ಬಸವಣ್ಣನವರ ವ್ಯಕ್ತಿತ್ವ, ವಚನ ಸಾಹಿತ್ಯ ಹಾಗೂ ಐತಿಹಾಸಿಕ ಕೊಡುಗೆಯನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ; ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವುದು ಸರಿಯಲ್ಲ; ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ
ಬೆಂಗಳೂರು, ನ.21: ಸಾವಿರಾರು ವರ್ಷಗಳ ಭಾರತೀಯ ಧಾರ್ಮಿಕ ಪರಂಪರೆಯ ಇತಿಹಾಸದಲ್ಲಿ ಕೆಲವು ಮಹಾತ್ಮರು ಕೇವಲ ವ್ಯಕ್ತಿಗಳಾಗಿ ಉಳಿಯುವುದಿಲ್ಲ, ಅವರು ಒಂದು ಯುಗದ ಚಿಂತನೆ, ಸಮಾಜದ ಆತ್ಮಸಾಕ್ಷಿ ಹಾಗೂ ಕೋಟ್ಯಂತರ ಜನರ ಬದುಕಿನ ನಂಬಿಕೆಯಾಗುತ್ತಾರೆ. ಅಂತಹ ಮಹಾನ್ ಚೇತನಗಳಲ್ಲಿ ಜಗಜ್ಯೋತಿ ಭಕ್ತಿ ಭಂಡಾರಿ ಬಸವಣ್ಣನವರು ಅಗ್ರಗಣ್ಯರು. ಅವರ ವಚನಗಳು ಕೇವಲ ಸಾಹಿತ್ಯದ ಸಾಲುಗಳಲ್ಲ, ಅವು ಸಮಾನತೆ, ಮಾನವೀಯತೆ, ಕಾಯಕ, ದಾಸೋಹ ಹಾಗೂ ಸಾಮಾಜಿಕ ನ್ಯಾಯದ ಬೆಳಕನ್ನು ಜಗತ್ತಿಗೆ ಪರಿಚಯಿಸಿದ ಜೀವನದರ್ಶನ. ಇಂತಹ ವಿಶ್ವಮಾನವ ಸಂದೇಶ ಸಾರಿದ ಮಹಾತ್ಮರ ಕುರಿತು ಹಗುರವಾದ, ಅವಹೇಳನಕಾರಿ ಹಾಗೂ ಆಕ್ಷೇಪಾರ್ಹ ಮಾತುಗಳನ್ನಾಡುವುದು ಯಾವುದೇ ಕಾರಣಕ್ಕೂ ಒಪ್ಪತಕ್ಕದ್ದಲ್ಲ. ಮಹಾತ್ಮರ ವ್ಯಕ್ತಿತ್ವವನ್ನು ವೈಯಕ್ತಿಕ ಟೀಕೆಗಳ ಮೂಲಕ ಪ್ರಶ್ನಿಸುವುದು ಅವರ ಅನುಯಾಯಿಗಳ ಭಾವನೆಗಳಿಗೆ ನೋವುಂಟು ಮಾಡುವುದಷ್ಟೇ ಅಲ್ಲ, ಸಮಾಜದ ಸೌಹಾರ್ದ ಮತ್ತು ಸ್ವಾಸ್ಥ್ಯಕ್ಕೂ ಧಕ್ಕೆ ತರುವ ಕೆಲಸವಾಗಿದೆ. ಧಾರ್ಮಿಕ ಪರಂಪರೆಗಳ ಘನತೆ, ಮಹಾತ್ಮರ ಗೌರವ ಹಾಗೂ ಜನರ ಭಕ್ತಿಭಾವವನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ವೀರಶೈವ ಪಂಚಪೀಠದ ಜಗದ್ಗುರುಗಳು ಒಕ್ಕೊರಲಿನಿಂದ ಎಚ್ಚರಿಕೆ ನೀಡಿದ್ದಾರೆ.

