ಕಾರ್ಕಳ: ಬಸವಣ್ಣ ಕೇವಲ ಒಂದು ಸಮುದಾಯದ ಆರಾಧ್ಯ ವ್ಯಕ್ತಿಯಲ್ಲ, ಇಡೀ ಕರ್ನಾಟಕದ ಸಾಂಸ್ಕೃತಿಕ ಅಸ್ಮಿತೆ. ಅವರ ವಚನಗಳ ಬೆಳಕು ಜಗತ್ತಿನಾದ್ಯಂತ ಮಾನವೀಯ ಮೌಲ್ಯಗಳಿಗೆ ದಾರಿದೀಪವಾಗಿದೆ. ಸಮಾನತೆ, ಕಾಯಕ ಮತ್ತು ದಾಸೋಹದ ಮೂಲಕ ಹೊಸ ಸಮಾಜದ ಕನಸು ಕಂಡ ಜಗಜ್ಯೋತಿ ಬಸವಣ್ಣನವರ ವ್ಯಕ್ತಿತ್ವಕ್ಕೆ ಚ್ಯುತಿ ತರುವ ಯಾವುದೇ ಪ್ರಯತ್ನವನ್ನು ಸಹಿಸಲು ಸಾಧ್ಯವಿಲ್ಲ. ಸಂಶೋಧನೆಯ ಹೆಸರಿನಲ್ಲಿ ಯಾರೊಬ್ಬರ ಭಾವನೆಗಳಿಗೂ ನೋವುಂಟು ಮಾಡುವ ಅಥವಾ ಸಮಾಜದ ಸಾಮರಸ್ಯಕ್ಕೆ ಧಕ್ಕೆ ತರುವ ಕೆಲಸ ನಡೆಯಬಾರದು ಎಂದು ಮಾಜಿ ಸಚಿವರು ಹಾಗೂ ಕಾರ್ಕಳ ಶಾಸಕರಾದ ಸುನೀಲ್ ಕುಮಾರ್ ಅವರು ಹೇಳಿದ್ದಾರೆ.
ಯಾವುದೇ ಕೃತಿ ಅಥವಾ ಸಂಶೋಧನೆ ಸಮಾಜದಲ್ಲಿ ಜವಾಬ್ದಾರಿಯುತ ಚರ್ಚೆಗೆ ಅವಕಾಶ ಮಾಡಿಕೊಡಬೇಕೇ ಹೊರತು, ಜನರ ಭಾವನೆಗಳಿಗೆ ಧಕ್ಕೆ ತರುವಂತಿರಬಾರದು. ಜಗಜ್ಯೋತಿ ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಎಂಬುದನ್ನು ಇಡೀ ನಾಡು ಒಪ್ಪಿಕೊಂಡಿದೆ. ಬಸವ ತತ್ವದ ಹಿರಿಮೆ ಮತ್ತು ಶ್ರೇಷ್ಠತೆ ಜಗತ್ತಿಗೇ ಮಾದರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿರುವ ಪುಸ್ತಕವೊಂದರಲ್ಲಿ ಬಸವಣ್ಣನವರ ಕುರಿತು ಅಪಮಾನಕರ ಹಾಗೂ ಆಕ್ಷೇಪಾರ್ಹ ಅಂಶಗಳಿವೆ ಎಂಬ ಆರೋಪಗಳು ಕೇಳಿಬಂದಿವೆ. ಈ ಬೆಳವಣಿಗೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಸುನೀಲ್ ಕುಮಾರ್ ಹೇಳಿದ್ದಾರೆ.
ಯಾವುದೇ ಕೃತಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವಂತಿರಬಾರದು. ಸಮಾಜದಲ್ಲಿ ಶಾಂತಿ, ಸಾಮರಸ್ಯ ಮತ್ತು ಪರಸ್ಪರ ಗೌರವದ ವಾತಾವರಣವನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಂಬಂಧಪಟ್ಟ ಕೃತಿಯಲ್ಲಿರುವ ಅಂಶಗಳನ್ನು ಸೂಕ್ತವಾಗಿ ಪರಿಶೀಲಿಸಿ, ಕಾನೂನಿನ ವ್ಯಾಪ್ತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬಸವಣ್ಣನವರ ವ್ಯಕ್ತಿತ್ವ, ಬಸವ ತತ್ವ ಮತ್ತು ಬಸವ ಪಥಕ್ಕೆ ಅಪಮಾನವಾಗುವಂತಹ ಯಾವುದೇ ನಡೆ ಸಮರ್ಥನೀಯವಲ್ಲ. ವಿಚಾರ ಸ್ವಾತಂತ್ರ್ಯದ ಹೆಸರಿನಲ್ಲಿ ಸಮಾಜದ ಗೌರವ ಮತ್ತು ಭಾವನೆಗಳಿಗೆ ಧಕ್ಕೆ ಉಂಟಾಗಬಾರದು ಎಂಬುದು ತಮ್ಮ ನಿಲುವು ಎಂದು ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.






