಿನಿಮಯಕ್ಕೆ ಮುಕ್ತ ವೇದಿಕೆ ಕಲ್ಪಿಸಿ, ವಚನ ಸಾಹಿತ್ಯದ ಮೂಲಕ ಸಾಮಾಜಿಕ ಪರಿವರ್ತನೆಗೆ ಬುನಾದಿ ಹಾಕಿದ್ದರು. ಇಂತಹ ವಿಶ್ವಶ್ರೇಷ್ಠ ದಾರ್ಶನಿಕರ ವಿಚಾರಧಾರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದರಿಂದ ಮಾತ್ರ ತನ್ನ ಜವಾಬ್ದಾರಿ ಮುಗಿಯುವುದಿಲ್ಲ. ಅವರ ಹೆಸರನ್ನು ಗೌರವಿಸುವುದರ ಜೊತೆಗೆ ಅವರ ತತ್ವ, ಸಿದ್ಧಾಂತ ಮತ್ತು ಸಾಮಾಜಿಕ ನ್ಯಾಯದ ಆಶಯಗಳಿಗೆ ಪೂರಕವಾಗಿ ನಡೆದುಕೊಳ್ಳಬೇಕು. ಬಸವಣ್ಣನವರ ವಿಚಾರಧಾರೆಗೆ ವಿರುದ್ಧವಾದ ಬೆಳವಣಿಗೆಗಳು ಎದುರಾದಾಗ ಸರ್ಕಾರ ಮೌನ ವಹಿಸುವುದು ಸರಿಯಲ್ಲ. ಘೋಷಣೆಗಳಿಗಿಂತ ಬಸವತತ್ವದ ಅನುಷ್ಠಾನವೇ ಮುಖ್ಯ ಎಂಬುದನ್ನು ಸರ್ಕಾರ ಅರಿತುಕೊಳ್ಳಬೇಕು ಎಂದು ವಿಜಯೇಂದ್ರ ಹೇಳಿದ್ದಾರೆ.

ಬಸವಣ್ಣನವರ ಗೌರವಕ್ಕೆ ಧಕ್ಕೆ ತರುವಂತಹ ವಿಚಾರಗಳನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲು ಸಾಧ್ಯವಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಮಹಾನ್ ದಾರ್ಶನಿಕರ ವ್ಯಕ್ತಿತ್ವ ಮತ್ತು ಚಿಂತನೆಗಳಿಗೆ ಅಪಚಾರವಾಗುವಂತಹ ಕೃತ್ಯಗಳಿಗೆ ಅವಕಾಶ ನೀಡಬಾರದು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತಕ್ಷಣ ತನ್ನ ಸ್ಪಷ್ಟ ನಿಲುವನ್ನು ಪ್ರಕಟಿಸಬೇಕು. ವಿವಾದಾತ್ಮಕ ಕೃತಿಯಲ್ಲಿನ ಆಕ್ಷೇಪಾರ್ಹ ಅಂಶಗಳನ್ನು ಪರಿಶೀಲಿಸಿ, ಕಾನೂನುಬದ್ಧವಾಗಿ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಒತ್ತಾಯಿಸಿದ್ದಾರೆ.

ಬಸವಣ್ಣನವರ ಆದರ್ಶಗಳು ಯಾವುದೇ ಕಾಲಘಟ್ಟಕ್ಕೆ ಸೀಮಿತವಲ್ಲ. ಅವು ಮಾನವ ಸಮಾಜಕ್ಕೆ ದಾರಿದೀಪವಾಗಿವೆ. ಅಂತಹ ಮಹಾನ್ ಚೇತನದ ಗೌರವ ಮತ್ತು ಘನತೆಯನ್ನು ಕಾಪಾಡುವುದು ಸಮಾಜದ ಹಾಗೂ ಸರ್ಕಾರದ ಜವಾಬ್ದಾರಿಯಾಗಿದೆ ಎಂಬುದು ವಿಜಯೇಂದ್ರ ಅವರ ನಿಲುವಾಗಿದೆ.

K.M.Sathish Gowda

Join WhatsApp

Join Now

Facebook

Join Now

Read more

ಬಸವಣ್ಣನವರ ಘನತೆಗೆ ಧಕ್ಕೆ ಆರೋಪ: ‘ಬಸವ ಮಂಟಪ’ ಕೃತಿ ಮುಟ್ಟುಗೋಲಿಗೆ ರಾಜ್ಯ ಸಚಿವ ಸಂಪುಟ ಅಸ್ತು!

ಬಸವಣ್ಣನವರ ಗೌರವಕ್ಕೆ ಧಕ್ಕೆ ತರುವ ಕೃತಿಗಳ ವಿರುದ್ಧ ಕ್ರಮ ಕೈಗೊಳ್ಳಲಿ: ಸುನೀಲ್ ಕುಮಾರ್

ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸುವ ಹೊಣೆ ಶಿಕ್ಷಕರ ಮೇಲಿದೆ: ಸಿಎಂ ಡಿ.ಕೆ. ಶಿವಕುಮಾರ್

ಬಸವಣ್ಣನವರ ತೇಜೋವಧೆ ಸಹಿಸುವುದಿಲ್ಲ; ‘ಬಸವ ಮಂಟಪ’ ಕೃತಿ ನಿಷೇಧಿಸಿ: ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಬಸವಣ್ಣನವರ ವಿರುದ್ಧ ಅವಹೇಳನಕಾರಿ ಹೇಳಿಕೆ; ರವಿ ಹಂಜ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರ: ಶಂಕರ್ ಬಿದರಿ

ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ₹2,000 ಕೋಟಿ ಬಿಡುಗಡೆ ಮಾಡಿ; ಇಲ್ಲದಿದ್ದರೆ 2028ರಲ್ಲಿ ತಕ್ಕ ಪಾಠ ಕಲಿಸುತ್ತಾರೆ: ರಘು ಕೌಟಿಲ್ಯ

Leave a Comment