ಭಾರತ ದೇಶವು ಧಾರ್ಮಿಕ ಪರಂಪರೆ, ಆಧ್ಯಾತ್ಮಿಕ ಚಿಂತನೆ ಹಾಗೂ ಸಾಂಸ್ಕೃತಿಕ ಮೌಲ್ಯಗಳಿಗೆ ವಿಶೇಷ ಗೌರವ ನೀಡುವ ದೇಶವಾಗಿದೆ. ಇಂತಹ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪರಂಪರೆಯ ಪುನರುತ್ಥಾನಕ್ಕೆ ಆಯಾ ಕಾಲಘಟ್ಟದಲ್ಲಿ ಅನೇಕ ಆಚಾರ್ಯರು, ಸಂತ-ಮಹಾಂತರು ಹಾಗೂ ಶರಣರು ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ತತ್ವಾದರ್ಶಗಳು ಸಮಾಜಕ್ಕೆ ದಾರಿದೀಪವಾಗಿದ್ದು, ತಲೆಮಾರುಗಳಿಂದ ಜನರ ಬದುಕಿನಲ್ಲಿ ಪ್ರೇರಣೆಯಾಗಿ ಉಳಿದಿವೆ. ಯಾವುದೇ ಧರ್ಮ, ಸಂಪ್ರದಾಯ ಅಥವಾ ಪರಂಪರೆಯ ಮಹಾತ್ಮರನ್ನು ಅವಹೇಳನ ಮಾಡುವುದು ಖಂಡನೀಯ ಎಂದು ಪಂಚಪೀಠಾಧೀಶ್ವರರು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಶ್ರೀ ರಂಭಾಪುರಿ, ಶ್ರೀ ಉಜ್ಜಯಿನಿ, ಶ್ರೀ ಕೇದಾರ, ಶ್ರೀ ಶ್ರೀಶೈಲ ಮತ್ತು ಶ್ರೀ ಕಾಶಿ ಪೀಠದ ಜಗದ್ಗುರುಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಅಭಿಪ್ರಾಯ ಭೇದಗಳೇನೇ ಇದ್ದರೂ ದಾರ್ಶನಿಕರ ವೈಯಕ್ತಿಕ ನಿಂದನೆ, ತೇಜೋವಧೆ ಮಾಡುವಂತಹ ಹೇಳಿಕೆಗಳನ್ನು ಯಾರೂ ನೀಡಬಾರದು. ಇತಿಹಾಸವನ್ನು ಮೀರಿದಂತೆ ಅನೇಕ ಶತಮಾನಗಳಿಂದ ಕೋಟ್ಯಂತರ ಜನರು ತಮ್ಮ ಆರಾಧ್ಯ ವ್ಯಕ್ತಿಗಳ ಬಗ್ಗೆ ಅಪಾರ ಭಕ್ತಿ ಮತ್ತು ಗೌರವವನ್ನು ಹೊಂದಿದ್ದಾರೆ. ಅಂತಹ ಜನರ ಭಾವನೆಗಳಿಗೆ ನೋವುಂಟು ಮಾಡುವ ಅಥವಾ ಅವರನ್ನು ಕೆರಳಿಸುವಂತಹ ಹೇಳಿಕೆಗಳು ಸಮಾಜದಲ್ಲಿ ಅನಗತ್ಯ ಸಂಘರ್ಷಕ್ಕೆ ಕಾರಣವಾಗುತ್ತವೆ. ಇದರಿಂದ ಸಾಮಾಜಿಕ ಸ್ವಾಸ್ಥ್ಯ ಹಾಗೂ ಪರಸ್ಪರ ಸಾಮರಸ್ಯಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ. ಈ ರೀತಿಯ ವರ್ತನೆ ಯಾರಿಂದಲೇ ನಡೆದರೂ ಅದನ್ನು ಖಂಡಿಸಲೇಬೇಕಾಗಿದೆ ಎಂದು ಜಗದ್ಗುರುಗಳು ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಮನಬಂದಂತೆ ಅಭಿಪ್ರಾಯ ವ್ಯಕ್ತಪಡಿಸುವುದು, ಬರವಣಿಗೆ ಮಾಡುವುದು, ಟೀಕೆ-ಟಿಪ್ಪಣಿಗಳನ್ನು ಪ್ರಕಟಿಸುವುದು ಹೆಚ್ಚಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಆದರೆ ಆ ಸ್ವಾತಂತ್ರ್ಯವನ್ನು ಬಳಸುವಾಗ ಸಾಮಾಜಿಕ ಜವಾಬ್ದಾರಿ, ಪರಸ್ಪರ ಗೌರವ ಹಾಗೂ ಸಂವಿಧಾನದ ಮೌಲ್ಯಗಳನ್ನು ಮರೆಯಬಾರದು. ವ್ಯಕ್ತಿಯೊಬ್ಬರ ಅಭಿಪ್ರಾಯ ಸ್ವಾತಂತ್ರ್ಯ ಮತ್ತೊಬ್ಬರ ಧಾರ್ಮಿಕ ನಂಬಿಕೆ ಮತ್ತು ಭಾವನೆಗಳನ್ನು ಅವಮಾನಿಸುವ ಸಾಧನವಾಗಬಾರದು ಎಂಬುದು ಪಂಚಪೀಠಾಧೀಶ್ವರರ ನಿಲುವಾಗಿದೆ.
ಇತ್ತೀಚಿನ ದಿನಗಳಲ್ಲಿ 12ನೇ ಶತಮಾನದ ಮಹಾನ್ ಶರಣ, ಭಕ್ತಿ ಭಂಡಾರಿ ಬಸವಣ್ಣನವರ ಕುರಿತು ಹಗುರವಾದ ಹಾಗೂ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿರುವ ಘಟನೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬೆಳವಣಿಗೆಯನ್ನು ಪಂಚಪೀಠಾಧೀಶ್ವರರು ಗಂಭೀರವಾಗಿ ಪರಿಗಣಿಸಿದ್ದು, ಬಸವಣ್ಣನವರ ಘನತೆ, ಗೌರವಕ್ಕೆ ಧಕ್ಕೆ ತರುವಂತಹ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದ್ದಾರೆ.
ಬಸವಣ್ಣನವರು ಜಾತಿ, ವರ್ಗ, ವರ್ಣ ಹಾಗೂ ಲಿಂಗಭೇದಗಳ ಗೋಡೆಗಳನ್ನು ಮೀರಿ ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹಾನ್ ಶರಣರು. ಕಾಯಕವೇ ಕೈಲಾಸ ಎಂಬ ತತ್ವದ ಮೂಲಕ ದುಡಿಮೆಯ ಗೌರವವನ್ನು ಸಾರಿದವರು. ದಾಸೋಹದ ಮೂಲಕ ಹಂಚಿಕೊಂಡು ಬದುಕುವ ಸಂಸ್ಕೃತಿಗೆ ಮಹತ್ವ ನೀಡಿದವರು. ಅನುಭವ ಮಂಟಪದ ಮೂಲಕ ವಿಚಾರ ವಿನಿಮಯ, ಸಂವಾದ ಮತ್ತು ಸಾಮಾಜಿಕ ಚಿಂತನೆಗೆ ಹೊಸ ಆಯಾಮ ನೀಡಿದವರು. ಇಂತಹ ಮಹಾನ್ ವ್ಯಕ್ತಿತ್ವದ ಕುರಿತು ಮಾತನಾಡುವಾಗ ಇತಿಹಾಸದ ಅರಿವು, ಅಧ್ಯಯನದ ಆಳ ಮತ್ತು ಭಾಷೆಯ ಘನತೆ ಇರಬೇಕು. ವಿಮರ್ಶೆಯ ಹೆಸರಿನಲ್ಲಿ ಅವಹೇಳನಕ್ಕೆ ಅವಕಾಶ ನೀಡಬಾರದು ಎಂದು ಜಗದ್ಗುರುಗಳು ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರವು ಈ ಪ್ರಕರಣದ ಕುರಿತು ತ್ವರಿತ ಕ್ರಮ ಕೈಗೊಂಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಇಂತಹ ಘಟನೆಗಳು ಮತ್ತೊಮ್ಮೆ ಮರುಕಳಿಸದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು. ಮಹಾತ್ಮರ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ಪ್ರವೃತ್ತಿಗೆ ಕಡಿವಾಣ ಹಾಕಬೇಕು. ಸಮಾಜದಲ್ಲಿ ಶಾಂತಿ, ಸೌಹಾರ್ದ ಮತ್ತು ಪರಸ್ಪರ ಗೌರವದ ವಾತಾವರಣ ನಿರ್ಮಾಣವಾಗಲು ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಪಂಚಪೀಠಾಧೀಶ್ವರರು ಒತ್ತಾಯಿಸಿದ್ದಾರೆ.
ಧಾರ್ಮಿಕ ಪರಂಪರೆಗಳು ಯಾವುದೇ ಒಂದು ಸಮುದಾಯದ ಸ್ವತ್ತಲ್ಲ; ಅವು ಸಮಾಜದ ಸಾಂಸ್ಕೃತಿಕ ಸಂಪತ್ತು. ಮಹಾತ್ಮರ ವಿಚಾರಧಾರೆಗಳನ್ನು ಅಧ್ಯಯನ ಮಾಡುವುದು, ಅವುಗಳ ಕುರಿತು ಆರೋಗ್ಯಕರ ಚರ್ಚೆ ನಡೆಸುವುದು ಸ್ವಾಗತಾರ್ಹ. ಆದರೆ ವೈಯಕ್ತಿಕ ನಿಂದನೆ, ತೇಜೋವಧೆ ಹಾಗೂ ಜನರ ಭಾವನೆಗಳನ್ನು ಕೆರಳಿಸುವ ಮಾತುಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಮರ್ಥನೆ ನೀಡಲು ಸಾಧ್ಯವಿಲ್ಲ. ಇತಿಹಾಸ ಮತ್ತು ಸಂಶೋಧನೆಯ ಹೆಸರಿನಲ್ಲಿ ಬರೆಯುವ ಪ್ರತಿಯೊಂದು ವಿಚಾರವೂ ಸತ್ಯಾಂಶ, ಸಾಕ್ಷ್ಯಾಧಾರ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಒಳಗೊಂಡಿರಬೇಕು ಎಂಬ ಸಂದೇಶವನ್ನು ಜಗದ್ಗುರುಗಳು ನೀಡಿದ್ದಾರೆ.
ಬಸವಣ್ಣನವರ ವಿಚಾರಧಾರೆಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ಅವರ ವಚನಗಳಲ್ಲಿರುವ ಮಾನವೀಯತೆ, ಸಮಾನತೆ ಮತ್ತು ಸಹಬಾಳ್ವೆಯ ಸಂದೇಶವನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಎಲ್ಲರ ಕರ್ತವ್ಯವಾಗಿದೆ. ಮಹಾತ್ಮರ ಗೌರವವನ್ನು ಕಾಪಾಡುವುದರ ಜೊತೆಗೆ ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಇಂತಹ ಘಟನೆಗಳು ಮತ್ತೆ ನಡೆಯದಂತೆ ಸಮಾಜ ಮತ್ತು ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಐದು ಪೀಠಗಳ ಜಗದ್ಗುರುಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.






